Jul 8, 2016

ಮೇಕಿಂಗ್ ಹಿಸ್ಟರಿ: ಕೃಷಿ ಕಂದಾಯ ಮತ್ತದರ ಶೋಷಕ ಶರಾತ್: ಭಾಗ 3

ashok k r saketh rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
08/07/2016
ಬಾಂಬೆ ಪ್ರಾಂತ್ಯದಲ್ಲಿ, ಈ ಆರ್ಥಿಕ ಸಂಕಷ್ಟಗಳು ಭೂ ಕಂದಾಯ ಪದ್ಧತಿಯ ಕಾರಣದಿಂದ ಮತ್ತಷ್ಟು ಹೆಚ್ಚಾಯಿತು, ಅದರಲ್ಲೂ 1820ರ ಕೊನೆಯ ಭಾಗ ಮತ್ತು 1830ರ ದಶಕದ ಪ್ರಿಂಗಲ್ ವಸಾಹತಿನಲ್ಲಿ ಇದನ್ನು ಗಮನಿಸಬಹುದು. ಪ್ರಿಂಗಲ್ ಅವಾಸ್ತವಿಕವಾಗಿ ಬೆಳೆಯಿಂದ ಬರುವ ಲಾಭದ ಅಂದಾಜಿನ ಮೇಲೆ ಭೂಕಂದಾಯವನ್ನು ನಿರ್ಧರಿಸಿದ್ದ. ಜೊತೆಗೆ, ಇವು ಮತ್ತಿತರ ವಸಾಹತುಗಳಲ್ಲಿ ಮಾಡಿದ ಮತ್ತೊಂದು ತಪ್ಪೆಂದರೆ, ಕೊನೆಯ ಪೇಶ್ವೆಗಳು ನಿಗದಿಪಡಿಸಿದ್ದ ಭೂಕಂದಾಯವನ್ನು ಮೂಲಾಧಾರವಾಗಿಟ್ಟುಕೊಂಡು ಬ್ರಿಟೀಷರು ಕಂದಾಯವನ್ನು ನಿಗದಿಪಡಿಸಿದ್ದು. ಪರಿಣಾಮವಾಗಿ, ವಿಪರೀತದ ಭೂಕಂದಾಯ ನಿಗದಿಯಾಗಿಬಿಟ್ಟಿತು. ಧಾರವಾಡ ಜಿಲ್ಲೆಯ ಬಂಕಾಪುರ ತಾಲ್ಲೂಕಿನ ಅಧಿಕಾರಿಯೊಬ್ಬ 1846ರಲ್ಲಿ, ‘ಬಂಕಾಪುರ ನಮ್ಮಾಡಳಿತದ ಅವಧಿಯುದ್ದಕ್ಕೂ ವಿಪರೀತದ ಭೂಕಂದಾಯದಿಂದ ನರಳಿತ್ತು’ ಎಂದು ಹೇಳಿರುವುದು ದಕ್ಷಿಣದಲ್ಲಿರುವ ಒಂದು ಉದಾಹರಣೆ. ಶೋಷಣೆ ಮತ್ತು ಹೆಚ್ಚಿನ ಕಂದಾಯ ಕೃಷಿಯನ್ನು ನರಳಿಸಿತು. ನಾವು ಗಮನಿಸಿರುವಂತೆ, ಡೆಕ್ಕನ್ನಿನ ಭೂಮಿ ಅದರ ಜನಸಂಖೈಗೆ ಹೋಲಿಸಿದರೆ ಸಾಕಷ್ಟಿದೆ, ಆದರೆ ಈಗ ಕೃಷಿ ಯೋಗ್ಯ ಭೂಮಿಯ ಬಹಳಷ್ಟು ಪಾಲು ಬೇಡಿಕೆಯಲ್ಲಿನ ಕುಸಿತ ಮತ್ತು ಭೂಕಂದಾಯದ ಕಾರಣದಿಂದಾಗಿ ಉಳುಮೆಯೇ ಆಗದೆ ಕರಾಬು ಬಿದ್ದಿದೆ. ಹತ್ತಿ ಬೆಳೆಯಲು ಉತ್ತಮ ಭೂಮಿ ಹೊಂದಿರುವ ಬಂಕಾಪುರದಲ್ಲಿ, 1846ರ ಸಮಯದಲ್ಲಿ ನಡೆದ ಕೃಷಿ ಹಿಂದೆಂದಿಗಿಂತಲೂ ಕಡಿಮೆಯಾಗಿದೆ, ಕಳೆದ ಮೂವತ್ತು ವರುಷಗಳ ಶಾಂತಿ ಮತ್ತು ಭದ್ರತೆಯ ಕಾರಣದಿಂದ ಇಲ್ಲಿ ಸಹಜವಾಗಿ ಕೃಷಿ ಚಟುವಟಿಕೆಗಳಲ್ಲೂ ಹೆಚ್ಚಳವಾಗಬೇಕಿತ್ತು, ಆದರದು ಸಾಧ್ಯವಾಗಿಲ್ಲ’. ಇದೇ ಸಮಯದಲ್ಲಿ, ಬ್ರಿಟೀಷರ ತೆರಿಗೆ ಬೇಡಿಕೆಗಳು ಬಹಳಷ್ಟು ಸಲ ಕಟ್ಟಲಾಗದಷ್ಟಿತ್ತು ಮತ್ತು ಶೋಷಕವಾಗಿತ್ತು. ಬಂಕಾಪುರದಲ್ಲಿ, ಕೃಷಿ ಭೂಮಿಗೆ ಎಕರೆಗೆ ನಲವತ್ತು ರುಪಾಯಿಯಷ್ಟು ನಿಗದಿಪಡಿಸಲಾಗಿತ್ತು ಮತ್ತಿದರ ಪರಿಣಾಮವಾಗಿ, ‘ಭೂಮಿಯೊಡೆಯ ದಿವಾಳಿಯಾಗುತ್ತಿದ್ದ, ಆದರೆ ತಾಲ್ಲೂಕಿನ ಇತರೆ ಭಾಗದಲ್ಲಿರುವ ದೊಡ್ಡ ದೊಡ್ಡ ಭೂಮಾಲೀಕರು ಏನನ್ನೂ ಕಟ್ಟದೆ ಅಥವಾ ಚೂರೇ ಚೂರು ಮೊತ್ತವನ್ನು ಕಟ್ಟಿ ತಪ್ಪಿಸಿಕೊಳ್ಳುತ್ತಿದ್ದರು; ತಪ್ಪಿಸಿಕೊಳ್ಳಲು ಅಧಿಕಾರಿಗಳಿಗೆ ಲಂಚವನ್ನು ಕೊಡುತ್ತಿದ್ದರೆಂಬುದು ಸತ್ಯ. 1830ರ ದಶಕದಲ್ಲಿ ವಿನ್ ಗೇಟ್ ಎಂಬ ಅಧಿಕಾರಿಯ ದಿನಚರಿಯ ಪುಸ್ತಕದಲ್ಲಿ ಇಂತಹ ಹತ್ತಲವು ಉದಾಹರಣೆಗಳಿರುವುದು ಬಂಕಾಪುರದ ಅನುಭವಗಳು ವಿಶೇಷವಾದದ್ದೇನಲ್ಲ ಎನ್ನುವುದನ್ನು ತಿಳಿಸುತ್ತದೆ. 

ಇವೆಲ್ಲವೂ ಉಂಟುಮಾಡಿದ ಸಾಮಾಜಿಕ ಪರಿಣಾಮಗಳು ಮುಖ್ಯವಾದವು. ಹೆಚ್ಚಿನ ಭೂಕಂದಾಯವು ಈಗಾಗಲೇ ಅಸ್ತಿತ್ವದಲ್ಲಿ ಭೂಮಿಯೊಡೆಯರ ಗುಂಪುಗಳನ್ನು ನಿಶ್ಯಕ್ತಗೊಳಿಸಿತು ಅಥವಾ ನಾಶಗೊಳಿಸಿತು. ಇದೇ ಸಮಯದಲ್ಲಿ ಕೃಷಿ ಯೋಗ್ಯ ಭೂಮಿಯು ಕೃಷಿ ಕಾಣದೆ ಕರಾಬಾಯಿತು, ಹೊಸಬರು ಪ್ರವೇಶಿಸಲು ಅನುವು ಮಾಡಿಕೊಟ್ಟಿತು. ಮತ್ತೊಂದೆಡೆ, ಬಹಳಷ್ಟು ಭೂ ಮಾಲೀಕರು, ಬಂಕಾಪುರದ ತೆರಿಗೆ ಕಳ್ಳರಂತೆ, ಪರಿಸ್ಥಿತಿಯನ್ನು ತಮ್ಮನುಕೂಲಕ್ಕೆ ತಕ್ಕಂತೆ ಬದಲಿಸಿಕೊಂಡರು….” (230) 

ಸರಕಾರದ ಈ ದುಬಾರಿ ಕಂದಾಯದ ಬಗ್ಗೆ ದಕ್ಷಿಣ ಮರಾಠ ಪ್ರದೇಶದ ಕಲೆಕ್ಟರ್ ಥಾಕ್ರೆಯೇ ಚೆಂದವಾಗಿ ಒಪ್ಪಿಕೊಳ್ಳುತ್ತಾನೆ. ನಿರ್ಬಿಡೆಯಿಂದ ಅವನು ಹೇಳುತ್ತಾನೆ: “ತನ್ನ ಸಲಹೆಗಳೇ ಮುಖ್ಯವೆಂದೆಣಿಸುವ ಕಲೆಕ್ಟರ್ ದೊಡ್ಡ ಮೊತ್ತವನ್ನು ನಿಗದಿಪಡಿಸುತ್ತಾನೆ, ಮತ್ತವನ ಅಮಲ್ದಾರರು, ಅವನ ಉದಾಹರಣೆಯನ್ನು ತೆಗೆದುಕೊಂಡು, ಕುರುಡಾಗಿ ಮತ್ತು ಗಡುಸಾಗಿ ಪೂರ್ತಿ ಮೊತ್ತ ಕಟ್ಟಿಸಿಕೊಳ್ಳುತ್ತಾರೆ. ಒಂದು ಕೆಟ್ಟ ಹವಾಮಾನದ ಪರಿಸ್ಥಿತಿಯಲ್ಲಿ ಇದು ಬಿಕ್ಕಟ್ಟನ್ನು ಸೃಷ್ಟಿಸುತ್ತದೆ; ಆದರೆ ಕಲೆಕ್ಟರ್ ಅಸಂತುಷ್ಟಗೊಂಡುಬಿಡಬಹುದೆಂದು ಹೆದರುವ ಮತ್ತು ಮನ್ನಾ ಮಾಡುವ ಬಗ್ಗೆ ಖಚಿತತೆ ಇಲ್ಲದ ಅಮಲ್ದಾರರು ಈ ಬಡತನಕ್ಕೆ ತಾನು ಕಾರಣಕರ್ತನಾಗಬಹುದೆಂಬುದನ್ನು ಯೋಚಿಸುವ ಮೊದಲೇ ರೈತರಿಂದ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಹಿಂಜಿ ಬಿಡುತ್ತಾರೆ. ಬೇಡಿಕೆಯನ್ನು ಸರಿಯಾಗಿ ಅವನು ಜಾರಿಗೊಳಿಸುವಂತೆ ಮಾಡುವುದೇ ನಮ್ಮ ಸರಕಾರದ ಶಕ್ತಿ….” (231) 

ಚಾರ್ಲ್ಸ್ ವರ್ಥ್ ಪದೇ ಪದೇ ವೈಯಕ್ತಿಕ ಆಯಾಮಗಳನ್ನು ಕೊಟ್ಟು ವಸಾಹತು ಲೂಟಿಗೆ ಮಾನವೀಯ ಮುಖವಾಡ ತೊಡಿಸುವಂತೆ, ಇದು ಅಮಲ್ದಾರ ಮತ್ತು ಕಲೆಕ್ಟರ್ ನಡುವೆ ಇತ್ಯರ್ಥವಾಗಿಬಿಡಬಹುದಾದ ಪ್ರಶ್ನೆಯಲ್ಲ. ಬದಲಿಗಿದು ಆಕ್ರಮಣಕಾರಿ ವಸಾಹತುಶಾಹಿ ತನ್ನಿಬ್ಬರು ದಲ್ಲಾಳಿಗಳನ್ನು ರೈತರ ಮೇಲೆ ಯಾವುದೇ ಅಡೆತಡೆಯಿಲ್ಲದ ಶೋಷಣೆ ಮಾಡಲು ಪ್ರೋತ್ಸಾಹ ಕೊಟ್ಟ ಪ್ರಶ್ನೆಯಾಗಿದೆ. 

ಎಲ್ಲಾ ವಿಧಾನಗಳಲ್ಲೂ, ಬಹುಶಃ, ಈ ಭೂಕಂದಾಯಕ್ಕಿಂತಲೂ ಹೆಚ್ಚಿನ ವಿನಾಶಕಾರಿ ಪದ್ಧತಿಯೆಂದರೆ ಮೈಸೂರಿನ ಕೈಗೊಂಬೆ ಸರಕಾರ ಇಡಿ ಇಡೀ ತಾಲ್ಲೂಕುಗಳನ್ನೇ ಅಮಲ್ದಾರರಿಗೆ ವಾರ್ಷಿಕ ಹರಾಜಿನಲ್ಲಿ ಕೊಟ್ಟುಬಿಡುತ್ತಿದ್ದುದು. ಇದು ಶರಾತ್ ವ್ಯವಸ್ಥೆ ಎಂಬೆಸರಿನಲ್ಲಿ ವ್ಯಾಪಕವಾಯಿತು. ಶಾಂತ ದೇಹದ ಮೇಲಿನ ಸೋಮಾರಿ ಗಾಯವಾದ ಈ ಶರಾತ್ ವ್ಯವಸ್ಥೆ, ವಸಾಹತು ಬಿರುಗಾಳಿಯ ಕಣ್ಣಿನಂತಿತ್ತು, ಇದು ಕರ್ನಾಟಕವನ್ನು ಪುನಶ್ಚೇತನಗೊಳ್ಳಲಾಗದ ಬಿಕ್ಕಟ್ಟಿಗೆ ದೂಡಿಬಿಟ್ಟಿತು. 

ಶರಾತ್ ವ್ಯವಸ್ಥೆಯನ್ನು ಪರಿಚಯಿಸಿದ್ದು ಇನ್ನೇನು ಪೂರ್ಣಯ್ಯನವರು ನಿವೃತ್ತರಾಗುತ್ತಾರೆ ಎನ್ನುವಾಗ, 1811ರಲ್ಲಿ. ರೈಸ್ ನಮಗೆ ಹೇಳುತ್ತಾರೆ: “ಎಲ್ಲಾ ರೀತಿಯ ಪ್ರಯತ್ನಗಳೂ ರಾಜನ ಕುಸಿತವನ್ನು ತಡೆಯುವಲ್ಲಿ ವಿಫಲವಾಗಿದ್ದವು. ರಾಜ್ಯದ ಉನ್ನತ ಕಛೇರಿಗಳನ್ನು ಹೆಚ್ಚಿನ ಮೊತ್ತ ಕೂಗಿದ ಹರಾಜುದಾರನಿಗೆ ಮಾರಿಬಿಡಲಾಗುತ್ತಿತ್ತು; ಪೂರ್ಣಯ್ಯನವರ ಆಡಳಿತಾವಧಿಯಲ್ಲಿ ಹುಟ್ಟಿಕೊಂಡ ಶರಾತ್ ವ್ಯವಸ್ಥೆಯಿಂದ ಜನರನ್ನು ಶೋಷಿಸಲಾಗುತ್ತಿತ್ತು. ಶರಾತ್ ಎಂಬುದು ಅಮಲ್ದಾರ ಮಾಡಿಕೊಳ್ಳುವ ಗುತ್ತಿಗೆ, ಸರಕಾರಕ್ಕೆ ಒಂದು ನಿರ್ದಿಷ್ಟ ಮೊತ್ತದ ಆದಾಯವನ್ನು ತರುತ್ತೇನೆಂಬ ಒಪ್ಪಿಗೆಯ ಗುತ್ತಿಗೆಯದು; ಅಷ್ಟು ಮೊತ್ತವನ್ನು ಸಂಗ್ರಹಿಸುವಲ್ಲಿ ವಿಫಲವಾದರೆ ಉಳಿಕೆ ಮೊತ್ತವನ್ನು ತನ್ನ ಕೈಯಿಂದಲೇ ಕಟ್ಟಿ ಮೊತ್ತವನ್ನು ಸರಿಪಡಿಸಬೇಕಿತ್ತು, ಮತ್ತು ಹೇಳಿದ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ಸಂಗ್ರಹವಾದರೆ ಅಧಿಕ ಮೊತ್ತವನ್ನು ಸರಕಾರಕ್ಕೆ ಕಟ್ಟಬೇಕಿತ್ತು. ಅಮಲ್ದಾರರು ಸಂಗ್ರಹಿಸಬೇಕಿದ್ದ ಮೊತ್ತ ಸಾಮಾನ್ಯವಾಗಿ ಹಿಂದಿನ ವರುಷ ಸಂಗ್ರಹಿಸಿದ ಮೊತ್ತಕ್ಕಿಂತ ಅಧಿಕವಾಗಿರುತ್ತಿತ್ತು. ಮುಚ್ಚಳಿಕೆಯಲ್ಲಿ, ಅಮಲ್ದಾರ ರೈತರನ್ನು ಶೋಷಣೆಗೆ ಒಳಪಡಿಸುವುದಿಲ್ಲ, ಹೊಸ ಹೊಸ ತೆರಿಗೆಗಳನ್ನು ವಿಧಿಸುವುದಿಲ್ಲ, ಸರಕಾರೀ ಶೇರುಗಳನ್ನು ಕೊಳ್ಳಲು ಒತ್ತಾಯಿಸುವುದಿಲ್ಲ ಎಂದು ಬರೆದುಕೊಡಬೇಕಿತ್ತು; ಆದರಿದು ಕೇವಲ ಹೆಸರಿಗೆ ಮಾತ್ರ. ಈ ಅಂಶಗಳನ್ನು ಅಮಲ್ದಾರರು ಮೀರಿದರು ಎಂಬ ಯಾವುದೇ ದೂರನ್ನು ಸರಕಾರ ಗಮನಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಪರಿಣಾಮವಾಗಿ ರೈತರು ಬಡವರಾದರು….ಈ ಪರಿಸ್ಥಿತಿಯಿಂದ ಬಿಕ್ಕಟ್ಟು ಸೃಷ್ಟಿಯಾಯಿತು…..ಬಿಕ್ಕಟ್ಟು ರೈತರ ಮೇಲೆ ಬಿತ್ತು, ಸರ್ವಾಧಿಕಾರಿ ಶರಾತಿ ಫೌಜಿದಾರ ಮತ್ತು ಅಮಲ್ದಾರರ ಕಾರಣದಿಂದ ಅವರು ನರಳಲಾರಂಭಿಸಿದರು.” (232) 

ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ, ಕಾಸಾಮೈಯೂರ್ (casamaijor) ಶರಾತ್ ವ್ಯವಸ್ಥೆಯ ಮತ್ತೊಂದು ವಿನಾಶಕಾರಿ ಲಕ್ಷಣವನ್ನು ವಿವರಿಸಿದರು: “ಸರಕಾರವು ಬೆಳೆಯ ವಿಷಯದಲ್ಲಿ ಭದ್ರತೆಯನ್ನೂ ಕೇಳುವ ಅಭ್ಯಾಸ ಮಾಡಿಕೊಂಡಿತ್ತು, ಒಂದು ಪಕ್ಷ ರೈತ ಸತ್ತರೆ ಅಥವಾ ವಲಸೆ ಹೋದರೆ ಕಂದಾಯದಲ್ಲುಂಟಾಗುತ್ತಿದ್ದ ಕೊರತೆಯನ್ನು ಸ್ವಇಚ್ಛೆಯಿಂದ ಇತರೆ ರೈತರಿಗೆ ಅಥವಾ ಇಡೀ ಊರಿಗೆ ಭದ್ರತೆ ಕೊಟ್ಟ ರೈತರು ತಮ್ಮ ಕೈಯಿಂದ ತುಂಬಬೇಕಿತ್ತು….” (233) 

ಶರಾತ್ ವ್ಯವಸ್ಥೆ ಕೆಲಸ ಮಾಡಿದ ಬಗೆ ಮತ್ತದರ ಪರಿಣಾಮಗಳನ್ನು ವಿವರಿಸುತ್ತಾ ಎಂ.ಎಚ್.ಗೋಪಾಲ್ ಬರೆಯುತ್ತಾರೆ: “ನಗರ ವಿಭಾಗದಲ್ಲಿ ಕೃಷಿಕ ತೆರಿಗೆಯನ್ನು ನೇರವಾಗಿ ಸರಕಾರಕ್ಕೆ ಕಟ್ಟುತ್ತಿರಲಿಲ್ಲ. ಕೆಲವು ತಾಲ್ಲೂಕುಗಳಲ್ಲಿ (ಶಿವಮೊಗ್ಗ, ತರೀಕರೆ, ಹೋಲಿ ಹೊನ್ನೂರು, ಅಜ್ಜಂಪುರ, ಹೊನ್ನಾಳಿ, ಚಂದಗೆರೆ, ಶಿಕಾರಿಪುರ, ಬಸವಾಪಟ್ಟಣ, ಕುಂಸಿ, ಲಕ್ಕವಳ್ಳಿ, ಮಂದಗಟ್ಟಿ ಮತ್ತು ಅನವಟ್ಟಿಯಂತಹ ತಾಲ್ಲೂಕುಗಳಲ್ಲಿ) ಬಾಡಿಗೆಯನ್ನು ಹಳ್ಳಿಗಳ ಪಟೇಲರಿಗೆ ಕೊಡಲಾಗುತ್ತಿತ್ತು, ಅವರು ಅಮಲ್ದಾರರೊಂದಿಗೆ ಲೆಕ್ಕಾ ಪಕ್ಕಾ ಮಾಡಿಕೊಳ್ಳುತ್ತಿದ್ದರು. ಇನ್ನು ಕೆಲವು ತಾಲ್ಲೂಕುಗಳಲ್ಲಿ (ನಗರ, ಅನಂತಪುರ, ಕವಲೆದುರ್ಗ, ಕೊಪ್ಪ, ಸಾಗರ, ಚಂದ್ರಗುತ್ತಿ ಮತ್ತು ಸೊರಬ) ಬಾಡಿಗೆಯನ್ನು ಗುತ್ತಿಗೆದಾರರೆಂಬ ವರ್ಗದ ಜನರ ಮೂಲಕ ಕೊಡಲಾಗುತ್ತಿತ್ತು. ಇನ್ನುಳಿದ ಭಾಗಗಳಲ್ಲಿ, ಪಟೇಲರ ಮೂಲಕ ದುಡ್ಡು ಕೊಡುವುದು ಮತ್ತು ನೇರವಾಗಿ ರೈತರು ಅಮಲ್ದಾರರಿಗೇ ಕೊಡುವುದು ಚಾಲ್ತಿಯಲ್ಲಿತ್ತು. ಅಮಲ್ದಾರರು, ಒಂದು ಹಳ್ಳಿಯ ಕಂದಾಯವನ್ನು ತಮ್ಮಾಲೋಚನೆಯ ಸಾಮರ್ಥ್ಯದನುಸಾರ ನಿರ್ಧರಿಸುತ್ತಿದ್ದರು ಮತ್ತು ಪಟೇಲರು ಹಾಗೂ ಗುತ್ತಿಗೆದಾರರಿಗೆ ಅಷ್ಟು ಮೊತ್ತವನ್ನು ಸಂಗ್ರಹಿಸುವಂತೆ ಒತ್ತಾಯಿಸುತ್ತಿದ್ದರು. ಮುಂದೆ ಪಟೇಲ ಅಥದಾ ಗುತ್ತಿಗೆದಾರ ಭಾರವನ್ನು ರೈತರ ಮೇಲೆ ವರ್ಗಾಯಿಸುತ್ತಿದ್ದರು. ಕೆಲವೊಮ್ಮೆ ಪಟೇಲ ಮತ್ತು ಅಮಲ್ದಾರ ಜೊತೆಯಾಗಿ ರೈತರನ್ನು ಸುಲಿಯಲು ಸಂಚು ರೂಪಿಸುತ್ತಿದ್ದರು. ರೈತರೊಂದಿಗೆ ಅಮಲ್ದಾರ ನೇರ ಸಂಪರ್ಕದಲ್ಲಿದ್ದಾಗ ಮೊತ್ತವನ್ನು ರೈತರ ಭೂಮಿಯ ಆಧಾರದ ಮೇಲೆ ನಿರ್ಧರಿಸುತ್ತಿದ್ದರು. ಬೆಳೆಯನ್ನು ಸರಕಾರ ಮತ್ತು ಕೃಷಿಕನ ನಡುವೆ ಭಾಗ ಮಾಡುವಾಗ, ದೊಡ್ಡ ಮೊತ್ತದ ಬೇಳೆ ಕಾಳುಗಳನ್ನು ಸರಕಾರಕ್ಕಾಗಿ ತೆಗೆದುಕೊಳ್ಳಲಾಗುತ್ತಿತ್ತು. ಅಮಲ್ದಾರರು ಸರಕಾರೀ ಭಾಗದ ಬೇಳೆಕಾಳುಗಳನ್ನು ಮಾರುಕಟ್ಟೆಯ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ತೆಗೆದುಕೊಳ್ಳುವಂತೆ ರೈತರನ್ನು ಒತ್ತಾಯಿಸುತ್ತಿದ್ದರು. ಈ ಧಾನ್ಯಗಳು, ಸರಕಾರೀ ಖಜಾನಗೆ ಹೋಗದೆ ಅಮಲ್ದಾರರ ಜೇಬಿಗೆ ಸೇರುತ್ತಿತ್ತಷ್ಟೇ. 

….ಕೃಷಿಕ ಕಟ್ಟದಿದ್ದರೆ, ಬಹುಶಃ ಅವನ ಅಸಹಾಯಕತೆಯಿಂದ, ಅವನ ವಸ್ತುಗಳು ಮತ್ತು ಆಕಳುಗಳನ್ನು ವಶಪಡಿಸಿಕೊಂಡು ಮಾರಾಟ ಮಾಡಲಾಗುತ್ತಿತ್ತು, ಅವನ ಹೆಂಡತಿ ಮಕ್ಕಳನ್ನು ಬಂಧನದಲ್ಲಿಡಲಾಗುತ್ತಿತ್ತು. ಪರಿಣಾಮವಾಗಿ ರೈತ ದಿವಾಳಿಯಾದ ಮತ್ತು ಕೃಷಿ ಕಡಿಮೆಯಾಯಿತು”. (234) 

ಶರಾತ್ ವ್ಯವಸ್ಥೆ ರೂಪುಗೊಂಡಿದ್ದು ಮತ್ತು ಅಸ್ತಿತ್ವದಲ್ಲುಳಿದದ್ದು ನಿರ್ದಿಷ್ಟ ಐತಿಹಾಸಿಕ ಕಾರಣಗಳಿಂದ. ಮುಖ್ಯ ಕಾರಣ ವಸಾಹತುಶಾಹಿ. ನಿಯಂತ್ರಣವಿಲ್ಲದ ಬ್ರಿಟೀಷ್ ವಸಾಹತಿನ ದುರಾಸೆಯೆ ಈ ಕ್ಯಾನ್ಸರ್ರಿಗೆ ಮೂಲ ಕಾರಣ. ಬ್ರಿಟೀಷ್ ರಾಜ್ ಊಳಿಗಮಾನ್ಯತೆಯ ಏಜೆಂಟನನ್ನು ರಾಜನೆಂದು ಪೀಠಾರೋಹಣ ಮಾಡಿಸಿತು. ರಾಜನ ಕಮಿಷನ್ ಏಜೆಂಟ್ ದಿವಾನ. ಫೌಜಿದಾರರು ದಿವಾನನ ಏಜೆಂಟರು. ಅವರಿಗೆ ಅಮಲ್ದಾರರು ಏಜೆಂಟರು. ಮತ್ತು ಕೊನೆಗೆ ಪಟೇಲ್ ಮತ್ತು ಶಾನುಭಾಗರು ಊಳಿಗಮಾನ್ಯತೆಯ ದಲ್ಲಾಳಿಗಳಾಗಿ ಕೃಷಿಕರನ್ನು ಮತ್ತು ಕಸುಬುದಾರರನ್ನು ಹಿಂಡಿ ಹಿಪ್ಪೆ ಮಾಡಿದರು. ಶರಾತ್ ವ್ಯವಸ್ಥೆ ಬ್ರಿಟೀಷರ ಸೃಷ್ಟಿ. ಕೆಳಗಿನಿಂದ ಮೇಲಿನವರೆಗೆ, ಈ ವ್ಯವಸ್ಥೆ ಸಜೀವವಾಗಿ ಕಾರ್ಯನಿರ್ವಹಿಸಿದ್ದು ಒಂದೇ ಒಂದು ಪ್ರೋತ್ಸಾಹದಿಂದ: ಹೆಚ್ಚಿನ ಕಂದಾಯ ತನ್ನಿ, ಹೆಚ್ಚಿನ ಆದಾಯ ಪಡೆದುಕೊಳ್ಳಿ. ಈಸ್ಟ್ ಇಂಡಿಯಾ ಕಂಪನಿ ಮೈಸೂರು ಸಾಮ್ರಾಜ್ಯವನ್ನು ಒಂದು ದಲ್ಲಾಳಿ ಸಂಸ್ಥೆಯಂತೆ ನಡೆಸಿತು. ರಾಜನಿಗೆ 1830ರಲ್ಲಿ ನಿವೃತ್ತಿ ವೇತನ ಕೊಟ್ಟ ಸಂದರ್ಭದಲ್ಲಿ ಮಾರ್ಕ್ಸ್ ವ್ಯಂಗ್ಯವಾಗಿ ಹೇಳುತ್ತಾನೆ “ಅರ್ಧ ಬ್ರಿಟೀಷ್ ರಾಜ್ ನಲ್ಲಿ ದಂಗೆಯ ಪರಿಸ್ಥಿತಿಯಿದ್ದಾಗ, ನಲವತ್ತು ಸಾವಿರ ಪೌಂಡು ಸಂಗ್ರಹಿಸಿ ಮತ್ತು ದೇಶದ ವರಮಾನದ ಐದನೇ ಒಂದಂಶಷ್ಟನ್ನು ಸಂಗ್ರಹಿಸಲಾಗಿದೆ (ಮೈಸೂರು ಸಾಮ್ರಾಜ್ಯದಲ್ಲಿ). ತೆರಿಗೆಯಲ್ಲಿನ ಹೆಚ್ಚಳ ಬಹಳವೇ ಪ್ರಾಮುಖ್ಯತೆ ಉಳ್ಳದ್ದು.” ಮತ್ತು ಕೊನೆಯಲ್ಲವನು ಹೇಳುತ್ತಾನೆ: “ಹಾಗಾಗಿ ಅವರಿಗೆ ನಿವೃತ್ತಿ ವೇತನ ಕೊಡುವ ಮೂಲಕ…. ಇಂಗ್ಲೀಷರು ಬಡ ಹಿಂದೂಗಳ ಮೇಲೆ ಭಾರವನ್ನಾಕಿದ್ದಾರೆ, ಅವರ ರಾಜರು ಮತ್ತು ರಾಜವಂಶಸ್ಥರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ.” (235) 

1830ರಷ್ಟರಲ್ಲಿ ನಗರದ ರೈತರು ಸರಕಾರಕ್ಕೆ ಕೊಡಬೇಕಿದ್ದ ಬಾಕಿ ಕಂದಾಯದ ಮೊತ್ತು ಹದಿಮೂರು ಲಕ್ಷ ರುಪಾಯಿಗಳಷ್ಟಾಗಿತ್ತು. (236) ನಗರದ ರೈತರು ಅದೇ ವರ್ಷ ರೆಸೆಡೆಂಟರಿಗೆ ತಮ್ಮ ಕಷ್ಟಗಳನ್ನೇಳಿಕೊಂಡು ಭಿನ್ನಹ ಮಾಡಿದರು: “ಟಿಪ್ಪು ಸುಲ್ತಾನ್ ಈ ದೇಶದ ಸಾಮ್ರಾಟನಾಗಿದ್ದಾಗ, ಅವರೆಲ್ಲರೂ ಶಾಂತಿ ಮತ್ತು ಸಮೃದ್ಧಿಯೊಂದಿಗೆ ಬದುಕುತ್ತಿದ್ದರು. ಆದರೆ ರಾಜನ ಸರಕಾರದ (ಮೈಸೂರು ರಾಜ) ಅಧಿಕಾರಿಗಳು ನಡೆಸುವ ಶೋಷಣೆ ಮತ್ತು ಕ್ರೌರ್ಯ ಎಷ್ಟರ ಮಟ್ಟಿಗೆ ಇದೆಯೆಂದರೆ ಅವರು ಇನ್ನೂ ಹೆಚ್ಚು ಕಾಲ ಅಸ್ತಿತ್ವದಲ್ಲಿರುವುದೇ ಕಷ್ಟಕರವಾಗಿಬಿಟ್ಟಿದೆ. ಅಧಿಕಾರಿಗಳ ಕಿರುಕುಳ ಎಷ್ಟಿರುತ್ತಿತ್ತೆಂದರೆ ಕೆಲವೊಮ್ಮ ತಮ್ಮ ಮಕ್ಕಳನ್ನೇ ಮಾರಾಟ ಮಾಡಲು ಸಹಮತಿಸುವಷ್ಟು.” (237) 

ಆ ಸಮಯದಲ್ಲಿನ ಅಂದಾಜುಗಳು, ಮೈಸೂರು ಪ್ರಾಂತ್ಯಕ್ಕೆ ಹೊರಗಿನವರಾದ ಮರಾಠಾ ಬ್ರಾಹ್ಮಣರು, ಹೆಚ್ಚು ಕಡಿಮೆ ಮೂವತ್ತು ಪ್ರತಿಶತಃದಷ್ಟು ಅಧಿಕಾರಶಾಹಿಯನ್ನು ಆಕ್ರಮಿಸಿಕೊಂಡಿತ್ತೆಂದು ತಿಳಿಸುತ್ತವೆ. ಈ ಮುಂಚಿನ ಅಧ್ಯಾಯದಲ್ಲಿ (ಜಾತಿ ದೌರ್ಜನ್ಯದ ಹೆಚ್ಚಳ) ಪ್ರಸ್ತಾಪಿಸಿದ ಕುಟುಂಬಗಳೆಲ್ಲವೂ ಈ ವರ್ಗಕ್ಕೆ ಸೇರಿದವರು. ಒಡೆಯರ್ ಗಳ ಸಮ್ಮುಖದಲ್ಲಿ ತಾಲ್ಲೂಕುಗಳನ್ನು ವಾರ್ಷಿಕ ಗುತ್ತಿಗೆಗೆ ಹರಾಜು ಕೂಗುವ ಪದ್ಧತಿ ಸ್ಮಾರ್ಥ ಬ್ರಾಹ್ಮಣರ ಏಕಸ್ವಾಮ್ಯತೆ ಹೆಚ್ಚಲು ಪ್ರಮುಖ ಕಾರಣವಾಯಿತು. ಸೆಬಾಸ್ಟಿಯನ್ ಜೋಸೆಫ್ ತನ್ನ ಪ್ರಬಂಧ A Service Elite Against the Peasantsನಲ್ಲಿ ಹೇಳುತ್ತಾನೆ: “ಪೂರ್ಣಯ್ಯನ ನಿರ್ಗಮನದ ನಂತರದ ವರುಷಗಳಲ್ಲಿ ಆರ್ಥಿಕ ಗೊಂದಲಗಳು ಮೂಡಿದ್ದಕ್ಕೆ ಪ್ರಮುಖ ಕಾರಣ ಜನರ ಮೇಲಾಗುವ ಪರಿಣಾಮಗಳನ್ನು ಯೋಚಿಸದೆ ತಾಲ್ಲೂಕುಗಳನ್ನು ಹೆಚ್ಚು ಮೊತ್ತ ಕೂಗುವ ಹರಾಜುದಾರನಿಗೆ ಬಾಡಿಗೆಯಾಗಿ ನೀಡಿಬಿಟ್ಟಿದ್ದು. ಅಮಲ್ದಾರಿಯಷ್ಟೇ ಮಾರಾಟವಾಗುತ್ತಿರಲಿಲ್ಲ. ಎಲ್ಲಾ ಸರಕಾರೀ ಕಛೇರಿಗಳು ಮಾರಾಟವಾಗುತ್ತಿದ್ದವು; ಫೌಜುದಾರನ ಕಛೇರಿಯನ್ನು ಹತ್ತು ಸಾವಿರ ರುಪಾಯಿಗೆ ಮಾರಾಟ ಮಾಡಿದರೆ, ಶೇಕ್ ದಾರನ ಕಛೇರಿ ನೂರು ರುಪಾಯಿಗೆ ಮಾರಾಟವಾಗುತ್ತಿತ್ತು. 

ಈ ರೀತಿಯ ಮಾರಾಟದ ಪುನರಾವರ್ತನೆ ಮತ್ತು ಫಲವತ್ತಾದ ಈ ಕಛೇರಿಗಳ ಅಧಿಕಾರಿಗಳನ್ನು ಸಲಾಸಲ ತೆಗೆದುಬಿಡುತ್ತಿದ್ದುದು ಉಳಿದ ಅಧಿಕಾರಿಗಳಿಗೆ ಪಾಠ ಕಲಿಸಿತು. ಅವರು ಕೊಡಬೇಕಾದ ಮೊತ್ತವನ್ನು ಸುದೀರ್ಘ ಕಾಲದವರೆಗೆ ಕೊಡದೆ ಸತಾಯಿಸುತ್ತಿದ್ದರು. ಒಂದೇ ಬಾರಿ ಕೊಡದೆ ಕಂತುಗಳಲ್ಲಿ ಕೊಡಲಾರಂಭಿಸಿದರು. ಮತ್ತು ಕೊನೆಗೆ ವಾರ್ಷಿಕವಾಗಿ ಒಂದು ನಿರ್ದಿಷ್ಟ ಮೊತ್ತವನ್ನು ನಿಗದಿಪಡಿಸಿಕೊಂಡರು. 

ಪ್ರತಿಯೊಬ್ಬ ಹೊಸ ಗುತ್ತಿಗೆದಾರ ತನ್ನ ಕಛೇರಿಯನ್ನು ಉಳಿಸಿಕೊಳ್ಳಲೇ ಪ್ರಯತ್ನಿಸಬೇಕಿತ್ತು. ಮತ್ಯಾರೋ ಇನ್ನೂ ಹೆಚ್ಚಿನ ಮೊತ್ತವನ್ನು ಕೊಡುವುದಾಗಿ ಹೇಳಿಬಿಟ್ಟರೆ ಹಳೆಯ ಬಾಡಿಗೆದಾರನನ್ನು ಅವನ ಆಡಳಿತ ವೈಖರಿ ಮೇಲಿನ ‘ದೂರುಗಳ’ ಕಾರಣದಿಂದ ತೆಗೆದುಹಾಕಲಾಗುತ್ತಿತ್ತು; ಸಾಮ್ರಾಜ್ಯ ಅನುಕೂಲಕ್ಕೆ ತಕ್ಕಂತೆ ಇಂತಹ ದೂರುಗಳನ್ನು ರೂಪಿಸಿ ಮುಂದೆ ಮಾಡುವುದು ಕಷ್ಟದ ಕೆಲಸವೇನಾಗಿರಲಿಲ್ಲ”. (238) 

ಹೀಗಾಗಿ ಕೊಳ್ಳಲು ಮತ್ತು ಮಾರಾಟ ಮಾಡಲು ವಿಪರೀತ ಜನಸಂದಣಿ ಇರುತ್ತಿತ್ತು, ತಾಲ್ಲೂಕಿನದ್ದಷ್ಟೇ ಅಲ್ಲ, ಸರಕಾರೀ ಕೆಲಸಗಳದ್ದೂ ಕೂಡ. ಮೈಸೂರನ್ನು ಬ್ರಿಟೀಷ್ ವಸಾಹತು ಹರಾಜು ಹಾಕಿಬಿಟ್ಟಿತ್ತು. 

ಆಗ ಮೈಸೂರಿನ ರೆಸಿಡೆಂಟಾಗಿದ್ದ, ಬ್ರಿಟೀಷ್ ವಸಾಹತುಶಾಹಿಯ ಸ್ಥಳೀಯ ಪ್ರತಿನಿಧಿಯಾಗಿದ್ದ ಕಾಸಾಮೈಯೂರ್, ಬಹಳಷ್ಟು ಸಲ ರಾಜನ ಬಳಿಗೆ ಹೋಗಿ ಕಂದಾಯ ಅಧಿಕಾರಿಗಳ ಭ್ರಷ್ಟಾಚಾರದ ಕುರಿತು, ಬೃಹತ್ ಮೊತ್ತದ ಹಣದ ದುರುಪಯೋಗದ ಕುರಿತು ತಿಳಿಸುತ್ತಿದ್ದ. ಈ ದೂರುಗಳು, ಸಹಜವಾಗಿ ಕಡೆಗಣಿಸಲ್ಪ್ಟವು. 1831ರಲ್ಲಿ ಬ್ರಿಟೀಷರ ನೇರ ಆಡಳಿತ ಜಾರಿಗೆ ಬಂದ ಮೇಲಷ್ಟೇ ರೆಸೆಡೆಂಟ್ ತನ್ನ ತಪ್ಪುಗಳಿರಲಿಲ್ಲವೆಂದು ತೋರಿಸಿಕೊಳ್ಳುವುದಕ್ಕೆ, ಸರಕಾರ ಅಕ್ಷರಶಃ ಮಾರಾಟವಾಗಿಬಿಡುತ್ತಿದ್ದುದನ್ನು ತಡೆಯಲು ಯಾವ್ಯಾವ ಪ್ರಯತ್ನಗಳನ್ನು ಮಾಡಲಾಯಿತು ಎಂದು ತಿಳಿಸಿದ್ದು. ಅವನದೇ ಮಾತುಗಳ ಪ್ರಕಾರ ನೋಡಿದರು, ಕಾಸಾಮೈಯೂರ್ ತೆರಿಗೆ ಹಣವನ್ನು ಅಮಲ್ದಾರರು ಮತ್ತು ಪೌಜುದಾರರು ದುರುಪಯೋಗ ಪಡಿಸಿಕೊಂಡ ಹಲವಾರು ಪ್ರಕರಣಗಳನ್ನು ರಾಜನ ಗಮನಕ್ಕೆ ತಂದಿದ್ದ “ಕ್ರಮ ಕೈಗೊಳ್ಳಲು ರಾಜನ ಗಮನಕ್ಕೆ ತರಲಾಗಿದೆ”. ತದನಂತರ 1828,1829 ಮತ್ತು 1830ರಲ್ಲಿ ತನ್ನ ಪ್ರಾಮಾಣಿಕತೆ ಹೇಗೆಲ್ಲ ಇತ್ತು ಎಂದೊಂದು ಪಟ್ಟಿ ಕೊಡುತ್ತಾನೆ. (239) 

ಸೆಬಾಸ್ಟಿಯನ್ ಬರೆಯುತ್ತಾರೆ: “ಈ ಕುಲಗೆಟ್ಟ ಅಧಿಕಾರಶಾಹಿಯ ಸೇವೆಯ ಮೇಲೆ ಮಹಾರಾಜ ಅವಲಂಬಿತವಾದ ಕಾರಣ ಅವರ ಭ್ರಷ್ಟ ವಿಧಾನಗಳನ್ನು ಪಾಲಿಸುವಂತಾಯಿತು. ಒಂದು ಹಂತದಲ್ಲಿ, ಬ್ರಿಟೀಷ್ ರೆಸಿದೆಂಟ್, ಮಹಾರಾಜರೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಹೊರಿಸಿದ್ದ; ಮಹಾರಾಜ ತಾನು ನೇಮಿಸಿದ ಅಧಿಕಾರಿಗಳಿಗೆ ನಿಮ್ಮ ಹಣವನ್ನು ನೀವು ಪಡೆದುಕೊಳ್ಳಲು ನಿಮಗೆ ಸ್ವಾತಂತ್ರ್ಯವಿದೆ ಎಂದು ತಿಳಿಸಿದ್ದ. ತಾಲ್ಲೂಕುಗಳಲ್ಲಿ ಅಮಲ್ದಾರರು ದಾಖಲೆಗಳನ್ನು ತಿದ್ದುವುದು ಕೂಡ ನಡೆದಿತ್ತು, ಅಮಲ್ದಾರರು ಲಾಭ ಮಾಡಿಕೊಂಡರೆ ಸರಕಾರಕ್ಕೆ ನಷ್ಟವಾಗುತ್ತಿತ್ತು. ವರುಣ ತಾಲ್ಲೂಕಿನಲ್ಲಿ ಬೆಳೆಯನ್ನು ಸರಕಾರ ಮತ್ತು ಕೃಷಿಕರ ನಡುವೆ ಭಾಗ ಮಾಡಲಾಗುತ್ತಿತ್ತು, ಅಮಲ್ದಾರರು ಕೈಯಾಡಿಸಿ ಸರಕಾರದ ಭಾಗದ ಧಾನ್ಯಗಳನ್ನು ಮಂಗಮಾಯ ಮಾಡಿಬಿಡುತ್ತಿದ್ದರು. 1832ರಲ್ಲಿ ಹಿರಿಯ ಕಮಿಷನರ್ರಾದ ಲೆಫ್ಟಿನೆಂಟ್ ಕಲೋನಲ್ ಬ್ರಿಗ್ಸ್ ಹೇಳುತ್ತಾರೆ ‘…ಕಳೆದ ಕೆಲವು ವರುಷಗಳಿಂದ ಅಮಲ್ದಾರರ ಆಫೀಸಿನಲ್ಲಿರುವವರು ಮತ್ತು ಎಂಟತ್ತು ತಿಂಗಳಿಗೊಮ್ಮೆ ಕೆಲಸದಿಂದ ತೆಗೆಯಲ್ಪಟ್ಟವರ ಬಗ್ಗೆಯೆಲ್ಲ ನಾನು ನಡೆಸಿದ ವಿಚಾರಣೆಯು ನನಗೇನನ್ನು ತಿಳಿಸಿತೆಂದರೆ, ಇವರೆಲ್ಲರೂ ಭ್ರಷ್ಟಾತಿಭ್ರಷ್ಟರಷ್ಟೇ ಅಲ್ಲ, ಜೊತೆಗೆ ಸರಕಾರಕ್ಕೆ ಈ ಕ್ಷಣದಲ್ಲಿ ಬಹಳಷ್ಟು ದುಡ್ಡನ್ನು ಕಟ್ಟಬೇಕಿದೆ, ಅದನ್ನು ದಾಖಲೆಗಳಲ್ಲೂ ನಮೂದಿಸಿಲ್ಲ ಮತ್ತು ಈಗ ಕಛೇರಿಯನ್ನಲಂಕರಿಸಿರುವವರೂ ಕೂಡ ಇದೇ ರೀತಿಯ ಸಂಕಟದಲ್ಲಿದ್ದಾರೆ.’” (240) 

ಅಮಲ್ದಾರರ ಉನ್ನತ ಮತ್ತದೇ ಸಮಯಕ್ಕೆ ನಿರಂಕುಶ ನಿಲುವುಗಳ ಬಗ್ಗೆ ಬರೆಯುತ್ತಾ ಸೆಬಾಸ್ಟಿಯನ್ ಹೇಳುತ್ತಾರೆ: “ಅವನು ತನ್ನಧಿಕಾರವನ್ನು ಹಳ್ಳಿ ಮತ್ತು ಪಟ್ಟಣಗಳೆರಡರಲ್ಲೂ ನಡೆಸಿದ…..ಸ್ಥಳೀಯ ಮಟ್ಟದಲ್ಲಿ ಅಮಲ್ದಾರ ಅಧಿಕಾರಶಾಹಿಯ ಮುಖ್ಯಸ್ಥನೂ ಹೌದು, ಉನ್ನತ ನ್ಯಾಯಾಧೀಶನೂ ಹೌದು. ಅವನ ಮೂಲಕವಷ್ಟೇ ರೈತನು ಸರಕಾರೀ ಶಕ್ತಿಗೆ ಎದುರಾಗಬೇಕಿತ್ತು. ಅಮಲ್ದಾರ ಸರಕಾರಕ್ಕೂ ಸ್ಥಳೀಯರಿಗೂ ಮಧ್ಯೆ ಕೊಂಡಿಯಾಗಿದ್ದ. ಸಹಜವಾಗಿ, ಅಮಲ್ದಾರರೇ ಕುಲಗೆಟ್ಟು ಶೋಷಕರಾಗಿ ಬದಲಾದಾಗ, ಅದರ ನೇರ ಮತ್ತು ತತ್ ಕ್ಷಣದ ಪರಿಣಾಮವಾಗಿದ್ದು ರೈತರ ಮೇಲೆ. ಅಮಲ್ದಾರ ತನ್ನ ಅಧಿಕಾರವನ್ನು ಬಳಸಿ, ಶರಾತ್ ವ್ಯವಸ್ಥೆಯ ಅನ್ವಯ ಸಂಗ್ರಹವಾಗಬೇಕಿದ್ದ ನಿಗದಿಯಾದ ವಾರ್ಷಿಕ ಮೊತ್ತವನ್ನು ಸಂಗ್ರಹಿಸಲು ಎಲ್ಲಾ ನಿರಂಕುಶ ರೀತಿಗಳನ್ನೂ ಬಳಸಬಹುದಿತ್ತು. ಆದರೆ ಕೃಷಿಕನಿಗೆ ತನ್ನ ಮೇಲಾಗುತ್ತಿದ್ದ ದೌರ್ಜನ್ಯ ಮತ್ತು ಅನ್ಯಾಯವನ್ನು ಪ್ರಶ್ನಿಸಲು ಸೂಕ್ತ ವೇದಿಕೆಯೇ ಇರಲಿಲ್ಲ; ಕಾರಣ ಅಮಲ್ದಾರನ ವಿರುದ್ಧದ ದೂರುಗಳನ್ನು ಪರಿಶೀಲಿಸಲಿದ್ದ ನ್ಯಾಯಾಧಿಕರಣದ ಮುಖ್ಯಸ್ಥ ಕೂಡ ಅದೇ ಅಮಲ್ದಾರನಾಗಿರುತ್ತಿದ್ದ. 

ಸೇವೆಯಲ್ಲಿದ್ದ ಗಣ್ಯರ ಈ ಶಕ್ತಿಯುತ ವರ್ಗ ತನ್ನ ಮೋಸ ಮತ್ತು ದೋಚುವಿಕೆಯ ಜೊತೆ ಜೊತೆಗೆ ದರೋಡೆಕೋರರೊಂದಿಗೆ ಸೇರಿ ರೈತರನ್ನು ಲೂಟಿ ಮಾಡುತ್ತಿದ್ದರು. ಮೇಜರ್ ಜೆನರಲ್ ಹಾಕ್ಸ್ ಮೊರಿಸನ್, ಮೆಕ್ ಲಿಯಾಡ್ ಮತ್ತು ಮಾರ್ಕ್ ಕಬ್ಬನ್ 1830 – 32ರ ನಗರದ ಬಂಡಾಯದ ಬಗ್ಗೆ ಮಾಡಿದ ತನಿಖೆಯಲ್ಲಿ ಹೇಳುತ್ತಾರೆ ‘ನಗರದ ಫೌಜುದಾರರಾದ ಸರ್ವೋತ್ತಮ ರಾವ್ ಮತ್ತು ಕಿಷೆನ್ ರಾವ್ ತುಂಬು ವಿಶ್ವಾಸದಿಂದ ಕಳ್ಳರ ನಾಯಕ ಗೂಂಡಾನನ್ನು ನೇಮಿಸಿಕೊಂಡಿದ್ದರು, ಲೂಟಿ ಮಾಡುವ ಸಲುವಾಗಿ. ನಂತರದ ದಿನಗಳಲ್ಲಿ ಬಂಧನಕ್ಕೊಳಗಾದ ಕಳ್ಳರೇ ವಿಚಾರಣೆಯ ವೇಳೆ ಫೌಜಿದಾರ ಸರ್ವೋತ್ತಮ ರಾವ್ ಆಗಮನದ ನಂತರ 73 ಮನೆಗಳನ್ನು ದೋಚಿದ್ದಾಗಿ ಒಪ್ಪಿಕೊಂಡಿದ್ದಾರೆ; ಫೌಜಿದಾರರ ಸೂಚನೆಯಂತೆ ಅವರು ಅ ಮನೆಗಳಿಗೆ ಹೋಗುತ್ತಿದ್ದರು ಮತ್ತು ದೋಚಿದ ಸಂಪತ್ತನ್ನೆಲ್ಲ ಫೌಜಿದಾರನಿಗೆ ತಲುಪಿಸುತ್ತಿದ್ದರು. ಅಚ್ಚರಿಯೆಂದರೆ, ರೈತರನ್ನು ಲೂಟಿ ಮಾಡಿದ ಇದೇ ಜನ, ಪ್ರಾರಂಭದ ಹಂತದಲ್ಲಿ ರೈತರು ಬಂಡಾಯ ಹೇಳಲು ಪ್ರೋತ್ಸಾಹಿಸಿದರು, ತಮ್ಮ ಗುರಿಗಳನ್ನು ಸಾಧಿಸಿಕೊಳ್ಳಲು”. (241) 

ಬಿಕ್ಕಟ್ಟು ಆಳವಾಗಿ, ಅಧಿಕಾರಶಾಹಿ – ಊಳಿಗಮಾನ್ಯ ಆಸಕ್ತಿಗಳು ಎಷ್ಟು ದೃಡವಾಗಿ ಬೇರೂರಿತ್ತೆಂದರೆ, ಆಳುವ ವರ್ಗದೊಳಗೇ ಶಾಂತಿಯುತ ದೋಚುವಿಕೆ ಹಿಂಸಾತ್ಮಕ ರೂಪ ಪಡೆದುಕೊಳ್ಳುತ್ತಿತ್ತು.

ಮುಂದಿನ  ವಾರ
ತೆರಿಗೆ ವಸೂಲು ಮಾಡಲು ನಡೆಸಿದ ಶೋಷಣೆ

No comments:

Post a Comment