Jun 16, 2016

ಕರ್ನಾಟಕಕ್ಕೊಂದು ಮೂರನೆ ರಾಜಕೀಯ ಶಕ್ತಿಯ ಅನಿವಾರ್ಯತೆ: ಜನತಾದಳ ಆ ಸ್ಥಾನ ತುಂಬ ಬಲ್ಲುದೆ?

jds logo
ಕು.ಸ.ಮಧುಸೂದನ್ ನಾಯರ್
16/06/2016
ಅನೇಕ ರಾಜಕೀಯ ವಿಶ್ಲೇಷಕರ ಲೆಕ್ಕಾಚಾರಗಳನ್ನೂ ಮೀರಿ ಇವತ್ತು ಬಾಜಪ ಪ್ರಬಲ ರಾಜಕೀಯ ಶಕ್ತಿಯಾಗಿ ರಾಷ್ಟ್ರದಾದ್ಯಂತ ಬೆಳೆಯುತ್ತಿದ್ದು, ಇನ್ನೊಂದು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ರಾಜ್ಯದಿಂದ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುತ್ತ ದುರ್ಬಲವಾಗುತ್ತ ಬರುತ್ತಿದೆ. ಇಂತಹ ಸಂಕೀರ್ಣ ಸನ್ನಿವೇಶದಲ್ಲಿ ಜಾತ್ಯಾತೀತ ಮನೋಬಾವನೆಯ ಮತದಾರರಿಗೆ ಕೋಮುವಾದಿ ಶಕ್ತಿಗಳನ್ನು ಹತ್ತಿಕ್ಕುವ ಯಾವ ದಾರಿಯೂ ಕಾಣದಂತಾಗಿ ಗೊಂದಲದಲ್ಲಿದ್ದಾರೆ. ಮತಾಂಧ ರಾಜಕಾರಣವನ್ನು ಬಗ್ಗು ಬಡಿಯಲು ಶಕ್ತವಾದ ಪಕ್ಷಗಳ ಹುಡುಕಾಟದಲ್ಲಿ ಜನತೆ ಇದ್ದರೆ, ಕೆಲವೊಂದು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಾಜಪದ ಓಟಕ್ಕೆ ತಡೆಗೋಡೆಯಾಗಿ ನಿಲ್ಲುವಲ್ಲಿ ಯಶಸ್ವಿಯಾಗಿವೆ. ಉದಾಹರಣೆಗೆ: ಬಿಹಾರದಲ್ಲಿ ನಿತೀಶ್ ಕುಮಾರರ ಸಂಯುಕ್ತ ಜನತಾದಳ, ಲಲ್ಲೂಪ್ರಸಾದ್ ಯಾದವರ ರಾಷ್ಟ್ರೀಯ ಜನತಾದಳ, ತಮಿಳುನಾಡಲ್ಲಿ ಜಯಲಲಿತಾರವರ ಎ.ಐ.ಎ.ಡಿ.ಎಂ.ಕೆ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್, ಒಡಿಸ್ಸಾದಲ್ಲಿ ನವೀನ್ ಪಟ್ನಾಯಕರ ಬಿಜು ಜನತಾದಳ, ಉತ್ತರ ಪ್ರದೇಶದಲ್ಲಿ ಮಾಯಾವತಿಯವರ ಬಹುಜನಪಕ್ಷ, ಮುಲಾಯಂಸಿಂಗ್ ಯಾದವರ ಸಮಾಜವಾದಿ ಪಕ್ಷಗಳು ಇದುವರೆಗೂ ಬಾಜಪವನ್ನು ತಮ್ಮ ರಾಜ್ಯದಲ್ಲಿ ಬೆಳೆಯಲು ಬಿಡದೆ ಗಟ್ಟಿಯಾಗಿ ನಿಲ್ಲುವಲ್ಲಿ ಯಶಸ್ವಿಯಾಗಿವೆ, ರಾಷ್ಟ್ರಮಟ್ಟದಲ್ಲಿ ಬಾಜಪಕ್ಕೆ ಇಂತಹ ಪ್ರತಿರೋಧ ತೋರಬಲ್ಲ ಶಕ್ತಿ ಹೊಂದಿರುವ ಪ್ರಾದೇಶಿಕ ಪಕ್ಷಗಳು ಕರ್ನಾಟಕದ ಜನತೆಯ ಮಟ್ಟಿಗೂ ಒಂದಿಷ್ಟು ಆಶಾವಾದ ಹುಟ್ಟು ಹಾಕಿದ್ದರೆ ಅದರಲ್ಲಿ ತಪ್ಪೇನು ಇಲ್ಲ. ಕಾಂಗ್ರೆಸ್ಸಿನ ಭ್ರಷ್ಟತೆ, ಜಡತೆ, ಬಾಜಪದ ಮತಾಂಧ ರಾಷ್ಟ್ರೀಯತೆಯ ರಾಜಕಾರಣಗಳೆರಡನ್ನೂ ನಿಯಂತ್ರಿಸುವ, ಹಾಗು ಸ್ಥಳೀಯ ನೆಲ-ಜಲದ ಹಿತಾಸಕ್ತಿಗಳನ್ನು ಕಾಪಾಡಬಲ್ಲ ಪ್ರಾದೇಶಿಕ ರಾಜಕೀಯ ಶಕ್ತಿಯೊಂದರ ಅನಿವಾರ್ಯತೆಯನ್ನು ಕರ್ನಾಟಕದ ಜನತೆ ಎಂಭತ್ತರ ದಶಕದ ಪೂರ್ವಾರ್ದದಲ್ಲಿಯೇ ಅರಿತು ಜನತಾ ಪರಿವಾರವನ್ನು ಅಧಿಕಾರಕ್ಕೆ ತರಲು ಸಫಲರಾಗಿದ್ದರು. ತದನಂತರದ ದಿನಗಳಲ್ಲಿ ಸ್ಪಷ್ಟ ಸಿದ್ದಾಂತಗಳ ಅರಿವೆಯಿರದೆ ಜನತಾ ಪರಿವಾರ ಚೂರುಗಳಾಗಿ ಒಡೆಯುತ್ತ ಇವತ್ತು ಶ್ರೀ ಹೆಚ್. ಡಿ.ದೇವೇಗೌಡರ ನೇತೃತ್ವದಲ್ಲಿ ಜಾತ್ಯಾತೀತ ಜನತಾದಳದ ಹೆಸರಲ್ಲಿ ತನ್ನ ಅಸ್ಥಿತ್ವ ಉಳಿಸಿಕೊಂಡಿದೆ.

ಇವತ್ತು ಇಡೀ ರಾಷ್ಟ್ರದಲ್ಲಿ ತನ್ನ ಬೇರುಗಳನ್ನು ಬಿಡುತ್ತಾ, ರಾಜ್ಯಗಳನ್ನು ಒಂದೊಂದಾಗಿ ಗೆಲ್ಲುತ್ತಾ ಹೋಗುತ್ತಿರುವ ಬಾಜಪ ತನ್ನ ಪ್ರತ್ಯಕ್ಷ ಕೋಮುವಾದಿ ರಾಜಕಾರಣವನ್ನು ಬದಿಗಿಟ್ಟು ಅದರ ಇನ್ನೊಂದು ಮುಖವಾದ ರಾಷ್ಟ್ರೀಯತೆ-ದೇಶಭಕ್ತಿಯೆಂಬ ಸಾಂಸ್ಕೃತಿಕ ರಾಜಕಾರಣ ಮಾಡುವಲ್ಲಿ ಯಶಸ್ವಿಯಾಗುತ್ತ ಹೋಗುತ್ತಿದೆ. ಅದರ ನಾಯಕತ್ವದ ಹೇಳಿಕೆ ನಡವಳಿಕೆಗಳನ್ನು ನೋಡಿದರೆ ಒಂದೇ ಪಕ್ಷದ ಸರ್ವಾಧಿಕಾರಿ ಆಳ್ವಿಕೆಯತ್ತ ಅದು ಸಾಗುತ್ತಿರುವಂತೆ ಕಾಣುತ್ತಿದೆ. ಇನ್ನು ಬಹುತೇಕ ರಾಜ್ಯಗಳಲ್ಲಿ ಸೋತು ಏದುಸಿರು ಬಿಡುವಂತೆ ಕಾಣುತ್ತಿರುವ ಕಾಂಗ್ರೇಸ್ ೨೦೧೯ರ ವೇಳೆಗೆ ಸುದಾರಿಸಿಕೊಂಡು ಚುನಾವಣೆಯನ್ನು ಎದುರಿಸುವ ಶಕ್ತಿ ಮತ್ತು ಉತ್ಸಾಹ ಹೊಂದಿರುತ್ತದೆಯೇ ಎನ್ನುವುದು ಅನುಮಾನದ ವಿಷಯವಾಗಿದೆ. ಇನ್ನು ಅದಕ್ಕೂ ಮುಂಚೆಯೇ ೨೦೧೮ರಲ್ಲಿ ಕರ್ನಾಟಕವು ವಿದಾನಸಭಾ ಚುನಾವಣೆಗಳಿಗೆ ಹೋಗಲಿರುವುದರಿಂದ ರಾಜ್ಯದ ಜನತೆ ಪರ್ಯಾಯ ರಾಜಕೀಯ ಶಕ್ತಿಯೊಂದನ್ನು ಬಯಸುತ್ತಿದೆ. ಹೀಗೆ ಕಾಂಗ್ರೆಸ್ ಮತ್ತು ಬಾಜಪ ಹೊರತು ಪಡಿಸಿ ಮೂರನೇ ಆಯ್ಕೆಯೊಂದನ್ನು ಕನ್ನಡದ ಜನತೆ ಬಯಸುತ್ತಿರುವ ಸಂದರ್ಭದಲ್ಲಿಯೇ ಜನತಾದಳ ತೀವ್ರವಾದ ಬಿಕ್ಕಟ್ಟಿಗೆ ಸಿಲುಕಿ ಕೊಂಡಿದೆ. ಬಲಾಢ್ಯ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಬಲ್ಲ ಶಕ್ತಿ ಹೊಂದಿದ್ದ ಅದು ತನ್ನ ಆಂತರಿಕ ಕಿತ್ತಾಟಗಳಿಂದ ಒಣಪ್ರತಿಷ್ಠೆಗಳಿಂದಾಗಿ ದುರ್ಬಲವಾಗಿರುವಂತೆ ಕಾಣುತ್ತಿದೆ. ಹೀಗಾಗಿ ಜನತೆ ಎರಡೂ ರಾಷ್ಟ್ರೀಯ ಪಕ್ಷಗಳನ್ನೂ ಸೋಲಿಸಿ ಅಧಿಕಾರ ಹಿಡಿಯಬಲ್ಲದೆಂಬ ನಂಬಿಕೆಯಲ್ಲಿ ಜನತಾ ದಳಕ್ಕೆ ಮತಹಾಕುವ ಸ್ಥಿತಿಯಲ್ಲಿ ಇಲ್ಲ. ಇಂತಹ ಸನ್ನಿವೇಶದಲ್ಲಿ ಪಕ್ಷವನ್ನು ಕಟ್ಟುವ ಹೊಣೆಗಾರಿಕೆ ದಳದ ನಾಯಕರುಗಳಿಗಿದೆ.

ಹೀಗಾಗಿ ಜನತಾದಳ ಒಂದಿಷ್ಟು ಚಿಂತನೆ ನಡೆಸಿ ತನ್ನ ಸಿದ್ದಾಂತಗಳ ಪುನರ್ ವಿಮರ್ಶೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಈ ದಿಕ್ಕಿನಲ್ಲದು ಕಾಂಗ್ರೆಸ್ ಮತ್ತು ಬಾಜಪಗಳೆರಡನ್ನೂ ಸಮಾನಾಂತರ ದೂರದಲ್ಲಿಟ್ಟು ರಾಜಕಾರಣ ಮಾಡಬೇಕಿದೆ. ತಾತ್ಕಾಲಿಕ ಅಧಿಕಾರಕ್ಕೆ ಆಸೆ ಪಡುವ ನಾಯಕರುಗಳು ಮತ್ತು ಕಾರ್ಯಕರ್ತರುಗಳನ್ನು ಕಳದುಕೊಂಡರು ಪರವಾಗಿಲ್ಲ, ಉಳಿದೆರಡು ವರ್ಷಗಳಲ್ಲಿ ಹೊಸ ನಾಯಕ ಮತ್ತು ಕಾರ್ಯಕರ್ತರ ಪಡೆಯನ್ನು ಸಿದ್ದಪಡಿಸುತ್ತೇವೆಂಬ ಹಟತೊಟ್ಟು ಎಲ್ಲೆಲ್ಲಿ ಅದು ಬಾಜಪ ಮತ್ತು ಕಾಂಗ್ರೆಸ್ನ ಜೊತೆ ಮೈತ್ರಿ ಮಾಡಿಕೊಂಡಿದೆಯೊ ಆ ಮೈತ್ರಿಯನ್ನು ಮುರಿದುಕೊಂಡು ಹೊರಬೇಕಾಗಿದೆ. ಇದರಿಂದ ಒಂದಷ್ಟು ಹಿನ್ನಡೆಯಾಗಿ ಕೆಲವು ನಾಯಕರು ಕಾರ್ಯಕರ್ತರುಗಳು ದೂರ ಹೋದರೂ, ಪಕ್ಷದ ನಿಷ್ಠಾವಂತರು ಪಕ್ಷದಲ್ಲಿ ಉಳಿದೇ ಉಳಿಯುತ್ತಾರೆ. ಇದರಿಂದಾಗಿ ಎರಡು ಲಾಭಗಳಾಗಲಿವೆ. ಮೊದಲಿಗೆ ಬಾಜಪದಿಂದ ದೂರಬರುವುದರಿಂದ ಅಲ್ಪಸಂಖ್ಯಾತರ ಬೆಂಬಲ ಪಡೆಯಬಹುದಾಗಿದೆ. ಇನ್ನು ಕಾಂಗ್ರೆಸ್ನಿಂದ ದೂರ ಸರಿಯುವುದರಿಂದ ಕಾಂಗ್ರೆಸ್ನ ಭ್ರಷ್ಟತೆಯ ಬಗ್ಗೆ ಮಾತಾಡುವ ನೈತಿಕ ಶಕ್ತಿ ಗಳಿಸಿಕೊಳ್ಳುವ ಪಕ್ಷ ಜನರ ಮನಸ್ಸನ್ನು ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದರಿಂದ ಖಂಡಿತಾ ಜನತಾದಳಕ್ಕೆ ತಾತ್ಕಾಲಿಕ ಹಿನ್ನಡೆಯುಂಟಾಗುವುದು ನಿಶ್ಚಿತವಾಗುವುದಾದರು ಮುಂದಿನ ದಿನಗಳಲ್ಲಿ ಒಳ್ಳೆಯ ಪಲಿತಾಂಶ ಪಡೆಯಬಹುದಾಗಿದೆ. ಇನ್ನು ಪಕ್ಷವನ್ನು ದೇವೇಗೌಡರು ಮತ್ತಷ್ಟು ಪ್ರಜಾಸತ್ತಾತ್ಮಕವಾಗಿ ನಡೆಸುವತ್ತ ಮನಸ್ಸು ಮಾಡಬೇಕಿದೆ. ಜನತಾ ಪರಿವಾದ ಅಧಿಕಾರ ವಿಕೇಂದ್ರಿಕರಣ ಸಿದ್ದಾಂತವನ್ನು ಪಕ್ಷದಲ್ಲಿಯೂ ಜಾರಿಗೆ ತಂದಲ್ಲಿ ಎರಡನೆ ಸಾಲಿನ ನಾಯಕರುಗಳಿಗೆ ಪಕ್ಷ ಕಟ್ಟುವ ಹುಮ್ಮಸ್ಸು ದೊರೆತಂತಾಗುತ್ತದೆ. ಇನ್ನು ಮುಂದಿನ ಚುನಾವಣೆಯ ಹೊತ್ತಿಗೆ ರಾಜ್ಯದಲ್ಲಿನ ವಿವಿಧ ಜನಪರ ಸಂಘಟನೆಗಳೊಂದಿಗೆ ಮೈತ್ರಿ ಮಾತುಕತೆ ನಡೆಸಿ ಆದಷ್ಟು ಬೇಗ ಒಂದು ಜನಪರ ವೇದಿಕೆಯನ್ನು ರಚಿಸಿಕೊಳ್ಳಬೇಕಿದೆ. ಕರ್ನಾಟಕದ ಮಟ್ಟಿಗೆ ಮೂರನೇ ಶಕ್ತಿಯಾಗಬಹುದಾದ ಒಂದು ಪರ್ಯಾಯ ರಾಜಕೀಯ ಶಕ್ತಿಯನ್ನು ಸೃಷ್ಠಿಸುವಷ್ಟು ಶಕ್ತಿ ಇವತ್ತಿಗೂ ದೇವೇಗೌಡರಿಗಿದ್ದು, ಈ ಕುರಿತು ಅವರು ರೈತ, ದಲಿತ, ಕನ್ನಡಪರ ಸಂಘಟನೆಗಳೊಂದಿಗೆ ಮಾತುಕತೆ ನಡೆಸಲು ಉದಾರ ಹೃದಯದಿಂದ ಸಿದ್ದವಾಗಬೇಕಿದೆ. ಕನ್ನಡದ ನೆಲ-ಜಲಗಳ ರಕ್ಷಣೆಗಾಗಿ ಎಂಬ ಘೋಷವಾಕ್ಯದೊಂದಿಗೆ ಕಟಿಬದ್ದರಾಗಿ ಹೋರಾಟ ಮಾಡಿದೆ ೨೦೧೮ರ ಹೊತ್ತಿಗೆ ಜನತಾದಳ ಬಲಿಷ್ಠವಾಗುವುದರಲ್ಲಿ ಸಂದೇಹವಿಲ್ಲ. ಈ ವಿಚಾರದಲ್ಲಿ ಶ್ರೀಕುಮಾರಸ್ವಾಮಿಯವರೂ ಸಹ ತಮ್ಮ ಬಾಜಪ ಪರವಾದ ಒಲವನ್ನು ತೊರೆದು ನಿಂತರೆ ಮಾತ್ರ ಇದು ಸಾದ್ಯವಾಗುತ್ತದೆ. ಇಲ್ಲದೆ ಇದ್ದಲ್ಲಿ ಜನತಾದಳ ಯಾವುದೇ ರಾಷ್ಟ್ರೀಯ ಪಕ್ಷಗಳೊಂದಿಗೆ ಮೈತ್ರಿಮಾಡಿಕೊಂಡರೂ, ಆ ಪಕ್ಷಗಳು ಜನತಾದಳವನ್ನು ಮುಗಿಸುವ ದಷ್ಠಿಯಿಂದಲೇ ರಾಜಕೀಯ ಮಾಡುತ್ತವೆಯೆಂಬುದನ್ನು ಮರೆಯಬಾರದು.

ಪ್ರಾದೇಶಿಕ ಪಕ್ಷಗಳನ್ನು ಇಲ್ಲವಾಗಿಸಲು ನಡೆಸುವ ಕುತಂತ್ರಗಳ ವಿಷಯಕ್ಕೆ ಬಂದರೆ ಕಾಂಗ್ರೆಸ್ ಮತ್ತು ಬಾಜಪ ಒಂದೇ ನಾಣ್ಯದ ಎರಡು ಮುಖಗಳೆಂಬುದನ್ನು ಕುಮಾರಸ್ವಾಮಿಯವರು ಮನಗಾಣಬೇಕು. ಕೇಂದ್ರದ ಜನವಿರೋಧಿ ನಡೆಗಳ ವಿರುದ್ದ ಮತ್ತು ರಾಜ್ಯಸರಕಾರದ ಜಡ ಸರಕಾರದ ವಿರುದ್ದ ನಡೆಸುವ ಹೋರಾಟಮಾತ್ರ ಜನತೆಯ ನಂಬಿಕೆ ಗಳಿಸುತ್ತದೆಯೆಂಬುದನ್ನು ಜನತಾದಳದ ನಾಯಕರುಗಳು ಅರ್ಥಮಾಡಿಕೊಳ್ಳಬೇಕು

ಇಂತಹದೊಂದು ಬೆಳವಣಿಗೆ ಬೇಕಾಗಿರುವುದು ಜನತಾದಳದ ಪುನಶ್ಚೇತನಕ್ಕೆ ಮಾತ್ರವಲ್ಲ. ಬದಲಿಗೆ ಕನ್ನಡನಾಡಿನ ಸಂಸ್ಕೃತಿಯನ್ನು ಕಾಪಾಡಿಕೊಂಡು ಕನ್ನಡಿಗರ ಹಿತಕಾಪಾಡಲು ಸಹ ಎಂಬುದನ್ನು ಅವರುಗಳು ಅರಿಯಬೇಕಾಗಿದೆ. ಈ ನಿಟ್ಟಿನಲ್ಲಿ ಮುಂದೆ ಜನತಾದಳ ತೆಗೆದುಕೊಳ್ಳುವ ನಿರ್ದಾರಗಳು ಕರ್ನಾಟಕರಾಜ್ಯದ ಜನತೆಯ ಬದುಕಿನ ಮೇಲೆ ದೀರ್ಘಕಾಲಿನ ಪ್ರಬಾವ ಬೀರುತ್ತವೆ. 

ಹೀಗಾಗಿ ಇವತ್ತು ದೇವೇಗೌಡರ, ಕುಮಾರಸ್ವಾಮಿಯವರ ಮುಂದಿನ ರಾಜಕೀಯ ತೀರ್ಮಾನಗಳನ್ನು ಕನ್ನಡದ ಜನತೆ ಅತೀವ ಕುತೂಹಲದಿಂದ ನೋಡುತ್ತಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ಬೇಸತ್ತಿರುವ ಮತದಾರರ ಸಂಖ್ಯೆ ಜನತಾದಳವನ್ನು ಅಧಿಕಾರಕ್ಕೆ ತರುವಷ್ಟಂತು ಇದೆ.ಇಷ್ಟು ವರ್ಷ ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಕರ್ನಾಟಕ ರಾಜ್ಯಕ್ಕೇನು ಮಾಡಿದರು ಎಂಬುದು ಮುಖ್ಯವಲ್ಲ. ಬದಲಿಗೆ ಮುಂದೇನು ಮಾಡಲಿದ್ದಾರೆ ಎಂಬುದು ಮಾತ್ರ ಇತಿಹಾಸವಾಗಲಿದೆ ಎನ್ನುವುದನ್ನು ಅವರು ಮರೆಯಬಾರದು.

1 comment:

  1. ಕರ್ನಾಟಕಕ್ಕೆ ಪ್ರಗತಿಪರ ನಿಲುವಿನ ಪ್ರಜಾಪ್ರಭುತ್ವವನ್ನು ತತ್ವಗಳನ್ನು ಎತ್ತಿ ಹಿಡಿಯುವ ಮೂರನೇ ಶಕ್ತಿಯ ಹಾಗೂ ಬಲಿಷ್ಠ ಪ್ರಾದೇಶಿಕ ಪಕ್ಷದ ಅಗತ್ಯ ಇರುವುದು ನಿಜ ಆದರೆ ದುರದೃಷ್ಟವಶಾತ್ ಜೆಡಿಎಸ್ ಪಕ್ಷವು ದೇವೇಗೌಡ ಹಾಗೂ ಅವರ ಮಕ್ಕಳ ಕುಟುಂಬ ರಾಜಕಾರಣದಿಂದಾಗಿ ಆ ಸ್ಥಾನವನ್ನು ತುಂಬಿಸುವಲ್ಲಿ ವಿಫಲವಾಗಿದೆ. ದೇವೇಗೌಡರು ಹಾಗೂ ಅವರ ಮಕ್ಕಳಿಗೆ ಅಧಿಕಾರವನ್ನು ಬೇರೆಯವರ ಜೊತೆ, ಪಕ್ಷವನ್ನು ಕಟ್ಟಿದ/ಕಟ್ಟಲು ಸಹಕರಿಸಿದ ಇತರ ನಾಯಕರ ಜೊತೆ ಹಂಚಿಕೊಳ್ಳುವ ಉದಾರತೆ ಇಲ್ಲ. ಇದರಿಂದಾಗಿ ಪಕ್ಷದ ಬೆಳವಣಿಗೆಯೇ ಅಸಾಧ್ಯವಾಗಿ ಹೋಗಿದೆ. ಹೀಗಾಗಿ ಪಕ್ಷವು ಒಕ್ಕಲಿಗರ ಪ್ರಾಬಲ್ಯ ಇರುವ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ. ಭವಿಷ್ಯದಲ್ಲಿಯೂ ಇದು ಹೀಗೇ ಮುಂದುವರಿಯುವ ಸಂಭವವೇ ಕಂಡುಬರುತ್ತಿದೆ ಏಕೆಂದರೆ ದೇವೇಗೌಡರ ಹಾಗೂ ಕುಟುಂಬದ ಹುಟ್ಟುಗುಣವೇ ಹೀಗೆ. ಕುಮಾರಸ್ವಾಮಿಗೆ ಪಕ್ಷವನ್ನು ಬೆಳೆಸುವ ಹಾಗೂ ಸ್ವತಂತ್ರವಾಗಿ ತತ್ವಾಧಾರಿತ ಪಕ್ಷವಾಗಿ ಜೆಡಿಎಸ್ ಬೆಳೆಸುವ ಇರಾದೆಯೇ ಇಲ್ಲ. ಅವರ ದೃಷ್ಟಿ ಬಿಜೆಪಿ ಜೊತೆ ಅಧಿಕಾರ ಹಂಚಿಕೊಳ್ಳುವ ಕಡೆಗೆ ಮಾತ್ರ ಇರುತ್ತದೆ. ಹೀಗಿದ್ದಾಗ ಮಾತ್ರ ಅಧಿಕಾರ ಕುಟುಂಬದ ಪರಿಧಿಯಲ್ಲಿ ಉಳಿಯುತ್ತದೆ ಎಂಬ ಸಂಕುಚಿತ ಮನೋಭಾವ ಕುಮಾರಸ್ವಾಮಿಯದ್ದು.

    ಬಿಜೆಪಿ ಕೇಂದ್ರದಲ್ಲಿ ಮೋದಿ ನೇತೃತ್ವದಲ್ಲಿ ಸ್ವಂತ ಬಲದಲ್ಲಿ ಅಧಿಕಾರದಲ್ಲಿರುವುದು ಇಡೀ ದೇಶದಲ್ಲಿ ಪ್ರತಿಗಾಮಿ ಶಕ್ತಿಗಳ ಬೆಳವಣಿಗೆಗೆ ಕಾರಣವಾಗುತ್ತಿದೆ. ಉಗ್ರ ಬಲಪಂಥೀಯ ಶಕ್ತಿಗಳು ದೇಶದಲ್ಲಿ ಬೆಳೆಯುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಂಟಕಪ್ರಾಯವಾಗಿ ಪರಿಣಮಿಸುವ ಸಂಭವ ಕಂಡುಬರುತ್ತಿದೆ. ಪಾಕಿಸ್ತಾನದ ಹಾದಿಯಲ್ಲಿ ಭಾರತವೂ ಧಾರ್ಮಿಕ ಸಶಸ್ತ್ರಧಾರೀ ಗುಂಪುಗಳನ್ನು ಬೆಳೆಯಲು ಬಿಟ್ಟರೆ ಪ್ರಜಾಪ್ರಭುತ್ವ ವ್ಯವಸ್ಥೆ ಪಾಕಿಸ್ತಾನದಂತೆ ದೇಶದಲ್ಲಿಯೂ ಅಪಾಯಕ್ಕೆ ಸಿಲುಕಬಹುದು. ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ದೇಶದ ಆಡಳಿತ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ಏನೂ ಆಗಲಿಲ್ಲ. ಇದು ಕಾಂಗ್ರೆಸ್ಸಿನ ಇನ್ನೊಂದು ಮುಖ ಎಂಬ ರೀತಿಯ ಆಡಳಿತ ಕಂಡುಬರುತ್ತಿದೆಯೇ ಹೊರತು ಸಂವೇದನಾಶೀಲ ಆಡಳಿತ ಕಂಡುಬರುತ್ತಿಲ್ಲ. ಮೂಲತಃ ಪಾಳೆಗಾರಿಕೆ ಮನೋಭಾವದ ಧಾರ್ಮಿಕ ಶಕ್ತಿಗಳು ಬಿಜೆಪಿಯಲ್ಲಿ ಇರುವುದು ಇದಕ್ಕೆ ಕಾರಣ. ಇಂಥ ಶಕ್ತಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯುವುದು ಇಷ್ಟವಿಲ್ಲ. ಇವರ ಒಲವು ಇರುವುದು ಧಾರ್ಮಿಕ ಮೂಲಭೂತವಾದೀ ಸರ್ವಾಧಿಕಾರ ವ್ಯವಸ್ಥೆಯನ್ನು ದೇಶದಲ್ಲಿ ಬೆಳೆಸುವುದು. ಇದು ಇವರಲ್ಲಿ ಹೆಜ್ಜೆ ಹೆಜ್ಜೆಗೂ ಕಂಡುಬರುತ್ತದೆ. ಹೀಗಾಗಿ ಆಡಳಿತ ವ್ಯವಸ್ಥೆಯಲ್ಲಿ ಕಾಂಗ್ರೆಸ್ ಬಂದರೂ ಬಿಜೆಪಿ ಬಂದರೂ ಯಾವುದೇ ಮಹತ್ತರ ಪ್ರಜಾಸತ್ತಾತ್ಮಕ ಬದಲಾವಣೆ ಆಗುವುದಿಲ್ಲ.

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆ ತರದೇ ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆ ಹೆಸರಿಗೆ ಮಾತ್ರ ಇರುತ್ತದೆ, ನಿಜವಾಗಿ ಅಸ್ತಿತ್ವದಲ್ಲಿ ಇರುವುದು ಅಧಿಕಾರಶಾಹೀ ಮನೋಭಾವ ಮಾತ್ರ. ಕಾಂಗ್ರೆಸ್ಸನ್ನು ದೂರುತ್ತಾ ಬಿಜೆಪಿ ಮಾಡುತ್ತಿರುವುದು ಅಧಿಕಾರಶಾಹೀ ಮನೋಭಾವದ ದರ್ಪದ ಬಲವರ್ಧನೆ. ಅನವಶ್ಯಕ ಕಾನೂನುಗಳನ್ನು ತೆಗೆದುಹಾಕುವ, ಜನಪರ ಕಾನೂನುಗಳನ್ನು ತರುವ ವಿಷಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷಗಳಿಗೂ ಯಾವ ಆಸಕ್ತಿಯೂ ಇಲ್ಲ. ಇದು ಹೆಜ್ಜೆಹೆಜ್ಜೆಗೂ ಸಾಬೀತಾಗುತ್ತಿದೆ.

    ನಮ್ಮ ದೇಶದಲ್ಲಿ ಪ್ರಗತಿಶೀಲ ಮನೋಭಾವದ ಜನರಲ್ಲಿ ಪ್ರತಿಗಾಮೀ ಮನೋಭಾವದ ಜನರಲ್ಲಿ ಇರುವ ಧಾರ್ಮಿಕ ಮೂಲಭೂತವಾದ ಬೆಳೆಸುವಲ್ಲಿ ಇರುವ ಸಮರ್ಪಣಾ ಮನೋಭಾವ ಹಾಗೂ ಒಗ್ಗಟ್ಟು ಕಂಡುಬರುತ್ತಿಲ್ಲ. ಹೀಗಾಗಿ ದೇಶದಲ್ಲಿ ಧಾರ್ಮಿಕ ಮೂಲಭೂತವಾದ ಮೇಲುಗೈ ಸಾಧಿಸುತ್ತಿದೆ. ಇದು ನಿಧಾನವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುಗಾರನ ಸ್ಥಾನದಲ್ಲಿರುವ ಮಾಧ್ಯಮಗಳು (ಪತ್ರಿಕೆಗಳು ಹಾಗೂ ಟಿವಿ ಮಾಧ್ಯಮ ಮುಖ್ಯವಾಗಿ) ಬಹುತೇಕ ಶಿಥಿಲವಾಗಿ ಪ್ರಜಾಪ್ರಭುತ್ವದ ಕಟ್ಟಡ ಬೀಳುವ ಹಂತಕ್ಕೆ ತಲುಪಿದೆ. ಇದನ್ನು ಉಳಿಸುವುದು ಹಾಗೂ ಬೆಳೆಸುವುದು ಹೇಗೆ ಎಂಬುದು ಯಾವ ಮಾಧ್ಯಮಕ್ಕೂ ಬೇಕಾಗಿಲ್ಲ.

    ReplyDelete