May 5, 2016

ಬೆಂಗಳೂರಿನ ಗಿಡಗಳ್ಳರು!

(ಸಾಂದರ್ಭಿಕ ಚಿತ್ರ)
ಡಾ. ಅಶೋಕ್. ಕೆ.ಆರ್.
ಬೆಂಗಳೂರಿನಲ್ಲಿ ಸರಗಳ್ಳರಿದ್ದಾರೆ, ಅವರ ಬಗ್ಗೆ ಎಚ್ಚರಿಕೆಯ ಪೋಸ್ಟರುಗಳು ನಗರದಾದ್ಯಂತ ತುಂಬಿಕೊಂಡಿವೆ. ಬೆಂಗಳೂರಿನಲ್ಲಿ ನೆಲಗಳ್ಳರಿದ್ದಾರೆ, ಅವರಲ್ಲಿ ಹೆಚ್ಚಿನವರು ಬಿಳಿ ಬಿಳಿ ಪೋಷಾಕು ಧರಿಸಿ ರಾಜಕೀಯದಲ್ಲೋ ಸಿನಿಮಾದಲ್ಲೋ ಬ್ಯುಸಿ ಬ್ಯುಸಿಯಾಗಿ ಸಮಾಜಸೇವೆ ಮಾಡಿಕೊಂಡಿದ್ದಾರೆ. ಇನ್ನು ಬೈಕು, ಪರ್ಸು, ಕಾರು ಕದಿಯುವವರ ಸಂಖೈ ಅವಸಾನ ಕಾಣದಿರುವಷ್ಟು ಬಲವಾಗಿಯೇ ಇದೆ. ಈ ಪಟ್ಟಿಗೆ ಹೊಸ ಸೇರ್ಪಡೆ ಗಿಡಗಳ್ಳರು!
ಮಂಡ್ಯದ ಮನೆ ಮುಂದಲಿದ್ದ ಮರದಿಂದ ತಂದಿದ್ದ ಹೊಂಗೆ ಬೀಜಗಳಲ್ಲೊಂದನ್ನು ಖಾಲಿಯಾದ ಒಂದು ಲೀಟರ್ ಹಾಲಿನ ಕವರ್ರಿಗೆ ಹಾಕಿದ್ದೆ. ಹೊಂಗೆ ಗಿಡ ಚಿಗುರಿ ಎರಡಡಿ ಎತ್ತರಕ್ಕೆ ಬೆಳೆದಿತ್ತು. ನಾವಿರುವ ಈ ಬಾಡಿಗೆ ಮನೆಯೆದುರಿಗೆ ಪಕ್ಕದಲ್ಲೆಲ್ಲ ಖಾಲಿ ಸೈಟುಗಳಿವೆ! (ಬೆಂಗಳೂರಿನಲ್ಲಿ ಖಾಲಿ ಸೈಟುಗಳಿರುವುದೇ ಅಚ್ಚರಿಯ ಸಂಗತಿ. ಹಂಗಾಗಿ !) ನಮ್ ಪಕ್ಕದ ಮನೆಯವರಿಗೂ ಗಿಡ ನೆಡುವ ಖಯಾಲಿ, ಖಾಲಿ ಸೈಟಿನ ಮುಂದೆ ನಾಕೈದು ಹೊಂಗೆ ಸಸಿ, ಒಂದೆರಡು ಹಳದಿ ಹೂವಿನ ಗಿಡಗಳನ್ನು ನೆಟ್ಟಿದ್ದಾರೆ. ನಮ್ ಮನೆ ಪಕ್ಕದ ಖಾಲಿ ಸೈಟಿನ ಮುಂದೆಯೂ ಎರಡು ಹೊಂಗೆ ಸಸಿ ಒಂದು ಹೂವಿನ ಗಿಡ ನೆಟ್ಟಿದ್ದರು. ಅವರೋ ನಾನೋ ಎರಡು ಮೂರು ದಿನಕ್ಕೊಮ್ಮೆ ನೀರುಣಿಸುತ್ತಿದ್ದೆವು. ಆ ಗಿಡಗಳಲ್ಲಿ ಬಹಳಷ್ಟು ಈಗ ಅರ್ಧ ಆಳೆತ್ತರಕ್ಕೆ ಬೆಳೆದಿವೆ. ಈ ಸಲದ ಬಿರುಬೇಸಿಗೆಯಲ್ಲೂ ಅವೇನು ನೀರು ಕೇಳುವುದಿಲ್ಲ. ವಾರದವರೆಗೆ ನೀರುಣಿಸದಿದ್ದರೂ ಒಣಗದೆ ಆರೋಗ್ಯವಂತವಾಗಿಯೇ ಉಳಿದಿವೆ. ಸಂಜೆ ಹೊತ್ತು ಒಂದಷ್ಟು ತಂಪಾದ ಗಾಳಿಗೆ ಕಾರಣವಾಗಿವೆ. ಆ ಗಿಡಗಳ ನಡುವೆ ಪುಟ್ಟ ಪುಟ್ಟ ಹೂವಿನ ಗಿಡಗಳನ್ನು ನೆಟ್ಟಿದ್ದೇನೆ. ಅವಕ್ಕೆ ಎರಡು ಅಬ್ಬಬ್ಬಾ ಎಂದರೆ ಮೂರು ದಿನಕ್ಕೊಮ್ಮೆ ನೀರು ಬೇಕು.

ಪ್ಲಾಸ್ಟಿಕ್ ಕವರ್ರುಗಳಲ್ಲಿ ಹೊಂಗೆ ಗಿಡ ಬೆಳೆದಿತ್ತಲ್ಲ. ಹತ್ತು ದಿನದ ಕೆಳಗೆ ಒಂದರ್ಧ ಘಂಟೆ ಸುರಿದ ಮೊದಲ ಮಳೆಯ ಮಾರನೇ ದಿನ ಪಕ್ಕದ ಖಾಲಿ ಸೈಟಿನ ಮುಂದೆ, ಇದ್ದ ಎರಡು ಹೊಂಗೆ ಗಿಡದಿಂದ ಸ್ವಲ್ಪ ದೂರದಲ್ಲಿ ಗುಂಡಿ ತೆಗೆದು, ಕವರ್ ಹರಿದು ಹಾಕಿ ಹೊಂಗೆ ಗಿಡವನ್ನು ನೆಟ್ಟು ಸುತ್ತಲೊಂದಷ್ಟು ಒಣ ಎಲೆಗಳನ್ನು ಹಾಕಿ ಒಂದು ಚೊಂಬು ನೀರು ಸುರಿದು ಬಂದೆ. ಗಿಡ ಚೂರು ದೊಡ್ಡದಿದ್ದುದರಿಂದ ಹೊಸ ನೆಲಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಲಿಲ್ಲ. ಎರಡು ಮೂರು ದಿನಕ್ಕೊಮ್ಮೆ ಅರ್ಧ ಚೊಂಬು ನೀರು ಹಾಕಿದರೂ ಸಾಕಿತ್ತು. ಗಿಡ ನೆಟ್ಟು ವಾರ ಕಳೆದಿತ್ತು, ಹೊಸ ಎಲೆಗಳು ಚಿಗುರಿದ್ದವು. ಅವತ್ತೊಂದು ದಿನ ಬೆಳಿಗ್ಗೆ ನೀರುಣಿಸಿ ಕಾಲೇಜಿಗೆ ಹೋಗಿ ಸಂಜೆ ಬಂದು ನೋಡಿದರೆ ಗಿಡವೇ ಇಲ್ಲ! ಒಣಗಿ ಬಿದ್ದು ಹೋಯಿತಾ? ಬೆಳಿಗ್ಗೆ ಚೆನ್ನಾಗೇ ಇತ್ತುಲ್ಲ, ಯಾರಾದರೂ ಕಿತ್ತು ಬಿಸಾಡಿದರಾ? ಉಹ್ಞೂ ಹತ್ತಿರದಲ್ಲೆಲ್ಲೂ ಕಿತ್ತ ಗಿಡವಿಲ್ಲ. ಆಗೀಗ ನಮ್ ಏರಿಯಾದ ಕ್ಷೇಮಸಮಾಚಾರವನ್ನು ವಿಚಾರಿಸುವ ಹಸುಗಳೇನಾದರೂ ತಿಂದುಬಿಟ್ಟವಾ? ಹೊಂಗೆಯನ್ನವು ತಿನ್ನುವುದಿಲ್ಲ. ಏನಾಯ್ತು ಅಂತ ಸ್ಪಾಟ್ ಇನ್ಸ್ ಪೆಕ್ಷನ್ ಮಾಡಿದರೆ ಗಿಡವಿದ್ದ ಸುತ್ತಲೂ ಮಣ್ಣು ಅಗೆಯಲಾಗಿತ್ತು, ಹೆಚ್ಚು ಕಡಿಮೆ ಅರ್ಧ ಅಡಿಯಷ್ಟು ಮಣ್ಣು ಕೆರೆದು ಇಡೀ ಹೊಂಗೆ ಗಿಡವನ್ನೇ ಕಿತ್ತುಕೊಂಡು ಹೋಗಿಬಿಟ್ಟಿದ್ದರು!

ನೆಟ್ಟ ಗಿಡವನ್ನು ಕಿತ್ತುಕೊಂಡದ್ದಕ್ಕೆ ಬೇಸರವಾಗಬೇಕಾ? ಕೋಪಗೊಳ್ಳಬೇಕಾ? ಕಿತ್ಕೊಂಡು ಹೋಗಿಬಿಟ್ಟಿದ್ದಾರೆ, ಬೇರಿಗೆ ಏಟು ಮಾಡದೆ ಕಿತ್ತುಕೊಂಡಿದ್ದು, ಇನ್ನೆಲ್ಲೋ ನೆಟ್ಟರೂ ಅದು ಮತ್ತೊಂದು ಹೊಸ ಭೂಮಿಗೆ ಹೊಂದಿಕೊಂಡು ಬೆಳೆದರಷ್ಟೇ ಸಾಕೆಂದು ಸುಮ್ಮನಾಗಬೇಕಾ? ಏನೋ ಈ ಬಿರುಬೇಸಿಗೇನಾದರೂ ಒಂದಷ್ಟು ಜನರಿಗೆ ಗಿಡ ಮರ ನೆಡಲು, ಕದ್ದಾದರೂ ನೆಡಲು ಪ್ರೇರೇಪಿಸುತ್ತಿದೆಯಲ್ಲ, ಅದೇ ಪುಣ್ಯ! 

ಅಂದಹಾಗೆ ಇನ್ನೈದು ವರುಷಕ್ಕೆ ಬೆಂಗಳೂರು ವಾಸಯೋಗ್ಯವಾಗಿರುವುದಿಲ್ಲವೆಂದು ಐ.ಐ.ಎಸ್.ಸಿಯ ಅಧ್ಯಯನವೊಂದು ಭವಿಷ್ಯ ನುಡಿದಿದೆ. ಬೆಂಗಳೂರು ಸಾವು ಕಂಡರೆ ಅದಕ್ಕೆ ನಮ್ಮ ಸರಕಾರಗಳ ಕೇಂದ್ರೀಕೃತ ಯೋಜನೆಗಳು ಎಷ್ಟು ಕಾರಣವೋ ನಮ್ಮಂಥ ವಲಸಿಗರೂ ಅಷ್ಟೇ ಕಾರಣ. ಪಾಪ ಪರಿಹಾರ್ಥವಾಗಿ ವಲಸಿಗರು ಒಂದೊಂದು ಗಿಡ ನೆಟ್ಟರೂ ಸಾಕು ಹತ್ತಿರತ್ತಿರ ಕೋಟಿ ಲೆಕ್ಕದ ಗಿಡಗಳು ಬೆಂಗಳೂರಿನಲ್ಲಿ ನಳನಳಿಸುತ್ತವೆ. ಕದ್ದಾದರೂ ಗಿಡ ನೆಡಿ!

No comments:

Post a Comment