May 12, 2016

ಪ್ರೇಮ, ಭಕ್ತಿ ಮತ್ತು ದ್ರೋಹ

ಡಾ. ಅಶೋಕ್. ಕೆ.ಆರ್.
ದೇಶಪ್ರೇಮವೆಂಬುದು ಕುರುಡು ಭಕ್ತಿಯಾಗಿ, ಕುರುಡುತನದ ವಿರುದ್ಧ ಹೊರಡುವ ದನಿಗಳೆಲ್ಲವೂ ದೇಶದ್ರೋಹದಂತೆ ಚಿತ್ರಿಸಲಾಗುತ್ತಿರುವ ದಿನಗಳಿವು.

ದೇಶಪ್ರೇಮ

ಚಿಕ್ಕಪುಟ್ಟ ಸಾಮ್ರಾಜ್ಯ, ಪ್ರಾಂತ್ಯ, ದೇಶಗಳ ಹೆಸರಿನಲ್ಲಿ ಹರಿದು ಹಂಚಿಹೋಗಿದ್ದ ಛಪ್ಪನ್ನಾರು ಪ್ರದೇಶಗಳನ್ನು ವ್ಯಾಪಾರ, ವಹಿವಾಟು ಮತ್ತು ಲೂಟಿಯ ಕಾರಣಕ್ಕೆ ಒಂದಾಗಿಸಿದ್ದು ಬ್ರಿಟೀಷರ ವಸಾಹತು ಪ್ರಜ್ಞೆ. ದೇಶಪ್ರೇಮ ಮೂಡಿಸಿದ್ದಕ್ಕೆ ಭಾರತೀಯರು ಬ್ರಿಟೀಷರಿಗೆ ಕೃತಜ್ಞರಾಗಿರಬೇಕು. ಇತಿಹಾಸದ ಹಾದಿಯಲ್ಲಿ ತಮ್ಮ ತಮ್ಮ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು, ಬೆಳೆಸಿಕೊಳ್ಳಲು, ಬ್ರಿಟೀಷರಿಂದ ಮತ್ತೆ ವಾಪಸ್ಸು ಪಡೆದುಕೊಳ್ಳಲು ಪ್ರಯತ್ನಿಸಿದ ರಾಜರನ್ನು ಇವತ್ತಿನ ವರ್ತಮಾನದಲ್ಲಿ ನಮ್ಮ ನಮ್ಮ ಸೈದ್ಧಾಂತಿಕ – ರಾಜಕೀಯ ಅನುಕೂಲತೆಗಳಿಗನುಗುಣವಾಗಿ ದೇಶಪ್ರೇಮಿ – ದೇಶದ್ರೋಹಿಯೆಂದು ಕರೆದುಬಿಡುವುದರಲ್ಲಿ ನಾವು ನಿಸ್ಸೀಮರು. ಟಿಪ್ಪು, ಶಿವಾಜಿಯನ್ನು ದೇಶಪ್ರೇಮಿಗಳೆಂದು ಹೊಗಳಲು ಇತಿಹಾಸ ಎಷ್ಟು ಸಾಮಗ್ರಿ ಒದಗಿಸುತ್ತದೆಯೋ ಅಷ್ಟೇ ಸಾಮಗ್ರಿಗಳನ್ನು ಅವರನ್ನು ದೇಶದ್ರೋಹಿಗಳೆಂದು ಟೀಕಿಸಲೂ ಒದಗಿಸುತ್ತದೆ! ಇವರಿಬ್ಬರು ಮತ್ತು ಇವರ ರೀತಿಯ ಇನ್ನಿತರರು ತಮ್ಮ ತಮ್ಮ ಸಾಮ್ರಾಜ್ಯಪ್ರೇಮಿಗಳಷ್ಟೇ ಎಂದು ಒಪ್ಪಿಕೊಳ್ಳುವುದು ಇತಿಹಾಸದ ಸತ್ಯಕ್ಕೆ ಹತ್ತಿರವಾದುದು. ಬ್ರಿಟೀಷರ ಸಾಮ್ರಾಜ್ಯದ ವಿಸ್ತರಣೆಯೊಂದಿಗೆ ರಾಜರ ನೇರ ಆಳ್ವಿಕೆಯ ಪ್ರದೇಶಗಳ ಸಂಖೈ ಕುಸಿಯಲಾರಂಭಿಸಿತು. ಬ್ರಿಟೀಷರ ಮಾತುಗಳಿಗೆ ತಲೆಯಾಡಿಸುತ್ತ ಬ್ರಿಟೀಷರ ಪರೋಕ್ಷ ಆಳ್ವಿಕೆಯನ್ನು ಜಾರಿಗೊಳಿಸಿದ್ದ ರಾಜರು ಒಂದೆಡೆಯಿದ್ದರೆ ಮತ್ತೊಂದೆಡೆ ನೇರವಾಗಿ ಬ್ರಿಟೀಷರ ಆಳ್ವಿಕೆಯಿದ್ದ ಪ್ರದೇಶಗಳಿದ್ದವು. ಅಲ್ಲೊಂದು ಇಲ್ಲೊಂದಿದ್ದ ಸ್ವತಂತ್ರ್ಯ ರಾಜ್ಯಗಳು ಕೂಡ ಬ್ರಿಟೀಷರಿಗೆ ಕಪ್ಪ ಕಾಣಿಕೆ ಕೊಡದೆ ಇರಲಿಲ್ಲ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಭಾರತದ ತುಂಬೆಲ್ಲ ವಸಾಹತುಶಾಹಿ ಹರಡಿಕೊಂಡದ್ದು ತಮ್ಮ ತಮ್ಮ ಸಾಮ್ರಾಜ್ಯ ರಕ್ಷಿಸಲು ಹೋರಾಡುತ್ತಿದ್ದವರನ್ನು ಭಾರತವೆಂಬ ದೇಶಕ್ಕಾಗಿ ಹೋರಾಡುವಂತೆ ಮಾಡಿತು. ಸಹಜವಾಗಿ ಹೋರಾಟ ನಡೆಸಿದ್ದು ಬ್ರಿಟೀಷರ ವಿರುದ್ಧ. ಬ್ರಿಟೀಷರ ವಿರುದ್ಧ ಹೋರಾಡಿದವರನ್ನು ದೇಶಪ್ರೇಮಿಗಳೆಂದೇ ಗುರುತಿಸಲಾಯಿತು. ಸ್ವಾತಂತ್ರ್ಯಪೂರ್ವದ ‘ದೇಶಪ್ರೇಮಿ’ ಎದುರಿಗೊಬ್ಬ ಗುರುತಿಸಬಲ್ಲ ವೈರಿಯಿದ್ದ. ಬ್ರಿಟೀಷರ ವಿರುದ್ಧ ಸಶಸ್ತ್ರ ಕ್ರಾಂತಿಯನ್ನು ಪ್ರಯತ್ನಿಸಿದವರು, ಶಾಂತಿ ಮಂತ್ರದಿಂದ ಬ್ರಿಟೀಷರ ಎದುರು ನಿಂತು ಅವರ ಬೂಟು – ಲಾಠಿಯ ಏಟಿಗೆ ತಲೆಕೆಡಿಸಿಕೊಳ್ಳದೆ ಚಳುವಳಿಗಳಲ್ಲಿ ತೊಡಗಿಕೊಂಡವರು ದೇಶಪ್ರೇಮಿಗಳೆನ್ನಿಸಿಕೊಂಡರು. ಸ್ವಾತಂತ್ರ್ಯಪೂರ್ವದ ಈ ‘ದೇಶಪ್ರೇಮಿ’ ಗುರುತು ಸ್ವಾತಂತ್ರ್ಯೋತ್ತರದಲ್ಲಿ ಹೇಗೆ ಮುಂದುವರೆಯಿತು? 

ಸ್ವತಂತ್ರದ ಸಂದರ್ಭದಲ್ಲಿ ದೇಶ ವಿಭಜನೆಯಾಗದೆ ಉಳಿದುಬಿಟ್ಟಿದ್ದರೆ ‘ದೇಶಪ್ರೇಮಿ’ ಗುರುತನ್ನು ಮುಂದುವರೆಸುವುದು ಕಷ್ಟಕರವಾಗಿಬಿಡುತ್ತಿತ್ತೇನೋ! ಭಾರತ ಮತ್ತು ಪಾಕಿಸ್ತಾನದ ಸೃಷ್ಟಿಯಾದದ್ದು, ಸೃಷ್ಟಿಯ ಸಂದರ್ಭದಲ್ಲಿ ನಡೆದ ಹಿಂಸೆ ಎರಡೂ ದೇಶಗಳಲ್ಲಿ ‘ದೇಶಪ್ರೇಮಿ’ಯೆಂದರೆ ಯಾರು ಎನ್ನುವುದನ್ನು ಅತಿ ಸುಲಭವಾಗಿ ವ್ಯಾಖ್ಯಾನಿಸಲು ಸಹಾಯ ಮಾಡಿತು. ಪಾಕಿಸ್ತಾನವನ್ನು ದ್ವೇಷಿಸಿದರೆ ಭಾರತದಲ್ಲಿ ‘ದೇಶಪ್ರೇಮಿ’, ಭಾರತವನ್ನು ದ್ವೇಷಿಸಿದರೆ ಪಾಕಿಸ್ತಾನದಲ್ಲಿ ‘ದೇಶಪ್ರೇಮಿ’. ಮತ್ತೇನು ಮಾಡುವ ಅವಶ್ಯಕತೆಯೂ ಇಲ್ಲ.

ವೈರಿಗಳನ್ನು ನೇರವಾಗಿ ಎದುರಿಸುತ್ತ ದೇಶ ರಕ್ಷಿಸುವ ಹೊಣೆ, ವೈರಿಗಳು ನುಸುಳದಂತೆ ತಡೆಯುವ ಹೊಣೆ ನಮ್ಮ ಸೈನ್ಯದ ಮೇಲಿದೆ. ವೈರಿಗಳ ಚಲನವಲನವನ್ನು ಕಣ್ಣಾರೆ ಕಂಡು ಅವರ ನುಸುಳುವಿಕೆಯನ್ನು ತಡೆಯಲೆತ್ನಿಸುವ ಸೈನಿಕರಲ್ಲಿ ದೇಶದ ಬಗೆಗಿನ ಪ್ರೀತಿ ಹೆಚ್ಚಿರುತ್ತದೆ, ಅನುಮಾನ ಬೇಡ. ಯುದ್ಧ ಭೂಮಿಯ ಸಂಕಷ್ಟಗಳನ್ನನುಭವಿಸಿದವರಿಗೆ ನಾಡಿನೊಳಗೆ ತಣ್ಣಗೆ ಕುಳಿತು ನೆರೆದೇಶದ ಮೇಲೆ ಉರಿದುಬೀಳುವವರಿಗಿಂತ ಕಡಿಮೆ ದ್ವೇಷವಿರುತ್ತದಾ? ಇರಲಿ, ನಮ್ಮ ಸೈನಿಕರು ಸತ್ತಾಗ ಅವರನ್ನು ‘ಅಪ್ರತಿಮ ದೇಶಪ್ರೇಮಿ’, ‘ವೀರಯೋಧ’ ಎಂಬ ವಿಶೇಷಣಗಳಿಂದೆಲ್ಲ ಹೊಗಳುವ ಮೂಲಕ ನಮ್ಮಲ್ಲೂ ದೇಶಪ್ರೇಮವಿದೆ ಎಂದು ತೋರಿಸಿಕೊಳ್ಳುವ ಭರದಲ್ಲಿ ಸೈನ್ಯ ಸೇರುವವರೆಲ್ಲರೂ ‘ಚಿಮ್ಮುವ ದೇಶಪ್ರೇಮ’ದ ಕಾರಣಕ್ಕೆ ಸೇರಿಲ್ಲ, ಬದಲಿಗೆ ಹೊಟ್ಟೆಪಾಡಿಗೆ ಸೇರುತ್ತಿದ್ದಾರೆ ಎನ್ನುವ ಕಹಿ ಸತ್ಯವನ್ನು ಮರೆತುಬಿಡುತ್ತೇವೆ, ಉದ್ದೇಶಪೂರ್ವಕವಾಗಿ. ಯುದ್ಧದ ಮುಂಚೂಣಿಯಲ್ಲಿ ನಿಲ್ಲುವ, ಗುಂಡಿಗೆ ಮೊದಲು ಎದೆಯೊಡ್ಡುವ ಸೈನಿಕರಲ್ಲಿ ಬಹುತೇಕರ್ಯಾಕೆ ಪುಟ್ಟ ಹಳ್ಳಿಯ ಚಿಕ್ಕ ಮನೆಯ ಆರ್ಥಿಕವಾಗಿ ಹಿಂದುಳಿದ ಕುಟುಂಬದವರೇ ಆಗಿರುತ್ತಾರೆ? ಸೈನ್ಯ ಸೇರುವ ಯುವಕರ ಕುರಿತೊಂದು ಆರ್ಥಿಕ ಅಧ್ಯಯನ, ಜಾತಿ ಅಧ್ಯಯನ ನಡೆಸುವುದು ಉಚಿತವಲ್ಲವೇ? ಸೈನಿಕರ ರಕ್ಷಣೆಯಲ್ಲಿ ಗಡಿಯೊಳಗಿರುವ ಕೋಟ್ಯಾಂತರ ಜನರು ನಿಯತ್ತಿನಿಂದ ಬದುಕುವುದು ಕೂಡ ದೇಶಪ್ರೇಮವೇ ಅಲ್ಲವೇ? ಸೈನಿಕರ ಕುರಿತು, ನಮ್ಮ ಸೈನ್ಯದ ಕುರಿತು ಒಂದಿಷ್ಟು ಪ್ರಶ್ನೆಗಳು ಕೇಳಿಬಿಟ್ಟರೂ ‘ದೇಶಭಕ್ತಿ’ಯಿಲ್ಲದವರಂತೆ ಕಾಣಿಸಿಬಿಡುತ್ತೇನೋ?

ದೇಶಭಕ್ತಿ

ಅದ್ಯಾವುದೇ ಧರ್ಮವಿರಲಿ, ಗುರುತಿಗೊಂದು ಚಿನ್ಹೆ ಬೇಕು, ಪೂಜಿಸಲೊಂದು ಪ್ರತಿಮೆ ಬೇಕು. ಹಿಂದೂ ಧರ್ಮದಲ್ಲಿ ಪೂಜೆಗೆಂದೇ ಮುಕ್ಕೋಟಿ ದೇವತೆಗಳ ಮೂರುತಿಗಳಿದ್ದರೆ, ಪ್ರತಿಮೆಗಳ ಪೂಜೆಯನ್ನು ವಿರೋಧಿಸಿದ ಇಸ್ಲಾಂ ಧರ್ಮಕ್ಕೆ ಮಸೀದಿ ಬೇಕು, ಕ್ರೈಸ್ತ ಧರ್ಮಕ್ಕೆ ಚರ್ಚು ಬೇಕು, ಬೌದ್ಧರಿಗೆ ಬುದ್ಧ ಬೇಕು! ಧರ್ಮ ಸೃಷ್ಟಿಸಿದ ಮನುಷ್ಯನೇ ದೇಶವನ್ನು ಸೃಷ್ಟಿಸಿರುವಾಗ ‘ದೇಶಪ್ರೇಮ’ವನ್ನು ವ್ಯಕ್ತಪಡಿಸಲು ಆ ಪ್ರೇಮ ‘ಭಕ್ತಿ’ ಭಾವದಲ್ಲಿ ಹೊರಹೊಮ್ಮಲು ಒಂದಷ್ಟು ಗುರುತು ಚಿನ್ಹೆಗಳ ಅವಶ್ಯಕತೆ ಬಿತ್ತು. ದೇಶದ್ದೊಂದು ಸುಂದರ ಮ್ಯಾಪು, ಅಭಿಮಾನ ಸೂಚಿಸಲೊಂದು ಧ್ವಜ, ಭಕ್ತಿ ತೋರ್ಪಡಿಸಲೊಂದು ರಾಷ್ಟ್ರಗೀತೆ, ಇದರ ಜೊತೆ ಜೊತೆಗೆ ನಮ್ಮಲ್ಲಿ ರಾಷ್ಟ್ರೀಯ ಪಕ್ಷಿ, ಪ್ರಾಣಿ, ಆಟಗಳಿವೆ. 

ನೆರೆದೇಶವೊಂದು ಭೂಪಟವನ್ನು ಪ್ರಕಟಿಸುವಾಗ ಒಂದು ದೇಶದ ಭಾಗವನ್ನು ಪಕ್ಕದ ರಾಷ್ಟ್ರಗಳ ಭಾಗದಂತೆ ತೋರಿಸಿದರೆ ವಿದೇಶಿ ನೀತಿಗಳಲ್ಲಿ ಏರುಪೇರಾಗುತ್ತದೆ. ಅರುಣಾಚಲ ಪ್ರದೇಶ, ಸಿಕ್ಕಿಂ ರಾಜ್ಯಗಳನ್ನು ತನ್ನ ಭಾಗವನ್ನಾಗಿ ತೋರಿಸುವ ಕುತಂತ್ರಿ ಬುದ್ಧಿಯನ್ನು ಚೀನಾ ಪದೇ ಪದೇ ತೋರಿಸುತ್ತದೆ, ಅದನ್ನು ವಿರೋಧಿಸಬೇಕಿರುವುದು ಕೇಂದ್ರ ಸರಕಾರದ ಕರ್ತವ್ಯವೇ. ಕೆಲವೊಮ್ಮೆ ದೇಶದೊಳಗೇ ಪ್ರಕಟವಾಗುವ ಭೂಪಟಗಳಲ್ಲೂ ಅಲ್ಲೊಂದು ಇಲ್ಲೊಂದು ತಪ್ಪಾಗಿ ಬಿಡುತ್ತದೆ, ಚೂರು ಸುದ್ದಿಯಾಗಿ ಭೂಪಟ ಸರಿಯಾಗುವುದರೊಂದಿಗೆ ವಿವಾದ ಅಂತ್ಯವಾಗುತ್ತದೆ. ‘ಭಕ್ತಿ’ಯ ವಿಚಾರಕ್ಕೆ ಬಂದರೆ ಭೂಪಟಕ್ಕಿರುವ ಬೆಲೆ ಹೆಚ್ಚೇನೂ ಅಲ್ಲ.

ಊರಿಗೆ ಊರೇ ಹೊತ್ತಿ ಉರಿಯುವಂತೆ ಮಾಡುವ ಶಕ್ತಿಯಿರುವುದು ನಮ್ಮ ದೇಶದ ಮೂರು ಬಣ್ಣಗಳ ಧ್ವಜಕ್ಕೆ. ಒಂದು ಊರಿನ ನೆಮ್ಮದಿ ಕದಡಬೇಕೆಂದಿದ್ದರೆ ಸುಮ್ಮನೆ ಒಂದು ಬಾವುಟವನ್ನು ರಾತ್ರಿ ಹೊತ್ತು ನೆಲದ ಮೇಲೆ ಬಿಸಾಡಿ ಬಿಟ್ಟರಾಯಿತು! ಸಾಬರ ಕೇರಿಯಲ್ಲಿ ಬಿಸಾಡಿದರೆ ಬೇಗ ನೆಮ್ಮದಿ ಹಾಳಾಗುತ್ತದೆ, ವರ್ತಮಾನದ ವಿಪ್ಲವಗಳನ್ನು ಗಮನಿಸಿದರೆ ದಲಿತರ ಬೀದಿಯಲ್ಲಿ ಬಿಸಾಡಿದರೂ ಶೀಘ್ರ ಫಲಿತಾಂಶ ಸಿಗಬಹುದು. ದೇಶದ ಧ್ವಜಕ್ಕೆ ಹೆಚ್ಚು ಬೇಡಿಕೆ ಬರುವುದು ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವದ ದಿನಗಳಂದು. ಅದು ಬಿಟ್ಟರೆ ದೇಶದ ಧ್ವಜ ಹೆಚ್ಚೆಚ್ಚು ಕಾಣುವುದು ಕ್ರಿಕೇಟು ಪಂದ್ಯಗಳಲ್ಲಿ! ಪ್ಲಾಸ್ಟಿಕ್ಕು ಬಾವುಟಗಳನ್ನು ಗಾಡಿಗೆ ಸಿಕ್ಕಿಸಿ ಮಾರನೇ ದಿನ ಕಸದ ಬುಟ್ಟಿಗೆ ಎಸೆಯುವುದನ್ನು ಮರೆತುಬಿಟ್ಟರೆ ಬಾವುಟದೆಡೆಗಿನ ನಮ್ಮ ಭಕ್ತಿ ಅನನ್ಯವಾದುದು. ಕೆಲವೊಮ್ಮೆ ‘ದೇಶಪ್ರೇಮ’ವನ್ನು ವ್ಯಕ್ತಪಡಿಸಲು ಪಕ್ಕದ ಪಾಕಿಸ್ತಾನದ ಧ್ವಜ ಹಾರಿಸುವ ಭೂಪರೂ ಇದ್ದಾರೆ. ಪಾಕಿಸ್ತಾನದ ಬಾವುಟ ಹಾರಿಸುವ ಕಂತ್ರಿ ಸಾಬರೂ ಇದ್ದಾರೆ, ಸಾಬರ ಕೇರಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿ ಕೋಮುಗಲಭೆ ಹಬ್ಬಿಸುವ ಕುತಂತ್ರಿ ಹಿಂದೂಗಳು ಇದ್ದಾರೆ! 

ಇನ್ನು ರವೀಂದ್ರನಾಥ ಠಾಗೂರರು ಬರೆದಿರುವ ‘ಜನ ಗಣ ಮನ’ ಕೂಡ ಭಕ್ತಿ ವ್ಯಕ್ತಪಡಿಸಲಿರುವ ಮತ್ತೊಂದು ಗುರುತು. ಈ ಗೀತೆಯನ್ನು ಅವರು ಬರೆದಿದ್ದು ಬ್ರಿಟೀಷ್ ಯುವರಾಜನನ್ನು ಸ್ವಾಗತಿಸಲು ಎಂದು ಕೆಲವೊಮ್ಮೆ ಚರ್ಚೆಯಾಗುತ್ತದೆ. ಇರಲಿ. ಯಾವ ವ್ಯಕ್ತಿ ಬರೆದ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿಸಿಕೊಂಡು ಅದರ ಬಗ್ಗೆ ಭಾವನಾತ್ಮಕವಾಗಿ ನಂಟು ಬೆಳೆಸಿಕೊಂಡಿದ್ದೇವೆಯೋ ಅದೇ ವ್ಯಕ್ತಿ ಇನ್ನೊಂದು ಪುಸ್ತಕ ಬರೆದಿದ್ದಾರೆ, ‘ರಾಷ್ಟ್ರೀಯತೆ’ ಎಂಬ ಹೆಸರಿನ ಆ ಪುಸ್ತಕ ದೇಶಪ್ರೇಮ ಮತ್ತು ದೇಶಭಕ್ತಿ ಹೇಗೆ ಮಾನವೀಯತೆಯ ಅವನತಿಗೆ ಕಾರಣವಾಗುತ್ತದೆ ಎಂದು ಎಳೆಎಳೆಯಾಗಿ ಹೇಳುತ್ತದೆ. ‘ರಾಷ್ಟ್ರವೆಂಬ ಕಲ್ಪನೆ, ಮನುಷ್ಯ ಕಂಡುಹಿಡಿದ ಅತ್ಯಂತ ಶಕ್ತಿಯುತ ಅರವಳಿಕೆ’ ಎನ್ನುವ ರವೀಂದ್ರನಾಥರ ಗೀತೆಯ ಕಾರಣದಿಂದಲೂ ನಮ್ಮಲ್ಲಿ ಗಲಭೆಗಳಾಗಿಬಿಡಬಹುದು! 

ಜೀವವಿಲ್ಲದ ಭೂಪಟ, ಧ್ವಜ ಮತ್ತು ರಾಷ್ಟ್ರಗೀತೆಯ ಕುರಿತಾಗಿ ಇರುವ ಭಕ್ತಿಭಾವ, ಅದನ್ಯಾರಾದರೂ ಉದ್ದೇಶಪೂರ್ವಕವಾಗೋ ಅಚಾತುರ್ಯದಿಂದಲೋ ಅವಮಾನಗೊಳಿಸಿದರೆ ಕ್ರುದ್ಧರಾಗಿಬಿಡುವ ನಾವು ರಾಷ್ಟ್ರದ ಜೊತೆಗೆ ಗುರುತಾಗಿರುವ ಜೀವ ಮತ್ತು ಜೀವಂತಿಕೆ ಎರಡೂ ಇರುವ ರಾಷ್ಟ್ರ ಪಕ್ಷಿ, ಪ್ರಾಣಿ ಮತ್ತು ಕ್ರೀಡೆಯ ವಿಚಾರಕ್ಕೆ ಬಂದಾಗ ಮಾತ್ರ ಶಾಂತಿ ಧೂತರಾಗಿ ಬಿಡುತ್ತೇವೆ! ರಾಷ್ಟ್ರಪಕ್ಷಿ ನವಿಲನ್ನು ಕೊಂದವರ್ಯಾರನ್ನೂ ದೇಶಭಕ್ತಿಯ ಕುರಿತು ಪ್ರಶ್ನಿಸಲಾಗುವುದಿಲ್ಲ; ಇನ್ನು ರಾಷ್ಟ್ರಪ್ರಾಣಿ ಹುಲಿಯನ್ನು ‘ಸಂರಕ್ಷಿಸಲು’ ಕೋಟಿ ಕೋಟಿ ಹಣ ಖರ್ಚಾಗಿದೆಯಾದರೂ ಹುಲಿಯ ಸಂಖೈಯಲ್ಲಿ ಗಮನಾರ್ಹ ಎನ್ನಿಸುವಂತಹ ಹೆಚ್ಚಳವೇನಾಗಿಲ್ಲ. ಅವುಗಳ ಆವಾಸ ಸ್ಥಾನವನ್ನೆಲ್ಲ ಕಬಳಿಸಿ ‘ಊರಿಗುಲಿ ಬಂತು, ಊರಿಗುಲಿ ಬಂತು’ ಎಂದು ಕೂಗೆಬ್ಬಿಸುವುದಾಗಲೀ ಹುಲಿಗಳನ್ನು ಕೊಂದಾಕುವುದಾಗಲೀ ದೇಶಭಕ್ತಿ ಇಲ್ಲದ ಕುರುಹೇನಲ್ಲ. ಇನ್ನು ರಾಷ್ಟ್ರೀಯ ಕ್ರೀಡೆ ಹಾಕಿಯ ಬಗ್ಗೆ, ಬಿಡಿ ಅದರ ಬಗ್ಗೆ ಮಾತನಾಡಿ ಏನುಪಯೋಗ. ಒಟ್ಟಿನಲ್ಲಿ ನಮ್ಮ ದೇಶಭಕ್ತಿಯೆನ್ನುವುದು ಜೀವಂತಿಕೆಯಿದ್ದರೂ ಜೀವವಿಲ್ಲದ ವಸ್ತುಗಳ ಕಡೆಗೇ ಹೊರತು, ಜೀವ – ಜೀವಂತಿಕೆ ಎರಡೂ ಇರುವ ಪ್ರಾಣಿ ಪಕ್ಷಿಗಳ ಕಡೆಗಲ್ಲ. 

ಮೂರ್ತಿ ಪೂಜೆಯನ್ನು ಜೀವನದ ಭಾಗವಾಗಿ ಮಾಡಿಕೊಂಡಿರುವ ಭಾರತದಲ್ಲಿ ಭಾರತ ದೇಶವನ್ನು ಭಾರತ ಮಾತೆಗೆ ಹೋಲಿಸಲಾಗಿದೆ. ಭಕ್ತಿ ಭಾವವನ್ನು ಹೆಚ್ಚಿಸುವುದರ ಜೊತೆಗೆ ಅನೇಕ ಗಲಭೆಗಳ ಸೃಷ್ಟಿಗೂ ಈ ಭಾರತ ಮಾತೆ ಕಾರಣಳಾಗಿದ್ದಾಳೆ. ಸ್ವಾತಂತ್ರ್ಯಪೂರ್ವದಲ್ಲಿ ದೇಶವನ್ನು ಲೂಟಿಮಾಡುತ್ತಿದ್ದ ಶತ್ರುಗಳಾದ ಬ್ರಿಟೀಷರ ಎದೆಯಲ್ಲಿ ಭಯ ಮೂಡಿಸುವುದಕ್ಕಿದ್ದ ‘ಭಾರತ ಮಾತಾಕೀ ಜೈ’ ಎಂಬ ಘೋಷಣೆ ಇತ್ತೀಚಿನ ದಿನಗಳಲ್ಲಿ ತಮಗಾಗದವರನ್ನು, ತಮ್ಮ ಸಿದ್ಧಾಂತ ಒಪ್ಪದವರನ್ನು ಹೊಡೆಯುವಾಗ ‘ದೇಶಭಕ್ತಿ’ಯ ಪರದೆಯ ಹಿಂದೆ ರಕ್ಷಿಸಿಕೊಳ್ಳಬಯಸುವ ಅರುಚಾಟವಾಗಿಬಿಡುತ್ತಿದೆ. ಹೊಡೆಸಿಕೊಳ್ಳುವವರು ತಪ್ಪು ಮಾಡಿರಲಿ ಮಾಡದಿರಲಿ ‘ದೇಶದ್ರೋಹಿ’ಗಳೆಂಬಂತೆ ಚಿತ್ರಿತವಾಗುತ್ತಿದ್ದಾರೆ.

ದೇಶದ್ರೋಹಿ

ನಿಜಕ್ಕೂ ನಮ್ಮಲ್ಲಿ ದೇಶದ್ರೋಹಿಯಾಗುವುದು ಕಷ್ಟದ ಸಂಗತಿಯಾಗಿತ್ತು. ಐತಿಹಾಸಿಕ ಕಾರಣಗಳಿಂದಾಗಿ ಕಾಶ್ಮೀರಿಗಳು, ಈಶಾನ್ಯ ರಾಜ್ಯದವರು ಪ್ರತ್ಯೇಕ ದೇಶದ ಬೇಡಿಕೆಯಿಟ್ಟರೆ ಅದೇನು ಭಾರತ ದೇಶಕ್ಕೆಸಗಿದ ದ್ರೋಹದಂತೆ ಕಾಣುತ್ತಿರಲಿಲ್ಲ. ಕೊಡಗಿನವರು, ಉತ್ತರ ಕರ್ನಾಟಕದವರು ಪ್ರತ್ಯೇಕ ರಾಜ್ಯದ ಬೇಡಿಕೆಯಿಡುವುದು ರಾಜ್ಯದ್ರೋಹವಲ್ಲ. ಪ್ರಜಾಪ್ರಭುತ್ವವನ್ನಪ್ಪಿಕೊಂಡ ದೇಶದಲ್ಲಿ ಅದು ಅವರ ಹಕ್ಕಿನ ಕುರಿತಾದ ಬೇಡಿಕೆಯಾಗಿತ್ತು. ಪ್ರತ್ಯೇಕತೆಯ ಬೇಡಿಕೆ ಹಿಂಸೆಗೆ ತಿರುಗಿದಾಗ ಸರಕಾರ ಪ್ರತಿಹಿಂಸೆ ನಡೆಸಿದೆ, ಕಾಶ್ಮೀರದಲ್ಲಿ ಅನೇಕ ಅಮಾಯಕರ ಬಲಿಯಾಗಿದೆ, ಸೈನಿಕರ ಹತ್ಯೆಯಾಗಿದೆ, ಸೈನಿಕರ ಗುಂಡೇಟಿಗೆ ಮನುಷ್ಯತ್ವ ಮರೆತ ಭಯೋತ್ಪಾದಕರು ಹತರಾಗಿದ್ದಾರೆ. ಮಣಿಪುರದಲ್ಲಿ ಸೈನಿಕರ ವಿರುದ್ಧ ಮಹಿಳೆಯರು ಬೆತ್ತಲಾಗಿ ನಿಂತು ‘ಬನ್ನಿ ನಮ್ಮನ್ನು ರೇಪ್ ಮಾಡಿ’ ಎಂದು ಕೂಗಿದ್ದಾರೆ, ನಮ್ಮ ದೇಶದ ಸೈನಿಕರ ವಿರುದ್ಧವೆದ್ದ ಈ ಕೂಗು ಆ ಮಹಿಳೆಯರ ಪರವಾಗಿ ಮಾತನಾಡುವಂತೆ ಮಾಡಿತ್ತೇ ಹೊರತು ಭಾರತೀಯ ಸೈನ್ಯದ ವಿರುದ್ಧ ಪ್ರತಿಭಟಿಸಿದವರು ‘ದೇಶದ್ರೋಹಿ’ಗಳು ಎಂಬಂತೇನೂ ಚಿತ್ರಿಸಿರಲಿಲ್ಲ. ಇನ್ನು ಉಕ್ಕಿನ ಮಹಿಳೆ ಐರೋಮ್ ಶರ್ಮಿಳಾ, ಸೈನ್ಯಕ್ಕಿರುವ ವಿಶೇಷ ಸವಲತ್ತುಗಳನ್ನು ತೆಗೆದುಹಾಕಬೇಕೆಂದು ಒತ್ತಾಯಿಸಲು ವರುಷಗಳಿಂದ ಸತ್ಯಾಗ್ರಹ ಮಾಡುತ್ತಿದ್ದರೂ ಆಕೆಯೇನು ನಮ್ಮ ಕಣ್ಣಲ್ಲಿ ದೇಶದ್ರೋಹಿಯಾಗಿ ಕಂಡಿರಲಿಲ್ಲ. ಮಧ್ಯ ಭಾರತದಲ್ಲಿನ ನಕ್ಸಲರನ್ನು ಹತ್ತಿಕ್ಕಲು ಮತ್ತು ನಕ್ಸಲರ ಹೆಸರಿನಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಆದಿವಾಸಿಗಳನ್ನು ಹತ್ತಿಕ್ಕಲು ಆಪರೇಷನ್ ಗ್ರೀನ್ ಹಂಟ್ ಹೆಸರಿನಲ್ಲಿ ನಡೆದ ಕಾರ್ಯಾಚರಣೆ ಅನೇಕ ‘ದೇಶದ್ರೋಹಿ’ಗಳನ್ನು ಪರಿಚಯಿಸಿತು. ಇಲ್ಲೂ ದೇಶದ್ರೋಹಿಗಳಾಗಲು ಕಷ್ಟಪಡಬೇಕಿತ್ತು. ವರುಷಗಳ ಕಾಲ ಕಾಡ ಮಧ್ಯದಲ್ಲಿ ಆದಿವಾಸಿಗಳ ಏಳಿಗೆಗೆ ಶ್ರಮಿಸಬೇಕಿತ್ತು, ನಕ್ಸಲರನ್ನು ವಿರೋಧಿಸುತ್ತಲೇ ಪ್ರಜಾಪ್ರಭುತ್ವ ಕೊಡಮಾಡಿರುವ ಕಾನೂನಾತ್ಮಕ ದಾರಿಗಳಲ್ಲೇ ಆಳ್ವಿಕೆಯ ವಿರುದ್ಧ ನಿರಂತರವಾಗಿ ಹೋರಾಡಬೇಕಿತ್ತು. ಇಷ್ಟೆಲ್ಲ ಮಾಡಿದರೂ ಎಲ್ಲೋ ಅಲ್ಲೊಬ್ಬ ಡಾ.ಬಿನಾಯಕ್ ಸೇನ್, ಇಲ್ಲೊಬ್ಬ ಹಿಮಾಂಶು ಕುಮಾರ್, ಸೋನಿ ಸೂರಿಯಂತವರಿಗೆ ಮಾತ್ರ ದೇಶದ್ರೋಹದ ಪಟ್ಟ ಲಭಿಸುತ್ತಿತ್ತು. 

ಈಗ ಎಲ್ಲಾ ತುಂಬಾ ಫಾಸ್ಟ್ ನೋಡಿ! (ಎಲ್ಲಾ ಕಾಲದಲ್ಲೂ ಇದೇ ಮಾತಿರುತ್ತದೆ ಎನ್ನುವುದು ಬೇರೆ ವಿಷಯ!) ದೇಶದ್ರೋಹಿಯಾಗುವುದು ಬಹಳ ಸುಲಭವಾಗಿಬಿಟ್ಟಿದೆ. ಆಳುವ ಸರಕಾರವನ್ನು ವಿರೋಧಿಸಿದರೂ ಅದು ದ್ರೋಹವಾಗುತ್ತದೆ; ಎಡಪಂಥೀಯ ವಿಚಾರಧಾರೆ ಹೊಂದಿರಲೇಬೇಕೆಂದಿಲ್ಲ, ಸುಮ್ಮನೆ ಬೇಜಾರಾದಾಗ ಕಮ್ಯುನಿಷ್ಟ್ ಮ್ಯಾನಿಫೆಸ್ಟೋವನ್ನು ತಿರುವಿಹಾಕಿದ್ದರೂ ಸಾಕು ದ್ರೋಹಿಗಳಾಗಬಹುದು; ದಲಿತರ ಪರವಾಗಿ ಕೆಲಸ ಮಾಡುವುದು ಅತ್ಲಾಗಿರಲಿ ಅವರ ಪರವಾಗಿ ಎರಡು ಸಾಲು ಗೀಚಿ ಎರಡು ಡೈಲಾಗು ಹೊಡೆದರೂ ಸಾಕು ನೀವು ದೇಶದ್ರೋಹಿಗಳಾಗಿಬಿಡಬಹುದು. ನಾಲಿಗೆಯಲ್ಲಿ ಮುಸ್ಲಿಂ ಹೆಸರು ಬಂದರೂ ಸಾಕು, ಪಕ್ಕದ ಪಾಕಿಸ್ತಾನಕ್ಕೆ ಕಳುಹಿಸಿಬಿಡಲು ಅನೇಕರು ಉತ್ಸುಕರಾಗಿಬಿಡುತ್ತಾರೆ! ಅಷ್ಟರಮಟ್ಟಿಗೆ ಈಗ ದೇಶದ್ರೋಹಿಯಾಗಿಬಿಡುವುದು ಸುಲಭವಾಗಿಬಿಟ್ಟಿದೆ! 

ದೇಶಪ್ರೇಮವೆಂದರೆ ದ್ವೇಷಪ್ರೇಮವಲ್ಲ, ದೇಶಭಕ್ತಿಯೆಂದರೆ ಕುರುಡು ಆರಾಧನೆಯಲ್ಲ, ದೇಶದ್ರೋಹವೆಂದರೆ ಆಳ್ವಿಕೆಯ ಅನೀತಿಗಳ ವಿರುದ್ಧ ಮಾತನಾಡುವುದಲ್ಲ ಎಂಬಂಶವನ್ನು ಮರೆಯದೆ ರವೀಂದ್ರನಾಥ ಟಾಗೂರರ ಈ ಸಾಲುಗಳನ್ನೊಮ್ಮೆ ಓದಿಕೊಳ್ಳಿ ‘ದೇಶಭಕ್ತಿಯ ಹೆಸರಿನಲ್ಲಿದ್ದ ಪುರಾತನ ಗ್ರೀಸ್ ತಾನು ಬೆಳಗಿದ ಜಾಗದಲ್ಲೇ ನಂದಿಹೋಯಿತು, ರೋಮ್ ತನ್ನ ಸಾಮ್ರಾಜ್ಯದಡಿಯಲ್ಲೇ ನಿರ್ನಾಮವಾಗಿಹೋಯಿತು. ಸಮಾಜ ಮತ್ತು ಮನುಷ್ಯನ ಆಧ್ಯಾತ್ಮಿಕತೆಯ ಮೇಲೆ ನಿರ್ಮಾಣಗೊಂಡ ನಾಗರೀಕತೆಗಳು ಇನ್ನೂ ಜೀವಂತವಾಗಿವೆ, ಭಾರತದಲ್ಲಿ ಮತ್ತು ಚೀನಾದಲ್ಲಿ’. ಮನುಷ್ಯ ಸಂತತಿ ಉಳಿಯಲು ನಾಗರೀಕತೆ ಮುಖ್ಯ, ದೇಶಭಕ್ತಿಯಲ್ಲ ಎನ್ನುವ ಟಾಗೂರರ ಮಾತುಗಳು ದೇಶಭಕ್ತಿ ಮುಖ್ಯ ನಾಗರೀಕತೆಯಲ್ಲ ಎನ್ನುವ ವರ್ತಮಾನದಲ್ಲಿ ಗ್ರೀಸ್ ಮತ್ತು ರೋಮಿನ ಭೂತದ ದರ್ಶನ ಭವಿಷ್ಯದ ಭಾರತ ಮಾಡಿಸಿಬಿಡಬಹುದೇ? ಇಲ್ಲ ಎನ್ನಲಿರುವ ಕಾರಣಗಳು ಕಡಿಮೆಯಿವೆ.
(ಸಂಕಥನ ಸಾಹಿತ್ಯ ಪತ್ರಿಕೆಗೆ ಬರೆದ ಲೇಖನ)

No comments:

Post a Comment