May 3, 2016

ಅಕಾಡೆಮಿ ಬಹುಮಾನ ಪಡೆವಾಗ ಆಡಿದ ಮಾತು: ಡಾ. ಅನುಪಮ. ಎಚ್. ಎಸ್.

Anupama H S
ಮನ್ನಣೆ = ಜವಾಬ್ದಾರಿ
ಒಬ್ಬ ಕವಿ, ಬರಹಗಾರ, ಕಲಾವಿದನಿಗೆ ಸಾವಿರ ಯೋಧರಿಗಿಂತ ಹೆಚ್ಚು ಶಕ್ತಿಯಿರುತ್ತದೆ. ಅದು ಅಕ್ಷರ ಕೊಟ್ಟ ಶಕ್ತಿ. ಜನಸಮುದಾಯ ತನ್ನ ಪ್ರತಿನಿಧಿಯಾಗಿ ಅವರಿಗೆ ಕೊಟ್ಟ ಶಕ್ತಿ. ಈ ಶಕ್ತಿಯ ಅರಿವಿರುವುದರಿಂದಲೇ ಅವರ ಬಾಯಿ ಮುಚ್ಚಿಸುವುದು ಸಾಂಕೇತಿಕವಾಗಿ ಸಮಾಜದ ಎಲ್ಲ ಜನರ ಬಾಯಿ ಮುಚ್ಚಿಸುವಷ್ಟು ಶಕ್ತಿಶಾಲಿ ಎಂದು ಭಾವಿಸಲಾಗಿದೆ. ಎಂದೇ ನುಡಿ, ಸಾಹಿತ್ಯ, ಸಾಹಿತಿ ಮತ್ತು ಸಾಹಿತ್ಯ ಅಕಾಡೆಮಿ ಕೆಲ ಬಿಕ್ಕಟ್ಟುಗಳನ್ನು ಕಾಲಕಾಲಕ್ಕೆದುರಿಸಿವೆ. ಈಗಲೂ ಅಂತಹ ಘಟನೆಗಳು ಸಂಭವಿಸುತ್ತಲೇ ಇವೆ. ಇತ್ತೀಚೆಗೆ ಮಾತು/ಬರಹ/ಅಭಿವ್ಯಕ್ತಿ ಸ್ಕ್ರುಟಿನಿಗೆ ಒಳಗಾದವು. ಪ್ರತಿಯೊಂದೂ ಸ್ಕ್ಯಾನರಿನ ಅಡಿ ಬಂತು. ಸಾಹಿತ್ಯ ಅಕಾಡೆಮಿ ಕಾರ್ಯಕ್ರಮ ಪೊಲೀಸ್ ರಕ್ಷಣೆಯಲ್ಲಿ ನಡೆಯಬೇಕಾದಂತಹ ಪರಿಸ್ಥಿತಿ ಉಂಟಾಯಿತು. ಅಷ್ಟೆ ಅಲ್ಲ,

• ಭಾವನೆಗಳಿಗೆ ಧಕ್ಕೆ ಮಾಡಿದರು ಎಂದು ಎಂದೋ ಬರೆದ ಕಾದಂಬರಿಯ ಒಂದು ಪುಟದ ಆಧಾರದ ಮೇಲೆ ಕೆಲವರು ಕೋರ್ಟು ಕಚೇರಿ ಹತ್ತಿದರು.
• ಭಾವನೆಗಳಿಗೆ ಧಕ್ಕೆ ಮಾಡಿದರು ಎಂದು ಯುವಕವಿಯೊಬ್ಬನನ್ನು ಹಿಡಿದು ಥಳಿಸಿದರು.
• ಭಾವನೆಗಳಿಗೆ ಧಕ್ಕೆ ಮಾಡಿದರು ಎಂದು ಈ ಧಾರವಾಡ ನೆಲದ ಒಂದು ಅಮೂಲ್ಯ ಜೀವ ತನ್ನ ಪ್ರಾಣವೊಪ್ಪಿಸಬೇಕಾಯಿತು.
• ಭಾವನೆಗಳಿಗೆ ಧಕ್ಕೆ ಮಾಡಿದರು ಎಂದು ಈಗಲೂ ಪ್ರತಿದಿನವೂ ಏನೇನೋ ನಡೆಯುತ್ತಲೇ ಇದೆ.

ಅದಕ್ಕೆ ಅಕ್ಷರಲೋಕ ಸುಮ್ಮನಿರಲಿಲ್ಲ. ಅಭಿವ್ಯಕ್ತಿಯೇ ಒಂದು ಪ್ರತಿರೋಧವಾದರೂ ತನ್ನ ಪ್ರತಿಕ್ರಿಯೆಯನ್ನು ತೀವ್ರವಾಗಿಸಿ ನೀಡಿತು:

• ತಮ್ಮ ಭಾವನೆಗಳಿಗೆ ಧಕ್ಕೆ ಮಾಡಿದರು ಎಂದು ಸಾಹಿತಿಗಳು ಪ್ರಶಸ್ತಿ ಹಿಂತಿರುಗಿಸತೊಡಗಿದರು.
• ಕಲಾವಿದರು, ಬರಹಗಾರರು, ನಟರು, ಮತ್ತಿತರ ಸಂವೇದನಾಶೀಲ ಜೀವಗಳು ಬರಹಗಾರರಾರು ಕೊಟ್ಟ ಸಮ್ಮಾನಗಳನ್ನು ವಾಪಸು ಕೊಟ್ಟರು.
• ಹಲವು ಗೌರವಗಳನ್ನು ಬೇಡವೆನ್ನಲಾಯಿತು.

ಇವೆಲ್ಲ ಸಾಮಾಜಿಕ ಆಗುಹೋಗುಗಳ ಕುರಿತ ಅವರ ನೈತಿಕ ಸಿಟ್ಟನ್ನೂ, ಕಳಕಳಿಯನ್ನೂ ತೋರಿಸಿದವು. ಭಿನ್ನಮತದಿಂದಲೇ ನಮ್ಮನ್ನು ನಾವು ಗುರುತಿಸಿಕೊಳುವ ಕಾಲ ಎದುರಾದಾಗ ತಮಗೆ ಸಾಧ್ಯವಿದ್ದ ಎಲ್ಲ ರೀತಿಯಿಂದ ಅದನ್ನು ವ್ಯಕ್ತಪಡಿಸಿದರು.

ಅವರೆಲ್ಲರನ್ನು ಗೌರವದಿಂದ ನೆನೆಯುತ್ತಲೇ, ಎಲ್ಲವೂ ಸಾಂಕೇತಿಕ ಎನ್ನುವುದನ್ನೂ ನಾವು ನೆನಪಿಡಬೇಕು. `ಪ್ರಶಸ್ತಿ ಪಡೆಯುವುದು, ಹೊಡೆಯುವುದರ ಹಾಗೆಯೇ ಪ್ರಶಸ್ತಿ ವಾಪಸಾತಿಯೂ ಇವರಿಗೊಂದು ಗೀಳಾಗಿದೆ’ ಎಂದು ಜನಸಾಮಾನ್ಯರಿಗೆ ಅನಿಸಬಾರದು. ಏಕೆಂದರೆ ನನ್ನ ಪ್ರಕಾರ ಪ್ರಶಸ್ತಿ ಎನ್ನುವುದು ನಿಮ್ಮ ಜವಾಬ್ದಾರಿಯನ್ನು ಹೆಚ್ಚಿಸಲು, ನೆನಪಿಸಲು ಸಮಾಜ ಇಟ್ಟುಕೊಂಡ ಒಂದು ತಂತ್ರ. ಖ್ಯಾತಿ ಹುಟ್ಟಿಸುವ ಕಷ್ಟ ಎಂಥದೆಂದರೆ ಅದು ನಿಮ್ಮ ಯೋಗ್ಯತೆಯನ್ನು ನಿಮಗೆ ನೀವೇ ಮತ್ತೆಮತ್ತೆ ಸಾಬೀತುಮಾಡಿಕೊಳ್ಳುತ್ತ ಹೋಗುವಂತೆ ಮಾಡುತ್ತದೆ. ಅದಕ್ಕೇ ಈ ಕಷ್ಟಕಾಲದಲ್ಲಿ ಮನ್ನಣೆ ಪಡೆಯುವುದು ಎಂದರೆ ನಿಮ್ಮ ಬದ್ಧತೆಯನ್ನು, ಜವಾಬ್ದಾರಿಯನ್ನು ನೀವು ಗಟ್ಟಿಗೊಳಿಸಿಕೊಳ್ಳುತ್ತ ಹೋಗುವುದೇ ಆಗಿದೆ.

ಅದಕ್ಕೇ ಪ್ರಶಸ್ತಿ ಪಡೆದ ಸಂಭ್ರಮವು ಹೆಮ್ಮೆಯಾಗದಂತೆ, ಬಯೋಡೇಟಾದಲ್ಲಿ ಸೇರದಂತೆ ನೋಡಿಕೊಳ್ಳಬೇಕು. ಪ್ರಶಸ್ತಿ ಮರೆತು ಅದು ನೀಡುವ ಜವಾಬ್ದಾರಿಯನಷ್ಟೆ ಮುಂದೆ ಹೊತ್ತು ಸಾಗಬೇಕು. ಗುರುತಿಸುವಿಕೆ ನಮ್ಮ ಸಮಯ, ಶ್ರಮವನ್ನು ಇನ್ನಷ್ಟು ದಕ್ಷವಾಗಿ ನಿರ್ವಹಿಸಿ ಜನಪರವಾಗಿಸುವಂತೆ ಆಗಬೇಕು. ಇವತ್ತು ಬರವಿದ್ದರೆ ಅದು ಕೇವಲ ನೀರಿಗಲ್ಲ, ಕೇವಲ ಆಹಾರಕ್ಕೂ ಅಲ್ಲ; ಆದರೆ ಒಂದು ಹಿಡಿ ಪ್ರೀತಿಗಾಗಿ ಇವತ್ತು ತೀವ್ರ ಬರಗಾಲವಿದೆ. ನಮ್ಮ ಸಂವೇದನೆಯು ಪ್ರೀತಿ ಹಂಚುವ, ಜೊತೆಗೆ ನೇರವಾಗಿ ದಿಟ್ಟವಾಗಿ ಜನರ ಅನಿಸಿಕೆ ವ್ಯಕ್ತಪಡಿಸುವ ಮಾರ್ಗವೂ ಆಗಬೇಕು. ಆಗಮಾತ್ರ ಯಾವುದು ಬಿಕ್ಕಟ್ಟಿಗೆ ಕಾರಣವಾಗಿದೆಯೋ ಅದೇ ಪರಿಹಾರಕ್ಕೆ ಕಾರಣವೂ ಆಗಿ ಒದಗಿಬಂದೀತು.

ಧಾರವಾಡ ನೆಲದಲ್ಲಿ ಆಡಲು ಸಾಧ್ಯವಾದ, ಸಾಧ್ಯವಾಗದ, ಮೌನವಾಗಿಸಲ್ಪಟ್ಟ ಎಲ್ಲ ಜೀವಗಳ ನೆನೆಯುತ್ತ ನನ್ನ ಜವಾಬ್ದಾರಿ ಸ್ವೀಕರಿಸುತ್ತಿದ್ದೇನೆ. ಅಂಡಮಾನ್ ಕುರಿತಷ್ಟೆ ಅಲ್ಲ ಸಕಲ ಜೀವರಾಶಿ-ಜನಜೀವನದ ಕುರಿತು ನನ್ನ ಆಸಕ್ತಿ ಕೆರಳಿಸಿದ ನನ್ನಿಬ್ಬರು ಗುರುಗಳಾದ ಪೂರ್ಣಚಂದ್ರ ತೇಜಸ್ವಿ ಹಾಗೂ ರಹಮತ್ ತರೀಕೆರೆಯವರಿಗೆ ಈ ಗೌರವವನ್ನು ಅರ್ಪಿಸಬಯಸುವೆ. ನನ್ನ ಎಲ್ಲಕ್ಕು ಬೆಂಬಲವಾಗಿ ನಿಲ್ಲುವ, ಪುಸ್ತಕ ಬಹುಮಾನ ಪಡೆದ ಈ ಪುಸ್ತಕವನ್ನು ಪ್ರಕಟಿಸಿದ ಬಸೂ; ನನ್ನ ಜೀವನಪ್ರೀತಿಯನ್ನು ಕಾಪಿಟ್ಟ ಕೃಷ್ಣ, ಪುಟ್ಟಿ, ಪವಿ, ಕನಸು, ಅಮ್ಮ, ಅಣ್ಣ, ಗೆಳೆಯರ ಬಳಗ ಇವರೆಲ್ಲರನ್ನು ಈ ಹೊತ್ತು ಪ್ರೀತಿಯಿಂದ ನೆನೆಯುತ್ತೇನೆ.

- ಅನುಪಮಾ

No comments:

Post a Comment