Apr 12, 2016

ಸಿದ್ಧು ಕೆಲಸ ಸಲೀಸಾಗಿಸಲು ಯಡ್ಡಿ ಪ್ರವೇಶ!

ಡಾ. ಅಶೋಕ್. ಕೆ. ಆರ್
12/04/2016
ಕರ್ನಾಟಕ ರಾಜಕೀಯದಲ್ಲಿ ಎಲ್ಲವೂ ಒಂದು ಸುತ್ತು ತಿರುಗಿ ನಿಂತಿದೆ. ಲೋಕಾಯುಕ್ತದವರು ಬಿಜೆಪಿ ಸರಕಾರದ ವ್ಯಕ್ತಿಗಳ ವಿರುದ್ಧ ದಾಖಲಿಸಿಕೊಂಡಿದ್ದ ಪ್ರಕರಣಗಳು, ನಡೆಸಿದ ತನಿಖೆಗಳ ಆಧಾರದಲ್ಲಿ ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ಸಿನ ಸಿದ್ಧರಾಮಯ್ಯ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಿದ್ದರು. ಇದೊಂದು ಸಂದರ್ಭ ಬಿಟ್ಟರೆ ಕಾಂಗ್ರೆಸ್ ಸಶಕ್ತ ವಿರೋಧ ಪಕ್ಷವಾಗಿ ಕೆಲಸ ನಿರ್ವಹಿಸಿದ್ದೇ ಕಡಿಮೆ. ಒಂದು ಹಂತದವರೆಗೆ ವಿರೋಧ ಪಕ್ಷವಾಗಿ ಕೆಲಸ ಮಾಡಿದ್ದು ಜೆ.ಡಿ.ಎಸ್ಸಿನ ಕುಮಾರಸ್ವಾಮಿ. ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಬಿಜೆಪಿ ಸರಕಾರದ ಭ್ರಷ್ಟ ಕೆಲಸಗಳ ಪಾಲು ಒಂದತ್ತು ಪರ್ಸೆಂಟ್ ಇರಬಹುದಷ್ಟೇ. ಉಳಿದಂತೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದು ಬಿಜೆಪಿ ಅಧಿಕಾರ ಕಳೆದುಕೊಳ್ಳುವಂತೆ ಮಾಡಿದ್ದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ. ಯಾವ ಲೋಕಾಯುಕ್ತದ ವರದಿಯ ಆಧಾರದಲ್ಲಿ ಭ್ರಷ್ಟರನ್ನು ಸೋಲಿಸಿ ಎಂದು ಸಿದ್ಧು ಮತ ಕೇಳಿದರೋ ಇವತ್ತು ಅದೇ ಸಿದ್ಧು ಲೋಕಾಯುಕ್ತವನ್ನ ಶಾಶ್ವತವಾಗಿ ಇಲ್ಲವಾಗಿಸಲು ಪಣ ತೊಟ್ಟು ನಿಂತಿದ್ದಾರೆ. ಅಂದು ಬಿಜೆಪಿಯ ಸೋಲಿಗೆ ಅದೇ ಪಕ್ಷದಿಂದ ಮುಖ್ಯಮಂತ್ರಿಯಾಗಿದ್ದ ಯಡ್ಡಿಯೇ ಕಾರಣವಾಗಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲಲು ಅದೇ ಪಕ್ಷದಿಂದ ಮುಖ್ಯಮಂತ್ರಿಯಾಗಿರುವ ಸಿದ್ಧು ಕಾರಣವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಅದಕ್ಕೆ ಪೂರಕವಾಗುವಂತೆ ಬಿಜೆಪಿಯ ಹೈಕಮಾಂಡ್ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪನವರನ್ನು ನೇಮಿಸಿದೆ. ಭ್ರಷ್ಟ ಕಾಂಗ್ರೆಸ್ ಸರಕಾರ ತೊಲಗಿಸುವುದೇ ನನ್ನ ಗುರಿ ಎಂದು ಕೂಗುವ ಸರದಿಯೀಗ ಯಡಿಯೂರಪ್ಪನವರದು!

ಕಳೆದ ಸಾಲಿನಲ್ಲಿ ಎಷ್ಟೆಲ್ಲ ಭ್ರಷ್ಟಾಚಾರದ ಆರೋಪಗಳನ್ನು ಹೊತ್ತಿದ್ದಾಗ್ಯೂ ಬಿಜೆಪಿ ಸೋಲುವುದು ಕಷ್ಟವಿತ್ತು. ಕಾರಣ, ಕಾಂಗ್ರೆಸ್ಸಿನವರಿಂದ ಅಂತಹ ಹೇಳಿಕೊಳ್ಳುವಂತಹ ಚಟುವಟಿಕೆಯಿರಲಿಲ್ಲ. ಬಿಜೆಪಿಗೆ ದೊಡ್ಡ ಹೊಡೆತ ಕೊಟ್ಟಿದ್ದು ಭ್ರಷ್ಟಾಚಾರದ ಆರೋಪದ ಮೇಲೆ ಅಧಿಕಾರ ಕಳೆದುಕೊಂಡು ಜೈಲಿಗೂ ಹೋಗಿಬಂದಿದ್ದ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಸೇರಿದ್ದು, ತಮ್ಮ ಕಟ್ಟಾ ಬೆಂಬಲಿಗರನ್ನೂ ಕೆಜೆಪಿಗೆ ಎಳೆದುಕೊಂಡು ಹೋಗಿದ್ದು. ಜನರಿಗೆ ಭ್ರಷ್ಟಾಚಾರದ ಆರೋಪಗಳಿಗಿಂತ, ಕಣ್ಣಿಗೆ ರಾಚುವ ಭ್ರಷ್ಟಾಚಾರಕ್ಕಿಂತ ಜಾತಿ ಪ್ರೀತಿಯೇ ಮುಖ್ಯ ಎನ್ನುವುದೂ ಕಳೆದ ಚುನಾವಣೆಯಲ್ಲಿ ಸಾಬೀತಾಯಿತು. ಕೆಜೆಪಿ ಬಿಜೆಪಿಯ ಮತಗಳನ್ನು ಕಿತ್ತುಕೊಂಡು ಕಾಂಗ್ರೆಸ್ ಗೆಲುವು ಕಾಣುವುದರಲ್ಲಿ ಪ್ರಮುಖ ಪಾತ್ರ ವಹಿಸಿತು. ಯಡಿಯೂರಪ್ಪ ಬಿಜೆಪಿ ತೊರೆಯದೇ ಹೋಗಿದ್ದರೆ ಬಿಜೆಪಿಯೇ ಮತ್ತೆ ಅಧಿಕಾರವಿಡಿಯುವ ಎಲ್ಲಾ ಸಾಧ್ಯತೆಗಳೂ ಇತ್ತು. ಇದರ ಅರಿವು ಬಿಜೆಪಿ ಮುಖಂಡರಿಗೂ ಇತ್ತಲ್ಲ. ಲೋಕಸಭಾ ಚುನಾವನೆಯೊತ್ತಿಗೆ ಯಡಿಯೂರಪ್ಪನವರನ್ನು ಬಿಜೆಪಿಗೆ ಕರೆತರುವ ಸಕಲ ಪ್ರಯತ್ನಗಳೂ ನಡೆದವು. ಒಂದೆಡೆ ಬಿಜೆಪಿ ಕೇಂದ್ರ ಮಟ್ಟದಲ್ಲಿ ಯುಪಿಎ ಸರಕಾರದ ಭ್ರಷ್ಟಾಚಾರದ ವಿರುದ್ಧ ದೊಡ್ಡ ದನಿಯಲ್ಲಿ ಮಾತನಾಡುತ್ತಿದ್ದರೆ ಇಲ್ಲಿ ಕರ್ನಾಟಕದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತ ಯಡ್ಡಿಯನ್ನ ಮತ್ತೆ ಪಾರ್ಟಿಗೆ ಸೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿತ್ತು. ಭ್ರಷ್ಟಾಚಾರ, ಅಭಿವೃದ್ಧಿಯ ಮಾತುಗಳಿಗಿಂತ ಜಾತಿ ಸಮೀಕರಣವೇ ಮುಖ್ಯ ಎಂಬರಿವು ಬಿಜೆಪಿಯವರಿಗೂ ಇತ್ತು, ಆರಕ್ಕೇರದ ಮೂರಕ್ಕಿಳಿಯದ ಜೆ.ಡಿ.ಎಸ್ಸಿನಂತೆ ಆಗುವುದು ಒಮ್ಮೆ ಅಧಿಕಾರದ ಸವಿ ಕಂಡಿದ್ದ ಯಡ್ಡಿಗೂ ಬೇಡವಾಗಿತ್ತು. ಯಡ್ಡಿಯ ಬಿಜೆಪಿ ಪುನರ್ ಪ್ರವೇಶ ಕರ್ನಾಟಕದಲ್ಲಿ ಬಿಜೆಪಿಯ ಲೋಕಸಭಾ ಗೆಲುವನ್ನು ಮತ್ತಷ್ಟು ಸುಗಮವಾಗಿಸಿತು. ಕೇಂದ್ರ ಸಚಿವ ಸಂಪುಟಕ್ಕೆ ಸೇರುವ ಅರ್ಹತೆಗಳನ್ನು ಹೊಂದಿದ್ದಾಗ್ಯೂ ಯಡ್ಡಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳದೇ ಇದ್ದುದಕ್ಕೆ ಅವರ ಮೇಲಿನ ಭ್ರಷ್ಟಾಚಾರ ಆರೋಪಗಳೇ ಕಾರಣವೆಂದರೆ ಸುಳ್ಳಲ್ಲ. ಮತಕ್ಕೆ ಬೇಕಿದ್ದ ಯಡ್ಡಿ ಸಂಪುಟಕ್ಕೆ ಬೇಡವಾದರು. ಪಕ್ಷದಲ್ಲೊಂದು ಹುದ್ದೆಯನ್ನು ನೀಡಿದರಾದರೂ ಅವರಿಗದು ಬೇಕಿರಲಿಲ್ಲ. ಸಂಪುಟ ಸ್ಥಾನ ಸಿಗದಿದ್ದರಷ್ಟೇ ಹೋಯ್ತು ಮತ್ತೆ ಕರ್ನಾಟಕದ ಬಿಜೆಪಿ ಅಧ್ಯಕ್ಷನಾಗುವ ಆಸೆಯನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ಸಿನ ಹೈಕಮಾಂಡ್ ಮನಸ್ಥಿತಿಯನ್ನು ಹೀನಾಮಾನವಾಗ ಟೀಕಿಸುತ್ತಿದ್ದ ಬಿಜೆಪಿಯಲ್ಲೀಗ ಹೈಕಮಾಂಡ್ ಪರಿಸ್ಥಿತಿ ಜೋರಾಗಿಯೇ ಇದೆಯಲ್ಲವೇ!

ಹೈಕಮಾಂಡಿನವರು ಅಳೆದು ತೂಗಿ ನೋಡಿದ್ದಾರೆ, ಯಾವ ಲೆಕ್ಕಾಚಾರದಿಂದ ನೋಡಿದರೂ ರಾಜ್ಯ ಬಿಜೆಪಿಗೆ ಯಡ್ಡಿಯೇ ಸೂಕ್ತವಾಗಿ ಕಂಡಿದ್ದಾರೆ. ಲಿಂಗಾಯತರ ಮತಗಳನ್ನು ಸೆಳೆಯುವುದಕ್ಕೆ ಯಡ್ಡಿಯೇ ಬಿಸ್ಟು ಎನ್ನುವುದವರಿಗೆ ಅರ್ಥವಾಗಿದೆ. ಭ್ರಷ್ಟಾಚಾರದ ಆರೋಪಗಳು, ಆಡಳಿತದಲ್ಲಿದ್ದಾಗ ನಡೆಸಿದ ಅನಾಚಾರಗಳನ್ನೆಲ್ಲ ಮರೆತುಬಿಡಲು ಜನರಿಗೆ ಐದು ವರುಷ ಸಾಕು, ಕಾರಣ ಆ ಐದು ವರುಷದ ಹೊಸ ಆಡಳಿತದಲ್ಲಿ ಹೊಸ ಹೊಸ ಅನಾಚಾರಗಳನ್ನು ಜನರು ಅನುಭವಿಸಿರುತ್ತಾರೆ. ಮತಬ್ಯಾಂಕಿನ ಆಧಾರದಲ್ಲಿ ಲಿಂಗಾಯತ ಸಮುದಾಯ ಸಶಕ್ತವಾಗಿದೆ. ಬಿಜೆಪಿಗೆ ಲಿಂಗಾಯತರ ಬಹುತೇಕ ಮತಗಳು ಬೀಳುವುದರಲ್ಲಿ ಹೆಚ್ಚಿನ ಸಂಶಯ ಬೇಡ. ಇದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಸಹಾಯ ಮಾಡಬಹುದು. ಜೊತೆಗೆ ಹೇಳಿಕೊಳ್ಳುವಂತಹ ಕೆಲಸ ಮಾಡದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ನಡೆನುಡಿಗಳೂ ಕೂಡ ಬಿಜೆಪಿಯ ಗೆಲುವಿಗೆ ಪೂರಕವಾಗಿ ಕೆಲಸ ಮಾಡುತ್ತದೆ, ಉಳಿದಿರುವ ಎರಡು ವರುಷಗಳಲ್ಲೂ ಕಾಂಗ್ರೆಸ್ ಇದೇ ರೀತಿಯ ಕೆಲಸ ಮಾಡಿದರೆ ಕಾಂಗ್ರೆಸ್ ಸೋಲುವುದರಲ್ಲಿ ಯಾವುದೇ ಅನುಮಾನ ಬೇಡ. ಒಂದು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಬೆಳೆಯಬಹುದಾದ ಎಲ್ಲಾ ಸಾಧ್ಯತೆಗಳಿದ್ದ ಜೆ.ಡಿ.ಎಸ್, ಅಪ್ಪ ಮಕ್ಕಳ ಅಹಂನಲ್ಲಿ ಮಂಡ್ಯ ಮತ್ತು ಹಾಸನ ಜಿಲ್ಲೆಯ ಒಕ್ಕಲಿಗರ ಪ್ರಾಬಲ್ಯವಿರುವ ಪ್ರದೇಶಗಳಲ್ಲಷ್ಟೇ ರಾಷ್ಟ್ರೀಯ ಪಕ್ಷವಾಗಿ ಉಳಿದುಬಿಟ್ಟಿದೆ. ಅಲ್ಲೂ ತನ್ನ ನೆಲೆಯನ್ನು ಕಳೆದುಕೊಳ್ಳುವುದಕ್ಕೆ ಹೆಚ್ಚಿನ ಸಮಯದ ಅವಶ್ಯಕತೆಯಿಲ್ಲ ಎನ್ನುವುದರರಿವು ಆ ಪಕ್ಷದ ಮುಖಂಡರಿಗಿನ್ನೂ ಬಂದಿಲ್ಲ. ಬಿಜೆಪಿಯ ಸರಾಗ ಗೆಲುವಿಗೆ ಅಡ್ಡಗಾಲಾಕುವ ಸಾಧ್ಯತೆ ಇರುವುದೂ ಯಡಿಯೂರಪ್ಪನವರಿಗೇ! ಬಿಜೆಪಿಗೆ ಲಿಂಗಾಯತರ ಮತಗಳು ಕ್ರೋಡೀಕರಣವಾಗಿ ಮತ್ತೊಮ್ಮೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿಬಿಡಬಹುದು ಎನ್ನುವ ಯೋಚನೆ ಉಳಿದ ಜಾತಿಗಳ ಮತಗಳ ಕ್ರೋಡೀಕರಣಕ್ಕೂ ಕಾರಣವಾಗುತ್ತದೆ ಎನ್ನುವುದನ್ನು ಮರೆಯಬಾರದು. ಹಂಚಿ ಹೋಗಬಹುದಾದ ಅಹಿಂದ ಮತಗಳು, ಜೆ.ಡಿ.ಎಸ್ಸಿಗೆ ಚೂರು ಪಾಲು ಕೊಡುತ್ತಿದ್ದ ಮುಸ್ಲಿಂ ಮತಗಳು ಬಿಜೆಪಿಯ ಸೋಲಿನ ಸಲುವಾಗಿ ಇನ್ನೊಂದ್ಸಲ ಸಿದ್ಧು ಬರ್ಲಿ ಬಿಡಿ ಎಂದು ಕಾಂಗ್ರೆಸ್ಸಿಗೇ ಮತವಾಕಿಬಿಡಬಹುದು! ಚುನಾವಣೆ ಇನ್ನೂ ದೂರವಿರುವಾಗ ಇವೆಲ್ಲವೂ ಸದ್ಯಕ್ಕೆ ಲೆಕ್ಕಾಚಾರಗಳಷ್ಟೇ ಬಿಡಿ! ಇನ್ನೆರಡು ವರುಷದ ಘಟನಾವಳಿಗಳ ಮೇಲೆ ಮುಂದಿನ ಚುನಾವಣೆಯ ಭವಿಷ್ಯ ನಿರ್ಧರಿತವಾಗುತ್ತೆ. ಕಳೆದ ಮೂರು ವರ್ಷದಿಂದ ಬಿಜೆಪಿ ಸಶಕ್ತ ವಿರೋಧ ಪಕ್ಷದಂತೆ ಕಾರ್ಯನಿರ್ವಹಿಸಿದ್ದು ಧರ್ಮಾಧಾರಿತ ಸಂಗತಿಗಳಿಗೆ ಸಂಬಂಧಪಟ್ಟಂತೆ ಮಾತ್ರ. ಯಡ್ಡಿಯ ನೇತೃತ್ವದಲ್ಲಾದರೂ ಬಿಜೆಪಿ ವಿಷಯಾಧಾರಿತ ಸಂಗತಿಗಳನ್ನೆತ್ತಿಕೊಂಡು ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತ ಬಿಜೆಪಿ ಸಶಕ್ತ ವಿರೋಧ ಪಕ್ಷವಾಗಿಯೂ ಕೆಲಸ ಮಾಡಬಲ್ಲದು ಎನ್ನುವುದನ್ನು ನಿರೂಪಿಸಲಿ.

1 comment:

  1. ಕರ್ನಾಟಕದ ಜನರು ದೆಹಲಿಯಲ್ಲಿ ನಡೆದ ಬದಲಾವಣೆಯಿಂದ ಪಾಠ ಕಲಿಯದಿದ್ದರೆ ಕಾಂಗ್ರೆಸ್ ಹಾಗೂ ಬಿಜೆಪಿ ಎಂಬ ಒಂದೇ ನಾಣ್ಯದ ಎರಡು ಮುಖಗಳಿಂದ ಬವಣೆ ಪಡುವುದು ತಪ್ಪುವುದಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆದರೆ ಸಂಘ ಪರಿವಾರ ಹಿಂಬಾಗಿಲಿನಿಂದ ರಾಜ್ಯದಲ್ಲಿ ಆಡಳಿತ ನಡೆಸಲು ತೊಡಗುತ್ತದೆ. ಭ್ರಷ್ಟಾಚಾರ ಎಲ್ಲೆ ಮೀರುತ್ತದೆ, ಪ್ರಜಾಪ್ರಭುತ್ವ ಅವಸಾನ ಹೊಂದುತ್ತದೆ ಎಂಬುದು ಹಿಂದಿನ ಬಿಜೆಪಿಯ ಐದು ವರ್ಷಗಳ ಘೋರ ಆಡಳಿತದಿಂದ ಸಾಬೀತಾಗಿದೆ. ಮುಂದಿನ ಕರ್ನಾಟಕದ ಅವಸ್ಥೆ ಊಹಿಸಿದರೆ ಮುಂದೆ ಇನ್ನಷ್ಟು ಕಠಿಣ ದಿನಗಳನ್ನು ರಾಜ್ಯದ ಜನತೆ ಎದುರಿಸಲು ಸಿದ್ಧವಾಗಬೇಕಾಗುತ್ತದೆ. ರಾಜ್ಯದಲ್ಲಿ ಪರ್ಯಾಯ ರಾಜಕೀಯ ವ್ಯವಸ್ಥೆಯನ್ನು ಕಟ್ಟದೇ ಹೋದಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರದ ಚರಮಸೀಮೆಯನ್ನು ಕಾಣಲಿದೆ ಹಾಗೂ ಅರಾಜಕತೆಯ ದಿನಗಳನ್ನು ಎದುರಿಸುವ ಕಾಲ ದೂರವಿಲ್ಲ. ಕಾಲ ಸರಿದಂತೆ ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಶಿಥಿಲವಾಗುತ್ತಾ ಅವಸಾನದತ್ತ ಸಾಗುತ್ತಿದ್ದು ಭ್ರಷ್ಟರ ಹಾಗೂ ಹಣ ಬಲವುಳ್ಳವರ ಸರ್ವಾಧಿಕಾರಕ್ಕೆ ರಾಜ್ಯ ಒಳಗಾಗುತ್ತಿದೆ. ಶಾಸಕರು ಜನಪ್ರತಿನಿಧಿಗಳಾಗುವ ಬದಲು ಜನರ ಯಜಮಾನರಂತೆ ವರ್ತಿಸುತ್ತಿದ್ದಾರೆ. ಜನರ ಸಂಕಟ, ಬವಣೆಗಳಿಗೆ ಪರಿಹಾರ ಒದಗಿಸುವ ಬದಲು ಧಿಮಾಕಿನಿಂದ ವರ್ತಿಸುತ್ತಿದ್ದಾರೆ. ಇಂಥ ಭಾಗ್ಯಕ್ಕೆ ಪ್ರಜಾಪ್ರಭುತ್ವ ಎಂಬ ಹೆಸರು ಬೇರೆ ಕೇಡು!

    ReplyDelete