Mar 27, 2016

ಅನುಕಂಪದ ಪ್ರಕೃತಿ ಮತ್ತು ದುರಂಹಕಾರಿ ಮನುಷ್ಯ

ಡಾ. ಅಶೋಕ್.ಕೆ.ಆರ್.
27/03/2016
ಇಂಡಿಪೆಂಡೆನ್ಸ್ ಡೇ ಎನ್ನುವ ಇಂಗ್ಲೀಷ್ ಚಿತ್ರದಲ್ಲಿ ಪರಗ್ರಹ ಜೀವಿಗಳು ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೆ ವಲಸೆ ಹೋಗುತ್ತ ಆ ಗ್ರಹದ ಸಮಸ್ತ ಸಂಪನ್ಮೂಲವನ್ನು ಗೋರಿ ಬಳಿದಾದ ಮೇಲೆ ಮತ್ತೊಂದು ಗ್ರಹದೆಡೆಗೆ ಹೋಗಿಬಿಡುತ್ತಾರೆ. ಈ ಏಲಿಯನ್ನುಗಳ ಅಧ್ಯಯನದಲ್ಲಿ ತೊಡಗಿಕೊಂಡ ಕೆಲವರ ಪ್ರಕಾರ ಮನುಷ್ಯ ಜೀವಿಯೇ ಈ ಭೂಮಿಗೆ ಏಲಿಯನ್ನು, ಬೇರೆ ಗ್ರಹದಿಂದ ಇಲ್ಲಿಗೆ ಬಂದಿದ್ದಾನವನು ಎನ್ನುವ ಗುಮಾನಿಯನ್ನು ವ್ಯಕ್ತಪಡಿಸುತ್ತಾರೆ! ಇಂಡಿಪೆಂಡೆನ್ಸ್ ಡೇ ಚಿತ್ರದಲ್ಲಿ ಭೂಮಿಯನ್ನು ಕಬಳಿಸಲು ಬಂದ ಏಲಿಯನ್ನಿಗೂ ಭೂಮಿ ಮೇಲಿದ್ದು ಭೂಮಿಯನ್ನು ಕಬಳಿಸುತ್ತ ಅನ್ಯಗ್ರಹದೆಡೆಗೆ ದೃಷ್ಟಿ ಹರಿಸಿರುವ ಮನುಷ್ಯನಿಗೂ ಸಾಮ್ಯತೆ ಇದೆಯಲ್ಲವೇ?! 

ಈ ಬಾರಿ ರಣ ಬಿಸಿಲು, ಪ್ರತೀ ಬಾರಿಯೂ ಹಿಂದಿನ ಸಲಕ್ಕಿಂತ ಹೆಚ್ಚು ಬಿಸಿಲಿದೆ ಎಂಬನುಭವವಾಗುತ್ತಿದೆ. ‘ಅಯ್ಯೋ ಬಳ್ಳಾರಿ ರಾಯಚೂರಿನಲ್ಲಿ ಟೆಂಪರೇಚರ್ರು ನಲವತ್ತು ದಾಟುತ್ತಂತೆ ಅದೆಂಗೆ ಇರ್ತಾರೋ!’ ಎಂದಚ್ಚರಿ ವ್ಯಕ್ತಪಡಿಸುತ್ತಿದ್ದ ಹಳೇ ಮೈಸೂರಿಗರಿಗೂ ಈಗ ನಲವತ್ತು ಡಿಗ್ರಿ ನೋಡುವ ಸಂಭ್ರಮ ಹತ್ತಿರದಲ್ಲೇ ಇದೆ ಎಂಬ ಭಾವನೆ ಬರುತ್ತಿದೆ. ಇನ್ನು ಏಪ್ರಿಲ್ ಮೇ ತಿಂಗಳಿನಲ್ಲಿ ನಲವತ್ತು ನೋಡುತ್ತಿದ್ದ ಉತ್ತರ ಕರ್ನಾಟಕದಲ್ಲಿ ಫೆಬ್ರವರಿ ತಿಂಗಳಲ್ಲೇ ನಲವತ್ತೊಂದು ನಲವತ್ತೆರಡು ನೋಡುವ ಕರ್ಮ ಎದುರಾಗಿದೆ. ಶಿವರಾತ್ರಿವರ್ಗೂ ಚಳಿ ಇರುತ್ತೆ ಅನ್ನೋ ನಂಬಿಕೆ ಸುಳ್ಳಾಗಿಬಿಟ್ಟಿದೆ ಈ ವರ್ಷ. ಈ ರೀತಿಯ ಹವಾಮಾನ ವೈಪರೀತ್ಯಗಳು ಕೂಡ ಪ್ರಕೃತಿಯ ನಿಗೂಡ ನೀತಿ ನಿಯಮಗಳ ಅನುಸಾರವಾಗಿಯೇ ಇರುತ್ತದೆ ಎನ್ನುವುದು ಹೌದಾದರೂ ಮನುಷ್ಯ ತನ್ನ ಪ್ರತಿ ಹೆಜ್ಜೆಯಲ್ಲೂ ಪ್ರಕೃತಿಯ ಮೇಲೆ ನಡೆಸುತ್ತಿರುವ ಅನಾಚಾರಗಳು ಈ ಹವಾಮಾನ ವೈಪರೀತ್ಯಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದ್ದಾನೆ. ಏನೇ ಆದ್ರೂ ಪ್ರಕೃತಿಗೆ ತನ್ನದೇ ಒಡಲ ಕುಡಿಯಾದ ಮನುಷ್ಯನ ಬಗೆಗೂ ಒಂದಷ್ಟು ಪ್ರೀತಿ, ಕನಿಕರ, ಅನುಕಂಪವಿದ್ದೇ ಇದೆ. ಆ ಅನುಕಂಪವನ್ನೂ ದುರಹಂಕಾರದಿಂದ ಕಡೆಗಣಿಸುವಷ್ಟು ನಾವು ನೀಚರಾಗಿಬಿಟ್ಟಿದ್ದೇವೆ ಎನ್ನುವುದಕ್ಕೆ ಸಾಕ್ಷಿಯಾಗಿ ದಾವಣಗೆರೆಯ ಜಗಳೂರು ತಾಲ್ಲೂಕಿನ ದೊಣೆಹಳ್ಳಿಯ ಕಲ್ಲು ಕ್ವಾರಿಯ ಉದಾಹರಣೆಯಿದೆ.

ಒಂದು ರೌಂಡು ಭೂಮಿ ಮೇಲಿನ ನೀರನ್ನೆಲ್ಲ ಮಲಿನಗೊಳಿಸಿ, ಉಪಯೋಗಿಸಲು ಯೋಗ್ಯವಾಗದಂತೆ ಮಾಡಿ, ಖಾಲಿಮಾಡಿ ಅಂತರ್ಜಾಲಕ್ಕೆ ಕೈ ಹಾಕಿ ಬಹಳಷ್ಟು ದಶಕಗಳೇ ಕಳೆದುಹೋದವು. ನೂರಡಿಯಲ್ಲಿ ನೀರು ದೊರಕುತ್ತಿದ್ದ ನದಿ ಪಾತ್ರಗಳಲ್ಲೂ ಈಗ ಸಾವಿರ ಅಡಿಯವರೆಗೆ ಕೊರೆಸಬೇಕಾದ ಅನಿವಾರ್ಯತೆ. ಸಾವಿರ ಅಡಿ ಕೊರಸಿದ ಮಾತ್ರಕ್ಕೇ ನೀರು ಸಿಕ್ಕೇಬಿಡುತ್ತದೆನ್ನುವ ಗ್ಯಾರಂಟಿಯೇನಿಲ್ಲ. ಒಂದಾದ ಮೇಲೊಂದು ಬೋರ್ ವೆಲ್ ಕೊರೆಸಿ ಕೊರೆಸಿ ಸಾಲ ಹೆಚ್ಚಾಗಿ ಆರಂಭ ತೊರೆದು ಬೆಂಗಳೂರು ಸೇರಿರುವವರ ಸಂಖೈ ಕಡಿಮೆಯೇನಲ್ಲ. ಭೂಮಿ ಮೇಲೆ ಭೂಮಿ ಕೆಳಗೆ ಮನುಷ್ಯನಿಂದ ಇಷ್ಟೆಲ್ಲ ತೊಂದರೆ ಅನುಭವಿಸಿದ ನೀರಿಗೂ ಈ ಬಿಸಿಲಿನ ಝಳಕ್ಕೆ ಮನುಷ್ಯ ಮತ್ತು ಇನ್ನಿತರೆ ಪ್ರಾಣಿಗಳು ಅನುಭವಿಸುತ್ತಿರುವ ಕಷ್ಟಗಳನ್ನು ನೋಡಿ ಅನುಕಂಪ ಮೂಡಿರಬೇಕು. ಕೊಳವೆ ಬಾವಿಗಳ ಬಾಯಿಗೆ ಸಿಗದೇ ತಪ್ಪಿಸಿಕೊಂಡು ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಎಂಬ ಊರಿನಲ್ಲಿ ನವ ಭಾರತ ಬಿಲ್ಡಿಂಗ್ ಕಂಪನಿಯವರ ಕಲ್ಲು ಕ್ವಾರಿಯ ಹೊಂಡದ ಸಂದಿಯಲ್ಲಿ ಆಕಾಶ ನೋಡಿತು ನೀರು! ನೋಡನೋಡುತ್ತಿದ್ದಂತೆಯೇ ಇಡೀ ಕಲ್ಲು ಕ್ವಾರಿಯಲ್ಲಿ ಬೇಸಿಗೆಯಿಡೀ ಸುತ್ತಮುತ್ತಲಿನ ಹಳ್ಳಿಗಳ ಜನ – ಜಾನುವಾರುಗಳಿಗೆಲ್ಲ ಪೂರೈಸಲು ಸಾಕಾಗುವಷ್ಟು ನೀರು ತುಂಬಿಕೊಂಡಿಬಿಟ್ಟಿತು. ಊರಿನ ಜನರಿಗೆಲ್ಲ ಸಂತಸ, ಆದರೆ ಈ ಸಂತಸ ಎಲ್ಲರಲ್ಲೂ ಕಾಣಲಿಲ್ಲ.

ಕಲ್ಲು ಕ್ವಾರಿಯ ಮೇಲಿನ ಅಧಿಕಾರವಿದ್ದಿದ್ದು ಖಾಸಗಿ ಕಂಪನಿಗೆ. ಕಾನೂನಿನ ಪ್ರಕಾರ ಅದು ಅವರ ಜಾಗ, ಅವರ ಜಾಗದಲ್ಲಿನ ನೀರನ್ನು ಅವರು ಏನು ಬೇಕಾದರೂ ಮಾಡಬಹುದು. ಸುತ್ತಮುತ್ತಲಿನ ಊರಿನವರಿಗೆಲ್ಲ ನೀರು ಕೊಟ್ಟು ಕಂಪನಿಯವರಿಗೇನಾಬೇಕಿತ್ತು? ದೊಡ್ಡ ದೊಡ್ಡ ಮೋಟಾರು ಪಂಪುಗಳನ್ನು ತರಿಸಿ ಕಲ್ಲು ಕ್ವಾರಿಯ ಹೊಂಡದಲ್ಲಿ ತುಂಬಿದ ಸಿಹಿ ನೀರನ್ನು ರಸ್ತೆಗೆ ಹರಿಸಲಾರಂಭಿಸಿದರು. ಇದು ಸಾರ್ವಜನಿಕ ಆಸ್ತಿ ಎಂದು ಘೋಷಿಸಿ, ಆ ಕಂಪನಿಗೆ ಒಂದಷ್ಟು ಪರಿಹಾರವನ್ನೂ ಕೊಟ್ಟು ನೀರು ಹೊಂಡವನ್ನು ರಕ್ಷಿಸಬೇಕಾದ ಆಡಳಿತ ಯಂತ್ರ ಕೂಡ ಕಲ್ಲು ಕ್ವಾರಿಯ ‘ಒಡೆಯರ’ ನಿರ್ಧಾರಗಳಿಗೇ ಮಣೆ ಹಾಕಿತು. ಸಾವಿರ ಸಾವಿರ ನೀರು ರಸ್ತೆಯ ಮೇಲೆ ಹರಿಯಲಾರಂಭಿಸಿತು. ಪ್ರಕೃತಿಯೇ ಕುಡೀರಪ್ಪ ಅಂತ ಹೊರಹಾಕಿದ ನೀರನ್ನು ಮತ್ತೆ ಅಂತರ್ಜಲಕ್ಕೇ ಕಳಿಸುವ ಹುನ್ನಾರ! ಬೇಸತ್ತ ಅಲ್ಲಿನ ಜನತೆ ಹೊಂಡಕ್ಕೆ ಮುತ್ತಿಗ ಹಾಕಿ ಪಂಪುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದಿವತ್ತಿನ ಪ್ರಜಾವಾಣಿ ವರದಿ ಹೇಳುತ್ತಿದೆ. ಈ ಮುತ್ತಿಗೆ ಕಾನೂನಿನ ಬೆಂಬಲ ಸದ್ಯಕ್ಕಿಲ್ಲವೇನೋ, ಆದರೆ ಆಡಳಿತಾಧಿಕಾರಿಗಳು ಮನಸ್ಸು ಮಾಡಿದರೆ ದೊಣೆಹಳ್ಳಿ ಮತ್ತು ಸುತ್ತಮುತ್ತಲಿನ ಊರುಗಳ ನೀರಿನ ದಾಹ ಕಡೇ ಪಕ್ಷ ಈ ವರ್ಷವಾದರೂ ನೀಗುತ್ತದೆಯಲ್ಲವೇ? ದುರಹಂಕಾರಿ ಮನುಷ್ಯ ಏನು ಮಾಡುತ್ತಾನೋ ಕಾದು ನೋಡೋಣ.
Update: ಕಲ್ಲುಕ್ವಾರಿಯ ಹೊಂಡದಲ್ಲಿನ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ದಾವಣಗೆರೆಯ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

No comments:

Post a Comment