Mar 8, 2016

ಮುಖ್ಯಮಂತ್ರಿ ಸಾಂತ್ವನ 'ಹರೀಶ್' ಯೋಜನೆ.

ಕರ್ನಾಟಕ ಸರಕಾರ ಆರೋಗ್ಯ ಕ್ಷೇತ್ರಗಳಲ್ಲಿ ಜಾರಿ ಮಾಡಿದ ಮತ್ತೊಂದು ಉತ್ತಮ ಯೋಜನೆಯಿದು. ತಿಂಗಳುಗಳ ಕೆಳಗೆ ಬೈಕ್ ಆ್ಯಂಬುಲೆನ್ಸನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿತ್ತು. ಟ್ರಾಫಿಕ್ಕಿನಲ್ಲೇ ಆ್ಯಂಬುಲೆನ್ಸ್ ಸಿಕ್ಕಿಕೊಳ್ಳುವ ಸಂದರ್ಭದಲ್ಲಿ ತುರ್ತು ಪ್ರಥಮ ಚಿಕಿತ್ಸೆಯನ್ನು ನೀಡಲು ಬೈಕ್ ಆ್ಯಂಬುಲೆನ್ಸ್ ಸಹಕಾರಿಯಾಗುತ್ತಿತ್ತು. ಈಗ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ತ್ವರಿತವಾಗಿ ಉಚಿತವಾಗಿ ಸಿಗಲು ಈ ಯೋಜನೆ ಸಹಕಾರಿಯಾಗಲಿದೆ. ಯಾವುದೇ ಅಪಘಾತದಲ್ಲೂ ತೀರ್ವವಾಗಿ ಗಾಯಗೊಂಡಿದ್ದಾಗ ಮೊದಲ ಕೆಲ ಘಂಟೆಗಳಲ್ಲಿ ಸಿಗುವ ಚಿಕಿತ್ಸೆಗೆ ಪ್ರಾಮುಖ್ಯತೆ ಹೆಚ್ಚು. 108 ಆ್ಯಂಬುಲೆನ್ಸುಗಳು ಅತ್ಯಂತ ತ್ವರಿತವಾಗಿ ಪೆಟ್ಟು ಬಿದ್ದವರನ್ನು ಆಸ್ಪತ್ರೆಗೆ ದಾಖಲಿಸಲು ಸಹಕಾರ ನೀಡುತ್ತಿವೆ. ಕೆಲವೊಮ್ಮೆ ಆಸ್ಪತ್ರೆಗಳಲ್ಲಿ ಹಣದ ಕೊರತೆಯಿಂದ ಚಿಕಿತ್ಸೆ ತಡವಾಗಿಬಿಡುತ್ತದೆ. ಸರಕಾರದ ಈ ಹೊಸ ಯೋಜನೆ ಅಪಘಾತದಲ್ಲಿ ಗಾಯಗೊಂಡವರಿಗೆ ಇಪ್ಪತ್ತೈದು ಸಾವಿರ ರುಪಾಯಿಗಳಷ್ಟು ಸಹಾಯಧನ ನೀಡುವುದಾಗಿ ಘೋಷಿಸಿದೆ. ಸರಕಾರೀ ಆಸ್ಪತ್ರೆಗಳ ಮೂಲಭೂತ ಸೌಲಭ್ಯಗಳನ್ನು ಉತ್ತಮಗೊಳಿಸುವುದು ಈ ಯೋಜನೆಯಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಪ್ರಯೋಜನಕಾರಿ. ಸರಕಾರದ ಯೋಜನೆಯಾಗಷ್ಟೇ ಹೆಸರಾಗಿಬಿಡಬಹುದಾಗಿದ್ದ ಈ ಮುಖ್ಯಮಂತ್ರಿ ಸಾಂತ್ವನ ಯೋಜನೆಗೆ ಒಂದು ಮಾನವೀಯತೆಯ ಸ್ಪರ್ಶ ಸಿಕ್ಕಿದ್ದು 'ಹರೀಶ್' ಎಂಬ ಯುವಕನಿಂದ. ಈ ಯೋಜನೆಯ ಪೂರ್ಣ ಹೆಸರು "ಮುಖ್ಯಮಂತ್ರಿ ಸಾಂತ್ವನ 'ಹರೀಶ್' ಯೋಜನೆ".

ನಿಮ್ಮಲ್ಲಿ ಬಹಳಷ್ಟು ಜನರು ಆ ವೀಡಿಯೋ ನೋಡಿರುತ್ತೀರಿ. ಲಾರಿಯೊಂದು ಹರಿದ ಪರಿಣಾಮ ಹರೀಶ್ ಎಂಬ ಯುವಕನ ದೇಹ  ಎರಡು ತುಂಡಾಗಿತ್ತು. ದೇಹ ತುಂಡಾದರೂ, ರಕ್ತ ಹರಿಯುತ್ತಿದ್ದರೂ ಹರೀಶ ಇನ್ನೂ ಜೀವಂತವಾಗಿದ್ದ. ಕೈಯಾಡಿಸುತ್ತಿದ್ದ, ಮಾತನಾಡುತ್ತಿದ್ದ. ಕ್ಷಣದ ನಂತರ ತನ್ನ ದೇಹ ತುಂಡಾಗಿರುವುದು ಗಮನಕ್ಕೆ ಬಂದಾಗ ತಲೆ ತಲೆ ಚೆಚ್ಚಿಕೊಳ್ಳುತ್ತಿದ್ದ, ನೀರು ಕೇಳುತ್ತಿದ್ದ. ಹೈವೇಯಲ್ಲಿ ವಾಹನಗಳು ತಮ್ಮ ಪಾಡಿಗೆ ತಾವು ಹೋಗುತ್ತಿದ್ದರು. ವೀಡಿಯೋ ಮಾಡುತ್ತಿದ್ದ ಜನರು ದೂರದಲ್ಲೇ ನಿಂತಿದ್ದರು; ಯಾರೊಬ್ಬರೂ ಅವನಿಗೆ ನೀರು ನೀಡಲಿಲ್ಲ. ಇಂತಹ ಭೀಭತ್ಸ ದೃಶ್ಯ ನೋಡಿದ ಜನರು ಗಾಬರಿಯಾಗಿ ದೂರದಲ್ಲೇ ನಿಂತುಬಿಟ್ಟರು ಎಂದೇ ಅಂದುಕೊಳ್ಳೋಣ. ಪುಣ್ಯಕ್ಕೆ ಒಬ್ಬರ್ಯಾರೋ ಆ್ಯಂಬುಲೆನ್ಸಿಗೆ ಫೋನಾಯಿಸಿದ್ದರು. ಆ್ಯಂಬುಲೆನ್ಸ್ ಶೀಘ್ರದಲ್ಲೇ ಬಂತು. ಜನರ ಮಾನವೀಯತೆ ಎಷ್ಟರಮಟ್ಟಿಗೆ ಕುಲಗೆಟ್ಟುಹೋಗಿತ್ತೆಂದರೆ ಕೊನೆಗೆ ಆ್ಯಂಬುಲೆನ್ಸ್ ಚಾಲಕ ಗೋಗರೆದರೂ ಹೆಚ್ಚಿನವರು ಹರೀಶನನ್ನು ಮೇಲೆತ್ತಿ ಆ್ಯಂಬುಲೆನ್ಸಿಗೆ ಹಾಕಲು ಮುಂದೆ ಬರಲಿಲ್ಲ. ಮಾನವೀಯತೆಯ ಮೇಲಿನ ನಂಬುಗೆಯನ್ನೇ ಅಲುಗಾಡಿಸಬಹುದಾದ ಇಂತಹ ಘಟನೆಯಲ್ಲಿ ಮಾನವೀಯತೆಯನ್ನು ಸೃಜಿಸಿದ್ದು ಕಾಲುಗಳೆರಡನ್ನೂ ಕಳೆದುಕೊಂಡು ಲೀಟರುಗಟ್ಟಲೆ ರಕ್ತವನ್ನು ಕಳೆದುಕೊಂಡು ಒದ್ದಾಡುತ್ತಿದ್ದ ಹರೀಶ. ಸಾಯುವುದು ಗೊತ್ತಾಗಿಬಿಟ್ಟಿತ್ತವನಿಗೆ. ಸಾಯುವ ಮುಂಚೆ ನನ್ನ ದೇಹದ ಅಂಗಾಂಗಗಳನ್ನು ಉಪಯೋಗವಾಗುವವರಿಗೆ ದಾನವಾಗಿ ಕೊಟ್ಟುಬಿಡಿ ಎಂದು ಹೇಳಿ ಸತ್ತುಹೋದ. ಲಾರಿ ಹರಿದಿದ್ದ ಪರಿಣಾಮವಾಗಿ ಉಳಿದ ಅಂಗಗಳ್ಯಾವುವೂ ಉಪಯೋಗಿಸುವ ಪರಿಸ್ಥಿತಿಯಿರಲಿಲ್ಲ. ಕೊನೆಗಾತನ ಎರಡು ಕಣ್ಣುಗಳನ್ನು ದಾನವಾಗಿ ನೀಡಲಾಯಿತು. ನಂತರದ ದಿನದಲ್ಲಿ ಹರೀಶನ ಊರಿನವರೆಲ್ಲರೂ ಕಣ್ಣುದಾನ ಮಾಡಲು ಮುಂದಾದ ಬಗ್ಗೆ ವರದಿಯಾಯಿತು. ಮುಖ್ಯಮಂತ್ರಿ ಸಾಂತ್ವನ ಯೋಜನೆ ಎಂದಷ್ಟೇ ಇದ್ದ ಹೆಸರಿಗೆ 'ಹರೀಶನ' ಹೆಸರು ಸೇರಿಸಲು ಸಲಹೆ ನೀಡಿದ್ದು ಆರೋಗ್ಯ ಸಚಿವ ಯು.ಟಿ.ಖಾದರ್. ಸಾವು ಕದ ತಟ್ಟುವಾಗಲೂ ಅಂಗ ದಾನದ ಬಗ್ಗೆ ಯೋಚಿಸಿದ 'ಹರೀಶ'ನ ಹೆಸರನ್ನು ಇಂತಹ ಯೋಜನೆಗೆ ಇಟ್ಟಿರುವುದು ಅತ್ಯಂತ ಸೂಕ್ತವಾದ ನಿರ್ಧಾರ. 

ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯ ಹೆಸರು ಕೇಳಿದಾಗಲೆಲ್ಲ ಹರೀಶನೆಂಬ ಯುವಕನ ಕೊನೆಯ ಕ್ಷಣಗಳಲ್ಲಿ ನಮ್ಮ ಜನ ತೋರಿದ ಅಮಾನವೀಯತೆಯ ನೆನಪೂ ಆಗಲಿ, ನಾಳೆ ದಿನ ನಮ್ಮ ಕಣ್ಣ ಮುಂದೆಯೇ ಯಾರೋ ಅಪಘಾತದಲ್ಲಿ ನೋವುಣ್ಣುತ್ತಿರುವಾಗ ಕೊನೆ ಪಕ್ಷ ಒಂದು ಗುಟುಕು ನೀರನ್ನು ಕೊಡುವ ಮಾನವೀಯತೆಯನ್ನಾದರೂ ನಮ್ಮಲ್ಲಿ ಮೂಡಿಸಲಿ........

No comments:

Post a Comment