Mar 10, 2016

ಬ್ರಾಹ್ಮಣ್ಯವ್ಯಾಧಿಗಳ ಸಾಂಸ್ಕೃತಿಕ ರಾಜಕಾರಣ

ಡಾ. ಅಶೋಕ್ ಕೆ ಆರ್
10/03/2016
ಬ್ರಾಹ್ಮಣ್ಯವ್ಯಾಧಿಗಳಿಂದ ನೀವು ಏನನ್ನಾದರೂ ಕಲಿಯಬೇಕೆಂದರೆ ಅದು ಅವರು ನಡೆಸುವ ಸಾಂಸ್ಕೃತಿಕ ರಾಜಕಾರಣವನ್ನು. ಕ್ರಿಮಿನಲ್ಲುಗಳನ್ನು ಹಿಡಿಯಲು ಕ್ರಿಮಿನಲ್ಲಿನಂತೆಯೇ ಯೋಚಿಸಬೇಕಂತೆ. ಬ್ರಾಹ್ಮಣ್ಯದ ಕುಟಿಲ ಮಾರ್ಗವನ್ನೆದುರಿಸಲು ಕುಟಿಲ ಮಾರ್ಗಗಳನ್ನೇ ಹಿಡಿಯುವ ಅನಿವಾರ್ಯತೆ ಖಂಡಿತವಾಗಿಯೂ ಇದೆ. ಇದನ್ನೆಲ್ಲ ಹೇಳುವುದಕ್ಕೆ ಕಾರಣ ನಿನ್ನೆ ದಿನ ಬೆಂಗಳೂರಿನ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನೋಡಿದ ಯಕ್ಷಗಾನ ಪ್ರಸಂಗದ ಕೆಲವು ಮಾತುಗಳು.

ಮನೆಗೆ ಕೂಗಳತೆಯಲ್ಲೇ ಇರುವ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಒಮ್ಮೆಯೂ ಕಾಲಿರಿಸಿರಲಿಲ್ಲ. ನಿನ್ನೆ ದಿನ ದೇವಸ್ಥಾನದಿಂದ ಮೈಕಿನ ದನಿ ಜೋರಾಗಿಯೇ ಕೇಳಿಬರುತ್ತಿತ್ತು. ಏನೋ ಕಾರ್ಯಕ್ರಮವಿರಬೇಕು ನೋಡಿ ಬರೋಣವೆಂದು ದೇವಸ್ಥಾನದ ಕಡೆಗೆ ಹೆಜ್ಜೆ ಹಾಕಿದರೆ ಅರೆರೆ! ಯಕ್ಷಗಾನ ನಡೆಯುತ್ತಿದೆ. ಸುಳ್ಯದಲ್ಲಿ ಕೆಲ ಸಮಯ ಕೆಲಸದಲ್ಲಿದ್ದಾಗ ಯಕ್ಷಗಾನವನ್ನು ನೋಡಿದ್ದೆ. ಟೆನ್ ಬೈ ಟೆನ್ ಸ್ಟೇಜಿನಲ್ಲಿ ನಡೆಯುವ ಯಕ್ಷಗಾನದಾಟ ಆಕರ್ಷಣೀಯ. ಹೊಸದಾಗಿ ನೋಡುವವರಿಗೆ ಶುರುವಿನಲ್ಲಿ ಒಂದಷ್ಟು ಬೇಸರವಾಗಬಹುದಾದರೂ ನೋಡುತ್ತ ನೋಡುತ್ತ ಕತೆಯೊಳಗೆ, ಭಾಗವತರ ದನಿಯೊಳಗೆ, ರಂಗದ ಮೇಲಿನ ನಟ – ನಟಿಯರ ಕುಣಿತದೊಳಗೆ ಕಳೆದುಹೋಗುವುದು ಗ್ಯಾರಂಟಿ. ಇಂತಹ ಯಕ್ಷಗಾನ ಮೂಡಿಸುವ ಅಸಹ್ಯವೆಂದರೆ ಸನಾತನ ಧರ್ಮ ರಕ್ಷಣೆಯ ಹೆಸರಿನಲ್ಲಿ ಪಾತ್ರಧಾರಿಗಳ ಕೈಲಿ ವರ್ಣಾಶ್ರಮ, ಜಾತಿ ವ್ಯವಸ್ಥೆಯನ್ನು ಬಲಪಡಿಸುವಂತಹ ಸಂಭಾಷಣೆಗಳನ್ನು ಹೇಳಿಸುವುದು. 

ನಿನ್ನೆ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಡೆದ ಯಕ್ಷಗಾನದ ಪ್ರಾರಂಭದಲ್ಲಿ ನಾರದ ಮುನಿ ಮತ್ತು ಹರಿಯ ನಡುವೆ ನಡೆವ ಮಾತುಕತೆಯಲ್ಲಿ ಹೇಗೆ ಭೂಮಿ ಮೇಲಿನ ಜನರು ವರ್ಣಾಶ್ರಮ ವ್ಯವಸ್ಥೆಯನ್ನು ಪಾಲಿಸದೆ ದುರುಳರಾಗಿದ್ದಾರೆ ಎನ್ನುವುದನ್ನು ವರ್ಣಿಸುವುದರಿಂದಲೇ ಪ್ರಾರಂಭವಾಯಿತು. ಮೊದಲು ನಾರದ ಮುನಿಯ ಪಾತ್ರಧಾರಿ ಅದನ್ನು ಹರಿಗೆ ತಿಳಿಸಿದರೆ ಮುಂದಿನ ದೃಶ್ಯದಲ್ಲಿ ಹರಿಯ ಬಾಯಿಂದ ವರ್ಣಾಶ್ರಮವನ್ನು ಹೇಗೆ ನಾಲ್ಕೂ ವರ್ಣದ ಜನರು ಹಾಳುಗೆಡವಿದ್ದಾರೆ ಎಂದು ವರ್ಣಿಸಲಾಯಿತು. ಹೆಚ್ಚಿನ ಆರೋಪ ಕೇಳಿಬಂದಿದ್ದು ಶೂದ್ರರ ಮೇಲೆಯೇ ಬಿಡಿ! ಹೋಮ ಯಜ್ಞ ನಡೆಸಿ ಹವಿಸ್ಸನ್ನು ಸಮರ್ಪಿಸಬೇಕಾದ ಬ್ರಾಹ್ಮಣರು ಆ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ, ಭಕ್ತಾಧಿಗಳು ಕೊಡುವ ದುಡ್ಡಿನ ಮೇಲೆಯೇ ಅವರ ಆಸಕ್ತಿಯೆಲ್ಲ; ಇನ್ನು ದೇಶ ರಕ್ಷಿಸಬೇಕಾದ ಕ್ಷತ್ರಿಯರು ತಮ್ಮ ರಕ್ಷಣೆ ತಾವು ಮಾಡಿಕೊಳ್ಳುತ್ತ ಕಾಲ ತಳ್ಳುತ್ತಿದ್ದಾರೆ; ವ್ಯಾಪಾರ ಮಾಡಬೇಕಾದ ವೈಶ್ಯರು ಹದಿನೇಳನೇ ಒಂದಂಶದಷ್ಟನ್ನು ತಾವು ಇಟ್ಟುಕೊಂಡು ಉಳಿದಿದ್ದನ್ನು ಭಂಡಾರಕ್ಕೆ ಒಪ್ಪಿಸಬೇಕಿತ್ತು, ಆದರೆ ಎಲ್ಲವನ್ನ ತಾವೇ ಇಟ್ಟುಕೊಳ್ಳುತ್ತಿದ್ದಾರೆ; ಇನ್ನು ಶೂದ್ರರು ಮೇಲಿನ ಮೂರು ಪಂಗಡಗಳ ಸೇವೆ ಮಾಡಬೇಕಿತ್ತು, ಕೃಷಿ ನಡೆಸಿ ಜೀವನ ನಡೆಸಬೇಕಿತ್ತು ಆದರವರು ಅದನ್ನು ಮಾಡದೆ ಅಹಂಕಾರದಿಂದ ಬದುಕುತ್ತಿದ್ದಾರೆ ಎನ್ನುವಂತಹ ಮಾತುಗಳನ್ನು ಪಾತ್ರಧಾರಿಗಳಿಂದ ಉದುರಿಸಿ ನೋಡುಗರಲ್ಲಿ ವರ್ಣಾಶ್ರಮ ಎಷ್ಟು ಶ್ರೇಷ್ಟವಾದದ್ದು ಎಂಬ ಭ್ರಮೆ ಹುಟ್ಟಿಸುವ ಕೆಲಸ ಮಾಡುವುದೇ ಬ್ರಾಹ್ಮಣ್ಯದ ಸಾಂಸ್ಕ್ರತಿಕ ರಾಜಕಾರಣ. ಕೆಲವೇ ಕಡೆ ಇಂತಹ ಮಾತುಗಳನ್ನು ಆಡಿ ಇನ್ನುಳಿದ ಭಾಗದಲ್ಲೆಲ್ಲ ಪೌರಾಣಿಕ ಕತೆಯನ್ನು ಅಚ್ಚುಕಟ್ಟಾಗ ನಿರ್ವಹಿಸಿಬಿಟ್ಟು ಆ ಮಾತುಗಳು ಜನರ ಮನದಲ್ಲುಳಿಯುವಂತೆ, ಆದರದವರಲ್ಲಿ ವಿರೋಧಿಸಬೇಕೆನ್ನುವ ಕಿಚ್ಚು ಮೂಡಿಸದಂತೆ ನೋಡಿಕೊಳ್ಳುವಲ್ಲಿ ವರ್ಣಾಶ್ರಮದ, ಬ್ರಾಹ್ಮಣ್ಯದ ವಾದಿಗಳು ಯಶಸ್ಸು ಕಾಣುತ್ತಾರೆ. 

ಯಕ್ಷಗಾನದಲ್ಲಿ ಇದೊಂದು ಅಪರೂಪದ ಘಟನೆಯೇನಲ್ಲ. ನಿನ್ನೆಯ ನಾಟಕದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರು ತಮ್ಮ ಕೆಲಸವನ್ನೇ ಮಾಡುತ್ತ ‘ಚೂರು ಹಾದಿ ತಪ್ಪಿದ್ದಾರೆ’ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದರೆ ಕೃಷಿ ಬಿಟ್ಟ, ಅದಕ್ಕೂ ಮಿಗಿಲಾಗಿ ಬ್ರಾಹ್ಮಣ – ಕ್ಷತ್ರಿಯ – ವೈಶ್ಯರ ಸೇವೆ ಮಾಡುವುದನ್ನು ಮರೆತ ಶೂದ್ರರದ್ದು ಘೋರ ಅಪರಾಧದಂತೆ ಚಿತ್ರಿಸಲಾಗುತ್ತದೆ. ವರ್ಣಾಶ್ರಮದೊಳಗೂ ಬಿಟ್ಟುಕೊಳ್ಳದ ‘ದಲಿತ – ಅಸ್ಪೃಶ್ಯ’ರ ಬಗ್ಗೆ ಯಕ್ಷಗಾನದಲ್ಲಿ ಕೀಳಾಗಿ ಮಾತನಾಡುವುದು ಕೂಡ ಬಹಳಷ್ಟು ನಡೆಯುತ್ತದೆ. ಸುಳ್ಯದಲ್ಲಿ ನಡೆದ ನಾಟಕಗಳಲ್ಲಿ ಅದನ್ನು ಕೇಳಿಸಿಕೊಂಡಿದ್ದೆ. ಯಕ್ಷಗಾನ ಎಷ್ಟೇ ಉತ್ತಾನು ಉತ್ತಮ ಕಲೆಯಾದರೂ, ಯಕ್ಷಗಾನ ಸುಳ್ಯದ ದಿನಗಳನ್ನು ನನಗೆ ನೆನಪಿಸಿದರೂ ಕೊನೆಗೆ ಈ ಮೇಲು ಕೀಳಿನ ವ್ಯವಸ್ಥೆಯನ್ನು ಉಳಿಸುವ ಸಾಂಸ್ಕೃತಿಕ ರಾಜಕಾರಣದ ಭಾಗವಾಗಿ ಕಾರ್ಯನಿರ್ವಹಿಸುತ್ತಿರುವ ಯಕ್ಷಗಾನವೆಂದರೆ ನನಗೊಂದಷ್ಟು ಅಸಹ್ಯ ಮೂಡಿಬಿಡುವುದು ಸುಳ್ಳಲ್ಲ.

3 comments:

  1. 1
    ಅದು ವಿದ್ಯುದ್ದೀಪಾಲಂಕೃತ ರಂಗಮಂಟಪ. ಚೆಂಡೆಯ ಸದ್ದಿನ ಜೊತೆಗೆ ‘ಚಾಣಕ್ಯ’ನ ಪ್ರವೇಶವಾಗುತ್ತದೆ. ನಂದರಾಜನಿಂದ ಅವಮಾನಿತನಾದ ಚಾಣಕ್ಯ ಸಿಟ್ಟಿನಿಂದ ಧಗಧಗನೆ ಉರಿಯುತ್ತಿದ್ದಾನೆ. ‘ದಿಗಿಣ’ ಮುಗಿದಾಕ್ಷಣ ಚಾಣಕ್ಯ ಮಾತನಾಡತೊಡಗುತ್ತಾನೆ. ‘‘ನಂದಾರಾಜನನ್ನು ಪತನಗೊಳಿಸಿ, ಭರತ ಖಂಡದಲ್ಲಿ ಕುಸಿದು ಬಿದ್ದಿರುವ ವರ್ಣ ವ್ಯವಸ್ಥೆಯನ್ನು ಪುನಃ ಸ್ಥಾಪಿಸುವುದೇ ನನ್ನ ಮುಂದಿನ ಗುರಿ...’’ ಪ್ರಸಂಗದ ಹೆಸರು ‘ಚಾಣಕ್ಯ’. ಸಾಲಿಗ್ರಾಮಾದಿ ಮೇಳಗಳು ಈ ಪ್ರಸಂಗವನ್ನು ಆಡಿಸಿವೆ.
    2
    ಅದು ಹಾಸ್ಯ ದೃಶ್ಯ! ತಲೆಗೊಂದು ಟೊಪ್ಪಿ ಇಟ್ಟು, ಹೋತದ ಗಡ್ಡವನ್ನು ಹೊಂದಿದ ಮುಸ್ಲಿಂ ಸೈನಿಕನೊಬ್ಬ ಪ್ರವೇಶವಾಗುತ್ತಾನೆ. ಅವನ ಮುಂದೆ ಕುಮಾರರಾಮ ಬಂದು ನಿಲ್ಲುತ್ತಾನೆ ‘‘ನಿನಗೆಷ್ಟು ಹೆಂಡತಿಯರು...’’ ಕುಮಾರರಾಮ ಕೇಳುತ್ತಾನೆ. ಸೈನಿಕ ಲೆಕ್ಕಮಾಡಲು ಹೋಗುತ್ತಾನೆ. ಲೆಕ್ಕ ತಪ್ಪುತ್ತದೆ. ಕುಮಾರರಾಮ ಕೇಳುತ್ತಾನೆ ‘‘ಮನೆಯಲ್ಲಿ ಅಕ್ಕ ತಂಗಿಯರಾರು ಇಲ್ಲವೇ?’’ ‘‘ಅಕ್ಕ ತಂಗಿಯರಾರು ಇಲ್ಲ. ಆದರೆ ಚಂದದ ಮಗಳುಂಟು...’’ ಎನ್ನುತ್ತಾ ಮುಸ್ಲಿಂ ಸೈನಿಕ ನಾಲಗೆ ಚಪ್ಪರಿಸುತ್ತಾನೆ. ಕುಮಾರರಾಮ ತಿರಸ್ಕಾರದಿಂದ ಹೇಳುತ್ತಾನೆ ‘‘ಹೂಂ... ನಿಮ್ಮ ಜಾತಿಯೇ ಹಾಗೆ. ನಿಮಗೆ ತಾಯಿಯೂ ಆಗುತ್ತದೆ, ಮಗಳೂ ಆಗುತ್ತದೆ...’’ ಕುಮಾರರಾಮ ಕತೆಯನ್ನು ಹೊಂದಿರುವ ಈ ಪ್ರಸಂಗವನ್ನು ಪೆರ್ಡೂರಾದಿ ಮೇಳಗಳು ಆಡಿಸಿವೆ.

    ReplyDelete
    Replies
    1. ಒಂದು ಶತಮಾನದ ಹಿಂದೆ ಹೆಚ್ಚೂ ಕಡಿಮೆ ಸಂಪೂರ್ಣವಾಗಿ ಶೂದ್ರ ಕಲೆಯಾಗಿದ್ದ ಯಕ್ಷಗಾನಕ್ಕೆ ತುಂಬ ಸಮಯದ ನಂತರವಷ್ಟೇ “ಉತ್ತಮರ” ಪ್ರವೇಶವಾಯ್ತು ಆದರೂ ಕಳೆದ ಆರೇಳು ದಶಕಗಳ ವರೆಗೂ ಯಕ್ಷಗಾನ ಕಲಾವಿದರೆನ್ನು “ಉತ್ತಮರು” ಕೀಳಾಗಿಯೇ ಕಾಣುತ್ತಿದ್ದರು.
      ನಂತರದ ದಿನಗಳಲ್ಲಿ ಯಕ್ಷಗಾನದ ಕಲೆಗೆ ಮನಸೋತು ಶಿವರಾಮ ಕಾರಂತ. ದೇರಾಜೆ ಸೀತಾರಾಮಯ್ಯ ರಂತಹವರು ಅದರೆಡೆಗೆ ಆಕರ್ಷಿತರಾದರೂ ಸಹ ಯಕ್ಷಗಾನವು ಪ್ರತಿಪಾದಿಸುವ ವಿಚಾರಗಳನ್ನು ವಿರೋಧಿದರು. ಆದ್ದರಿಂದ ಕಾರಂತರು ಅದನ್ನು ಮಾತಿಲ್ಲದ ಬ್ಯಾಲೆಯನ್ನಾಗಿಸಲು ಪ್ರಯತ್ನಿಸದರೆ ದೇರಾಜೆಯವರು ಆದುನಿಕ ಸಂವೇದನೆಗಳನ್ನೊಳಗೊಂಡ ಯಕ್ಷನಾಟಕವನ್ನಾಗಿಸಲು ನೋಡಿದರು.
      ಶೂದ್ರ ಕಲೆಯಾಗಿದ್ದ ಯಕ್ಷಗಾನ ಕಳೆದ ಮೂರು ದಶಕಗಳಲ್ಲಿ ಅದರಲ್ಲೂ ಮುಖ್ಯವಾಗಿ ಮೇಳಗಳಂತೂ ವರ್ಣಾಶ್ರಮ ವ್ಯವಸ್ಥೆಯ ಸಮರ್ಥಕನಾಗಿ, ಕೋಮುವಾದಿಗಳ ಪ್ರಚಾರಕ್ಕೆ ಬಳಕೆಯಾಗುತ್ತಿದೆ. ಮೌಡ್ಯಗಳನ್ನೇ ಬಿತ್ತುತ್ತಿದೆ. ಒಂದು ಮೇಳವಂತೂ ಶೂದ್ರಕಲಾವಿದರಿಗೆ ಪ್ರವೇಶವನ್ನೇ ನಿರಾಕರಿಸಿತ್ತು.
      ಇವೆಲ್ಲವುಗಳನ್ನೂ ಮೀರಿ ನಿಂತಅನೇಕ ಜನಪರ ವಿಚಾರವಾದಿ ಯಕ್ಷಗಾನ ಕಲಾವಿದರು ಇಂದು ಸಾಕಷ್ಟಿದ್ದಾರೆ ಇವರೆಲ್ಲ ಕಲೆಯ ಉಳಿವಿನ ದೃಷ್ಟಿಯಿಂದ ಗಂಭೀರವಾಗಿ ಕಾರ್ಯಪ್ರವೃತ್ತರಾಗಬೇಕಷ್ಟೆ

      Delete
  2. http://gujariangadi.blogspot.com/2012/04/blog-post_30.html

    ReplyDelete