Mar 25, 2016

ಮೇಕಿಂಗ್ ಹಿಸ್ಟರಿ: ಮಧ್ಯವರ್ತಿ – ಖರೀದಿದಾರ ವರ್ಗದ ಉಗಮಕ್ಕಿದ್ದ ಸಾಮಾಜಿಕ ಸ್ಥಿತಿಗತಿ:- 2

making history ashok kr
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
25/03/2016
ಅಡಿಕೆ ಮತ್ತು ತಂಬಾಕು ವ್ಯಾಪಾರದಲ್ಲಿ ಮಧ್ಯವರ್ತಿ ವ್ಯಕ್ತಿತ್ವ ಬೆಳೆಸಿಕೊಳ್ಳದ ಕನ್ನಡಿಗ ವರ್ತಕರ ಏಕಸಾಮ್ಯವನ್ನು ಹಾಳು ಮಾಡಿದ ವಸಾಹತು ಶಕ್ತಿ ತನ್ನ ಮಧ್ಯವರ್ತಿಗಳನ್ನು ಬೆಳೆಸಿದ ರೀತಿಯನ್ನು ಸ್ಪಷ್ಟವಾಗಿ ಕಾಣಬಹುದು. 

ನರೇಂದ್ರ ಪಣಿ ಹೇಳುತ್ತಾರೆ: “ವರ್ತಕರಲ್ಲಿ ಮತ್ತಷ್ಟು ಅಸಹನೆ ಉಂಟಾಗಿತ್ತು; ಕಬ್ಬನ್ (ಬ್ರಿಟೀಷರ ನೇರ ಆಡಳಿತ ಜಾರಿಯಾದ ಮೇಲೆ ಮೈಸೂರು ರಾಜ್ಯದ ಕಮಿಷನರ್ ಕಬ್ಬನ್) ವರ್ತಕರು ಒಂದು ಮಿತಿಗಿಂತ ಮೇಲೆ ಬೆಳೆಯದಂತೆ ಮಾಡಿದ ಮೇಲೆ. ಇದರಿಂದ ತಂಬಾಕು ಮತ್ತು ಅಡಿಕೆ ವ್ಯಾಪಾರ ನಡೆಸಿಕೊಂಡು ಬಂದಿದ್ದ ಶ್ರೀಮಂತ ವರ್ತಕರ ಒಂದು ವರ್ಗದ ಪಾರಂಪರಿಕ ಏಕಸಾಮ್ಯತೆ ಮುರಿದುಬಿತ್ತು. ಬೆಂಗಳೂರು ಮತ್ತು ಸುತ್ತಮುತ್ತಲಿನ ತಂಬಾಕು ಏಕಸಾಮ್ಯತೆಯನ್ನು ಮುರಿಯಲು ಮೊದಲು ಕಟ್ಟಳೆ ವಿಧಿಸಿ ನಂತರ ಉತ್ತಮ ಗುಣಮಟ್ಟದ ವಿದೇಶಿ ತಂಬಾಕನ್ನು ಕಡಿಮೆ ಬೆಲೆಗೆ ಮಾರುಕಟ್ಟೆಗೆ ಪರಿಚಯಿಸಿ ಮತ್ತು ಒಂದು ಮಣ ತಂಬಾಕಿಗೆ ಮೂರುವರೆ ರುಪಾಯಿ ಸಾಯರ್ ತೆರಿಗೆಯನ್ನು ಮಾರಾಟವಾಗುವ ಎಲ್ಲಾ ತಂಬಾಕಿನ ಮೇಲೂ ವಿಧಿಸಿದರು.” (89) 

ಹೀಗೆ ಸ್ವತಂತ್ರವಾಗಿದ್ದ ಕನ್ನಡ ವರ್ತಕರನ್ನು ಬುಡಸಹಿತ ಕೀಳಲಾಯಿತು. ಮೊದಲ ಸಂಪುಟದಲ್ಲಿ ಬಣಜಿಗ ವರ್ತಕ ಸಮುದಾಯ ಉನ್ನತಿಯಿಂದ ಜಾರಿಬಿದ್ದಿದ್ದನ್ನು ನಾವು ನೋಡಿದ್ದೇವೆ. (90) ಮೂರನೇ ಸಂಪುಟದಲ್ಲಿ ಈ ಬೆಳವಣಿಗೆಗಳು ಕರ್ನಾಟಕದ ರಾಷ್ಟ್ರೀಯ ಪ್ರಶ್ನೆಯ ಮೇಲುಂಟು ಮಾಡಿದ ಪರಿಣಾಮಗಳನ್ನು ನೋಡೋಣ. ಸದ್ಯಕ್ಕೆ ಇದೇ ರೀತಿಯ ವಿದ್ಯಮಾನ ಬೇರೊಂದು ಪ್ರದೇಶದಲ್ಲಿ ನಡೆದದ್ದರ ಬಗ್ಗೆ ಉಲ್ಲೇಖಿಸುವ ಸುನಿತಿ ಘೋಷರ ಬರಹ ನೋಡೋಣ: “ವಸಾಹತು ಆಳ್ವಿಕೆಯ ಮೊದಲ ಕೆಲವು ವರ್ಷಗಳಲ್ಲಿ ಪೂರ್ವ ಭಾರತದ ಹಳೆಯ ದೊಡ್ಡ ವರ್ತಕರು ಮತ್ತು ಬ್ಯಾಂಕರ್ಗಳು ದಿವಾಳಿಯಾದರೆ ಬ್ರಿಟೀಷರ ದಲ್ಲಾಳಿಗಳಾಗಿ ಕಾರ್ಯನಿರ್ವಹಿಸಿದವರು ಮತ್ತು ಬನಿಯಾಗಳು ಉನ್ನತಿ ಕಂಡರು. ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ವರ್ತಕರನ್ನು ವಿದೇಶಿ ವಹಿವಾಟಿನ ಜೊತೆಗೆ ದೇಶೀ ವ್ಯಾಪಾರದಿಂದಲೂ ಮೂಲೋಚ್ಛಾಟನೆ ಮಾಡಲಾಯಿತು.” (91) 

ಮತ್ತೊಂದು ವಿಧದ ಮಧ್ಯವರ್ತಿತನವನ್ನು ಅಧಿಕಾರಶಾಹಿಯಲ್ಲಿ ಕಾಣಬಹುದು. ವಸಾಹತುಶಾಹಿಯ ಪ್ರಾರಂಭದ ದಿನಗಳಲ್ಲಿ ನಕಲಿ ಅಧಿಕಾರಶಾಹಿಯನ್ನು ಹುಟ್ಟುಹಾಕುವ ವಸಾಹತಿನ ಪ್ರಯತ್ನವನ್ನು ಕಾಣಬಹುದು; ಇದು ಮಧ್ಯವರ್ತಿಯ ರೂಪವನ್ನು ಹೊಂದಿತ್ತು. ಈ ವರ್ಗದ ಜನನವಾಗದೆ ತಮ್ಮ ಆಳ್ವಿಕೆ ಅಭದ್ರವೆಂದು ನಿರ್ಧರಿಸಿದ್ದರು. 

ರಾಜಾ ಎಂಬ ನಾಮಕಾವಸ್ಥೆ ಆಡಳಿತಗಾರನನ್ನು ಕಿತ್ತು ಹಾಕಿ 1831ರಲ್ಲಿ ಈಸ್ಟ್ ಇಂಡಿಯಾ ಕಂಪನಿ ನೇರ ಆಳ್ವಿಕೆಯನ್ನು ನಡೆಸಲಾರಂಭಿಸಿದಾಗ: “ಸಾಮ್ರಾಜ್ಯವನ್ನು ವಶಪಡಿಸಿಕೊಂಡ ಪ್ರಾರಂಭದಲ್ಲಿ ಗವರ್ನರ್ ಜೆನರಲ್ ಮದ್ರಾಸಿನ ಸರಕಾರಕ್ಕೆ ಕೊಟ್ಟ ಮೊದಲ ಸೂಚನೆ – ಕಮಿಷನರ್ ಗಳ ಕೆಳಗೆ ಕಾರ್ಯನಿರ್ವಹಿಸುವ ಏಜೆಂಟರು ದೇಶೀಯರಾಗಿರಬೇಕು…” (92) 

ಬ್ರಿಟೀಷರ ಈ ನಿರ್ಣಯಕ್ಕೆ ಕಾರಣ ಮನ್ರೋ ಕೈಗೊಂಡ ನಿರಂತರ ಪ್ರಚಾರ; ವಸಾಹತು ಸೌಧವನ್ನುಳಿಸಲು ಮಧ್ಯವರ್ತಿ ಅಧಿಕಾರಶಾಹಿಯ ಪಾತ್ರದ ಬಗೆಗಿನ ಮನ್ರೋನ ದೂರದರ್ಶಿ ಒಳನೋಟವನ್ನು ವಸಾಹತಿನ ಸಮರ್ಥಕರು “ಮನ್ರೋ ಲಿಬರಲಿಸಂ” (ಮನ್ರೋನ ಪ್ರಗತಿಪರತೆ) ಎಂದು ಕರೆದರು.” (93) 

1822ರಲ್ಲಿ ಎಲ್ಫಿನ್ ಸ್ಟೋನಿಗೆ ಬರೆದ ಪತ್ರದಲ್ಲಿ ಮನ್ರೋ: “ಕಂದಾಯ ಮಂಡಳಿಗೆ ಸಂಪೂರ್ಣ ದೇಶೀ ಸ್ಪರ್ಶ ನೀಡಿದ್ದೇನೆ….. ಇದು ಸಮರ್ಥ ಮತ್ತು ಮಹತ್ವಾಕಾಂಕ್ಷೆಯುಳ್ಳ ಸ್ಥಳೀಯರಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ ಮತ್ತು ಅರ್ಧ ಶತಮಾನ ಅಥವಾ ಮುಂದಿನ ಒಂದು ಶತಮಾನದವರೆಗೆ ಸರ್ಕಾರ ಅವರಿಗೊಂದು ಪಾಲು ಕೊಡುವುದಕ್ಕೆ ದಾರಿ ತಯಾರುಮಾಡುತ್ತದೆ.” (95) 

ವಸಾಹತುಶಾಹಿ ಸ್ವಲ್ಪ ತಡವಾಗಿ ವಶಪಡಿಸಿಕೊಂಡ ಕರ್ನಾಟಕ ಪ್ರಾಂತ್ಯಕ್ಕೆ ಈಗಾಗಲೇ ‘ಅಭಿವೃದ್ಧಿ’ ಹೊಂದಿದ ಮದ್ರಾಸ್ ಮತ್ತು ಬಾಂಬೆಯ ಮಧ್ಯವರ್ತಿ ಅಧಿಕಾರಿಗಳು ಪ್ರವೇಶಿಸಿದರು. ಬ್ರಿಟೀಷ್ ಆಡಳಿತದ ವಕ್ತಾರರಾದ ಈ ಮೇಲ್ಮಟ್ಟದ ಅಧಿಕಾರಿಶಾಹಿ ಚಿಕ್ಕ ಸಂಖೈಯಲ್ಲಿದ್ದರೂ ಕರ್ನಾಟಕಕ್ಕೆ ಮಧ್ಯವರ್ತಿ ಅಧಿಕಾರಿಗಳನ್ನು ಪೂರೈಸುವ ಪ್ರಮುಖ ಮೂಲವಾದರು. 

ರಾಜ್ಯದ ಎರಡು ತೋಳುಗಳಂತಿದ್ದ ರೆವಿನ್ಯೂ ಆಡಳಿತ (ಪೋಲೀಸ್ ಮತ್ತು ಮ್ಯಾಜಿಸ್ಟ್ರೇಟ್ ಕಾರ್ಯ ಜೊತೆಗೂಡಿದ) ಮತ್ತು ಸೈನ್ಯ, ವಸಾಹತುಶಾಹಿಯ ಮೊದಲ ದಶಕಗಳಲ್ಲಿ ಮಧ್ಯವರ್ತಿ ಅಧಿಕಾರಿಗಳನ್ನು ಅಂದಗೊಳಿಸಿದರು. ಈ ಎರಡೂ ವ್ಯವಸ್ಥೆಗೆ ಹಸಿ ಮಾಂಸವನ್ನೇ ಭಕ್ಷಿಸುವಷ್ಟು ಹಸಿವಿತ್ತು. ಕರ್ನಾಟಕದ ರೆವೆನ್ಯೂ ಆಡಳಿತದಲ್ಲಿ, ಅದು ತಳಮಟ್ಟದಲ್ಲಿರಬಹುದು ಮೇಲ್ಮಟ್ಟದಲ್ಲಿರಬಹುದು, ಶ್ರೀಮಂತ ಭೂಮಾಲೀಕರೇ ಇದ್ದರು. ರೆವೆನ್ಯೂ ವ್ಯವಸ್ಥೆಯಲ್ಲಿ ಬ್ರಾಹ್ಮಣರ ಪ್ರಾಬಲ್ಯವಿತ್ತು. ಹತ್ತಲವು ಬಣ್ಣಗಳಲ್ಲಿ ತಮ್ಮನ್ನು ತಾವು ತೋರ್ಪಡಿಸಿಕೊಳ್ಳುತ್ತಿದ್ದರು. ಆದರೆ ಲಂಬ ಕಪ್ಪು ಪಟ್ಟಿಯವರು ತೆರಿಗೆ ವಸೂಲಿಯ ಶರಾತ್ ವ್ಯವಸ್ಥೆ ಜಾರಿಗೆ ಬಂದಾಗ ಮೈಸೂರು ಸರಕಾರದ 30% ಜಾಗಗಳನ್ನಾಕ್ರಮಿಸಿಕೊಂಡುಬಿಟ್ಟಿದ್ದರು. ಪ್ರತಿರೋಧ ಎದ್ದ ನಂತರ ನಗರದ ಸೈನ್ಯದ ಮುಂದಾಳತ್ವ ವಹಿಸಿದ ಹೆಚ್. ಸ್ಟೋಕ್ಸ್ ಅಧಿಕಾರಶಾಹಿಯಲ್ಲಿ ಲಿಂಗಾಯತರನ್ನು ಸೇರಿಸಿಕೊಳ್ಳಬೇಕೆಂದು ಶಿಫಾರಸು ಮಾಡಿದ. (96) ಅಧಿಕಾರಶಾಹಿಯು, ಕಟ್ಟಿಕೊಂಡ ಚರಂಡಿಯಾಗಿದ್ದನ್ನು ನೋಡಿದ ಕೆಲವು ಸಮಕಾಲೀನ ಲೇಖಕರಿಗೆ ಇದು ಬ್ರಿಟೀಷರ ಬ್ರಾಹ್ಮಣ ವಿರೋಧಿ ನ್ಯಾಯಪರತೆಯಂತೆ ಕಂಡಿತು. ಆದರಿದು ಕುತಂತ್ರಿ ಬ್ರಿಟೀಷರು ಆಳ್ವಿಕೆಯ ಚಕ್ರ ಮುಂದೋಡಲು ಕಂಡುಕೊಂಡ ಅವಕಾಶವಾದಿ ಅನುಕೂಲತೆಯಾಗಿತ್ತು. ಕೆಳಮಟ್ಟದ ಅಧಿಕಾರಿಗಳಲ್ಲಿ ಹೆಚ್ಚಿನವರು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದರು. ಮೇಲಿನ ಅಧಿಕಾರ, ಬ್ರಹ್ಮನ ಆದೇಶದಂತೆಯೇ, ಬ್ರಾಹ್ಮಣರ ವಶವಾಗಿತ್ತು. 

ಈ ಸಂಪುಟ ನಿಷ್ಠವಾಗಿರುವ ವಸಾಹತಿನ ಮೊದಲ ದಶಕಗಳಲ್ಲಿ ಅಧಿಕಾರಶಾಹಿಯನ್ನು ಭೂಮಾಲೀಕರಿಂದ ಬೇರ್ಪಡಿಸುವ ನಿರೀಕ್ಷೆಯನ್ನು ಕಲ್ಪಿಸುವುದೂ ಸಾಧ್ಯವಿಲ್ಲ. ಕೊಬ್ಬಿದ ಅಧಿಕಾರಶಾಹಿಗಳು ಅದೇ ಸಮಯದಲ್ಲಿ ವಿಸ್ತಾರ ಭೂಪ್ರದೇಶದ ಮಾಲೀಕರಾಗಿಯೂ ಏಳಿಗೆ ಹೊಂದಿದರು. ಹಾಗಾಗಿ ಇವರನ್ನು ‘ಊಳಿಗಮಾನ್ಯ – ಮಧ್ಯವರ್ತಿ ಅಧಿಕಾರಿಗಳು’ ಎಂದು ಕರೆದರೆ ತಪ್ಪಾಗಲಾರದು. 

ಮೈಸೂರಿನ ಆಡಳಿತಶಾಹಿಯ ಕಟ್ಟುವಿಕೆಯ ಬಗ್ಗೆ ಶಾಮ ರಾವ್ ಹೇಳುತ್ತಾರೆ: “ಮೂರನೇ ಕೃಷ್ಣರಾಜ ಒಡೆಯರ ನೇತೃತ್ವದಲ್ಲಿ ಹೊಸ ಸರಕಾರದ ಸ್ಥಾಪನೆಯಾದಾಗ ಹಲವು ಪಾಳೇಗಾರರು ದೇಶದ ವಿವಿಧ ಭಾಗಗಳಿಗೆ ನಿವೃತ್ತರಾದರು, ಭವಿಷ್ಯದ ಗೊಂದಲಗಳಿಂದ ಸಿಗಬಹುದಾದ ಅವಕಾಶಗಳ ನಿರೀಕ್ಷೆಯಲ್ಲಿ. ಪ್ರತಿರೋಧದ ವ್ಯಕ್ತಿತ್ವದ ಚಿಕ್ಕ ಸಂಖೈಯ ಪಾಳೇಗಾರರನ್ನು ಬಂಧಿಸಲಾಯಿತು, ರಾಜಿ ಸೂತ್ರಕ್ಕೆ ಒಪ್ಪಿಕೊಂಡವರಿಗೆ (ಇವರ ಸಂಖೈಯೇ ಅಧಿಕ) ಸೂಕ್ತ ಸರಕಾರಿ ಪಿಂಚಣಿ ನೀಡಲಾಯಿತು ಅಥವಾ ಸಾರ್ವಜನಿಕ ಆಡಳಿತ/ ಸೈನ್ಯಕ್ಕೆ ನೇಮಕ ಮಾಡಿಕೊಳ್ಳಲಾಯಿತು…… ಪೂರ್ಣಯ್ಯ ಇವರ ಭಾವನೆಗಳಿಗೆ ಯಾವಾಗಲೂ ಗೌರವ ಕೊಡುತ್ತ ದಯಾಳುತನದಿಂದ ಮತ್ತು ಕೃಪಾ ದೃಷ್ಟಿಯಿಂದ ನೋಡಿಕೊಂಡರು.” (97) 

ಮಧ್ಯವರ್ತಿ ಅಧಿಕಾರಶಾಹಿಯ ಸಂಯೋಜನೆ ಮತ್ತು ಅದಕ್ಕಿದ್ದ ಊಳಿಗಮಾನ್ಯತೆಯ ಬೇರುಗಳ ಬಗ್ಗೆ ಶ್ಯಾಮ್ ಭಟ್ ಹೀಗೆ ತಿಳಿಸುತ್ತಾರೆ: “ರೆವೆನ್ಯೂ ಆಡಳಿತವನ್ನು ಬ್ರಿಟೀಷರು ಪರಿಚಯಿಸಿದಾಗ ಅದರ ಕಾರ್ಯನಿರ್ವಹಣೆಗೆ ಸ್ಥಳೀಯ ವೈಶಿಷ್ಟ್ಯಗಳನ್ನು ಚೆನ್ನಾಗಿ ಬಲ್ಲ ಜನರ ಅವಶ್ಯಕತೆಯಿತ್ತು. ಕಂಪನಿಯ ಅಧಿಕಾರಿಗಳಿಗೆ ಆ ರೀತಿಯ ಜನರು ಬ್ರಾಹ್ಮಣ, ಸಾರಸ್ವತ ಬ್ರಾಹ್ಮಣ ಮತ್ತು ಬಂಟ್ ಸಮುದಾಯದಲ್ಲಿ ಸಿಕ್ಕಿದರು. ಇವರಲ್ಲಿ ಬ್ರಿಟೀಷರ ಕೃಷಿ ಪದ್ಧತಿಯನ್ನು ನಿರ್ವಹಿಸಲು ಬೇಕಿದ್ದ ಗುಣಗಳಿದ್ದವು.” (98) 

ಕರಾವಳಿ ಜಿಲ್ಲೆಗಳಲ್ಲಿ ಹುಟ್ಟಿಕೊಂಡ ಅಧಿಕಾರಶಾಹಿಯ ಬಗ್ಗೆ ನಮಗೆ ಮಾಹಿತಿ ನೀಡುತ್ತ ಸೂರ್ಯಕಾಂತ್ ಕಾಮತ್ ಚಿತ್ರಾಪುರ ಬ್ರಾಹ್ಮಣರ ಬಗ್ಗೆ ಹೀಗೆ ಹೇಳುತ್ತಾರೆ: “ಕೆಲವು ವಿಶಿಷ್ಟ ಐತಿಹಾಸಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ, ಈ ಗುಂಪಿನ ಜನರು ಆಂಗ್ಲ ಶಿಕ್ಷಣವನ್ನು ಕೆನರಾದ ಉಳಿದೆಲ್ಲ ಸಮುದಾಯಗಳಿಗಿಂಗಲೂ ಮುಂಚೆ ಪಡೆದುಕೊಂಡರು. ಹಾಗಾಗಿ ಈ ಎರಡೂ ಸಮುದಾಯಗಳು ಕೆನರಾ ಜಿಲ್ಲೆಗಳಲ್ಲಿನ ಬ್ರಿಟೀಷ್ ಸೇವೆಯಲ್ಲಿ ಪ್ರಾಬಲ್ಯ ಮೆರೆದರು.” (98A) 

ಮತ್ತೆ, ಬಾಂಬೆ ಕರ್ನಾಟಕ ಭಾಗದ ಮುಂಡರಗಿಯ ಭೀಮರಾವಿನ ಉದಾಹರಣೆಯೂ ಇದೆ. ಅವನ ತಾತ ದಂಬಲ್ ದೇಸಾಯಿಯ ನ್ಯಾಯಾಲಯದಲ್ಲಿ ಮುಖ್ಯ ಸಲಹೆಗಾರರಾಗಿದ್ದರು ಮತ್ತವರ ತಂದೆ ಪೇಶ್ವೆ ಆಡಳಿತದಲ್ಲಿ ನ್ಯಾಯಾಧೀಶರಾಗಿದ್ದರು. (99) ಮತ್ತೊಂದು ಮಜಲಿನಲ್ಲಿ ಹೇಳುವುದಾದರೆ ಭೀಮರಾವ್ ನ ವಂಶಾವಳಿ ಪ್ರಭುತ್ವದ ಜೊತೆಗಿನ ಸಂಬಂಧವನ್ನು ಸಲೀಸುಗೊಳಿಸಿತ್ತು. ಬ್ರಿಟೀಷರು ದಯಪಾಲಿಸಿದ ಹನ್ನೆರಡು ಇನಾಮುಗಳನ್ನು ಭೀಮಾರಾವ್ ಸಂತೋಷದಿಂದ ಅನುಭವಿಸಿದ. ಆದರೆ ಭೀಮರಾವ್, ತನ್ನ ಪೂರ್ವಜರಂತೆ ಸರಳ ಭೂಮಾಲೀಕನಾಗಿರಲಿಲ್ಲ. ಬ್ರಿಟೀಷರ ಅಧಿಕಾರಿಯಾಗಿಯೂ ಸೇವೆಗೈದ. ಮೊದಲು ಹರಪನಹಳ್ಳಿಯ ತಹಸೀಲ್ದಾರನಾಗಿ, ನಂತರ ಬಳ್ಳಾರಿಯ ತಹಸೀಲ್ದಾರನಾಗಿ ನೇಮಕಗೊಂಡಿದ್ದ ಭೀಮಾರಾವನ ರೀತಿ ಅನೇಕರಿದ್ದರು. ಅವನಂತಲ್ಲದ ಕೆಲವೇ ಕೆಲವರು ಬ್ರಿಟೀಷರ ಜೊತೆಗಿನ ಸಂಬಂಧವನ್ನು ಮುರಿದುಕೊಂಡಿದ್ದರು. ಇರಲಿ, ಅದು ಈಗ ಸದ್ಯ ಬೇಕಿಲ್ಲದ ಅಂಶ; ಈ ಸಂಪುಟದ ಎರಡನೇ ಭಾಗ ಅದರ ಬಗ್ಗೆ ಹೆಚ್ಚು ತಿಳಿಸಿಕೊಡುತ್ತದೆ. 

ಮಧ್ಯವರ್ತಿ ಅಧಿಕಾರಿಗಳ ರೂಪುಗೊಳ್ಳುವಿಕೆಗೆ ಎರಡನೇ ಮೂಲ ಸೈನ್ಯ. ಬ್ರಿಟೀಷರ ಭಾರತೀಯ ಸೈನ್ಯ ಟಿಪ್ಪು ಸುಲ್ತಾನನ ಸೈನ್ಯದಿಂದ ಯಾರನ್ನೂ ನೇಮಿಸಿಕೊಳ್ಳದಿರುವ ನೀತಿಯನ್ನು ಅಳವಡಿಸಿಕೊಂಡಿತು, ಕಮಾಂಡರುಗಳಿಗೆ ನಿವೃತ್ತಿ ಕೊಟ್ಟು ಉಳಿದ ಸೈನಿಕರನ್ನು ಕೆಲಸದಿಂದ ತೆಗೆದುಹಾಕಿದರು. (100) ಇದಾದ ನಂತರವೂ ಸುಮಾರು ಅರ್ಧ ಲಕ್ಷದಷ್ಟು ಜನರು ಮೈಸೂರು ರಾಜ, ಕೊಡಗು ರಾಜ ಮತ್ತು ವಿವಿಧ ಪಾಳೇಗಾರರು ಹಾಗೂ ದೇಶಗತಿಗಳ ಸೈನ್ಯದಲ್ಲಿದ್ದರು. ಈ ಸೈನ್ಯದ ಮೇಲ್ಮಟ್ಟದ ಅಧಿಕಾರಿಗಳು ಮಧ್ಯವರ್ತಿಗಳಾಗಿ ಬೆಳೆದರು. ಕೊಡಗಿನಿಂದ ಸೆಳೆದುಕೊಂಡ ಕೆಲವು ಉನ್ನತ ಸೇನಾಧಿಕಾರಿಗಳನ್ನು ನೇರವಾಗಿ ಬ್ರಿಟೀಷರ ಭಾರತೀಯ ಸೈನ್ಯಕ್ಕೆ ಸೇರಿಸಿಕೊಳ್ಳಲಾಯಿತು. ಆದಾಗ್ಯೂ ಈ ವಿಭಾಗದಲ್ಲಿ ಬ್ರಾಹ್ಮಣರ ಸಂಖೈ ಕಡಿಮೆಯಿತ್ತು; ಕಡಿಮೆಯಿತ್ತು, ಗಣನೆಗೆ ಬಾರದಷ್ಟೇನಲ್ಲ. ಅರಸು, ಕೊಡವ ಮತ್ತು ಲಿಂಗಾಯತರು ಬ್ರಿಟೀಷರು ಕೊಟ್ಟ ಬಣ್ಣಬಣ್ಣದ ರಿಬ್ಬನ್ನು ಮತ್ತು ಪದಕಗಳನ್ನು ಸಂತಸದಿಂದ, ಹೆಮ್ಮೆಯಿಂದ ತಮ್ಮ ಸಮವಸ್ತ್ರದ ಮೇಲೆ ಹಾಕಿಕೊಂಡರು. 

ಮಧ್ಯವರ್ತಿಗಳ ರೂಪುಗೊಳ್ಳುವಿಕೆ ನೇರ ರೇಖೆಯಂತೆ ಸಾಗಿತೆಂದು ನೋಡಬಾರದೆನ್ನುವ ಎಚ್ಚರಿಕೆ ಇರಬೇಕು. ವಸಾಹತು ಕರ್ನಾಟಕದ ಪ್ರಾರಂಭದಲ್ಲಿ ಈ ಪ್ರಕ್ರಿಯೆ ಅಂಕುಡೊಂಡು ದಾರಿಯಲ್ಲಿ ಸಾಗಿದೆ. ಮಧ್ಯವರ್ತಿ ಅಧಿಕಾರಿಯೊಬ್ಬ ಪುನಃ ಅರೆಊಳಿಗಮಾನ್ಯ ದೊರೆಯಾಗಿಬಿಟ್ಟಿದ್ದಾನೆ, ಪೂರ್ಣಯ್ಯನ ಪ್ರಕರಣದಲ್ಲಾದಂತೆ. ಅಥವಾ ವರ್ತಕನೊಬ್ಬ ಕೃಷಿ ದಾರಿಯಲ್ಲಿ ಸಾಗಿ ಭೂಮಾಲೀಕನಾಗಿ ನೆಲೆಕಂಡುಕೊಂಡಿದ್ದಾನೆ, ತುಳುನಾಡಿನ ಕೃಷಿ ಕ್ಷೇತ್ರದಲ್ಲಿ ನೆಲೆ ಕಂಡುಕೊಂಡ ಗೌಡ ಸಾರಸ್ವತರಂತೆ. (101) 

ಮಧ್ಯವರ್ತಿ ವರ್ತಕ ಮತ್ತು ಮಧ್ಯವರ್ತಿ ಅಧಿಕಾರಿಯನ್ನು ಒದಗಿಸಿದ್ದು ಊಳಿಗಮಾನ್ಯತೆ. ಜೊತೆಯಾಗಿ ಈ ಮಧ್ಯವರ್ತಿಗಳು ಕರ್ನಾಟಕ ಮತ್ತು ಭಾರತದಲ್ಲಿ ಬ್ರಿಟೀಷರ ಆರ್ಥಿಕ ಮತ್ತು ರಾಜಕೀಯ ನೀತಿಗಳಿಗೆ ಪೂರಕವಾಗಿ ಕೆಲಸ ಮಾಡುವವರಾದರು. ಅವರ ಅವಶ್ಯಕತೆಗಳನ್ನು ಹೆಣೆದಿದ್ದು ಈ ಮಧ್ಯವರ್ತಿಗಳು. ಊಳಿಗಮಾನ್ಯತೆ ಮತ್ತು ವಸಾಹತಿನ ನಡುವೆ ಬೇಕಿದ್ದ ಬಂಧ ಸಾಧ್ಯವಾಗಿದ್ದು ಮಧ್ಯವರ್ತಿಗಳಿಂದ. 

ಗೌಡ ಸಾರಸ್ವತ ಬ್ರಾಹ್ಮಣರ ಬಗ್ಗೆ ಸ್ಟರ್ರಾಕ್(Sturrock)ನನ್ನು ಉಲ್ಲೇಖಿಸುತ್ತ ಸೂರ್ಯಕಾಂತ್ ಕಾಮತ್ ಕೊಡುವ ಈ ವಿವರಣೆ, ಅರೆಊಳಿಗಮಾನ್ಯತೆಯ ಭೂಮಾಲೀಕರು, ಬಡ್ಡಿ ವ್ಯಾಪಾರಿಗಳು ಮತ್ತು ಅಧಿಕಾರಿಗಳ ನಡುವಿನ ಬಂಧವನ್ನು ತಿಳಿಸಿಕೊಡುತ್ತದೆ: “ಕೊಂಕಣಿಗಳಲ್ಲನೇಕರು ಅಂಗಡಿ ಇಟ್ಟಿದ್ದಾರೆ ಮತ್ತು ಜಿಲ್ಲೆಯ ಪ್ರತಿ ಪೇಟೆಯಲ್ಲೂ ಅವರನ್ನು ಕಾಣಬಹುದು……ಜಿಲ್ಲೆಯ ಶ್ರೀಮಂತ ಭೂಮಾಲೀಕರವರು…..ಕೆಲವರು ಸರಕಾರಿ ನೌಕರಿಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ……” (101A) 

ಮಧ್ಯವರ್ತಿ ವರ್ಗದ ಸಾಂಸ್ಕೃತಿಕ ರೂಪ ಊಳಿಗಮಾನ್ಯ – ಪ್ರತಿಗಾಮಿ ನೆಲೆಯಿಂದ ಬಂದ ಕಾರಣ ಅವರು ಜನ ವಿರೋಧಿಗಳಾಗಿದ್ದರು. ತಮ್ಮ ಕೊಳೆತ ಪ್ರಣಾಳಿಕೆ ಮತ್ತು ಚೇತನವಿಲ್ಲದ ಸಿದ್ಧಾಂತಗಳನ್ನು ಎತ್ತಿ ಹಿಡಿಯುತ್ತ ಬಿಳಿ ದೇವರನ್ನು ದಿನನಿತ್ಯ ಪೂಜಿಸುತ್ತಿದ್ದರು. 

ಮಧ್ಯಮವರ್ಗದ ಮಧ್ಯವರ್ತಿಗಳು ಆರ್ಥಿಕತೆಯಲ್ಲಿ ಬಹುಮುಖ್ಯ ಕೆಲಸ ಮಾಡಬೇಕಿತ್ತು. ವಸಾಹತುಶಾಹಿ, ಆಡಳಿತ ವಹಿಸಿಕೊಂಡ ಮೊದಲ ಹಂತಗಳಲ್ಲಿ, ಮಧ್ಯವರ್ತಿ ಅಧಿಕಾರಶಾಹಿಗಳ ಆರ್ಥಿಕತೆಯ ಪಾತ್ರ ವಸಾಹತುಶಾಹಿ ಮತ್ತು ಊಳಿಗಮಾನ್ಯ ಪದ್ಧತಿಯ ತೆರಿಗೆ ನೀಡುವ ರೈತನನ್ನು ಸಂಪರ್ಕಿಸುವುದಕ್ಕೆ ಸೀಮಿತವಾಗಿತ್ತು. ಭಾರತದಲ್ಲಿ ಬ್ರಿಟೀಷರ ಕೈಗಾರಿಕಾ ಬಂಡವಾಳ ಹೆಚ್ಚುತ್ತಿದ್ದಂತೆ ಮಧ್ಯವರ್ತಿ ವರ್ತಕರ ಪ್ರಾಮುಖ್ಯತೆಯೂ ಹೆಚ್ಚಿತು. ಮಧ್ಯವರ್ತಿ ವರ್ತಕರು ಕರ್ನಾಟಕವನ್ನು ಕೊಳ್ಳೆ ಹೊಡೆಯಲು ಬಹುಮುಖ್ಯ ಕೊಂಡಿಯಾದರು; ಬ್ರಿಟೀಷ್ ಉತ್ಪನ್ನಗಳನ್ನು ಬಹುದೂರದ ಪ್ರದೇಶಗಳಿಗೆ ಸಾಗಿಸಿದ ಮಧ್ಯವರ್ತಿಗಳು ವಾಪಸ್ಸಾಗುವಾಗ ವಸಾಹತು ರಾಕ್ಷಸನ ಹಸಿವು ನೀಗಿಸಲು ಕಚ್ಚಾ ವಸ್ತುಗಳನ್ನು ಮತ್ತು ಕೃಷಿ ಉತ್ಪನ್ನಗಳನ್ನು ತೆಗೆದುಕೊಂಡು ಹೋದರು. 

ಅದಾಗ್ಯೂ ಇದರ ರಾಜಕೀಯ ಪಾತ್ರ ಮಹತ್ವದ್ದಾಗಿತ್ತು; ವಸಾಹತುಶಾಹಿ ಸರಕಾರವನ್ನು ಆ ಸದ್ಯದಲ್ಲಿ ಸುಭದ್ರಗೊಳಿಸಲು ಮತ್ತು ದೂರಗಾಮಿಯಲ್ಲಿ ವಸಾಹತನ್ನು ಜನರು ಸಹಿಸುವಂತಾಗಲು. ಈ ಸ್ಪಷ್ಟ ಕಾರಣಕ್ಕಾಗಿ, ಪೂರ್ಣಯ್ಯನವರಂತಹ ವಿದ್ರೋಹಿಗಳನ್ನು ಬ್ರಿಟೀಷರು ಹೊಗಳಿ ಅಟ್ಟಕ್ಕೇರಿಸಿ ಉಡುಗೊರೆಗಳನ್ನು ನೀಡುತ್ತಿದ್ದರು. ಮಧ್ಯವರ್ತಿ ಅಧಿಕಾರಶಾಹಿಯ ರಾಜಕೀಯ ಮಹತ್ವದ ಬಗ್ಗೆ ಮನ್ರೋ ಬರೆಯುತ್ತಾನೆ: “ನಮ್ಮ ಯುರೋಪಿಯನ್ ಸಂಸ್ಥೆಗಳನ್ನು ಹೆಚ್ಚಿಸಿ ಭದ್ರವಾಗುವ ಪ್ರಯತ್ನ ಮಾಡಬಹುದು. ತುಂಬ ಹೆಚ್ಚಿನ ಖರ್ಚಾಗುತ್ತದೆ, ಪಾಪದ ಕೆಲಸಗಳು ಕೆಲಸಮಯ ಇಲ್ಲವಾಗಲೂಬಹುದು. ಆದರೆ ಯುರೋಪಿಯನ್ನರ ಹೆಚ್ಚಳ ನಮ್ಮ ಪ್ರಾಬಲ್ಯದ ಅಸ್ತಿತ್ವವನ್ನು ಹೆಚ್ಚು ದಿನಗಳ ಕಾಲ ಉಳಿಸಲಾಗದು. ಆ ರೀತಿ ಮಾಡಿದರೆ ಸ್ಥಳೀಯರಿಂದ ಯಾವುದೇ ಸಹಾಯವನ್ನು ನಿರೀಕ್ಷಿಸಬಾರದು. ದೇಶೀ ಸೈನ್ಯಕ್ಕೆ ಈಗ ನಿರುದ್ಯೋಗಿಗಳಾಗಿರುವ ಕಂದಾಯ ಮತ್ತು ಪೋಲೀಸ್ ಇಲಾಖೆಗಳಲ್ಲಿದ್ದ ಸಕ್ರಿಯ ಜನರ ವರ್ಗ ಸೇರಿಬಿಡುತ್ತಾರೆ. ಜೊತೆಗೆ ಈಗ ಆ ಇಲಾಖೆಗಳಲ್ಲಿರುವ ಉನ್ನತ ಸ್ಥಾನ ಬಯಸುತ್ತಿರುವವರೂ ಸೇರಿಬಿಡುತ್ತಾರೆ. ಈ ಜನರ ಮೂಲಕ ತಮ್ಮನ್ನು ತಾವೇ ಸ್ವತಂತ್ರ ದೇಶಗಳ ದೊರೆಗಳೆಂದು ಘೋಷಿಸಿಕೊಂಡು ಅಲ್ಲಿನ ಆದಾಯವನ್ನು ತೆಗೆದುಕೊಂಡುಬಿಡುತ್ತಾರೆ; ಜನ ಸಮೂಹ ಮೌನವಾಗಿರುತ್ತದೆ. ಸಿಕ್ಕಿರುವ ವ್ಯವಹಾರಿಕ ಅನುಕೂಲಗಳ ಕಾರಣದಿಂದ ವ್ಯಾಪಾರಿಗಳು ನಮ್ಮ ಯಶಸ್ಸಿಗೆ ಶುಭಕೋರಬಹುದು, ಆದರೆ ಅದಕ್ಕಿಂತ ಹೆಚ್ಚೇನನ್ನು ಅವರು ಮಾಡುವುದಿಲ್ಲ. ಯುದ್ಧಕ್ಕೆ ಸನ್ನದ್ಧರಾಗಿರುವವರನ್ನು ಹೊಂದಿರುವ ಹಳ್ಳಿಗಳ ಮುಖ್ಯಸ್ಥರು ನಮ್ಮ ಉದ್ದೇಶವನ್ನು ಬೆಂಬಲಿಸುವುದಕ್ಕಿಂತ ತಮ್ಮ ದೇಶದವರ ಜೊತೆಗೆ ಸೇರುವ ಸಾಧ್ಯತೆಯೇ ಹೆಚ್ಚು. ಸ್ಥಳೀಯರ ಆಳ್ವಿಕೆಗೊಳಪಟ್ಟಾಗ ಅವರು ನಮ್ಮ ಆಳ್ವಿಕೆಯನ್ನು ಬರಮಾಡಿಕೊಳ್ಳಲು ಇಚ್ಛೆಪಟ್ಟಿದ್ದು ಸತ್ಯವೇ ಆದರೂ ಆ ಭಾವನೆ ತಾತ್ಕಾಲಿಕ ಕಾರಣಗಳಿಗಾಗಿತ್ತು – ದುರ್ಬಲ, ಕೇಡುಗ ಸರಕಾರದಿಂದ ಬಿಡುಗಡೆಯೊಂದಿ ತಮ್ಮ ಏಳಿಗೆಯಾಗಬಹುದೆಂಬ ಭರವಸೆಯಿಂದ ಬದಲಾವಣೆಯನ್ನು ಬೆಂಬಲಿಸಿದ್ದರು. ಈಗ ನಮ್ಮ ಸರಕಾರದ ವೈಖರಿಯನ್ನವರು ನೋಡಿದ್ದಾರೆ; ಅವರ ಮತ್ತವರ ಆಸ್ತಿಪಾಸ್ತಿಯ ರಕ್ಷಣೆಯಾಗಿದ್ದರೂ ಸಹ ಸಡಿಲ ತೆರಿಗೆ ವ್ಯವಸ್ಥೆಯಿಂದಾಗಿ ಅವರಿಗೆ ಸಿಗುತ್ತಿದ್ದ ಹೆಚ್ಚುವರಿ ಹಣವೀಗ ತಪ್ಪಿ ಹೋಗಿದೆ. ಜೊತೆಗೆ ಸ್ಥಳೀಯ ನಿವಾಸಿಗಳ ಮೇಲಿದ್ದ ತಮ್ಮ ಅಧಿಕಾರದಲ್ಲಿ ಹೆಚ್ಚಿನಂಶವನ್ನು ನಮ್ಮ ನ್ಯಾಯಾಲಯಗಳು, ಮ್ಯಾಜಿಸ್ಟ್ರೇಟರು, ಕಲೆಕ್ಟರುಗಳ ಕಾರಣದಿಂದ ಕಳೆದುಕೊಂಡಿದ್ದಾರೆ. ತಮ್ಮ ಹಳೆಯ ಅಧಿಕಾರ ಮತ್ತು ಪ್ರಭಾವವನ್ನು ಮರಳಿಸುವ ಭರವಸೆಯೊಂದೇ ಸಾಕು ಅವರಲ್ಲಿನ ಹೆಚ್ಚಿನವರು ನಮ್ಮ ಆಳ್ವಿಕೆಯನ್ನು ಪದಚ್ಯುತಗೊಳಿಸುವ ಯೋಜನೆಗಳಿಗೆ ಸಹಕರಿಸಲು. ಅವರನ್ನು ರಕ್ಷಿಸಿದ್ದಕ್ಕೆ ಕೃತಜ್ಞತೆಯಾಗಿ ಅಥವಾ ನಮ್ಮ ಮೃದು ಸರಕಾರದ ಜೊತೆಗಿನ ಬಾಂಧವ್ಯದ ಕಾರಣಕ್ಕಾಗಿ ಈ ಜನರು ದೇಶಿ ಸೈನ್ಯದ ವಿರುದ್ಧದ ಹೋರಾಟದಲ್ಲಿ ನಮಗೆ ಜೊತೆಯಾಗುತ್ತಾರೆ ಎಂದು ನಂಬುವುದು ನಮ್ಮನ್ನು ನಾವೇ ವಂಚಿಕೊಂಡಂತೆ.” (102) 

ಇದು 1857ರ ಹೋರಾಟದ ಬಗ್ಗೆ ಮನ್ರೋಗಿದ್ದ ನಿರೀಕ್ಷೆ, ಜನಸಮೂಹದ ಪಾತ್ರವನ್ನು ಅಂದಾಜಿಸುವಲ್ಲಿ ಆತ ಎಡವಿದ್ದ. ಹಾಗಾಗಿ ಬ್ರಿಟೀಷ್ ರಾಜ್ ನ ನಿರಂತರ ಆಳ್ವಿಕೆಗೆ ಮಧ್ಯವರ್ತಿ ಅಧಿಕಾರಶಾಹಿ ಅತ್ಯವಶ್ಯ ಎಂಬುದನ್ನಾತ ಕಂಡುಕೊಂಡಿದ್ದ. ಮನ್ರೋ ಬರೆಯುತ್ತಾನೆ: “ಈ ವಿಷಯದಲ್ಲಿ (ತೆರಿಗೆ) ಬುದ್ಧಿವಂತ ಮತ್ತು ಅನುಭವಿ ಸ್ಥಳೀಯರನ್ನು ರೆವೆನ್ಯೂ ಮುಖ್ಯಸ್ಥರನ್ನಾಗಿ ಮಾಡಿ ರೆವೆನ್ಯೂ ಮಂಡಳಿಗೆ ಸಹಾಯ ಮಾಡುವಂತೆ ನೋಡಿಕೊಳ್ಳಬೇಕು. ಬೇರೆ ಇಲಾಖೆಗಳಲ್ಲಿ ಯುರೋಪಿನ ಅಧಿಕಾರಿಗಳಿಗೆ ಸಹಾಯ ಮಾಡಲು ಅನುಭವಿ ಸ್ಥಳೀಯರನ್ನು ನೇಮಿಸಿರುವಾಗ ತುಂಬಾ ಕಷ್ಟದ ಮತ್ತು ಅತ್ಯಂತ ಪ್ರಮುಖವಾದ ಕೆಲಸವಿರುವ ರೆವಿನ್ಯೂ ಇಲಾಖೆಯಲ್ಲಿ ಮಾಡದಿರುವುದು ಸಾಧುವಾ? ಅವರನ್ನು ಹೊರಗಿಡುವುದು ನಮಗೂ ಅವರಿಗೂ ಹಾನಿಯುಂಟುಮಾಡುತ್ತದೆ; ಅವರಿಲ್ಲದೆ ಇಲಾಖೆಯನ್ನು ಸಮರ್ಥವಾಗಿ ನಡೆಸುವುದು ಸಾಧ್ಯವಿಲ್ಲ. ಅವರನ್ನು ನೇಮಿಸಿಕೊಂಡ ಮೇಲೂ ತೆರಿಗೆ ವಿಧಿಸುವ ವ್ಯಾಪಾರದಲ್ಲಿ ಅವರಿಗೂ ಒಂದು ಭಾಗ ಕೊಡಬೇಕು. ಇದು ಅವರ ಮತ್ತು ಸರಕಾರದ ನಡುವೆ ಬಂಧವನ್ನೇರ್ಪಿಡುಸುತ್ತದೆ, ಅವರ ದೃಷ್ಟಿಯಲ್ಲಿ ಅವರು ಮೇಲ್ಮೆಗೇರುತ್ತಾರೆ ಮತ್ತು ಉನ್ನತ ಸ್ಥಾನ ಪಡೆಯುವ ಸಲುವಾಗಿ ತಮ್ಮ ಕರ್ತವ್ಯವನ್ನು ಉತ್ಸುಕತೆಯಿಂದ ಮಾಡಲು ಪ್ರೋತ್ಸಾಹಿಸುತ್ತದೆ. ದೇಶಕ್ಕೆ ತೆರಿಗೆ ವಿಧಿಸುವ ಅಧಿಕಾರವನ್ನು ಸಂಪೂರ್ಣವಾಗಿ ಸ್ಥಳೀಯರ ಕೈಗೆ ಕೊಡುವುದು ಸಾಧ್ಯವಿಲ್ಲವಾದರೂ ನಮ್ಮ ಮೇಲ್ವಿಚಾರಿಕೆಯಲ್ಲಿ ಅವರನ್ನು ಎಷ್ಟು ನಂಬಿ ಕೆಲಸ ವಹಿಸಬಹುದೋ ಅಷ್ಟನ್ನೂ ವಹಿಸಬಹುದು. “(103) 

1831ರಲ್ಲಿ ಮೂರನೇ ಕೃಷ್ಣರಾಜ ಒಡೆಯರನ ಆಳ್ವಿಕೆಯನ್ನು ರದ್ದು ಆಡಿ ಮೈಸೂರಿನಲ್ಲಿ ಬ್ರಿಟೀಷರು ನೇರ ಆಡಳಿತ ನಡೆಸಿದಾಗ ಕಮಿಷನರ್ರಾಗಿದ್ದ ಎಲ್.ಬಿ.ಬೌರಿಂಗ್ ಮನ್ರೋನ ಯೋಜನೆಗಳನ್ನು ಪುರಸ್ಕರಿಸುತ್ತಾನೆ. ಬೌರಿಂಗ್ ಬರೆಯುತ್ತಾನೆ: “ಪ್ರಸ್ತುತ ಪರಿಸ್ಥಿತಿಯಲ್ಲಿ ಮೈಸೂರು ಸರಕಾರದ ಆಡಳಿತ ನಡೆಸುತ್ತಿರುವುದು ಮಹಾರಾಜನ ಪರವಾಗಿ ಎನ್ನುವುದರ ನೆನಪು ನಮಗಿರಬೇಕು. ದಾರಿತೋರುವ ಕೈ ಯುರೋಪಿನ ಅಧಿಕಾರಿಗಳದಾದರೂ ಸೂಕ್ತ ಸಂಖೈಯಲ್ಲಿ ಸ್ಥಳೀಯ ಅಧಿಕಾರಿಗಳನ್ನು ನಂಬಿಕಸ್ಥ ಮತ್ತು ಪ್ರಮುಖ ಸ್ಥಾನಗಳಲ್ಲಿರುಸುವುದು ನ್ಯಾಯಯುತವಾದ ಉತ್ತಮ ನೀತಿಯಾಗಿದೆ. ಈ ನಿರ್ಧಾರಗಳು ಮಹಾರಾಜನನ್ನೊರತುಪಡಿಸಿ ಬೇರೆ ಆಳ್ವಿಕೆಯ ಬಗ್ಗೆ ಯೋಚಿಸದ ಸ್ಥಳೀಯ ಅಧಿಕಾರಿಗಳಿಗೆ ಸಮಾಧಾನ ಕೊಡುತ್ತದೆ, ನಮ್ಮ ಪ್ರಭಾವವನ್ನು ಹೆಚ್ಚಿಸುತ್ತದೆ ಎಂದು ನನ್ನ ಅನಿಸಿಕೆ.” (104) 

ಭಾರತೀಯರನ್ನು ‘ಬೆಳೆಸಲು’ದ್ದೇಶಿಸಿದ ಬ್ರಿಟೀಷರಿಗಿದ್ದ ಗ್ರಹಿಕೆಯಿದು; ಭಾರತೀಯರು ಕೂಡ ಅವರ ಉದ್ದೇಶಗಳಿಗೆ ಜೊತೆಯಾಗಿ ವಸಾಹತಿನ ಜೊತೆ ನಿಲ್ಲಲಿ ಎಂಬ ನಿರೀಕ್ಷೆ. ಮನ್ರೋಗಿದು ಬ್ರಿಟೀಷ್ ವಸಾಹತುಶಾಹಿಯ ನಿರಂತರತೆಗೆ ಬೇಕೇ ಬೇಕಿದ್ದ ಅಂಶವೆನ್ನಿಸಿತ್ತು. ಕೊನೆಗೆ ದೇಶದಲ್ಲಿ ಬ್ರಿಟೀಷರೇ ಇಲ್ಲದಿದ್ದರೂ ಪರೋಕ್ಷ ಆಡಳಿತ ನೀತಿಯಿಂದ ವಸಾಹತುಶಾಹಿಯ ಪ್ರಭಾವ ಇದ್ದೇ ಇರಬೇಕೆಂಬ ದೂರಗಾಮಿ ಆಲೋಚನೆ. ಅಂಥ ಪರಿಸ್ಥಿತಿ ಇನ್ನೂ ಉದಯಿಸಿರಲಿಲ್ಲವಾದರೂ ಜನಪ್ರಿಯ ವಾಂಛೆಗಳನ್ನು ಅಭ್ಯಸಿಸಿದ್ದ ಮನ್ರೋಗೆ ಅಂತದೊಂದು ಮುಕ್ತಾಯವಿರಬಹುದೆಂದು ಅನ್ನಿಸಿತ್ತು. ಒಬ್ಬ ನಿಜವಾದ ವಸಾಹತುಶಾಹಿಯಾಗಿ, ಕಡಲಾಚೆ ಇರುವ ವಸಾಹತು ದೊರೆಯ ಪ್ರಭಾವ ಅಚ್ಚಳಿಯದಂತಿರಲು ಮಧ್ಯವರ್ತಿಗಳ ಪಾತ್ರದ ಪ್ರಾಮುಖ್ಯತೆಯನ್ನಾತ ಅರಿತಿದ್ದ. 

ಮನ್ರೋ ಬರೆಯುತ್ತಾನೆ: “ಭಾರತವನ್ನು ವಶಪಡಿಸಿಕೊಂಡಿರುವುದನ್ನು ತಾತ್ಕಾಲಿಕ ಪ್ರಕ್ತಿಯೆ ಎಂಬಂತೆ ನೋಡಬಾರದು. ಎಲ್ಲಿಯವರೆಗೆ ಸ್ಥಳೀಯರು ತಮ್ಮ ಗತಕಾಲದ ಮೂಢನಂಬಿಕೆಗಳನ್ನು ಮತ್ತು ಪೂರ್ವಾಗ್ರಹಗಳನ್ನು ಸಂಪೂರ್ಣವಾಗಿ ತೊಡೆದು ಹಾಕಿ ಒಂದು ಸುಭದ್ರ ಸರಕಾರವನ್ನು ರಚಿಸಿ ನಿರ್ವಹಿಸುವುದಕ್ಕೆ ಯೋಗ್ಯರಾಗುತ್ತಾರೋ ಅಲ್ಲಿಯವರೆಗೂ ಭಾರತ ನಮ್ಮ ವಶದಲ್ಲಿಯೇ ಇರಬೇಕು. ಅಂತಹುದೊಂದು ಸಮಯ ಬಂದಾಗ ಬ್ರಿಟೀಷರು ನಿಧಾನಕ್ಕೆ ಹಂತಹಂತವಾಗಿ ಭಾರತದ ಮೇಲಿನ ತಮ್ಮ ನಿಯಂತ್ರಣ ಹಿಂತೆಗೆದುಕೊಳ್ಳುವುದು ಬಹುಶಃ ಎರಡೂ ದೇಶಗಳ ದೃಷ್ಟಿಯಿಂದ ಒಳ್ಳೆಯದು.” (105) 

ಮಧ್ಯವರ್ತಿಗಳನ್ನು ಬೆಳೆಸಲು ಬ್ರಿಟೀಷ್ ವಸಾಹತಿಗಿದ್ದ ಕಾರಣವಿದು. ಬಂಡವಾಳಶಾಹಿ ನಾಗರೀಕತೆಗೆ ಕೆಲಸಗಳನ್ನು ನಿರ್ವಹಿಸಲು ಸಮರ್ಥನಿರದ ಫ್ಯೂಡಲ್ ದೊರೆ ಅವಲಕ್ಷಣದಂತಿದ್ದ. ಮೇಕಿಂಗ್ ಹಿಸ್ಟರಿಯ ಮೂರನೇ ಸಂಪುಟದಲ್ಲಿ ಮಧ್ಯವರ್ತಿಗಳಿಗೆ ಅಧಿಕಾರ ಹಸ್ತಾಂತರಿಸಿದ ಕಾರ್ಯ ಹೇಗೆ ವಸಾಹತು ನಮ್ಮನ್ನು ಲೂಟಿ ಮಾಡಲು ಅನುವು ಮಾಡಿಕೊಟ್ಟಿತು ಮತ್ತು ಬ್ರಿಟೀಷರು ಕಾಲ್ತೆಗೆದ ಮೇಲೂ ಹೇಗದು ಧಕ್ಕೆಯಾಗದೆ ಉಳಿಯಿತು ಎಂಬುದನ್ನು ನೋಡೋಣ. 

ಮುಂದಿನ ವಾರ:
ಶೋಷಕ ತ್ರಿಮೂರ್ತಿಗಳು ಮತ್ತು ಪ್ರತಿಗಾಮಿ ಸರಕಾರ

Disclaimer: ಮೇಕಿಂಗ್ ಹಿಸ್ಟರಿ ಆಂಗ್ಲ ಪುಸ್ತಕದ ಅನುವಾದಿಸಲು ಬೇಕಾದ ಅಧಿಕೃತ ಹಕ್ಕುಗಳು ನನ್ನಲ್ಲಿಲ್ಲ. ಅನುವಾದದ ಹಕ್ಕನ್ನು ಕೊಡುವವರಲ್ಲನೇಕರು ಜೈಲಿನಲ್ಲಿದ್ದಾರಂತೆ. ಯಾರಲ್ಲಾದರೂ ಅಧಿಕೃತ ಅನುವಾದದ ಹಕ್ಕುಗಳು ಇದ್ದು ಆಕ್ಷೇಪಣೆ ಎತ್ತಿದರೆ ಕ್ಷಮಾಪಣೆಯೊಂದಿಗೆ ಅನುವಾದದ ಕಾರ್ಯವನ್ನು ನಿಲ್ಲಿಸಲಾಗುವುದು. ಸಾಕೇತ್ ರಾಜನ್ ದೃಷ್ಟಿಯ ಕರ್ನಾಟಕದ ಇತಿಹಾಸ ಕನ್ನಡ ಬಲ್ಲವರಿಗೂ ತಲುಪಲಿ ಎಂಬ ಉದ್ದೇಶದಿಂದ ಇದನ್ನು ಪ್ರಕಟಿಸಲಾಗುತ್ತಿದೆಯೇ ಹೊರತು ಯಾವುದೇ ವಾಣಿಜ್ಯ ಉದ್ದೇಶದಿಂದಲ್ಲ - ಡಾ. ಅಶೋಕ್. ಕೆ. ಆರ್.

No comments:

Post a Comment