Feb 24, 2016

ಪೆಟ್ರೋಲ್ ಬೆಲೆ ಎಷ್ಟಿರಬೇಕಿತ್ತು? ಎಷ್ಟಿದೆ ಗೊತ್ತಾ?

ಇಂಧನ ಖಾತೆ ಸಚಿವರಾದ ಧರ್ಮೇಂದ್ರ ಪ್ರಧಾನ್ ರವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಸಂಬಂಧಪಟ್ಟ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಉತ್ತರ ಕೊಟ್ಟಿದ್ದಾರೆ. ಈ ಉತ್ತರದ ಆಧಾರದಲ್ಲೇ ನೋಡುವುದಾದರೆ ನಮಗಿವತ್ತು ಪೆಟ್ರೋಲ್ ಮತ್ತು ಡೀಸೆಲ್ ಐವತ್ತು ರುಪಾಯಿಗೆ ಮತ್ತು ಮೂವತ್ತೈದು ರುಪಾಯಿಗೆ ಸಿಗಬೇಕಿತ್ತು. ಹೇಗಂತೀರಾ?
2014ರ ಮೇ ತಿಂಗಳಿನಲ್ಲಿ (ಅಂದರೆ ಅಚ್ಛೇ ದಿನ್ ಸರಕಾರ ಶುಭಾರಂಭ ಮಾಡಿದ ತಿಂಗಳು) ಭಾರತ ಒಂದು ಬ್ಯಾರೆಲ್ ಸಂಸ್ಕರಿಸದ ತೈಲಕ್ಕೆ 106.85 ಡಾಲರ್ ಕೊಡುತ್ತಿತ್ತು. ಈ ತಿಂಗಳು, ಅಂದರೆ ಫೆಬ್ರವರಿ 2016 ರಲ್ಲಿ ಈ ಬೆಲೆ 29.80 ಡಾಲರ್ರಿನಷ್ಟಿದೆ. ಅಲ್ಲಿಗೆ ಹೆಚ್ಚು ಕಡಿಮೆ 66% ಕಡಿಮೆಯಾಗಿದೆ. ಅದೇ ಮೇ 2014ರಲ್ಲಿ ಪೆಟ್ರೋಲಿನ ಬೆಲೆ 71.41 ರುಪಾಯಿ ಇದ್ದಿದ್ದು ಈಗ 59.95 ರುಪಾಯಿಯಾಗಿದೆ. ಡೀಸೆಲ್ಲಿನ ಬೆಲೆ 2014ರಲ್ಲಿ 55.49 ರುಪಾಯಿಯಷ್ಟಿದ್ದರೆ ಈಗ 44.68 ರುಪಾಯಿ (ಬೆಲೆಗಳು- ದೆಹಲಿಯದ್ದು, ಕರ್ನಾಟಕದಲ್ಲಿ ಇನ್ನೂ ಜಾಸ್ತಿ).
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ 66 % ಕಡಿಮೆಯಾಗಿದ್ದರೆ ಪೆಟ್ರೋಲ್ ಮತ್ತು ಡೀಸೆಲ್ಲಿನ ಬೆಲೆಯಲ್ಲಿ ಕೇವಲ 16 % ಕಡಿಮೆಯಾಗಿದೆ. ಕಾರಣ?
ಕಾರಣ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಯದ್ವಾತದ್ವಾ ಏರಿಸಿರುವ ಕೇಂದ್ರ ಸರಕಾರ ಅಂತರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ತೈಲ ಬೆಲೆ ಇಳಿಯದ ಹಾಗೆ ನೋಡಿಕೊಂಡುಬಿಟ್ಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮಾರುಕಟ್ಟೆಯಾಧಾರಿತವಾಗಿರುವಂತೆ ಮಾಡಿದ್ದು ಬೆಲೆ ಏರಿಸುವುದಕ್ಕಷ್ಟೇ ಸೀಮಿತವಾಗಿ ಬೆಲೆ ಇಳಿಸಲು ಉಪಯುಕ್ತವಾಗಿಲ್ಲ. ಬೆಲೆ ಇಳಿಯುವ ಸಂದರ್ಭ ಬಂದಾಗೆಲ್ಲ ತೆರಿಗೆಯನ್ನು ಹೆಚ್ಚಿಸಲಾಗಿದೆ. ಮುಂದೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿದಾಗ ತೆರಿಗೆಯನ್ನು ಇಳಿಸಿ ಬೆಲೆ ಏರದಂತೆ ನೋಡಿಕೊಳ್ಳುತ್ತಾರಾ? ಮೇ 2014ರಿಂದ ಇಲ್ಲಿಯವರೆಗೆ ಕೇಂದ್ರ ಸರಕಾರ ಪೆಟ್ರೋಲಿನ ಮೇಲಿನ ತೆರಿಗೆಯನ್ನು ಹನ್ನೆರಡು ರುಪಾಯಿಯಷ್ಟು ಏರಿಸಿದ್ದರೆ ಡೀಸೆಲ್ಲಿನ ಮೇಲಿನ ತೆರಿಗೆಯನ್ನು ಹತ್ತು ರುಪಾಯಿಯಷ್ಟು ಏರಿಸಿದೆ. ರುಪಾಯಿ ಮೌಲ್ಯದಲ್ಲಿ ಸ್ವಲ್ಪ ಕುಸಿತವಿರುವುದು ಹೌದಾದರೂ ತೆರಿಗೆಯನ್ನು ಯದ್ವಾ ತದ್ವ ಏರಿಸದಿದ್ದಲ್ಲಿ ಜೇಬು ಒಂದಷ್ಟು ಭಾರವಾಗುತ್ತಿತ್ತೇನೋ?!
Correction: In the picture showing the details the rupee value has been interchanged. In May 2014 one dollar equated to 59 dollars and in Feb 2016 it is 68. Thanks Anant Rao for correcting the mistake.

No comments:

Post a Comment