Feb 2, 2016

ರೋಹಿತ್ ವೇಮುಲನನ್ನು ಸಾಯಿಸಿದ್ಯಾರು?

ಬ್ರಾಹ್ಮಣ್ಯದ ಆಳ್ವಿಕೆಯನ್ನು ಮತ್ತೆ ಮುನ್ನೆಲೆಗೆ ತರಲು ನಡೆಯುತ್ತಿರುವ ಪ್ರಯತ್ನಗಳನ್ನು ನೋಡಿಕೊಂಡು ಮೌನ ಪ್ರೇಕ್ಷಕರಾಗುಳಿದವರೆಲ್ಲರೂ ರೋಹಿತನ ಸಾವಿಗೆ ಕಾರಣ.
ಆನಂದ್ ತೇಲ್ತುಂಬೆ
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್.

ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾನಿಲಯದ 26 ವರ್ಷದ ದಲಿತ ಪಿ.ಎಚ್.ಡಿ ಸ್ಕಾಲರ್ ರೋಹಿತ್ ವೇಮುಲ, ತನ್ನ ಕೊನೆಯ ಪತ್ರದಲ್ಲಿ ಯಾರನ್ನೂ ದೂಷಿಸಿಲ್ಲ, ಗೆಳೆಯರನ್ನು ಅಥವಾ ಶತ್ರುಗಳನ್ನು; ಅವನ ಕೊಲೆಮಾಡಿದವರಿಗೆ ಮುಗ್ಧತೆಯನ್ನು ಸಾಬೀತುಪಡಿಸಲು ಈ ಪತ್ರ ಆಹಾರವಾಯಿತು. ಕಾರ್ಲ್ ಸೆಗಾನನಂತೆ ವಿಶ್ವವನ್ನು ಅನ್ವೇಷಿಸಬೇಕೆಂದು ತನ್ನ ಕಲ್ಪನೆಗಳನ್ನು ತೇಲಿಬಿಡುವ ಪತ್ರ ಬರೆದ ಆಕಾಂಕ್ಷಿಯೊಬ್ಬ, ತನ್ನೊಳಗಿನ ಹುಡುಕಾಟದಲ್ಲಿ, ಛೇದಗೊಂಡ ದಲಿತಾತ್ಮದಲ್ಲಿ, ಜಾತಿ ವ್ಯವಸ್ಥೆಯ ನಾಡಿನಲ್ಲಿ, ಶೋಷಕರ ಶೋಷಣೆಯಿಂದ ನಿರರ್ಥಕತೆಯ ಅಸ್ತಿತ್ವವನ್ನು ಕೊನೆಗಾಣಿಸಿಕೊಂಡುಬಿಡುತ್ತಾನೆ. ಅವನ ಸಾವು ಒಂದಂಶವಂವನ್ನು ಸ್ಪಷ್ಟಪಡಿಸುತ್ತದೆ, ಆತ್ಮಹತ್ಯೆಯೆಂದರೆ ತಮ್ಮನ್ನು ತಾವೇ ಕೊಂದುಕೊಳ್ಳುವುದಲ್ಲ; ಪರಿಸ್ಥಿತಿ ಸೃಷ್ಟಿಸಿದ ಸಾವದು, ಸಂಸ್ಕೃತಿ, ಪದ್ಧತಿ ಮತ್ತು ಸಂಸ್ಥೆಗಳು ಕೊಲೆಗಾರರಿಗೆ ರಕ್ಷಣೆ ನೀಡುವ ಪರಿಸ್ಥಿತಿ.

ಹಾಸ್ಟೆಲ್ಲಿನಿಂದ ಹೊರಹಾಕಿದ ನಂತರ ರೋಹಿತ್ ವಿಶ್ವವಿದ್ಯಾನಿಲಯದ ತೆರೆದ ಜಾಗದಲ್ಲಿ ಹೂಡಿದ ತಾತ್ಕಾಲಿಕ ಟೆಂಟಿನಲ್ಲಿ ತನ್ನ ನಾಲ್ಕು ಸಹವರ್ತಿ ಕಾಮ್ರೇಡುಗಳ ಜೊತೆಗೆ ಹನ್ನೆರಡು ದಿನಗಳ ಕಾಲ ಇದ್ದಿದ್ದು ಆತ್ಮಾಭಿಮಾನಕ್ಕಾಗಿ ನಡೆದ ಹೋರಾಟ. ಡಿಸೆಂಬರ್ ಹದಿನೆಂಟರಂದು ವಿಶ್ವವಿದ್ಯಾನಿಲಯದ ಉಪಕುಲಪತಿಗಳಿಗೆ ಬರೆದ ಕುಟುಕುವ ಪತ್ರ, ಇಪ್ಪತ್ತೇಳನೇ ಹುಟ್ಟುಹಬ್ಬಕ್ಕೆ ತನ್ನ ಸ್ನೇಹಿತರಿಗೊಂದು ಪಾರ್ಟಿ ಕೊಡಲು ದುಡ್ಡಿಲ್ಲದ್ದಕ್ಕೆ ಗೆಳೆಯರೊಟ್ಟಿಗೆ ವ್ಯಕ್ತಪಡಿಸಿದ ಬೇಸರ, ತನ್ನ ತಾಯಿಗೆ ಮಾಡಿದ ಕೊನೆಯ ಕರೆಯನ್ನು ಮಧ್ಯದಲ್ಲೇ ತುಂಡರಿಸಿದ್ದು, ಇದಿಷ್ಟು ಸಾಕಲ್ಲವೇ ಹತ್ಯಾ ಪರಿಸ್ಥಿತಿ ಮತ್ತು ಸಂಭಾವ್ಯ ಕೊಲೆಗಾರರ ಮೇಲಿರುವ ಪರದೆಯನ್ನು ಹರಿದು ಹಾಕಲು?

ಕೇಸಿನ ವಿವರಗಳೆಲ್ಲವೂ ಸಾರ್ವಜನಿಕರಿಗೀಗ ಲಭ್ಯವಿದೆ. ಎಬಿವಿಪಿಯ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಅಧ್ಯಕ್ಷ ನಂದನಂ ಸುಶೀಲ್ ಕುಮಾರ್ ಮೇಲೆ ನಡೆಯಿತೆನ್ನಲಾದ ಹಲ್ಲೆಯಿಂದ ರೋಹಿತನನ್ನೂ ಸೇರಿಸಿ ಐವರಿಗೆ ಶಿಕ್ಷೆ ವಿಧಿಸಿದರಲ್ಲ; ಆ ಹಲ್ಲೆ ನಡೆಯಿತೆನ್ನುವುದೇ ಇನ್ನೂ ಸಾಬೀತಾಗಿಲ್ಲ. ಬದಲಿಗೆ ಎಲ್ಲಾ ತನಿಖೆಗಳು, ವೈದ್ಯರ ಹೇಳಿಕೆ ಮತ್ತು ಸಾಕ್ಷಿಗಳು ಅದು ನಡೆದಿಲ್ಲ ಎಂದೇ ಧೃಡಪಡಿಸುತ್ತಾರೆ. ಆಗಿದ್ದರೂ ದಲಿತ ವಿದ್ಯಾರ್ಥಿಗಳನ್ನು ಶಿಕ್ಷಿಸುತ್ತಾರೆ. ವಿಶ್ವವಿದ್ಯಾನಿಲಯದ ಆಡಳಿತ ಉಲ್ಟಂಪಲ್ಟ ನಿರ್ಣಯಗಳನ್ನು ತೆಗೆದುಕೊಂಡದ್ದು ಜಾತಿ ತಾರತಮ್ಯ ಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದ್ದುದರ ಬಗ್ಗೆ ಸೂಚಿಸುವುದರ ಜೊತೆಗೆ ಹೊರಗಿನ ಶಕ್ತಿಗಳ ಪ್ರಭಾವ ಮತ್ತು ಅಸಮಂಜಸ ಆಡಳಿತ ರೀತಿಯನ್ನು ತೋರಿಸುತ್ತದೆ.

ಇಡೀ ಘಟನೆಗೊಂದು ಪ್ರಮುಖ ತಿರುವಾಗಿದ್ದು ನರೇಂದ್ರ ಮೋದಿ ಸರಕಾರದ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಮಾನವ ಸಂಪನ್ಮೂಲ ಇಲಾಖೆಯ ಸ್ಮ್ರತಿ ಇರಾನಿಗೆ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯ “ಜಾತಿವಾದಿಗಳ, ತೀವ್ರಗಾಮಿಗಳ ಮತ್ತು ದೇಶದ್ರೋಹಿ ರಾಜಕಾರಣದ ಗೂಡಾಗಿದೆ” ಎಂದು ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು. ಇದಕ್ಕೆ ಪೂರಕವೆಂಬಂತೆ ಅಂಬೇಡ್ಕರ್ ವಿದ್ಯಾರ್ಥಿ ಸಂಘದವರು ಯಾಕೂಬ್ ಮೆಮನನಿಗೆ ವಿಧಿಸಿದ ನೇಣನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಯನ್ನು ಉಲ್ಲೇಖಿಸಿದ್ದರು. ವಿವಾದಾತ್ಮಕ ಹೆಚ್.ಆರ್.ಡಿ ಸಚಿವೆ, ಬಹುಶಃ ಹೆಚ್.ಆರ್.ಡಿಯನ್ನು Hindutva resource development ಎಂದು ಭಾವಿಸಿಕೊಂಡಿರುವ ಸಚಿವೆ ಇಲಾಖೆಯಿಂದ ಉಪಕುಲಪತಿಗಳಿಗೆ ಪತ್ರ ಬರೆಯಲಾಗುತ್ತದೆ, ಒಂದು ಅನಾಮಧೇಯ ದೂರಿನ ಕಾರಣದಿಂದ ಐಐಟಿ ಮದ್ರಾಸಿನಲ್ಲಿ ಅಂಬೇಡ್ಕರ್ ಪೆರಿಯಾರ್ ಸ್ಟಡಿ ಸರ್ಕಲ್ಲನ್ನು ನಿಷೇಧಿಸಲು ಬರೆದಂತೆ, ದೇಶವ್ಯಾಪಿ ಪ್ರತಿಭಟನೆಗದು ಕಾರಣವಾಗಿತ್ತು. ಮೊದಲ ಪತ್ರದ ಬೆನ್ನ ಹಿಂದೆಯೇ ವಿವಿಧ ಮಟ್ಟದ ಸೆಕ್ರೆಟರಿಗಳು ಒಂದರ ಹಿಂದೊಂದರಂತೆ ನಾಲ್ಕು ಪತ್ರಗಳನ್ನು ಬರೆದದ್ದು ಆ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಹಾಕಲಾದ ಒತ್ತಡ ಎಷ್ಟಿತ್ತೆಂಬುದನ್ನು ತಿಳಿಸುತ್ತದೆ. ಮಂತ್ರಿಗಳಿಂದ ಜಾತಿವಾದಿ ಆಡಳಿತಕ್ಕೆ ಸಿಕ್ಕ ಈ ಭಾರೀ ಬೆಂಬಲದಿಂದಲೇ ವಿದ್ಯಾರ್ಥಿಗಳಿಗೆ ಆ ಶಿಕ್ಷೆಯಾಯಿತು, ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಇದು ಗಲ್ಲು ಶಿಕ್ಷೆಗಿಂತಲೂ ಕಡಿಮೆಯೇನಲ್ಲ. ಹಾಸ್ಟೆಲ್ಲು, ಆಡಳಿತ ಕಟ್ಟಡಗಳು, ಸಾರ್ವಜನಿಕ ಸ್ಥಳಕ್ಕೆ ಹೋಗದೆ, ಸಹಪಾಟಿ ವಿದ್ಯಾರ್ಥಿಗಳ ಜೊತೆಗೆ ಮಾತನಾಡದೆ ಸಂಶೋಧನಾ ವಿದ್ಯಾರ್ಥಿಗಳು ಈ ಭೂಮಿಯ ಮೇಲೆ ಅಸ್ತಿತ್ವದಲ್ಲಿರುವುದಾದರೂ ಹೇಗೆ? ಸಂಶೋಧನೆಗೆ ಸಾವಲ್ಲವೇ ಇದು?

ಹಾಸ್ಟೆಲ್ಲಿನಿಂದ ಹೊರಹಾಕಿದ ಮೇಲೆ, ವಿದ್ಯಾರ್ಥಿಗಳು ಹೈದರಾಬಾದಿನ ಥಂಡಿಯಲ್ಲಿ ತೆರೆದ ಜಾಗದಲ್ಲಿ ಇದ್ದರು, ಆಗಲೂ ಉಪಕುಲಪತಿಗಳಿಗೆ ತಮ್ಮ ತಪ್ಪು ನಿರ್ಧಾರವನ್ನು ಗ್ರಹಿಸಲಾಗಲಿಲ್ಲ. ಡಿಸೆಂಬರ್ ಹದಿನೆಂಟರು ಉಪಕುಲಪತಿಗಳಿಗೆ ಬರೆದ ಪತ್ರದಲ್ಲಿ ರೋಹಿತ್ ದಲಿತ ವಿದ್ಯಾರ್ಥಿಗಳು ಮತ್ತು ಎಬಿವಿಪಿ ನಡುವಿನ ಗಲಾಟೆಯನ್ನು ತೀರ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಿದ್ದೀರಿ ಎಂದು ಆರೋಪಿಸಿದ್ದರು. ವಿಶ್ವವಿದ್ಯಾನಿಲಯದಲ್ಲಿ ದಲಿತ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ವ್ಯಂಗ್ಯವಾಗಿ ಬರೆಯುತ್ತಾ ಎಲ್ಲಾ ದಲಿತ ವಿದ್ಯಾರ್ಥಿಗಳಿಗೂ ಪ್ರವೇಶಾತಿಯ ಸಮಯದಲ್ಲೇ ಒಂದಷ್ಟು ವಿಷ ಮತ್ತೊಂದು ಹಗ್ಗ ಕೊಟ್ಟುಬಿಡಬೇಕು ಎಂದು ಕೇಳಿಕೊಳ್ಳುತ್ತಾನೆ ಮತ್ತು ತನ್ನಂಥಹ ವಿದ್ಯಾರ್ಥಿಗಳಿಗೆ ದಯಾಮರಣದ ಸೌಕರ್ಯವನ್ನು ಒದಗಿಸಬೇಕು ಎಂದು ಬರೆಯುತ್ತಾನೆ. ಒಬ್ಬ ಜವಾಬುದಾರಿಯುತ ವ್ಯಕ್ತಿಗೆ ವಿದ್ಯಾರ್ಥಿಯ ಮನಸ್ಥಿತಿಯನ್ನರಿಯಲು ಇದೊಂದು ಪತ್ರವೇ ಸಾಕಿತ್ತು. ಗುಂಟೂರಿನ ಮನೆಯಲ್ಲಿರುವ ಅಮ್ಮ ಮತ್ತು ತಮ್ಮನನ್ನು ನೋಡಿಕೊಳ್ಳಲು ಕಳುಹಿಸುತ್ತಿದ್ದ ಸ್ಟೈಪಂಡ್ ಹಣ ಕಳೆದಾರು ತಿಂಗಳಿಂದ ನಿಂತು ಹೋಗಿತ್ತು.

ಕುತೂಹಲವೆಂದರೆ, ಒಂದೆಡೆ ಸರಕಾರ ಬಾಬಾಸಾಹೇಬ್ ಅಂಬೇಡ್ಕರರ 125ನೇ ಜನ್ಮೋತ್ಸವವನ್ನು ಅತ್ಯದ್ಭುತವಾಗಿ ಆಚರಿಸಿ ದಲಿತ ಮತಗಳನ್ನು ಸೆಳೆಯಲು ಕಾಂಗ್ರೆಸ್ಸಿಗೆ ಪೈಪೋಟಿ ಕೊಡುತ್ತದೆ. ಮತ್ತೊಂದೆಡೆ, ಅಂಬೇಡ್ಕರ್ ಬೆಂಬಲಿಸಿದ ದಲಿತ ಪ್ರತಿಭಟನೆಯ ದನಿಗಳನ್ನು ಹತ್ತಿಕ್ಕಲು ಆಶಿಸುತ್ತದೆ. ಪ್ರಾಥಮಿಕ ಶಿಕ್ಷಣಕ್ಕಿಂತ ಉನ್ನತ ಶಿಕ್ಷಣಕ್ಕೆ ಅಂಬೇಡ್ಕರ್ ಹೆಚ್ಚು ಮಹತ್ವ ಕೊಟ್ಟಿದ್ದರು, ಕಾರಣ ಉನ್ನತ ಶಿಕ್ಷಣವಷ್ಟೇ ಜನರಲ್ಲಿ ಸರಿಯಾದ ಯೋಚನೆಯನ್ನು ರೂಪಸುತ್ತದೆ ಮತ್ತು ಜಾತಿ ತಾರತಮ್ಯದ ಶಕ್ತಿಗಳ ಎದುರು ಎದ್ದು ನಿಲ್ಲುವ ನೈತಿಕತೆಯನ್ನು ಕೊಡುತ್ತದೆ ಎಂದವರು ಕಂಡುಕೊಂಡಿದ್ದರು. ಅಂಬೇಡ್ಕರರನ್ನು ಹಾಡಿ ಹೊಗಳುವ ಸರಕಾರ ಅಂಬೇಡ್ಕರರ ಜ್ಞಾನದೀವಿಗೆಯನ್ನು ಮುನ್ನಡೆಸಲು ಶಕ್ತರಾಗಿರುವವರನ್ನು ಎಲ್ಲಾ ವಿಧದಿಂದಲೂ ಹತ್ತಿಕ್ಕುತ್ತಿದೆ.

ಪ್ರಪಂಚದಾದ್ಯಂತ ಪ್ರತಿಭಟಿಸುವ ಮುಸ್ಲಿಂ ಯುವಕರನ್ನು ಸುಲಭವಾಗಿ ಉಗ್ರಗಾಮಿ ಎಂದು ಹೇಗೆ ಕರೆದುಬಿಡಲಾಗುವುದೋ, ದಲಿತ – ಆದಿವಾಸಿ ಯುವಕರನ್ನು ತೀವ್ರಗಾಮಿ, ಜಾತಿವಾದಿ ಮತ್ತು ದೇಶದ್ರೋಹಿಗಳೆಂದು ಬಿಂಬಿಸಿಬಿಡಲಾಗುತ್ತಿದೆ. ಭಾರತದ ಜೈಲುಗಳಲ್ಲಿ ಇಂತಹ ಮುಗ್ಧ ಯುವಕರನ್ನು ದೇಶದ್ರೋಹದ ನೆಪದಲ್ಲಿ, ಕಾನೂನುಭಂಗ ಚಟುವಟಿಕೆಯ ನೆಪದಲ್ಲಿ ತುಂಬಿಸಲಾಗಿದೆ. ಬಿಜೆಪಿ ಸಂಸ್ಥೆಗಳನ್ನು ಅದರಲ್ಲೂ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕೇಸರೀಕರಣಗೊಳಿಸಲು ತೋರಿಸುತ್ತಿರುವ ಆಕ್ರಮಣಕಾರಿ ಪ್ರವೃತ್ತಿ, ಮತ್ತಷ್ಟು ರೋಹಿತರನ್ನು ಮುಂಬರುವ ವರುಷಗಳಲ್ಲಿ ಸೃಷ್ಟಿಸಿಬಿಡಬಹುದು.

ಭಾರತದ ಬಹುತ್ವವನ್ನು ನಾಶಪಡಿಸಿ, ಬ್ರಾಹ್ಮಣ್ಯದ ಆಳ್ವಿಕೆಯನ್ನು ಮತ್ತೆ ಮುನ್ನೆಲೆಗೆ ತರಲು ನಡೆಯುತ್ತಿರುವ ಪ್ರಯತ್ನಗಳನ್ನು ನೋಡಿಕೊಂಡು ಮೌನ ಪ್ರೇಕ್ಷಕರಾಗುಳಿದವರೆಲ್ಲರೂ ನೇರವಾಗಿ ಈ ಪ್ರಕರಣಕ್ಕೆ ಸಂಬಂಧಿಸಿದವರ ಜೊತೆಗೆ ರೋಹಿತನ ಸಾವಿಗೆ ಕಾರಣ.

Teltumbde is a writer and civil rights activist with the Committee for Protection of Democratic Rights, Mumbai

No comments:

Post a Comment