Feb 18, 2016

ದೇಶದ್ರೋಹಿಗಳೆಂದರೆ ಯಾರು?

ಸಂಪತ್. ಜಿ
ದಿ ಹಿಂದೂ, 17/02/2015
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್.

ರೋಹಿತ್ ವೇಮುಲ ಮತ್ತು ಕನ್ಹಯ್ಯ ಕುಮಾರ್ ಇಬ್ಬರಿಗೂ ರಾಷ್ಟ್ರೀಯತೆ ಎಂದರೆ ಭಾರತದ ಜನರ ಅಭಿವೃದ್ಧಿಯೇ ಹೊರತು ಭಾರತ ಸರಕಾರದ್ದಲ್ಲ. ಇವರ ಈ ರಾಜಕೀಯ ದೃಷ್ಟಿಕೋನ ಗೂಂಡಾ ರಾಷ್ಟ್ರೀಯವಾದಿಗಳ ಕಣ್ಣಲ್ಲವರನ್ನು ಅಪಾಯಕಾರಿಯಂತೆ ಚಿತ್ರಿಸಿತು.

ಪ್ರಪಂಚದ ಇತರೆಡೆ ಇತಿಹಾಸದ ಪುನರಾವರ್ತನೆ ಮೊದಲು ದುರಂತದಂತೆ ನಡೆದು ನಂತರ ಪ್ರಹಸನವಾಗುತ್ತದೆ. 21ನೇ ಶತಮಾನದ ಭಾರತದಲ್ಲಿ ಇತಿಹಾಸ ಪ್ರಹಸನದಂತೆ ಪುನರಾವರ್ತನೆಯಾಗಿ ನಂತರ ಪ್ರೈಮ್ ಟೈಮಿನಲ್ಲಿ ಮುಂದುವರೆಯುತ್ತದೆ!

ಉನ್ಮತ್ತ ಟಿವಿ ನಿರೂಪಕರ ಒಂದು ಸಣ್ಣ ಗುಂಪು ದೇಶದ ಅತ್ಯುತ್ತಮ ವಿಶ್ವವಿದ್ಯಾನಿಯಲದ ಪ್ರತಿಭಾವಂತ ವಿದ್ಯಾರ್ಥಿಗಳನ್ನು "ದೇಶದ್ರೋಹಿ"ಗಳೆಂದು ಮತ್ತವರನ್ನು ಹಿಡಿದು ಬಡಿಯಬಯಸುವವರನ್ನು "ರಾಷ್ಟ್ರೀಯವಾದಿಗಳೆಂದು" ಇಡೀ ದೇಶವನ್ನು ಮೂರ್ಖರನ್ನಾಗಿ ಮಾಡಿಬಿಡಲು ಸಾಧ್ಯವಾ? 'ದೇಶದ್ರೋಹಿ'ಗಳನ್ನಿಡಿಯುವ ಹಳೆಯ ಆಟದಲ್ಲಿ ಭಾರತದ ಕುಸಿತವನ್ನು, ಭಾರತದ 'ವೈವಿದ್ಯತೆ' - ಕೊನೇ ಪಕ್ಷ ಬುದ್ಧಿವಂತಿಕೆಯ ಮಟ್ಟದಲ್ಲಿನ ವೈವಿಧ್ಯತೆ - ತಡೆಯಬಲ್ಲದಾ? ಆಡಳಿತ ವೈಖರಿಯನ್ನು ನೋಡುತ್ತಿದ್ದರೆ ತಡೆಯುವ ಸಾಧ್ಯತೆಗಳು ಕಡಿಮೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾಂಗ್ರೆಸ್ಸಿನ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ರಾಷ್ಟ್ರದ್ರೋಹಿ ಎಂದು ಕರೆದದ್ದನ್ನು ನಾವೆಲ್ಲರೂ ಕೇಳಿದ್ದೇವೆ. ಯಾಕೆ? ಯಾಕೆಂದರೆ ರಾಹುಲ್ ಗಾಂಧಿ ಜೆ.ಎನ್.ಯು (Jawaharlal Nehru University)ನ ರಾಷ್ಟ್ರವಿರೋಧಿ ವಿದ್ಯಾರ್ಥಿಗಳ ಜೊತೆ ನಿಂತ ಕಾರಣಕ್ಕೆ. ಶಾರವರ ಆರೋಪದ ಹಿಂದಿರುವ ರಾಜಕೀಯ ಉದ್ದೇಶಗಳನ್ನು ತಪ್ಪಾಗಿ ಅರ್ಥೈಸುವುದು ಸಾಧ್ಯವಾಗದು. ದುರದೃಷ್ಟವಶಾತ್ ರಾಹುಲ್ ಗಾಂಧಿಯನ್ನು ದೇಶದ್ರೋಹಿ ಎಂದು ಕರೆಯುವ ಅಮಿತ್ ಶಾರವರ ಯೋಚನೆ ಹೆಚ್ಚೆಂದರೆ ಒಂದು ಅಚ್ಚರಿ; ಕಡಿಮೆಯೆಂದರೆ ಅವರ ಎದುರಿರುವ ಕಲ್ಪಿತ ಮಾದರಿ.

ಈಗಾಗಲೇ, ಸಂಘ ಪರಿವಾರದ ರಾಷ್ಟ್ರೀಯತೆಯ ವರ್ಗೀಕರಣದ ಪ್ರಕಾರ, ಮಧ್ಯ ಭಾರತದ ಆದಿವಾಸಿಗಳು, ದಲಿತ ವಿದ್ಯಾರ್ಥಿಗಳು, ಎಡ ಪಂಥೀಯ ಬುದ್ಧಿಜೀವಿಗಳು, ಮಾನವ ಹಕ್ಕು ಹೋರಾಟಗಾರರು, ಒಂದು ನಿರ್ದಿಷ್ಟ ಧಾರ್ಮಿಕ ಅಲ್ಪಸಂಖ್ಯಾತರು, ಅಣು ವಿರೋಧಿ ಕಾರ್ಯಕರ್ತರು, ಬೀಫ್ ತಿನ್ನುವವರು, ಪಾಕಿಸ್ತಾನವನ್ನು ದ್ವೇಷಿಸದವರು, ಅಂತರ ಧರ್ಮೀಯ ದಂಪತಿಗಳು, ಸಲಿಂಗಕಾಮಿಗಳು ಮತ್ತು ಕಾರ್ಮಿಕ ಹೋರಾಟಗಾರರೆಲ್ಲ ದೇಶದ್ರೋಹಿಗಳು. ಸೋಮವಾರ ನವದೆಹಲಿಯ ಪಟಿಯಾಲ ಹೌಸಿನಲ್ಲಿ ನಡೆದ ಗೂಂಡಾ ರಾಷ್ಟ್ರೀಯತೆಯನ್ನು ಪರಿಗಣಿಸುವುದಾದರೆ ಈ ಪಟ್ಟಿಗೆ ಪತ್ರಕರ್ತರು, ಜೆ ಎನ್ ಯು ವಿದ್ಯಾರ್ಥಿಗಳ ರೀತಿ ಬಟ್ಟೆ ಧರಿಸಿದವರು, ಐಡೆಂಟಿಟಿ ಕಾರ್ಡ್ ಇಲ್ಲದವರು, ಗೂಂಡಾ ರಾಷ್ಟ್ರೀಯವಾದಿಗಳ ಕಾರ್ಯವನ್ನು ರೆಕಾರ್ಡ್ ಮಾಡುತ್ತಿದ್ದವರು ಮತ್ತು ಗೂಂಡಾ ರಾಷ್ಟ್ರೀಯವಾದಿಗಳ ಮಾತನ್ನು ವಿರೋಧಿಸುವವರನ್ನೆಲ್ಲ ದೇಶದ್ರೋಹಿಗಳ ಪಟ್ಟಿಗೆ ಸೇರಿಸಬಹುದು.

ಇದ ವೇಗದಲ್ಲಿ ಮುಂದುವರೆದರೆ, ಎನ್.ಡಿ.ಎ ತನ್ನ ಅಧಿಕಾರಾವಧಿಯನ್ನು ಮುಗಿಸುವಷ್ಟರಲ್ಲಿ ‘ದುರದೃಷ್ಟ’ವಶಾತ್ ಸಂಘ ಪರಿವಾರದ ಸದಸ್ಯರಾಗದವರೆಲ್ಲರೂ ದೇಶದ್ರೋಹಿಗಳಾಗಿಬಿಟ್ಟಿರುತ್ತಾರೆ. ಈ ದೇಶದ್ರೋಹಕ್ಕಿರುವ ಒಂದೇ ಮುಲಾಮೆಂದರೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯತೆಯ ದಬ್ಬಾಳಿಕೆ ಅಥವಾ ಬಹಿರಂಗವಾಗಿ ಹಲ್ಲೆ ನಡೆಸುವ ಭಜರಂಗ ದಳ; ಈ ಸಂದರ್ಭದಲ್ಲಿ ಭಾರತದ ದೇಶಪ್ರೇಮಿ ಪೋಲೀಸರು ಶಾಂತಿಯಿಂದ ಹೆಜ್ಜೆ ಹಾಕುತ್ತಿರುತ್ತಾರೆ, ಹಲ್ಲೆಕೋರರ ಜೊತೆಗೆ.

ಏನಿದು ಗೂಂಡಾ ರಾಷ್ಟ್ರೀಯವಾದವೆಂದರೆ? ದೇಶದ ಪ್ರಜೆಗಳಿಗೆ ದೇಶದ್ರೋಹಿ ಸರ್ಟಿಫಿಕೇಟು ಕೊಡುವ ಕೆಲಸವನ್ನು ತನ್ನ ಮೇಲೆ ತಾನೇ ಅಹಂನಿಂದ ಹೊತ್ತುಕೊಂಡಿರುವಾತನೇ ಗೂಂಡಾ ರಾಷ್ಟ್ರೀಯವಾದಿ. ಬೀದಿಯಲ್ಲಿ ನೀವು ಹೋಗುತ್ತಿರುವಾಗ ನಿಮ್ಮ ಬಳಿಗೆ ಬಂದು, ಕೆನ್ನೆಗೊಂದು ಹೊಡೆದು, ನಿಮ್ಮ ಕಾಲರ್ ಪಟ್ಟಿಯನ್ನಿಡಿದೆಳೆದು ನೀವು ದೇಶದ್ರೋಹಿ ಎಂದು ಹೇಳಿದರೆ ನಾನು ಗೂಂಡಾ ರಾಷ್ಟ್ರೀಯವಾದಿ.

ಗೂಂಡಾ ರಾಷ್ಟ್ರೀಯತೆ ಹೊಸದೇನಲ್ಲ. ಜರ್ಮನಿಯ ಇತಿಹಾಸಕಾರ ಆರ್ಥರ್ ರೋಸ್ ಬರ್ಗ್, ತನ್ನ Fascism as a mass movement ಪುಸ್ತಕದಲ್ಲಿ ಫ್ಯಾಸಿಸಂನ ಹೆಚ್ಚಳವನ್ನು ಗುರುತಿಸುವುದಕ್ಕಿರುವ ಎರಡು ಸ್ಥಿತಿಗಳ ಬಗ್ಗೆ (ಉಳಿದ ಸ್ಥಿತಿಗಳ ಜೊತೆಗೆ) ತಿಳಿಸುತ್ತಾನೆ: ಒಂದು ಬಲಪಂಥೀಯ ರಾಷ್ಟ್ರೀಯತೆಯ ಹೆಚ್ಚಳ, ಮತ್ತೊಂದು ವ್ಯಕ್ತಿತ್ವದ ಮೇಲೆ ದಾಳಿ ನಡೆಸುವವರ ಕುರಿತು ಮೌನ ಸಮ್ಮತಿ ನೀಡುವ ಆಳ್ವಿಕೆ. ಕಳೆದ ಒಂದು ತಿಂಗಳಿನಿಂದ ಭಾರತ ಸಾಕ್ಷಿಯಾಗಿರುವ ಎರಡು ಘಟನೆಗಳು, ಮೊದಲು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಮತ್ತೀಗ ಜೆ.ಎನ್.ಯುನಲ್ಲಿ ನಡೆದ ಘಟನೆಗಳು, ಮೇಲೆ ತಿಳಿಸಿದ ಎರಡು ಸ್ಥಿತಿಗಳ ಪ್ರಾರಂಭಿಕ ಹಂತಗಳು; ಗುಪ್ತ ನೀತಿಯನ್ನು ಮುಂದಕ್ಕೋಯ್ಯಲು ನಡೆಯುತ್ತಿರುವ ಈ ಘಟನೆಗಳನ್ನು ನಾವು ಫ್ಯಾಸಿಸ್ಟ್ ಎಂದು ಕರೆಯುವುದಿಲ್ಲ ಯಾಕೆಂದರೆ ಭಾರತದ ಖ್ಯಾತ ಉದಾರವಾದಿಗಳು ನಮಗೆ ಪದೇ ಪದೇ ಭರವಸೆ ನೀಡಿದ್ದಾರೆ, ಭಾರತ ತುಂಬ ವೈವಿಧ್ಯವಿರುವ ದೇಶ ಮತ್ತು ಭಾರತದ ಪ್ರಜಾಪ್ರಭುತ್ವಕ್ಕೆ ಚೇತರಿಸಿಕೊಳ್ಳುವ ಶಕ್ತಿ ತುಂಬಾ ಇದೆ ಎಂಬ ಭರವಸೆಗಳ ಕಾರಣಕ್ಕೆ ಫ್ಯಾಸಿಸ್ಟ್ ಪದವನ್ನು ಬಳಸದಿರೋಣ.

ಆದರೂ ಈ ನಮೂನೆ ಎಷ್ಟು ಕರಾರುವಕ್ಕಾಗಿಯೆಂದರೆ ಗಮನಿಸದಿರುವುದು ಕಷ್ಟ. ಹೈದರಾಬಾದಿನಲ್ಲಿ ಬಿಕ್ಕಟ್ಟಿನ ಕಿಡಿ ಪ್ರಾರಂಭವಾಗಿದ್ದು ವಿದ್ಯಾರ್ಥಿ ಸಂಘ ಯಾಕೂಬ್ ಮೆಮನನಿಗೆ ಅನುಕಂಪ ತೋರಿದಾಗ, ಕಾನೂನು ಬಲ್ಲ ಅನೇಕ ಪ್ರಭಾವಶಾಲಿಗಳು ಯಾಕೂಬನ ನೇಣನ್ನು ಪ್ರಶ್ನಿಸಿದ್ದಾರೆ. ಹೈದರಾಬಾದ್ ವಿಶ್ವವಿದ್ಯಾಲಯದ ಎಬಿವಿಪಿ ಘಟಕ ಈ ವಿದ್ಯಾರ್ಥಿಯನ್ನು ರಾಷ್ಟ್ರದ್ರೋಹಿ ಎಂದು ಕರೆಯುತ್ತ ಶಿಕ್ಷಿಸಬೇಕೆಂದು ಒತ್ತಾಯಿಸಲಾರಂಭಿಸಿದರು. ಈ ಸಂಗತಿಯನ್ನು ಕೈಗೆತ್ತಿಕೊಂಡ ಬಿಜೆಪಿಯ ಸಂಸದ ಬಂಡಾರು ದತ್ತಾತ್ರೇಯ, ಕೇಂದ್ರಕ್ಕೊಂದು ದೂರು ಕಳಿಸುತ್ತಾರೆ. ಪರಿಣಾಮ: ವಿಧೇಯ ಉಪಕುಲಪತಿ ಮತ್ತು ವಿಧೇಯ ಪೋಲೀಸರು ಎಬಿವಿಪಿ ಬೆರಳು ತೋರಿದ ವಿದ್ಯಾರ್ಥಿಗಳನ್ನು ಗುರಿಯಾಗಿಸುತ್ತಾರೆ. ಈ ಘಟನೆ ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದು ರೋಹಿತ್ ವೇಮುಲನ ಆತ್ಮಹತ್ಯೆಯೊಂದಿಗೆ. ರೋಹಿತ್ ವೇಮುಲ ಎಬಿವಿಪಿಯನ್ನು ಮತ್ತದರ ಬಹುಸಂಖ್ಯಾತ ಹಿಂಸೆಯನ್ನು ಖಂಡಿಸುತ್ತಿದ್ದ.

ಜೆ.ಎನ್.ಯುನಲ್ಲಿ, ಬಿಕ್ಕಟ್ಟಿನ ಕಿಡಿ ಪ್ರಾರಂಭವಾಗಿದ್ದು ವಿದ್ಯಾರ್ಥಿಗಳ ಗುಂಪೊಂದು ಅಫ್ಜಲ್ ಗುರುವಿಗೆ ಬೆಂಬಲವಾಗಿ ಪ್ರತಿಭಟನಾ ಸಭೆಯನ್ನು ಆಯೋಜಿಸಿದಾಗ, ಕಾನೂನು ಬಲ್ಲ ಹಲವು ಪ್ರಭಾವಶಾಲಿಗಳು ಅಫ್ಜಲನ ನೇಣನ್ನು ಪ್ರಶ್ನಿಸಿದ್ದಾರೆ. ಎಬಿವಿಪಿ ಘಟಕ ಈ ವಿದ್ಯಾರ್ಥಿಗಳನ್ನು ರಾಷ್ಟ್ರದ್ರೋಹಿಗಳು ಎಂದು ಕರೆಯುತ್ತ ಶಿಕ್ಷಿಸಬೇಕೆಂದು ಒತ್ತಾಯಿಸಲಾರಂಭಿಸಿದರು. ಈ ಘಟನೆಯನ್ನು ಕೈಗೆತ್ತಿಕೊಂಡ ಬಿಜೆಪಿ ಸಂಸದ ಮಹೇಶ್ ಗಿರಿ, ದೂರು ನೀಡುತ್ತಾರೆ, ಆ ದೂರಿನನ್ವಯ ಎಫ್.ಐ.ಆರ್ ದಾಖಲಾಗುತ್ತದೆ. ಪರಿಣಾಮ: ವಿಧೇಯ ಉಪಕುಲಪತಿ ಮತ್ತು ವಿಧೇಯ ಪೋಲೀಸರು ಎಬಿವಿಪಿ ಬೆರಳು ತೋರಿಸಿದ ವಿದ್ಯಾರ್ಥಿಗಳನ್ನು ಗುರಿಯಾಗಿಸುತ್ತಾರೆ. ಈ ಘಟನೆ ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದು ಜೆ.ಎನ್.ಯು ವಿದ್ಯಾರ್ಥಿ ಘಟಕದ ಅಧ್ಯಕ್ಷ ಕನ್ಹಯ್ಯ ಕುಮಾರನ ಬಂಧನದೊಂದಿಗೆ. ಕನ್ಹಯ್ಯ ಕುಮಾರ್ ಎಬಿವಿಪಿಯನ್ನು ಮತ್ತದರ ಬಹುಸಂಖ್ಯಾತ ಹಿಂಸೆಯನ್ನು ಖಂಡಿಸುತ್ತಿದ್ದ.

ಈ ಎರಡೂ ಘಟನೆಗಳಲ್ಲಿ ವಿದ್ಯಾರ್ಥಿಗಳನ್ನು ಬಡಿಯಲುಪಯೋಗಿಸಿದ ಬೆತ್ತ ರಾಷ್ಟ್ರೀಯವಾದದ್ದು – ಯಾವುದೋ ಒಂದು ರೀತಿಯ ರಾಷ್ಟ್ರೀಯವಾದವಲ್ಲ, ದೇಶದ ಒಂದು ನಿರ್ದಿಷ್ಟ ಗುಂಪಿನ ಜನರ ರಾಷ್ಟ್ರೀಯತೆಯನ್ನು ಅವರದೇ ದೇಶದಲ್ಲಿ ಅನುಮಾನದಿಂದ ನೋಡುವ ಬಲಪಂಥೀಯತೆಯ ರಾಷ್ಟ್ರೀಯವಾದ. ರೋಸನ್ ಬರ್ಗ್ ಗಮನಿಸಿದಂತೆ ಈ ಬೆತ್ತಕ್ಕೆ ರಕ್ಷಣೆ ಕೊಡುತ್ತಿರುವುದು ಸರಕಾರ, ರಕ್ಷಣೆ ಕೊಡುತ್ತಿರುವುದು ಎಬಿವಿಪಿಗೆ.

ಹಿಂದೆ ಈ ರೀತಿಯ ದಾಳಿ ಮಾಡುವವರ ಗುಂಪು ಸಂಘ ಪರಿವಾರದ ಬಹುಮುಖಗಳಲ್ಲಿ ಒಂದಾಗಿತ್ತು – ರಾಷ್ಟ್ರೀಯ ಸ್ವಯಂಸೇವಕ ಸಂಘ, ಭಜರಂಗ ದಳ, ವಿಶ್ವ ಹಿಂದೂ ಪರಿಷತ್ …… ಭಾರತದ ಉದಾರವಾದಿ ಬುದ್ಧಿಜೀವಿಗಳು – ಭಾರತದಲ್ಲಿ ಎಡಪಂಥೀಯರೆಂದು ಯಾರನ್ನು ಕರೆಯುತ್ತಾರೋ ಅವರು ರಾಜಕೀಯದಲ್ಲಿ ಉದಾರವಾದಿಗಳೇ ಹೊರತು ಎಡಪಂಥೀಯರಲ್ಲ – ರಾಜಕಾರಣಿಗಳ ಮುಖವಾಡಗಳನ್ನು ಹೊರಗೆಳೆಯಲು, ದಬ್ಬಾಳಿಕೆಯ ಹಿಂಸೆಯನ್ನು ಉಂಟುಮಾಡಿದವರಿಗೆ ಅವಮರ್ಯಾದೆ ತರಲು ಅಸಹಿಷ್ಣುತೆಯ ಅಸ್ತ್ರವನ್ನು ಉಪಯೋಗಿಸುವುದಕ್ಕೇ ತೃಪ್ತರಾಗಿಬಿಟ್ಟರು.

ಜೆ.ಎನ್.ಯು ಕ್ಯಾಂಪಸ್ಸಿನಲ್ಲಿ ನಡೆಯುತ್ತಿರುವ ಪೋಲೀಸು ರೈಡುಗಳು, ಜೊತೆಗೆ ಪಟಿಯಾಲ ಹೌಸಿನಲ್ಲಿ ಪತ್ರಕರ್ತರ ಮೇಲೆ ನಡೆದ ಹಲ್ಲೆ, ಎನ್.ಡಿ.ಎ ಸರಕಾರ ಸಹಿಷ್ಣುತೆಯನ್ನು ಎತ್ತಿಹಿಡಿಯದೇ ಇದ್ದಿದ್ದಕ್ಕಾಗಿ ಅನುಭವಿಸಿದ ಸಾರ್ವಜನಿಕ ಮುಖಭಂಗದ ನಂತರ ನಡೆದಂತವು. ಅಸಹಿಷ್ಣುತೆಯ ಬಗ್ಗೆ ಉದಾರವಾದಿಗಳ ಹಿಂಬಡಿತ ಎನ್.ಡಿ.ಎ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಬಹುಶಃ ಪ್ರಶಸ್ತಿ ವಾಪಸಾತಿ ಚಳುವಳಿಯಿಂದ ಅದಕ್ಕೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಿತೇನೋ. ಈಗ ಪ್ರಶಸ್ತಿಗಳು ವಾಪಸ್ಸಾಗಿದೆ, ಪಿಟಿಷನ್ನುಗಳಿಗೆ ಸಹಿ ಬಿದ್ದಾಗಿದೆ, ಪ್ರತಿಭಟನಾ ಮೆರವಣಿಗೆಗಳು ನಡೆದಾಗಿದೆ, ಸಹಿಷ್ಣುತೆಯ ಬಗ್ಗೆ ಸಂಪಾದಕೀಯಗಳನ್ನು ಬರೆದಾಗಿದೆ, ಉದಾರವಾದಿ ಬಹುತ್ವ ಭಾರತ ನಿರ್ದಯವಾಗಿ ಮುನ್ನಡೆಯುತ್ತಿರುವ ವಿಭಜನಾತ್ಮಕ ಏಕ ಸಂಸ್ಕೃತಿ ರಾಷ್ಟ್ರೀಯವಾದಕ್ಕೆ ಮತ್ತೇನು ಮಾಡಬಹುದು?

ನಂಬಿಕೆ ಉಳಸಿಕೊಳ್ಳದ ಉದಾರವಾದಿಗಳು

ಭಾರತದ ಕೇಡೆಂದರೆ, ಸ್ವಘೋಷಿತ ಸಂವಿಧಾನಾತ್ಮಕ ಉದಾರವಾದಿಗಳು ಹಿಂದುತ್ವದ ಶಕ್ತಿಗಳು ಮತ್ತು ಆರ್ಥಿಕ ಉದಾರವಾದಿತನ ಜೊತೆಯಾಗೇ ಬರುತ್ತದೆ ಎಂಬುದನ್ನು ಗುರುತಿಸಲು ವಿಫಲರಾಗಿರುವುದು. ಈ ವೈಫಲ್ಯದ ಕಾರಣದಿಂದಾಗಿಯೇ ಇಂತಹ ಹಿಂಸೆಯನ್ನು ಪದೇ ಪದೇ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ ಎಂದು ಸರಳವಾಗಿ ಹೇಳಿಬಿಡುತ್ತಾರೆ, ಈ ದಬ್ಬಾಳಿಕೆಯಲ್ಲಿರುವ ಆರ್ಥಿಕ ರಾಜಕೀಯದ ಕ್ಲಿಷ್ಟತೆಯೆಡೆಗೆ ಕುರುಡಾಗಿಬಿಡುತ್ತಾರೆ.

ಆರ್ಥಿಕ ಉದಾರೀಕರಣವನ್ನು ಅಪ್ಪಿಕೊಳ್ಳುವ ಭರದಲ್ಲಿ ಭಾರತದ ಉದಾರವಾದಿ ಮೇಲ್ವರ್ಗ, ಸರಕಾರ ಕಾರ್ಮಿಕರ, ನಗರ ಪ್ರದೇಶದ ಬಡವರ, ರೈತರ, ಭೂರಹಿತರ, ಭೂಮಿಯಿದ್ದ ಬಡವರ –ಇವರಲ್ಲಿನ ಹೆಚ್ಚಿನವರು ಸಾಮಾಜಿಕವಾಗಿ ಅಂಚಿನಲ್ಲಿದ್ದ ಜಾತಿಯವರು- ವಿರುದ್ಧ ನಡೆದುಕೊಂಡಾಗ ಅಥವಾ ಅವರನ್ನು ನಿರ್ಲಕ್ಷಿಸಿದಾಗ ಕತ್ತು ತಿರುಗಿಸಿದರು. ಈಗ ಅವರದೇ ಉದಾರವಾದಿ ಸ್ವಾತಂತ್ರ್ಯಗಳನ್ನು ಸರಕಾರ ಬೆಂಬಲಿತ ಶಕ್ತಿಗಳು ಹತ್ತಿಕ್ಕುತ್ತಿರುವಾಗ ಸರಕಾರ ಕತ್ತು ತಿರುಗಿಸುತ್ತಿರುವುದನ್ನು ನೋಡುತ್ತಿದ್ದಾರೆ.

ಆಕಸ್ಮಿಕವೆಂಬಂತೆ, ಹೈದರಾಬಾದ್ ವಿಶ್ವವಿದ್ಯಾಲಯದ ರೋಹಿತ್ ವೇಮುಲ ಮತ್ತು ಜೆ.ಎನ್.ಯುನ ಕನ್ಹಯ್ಯ ಕುಮಾರ್ ಇಬ್ಬರಿಗೂ ಸ್ವಹಿತಾಸಕ್ತಿಯ ಉದಾರವಾದಿಗಳ ಭ್ರಮೆಗಳನ್ನರಿಯುವ ಸ್ಪಷ್ಟತೆಯಿತ್ತು. ವೇಮುಲ ಎರಡು ಅಲ್ಪಸಂಖ್ಯಾತ ಸಮುದಾಯಗಳಾದ ದಲಿತರು ಮತ್ತು ಮುಸ್ಲಿಮರನ್ನು ಹೈದರಾಬಾದ್ ಕ್ಯಾಂಪಸ್ಸಿನಲ್ಲಿ ಒಂದುಗೂಡಿಸುವ ಪ್ರಯತ್ನ ಮಾಡಿದ. ಜೆ.ಎನ್.ಯುದೊಳಗೆ ಎಬಿವಿಪಿಯ ವಿಭಜನಾತ್ಮಕ ರಾಜಕೀಯದ ವಿರುದ್ಧ ಮತ್ತು ಹೊರಗೆ ನವ ಉದಾರವಾದಿ ಆರ್ಥಿಕ ನೀತಿಗಳ ವಿರುದ್ಧ ವಿದ್ಯಾರ್ಥಿ ಸಮೂಹ ಮತ್ತು ಅಸಂಘಟಿತ ಕಾರ್ಮಿಕ ವಲಯವನ್ನು ಒಂದುಗೂಡಿಸುವುದು ಕನ್ಹಯ್ಯ ಕುಮಾರನ ಉದ್ದಿಶ್ಯವಾಗಿತ್ತು. ಇವರ ಈ ತೀಕ್ಷ್ಣ ರಾಜಕೀಯ ದೃಷ್ಟಿಕೋನದ ಸ್ಪಷ್ಟತೆ ಗೂಂಡಾ ರಾಷ್ಟ್ರೀಯವಾದಿಗಳ ಕಣ್ಣಲ್ಲಿ ಅಪಾಯಕಾರಿ ಶಕ್ತಿಗಳಂತೆ ಕಾಣುವಂತೆ ಮಾಡಿತು.

ಪೋಲೀಸರು ವಿಶ್ವವಿದ್ಯಾಲಯದ ಕ್ಯಾಂಪಸ್ಸಿನ ತುಂಬೆಲ್ಲ ಬೇಟೆ ಹುಡುಕುತ್ತಾ ಅಲೆಯುವ ಕ್ಲೀಷೆಯ ಸಂಗತಿ ನೂರಾರು ಬಾರಿ ನಮ್ಮ ಸ್ವತಂತ್ರ ದೇಶದ ಸರಕಾರಗಳಡಿಯಲ್ಲಿ ನಡೆದು ಹೋಗಿದೆ. ಶೋಷಿತ ಜನರ ಆಸಕ್ತಿಯನ್ನು ಮರೆತು ಶೋಷಕ ಸರಕಾರೀ ಯಂತ್ರವನ್ನು ಸ್ಥಾಪಿಸುವುದಕ್ಕೆ ಉಗ್ರ ರಾಷ್ಟ್ರೀಯವಾದವನ್ನು ಉಪಯೋಗಿಸುವುದೂ ಕೂಡ ಅನೇಕ ಬಾರಿ ನಡೆದು ಹೋಗಿರುವ ಸಂಗತಿ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ರಾಷ್ಟ್ರೀಯತೆ ಎಂಬುದು ಭಾರತದ ಜನರ ಅಭ್ಯುದಯವಾ ಅಥವಾ ಭಾರತದ ಕಾರ್ಮಿಕರಿಗಿಂತ ವಿದೇಶಿ ಬಂಡವಾಳವನ್ನು ಎತ್ತಿ ಹಿಡಿಯುವ ಭಾರತ ಸರಕಾರದ ಅಭ್ಯುದಯವಾ? 

ಈ ಸಂದರ್ಭದಲ್ಲಿ ಕೇಳಿಕೊಳ್ಳಬೇಕಾದ ಬಹುಮುಖ್ಯ ಪ್ರಶ್ನೆಯೆಂದರೆ: ದೇಶದ್ರೋಹಿ ಎಂಬ ಹಣೆಪಟ್ಟಿ ಹಚ್ಚುವ ಹಕ್ಕು ಯಾರಿಗಿದೆ? ಮತ್ತು ಭಾರತದ ಸಾಮಾನ್ಯ ಪ್ರಜೆ ದೇಶದ್ರೋಹಿ ಎಂಬ ಆರೋಪ ಬಂದಾಗ ಹೇಗೆ ಪ್ರತಿಕ್ರಿಯಿಸಬೇಕು?

ದೇಶದ್ರೋಹದ ಆರೋಪ ಸುಳ್ಳು ಎಂದು ಉತ್ತರ ಕೊಡಬೇಕೆಂದು ಬಯಸುವುದೇ ಈ ಯುದ್ಧದಲ್ಲಿನ ಸೋಲು. ಸರಿಯಾದ ಪ್ರತಿಕ್ರಿಯೆ ಹೇಗಿರಬೇಕೆಂದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕನ್ಹಯ್ಯ ಕುಮಾರನ ಅದ್ಭುತ ಭಾಷಣ ಉದಾಹರಣೆ. ಆಕ್ರಮಣಕಾರಿಯಾಗಿ, ಗೂಂಡಾ ರಾಷ್ಟ್ರೀಯವಾದಿಗಳಿಗೆ ದೇಶಭಕ್ತಿಯ ಸರ್ಟಿಫಿಕೇಟುಗಳನ್ನು ಕೊಡುವುದಕ್ಕಿರುವ ಯೋಗ್ಯತೆ ಏನೆಂದು ಪ್ರಶ್ನಿಸಿ ಮತ್ತು ಸರ್ಟಿಫಿಕೇಟು ಕೊಡಲವರನ್ನು ಬಿಟ್ಟ ಸರಕಾರದ ಉದ್ದೇಶಗಳನ್ನು ಪ್ರಶ್ನೆ ಮಾಡಿ.
(Article was first published in The Hindu on 17/02/2016, Translated to kannada with permission)

1 comment:

  1. ಪ್ರಾಮಾಣಿಕತೆಯಿಂದ ಕೆಲಸ ಮಾಡದೆ ಜನರನ್ನು ಸರ್ಕಾರಿ ಕಚೇರಿಗಳಿಗೆ ಅಲೆಯುವಂತೆ ಮಾಡುವ ಜನರ ತೆರಿಗೆಯ ಹಣದಿಂದ ಸಂಬಳ ಪಡೆಯುವ ಸರ್ಕಾರಿ ಅಧಿಕಾರಿಗಳು; ಜನರಿಗೆ ಅನುಕೂಲಕರವಾದ ಕಾನೂನುಗಳನ್ನು ಶಾಸನಸಭೆಗಳಲ್ಲಿ ತರುವ ಅಧಿಕಾರ ಇದ್ದರೂ ಜನರಿಗೆ ಅನುಕೂಲಕರವಲ್ಲದ ಕೆಂಪು ಪಟ್ಟಿಯ ಕಾನೂನುಗಳನ್ನು ಮಾಡಿ ಜನರಿಗೆ ತೊಂದರೆ ಕೊಡುವ ಶಾಸಕರು, ಸಂಸದರು, ಜನಪ್ರತಿನಿಧಿಗಳು; ತೆರಿಗೆ ತಪ್ಪಿಸಿ ವಿದೇಶಗಳಲ್ಲಿ ಹಾಗೂ ದೇಶದೊಳಗೆ ಹಣ ಜಮಾವಣೆ ಮಾಡುವ ಕಪ್ಪು ಹಣದ ಖದೀಮರು ಇವರು ಈ ದೇಶದ ನಿಜವಾದ ದೇಶದ್ರೋಹಿಗಳು. ಇವರ ವಿರುದ್ಧ ಪ್ರತಿಭಟಿಸುವ ಧೈರ್ಯ ದೇಶಭಕ್ತಿಯ ಗುತ್ತಿಗೆ ತೆಗೆದುಕೊಂಡಿರುವ ಸ್ವಯಂಘೋಷಿತ ದೇಶಭಕ್ತರಿಗೆ ಇದೆಯೇ? ಲಂಚ ತೆಗೆದುಕೊಂಡು ಜನಸಾಮಾನ್ಯರ ನೆತ್ತರು ಹೀರುವ ಸರ್ಕಾರಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ ಈಗ ಜೆಎನ್ಯುವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ನೈಯ್ಯ ವಿರುದ್ಧ ಸ್ವಯಂಘೋಷಿತ ದೇಶಭಕ್ತರು ನಡೆಸುತ್ತಿರುವ ಪ್ರತಿಭಟನೆಯ ಒಂದಂಶವನ್ನಾದರೂ ಮಾಡಿದರೆ ಜನಸಾಮಾನ್ಯರಿಗೆ ಹಾಗೂ ದೇಶಕ್ಕೆ ಒಂದಿನಿತಾದರೂ ಪ್ರಯೋಜನವಾದೀತು. ಲೋಕಪಾಲ್ ಮಸೂದೆ ತರುವ ಅಧಿಕಾರ ಇದ್ದರೂ ಅದನ್ನು ತರದೇ ದೇಶವನ್ನು ಬಳಲಿಸುತ್ತಿರುವ ಶಾಸಕರು, ಸಂಸದರು ಹಾಗೂ ಜನಪ್ರತಿನಿಧಿಗಳು ಈ ದೇಶದ ನಂಬರ್ ಒಂದು ದೇಶದ್ರೋಹಿಗಳು. ಇವರ ವಿರುದ್ಧ ಜನಜಾಗೃತಿ ಮೂಡಿಸುವ, ಪ್ರತಿಭಟಿಸುವ ತಾಕತ್ತು ಸ್ವಯಂಘೋಷಿತ ದೇಶಭಕ್ತರಿಗೆ ಇದೆಯೇ?

    ReplyDelete