Feb 2, 2016

ಜಾತಿ ಪದ್ಧತಿಯ ಬಗ್ಗೆ ಚರ್ಚಿಸಲು ದಲಿತೇತರಿಗೆ ಒಂಭತ್ತು ಸೂತ್ರಗಳು

ಯಾಶಿಕಾ ದತ್, ಹಫಿಂಗ್ಟನ್ ಪೋಸ್ಟ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಸಾಮಾಜಿಕ ಮಾಧ್ಯಮಗಳ ಉನ್ನತಿಯ ನಂತರ ಮೊಟ್ಟ ಮೊದಲ ಬಾರಿಗೆ ಜಾತಿ ಸಂಕಥನದ ಚರ್ಚೆಯಾಗುತ್ತಿದೆ. ಜಾತಿ, ತಾರತಮ್ಯ ಮತ್ತು ಅವಕಾಶಗಳು ಬಗ್ಗೆ ಫೇಸ್ ಬುಕ್, ಟ್ವಿಟರ್, ರೆಡಿಟ್, ಕ್ಯುರಾ ಮತ್ತು ಇನ್ಸ್ಟಾಗ್ರಾಮಿನಲ್ಲಿ ಕೂಡ ಚರ್ಚೆಗಳಾಗುತ್ತಿದೆ. ದುಃಖದ ಸಂಗತಿಯೆಂದರೆ ಇಂತಹ ಚರ್ಚೆಗಳು ನಡೆಯಲು ರೋಹಿತ್ ವೇಮುಲನೆಂಬ ಪ್ರತಿಭಾವಂತ ಯುವಕ ನೇಣಿಗೆ ಶರಣಾಗಬೇಕಾಯಿತು. ನೀವು ದಲಿತರಾಗದಿದ್ದಲ್ಲಿ ವಾದ ವಿವಾದಗಳಲ್ಲಿ ಮುಳುಗಿಹೋಗುವ ಮೊದಲು ಇದನ್ನೊಮ್ಮೆ ಓದಿಕೊಳ್ಳಿ.

1. ಪೂರ್ವಾಗ್ರಹಗಳ ಬಗ್ಗೆ ಎಚ್ಚರಿಕೆಯಿರಲಿ

ನೀವು ಯಾವತ್ತೂ ಜಾತಿಯಾಧಾರಿತ ತಾರತಮ್ಯವನ್ನು ನೇರವಾಗಿ ಎದುರಿಸದೆ ಇದ್ದರೆ, ಜಾತಿ ತಾರತಮ್ಯವೇ ಇಲ್ಲ ಎಂದಂದುಕೊಳ್ಳುವುದು ಸಹಜ. ಯಾಕೆಂದರೆ ಅದು ನಿಮಗೆ ಅನುಭವಕ್ಕೇ ಬಂದಿಲ್ಲ. ಆದರೆ ಲಕ್ಷಾಂತರ ದಲಿತರಿಗೆ ಅದು ದಿನನಿತ್ಯದ ವಾಸ್ತವ. ಹಾಗಾಗಿ, “ಜಾತಿಯೆಂಬುದು ಪುರಾತನ ದಿನಗಳ ಕತೆ”ಯೆಂದೋ ಅಥವಾ “ಅದೀಗ ದೊಡ್ಡ ವಿಷಯವೇನಲ್ಲ” ಎಂದೋ ಹೇಳುವ ಮುಂಚೆ ಅವರ ಮಾತುಗಳನ್ನು ಕೇಳಿ, ತಾರತಮ್ಯದ ಕತೆಗಳನ್ನು ಕೇಳಿ.

2. ಇತಿಹಾಸವನ್ನರಿಯಿರಿ

ಚರ್ಚೆಯಾಗುತ್ತಿರುವ ಜಾತಿ ಆಧಾರಿತ ಶೋಷಣೆಯ ಸ್ವರೂಪಗಳನ್ನು ಸರಿಯಾಗಿ ತಿಳಿದುಕೊಳ್ಳಿ, ನಮ್ಮ ಪಠ್ಯಪುಸ್ತಕಗಳು ಅವುಗಳ ಕುರಿತು ಸರಿಯಾಗಿ ತಿಳಿಸಿಕೊಡುವುದಿಲ್ಲ. ಮೀಸಲಾತಿ ವ್ಯವಸ್ಥೆ ಜಾರಿಗೆ ಬಂದಿದ್ದೇಕೆ ಎನ್ನುವುದನ್ನು ಮೊದಲು ಅರಿತುಕೊಳ್ಳಿ. ಕೆಲವು ನಿರ್ದಿಷ್ಟ ಜಾತಿಗಳ ಹೆಸರನ್ನು ಕಳಂಕದಂತೆ ಉಪಯೋಗಿಸುವುದ್ಯಾಕೆ ಎನ್ನುವ ಪ್ರಶ್ನೆ ಕೇಳಿಕೊಳ್ಳಿ; ಆ ಜಾತಿಯ ಜನರ ಮೇಲೆ ಉಂಟಾಗುವ ಮಾನಸಿಕ ಪರಿಣಾಮಗಳ ಬಗ್ಗೆ ಯೋಚಿಸಿ. ಡಾ. ಬಿ. ಆರ್. ಅಂಬೇಡ್ಕರರ Annihilation of caste ಅಥವಾ ಇತ್ತೀಚೆನ Hatred in the belly ಓದುವುದುತ್ತಮ. Dalitdiscrimination.tumblr.com ಕೂಡ ಚೆನ್ನಾಗಿದೆ.

3. ನಿಮಗೆ ಸಿಕ್ಕಿರುವ ಸವಲತ್ತುಗಳನ್ನು ಅರಿತುಕೊಳ್ಳಿ

ಜಾತಿ ವ್ಯವಸ್ಥೆ ಪ್ರತ್ಯೇಕವಾಗಿ ಅಸ್ತಿತ್ವದಲ್ಲಿಲ್ಲ. ಒಬ್ಬನ್ಯಾರೋ ಶೋಷಣೆಗೊಳಪಟ್ಟಿದ್ದರೆ ಅದರಿಂದ ಇನ್ನೊಬ್ಬನಿಗ್ಯಾರಿಗೋ ನ್ಯಾಯಬದ್ಧವಲ್ಲದ ಅನುಕೂಲಗಳಾಗಿರಬೇಕು. ನೀವು ದಲಿತರಾಗಿಲ್ಲದೆ ಇದ್ದರೆ ಆ ‘ಇನ್ನೊಬ್ಬ’ ನೀವೇ ಇರುವ ಸಾಧ್ಯತೆ ಅಧಿಕ. ನಿಮ್ಮ ಪೂರ್ವಜರಿಗೆ ಶಿಕ್ಷಣ ಮತ್ತು ಸಂಪತ್ತು ಸುಲಭಕ್ಕೆ ಸಿಗುವ ಸಮಯದಲ್ಲೇ ದಲಿತರನ್ನು ಆ ಎಲ್ಲಾ ಸವಲತ್ತುಗಳಿಂದ ವಂಚಿತರನ್ನಾಗಿ ಮಾಡಲಾಯಿತು, ಆ ಸವಲತ್ತುಗಳನ್ನು ನೀವು ಇನ್ನೂ ಅನುಭವಿಸುತ್ತಿದ್ದೀರಿ. ನೀವು ಮಾಡಿದ ಅಥವಾ ಮಾಡದ ಕಾರ್ಯವೊಂದರಿಂದ ಅದು ಮರೆಯಾಗಿ ಹೋಗುವುದಿಲ್ಲ. ನೀವು ಆ ವಂಶಪಾರಂಪರ್ಯದ ಸವಲತ್ತಿನೊಂದಿಗೆ ಹುಟ್ಟಿದ್ದರೆ ದಲಿತರು ವಂಶಪಾರಂಪರ್ಯದ ಶೋಷಣೆಯೊಂದಿಗೆ ಹುಟ್ಟಿದ್ದಾರೆ. ಮತ್ತು ನೀವದರ ಅಸ್ತಿತ್ವವನ್ನು ಬದಲಿಸಲು ಸಾಧ್ಯವಿಲ್ಲವಾದರೂ ಅದನ್ನು ಒಪ್ಪುವ ಮನಸ್ಸಾದರೂ ಮಾಡಬಹುದು.

4. ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ

ನಿಮ್ಮನ್ಯಾರೂ ವೈಯಕ್ತಿಕವಾಗಿ ದೂಷಿಸುತ್ತಿಲ್ಲ. ನೀವು ಜಾತಿವಾದಿ ಮನಸ್ಥಿತಿಯೊಂದಿಗೆ ಗುರುತಿಸಿಕೊಳ್ಳದಿದ್ದರೆ, ಪೂರ್ವಾಗ್ರಹಪೀಡಿತರಾಗಿಲ್ಲದೇ ಹೋದರೆ ಮತ್ತು ಜಾತಿ ವ್ಯವಸ್ಥೆಯ ಸಂಕೀರ್ಣತೆಯ ಬಗ್ಗೆ ನಿಮಗೆ ಸಂಪೂರ್ಣ ಅರಿವಿದ್ದರೆ ನೀವು ನಿಯಮಗಳಿಗೆ ಅಪವಾದ. ಎಲ್ಲಾ ಮೇಲ್ಜಾತಿಯವರು ತಾರತಮ್ಯ ಮಾಡುವುದಿಲ್ಲ ಎನ್ನುವುದು ನಿಮ್ಮ ವಾದವಾಗಿದ್ದರೆ ‘ದಲಿತರ ವಿರುದ್ಧದ ತಾರತಮ್ಯ’ವೆನ್ನುವ ವಾಸ್ತವ ಸಂಗತಿಗೆ ಬೆನ್ನು ತೋರಿಸಿದಂತೆ. ಒಂದು ಕಾರು ಒಬ್ಬನಿಗೆ ಗುದ್ದಿದ ಸಂದರ್ಭದಲ್ಲಿ ನೀವು ಎಲ್ಲಾ ಡ್ರೈವರುಗಳು ಕೊಲೆಗೈಯುವುದಿಲ್ಲ ಎಂದು ಹೇಳುತ್ತಾ ನಿಂತರೆ ಆ ವ್ಯಕ್ತಿಯನ್ನು ಸಾಯಲು ಬಿಡುತ್ತ ನಿಮ್ಮನ್ನು ನೀವೇ ‘ಬಲಿಪಶು’ವಾಗಿ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ ಎಂದರ್ಥ.

5. ದನಿಯ ಶೈಲಿಯಿಂದ ಅಳೆಯಬೇಡಿ

ಕಾಲದಿಂದಲೂ ಅವಮಾನದ ಸುತ್ತ ಕಟ್ಟಲಾಗಿದ್ದ ದಲಿತರೆಂಬ ಗುರುತು ನಿಧಾನಕ್ಕೆ ಹೆಮ್ಮೆಯೆನ್ನಿಸಿಕೊಳ್ಳಲಾರಂಭಿಸಿದೆ. ಈ ಹೆಮ್ಮೆಯ ಪತನಗೊಳಿಸುವಂತಹ ಕೆಲಸವಾಗಬಾರದು. ನಮ್ಮ ದಲಿತ ಹೆಮ್ಮೆ ನಿಮ್ಮನ್ನು ಹೆದರಿಸಲಲ್ಲ, ಬದಲಿಗೆ ನಾವಾ ಹೆಮ್ಮೆಯನ್ನು ಮತ್ತೆ ಮತ್ತೆ ಅನುಭವಿಸಲು. ಪುನಃ, ಇದು ನಿಮ್ಮ ಬಗ್ಗೆ ಅಲ್ಲ.

6. ನಿಮಗೂ ಒಂದು ಜಾತಿಯಿದೆ ಎನ್ನುವುದನ್ನು ಒಪ್ಪಿಕೊಳ್ಳಿ

ಜಾತಿ ಕಾಣಿಸುತ್ತಿಲ್ಲವೆನ್ನುವುದು ನಿಮ್ಮ ಜೀವನ ಪರ್ಯಂತ ನಡೆದು ಬಂದ ಹೂವಿನ ಹಾಸಿಗೆಯನ್ನು ಇಲ್ಲವೆಂದಂತೆ; ಕೆಲವರನ್ನು ಬರಿಗಾಲಿನಲ್ಲಿ ನಡೆಯುವಂತೆ ಬಲವಂತ ಮಾಡಲಾಗಿತ್ತು. ನಿಮಗಾಗಲೀ, ನಿಮ್ಮ ಪೂರ್ವಜರಿಗಾಗಲೀ ಓದುವುದನ್ನು ನಿಷೇಧಿಸಲಾಗಿರಲಿಲ್ಲ, ನಿಮ್ಮ ಹೆಸರಿನ ಕಾರಣದಿಂದ ವಿಶ್ವವಿದ್ಯಾನಿಲಯಗಳಿಂದ ಹೊರಹಾಕಲಾಗಿರಲಿಲ್ಲ ಅಥವಾ ಸುಮ್ಮನೆ ನಿಮ್ಮ ಅಸ್ತಿತ್ವವನ್ನೇ ಅವಮಾನದ ವಿಷಯದಂತೆ ಮಾಡಿರಲಿಲ್ಲ. ಲಕ್ಷಾಂತರ ದಲಿತರಿಗೆ ಹೀಗೆ ಮಾಡಲಾಗಿತ್ತು, ಈಗಲೂ ಮಾಡಲಾಗುತ್ತಿದೆ. ಜಾತಿಯಿಲ್ಲವೆನ್ನುವುದನ್ನು ನೀವು ಸುಲಭವಾಗಿ ಹೇಳುವ ಸಮಯದಲ್ಲೇ, ಹಲವರಿಗೆ ಆ ಗುರುತಿನ ಕಾರಣದಿಂದ ಕಿರುಕುಳ ನೀಡಲಾಗುತ್ತಿದೆ, ಆ ಗುರುತನ್ನು ಕಳಚಿಕೊಳ್ಳುವ ಆಯ್ಕೆಯೂ ಅವರ ಬಳಿ ಇಲ್ಲ. ನಿಮ್ಮಂತಲ್ಲದೆ, ಪೂರ್ವಾಗ್ರಹಗಳು ಅವರನ್ನು ಬೇಟೆಯಾಡುತ್ತಿವೆ ಮತ್ತು ಅವರನ್ನು ಶರಣಾಗಲು ಬಲವಂತಪಡಿಸುತ್ತಿವೆ. ನಿಮ್ಮ ಜಾತಿ ಅಸ್ತಿತ್ವದಲ್ಲಿದೆ, ನಮ್ಮದ್ದಿದ್ದಂತೆ. ಅದನ್ನು ಅಂಗೀಕರಿಸದಿದ್ದರೆ ಅದು ಮರೆಯಾಗಿಬಿಡುವುದಿಲ್ಲ.

7. ನೀವು ಕಾರುಣ್ಯದಿಂದಿಲ್ಲ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಿ

ನಿಮಗೆ ಸಿಕ್ಕ ಅನುಕೂಲಗಳನ್ನು ಅರಿತುಕೊಂಡು ಮತ್ತು ದಲಿತರ ಮೇಲೆ ನಡೆಯುವ ಶೋಷಣೆಯನ್ನು ಅರ್ಥಮಾಡಿಕೊಂಡಾಕ್ಷಣ ನೀವು ಯಾವುದೇ ಅನುಗ್ರಹ ಮಾಡಿದಂತಲ್ಲ, ಕೊನೇ ಪಕ್ಷ ಜಾತಿಯ ಸಂಕಥನದಲ್ಲಿ ಎನ್ನುವುದನ್ನು ಅರಿತುಕೊಳ್ಳಲು ಪ್ರಯತ್ನಿಸಿ. ಜವಾಬ್ದಾರಿಯುತ ನಾಗರೀಕನಾಗಿ, ರಾಷ್ಟ್ರದ ಪ್ರಜೆಯಾಗಿ ನಮ್ಮ ಇತಿಹಾಸವನ್ನು ಕಲಿತು ಅರ್ಥೈಸಿಕೊಳ್ಳುವುದು ನಿಮ್ಮ ಕರ್ತವ್ಯ. ನಮ್ಮನುಕೂಲಕ್ಕಾಗಿ ಸಂಕೀರ್ಣ ಚರ್ಚೆಯನ್ನು ಅರ್ಥಮಾಡಿಕೊಂಡು ‘ಒಳ್ಳೆಯವ’ನಾಗಿದ್ದೀನಿ ಎಂದು ನೀವು ಯೋಚಿಸುವುದು ಸಹ ಜಾತಿವಾದವೇ. ಯಾಕೆಂದರೆ ನಮಗೆ ನಿಮ್ಮ ಕರುಣೆಗಿಂತ ಸಮಾನರಾಗಿ ಇರುವುದಕ್ಕೆ ನಾವು ಹೆಚ್ಚು ಅರ್ಹರು.

ಗಮನಿಸಿ: ನೀವು ಅಸಮಾನ ಜಾಗದಲ್ಲಿ ನಿಂತು ‘ಕರುಣೆ’ಯಿಂದ ನಮ್ಮನ್ನು ನೋಡಲು ಕೆಳಗಿಣುಕುವುದು ಕೂಡ ನಿಮಗೆ ದಕ್ಕಿರುವ ಒಂದು ಸೌಲತ್ತಿಗೆ ಉದಾಹರಣೆ.

8. ನಿಮ್ಮನ್ನು ‘ರಾಕ್ಷಸರನ್ನಾಗಿಸುತ್ತಿಲ್ಲ’ ಎನ್ನುವುದನ್ನು ತಿಳಿದುಕೊಳ್ಳಿ

ಚರ್ಚೆಯ ವೇಳೆ ಮೇಲ್ಜಾತಿಗೆ ಸಿಕ್ಕಿರುವ ಸೌಲತ್ತಿನ ಬಗ್ಗೆ ಗಮನ ಸೆಳೆದಾಗ, “ನನ್ನ ಜನನವನ್ನು ನಾನು ದೂರುವುದಿಲ್ಲ” ಎಂದು ಹೇಳಬೇಡಿ. ಇದು ನಿಮ್ಮ ಜನನವನ್ನು ದೂರುವುದರ ಬಗೆಗಲ್ಲ. ನೀವು ಎಷ್ಟು “ಅದೃಷ್ಟ”ವಂತರಾಗಿದ್ದೀರಿ ಎನ್ನುವುದನ್ನು ಮತ್ತು ನಾವು ಆ “ಅದೃಷ್ಟ”ದಿಂದ ವಂಚಿತರಾಗಿದ್ದನ್ನು ನಿಮಗೆ ನೆನಪಿಸುವುದಷ್ಟೇ ಇದರ ಉದ್ದೇಶ. ಪ್ರಸ್ತುತ ಚರ್ಚೆಗಳೆಲ್ಲವೂ ತಾರತಮ್ಯದ ಸವಲತ್ತಿನ ಮನಸ್ಥಿತಿಯ ವಿರುದ್ಧವೇ ಹೊರತು ವ್ಯಕ್ತಿಯ ವಿರುದ್ಧವಲ್ಲ.

9. ಇಷ್ಟೇಕೆ ಕೋಪಗೊಂಡಿದ್ದೇನೆ? ಎಂದು ನೀವೇ ಕೇಳಿಕೊಳ್ಳಿ

ಒಂದು ವೈಚಾರಿಕ ಅಭಿಪ್ರಾಯದ ಬಗ್ಗೆ ನಿಮಗೆ ಪದೇ ಪದೇ ಕೋಪವುಕ್ಕಿದರೆ, ಹಿಂಗ್ಯಾಕೆ? ಎಂದು ಕೇಳಿಕೊಳ್ಳುವ ಸಮಯವಿದು. ನಿಮಗಿಂತ ಕೆಳಮಟ್ಟದಲ್ಲಿರುವವರು ಎಂದು ನೀವು ಯಾರ ಬಗ್ಗೆ ಅಂದುಕೊಂಡಿದ್ದೀರೋ ಅವರಿವತ್ತು ನಿಮಗೆ ಸಮಾನವಾಗಿ ಮಾತನಾಡುತ್ತಿದ್ದಾರೆಂಬ ಕಾರಣಕ್ಕೆ ನಿಮಗೆ ಈ ಕೋಪವಾ? ತಾರತಮ್ಯದ ದೃಷ್ಟಿ ಇರುವುದೇ ಹೀಗೆ.

ಇರಲಿ, ಒಂದು ಆರೋಗ್ಯಪೂರ್ಣ ಚರ್ಚೆಗಾಗಿ ನೀವಿರದಿದ್ದರೆ ಮೇಲೆ ಹೇಳಿದ ಯಾವುದೂ ನಿಮಗನ್ವಯಿಸುವುದಿಲ್ಲ. ಜೊತೆಗೆ ಆಗ ನಿಮ್ಮ ಮಾತು ಕೇಳುವವರಾರೂ ಇರುವುದಿಲ್ಲ.

No comments:

Post a Comment