Jan 31, 2016

ರೋಹಿತ್ ವೇಮುಲನ ಆತ್ಮಹತ್ಯೆಯನ್ನು ರಾಜಕೀಯಗೊಳಿಸುತ್ತಿರುವವರಾರು?

ರೋಹಿತ್ ವೇಮುಲನ ಸಾವನ್ನು ಪ್ರತಿಭಟಿಸಿದ ವಿರೋಧ ಪಕ್ಷದವರಲ್ಲಿ ಅವಕಾಶವಾದಿತನದ ಒಂದಂಶವಿತ್ತು. ಆದರೆ ಬಿಜೆಪಿಗೆ ಹೋಲಿಸಿದರೆ ಅವರು ಬಂದಿದ್ದು ತುಂಬ ತಡವಾಗಿ.
ಅಂಜಲಿ ಮೋದಿ, scroll.in
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್

ರೋಹಿತ್ ವೇಮುಲನ ಗೆಳೆಯರು ಮತ್ತು ಸಂಗಾತಿಗಳು ಅವನ ಆತ್ಮಹತ್ಯೆಗಿದ್ದ ನೈಜ ಕಾರಣವನ್ನು ತಿಳಿಸಲು ಪ್ರಯತ್ನಪಡುವಾಗ, ರೋಹಿತನ ಸಾರ್ವಜನಿಕ ಜೀವನ ಮತ್ತು ವೈಯಕ್ತಿಕ ಹತಾಶೆ ಮತ್ತು ಏಕಾಂಗಿ ಸಾವನ್ನು ಬೇರೆಬೇರೆಯಾಗಿ ನೋಡುವುದು ಸಾಧ್ಯವೇ ಇಲ್ಲ. ಸಂದರ್ಶನವೊಂದರಲ್ಲಿ ಅವನ ರೂಮ್ ಮೇಟ್: “ಬಹುಶಃ ವಸ್ತುಸ್ಥಿತಿ ಬದಲಾಗಲು ಒಬ್ಬರ್ಯಾರಾದರೂ ಸಾಯಬೇಕು ಎಂದವನು ಯೋಚಿಸಿರಬೇಕು. ಮತ್ತವನು ಹೀಗೆ ಮಾಡಿಕೊಂಡುಬಿಟ್ಟ.”

ಆದರೆ, ಜೀವ ತೆಗೆದುಕೊಂಡುಬಿಡುವ ರೋಹಿತನ ನಿರ್ಧಾರ ಸಮಾಜವನ್ನು ಬದಲಿಸಲು ತೆಗೆದುಕೊಂಡ ಕೊನೆಯ ರಾಜಕೀಯ ನಡೆಯಾ? ರಾಜಕೀಯ ಶಕ್ತಿಗಳ ದುರುಪಯೋಗದಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡನಾ? ಶೂನ್ಯದಾಚೆಗೆ ಮತ್ತೇನನ್ನು ನೋಡದ ಯುವಕನೊಬ್ಬನ ವಿವೇಚನಾರಹಿತ ಕಾರ್ಯವಾ?

ಅವನ ಕಾವ್ಯಾತ್ಮಾಕ ಕೊನೆಯ ಪತ್ರವನ್ನು ನೂರು ರೀತಿಯಲ್ಲಿ ಓದಿಕೊಳ್ಳಬಹುದು, ಪ್ರತಿ ಓದುಗ ತನಗನುಕೂಲವಾದ ಅರ್ಥವನ್ನು ಕಂಡುಕೊಳ್ಳುತ್ತಾಳೆ.

ಬಿಜೆಪಿ ರೋಹಿತನ ಪತ್ರವನ್ನು ಕ್ಲೀನ್ ಚಿಟ್ ನಂತೆ ನೋಡುವ ನಿರ್ಧಾರ ಮಾಡಿಬಿಟ್ಟಿದೆ. ಬಿಜೆಪಿಯ ವಿದ್ಯಾರ್ಥಿ ಪಡೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪರವಾಗಿ ಹೈದರಾಬಾದ್ ವಿಶ್ವವಿದ್ಯಾಲಯದ ಮೇಲೆ ಒತ್ತಡ ಹೇರಿದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಘೋಷಿಸುತ್ತಾರೆ: 

“ಈ ಪತ್ರದಲ್ಲಿ ವಿಶ್ವವಿದ್ಯಾಲಯದ ಯಾವ ಅಧಿಕಾರಿಯ ಹೆಸರಿಲ್ಲ, ಯಾವುದೇ ರಾಷ್ಟ್ರೀಯ ರಾಜಕೀಯ ಪಕ್ಷವನ್ನು ಹೆಸರಿಸಿಲ್ಲ, ಯಾವ ಸಂಸದನ ಹೆಸರಿಲ್ಲ”

ಎಬಿವಿಪಿಯ ಮುಖಂಡ ಸುಶೀಲ್ ಕುಮಾರ ಹಲ್ಲೆಯ ದೂರು ನೀಡಿದ್ದು (ಪೋಲೀಸರ ಪ್ರಕಾರ ದೂರನ್ನು ಉತ್ಪ್ರೇಕ್ಷಿಸಲಾಗಿತ್ತು) ರೋಹಿತ್ ವೇಮುಲ ರಾಜಕೀಯ ಸುಳಿಯಲ್ಲಿ ಸಿಲುಕುವ ಮುನ್ನುಡಿಯಾಗಿತ್ತು. ಸುಶೀಲ್ ಕುಮಾರ್ ಕೂಡ ಸ್ಮೃತಿ ಇರಾನಿಯವರೆಂತೆಯೇ ಪತ್ರವನ್ನು ವಿಶ್ಲೇಷಿಸುತ್ತಾರೆ:

“ಆ ಆತ್ಮಹತ್ಯಾ ಪತ್ರವನ್ನು ನೂರರಿಂದ ಇನ್ನೂರು ಸಲ ಓದಿದ್ದೇನೆ. ಯಾರ ಹೆಸರನ್ನೂ ಆತ ಉಲ್ಲೇಖಿಸುವುದಿಲ್ಲ; ಇಂತಿಂತವರು ಜವಾಬ್ದಾರರು ಎಂದು ಹೇಳುವುದಿಲ್ಲ”

ಬಿಜೆಪಿ ಈ ಸಾವಿನ ಆರೋಪದಿಂದ ಮುಕ್ತವಾಗುವುದಷ್ಟೇ ಬೇಕಾಗಿಲ್ಲ, ರೋಹಿತ್ ವೇಮುಲನ ಸಾವು ನಡೆದದ್ದೇಗೆ ಎನ್ನುವುದರ ನಿರೂಪಣೆಯನ್ನು ಅವರೇ ನಿಯಂತ್ರಿಸಬೇಕೆಂದಿದ್ದಾರೆ. ಜನರು ರೋಹಿತನ ಪತ್ರವನ್ನು ಜಾತಿ ವ್ಯವಸ್ಥೆಯ ಅಸಮಾನತೆಗಳ ಕುರಿತ ಪತ್ರ, ಅಂಚಿನ ಸಮುದಾಯದ ಜನರು ಎದುರಿಸುತ್ತಿರುವ ಪಕ್ಷಪಾತದ ಕುರಿತ ಪತ್ರದಂತೆ ಓದಿಕೊಂಡಿದ್ದು ಬಿಜೆಪಿಗೆ ಇರುಸುಮುರುಸು ಉಂಟುಮಾಡಿತು. ರೋಹಿತ್ ಬರೆಯುತ್ತಾನೆ, 

“ಮನುಷ್ಯನ ಮೌಲ್ಯ ಅವನ ತತ್ ಕ್ಷಣದ ಗುರುತು ಮತ್ತು ಸಾಧ್ಯತೆಗಳಿಗೆ ಇಳಿದುಬಿಟ್ಟಿದೆ. ಒಂದು ವೋಟಿಗೆ. ಒಂದು ನಂಬರ್ರಿಗೆ. ಒಂದು ವಸ್ತುವಿಗೆ. ನಕ್ಷತ್ರದ ಧೂಳಿನಿಂದ ಉದ್ಭವವಾದ ಅತ್ಯದ್ಭುತ ವಸ್ತುವಿನಂತಹ ಬುದ್ಧಿವಂತಿಕೆ ಮೂಲಕ ಎಂದೂ ಮನುಷ್ಯನನ್ನು ಗುರುತಿಸಲಿಲ್ಲ. ಬೀದಿಯಲ್ಲಿ, ಓದಿನಲ್ಲಿ, ರಾಜಕೀಯದಲ್ಲಿ, ಸಾವಿನಲ್ಲಿ, ಬದುಕಿನಲ್ಲಿ.”

ಜನರು ಈ ಪ್ರಕರಣವನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆಂದು ಹೇಳುವ ಇರಾನಿ “ಇದನ್ನು ಜಾತಿ ಕದನವಾಗಿ ಮಾರ್ಪಡಿಸಿ ಕೆರಳಿಸುವ ದುರುದ್ದೇಶದಿಂದ ಕೂಡಿದ ಪ್ರಯತ್ನ” ಎಂದು ಹೇಳುತ್ತಾರೆ.

ಯಾವುದೇ ಅನುಭೂತಿಯಿಲ್ಲ.

ಆದರೆ, ರೋಹಿತನ ಪತ್ರವನ್ನು ಓದಿದ ಜನರದನ್ನು ಜಾತಿ ತಾರತಮ್ಯ ಎಂದು ಭಾವಿಸುವುದಕ್ಕೆ ಬಹಳ ಮೊದಲೇ, ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ರೋಹಿತ್ ಭಾಗಿಯಾಗಿದ್ದ ಅಂಬೇಡ್ಕರ್ ವಿದ್ಯಾರ್ಥಿ ಸಂಘವನ್ನು “ಜಾತಿವಾದಿ” ಎಂದು ಕರೆದು “ಒಳಿತಿಗಾಗಿ ಕ್ಯಾಂಪಸ್ಸನ್ನು ಬದಲಿಸಿ” ಎಂದು ಇರಾನಿಗೆ ಕೇಳಿಕೊಂಡಿದ್ದರು.

ಬಂಡಾರು ದತ್ತಾತ್ರೇಯ ಪತ್ರ ಬರೆಯಲಿದ್ದ ಏಕೈಕ ಪ್ರಚೋದನೆಯೆಂದರೆ ಎಬಿವಿಪಿಯ ವಿರುದ್ಧ ಅಂಬೇಡ್ಕರ್ ವಿದ್ಯಾರ್ಥಿ ಸಂಘದವರು ಮುಜಾಫರ್ ನಗರದ ಕೋಮುಗಲಭೆಯ ಬಗೆಗಿನ ಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಏರ್ಪಡಿಸಿದ್ದ ಪ್ರತಿಭಟನೆ. ಇಲ್ಲಿ ದತ್ತಾತ್ರೇಯರವರಿಗೆ ಜಾತಿ ಎಲ್ಲಿಂದ ಕಾಣಿಸಿತು, ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಹೆಸರಿನಲ್ಲಿರುವ ‘ಅಂಬೇಡ್ಕರ್’ ಅವರಿಗೆ ಜಾತಿ ಸೂಚಕವಾಗಿ ಕಂಡರಾ?

ಬಿಜೆಪಿಗೆ ರೋಹಿತ್ ವೇಮುಲನ ಸಾವಿನಿಂದಿನ ಘಟನಾವಳಿಗಳನ್ನು ನಿಯಂತ್ರಿಸುವ ಮನಸ್ಸಿರಬಹುದು ಆದರದು ಸಾಧ್ಯವಿಲ್ಲ, ಕಾರಣ ಅದಕ್ಕೆ ಅನುಭೂತಿಯ ಕೊರತೆಯಿದೆ – ಅದರ ಸಿದ್ಧಾಂತ ಮತ್ತು ಸಂಘಗಳಲ್ಲಿ ಸಾಮಾನ್ಯ ಮನುಷ್ಯತ್ವಕ್ಕೆ ಆಸ್ಪದವಿಲ್ಲ. ಆತ್ಮಹತ್ಯೆಯ ಸುದ್ದಿ ಹರಡುತ್ತಿದ್ದಂತೆ, ಯುವ ಪ್ರಾಯದಲ್ಲಿ ಜೀವ ಕಳೆದುಕೊಂಡವನ ಬಗ್ಗೆ ಹೆಸರಿಗೊಂದಷ್ಟು ದುಃಖ ಸೂಚಿಸಿದ ಮರುಕ್ಷಣವೇ ಬಿಜೆಪಿ ಆಕ್ರಮಶೀಲವಾಗಿ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಬಗೆಗಿನ ದತ್ತಾತ್ರೇಯರ ಅಭಿಪ್ರಾಯವನ್ನು ಸಮರ್ಥಿಸಿಕೊಳ್ಳುತ್ತದೆ ಮತ್ತು ಅದರ ಮುಂದುವರಿಕೆಯಂತೆ ರೋಹಿತ ವೇಮುಲ ಜಾತಿವಾದಿ, ತೀವ್ರಗಾಮಿ ಮತ್ತು ದೇಶದ್ರೋಹಿ, ಹಾಗಾಗಿ ಅವನ ಸಾವಿಗೆ ಸಹಾನುಭೂತಿ ತೋರಬೇಕಿಲ್ಲ ಎಂದು ವಾದಿಸುತ್ತದೆ. ಬಿಜೆಪಿಯ ವಕ್ತಾರರು ಮತ್ತು ಎಬಿವಿಪಿ ಅಂಬೇಡ್ಕರ್ ವಿದ್ಯಾರ್ಥಿ ಸಂಘವು ಯಾಕೂಬ್ ಮೆಮನನ ನೇಣು ಶಿಕ್ಷೆಯನ್ನು ವಿರೋಧಿಸಿದ್ದನ್ನು – ವಿರೋಧವಿದ್ದದ್ದು ಗಲ್ಲು ಶಿಕ್ಷೆಯ ವಿರುದ್ಧ – ಅವರ ದೇಶದ್ರೋಹಿ ಚಟುವಟಿಕೆಗೆ ಆಧಾರದಂತೆ ನೀಡುತ್ತಾರೆ.

ಆತ್ಮಹತ್ಯೆಯ ರಾಜಕೀಯಗೊಳಿಸುವಿಕೆ.

ಯಾವುದೇ ಅಚ್ಚರಿ ಬೇಡ, ಬಿಜೆಪಿ ತನ್ನ ರಾಜಕೀಯ ವಿರೋಧಿಗಳು ರೋಹಿತನ ಆತ್ಮಹತ್ಯೆಯನ್ನು ಬಂಡಾರು ದತ್ತಾತ್ರೇಯರ ಪತ್ರಕ್ಕೆ ಮತ್ತು ಮಾನವ ಸಂಪನ್ಮೂಲ ಇಲಾಖೆ ಹಲವು ಸಲ ಹೈದರಾಬಾದ್ ವಿಶ್ವವಿದ್ಯಾಲಯಕ್ಕೆ ಈ ವಿಷಯವನ್ನು ನೆನಪಿಸಿದ್ದಕ್ಕೆ ಜೋಡಿಸಿದ್ದನ್ನು ‘ರಾಜಕೀಯ’ ಎಂದು ಆರೋಪಿಸಿತು. ವಿರೋಧ ಪಕ್ಷದ ರಾಷ್ಟ್ರ ಮಟ್ಟದ ನಾಯಕರು ರೋಹಿತ್ ವೇಮುಲನ ಸಾವಿಗೆ ಸಂತಾಪ ಸೂಚಿಸಿ ಪ್ರತಿಭಟನೆಗೆ ಇಳಿದಿದ್ದರಲ್ಲಿ ರಾಜಕೀಯದ ಒಂದಂಶವಿದ್ದೇ ಇದೆ. ಆದರವರು ಎಬಿವಿಪಿಯ ಆಪಾದನೆಯನ್ನು ಪರಿಶೀಲಿಸದೆ ವಿದ್ಯಾರ್ಥಿ ಸಂಘಟನೆಯನ್ನು “ಜಾತಿವಾದಿ, ತೀವ್ರಗಾಮಿ ಮತ್ತು ದೇಶವಿರೋಧಿ” ಎಂದು ಬರೆದು, ಯಾವೊಂದು ಆಧಾರವಿಲ್ಲದೆ ಎಬಿವಿಪಿಯ ಸದಸ್ಯ ಮಾರಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದೆ ಎಂದು ಹೇಳಿದ್ದನ್ನು ಪತ್ರದಲ್ಲಿ ಪುನರುಚ್ಛರಿಸಿದ ಬಿಜೆಪಿಯ ಮಂತ್ರಿಗಳಿಗೆ ಹೋಲಿಸಿದರೆ ನಿಧಾನಕ್ಕೆ ಬಂದರು.

ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಗಳು ವಿರೋಧ ಪಕ್ಷಗಳ ಈ ಬೆಂಬಲವನ್ನು ಸ್ವಾಗತಿಸುತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಹಗೆಯುಳ್ಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ತಮ್ಮ ವಿರುದ್ಧದ ದುರುದ್ದೇಶಪೂರಿತ ದೂರುಗಳಿಗೂ ಪ್ರೋತ್ಸಾಹ ನೀಡುವ ಕೇಂದ್ರ ಸರಕಾರದ ವಿರುದ್ಧ ಹೋರಾಡಲು ಈ ಬೆಂಬಲ ಬೇಕೆನ್ನಿಸಿದ್ದರೆ ಅಚ್ಚರಿಯಿಲ್ಲ.

ರೋಹಿತ್ ವೇಮುಲ ತನ್ನ ಕೊನೆಯ ದಿನಗಳನ್ನು ಹಾಸ್ಟೆಲಿನ ರೂಮಿನ ಬದಲಾಗಿ ತಾತ್ಕಾಲಿಕ ಶೆಡ್ಡಿನಲ್ಲಿ ಕಳೆದ; ಸಂಶೋಧನೆಯನ್ನು ಮುಂದುವರೆಸಲಾಗದ, ಲ್ಯಾಬ್ ಕೆಲಸವನ್ನು ಮುಗಿಸಲಾಗದ ರೋಹಿತ್ ಪೋಲೀಸ್ ದೂರುಗಳು ಮತ್ತು ಮಾತ್ಸರ್ಯದಿಂದ ಎಬಿವಿಪಿಯ ಸದಸ್ಯ ಹಾಕಿದ್ದ ಕೇಸುಗಳು ತನ್ನ ಭವಿಷ್ಯವನ್ನು ನಿರ್ಧರಿಸುವುದನ್ನು ಕಾಯುತ್ತಿದ್ದ. ರೋಹಿತ ವೇಮುಲ ಆಯ್ದುಕೊಂಡ ದಾರಿಯನ್ನು ಅರ್ಥಮಾಡಿಕೊಳ್ಳಬಯಸುವವರು ತಮ್ಮ ಗಮನವನ್ನು ರೋಹಿತನ ಸಾವಿನಿಂದಾರಂಭವಾದ ದೊಡ್ಡ ರಾಜಕೀಯ ನಾಟಕದಿಂದ ಸರಿಸಿ, ಮನುಷ್ಯನನ್ನು ಒಂದು ವೋಟು, ಒಂದು ಸಂಖೈ, ಒಂದು ವಸ್ತುವಾಗಿ ಮಾರ್ಪಡಿಸಿಬಿಟ್ಟ ಸಂಕುಚಿತ ಭಾವ ಮತ್ತು ಭ್ರಷ್ಟತೆಯಿಂದ ಕೂಡಿದ ಮುಖ್ಯವಾಹಿನಿ ರಾಜಕೀಯದ ಪ್ರತಿಬಿಂಬದಂತಿರುವ ವಿಶ್ವವಿದ್ಯಾಲಯ ಮತ್ತು ವಿದ್ಯಾರ್ಥಿಗಳ ರಾಜಕೀಯದತ್ತ ಹರಿಸಬೇಕು.

No comments:

Post a Comment