Jan 29, 2016

ಕು ಸ ಮಧುಸೂದನ್: ಮೂರು ಪದ್ಯಗಳು.

ಕು.ಸ. ಮಧುಸೂದನ್
ಮೂರು ಪದ್ಯಗಳು
ಯಾವುದೂ ಹೊಸತೇನಲ್ಲ!
ಹೊಸಬಾಟಲಿಯಲ್ಲಿ ಹಳೆ ಮದ್ಯ
ಹೊಸದ್ವನಿಯಲ್ಲಿ ಹಳೆ ಘೋಷಣೆಗಳು
ಹೊಸನಾಯಕರ ಬಾಯಲ್ಲಿ ಹಳೆಯ ಘರ್ಜನೆಗಳು
ಹೊಸ ದಾರಿಯಲ್ಲಿ ಹಳೆ ಹೆಜ್ಜೆಗಳು
ತಟ್ಟೆ ಹೊಸತಾದರು ಊಟ ಹಳೆಯದೆ
ಬಟ್ಟೆ ಹೊಸತಾದರು ದೇಹ ಹಳೆಯದೆ
ನಾಯಕ ಹೊಸಬನಾದರು ಭಟ್ಟಂಗಿ ಹಳಬನೇ!
ಹಳೆ ಪ್ರಪಂಚದಲ್ಲಿ ಹೊಸ ಶೋಷಕರು
ಹಳೆ ಹೋರಾಟದಲ್ಲಿ ಹೊಸ ಕ್ರಾಂತಿಕಾರಿಗಳು
ಹೊಸ ಕವಿತೆಗೆ ಜೋತುಬಿದ್ದ ಅದೇ ಹಳೆ ಕವಿಗೆ
ತೆರೆದುಕೊಂಡದ್ದು ಮಾತ್ರ ಹೊಸ ಕಿವಿಗಳು!

**************
ಒಳ್ಳೆಯ ಮನುಷ್ಯ!
ಒಳ್ಳೆಯ ಮನುಷ್ಯನನ್ನು ಎಲ್ಲರೂ ಇಷ್ಟಪಡುತ್ತಾರೆ!
ಆದರೆ ಒಳ್ಳೆ ಮನುಷ್ಯನಾಗಲು ಯಾರೂ ತಯಾರಿರೋದಿಲ್ಲ
ಅನ್ನೋದೆ ವಿಷಾದನೀಯ!
ನೋಡಿ:
ಯಾವನೊ ಒಬ್ಬ ದಾರಿಹೋಕ
ನಡೆದು ಹೋಗುವಾಗ ಸುಮ್ಮನೇ ಸುರಿದು ಹೋಗುತ್ತಿದ್ದ
ಬೀದಿ ನಲ್ಲಿಯ ನಿಲ್ಲಿಸಿದಾಗ ಜನ ಅವನನ್ನು
ಅಚ್ಚರಿ ಚಕಿತನನ್ನಾಗಿ ನೋಡುತ್ತಾರೆ
ನೀರು ವೃಥಾ ಸೋರಿ ಹೋಗುವುದನ್ನು ನೋಡುವ ಜನ
ಕಾರ್ಪೋರೇಷನ್ನಿಗೆ ಪೋನ್ ಮಾಡುತ್ತಾರೆಯೇ ಹೊರತು
ನಲ್ಲಿ ನಿಲ್ಲಿಸಲು ತಯಾರಿರುವುದಿಲ್ಲ!
ಒಳ್ಳೆಯ ಮನುಷ್ಯ ಮೆಚ್ಚಲಷ್ಟೇ ಬೇಕು!
*****************
ಬನ್ನಿ ಮಾತಾಡೋಣ:
ಬನ್ನಿ ಮಾತಾಡೋಣ
ಗೋರಿಗಳಾದ ಊರುಗಳ ಬಗ್ಗೆ
ಕಾರ್ಖಾನೆಗಳಾದ ಗದ್ದೆಗಳ ಬಗ್ಗೆ
ಬಯಲಾದ ಕಾಡುಗಳ ಬಗ್ಗೆ
ನೀರಿರದೆ ಸೊರಗದ ನದಿಗಳ ಬಗ್ಗೆ
ಬನ್ನಿ ಇವತ್ತೊಂದು ದಿನವಾದರೂ ಮಾತಾಡೋಣ:
ದರವೇಸಿಗಳೆಲ್ಲ ಪ್ರಭುಗಳಾದ ಬಗ್ಗೆ
ಮಾಲೀಕರೆಲ್ಲ ಕೂಲಿಗಳಾದ ಬಗ್ಗೆ
ಕೂಲಿಗಳೆಲ್ಲ ಬಿಕಾರಿಗಳಾದ ಬಗ್ಗೆ
ಬಿಕಾರಿಗಳೆಲ್ಲ ಸತ್ತುಹೋದ ಬಗ್ಗೆ
ಬನ್ನಿ ಮಾತಾಡಿಬಿಡೋಣ ಕೊನೆಯದಾಗಿ
ನಿಮ್ಮ ಕೈ ಮುಗಿಯುತ್ತೇನೆ!

No comments:

Post a Comment