Jan 2, 2016

ದೆವ್ವದ ಮಡಿಲಲ್ಲಿ ನಗುತ್ತಾ ವಿಶ್ರಮಿಸಿ!

ಡಾ.ಅಶೋಕ್.ಕೆ.ಆರ್
ಕತೆಗಾಗಿ ನಟರಿರಬೇಕು, ನಟರಿಗಾಗಿ ಕತೆ ಸೃಷ್ಟಿಯಾಗಬಾರದು ಎನ್ನುವಂಶವನ್ನು ಮತ್ತೊಮ್ಮೆ ನಿರೂಪಿಸುವ ಚಿತ್ರ ಕತೆ-ಚಿತ್ರಕತೆ-ನಿರ್ದೇಶನ: ಪುಟ್ಟಣ್ಣ. ಸಿನಿಮಾದ ಹೆಸರಿಗೂ ಸಿನಿಮಾದೊಳಗಿನ ಕತೆಗೂ ಏನೂ ಸಂಬಂಧವಿಲ್ಲ. ‘ದಂಡುಪಾಳ್ಯ’ ಖ್ಯಾತಿಯ ನಿರ್ದೇಶಕ ಶ್ರೀನಿವಾಸ್ ರಾಜು ಈ ಸಿನಿಮಾಕ್ಕೆ ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣರವರ ಹೆಸರಿಟ್ಟಿರುವುದು ಗಿಮಿಕ್ಕಿನ ಉದ್ದೇಶಕ್ಕೇ ಹೊರತು ಇನ್ಯಾವ ಕಾರಣಕ್ಕೂ ಅಲ್ಲ ಎನ್ನುವುದು ಚಿತ್ರ ಪ್ರಾರಂಭವಾದ ಹತ್ತು ನಿಮಿಷದೊಳಗೆ ಅರಿವಾಗಿಬಿಡುತ್ತದೆ! ಇದು ನಗಾಡಿಸುವ ದೆವ್ವದ ಚಿತ್ರ! ದೆವ್ವ ನಗಿಸುವುದಿಲ್ಲ, ದೆವ್ವದ ಸುತ್ತಲಿರುವ ಮನುಷ್ಯರು ಸಿಕ್ಕಾಪಟ್ಟೆ ನಗಿಸುತ್ತಾರೆ. ನಕ್ಕು ನಕ್ಕು ಹೊಟ್ಟೆ ನೊಂದರೆ ಯಾರು ಜವಾಬ್ದಾರಿ ಎಂಬ ಬಗ್ಗೆ ಟೈಟಲ್ ಕಾರ್ಡಿನಲ್ಲಿ ಸೂಚಿಸಿಲ್ಲ. ಎರಡೂವರೆ ಘಂಟೆ ಸಂಪೂರ್ಣ ಮನೋರಂಜನೆ ಅನುಭವಿಸಿದ ಮೇಲೆ ಇದು ತೆಲುಗಿನ ‘ಗೀತಾಂಜಲಿ’ ಎಂಬ ಚಿತ್ರದ ರೀಮೇಕಂತೆ ಎಂಬ ವಿಷಯ ಓದಿದ ನೆನಪಾಗಿ ರವಷ್ಟು ಬೇಸರವಾಗುತ್ತದೆ. ತೆಲುಗು ಚಿತ್ರ ನೋಡಿದ್ದವರು ಮತ್ತೊಮ್ಮೆ ನೋಡುವ ಅವಶ್ಯಕತೆಯಿಲ್ಲ. ಉಳಿದವರು ತಪ್ಪದೇ ನೋಡಿ, ದೆವ್ವದ ಜೊತೆ ನಗುತ್ತಾ ಕಾಲ ಕಳೆಯಿರಿ!

ಚಿತ್ರದ ನಾಯಕ ಸತ್ಯಹರೀಶ್ಚಂದ್ರ (ಕೋಮಲ್) ಪ್ರಶಸ್ತಿ ವಿಜೇತ ನಿರ್ದೇಶಕನಾಗಬೇಕೆಂಬ ಆಸೆಯಿಂದ ರಾಯಚೂರಿನಿಂದ ಬೆಂಗಳೂರಿಗೆ ಬರುತ್ತಾನೆ. ನಿರ್ಮಾಪಕರನ್ನು ಹುಡುಕುತ್ತಿರುತ್ತಾನೆ. ಸಾಫ್ಟ್ ವೇರ್ ಕಂಪನಿಯ ಮಾಲೀಕ ರವಿಶಂಕರ್ ಗೆ ಸಿನಿಮಾ ನಿರ್ಮಿಸಿ ಪ್ರಶಸ್ತಿ ಗಳಿಸಿ ಹೆಸರು ಮಾಡಬೇಕೆಂಬ ಆಸೆ. ರವಿಶಂಕರರನ್ನು ಭೇಟಿ ಆಗಲು ಮೂರು ತಾಸು ತಡವಾಗಿ ಬರುವ ನಾಯಕ ಕತೆ ಹೇಳಲಾರಂಭಿಸುತ್ತಾನೆ. ಅದು ಸಿನಿಮಾ ಕತೆಯಾಗಿರದೆ ಬೆಂಗಳೂರಿಗೆ ಬರುವಾಗ ಬಸ್ಸಿನಲ್ಲಿ ಸಿಕ್ಕ ನಾಯಕಿ (ಪ್ರಿಯಾಮಣಿ), ಬೆಂಗಳೂರಿನ ಮನೆಯಲ್ಲಿ ಪ್ರಾರಂಭವಾದ ದೆವ್ವದ ಕಾಟವಾಗಿರುತ್ತದೆ. ಬಸ್ಸಿನಲ್ಲಿ ಸಿಕ್ಕವಳೇ ದೆವ್ವವಾ? ಅಥವಾ ಮನೆಯಲ್ಲಿ ಮತ್ತೊಂದು ದೆವ್ವವಿದೆಯಾ? ಎಂಬ ಕುತೂಹಲದಿಂದಲೇ ಚಿತ್ರ ಮುಂದುವರೆಯುತ್ತದೆ. ಮನೆಯಲ್ಲಿ ಹತ್ಯೆಯಾಗಿದ್ದ ಯುವತಿ ಯಾರು? ಅವಳನ್ನು ಕೊಂದವರಾರು? ಎಂಬ ಕುತೂಹಲವೆಲ್ಲವೂ ಎರಡನೆಯ ಅರ್ಧದ ಪ್ರಾರಂಭದಲ್ಲೇ ಗೊತ್ತಾಗಿಬಿಡುತ್ತದೆ. ಇನ್ನೇನು ಚಿತ್ರ ಬೋರು ಹೊಡೆಯುತ್ತೆ ಬಿಡಿ ಎಂದುಕೊಳ್ಳುವಷ್ಟರಲ್ಲಿ ಎರಡನೇ ಅರ್ಧದ ನಾಯಕ ಸಾಧು ಕೋಕಿಲ ಪ್ರವೇಶವಾಗುತ್ತದೆ! ಮತ್ತಷ್ಟು ನಕ್ಕು ಸುಸ್ತಾಗುವ ಸುಸಂದರ್ಭ!

ಹೆಸರಿಗೆ ಕೋಮಲ್ ನಾಯಕನಾದರೂ ನಿರ್ಮಾಪಕ ಸಿ.ಆರ್.ಮನೋಹರ್ ಹೆಸರೇಳಿಕೊಂಡು ದುಡ್ಡು ಪೀಕುವ ಡಿ.ಕೆ, ಪಿಕೆ (ಕುರಿ ಪ್ರತಾಪ್ ಮತ್ತು ಪ್ರಶಾಂತ್ ಸಿದ್ಧಿ), ಸ್ನೇಹಿತ ಮಧು, ಸಾಧು ಕೋಕಿಲ, ರವಿಶಂಕರ್, ಪ್ರಿಯಾಮಣಿಯ ಪಾತ್ರಗಳಿಗೆ ಅಷ್ಟೇ ಪ್ರಾಮುಖ್ಯತೆಯಿದೆ. ದೊಡ್ಡಣ್ಣ, ಪೂಜಾ ಗಾಂಧಿ ಸುಮ್ನೆ ಹಿಂಗೆ ಮುಖ ತೋರ್ಸಿ ಹೋಗಿಬಿಡುತ್ತಾರೆ. ದೆವ್ವವಿಲ್ಲ ಬಿಡ್ರಿ ಎಂದು ಒಂದು ಹಂತದಲ್ಲಿ ತೋರಿಸುವ ಚಿತ್ರ ಕೊನೆಯ ಭಾಗದಲ್ಲಿ ದೆವ್ವ ಇದೆ ಕಣ್ರೀ ಎಂದು ನಂಬಿಸಲು ಪ್ರಯತ್ನಿಸುತ್ತದೆ. ಚಿತ್ರದ ಕೊನೆಯಲ್ಲಿ ಬರುವ ಒಂದು ಪುಟ್ಟ ಹಾಡು ‘ಓ! ಚಿತ್ರದಲ್ಲಿ ಹಾಡುಗಳೇ ಇರಲಿಲ್ಲ ಅಲ್ವಾ’ ಎಂದು ನೆನಪಿಸುವುದು ಪ್ರೇಕ್ಷಕರು ಚಿತ್ರದ ಹಾಸ್ಯ ದೃಶ್ಯಗಳಲ್ಲಿ ಮಗ್ನವಾಗಿಬಿಟ್ಟಿರುವ ಸೂಚನೆ! ಹೀರೋಯಿಸಮ್ಮಿನ ಪಾತ್ರಗಳನ್ನು ‘ಹೀರೋ’ಗಳಿಗೆ ಬಿಟ್ಟು ತಮಗೆ ಸೂಕ್ತವಾಗುವ ಇಂತಹ ಶಕ್ತ ಪಾತ್ರಗಳಲ್ಲಿ ನಟಿಸುವುದನ್ನು ಕೋಮಲ್ ಮುಂದುವರೆಸಿದರೆ ನೋಡುವವರಿಗೂ ಅನುಕೂಲ. ರಾತ್ರಿಹೊತ್ತು ದೆವ್ವದ ನರ್ತನವಾಗುತ್ತಿದ್ದಾಗ ಕಿಟಕಿಯಿಂದ ಸೂರ್ಯನ ಬೆಳಕು ಬೀಳುವ ವಿಚಿತ್ರ ದೃಶ್ಯಗಳನ್ನು ಮುಂದಿನ ಚಿತ್ರಗಳಲ್ಲಿ ಚಿತ್ರೀಕರಿಸದಿರುವುದು ನಿರ್ದೇಶಕರಿಗೆ ಒಳಿತು! ಇಂತಹ ಚಿಕ್ಕ ಪುಟ್ಟ ಸಂಗತಿಗಳನ್ನು ಮರೆತು, ರೀಮೇಕ್ ಚಿತ್ರ ಅನ್ನೋ ಬೇಸರ ಮರೆತು ಸಿನಿಮಾ ಮಂದಿರಕ್ಕೆ ಹೋದರೆ ಕೊಟ್ಟ ದುಡ್ಡಿಗೆ ಮೋಸ ಮಾಡುವುದಿಲ್ಲ ಪುಟ್ಟಣ್ಣ.

No comments:

Post a Comment