Jan 24, 2016

ದಯೆಯಿರುವ ಜೂಜ್ಯಾವುದಯ್ಯಾ?

Dr Ashok K R
ಈ ಮೂರೂ ಕಡೆ ಮನುಷ್ಯನ ಮನೋರಂಜನೆಗೆ ಪ್ರಾಣಿಗಳನ್ನು ಉಪಯೋಗಿಸಲಾಗುತ್ತದೆ. ವರುಷಕ್ಕೆ ಮೂರ್ನಾಲ್ಕು ಬಾರಿ ಮನೋರಂಜನೆಗೆಂದು ಉಪಯೋಗಿಸಲ್ಪಡುವ ಪ್ರಾಣಿಗಳನ್ನು ವರುಷ ಪೂರ್ತಿ ಕಣ್ಣಲ್ಲಿ ಕಣ್ಣಿಟ್ಟು ಸಾಕಲಾಗುತ್ತದೆ. ಅದನ್ನು ಸಾಕಿದವರು ಅಷ್ಟು ಚೆಂದ ತಿಂದುಂಡಿರುತ್ತಾರೋ ಗೊತ್ತಿಲ್ಲ ಆ ಪ್ರಾಣಿಗಳಿಗಂತೂ ಭರ್ಜರಿ ಆಹಾರ ನೀಡಿ ಬೆಳಿಗ್ಗೆ ಸಂಜೆ ಮಸಾಜು ಮಾಡಿ, ಬಿಸಿಲಿಗೆಲ್ಲ ಹೋಗಿ ಬಳಲದಂತೆ ನೋಡಿಕೊಂಡು ಮನೆಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಾರೆ. ದಕ್ಷಿಣ ಕನ್ನಡದ ಕಡೆ ಕೋಣಗಳನ್ನು ಈ ರೀತಿ ಸಾಕಿ ಕಂಬಳಕ್ಕೆ ಅಣಿಗೊಳಿಸಿದರೆ, ತಮಿಳುನಾಡಿನಲ್ಲಿ ಹೋರಿಗಳನ್ನು ಸಾಕಿ ಬೆಳೆಸಿ ಜಲ್ಲಿಕಟ್ಟುವಿಗೆ ಅಣಿಗೊಳಿಸುತ್ತಾರೆ, ಇನ್ನೂ ದೇಶಾದ್ಯಂತ (ಅಥವಾ ವಿಶ್ವದಾದ್ಯಂತ) ಕುದುರೆಗಳನ್ನು ಮನೆಮಕ್ಕಳಂತೆ ಸಾಕಿ ಕುದುರೆ ರೇಸುಗಳಿಗೆ ಅಣಿಗೊಳಿಸಲಾಗುತ್ತದೆ. ಈ ಮೂರೂ ಆಟಗಳೇ, ಜಲ್ಲಿಕಟ್ಟುವಿನಲ್ಲಿ ಜೂಜಿರುತ್ತದಾ ಗೊತ್ತಿಲ್ಲ ಕಂಬಳದಲ್ಲಿ ಸ್ಥಳೀಯರ ಮಟ್ಟಿಗೆ ಜೂಜಾಟ ನಡೆದರೆ ಕುದುರೆ ರೇಸಿನಲ್ಲಿ ಕೋಟಿಗಳ ಲೆಕ್ಕದಲ್ಲಿ ಜೂಜು ನಡೆಯುತ್ತದೆ. 

ಜಲ್ಲಿಕಟ್ಟು ಹೋರಿ ‘ಹಿಡಿಯುವ’ ಸ್ಪರ್ಧೆ, ಅಲ್ಲಿ ಜನರ ಕೂಗಾಟ ಹಾರಾಟ, ಹೋರಿಯನ್ನು ಹಿಡಿದು ನೆಲಕ್ಕೆ ಒತ್ತುವ ಉದ್ವೇಗವೆಲ್ಲವೂ ಹೋರಿಗೆ ಹಿಂಸೆ ನೀಡುತ್ತದೆ ಎಂದುಕೊಳ್ಳೋಣ; ಕಂಬಳದಲ್ಲಿ ಕೋಣಗಳನ್ನು ಕೆಸರು ಗದ್ದೆಯಲ್ಲಿ ಓಡಿಸುವಾತ ಕೈಯಲ್ಲೊಂದು ಬೆತ್ತ ಹಿಡಿದು ಅವು ವೇಗವಾಗಿ ಓಡಲೆಂದು ಮಧ್ಯೆ ಮಧ್ಯೆ ಕೋಣಗಳ ಬೆನ್ನ ಮೇಲೆ ಬಾರಿಸುವುದು, ಗದ್ದೆಯ ಸುತ್ತ ನಿಂತ ಜನರು ‘ಓ’ ಎಂದು ಕೂಗೆಬ್ಬಿಸುವುದೆಲ್ಲವೂ ಕೋಣಗಳಿಗೆ ಹಿಂಸೆ ನೀಡುತ್ತದೆ ಎಂದುಕೊಳ್ಳೋಣ; ಕುದುರೆ ರೇಸಿನಲ್ಲಿ ಕುದುರೆಗಳು ಓಡುವಾಗ ಸುತ್ತಲೂ ನಿಂತ ಜನರ ಕೂಗಾಟ ಹಾರಾಟವೇನು ಕಮ್ಮಿಯಿರುವುದಿಲ್ಲ, ಕುದುರೆಯ ಬೆನ್ನ ಮೇಲೆಯೇ ಕುಳಿತುಕೊಳ್ಳುವ ಜಾಕಿ ಕೈಯಲ್ಲೊಂದು ಕೋಲು ಹಿಡಿದುಕೊಂಡು ಕುದುರೆ ವೇಗವಾಗಿ ಓಡಲೆಂದು ಮಧ್ಯೆ ಮಧ್ಯೆ ಬಾರಿಸುತ್ತಾನೆ – ಕಂಬಳ ಮತ್ತು ಜಲ್ಲಿಕಟ್ಟಿನಲ್ಲಿ ನಡೆಯುವಂತದ್ದೇ ಕುದುರೆ ರೇಸಿನಲ್ಲೂ ನಡೆದರೂ ಅದ್ಯಾಕೆ ಹಿಂಸೆ ರೂಪದಲ್ಲಿ ಕಾಣುವುದಿಲ್ಲ? ಕುದುರೆಗಳೇನು ಪ್ರಾಣಿಗಳಲ್ಲವೇ? ಹಾಗೆ ನೋಡಿದರೆ ಉಳಿದೆರಡು ಆಟಗಳಲ್ಲಿಲ್ಲದ ‘ಸವಾರಿ’ ಈ ಆಟದಲ್ಲಿದೆ ಆದರೂ ಇದು ಹಿಂಸೆಯಾಗಿ ಕಾಣುವುದಿಲ್ಲ. ರೇಸು ಓಡುವ ಪ್ರಾಯ ಮುಗಿಸಿದ ಕುದುರೆಯನ್ನು ಕಡಿಮೆ ಬೆಲೆಗೆ ಕೊಟ್ಟುಬಿಡುತ್ತಾರೆ, ಹಲವು ಸಲ ಸಾಯಿಸಿಬಿಡುತ್ತಾರೆ ಎನ್ನುವ ಮಾತೂ ಕೇಳಿಬರುತ್ತದೆ. ಜಲ್ಲಿಕಟ್ಟು – ಕಂಬಳ – ಕುದುರೆ ರೇಸಿನ ನಡುವೆ ಇಷ್ಟೆಲ್ಲ ಸಾಮ್ಯತೆಗಳಿದ್ದರೂ ಕುದುರೆ ರೇಸು ಯಾಕೆ ಪ್ರಾಣಿ ಹಿಂಸೆಯಂತೆ ಕಾಣುವುದಿಲ್ಲವೆಂದರೆ…..

ಯಾಕೆ ಕಾಣುವುದಿಲ್ಲವೆನ್ನುವುದಕ್ಕೆ ಗೂಗಲ್ ಇಮೇಜ್ ಸರ್ಚ್ ಒಂದು ಉತ್ತಮ ಉದಾಹರಣೆ ನೀಡುತ್ತದೆ. ಗೂಗಲ್ ಇಮೇಜ್ ಸರ್ಚಿಗೆ ಹೋಗಿ ಕಂಬಳ ಎಂದು ಟೈಪಿಸಿ, ಜಲ್ಲಿಕಟ್ಟು ಎಂದು ಟೈಪಿಸಿ, ಬೆಂಗಳೂರು ಡರ್ಬಿ ಎಂದು ಟೈಪಿಸಿ ಬರುವ ಚಿತ್ರಗಳನ್ನು ನೋಡಿ! 
ಹಿಂಸೆ

ಹಿಂಸೆ
ಸಂಭ್ರಮ!

ಜಲ್ಲಿಕಟ್ಟು ಮತ್ತು ಕಂಬಳದಲ್ಲಿ ಪ್ರಾಣಿ ಹಿಂಸೆಯಂತೆ ತೋರುವ, ಮನುಷ್ಯ ಕೋಪೋದ್ರೇಕವಾಗಿರುವಂತೆ ಕಾಣಿಸುವ ಚಿತ್ರಗಳು ಮೊದಲು ಬಂದರೆ, ಬೆಂಗಳೂರು ಡರ್ಬಿಯಲ್ಲಿ ಕುದರೆಯಿರುವ ಮೂರೇ ಮೂರು ಫೋಟೋ! ಉಳಿದವೆಲ್ಲದರಲ್ಲೂ ನಗುನಗುತ್ತಾ ನಿಂತಿರುವ ಜನರ ಫೋಟೋಗಳು ಮಾತ್ರ! ನಗುವಿನ ಹಿಂದಿರುವ ‘ಹಿಂಸೆ’ಯ ಚಿತ್ರಗಳು ಮಾತ್ರ ಸಿಗುವುದಿಲ್ಲ. ಕುದುರೆ ರೇಸಿಗೂ ಪ್ರಾಣಿ ಹಿಂಸೆಗೂ ಸಂಬಂಧವೇ ಇಲ್ಲ ಎನ್ನುವ ಅಭಿಪ್ರಾಯ ಮೂಡುವುದಕ್ಕೆ ಪತ್ರಿಕೆಗಳೂ ಕಾರಣವಾಗಿವೆ. ನಿನ್ನೆಯಿಂದ ಬೆಂಗಳೂರು ಡರ್ಬಿ ಪ್ರಾರಂಭವಾಗಿದೆ. ಪತ್ರಿಕೆಗಳಲ್ಲಿ ಸುಂದರ ತರುಣ – ತರುಣಿಯರ (ಹೆಚ್ಚಾಗಿ ತರುಣಿಯರು) ಫೋಟೋಗಳು ರಾರಾಜಿಸುತ್ತಿವೆ. ಜಲ್ಲಿಕಟ್ಟು ಮತ್ತು ಕಂಬಳದಲ್ಲಿ ಇದೇ ಪತ್ರಿಕೆಗಳು ಹಾಕುವ ಫೋಟೋಗಳನ್ನೊಮ್ಮೆ ನೆನಪಿಸಿಕೊಳ್ಳಿ.

ಪ್ರಾಣಿಗಳ ಮೇಲೆ ಅಪಾರವಾದ ದಯೆಯನ್ನೊಂದಿರುವ ನಮ್ಮ ಘನ ನ್ಯಾಯಾಲಯವು ಜಲ್ಲಿಕಟ್ಟು ಮತ್ತು ಕಂಬಳವನ್ನು ನಿಷೇಧಿಸಿ ಆದೇಶ ಹೊರಡಿಸಿದರೆ ಕುದುರೆ ರೇಸಿನ ಬಗ್ಗೆ ಚಕಾರವೆತ್ತುವುದಿಲ್ಲ, ನ್ಯಾಯಾಲಯಕ್ಕೂ ಅತ್ತಿತ್ತ ನೋಡದಂತೆ ಜೀನು ತೊಡಿಸಲಾಗಿದೆಯಾ? ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯನ್ನೂ ಪ್ರಶ್ನಿಸಬಹುದು ಆದರೆ ನ್ಯಾಯಾಲಯವನ್ನು ಪ್ರಶ್ನಿಸಿಬಿಟ್ಟರೆ ನ್ಯಾಯಾಲಯದ ತೀರ್ಪನ್ನು ವಿಮರ್ಶಿಸಿಬಿಟ್ಟರೆ ನ್ಯಾಯಾಂಗ ನಿಂದನೆ! ಪ್ರಜಾಪ್ರಭುತ್ವದ ಎಲ್ಲಾ ಅಂಗಗಳೂ ಪ್ರಶ್ನಾರ್ಹವಾಗಿದ್ದರಷ್ಟೇ ಸೊಗಸು.

No comments:

Post a Comment