Oct 16, 2015

ಕ್ರಾಂತಿವೀರ ಖೇಣಿ ಕಣಿಯಲ್ಲಿ ಸುಳ್ಳೆಲ್ಲಿದೆ!

ಬೀದರಿನ ಶಾಸಕರಾದ ಮಾನ್ಯ ಅಶೋಕ್ ಖೇಣಿಯವರು ಒಂದು ಅಮೋಘ ಅಧ್ಯಯನ ಕೈಗೊಂಡು ರೈತರ ಆತ್ಮಹತ್ಯೆಗೆ ಕಾರಣಗಳನ್ನು ಕಂಡುಹಿಡಿದಿದ್ದಾರೆ. ಸನ್ಮಾನ್ಯ ಅಶೋಕ್ ಖೇಣಿಯವರನ್ನು ರೈತ ಸಮುದಾಯ ತಮ್ಮ ನಾಯಕರನ್ನಾಗಿ ಆಯ್ಕೆ ಮಾಡಿಕೊಂಡು ಉದ್ಧಾರವಾಗುವ ದಾರಿಯನ್ನು ಹಿಡಿಯುವುದನ್ನು ಬಿಟ್ಟು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸನ್ಮಾನ್ಯರ ಅತ್ಯಮೋಘ ಕೊಡುಗೆಯಾದ ನೈಸಲ್ಲದ ನೈಸ್ ರಸ್ತೆಯ 'ಅಭಿರುದ್ಧಿ'ಗೆಂದು ಕಟ್ಟಲಾಗಿದ್ದ ಟೋಲ್ ಬೂತನ್ನು 'ಕಿಡಿಗೇಡಿಗಳು' ಧ್ವಂಸ ಮಾಡಿ ಅಶೋಕ್ ಖೇಣಿಯವರ ಮನ ನೋಯಿಸುವಂತಹ ಕೃತ್ಯವನ್ನೆಸಗಿರುವುದು ಅಕ್ಷಮ್ಯವೇ ಸರಿ. ಇಷ್ಟಕ್ಕೂ ಅಶೋಕ್ ಖೇಣಿ ಅಧ್ಯಯನದಲ್ಲಿದ್ದದಾದರೂ ಏನು?
ಜೂನ್ ಜುಲೈ ತಿಂಗಳಲ್ಲಿ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದ್ಯಾಕೆ ಎಂದು ನಮ್ಮ ನಾಡಿನ ಮುಖ್ಯಮಂತ್ರಿಗಳೇ ತಲೆ ಕೆರೆದುಕೊಂಡಿದ್ದರು. ತಲೆ ಕೆರೆದುಕೊಳ್ಳುವುದರ ಬದಲು ಖೇಣಿಯವರನ್ನು ಕರೆಸಿ ಕೇಳಿದ್ದರೆ ಎಲ್ಲವೂ ಪರಿಹಾರವಾಗಿಬಿಡುತ್ತಿತ್ತು. ಇರಲಿ, ಖೇಣಿ ಅಧ್ಯಯನ ಸಂಸ್ಥೆಯ ವರದಿಯ ಪ್ರಕಾರ ಆತ್ಮಹತ್ಯೆ ಮಾಡಿಕೊಂಡ 700 ರೈತರಲ್ಲಿ 500 ಮಂದಿ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಅವರ ಜೂಜು ಪ್ರವೃತ್ತಿ ಕಾರಣವಂತೆ. ಬೆಳೆ ಬೆಳೆಯುತ್ತೀನೆಂದು ಬ್ಯಾಂಕುಗಳಿಗೆ, ಬಡ್ಡಿ ಸಾಲ ನೀಡುವವರಿಗೆ ನಂಬಿಸಿ ಹಣ ಪಡೆದು ಆ ಹಣವನ್ನೆಲ್ಲಾ ಜೂಜಿನಲ್ಲಿ ಕಳೆದು ಸಾಲ ತೀರಿಸಲಾಗದೆ ನೇಣಿಗೆ, ವಿಷಕ್ಕೆ ಶರಣಾಗಿದ್ದಾರಂತೆ. ರೈತ ಬಂಧು ಖೇಣಿ ಹೇಳಿರುವುದರಲ್ಲಿ ಸುಳ್ಳೆಲ್ಲಿದೆ? ಇದನ್ನರಿಯದವರು ಅನಾವಶ್ಯಕವಾಗಿ ಖೇಣಿಯವರ ಮಾನ ಹರಾಜಾಕುತ್ತಿರುವುದನ್ನು ಭಯಾನಕ ಮಾತುಗಳಲ್ಲಿ ಖಂಡಿಸಬೇಕೆಂದು ಹೊಟ್ಟೆಗೆ ಅನ್ನ ತಿನ್ನದವರೆಲ್ಲರನ್ನೂ ಈ ಮೂಲಕ ಕೇಳಿಕೊಳ್ಳುತ್ತೇವೆ.
Freedictionary ವೆಬ್ ಪುಟದ ಪ್ರಕಾರ ಜೂಜು ಅಂದರೆ gamblingಗೆ ಈ ಕೆಳಗಿನ ಅರ್ಥಗಳನ್ನು ನೀಡಲಾಗಿದೆ
1. To bet on an uncertain outcome, as of a contest
2. To play a game of chance for stakes.
3. To take a risk in the hope of gaining an advantage or a benefit.

ಪ್ರತಿಫಲದ ಬಗ್ಗೆ ಚಿಂತಿಸದೆ ಹಣವನ್ನೂಡುವುದು, ಅದೃಷ್ಟ ನಂಬಿ ದುಡ್ಡು ಸುರಿಯುವುದು, ಲಾಭವಾಗಬಹುದೆಂಬ ನಿರೀಕ್ಷೆಯಿಂದ ಅಪಾಯಕ್ಕೆದುರಾಗುವುದು ಜೂಜುಗಾರನ ಪ್ರಮುಖ ಲಕ್ಷಣಗಳು. ಹೂಡಿದ ದುಡ್ಡು ಮರಳುವುದು ನಿರ್ಧಾರವಾಗುವುದು ಹೂಡಿಕೆದಾರನಿಂದಲ್ಲ, ಬೇರೊಬ್ಬನಿಂದ. ನಮ್ಮ ರೈತರಲ್ಲೂ ಈ ಎಲ್ಲಾ ಲಕ್ಷಣಗಳು ಇದೆಯಲ್ಲ? ಬೆಳೆ ಬರುತ್ತೋ ಇಲ್ಲವೋ ಎಂದು ಯೋಚಿಸದೆ ಬೀಜ ಬಿತ್ತುತ್ತಾನೆ, ಮಳೆಯೆಂಬ ಅದೃಷ್ಟವನ್ನು ನಂಬಿ ದುಡ್ಡು ಸುರಿಯುತ್ತಾನೆ, ಲಾಭವಾಗಬಹುದೆಂಬ ನಿರೀಕ್ಷೆಯಿಂದ ಎಲ್ಲಾ ರೀತಿಯ ಅಪಾಯಗಳನ್ನೂ ಎದುರುಗೊಳ್ಳುತ್ತಾನೆ; ಕೊನೆಗೆ ಕೈಹತ್ತಿದ ಬೆಳೆಗೆ ಬೆಲೆ ನಿರ್ಧರಿಸುವುದು ದಲ್ಲಾಳಿ/ವರ್ತಕ/ಸರಕಾರ. ರೈತರಿಗಿಂತ ದೊಡ್ಡ ಜೂಜುಕೋರ ಯಾರಿದ್ದಾರೋ ತೋರಿಸಿ. ಸನ್ಮಾನ್ಯ ಅಶೋಕ್ ಖೇಣಿಯವರನ್ನು ವಿರೋಧಿಸುವವರು ಇಂತಹ ಒಳಾರ್ಥಗಳನ್ನೆಲ್ಲ ಯೋಚಿಸಬೇಕು. ಯೋಚಿಸಿದ ನಂತರ ಇಂತಹ ಸನ್ಮಾನ್ಯರನ್ನು ಶಾಸಕರನ್ನಾಗಿ ಆಯ್ಕೆ ಮಾಡುವ ನಮ್ಮ ಮುಟ್ಟಾಳತನಕ್ಕೆ ನಾವೇ ನಮ್ಮ ಕೆನ್ನೆಗೆರಡು ಬಾರಿಸಿಕೊಳ್ಳಬೇಕು.

No comments:

Post a Comment