Sep 8, 2015

ಅಡ್ಡಡ್ಡ ಮಲಗಲು ಅಡ್ಡದಾರಿ ಹಿಡಿದವರು.

Dr Ashok K R
ಯಾವ ಚುನಾವಣೆಯೇ ಆದರೂ ಬಹುಮತ ಬರದಿದ್ದರೆ ರಾಜಕೀಯ ನಾಟಕಗಳು ಉತ್ತುಂಗಕ್ಕೇರಿಬಿಡುತ್ತವೆ. ಬಿಬಿಎಂಪಿ ಚುನಾವಣೆ ಕೂಡ ರಾಜಕೀಯ ನಾಟಕಗಳಿಗೆ ರೆಸಾರ್ಟ್ ರಾಜಕೀಯಕ್ಕೆ ಕಾರಣವಾಗಿದೆ. ಯಾವ ಪಕ್ಷಕ್ಕೂ ಸರಳ ಬಹುಮತ ಪಡೆಯಲು ಸಾಧ್ಯವಾಗಿಲ್ಲ. 100 ಸ್ಥಾನಗಳನ್ನು ಪಡೆದ ಬಿಜೆಪಿ ಪ್ರಥಮ ಸ್ಥಾನದಲ್ಲಿದ್ದರೆ ಕಾಂಗ್ರೆಸ್ 76 ಸ್ಥಾನಗಳನ್ನು ಗಿಟ್ಟಿಸಿಕೊಂಡಿದೆ. ಜೆಡಿಎಸ್ 14ರಲ್ಲಿ ಮತ್ತು ಪಕ್ಷೇತರರು 8 ರಲ್ಲಿ ಜಯ ಗಳಿಸಿದ್ದಾರೆ. ಕಳೆದ ಬಾರಿಯ ಬಿಬಿಎಂಪಿ ಚುನಾವಣಾ ಫಲಿತಾಂಶ ಗಮನಿಸಿದರೆ ಬಿಜೆಪಿ ಕಳೆದ ಬಾರಿಗಿಂತ ಹನ್ನೆರಡು ಸ್ಥಾನಗಳನ್ನು ಕಡಿಮೆ ಗಳಿಸಿದ್ದರೆ, ಕಾಂಗ್ರೆಸ್ ಹನ್ನೊಂದು ಸ್ಥಾನಗಳನ್ನು ಹೆಚ್ಚು ಗಳಿಸಿದೆ. ಜೆಡಿಎಸ್ ಕಳೆದ ಬಾರಿಯೂ ಹದಿನಾಲ್ಕು ಸ್ಥಾನಗಳನ್ನೇ ಗಳಿಸಿತ್ತು. ಇನ್ನು 8 ಪಕ್ಷೇತರರಲ್ಲಿ ಮೂವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾದರೆ ಮೂವರು ಬಿಜೆಪಿಯ ಬಂಡಾಯ ಅಭ್ಯರ್ಥಿಗಳು. ಕಳೆದ ಬಾರಿಗಿಂತ ಹೆಚ್ಚು ಮತ, ಸ್ಥಾನಗಳನ್ನು ಪಡೆದಿದ್ದರೂ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಪರಿಸ್ಥಿತಿ ಕಾಂಗ್ರೆಸ್ಸಿನದು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವೇ ಇದ್ದು ಬೆಂಗಳೂರಿನ ಚುನಾವಣೆ ಸೋತಿರುವುದು ಆ ಪಕ್ಷದ ಬೆಂಗಳೂರು ನಾಯಕರಿಗೆ, ಚುನಾವಣೆಗೆ ಮುಂಚೆ ಊರು ಸುತ್ತಿದ ಸಿದ್ಧರಾಮಯ್ಯರಿಗಾದ ಸೋಲೆಂದೇ ಹೇಳಬೇಕು.

ಕಾಂಗ್ರೆಸ್ ಸೋಲಿಗೆ ಬಿಬಿಎಂಪಿ ಚುನಾವಣೆಯನ್ನು ಪದೇ ಪದೇ ಮುಂದೂಡಲು ಪ್ರಯತ್ನಿಸಿದ್ದು, ಬಿಬಿಎಂಪಿಯನ್ನು ವಿಭಜಿಸಲು ಪ್ರಯತ್ನಿಸಿದ್ದು ಹೇಗೆ ಪ್ರಮುಖ ಕಾರಣವೋ ಬೆಂಗಳೂರಿನ ಜನತೆ ಹಲವು ವರುಷಗಳಿಂದ ಯಾವ ಚುನಾವಣೆಯೇ ಆದರೂ ಬಿಜೆಪಿಯ ಕಡೆಗೆ ಹೆಚ್ಚು ವಾಲುತ್ತಿರುವುದೂ ಸತ್ಯ. ಆ ವಾಲುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ಸಿನ ಪ್ರಯತ್ನ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಿತ್ತು. ಜೊತೆಗೆ ಕಾಂಗ್ರೆಸ್ಸಿನೊಳಗಡೆಯೇ ಮೂಲ ಕಾಂಗ್ರೆಸ್ಸಿಗರು ಮತ್ತು ವಲಸೆ ಕಾಂಗ್ರೆಸ್ಸಿಗರ ನಡುವಿನ ಮುಸುಕಿನ ಗುದ್ದಾಟ ಚುನಾವಣೆಗೆ ಕೆಲವೇ ದಿನಗಳ ಮುಂಚೆ ಬಹಿರಂಗವಾಗಿಯೇ ಸ್ಪೋಟಗೊಂಡಿತ್ತು. ಬೆಂಗಳೂರಿಗರು ಇವತ್ತಿಗೂ ನೆನೆಯುವ ಎಸ್.ಎಂ.ಕೃಷ್ಣ ಮತ್ತು ಬಿ.ಕೆ.ಹರಿಪ್ರಸಾದ್ ನೇರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಮಾತನಾಡಿದರು. ಇವೆಲ್ಲವೂ ಕಾಂಗ್ರೆಸ್ಸಿನ ಸೋಲಿಗೆ ಪ್ರಮುಖ ಕಾರಣಗಳಾಯಿತು. ಭ್ರಷ್ಟಾಚಾರದ ಆರೋಪಗಳನ್ನು ಹೊತ್ತರೂ ಬಿಜೆಪಿ ಮತ್ತೆ ಹೆಚ್ಚು ಸ್ಥಾನ ಪಡೆಯುವಲ್ಲಿ ಅದರ ನಾಯಕ ಅಶೋಕ್ ರ ಪಾತ್ರ ದೊಡ್ಡದು. ಒಂದು ಹಂತದಲ್ಲಿ ಅಶೋಕ್ ಮತ್ತು ಯಡಿಯೂರಪ್ಪ ನಡುವಿನ ತಿಕ್ಕಾಟಗಳು ಬಿಜೆಪಿಯನ್ನು ದಯನೀಯ ಸೋಲಿಗೆ ದೂಡುತ್ತವೆ ಎಂದು ಎಣಿಸಲಾಗಿತ್ತು. ಸಮೀಕ್ಷೆಗಳೂ ಕಾಂಗ್ರೆಸ್ಸಿಗೆ ಅಧಿಕ ಸ್ಥಾನ ಸಿಗುವುದೆಂದೇ ಹೇಳಿತ್ತು. ಮತದಾರ ಆ ಊಹಾ ಪೋಹಗಳಿಗೆಲ್ಲಾ ತಿಲಾಂಜಲಿ ಕೊಟ್ಟು ಬಿಜೆಪಿಗೇ ಅಧಿಕ ಸ್ಥಾನ ಸಿಗುವಂತೆ ಮಾಡಿದ. ಸೋತ ಕಾಂಗ್ರೆಸ್ ಏನು ಮಾಡಬೇಕಿತ್ತು?

ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದ ಕಾಂಗ್ರೆಸ್ ಸ್ವಾಭಾವಿಕವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಹೆಚ್ಚು ಸ್ಥಾನ ಪಡೆದಿರುವ ಬಿಜೆಪಿ ಸರಿಯಾದ ದಿಕ್ಕಿನಲ್ಲಿ ನಡೆಯುವಂತೆ ವರ್ತಿಸಬೇಕಿತ್ತು. ಕಳೆದ ಬಾರಿ ಬಿಜೆಪಿ ಬಿಬಿಎಂಪಿಯಲ್ಲಿ ನಡೆಸಿದ ಭ್ರಷ್ಟಾಚಾರ ಮತ್ತೆ ಪುನಾರವರ್ತನೆಯಾಗದಂತೆ ನೋಡಿಕೊಳ್ಳಬೇಕಿತ್ತು. ಅದರ ಬಗ್ಗೆ ಯೋಚನೆಯನ್ನೇ ಮಾಡದ ಕಾಂಗ್ರೆಸ್ ಬಿಜೆಪಿ ಗೆಲುವಿನ ಸಂಭ್ರಮದಲ್ಲಿರುವಾಗ ಒಳಗೊಳಗೇ ಬಿಬಿಎಂಪಿಯ ಅಧಿಕಾರ ಹಿಡಿಯಲಿರುವ ಎಲ್ಲಾ ಅಡ್ಡದಾರಿಗಳನ್ನು ಹುಡುಕಲಾರಂಭಿಸಿತ್ತು. ಬಿಜೆಪಿಗೂ ಸರಳ ಬಹುಮತವಿರಲಿಲ್ಲ. ಪಕ್ಷೇತರರ ಬೆಂಬಲ ಅದಕ್ಕೆ ಅಗತ್ಯವಾಗಿ ಬೇಕಿತ್ತು. ಜೊತೆಗೆ ಬಿಬಿಎಂಪಿ ಮೇಯರ್ ಆಯ್ಕೆಯಲ್ಲಿ ಬೆಂಗಳೂರಿನ ಶಾಸಕರು, ಸಂಸದರು, ರಾಜ್ಯಸಭೆ ಸದಸ್ಯರು, ಸಂಸದರೆಲ್ಲರ ಮತಗಳೂ ಅವಶ್ಯಕ. ಕಾಂಗ್ರೆಸ್ ಪಕ್ಷೇತರರನ್ನು ಸೆಳೆದರೆ ಸಾಕಾಗುತ್ತಿರಲಿಲ್ಲ. ಅಡ್ಡದಾರಿಯಿಂದ ಗೆಲ್ಲಲು ಅದಕ್ಕೆ ಜೆಡಿಎಸ್ಸಿನ ಬೆಂಬಲವೂ ಬೇಕಿತ್ತು. ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೂ ಜೆಡಿಎಸ್ಸಿನ ಒಡೆಯರಾದ ದೇವೇಗೌಡರ ಕುಟುಂಬಕ್ಕೂ ಇರುವ ತಿಕ್ಕಾಟಗಳು ಎಲ್ಲರಿಗೂ ತಿಳಿದಿರುವಂತದ್ದೇ. ಬಹುಶಃ ಈ ತಿಕ್ಕಾಟವಿರುವ ಕಾರಣದಿಂದಲೇ ಏನೋ ಬಿಜೆಪಿ ಕಾಂಗ್ರೆಸ್-ಜೆಡಿಎಸ್ ಸೇರಿ ಬಿಬಿಎಂಪಿ ಅಧಿಕಾರ ಹಿಡಿಯುವುದರ ಬಗ್ಗೆ ಚಿಂತಿಸಲೇ ಇಲ್ಲ. ಕಳೆದ ಬಾರಿಯ ಬಿಜೆಪಿ ಸರಕಾರದಲ್ಲಿ, ಅದಕ್ಕೂ ಹಿಂದಿನ ಬಿಜೆಪಿ-ಜೆಡಿಎಸ್ ದೋಸ್ತಿ ಸರಕಾರದ ಸಮಯದಲ್ಲಿ ಕರ್ನಾಟಕದ ಹೆಸರನ್ನು ದೇಶದೆಲ್ಲೆಡೆ ಹಾಳುಗೆಡವಿದ್ದ ರೆಸಾರ್ಟ್ ರಾಜಕೀಯ ಈಗ ಬಿಬಿಎಂಪಿಯಲ್ಲೂ ಕಾಲಿಟ್ಟುಬಿಟ್ಟಿದೆ. ಪಕ್ಷೇತರರನ್ನು ಕೇರಳಕ್ಕೆ ರವಾನಿಸಲಾಗಿದೆ. ನಾವು ಬಂದಿರೋದು ಆಡಳಿತ ಹೇಗೆ ನಡೆಸಬೇಕು ಎಂದು ಕಲಿಯಲು ಎನ್ನುವ ಜೋಕುಗಳನ್ನು ಬಿಬಿಎಂಪಿ ಕಾರ್ಪೊರೇಟರ್ರುಗಳು ಮಾಡುತ್ತಿದ್ದಾರೆ. ಜೆಡಿಎಸ್ ಕೂಡ ತನ್ನವರನ್ನು ರೆಸಾರ್ಟುಗಳಿಗೆ ಅಟ್ಟುತ್ತಿದೆ! ಒಟ್ಟಿನಲ್ಲಿ ಕುದುರೆ ವ್ಯಾಪಾರ ಜೋರಾಗಿರುವಂತೆ ಕಾಣುತ್ತಿದೆ. ‘ಅಭಿವೃದ್ಧಿ’ಗಾಗಿ ಜೆಡಿಎಸ್ ಕಾಂಗ್ರೆಸ್ಸಿನ ಜೊತೆಗೆ ಕೈಜೋಡಿಸುತ್ತಿದೆಯಂತೆ! ಬಿಬಿಎಂಪಿಯಲ್ಲೊಂದು ರಾಜ್ಯದಲ್ಲೊಂದು ಪಕ್ಷ ಅಧಿಕಾರವಿದ್ದರೆ ಬೆಂಗಳೂರು ಅಭಿವೃದ್ಧಿಯಾಗುವುದಿಲ್ಲವೇ? 

ಸಿದ್ಧರಾಮಯ್ಯ ಸರಕಾರದ ಎಲ್ಲಾ ನೂನ್ಯತೆಗಳ ನಡುವೆ ಕಳೆದ ಬಾರಿಯಂತೆ ಅಸಹ್ಯದ ರಾಜಕಾರಣವಿಲ್ಲ ಎಂದು ಸಮಾಧಾನಪಟ್ಟುಕೊಳ್ಳಬಹುದಿತ್ತು. ಇನ್ನು ಮುಂದೆ ಆ ಸಮಾಧಾನವೂ ಇಲ್ಲದಂತಾಗಿದೆ ಬಿಬಿಎಂಪಿಯ ರೆಸಾರ್ಟ್ ರಾಜಕೀಯದ ದೆಸೆಯಿಂದ. ಬಿಬಿಎಂಪಿಯ ವಿಚಾರವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಸೇರಿ ಅಧಿಕಾರ ಹಿಡಿದರೆ ಅಚ್ಚರಿಪಡಬೇಕಿಲ್ಲ. ಕೆಲವು ಗ್ರಾಮ ಪಂಚಾಯತ್ ಜಿಲ್ಲಾ ಪಂಚಾಯತ್ ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಒಟ್ಟಾಗಿ ಅಧಿಕಾರ ಹಿಡಿದಿರುವುದೂ ಇದೆ! ‘ಸ್ಥಳೀಯ ಅನುಕೂಲಗಳಿಗಾಗಿ’! ಇನ್ನು ಹಲವು ಸಲ ರಾಜ್ಯ ರಾಷ್ಟ್ರ ಮಟ್ಟದಲ್ಲೇ ಜೊತೆಗಿದ್ದ ಕಾಂಗ್ರೆಸ್ – ಜೆಡಿಎಸ್ ಬಿಬಿಎಂಪಿಯಲ್ಲಿ ಒಂದಾಗುವುದು ಸಹಜ, ಆದರೆ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿರುವಾಗ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವುದು ಅನೈತಿಕ. ಈ ಅನೈತಿಕತೆಯನ್ನು ಬಿಜೆಪಿ ಬೀದಿಗಿಳಿದು ವಿರೋಧಿಸುತ್ತಿದೆ. ಕೆಲವೇ ವರುಷಗಳ ಹಿಂದೆ ಅವರೇ ಉತ್ಸಾಹದಿಂದ ಮಾಡುತ್ತಿದ್ದ ಆಪರೇಷನ್ ಕಮಲವನ್ನು ಅವರು ಮರೆತುಬಿಟ್ಟಿದ್ದಾರೆ! ಆಪರೇಷನ್ ಕಮಲ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಸೋಲಲು ಮಹತ್ತರ ಪಾತ್ರ ವಹಿಸಿತು ಎಂಬಂಶವನ್ನು ಆಪರೇಷನ್ ಕೈ ಆಪರೇಷನ್ ಬಿಬಿಎಂಪಿ ಮಾಡುತ್ತಿರುವ ಕಾಂಗ್ರೆಸ್ ಕೂಡ ಮರೆತುಬಿಟ್ಟಿದೆ! ಮತ್ತೆ ರಾಜಕೀಯ ಮನರಂಜನೆಯಾಗಿಬಿಡುವ ಎಲ್ಲಾ ಅಪಾಯಗಳೂ ಕಾಣುತ್ತಿವೆ…

No comments:

Post a Comment