Aug 7, 2015

ಪತ್ರಕರ್ತನೊಬ್ಬನ ಆಸ್ತಿ ವಿವರ!

ಗೆ, 
ಎಚ್.ಆರ್. ರಂಗನಾಥ್
ವ್ಯವಸ್ಥಾಪಕ ನಿರ್ದೇಶಕರು
ಪಬ್ಲಿಕ್ ಟಿವಿ
ಬೆಂಗಳೂರು

ಆತ್ಮೀಯ ಸರ್, 

ವಿಷಯ: ನನ್ನ ಆಸ್ತಿ ವಿವರ ಸಲ್ಲಿಸುವ ಕುರಿತು

ಇವತ್ತಿಗೆ ನಾನು ಪತ್ರಿಕೋದ್ಯಮದಲ್ಲಿ ಕೆಲಸ ಮಾಡಲು ಆರಂಭಿಸಿ 12 ವರ್ಷ ಕಳೆಯಿತು. 2003 ಆಗಸ್ಟ್ 6ರಂದು ಮೈಸೂರು ಕನ್ನಡಪ್ರಭ ಕಚೇರಿಯಲ್ಲಿ ಅಂಶಿ ಪ್ರಸನ್ನಕುಮಾರ್ ಅವರ ಮಾರ್ಗದರ್ಶನದಲ್ಲಿ ಕೆಲಸ ಶುರುಮಾಡಿದೆ. ಅದಾದ ನಂತರ ಕನ್ನಡಪ್ರಭ, ಧಾರವಾಡ ಅಲ್ಲಿಂದ ಬೆಂಗಳೂರು ಕನ್ನಡಪ್ರಭಕ್ಕೆ ಬಂದೆ. ಅದಾದ ನಂತರ ಸುವರ್ಣನ್ಯೂಸ್ ಅಲ್ಲಿಂದ ಹೊರಟು ಉದಯವಾಣಿ ದೆಹಲಿ ವರದಿಗಾರನಾಗಿಯೂ ಇದೆ. 2011 ಅಕ್ಟೋಬರ್ 27ರಂದು ಬಂದು ಬೆಂಗಳೂರು ಪಬ್ಲಿಕ್ ಟಿವಿ ಸೇರ್ಪಡೆಯಾಗಿ ಸದ್ಯ ಇನ್‍ಪುಟ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದೇನೆ. 6 ಸಾವಿರ ರೂಪಾಯಿ ಸಂಬಳದಿಂದ ಉದ್ಯೋಗ ಶುರು ಮಾಡಿದ ನಾನೀಗ ತಿಂಗಳಿಗೆ 64,500 ರೂಪಾಯಿ (ನಿಗದಿಯಾಗಿರುವ ಸಂಬಳ 72 ಸಾವಿರ ರೂಪಾಯಿ, ಟ್ಯಾಕ್ಸ್ ಕಳೆದು ಕೈಗೆ ಸಿಗುವ ಸಂಬಳ 64,500 ರೂಪಾಯಿ) ಪಡೆದುಕೊಳ್ಳುತ್ತಿದ್ದೇನೆ. ಸಂಬಳದ ವಿಚಾರದಲ್ಲಿ ಸಂತೃಪ್ತನಾಗಿದ್ದೇನೆ.

ಪಬ್ಲಿಕ್ ಟಿವಿ ಶುರು ಮಾಡಿದಾಗ ನೀವು ಆಸ್ತಿ ಘೋಷಿಸಿಕೊಂಡಂತೆಯೇ ನಾನು ಆಸ್ತಿ ಘೋಷಿಸಿಕೊಳ್ಳಬೇಕು ಅಂದುಕೊಳ್ಳುತ್ತಲೇ ದಿನ ತಳ್ಳಿದ್ದೆ. ಆಗಾಗ ಅನ್ನಿಸಿದರೂ ಬರೆಯಲು ಕುಳಿತವ ನನ್ನ ಹತ್ತಿರ ಏನಿದೆ ಆಸ್ತಿ ಬರೆದುಕೊಳ್ಳಲು ಅಂತ ಸುಮ್ಮನಾಗುತ್ತಿದ್ದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಭ್ರಷ್ಟಾಚಾರ ಕುರಿತಂತೆ ಎದ್ದಿರುವ ಚರ್ಚೆಗಳ ವೇಳೆ ಸಾಮಾಜಿಕ ಜಾಲ ತಾಣಗಳಲ್ಲಿ ಸಾರ್ವಜನಿಕರು ಪತ್ರಕರ್ತರ ಕುರಿತಂತೆ ಹಾಕಿದ ಕಾಮೆಂಟ್‍ಗಳು ಹಾಗೂ ನನ್ನ ಹಳೆಯ ತುಡಿತದಿಂದಾಗಿ ನಿಮಗೆ ನನ್ನ ಆಸ್ತಿ ವಿವರವನ್ನು ಸಲ್ಲಿಸುತ್ತಿದ್ದೇನೆ. ತಾವು ಅನುಮತಿ ನೀಡಿದರೆ ಇದನ್ನು ನನ್ನ ವೈಯಕ್ತಿಕ ಫೇಸ್‍ಬುಕ್ ಅಕೌಂಟಿನಲ್ಲಿಯೂ ಪ್ರಕಟಿಸುತ್ತೇನೆ. 

ಇದನ್ನು ನನ್ನ ಅಹಂ ಪ್ರದರ್ಶನಕ್ಕೋ, ಪ್ರಚಾರಕ್ಕೋ ಮಾಡುತ್ತಿಲ್ಲ. ಎಲ್ಲರ ಅಕೌಂಟಬಿಲಿಟಿ ಪ್ರಶ್ನಿಸುವ ನಾವು ನಮ್ಮ ಗಳಿಕೆ ಪಾರದರ್ಶಕವಾಗಿಡಬೇಕು ಎಂಬುದು ನನ್ನ ಅಭಿಪ್ರಾಯ, ನಂಬಿಕೆ ಮತ್ತು ನಿರ್ಧಾರ ಆಗಿದ್ದರಿಂದ ಈ ವಿವರ ಸಲ್ಲಿಸುತ್ತಿದ್ದೇನೆ.

ಇಲ್ಲಿಯ ತನಕ ನಾನು ಆಯಾ ಸಂಸ್ಥೆಗಳು ನೀಡಿದ ಸಂಬಳದ ವಿನಃ ಬೇರೆ ಸಂಪಾದನೆಯನ್ನ ಮಾಡಿಲ್ಲ. ಆದರೆ, ನಾನು ವರದಿಗಾರನಾದ ಮೊದಲ ಎರಡು ವರ್ಷ ಪಿಜಿಎಫ್ ಕಂಪನಿಯ ಸಣ್ಣ ಉಳಿತಾಯ ಯೋಜನೆಯ ಏಜೆಂಟ್ ಆಗಿಯೂ ಕಮಿಷನ್ ಪಡೆದಿದ್ದೇನೆ. ನಂತರ ಅದರಿಂದ ಹೊರಬಂದೆ. ಧಾರವಾಡದಲ್ಲಿದ್ದ ವೇಳೆ ಭಾಷಾಂತರ ಕಾರ್ಯ ಮಾಡಿ 25 ಸಾವಿರ ರೂಪಾಯಿ ಸಂಪಾದಿಸಿದ್ದು ಬಿಟ್ಟರೆ ಈವರೆಗೆ ಸಂಬಳದ ವಿನಃ ಬೇರೆಲ್ಲೂ ಒಂದು ರೂಪಾಯಿಯನ್ನು ದುಡಿದೂ ಇಲ್ಲ. ಪಡೆದೂ ಇಲ್ಲ. ಹಣದ ಆಸೆ ಆಗಾಗ ಹುಟ್ಟಿದೆ ನಾನೇ ತಾಳ್ಮೆಯಿಂದ ಅವನ್ನು ಕೊಂದು ಹಾಕಿದ್ದೇನೆ.

ಪಿತ್ರಾರ್ಜಿತ ಆಸ್ತಿ ವಿವರ:

ನಾನು ಈ ಕ್ಷಣದವರೆಗೆ ಅವಿವಾಹಿತ. ಮುಂದೆ ಗೊತ್ತಿಲ್ಲ. ಮಂಡ್ಯ ತಾಲೂಕಿನ ಹನಕರೆ ನನ್ನ ಹುಟ್ಟೂರು. ನನ್ನ ತಂದೆ ತಾಯಿ, ನನ್ನ ತಮ್ಮ ಮತ್ತು ಆತನ ಪತ್ನಿ ಎಲ್ಲರೂ ಇರುವ ಒಟ್ಟು ಕುಟುಂಬ. ನನ್ನ ತಮ್ಮ ಅಭಿಲಾಷ್ ಚಿತ್ರ ನಿರ್ದೇಶಕ. ಒಟ್ಟು ಕುಟುಂಬವಾದರೂ ಚಿತ್ರ ನಿರ್ಮಾಣ-ನಿರ್ದೇಶನದಲ್ಲಿ ತೊಡಗಿಕೊಂಡಿರುವ ಆತನ ವ್ಯವಹಾರಕ್ಕೆ ಯಾವತ್ತೂ ನಾನಾಗಲಿ, ನನ್ನ ತಂದೆ-ತಾಯಿಯಾಗಲಿ ಕೈ ಹಾಕಿಲ್ಲ. ಆತ ನಮ್ಮಲ್ಲಿ ಕೇಳಿಲ್ಲ. ಸಾಮಾನ್ಯ ಸಹೋದರರಂತೆ ಒಂದಿಷ್ಟು ಕಷ್ಟ-ಸುಖಗಳಿಗೆ ಒಬ್ಬರಿಗೊಬ್ಬರು ಆಗಿದ್ದೇವೆ ಅಷ್ಟೇ. ನನ್ನ ತಂದೆ ಶಂಕರಪ್ಪ - ತಾಯಿ ರತ್ನಮ್ಮ ಅವರ ಯೋಗಕ್ಷೇಮಕ್ಕೆ ನಾನು ಹಣ ಕೊಡುವುದು ಉಂಟು ಆದರೆ ನಾನು ದುಡಿಯಲಾರಂಭಿಸಿದ ದಿನದಿಂದ ಅವರಲ್ಲಿ ನಾನು ಹಣ ಪಡೆದಿಲ್ಲ. ನನ್ನ ತಾಯಿ ಪಿಎಸಿಎಲ್ ಕಂಪನಿ ಉಳಿತಾಯ ಯೋಜನೆಯ ಪ್ರತಿನಿಧಿಯಾಗಿ ಕಮಿಷನ್ ಪಡೆಯುತ್ತಿದ್ದರು. ಆದರೆ ಕಳೆದ ಒಂದೂವರೆ ವರ್ಷದಿಂದ ಆ ಕಂಪನಿಯೇ ತೊಂದರೆಯಲ್ಲಿರುವುದರಿಂದ ಅವರಿಗೆ ಯಾವುದೇ ಹಣ ಬರುತ್ತಿಲ್ಲ. ನನ್ನ ತಂದೆ ಶಂಕರಪ್ಪ, ಮಧುಮೇಹ ಸೇರಿದಂತೆ ಹಲವು ವಿಷಯಗಳಲ್ಲಿ ಅನಾರೋಗ್ಯಪೀಡಿತರು. ನಮಗೆ ಒಟ್ಟು 3 ಎಕರೆ 25 ಗುಂಟೆ ನೀರಾವರಿ ಜಮೀನಿದೆ. ಅದರಲ್ಲಿ ನಾವು ಸಾಗುವಳಿ ಮಾಡುತ್ತಿಲ್ಲ. ಗುತ್ತಿಗೆಗೆ ನೀಡಿದ್ದೇವೆ. ಅದರಿಂದ ಬರುವ ಆದಾಯ - ನಷ್ಟ ಎಲ್ಲವೂ ನಮ್ಮ ತಂದೆ-ತಾಯಿಯೇ ನಿಭಾಯಿಸುತ್ತಾರೆ. 

ನನ್ನ ಹೆಸರಿನಲ್ಲಿರುವ ಪಿತ್ರಾರ್ಜಿತ ಆಸ್ತಿ ಮತ್ತು ಸಾಲ

* ನನ್ನ ಹುಟ್ಟೂರಾದ ಮಂಡ್ಯ ತಾಲೂಕಿನ ಹನಕೆರೆಯಲ್ಲಿ 1 ಎಕರೆ 23 ಗುಂಟೆ ಜಮೀನು ನನ್ನ ಹೆಸರಿನಲ್ಲಿ ಇದೆ. ಈ ಜಮೀನನ ಮೇಲೆ 70 ಸಾವಿರ ರೂಪಾಯಿ (ಬಡ್ಡಿ ಹೊರತುಪಡಿಸಿ) ಬೆಳೆ ಸಾಲವಿದೆ.

* ನನ್ನ ತಾಯಿಯ ಹೆಸರಲ್ಲಿ 2 ಎಕರೆ 2 ಗುಂಟೆ ಜಮೀನು ಇದೆ. ಈ ಜಮೀನಿನ ಮೇಲೆ 70 ಸಾವಿರ ರೂಪಾಯಿ (ಬಡ್ಡಿ ಹೊರತುಪಡಿಸಿ) ಬೆಳೆ ಸಾಲವಿದೆ.

* ಹನಕೆರೆಯಲ್ಲಿರುವ ನಮ್ಮ ಮನೆಯ ಸುತ್ತ ಒಟ್ಟು 17 ಗುಂಟೆ ಜಾಗವಿದೆ. ಇದು ನನ್ನ ತಂದೆ ಶಂಕರಪ್ಪ ಅವರ ಹೆಸರಲ್ಲಿದೆ.

* ನನಗಾಗಿ ನಾನು ಒಂದು ಗುಲಗಂಜಿ ಚಿನ್ನವನ್ನು ಕೊಂಡುಕೊಂಡಿಲ್ಲ. ನನ್ನ ತಾಯಿ ಅವರು ದುಡಿದ ಹಣದಲ್ಲಿ ಚಿನ್ನ ಮಾಡಿಸಿಕೊಂಡಿದ್ದಾರೆ. ಕೆಜಿ ಲೆಕ್ಕದಲ್ಲಂತು ಚಿನ್ನವಿಲ್ಲ.

* ಮಂಡ್ಯ ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವುದರಿಂದ ಸಹಜವಾಗಿ ಅದರಲ್ಲಿ ಷೇರುಗಳಿವೆ. ಅದರ ಲೆಕ್ಕವಿಲ್ಲ.

ನನ್ನ ವೈಯಕ್ತಿಕ ಉಳಿತಾಯ - ಗಳಿಕೆ

* ಜೀವ ವಿಮೆ - 1. ಮ್ಯಾಕ್ಸ್ ನ್ಯೂ ಯಾರ್ಕ್ - 2007ರಿಂದ ವಾರ್ಷಿಕ 5057 ರೂಪಾಯಿ ಕಟ್ಟಲಾಗುತ್ತಿದೆ.

2. ಭಾರತೀಯ ಜೀವ ವಿಮೆ - 2007ರಿಂದ 6 ತಿಂಗಳಿಗೊಮ್ಮೆ 1,276 ರೂಪಾಯಿ ಕಟ್ಟಲಾಗುತ್ತಿದೆ

ತಿಂಗಳ ಉಳಿತಾಯ ಯೋಜನೆಗಳು

* ಪಿಎಸಿಎಲ್ ಲಿ.ಗೆ - ತಿಂಗಳಿಗೆ 550 ರೂಪಾಯಿಯ ಮೂರು ಖಾತೆಗಳಿಗೆ ನನ್ನ ಹೆಸರಿನಲ್ಲೇ ಹಣ ಜಮೆ ಮಾಡುತ್ತಿದ್ದೇನೆ.

* ಪಿಎಸಿಎಲ್ ಲಿ.ಗೆ - ತಿಂಗಳಿಗೆ 550 ರೂಪಾಯಿಯ ಎರಡು ಖಾತೆಗಳಿಗೆ ನನ್ನ ತಾಯಿ ಮತ್ತು ನನ್ನ ಸಂಬಂಧಿ ಒಬ್ಬರ ಹೆಸರಿಗೂ ಹಣ ಜಮೆ ಮಾಡುತ್ತಿದ್ದೇನೆ.

* ಮೈಸೂರಿನಲ್ಲಿ ಗೆಳಯರ ಬಳಿ 9 ಸಾವಿರ ರೂಪಾಯಿ ಚೀಟಿ ಕಟ್ಟುತ್ತಿದ್ದೇನೆ. ಹಣ ಪಡೆದು ಬಳಸಿಕೊಂಡಿದ್ದೇನೆ.

* ನನಗೆ ಗೆಳೆಯರು-ಸಂಬಂಧಿಕರಿಂದ ಬರಬೇಕಾಗಿರುವ ಹಣ - 4.5 ಲಕ್ಷ ರೂಪಾಯಿ (ಬರುವುದಿಲ್ಲ ಎಂದು ಖಾತ್ರಿಯಾಗಿರುವ ಮೊತ್ತ ಇದರಲ್ಲಿ ಸೇರಿಸಿಲ್ಲ)

* ನಾನು ಮೊಟ್ಟ ಮೊದಲ ಬಾರಿಗೆ ಕೊಂಡುಕೊಂಡ ಸ್ಟಾರ್ ಸಿಟಿ ಬೈಕ್ ನನ್ನ ಹೆಸರಲ್ಲೇ ಇದೆ. ಅದನ್ನು ಗೆಳಯನಿಗೆ ಕೊಟ್ಟಿದ್ದೇನೆ, ವಾಪಸ್ ನೀಡಬೇಕು ಎನ್ನುವ ಷರತ್ತಿನೊಂದಿಗೆ. ಅದನ್ನು ಮಾರಿದರೆ 10 ಸಾವಿರ ರೂಪಾಯಿಗೆ ವ್ಯಾಪಾರವಾದ್ರೆ ಹೆಚ್ಚು.

* ಕಮಾಡಿಟಿ ಮಾರ್ಕೆಟ್‍ನಲ್ಲಿ ಹಣ ಹಾಕಿದೆನಾದರೂ ಅದರಲ್ಲಿ ದುಡಿಯಲಿಲ್ಲ. ಝರೋದಾ ಬ್ರೋಕರೇಜ್‍ನ ಅಕೌಂಟಿನಲ್ಲಿ 6,500 ರೂಪಾಯಿ ಹಣ ಉಳಿದಿದೆ.

* ಭಾರತೀಯ ಸ್ಟೇಟ್ ಬ್ಯಾಂಕ್, ಮೈಸೂರು ಮುಖ್ಯ ಶಾಖೆಯಲ್ಲಿ ಒಂದು ಎಸ್‍ಬಿ ಖಾತೆ ಹೊಂದಿದ್ದೇನೆ. 3 ಸಾವಿರ ರೂಪಾಯಿಯಷ್ಟು ಹಣ ಅದರಲ್ಲಿದೆ. ಖಾತೆ ಸಂಖ್ಯೆ - 10562379822

* ನನ್ನ ಸಂಬಳದ ಖಾತೆಯು ಬೆಂಗಳೂರು ಮಲ್ಲೇಶ್ವರದಲ್ಲಿರುವ ಐಎನ್‍ಜಿ ವೈಶ್ಯ ಬ್ಯಾಂಕ್ (ಇದೀಗ ಕೊಟಕ್ ಮಹೇಂದ್ರ)ನಲ್ಲಿದೆ. ಖಾತೆ ಸಂಖ್ಯೆ - 147010163987

ನನ್ನ ವೈಯಕ್ತಿಕ ಸಾಲ

ಭಾರತೀಯ ಸ್ಟೇಟ್ ಬ್ಯಾಂಕಿನ ಬೆಂಗಳೂರು ಜೆಪಿನಗರದ ಶಾಖೆಯಲ್ಲಿ ಎರಡು ಕಾರು ಲೋನ್‍ಗಳು ನನ್ನ ಹೆಸರಲ್ಲಿವೆ.

* ಐ10 ಕಾರಿನ ಸಾಲ - 4 ಲಕ್ಷ ರೂಪಾಯಿ (ಈ ಕಾರು ನನ್ನ ಬಳಿ ಇಲ್ಲ. ಆದರೆ, ಕಾರು ನನ್ನ ಹೆಸರಲ್ಲೇ ಇದೆ. ಪ್ರತಿ ತಿಂಗಳು 8,550 ರೂಪಾಯಿಯನ್ನು ನಾನೇ ತುಂಬುತ್ತಿದ್ದೇನೆ. ಕಾರಣ, ಕಾರಿನ ಸಾಲದ ಹಣ ನಾನೇ ಬಳಸಿಕೊಂಡಿದ್ದೇನೆ)

* ಐ20 ಕಾರಿನ ಸಾಲ - 6.5 ಲಕ್ಷ ರೂಪಾಯಿ (ಈ ಕಾರನ್ನು ನಾನೇ ಬಳಸಲು ಕೊಂಡುಕೊಂಡೆನಾದರೂ ಅದನ್ನು ನನ್ನ ಗೆಳೆಯನಿಗೆ ಮಾರಿದ್ದೇನೆ. ಆಗಸ್ಟ್ ತಿಂಗಳಿನಿಂದ ನನ್ನ ಗೆಳೆಯನೇ ಇದರ ಇಎಂಐ ಪಾವತಿಸಲಿದ್ದಾನೆ.)

* ಗೆಳಯರಿಂದ ಪಡೆದ ಸಾಲ - 3 ಲಕ್ಷ ರೂಪಾಯಿ ಇದೆ.
ಮೈಸೂರಲ್ಲಿರುವ ತನಕ ಒಂದಷ್ಟು ವೈಯಕ್ತಿಕ ಸಾಲ-ಕಮಿಟ್‍ಮೆಂಟ್‍ಗಳಿಂದಾಗಿ ತಿನ್ನುವುದರಲ್ಲೂ ಉಳಿಸುತ್ತಿದ್ದೆ. ಧಾರವಾಡಕ್ಕೆ ಹೋದ ಮೇಲೆ ಸಂಬಳವೂ ಹೆಚ್ಚಾದ್ದರಿಂದ ನೆಮ್ಮದಿಯಿಂದ ತಿಂದಿದ್ದೇನೆ. ತಿನ್ನಿಸಿದ್ದೇನೆ. ಬಟ್ಟೆಗಳಿಗೆ ಎಂದಿಗೂ ಹೆಚ್ಚು ಖರ್ಚು ಮಾಡಿದವನಲ್ಲ. ತಿರುಗಾಟಕ್ಕೆ ಖರ್ಚು ಮಾಡಿದ್ದೇನೆ. ಬೆಂಗಳೂರಿಗೆ ಬಂದ ಮೇಲೆ ಪುಸ್ತಕಕ್ಕೆ ದುಡ್ಡು ಸುರಿಯುವುದು ನಿಂತು ಹೋಯಿತು. ದೆಹಲಿಯಲ್ಲಿದ್ದಾಗ ಒಂದು ನೂರು ಪುಸ್ತಕಗಳನ್ನು ಕೊಂಡುಕೊಂಡಿದ್ದೆ. ಒಟ್ಟಾರೆ ಒಂದೂವರೆ ಸಾವಿರದಷ್ಟು ಪುಸ್ತಕಗಳು ನನ್ನ ಬಳಿ ಇರಬಹುದು. ನೆರವಿನ ವಿವರ ಹೇಳಿಕೊಳ್ಳಬಾರದು. ಹೇಳಿಕೊಳ್ಳುವುದಿಲ್ಲ. ಅಪಾರ ಸಂಖ್ಯೆಯ ಗೆಳೆಯರು, ಒಂದಷ್ಟು ಗೆಳೆತಿಯರು ಇದ್ದಾರೆ. ಅವರೇ ನಾನು ಕಳೆದುಕೊಳ್ಳಾರದ ನನ್ನ ಆಸ್ತಿ. ಮೇಲೆ ತಿಳಿಸಿದ ವಿವರಗಳಿಗಿಂತ ಹೆಚ್ಚಿನ ಆಸ್ತಿ, ಹಣಕಾಸು ನನ್ನ ಬಳಿ ಇಲ್ಲ ಎಂದು ನಂಬಿದ್ದೇನೆ. ಯಾರಾದರೂ ಇದಕ್ಕಿಂತ ಹೆಚ್ಚಿನ ಹಣ-ಆಸ್ತಿಯನ್ನು ತೋರಿಸಿದರೆ ಅದನ್ನು ಅವರಿಗೇ ಕೊಟ್ಟು ಬಿಡುತ್ತೇನೆ.

ಕೊನೆ ಮಾತು - ಮದ್ವೆ ಇಲ್ಲ, ಮಕ್ಕಳಿಲ್ಲ. ನಿಂಗೇನಪ್ಪಾ ಖರ್ಚು...? ಅಂತ ಅನ್ನುವ ಸಾವಿರ ಬಗೆಯ ಮಾತು ಕೇಳಿಸಿಕೊಂಡಿದ್ದೇನೆ. ಹೆಂಡತಿ - ಮಕ್ಕಳ ನೆಪ ತೋರಿ ತಪ್ಪಿಸಿಕೊಳ್ಳುವ ಅವಕಾಶ ಅವಿವಾಹಿತರಿಗೆ ಇರುವುದಿಲ್ಲ. ಉಳಿಸು - ಗಳಿಸು ಅಂತ ಪೀಡಿಸಲು ಹೆಂಡತಿ ಇರುವುದಿಲ್ಲ. ಕೊಟ್ಟದ್ದು ತನಗೆ - ಬಚ್ಚಿಟ್ಟದ್ದು ಪರರಿಗೆ ಅಷ್ಟೇ ಅಂದುಕೊಂಡಿದ್ದೇನೆ. 
ಇಂತಿ,
ನಿಮ್ಮ ವಿಶ್ವಾಸಿ
ಎಚ್.ಎಸ್. ಅವಿನಾಶ್No comments:

Post a Comment