Jul 20, 2015

ವ್ಯಾಪಕ ವ್ಯಾಪಂ

vyapam scam
Ashok K R
ಭಾರತದಲ್ಲಿ ಹಗರಣಗಳೇನೂ ಹೊಸದಲ್ಲ. ವರುಷಕ್ಕೊಂದೂ ದೊಡ್ಡ ಹಗರಣಗಳಿಲ್ಲದೇ ಹೋಗುವುದು ಅಪರೂಪ. ಹಾಗೆ ನೋಡಿದರೆ 2014ರಲ್ಲಿ ಹಗರಣಗಳ ಸಂಖೈ ಒಂದಷ್ಟು ಕಡಿಮೆಯಿತ್ತು. 2015 ಅರ್ಧ ಮುಗಿಯುತ್ತಿದ್ದಂತೆಯೇ ಹಗರಣಗಳ ಮೇಲೆ ಹಗರಣಗಳು ಕೇಂದ್ರದಲ್ಲಿ, ರಾಜ್ಯದಲ್ಲಿ ಹೊರಬರುತ್ತಿವೆ. ಹಾಸಿಗೆ ದಿಂಬು ಖರೀದಿ ಹಗರಣ ರಾಜ್ಯದಲ್ಲಿ ಒಂದಷ್ಟು ಸದ್ದು ಮಾಡಿದರೆ, ಹೆಚ್ಚು ಸುದ್ದಿ ಮಾಡುತ್ತಿರುವುದು ಲೋಕಾಯುಕ್ತ ಹಗರಣ. ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್ ರ ಪುತ್ರ ಅಶ್ವಿನ್ ರಾವ್ ಲೋಕಾಯುಕ್ತ ಕಛೇರಿಯಲ್ಲಿ ವಿಪರೀತ ಭ್ರಷ್ಟಾಚಾರ ನಡೆಸಿರುವ ಬಗ್ಗೆ ದೂರುಗಳಿವೆ. ನೈತಿಕತೆಯ ಹೊಣೆ ಹೊತ್ತು ಭಾಸ್ಕರರಾವ್ ರಾಜೀನಾಮೆ ನೀಡಬೇಕಿತ್ತು. ಅದಾಗಿಲ್ಲ. ಪ್ರತಿಭಟನೆ ಜೋರಾಗುತ್ತಿದೆ. ದಿನಕ್ಕೊಂದು ಹೊಸ ವಿಷಯಗಳು ಹೊರಬರುತ್ತಲೇ ಇವೆ. ಭ್ರಷ್ಟನಲ್ಲ ಎಂದು ತೋರ್ಪಡಿಸಿಕೊಳ್ಳುವ ಸಿದ್ಧರಾಮಯ್ಯ ಲೋಕಾಯುಕ್ತದ ವಿಷಯದಲ್ಲಿ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಪರಸ್ಪರ ಸಹಕಾರವಿರುವಂತೆ ತೋರುತ್ತದೆ. ಇನ್ನು ಕೇಂದ್ರದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅನೇಕ ಅಪರಾಧಗಳಲ್ಲಿ ಹೆಸರಿಸಲಾದ ಲಲಿತ್ ಮೋದಿಗೆ ಪಾಸ್ ಪೋರ್ಟ್ ದೊರಕಲು ಸಹಾಯ ಮಾಡಿರುವುದು ಸುದ್ದಿಯಾಯಿತು. ಲಲಿತ್ ಮೋದಿಯವರ ಅನಿಯಮಿತ ಟ್ವೀಟುಗಳ ಪರಿಣಾಮದಿಂದ ಸುಷ್ಮಾ ಸ್ವರಾಜರಿಂದ ಸಹಾಯ ಮಾಡಿದ ಆರೋಪ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇಯವರ ಕೊರಳಿಗೂ ಸುತ್ತಿಕೊಂಡಿತು. ಈ ಈರ್ವರು ಮಹಿಳಾ ರಾಜಕಾರಣಿಗಳ ಸಂಬಂಧಿಕರು ಲಲಿತ್ ಮೋದಿಯ ಜೊತೆಗೆ ವ್ಯಾಪಾರ ಸಂಬಂಧ ಹೊಂದಿರುವುದೆಲ್ಲ ಬಹಿರಂಗವಾಯಿತು. ವಿಪರೀತ ಮಾತನಾಡುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಹಗರಣದ ಬಗ್ಗೆ ಸಂಪೂರ್ಣ ಮೌನಕ್ಕೆ ಶರಣಾದರು. ಜಾಣ ಮೌನವಿದು. ಇಂಥ ಹಗರಣಗಳ ಬಗ್ಗೆ ಪ್ರತಿಕ್ರಿಯೆ ನೀಡಿದಷ್ಟೂ ಚರ್ಚೆ ಹೆಚ್ಚಾಗಿ ಜನರ ಮನಸ್ಸಲ್ಲಿ ಹಗರಣಗಳು ಉಳಿದು ಬಿಡುತ್ತವೆ; ನಿರ್ಲಕ್ಷ್ಯ ಮಾಡಿದರೆ ಕೆಲವು ದಿನಗಳ ನಂತರ ಮಾಧ್ಯಮಗಳು ಮತ್ತೊಂದು ಚರ್ಚೆಗೆ ತೊಡಗಿಕೊಳ್ಳುತ್ತಾರೆ, ಈ ಹಗರಣ ಮರೆಯಾಗಿ ಹೋಗುತ್ತದೆ ಎಂಬ ಕಾರಣದಿಂದ ಪ್ರಧಾನಿಗಳು ಮೌನ ವಹಿಸಿದ್ದಾರೆ. ಒಂದು ರೀತಿಯಲ್ಲಿ ಇದು ಚಾಣಾಕ್ಷತನವೇ. ಆದರೆ ಹಗರಣಗಳ ಬಗ್ಗೆ ಮಾತನಾಡದೆ ಮೌನವಾಗಿ ಉಳಿದು ಹೋಗಿದ್ದಕ್ಕೆ ಕಳೆದ ಯು.ಪಿ.ಎ ಸರಕಾರ ತೆತ್ತ ಬೆಲೆಯೆಷ್ಟು ಎಂಬುದರರಿವು ಪ್ರಧಾನಿಗಳಿಗಿದ್ದರೆ ಸಾಕು! ಈ ಎಲ್ಲಾ ಹಗರಣಗಳಿಗಿಂತ ದೇಶವನ್ನು ಬೆಚ್ಚಿ ಬೀಳಿಸಿದ್ದು ಮಧ್ಯ ಪ್ರದೇಶದ ವ್ಯಾಪಂ ಹಗರಣ. ಹಗರಣದ ವ್ಯಾಪ್ತಿಯಿಂದ ಇದು ಬೆಚ್ಚಿ ಬೀಳಿಸಲಿಲ್ಲ. ಇದಕ್ಕಿಂತ ದೊಡ್ಡ ಪ್ರಮಾಣದ ಹಗರಣಗಳನ್ನು ದೇಶ ಕಂಡಿದೆ. ಆದರೆ ಹಗರಣಕ್ಕೆ ಸಂಬಂಧಪಟ್ಟಂತಹ ವ್ಯಕ್ತಿಗಳು ಒಬ್ಬರಾದ ನಂತರ ಒಬ್ಬರು ಅಸಹಜ ರೀತಿಯಿಂದ, ಅನುಮಾನಾಸ್ಪದ ರೀತಿಯಲ್ಲಿ ಸಾಯುತ್ತಿರುವುದು ಆಘಾತ ಮೂಡಿಸಿದೆ. ವ್ಯಾಪಂ ಹಗರಣಕ್ಕೆ ಸಂಬಂಧಪಟ್ಟ, ಅದರ ತನಿಖೆ ಮಾಡಿದ, ಅದರಲ್ಲಿ ಸಾಕ್ಷಿಯಾಗಿದ್ದ, ಅದನ್ನು ವರದಿ ಮಾಡಲು ಹೋದ ಪತ್ರಕರ್ತ- ಹೀಗೆ ಸಾಯುತ್ತಿರುವವರ ಸಂಖೈ ಹೆಚ್ಚಾಗುತ್ತಲೇ ಇದೆ.

ಏನಿದು ವ್ಯಾಪಂ ಹಗರಣ?

akshay singh vyapam
ಪತ್ರಕರ್ತ ಅಕ್ಷಯ್ ಸಿಂಗ್
ಆತನ ಹೆಸರು ಅಕ್ಷಯ್ ಸಿಂಗ್. ಆಜ್ ತಕ್ ವಾಹಿನಿಯ ವರದಿಗಾರ. ಸರಿಸುಮಾರು ಐದಾರು ವರುಷಗಳಿಂದ ತನಿಖೆಯಲ್ಲಿರುವ ವ್ಯಾಪಂ ಹಗರಣದ ಸತ್ಯಾಸತ್ಯತೆಯ ಬೆನ್ನು ಬಿದ್ದವನು. ಜನವರಿ 2012ರಲ್ಲಿ ನಮ್ರತಾ ದಾಮೋರ್ ಎಂಬ ಪ್ರಥಮ ವರುಷದ ವೈದ್ಯಕೀಯ ವಿದ್ಯಾರ್ಥಿನಿ ರೈಲಿನಡಿ ಬಿದ್ದು ಸತ್ತು ಹೋಗಿರುತ್ತಾಳೆ. ಮರಣೋತ್ತರ ವರದಿಯಲ್ಲಿ ರೈಲಿನಡಿ ನಜ್ಜುಗುಜ್ಜಾಗುವುದಕ್ಕೆ ಮುಂಚೆ ನಮ್ರತಾಳನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎಂದು ನಮೂದಿಸಲಾಗುತ್ತದೆ. ಪೋಲೀಸರು ಅಂತಹ ಸಾಧ್ಯತೆಗಳನ್ನು ತಳ್ಳಿಹಾಕಿ, ಇಲ್ಲ ಇದು ಆತ್ಮಹತ್ಯಾ ಪ್ರಕರಣ, ನಮ್ರತಾ ರೈಲಿಗೆ ಸಿಲುಕಿ ಸತ್ತಿದ್ದಾಳೆ ಎಂದು ಶರಾ ಬರೆಯುತ್ತಾರೆ. ಮೂರು ವರುಷದ ನಂತರ ನಮ್ರತಾಳ ತಂದೆ ಮೆಹ್ತಾಬ್ ಸಿಂಗ್ ರನ್ನು ಸಂದರ್ಶಿಸಲು ಅಕ್ಷಯ್ ಸಿಂಗ್ ಅವರ ಮನೆಗೆ ಹೋಗುತ್ತಾರೆ. ಮೂವತ್ತೆಂಟು ವರುಷದ ಅಕ್ಷಯ್ ಮೆಹ್ತಾಬ್ ಸಿಂಗರ ಮನೆಯಲ್ಲೇ ಕೆಮ್ಮುತ್ತಾ ಬಾಯಲ್ಲಿ ನೊರೆ ಸೂಸುತ್ತಾ ತೀವ್ರವಾಗಿ ಅಸ್ವಸ್ಥ್ಯನಾಗುತ್ತಾನೆ. ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪುತ್ತಾನೆ. ನಮ್ರತಾ ದಾಮೋರ್ ವ್ಯಾಪಂ ಹಗರಣದಿಂದ ಲಾಭ ಮಾಡಿಕೊಂಡಿದ್ದಾಕೆ. ಅಸಹಜ ಸಾವನ್ನಪ್ಪುತ್ತಾಳೆ. ಅದರ ಬಗ್ಗೆ ತನಿಖಾ ವರದಿ ಮಾಡಲೊರಟ ಅಕ್ಷಯ್ ಸಿಂಗ್ ಅಸಹಜ ಸಾವನ್ನಪ್ಪುತ್ತಾನೆ. ಅಕ್ಷಯ್ ಸಿಂಗ್ ನ ಸಾವು ವೈದ್ಯಕೀಯ ಪ್ರಾಥಮಿಕ ವರದಿಗಳ ಪ್ರಕಾರ ಅದು ಹೃದಯ ಸಂಬಂಧಿ ಖಾಯಿಲೆಯಿಂದ ಆದ ಸಾವು. ದೇಹದ ಅಂಗಾಂಗಗಳ ಮಾದರಿಯನ್ನು ಉನ್ನತ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ನಿರೀಕ್ಷಿಸಲಾಗುತ್ತಿದೆ. ಅಕ್ಷಯ್ ಸಿಂಗ್ ನ ಸಾವು ಈ ಹಗರಣವನ್ನು ಮತ್ತೆ ಚರ್ಚೆಯ ಮುನ್ನೆಲೆಗೆ ತಂದಿತು. ಸಹೋದ್ಯೋಗಿಯೊಬ್ಬನ ಸಾವು ಮಾಧ್ಯಮಗಳು ಈ ವಿಷಯವನ್ನು ಮತ್ತೆ ಚರ್ಚೆಗೆ ತೆಗೆದುಕೊಳ್ಳುವಂತೆ ಮಾಡಿತು. ಮಾಧ್ಯಮಗಳ ವರದಿಗಳ ಪ್ರಕಾರ ನಲವತ್ತಕ್ಕೂ ಹೆಚ್ಚು ಜನರು ಈ ಹಗರಣದ ಕಾರಣದಿಂದ ಅಸಹಜ ಸಾವನ್ನಪ್ಪಿದ್ದಾರೆ. ಒಂದಷ್ಟು ಜನರು ಕುಡಿತದ ಕಾರಣದಿಂದ, ಕ್ಯಾನ್ಸರಿನ ಕಾರಣದಿಂದ ಮರಣವನ್ನಪ್ಪಿದ್ದಾರೆ ಎಂಬುದು ಸತ್ಯವಾದರೂ ಹಗರಣಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಂಬಂಧಪಟ್ಟ ಯುವಕ – ಯುವತಿಯರು ಅಸಹಜ ರೀತಿಯಲ್ಲಿ ಸಾಯುತ್ತಿರುವುದು ವ್ಯವಸ್ಥೆಯ ಬಗ್ಗೆ ಭೀತಿ ಹುಟ್ಟಿಸುತ್ತದೆ. ಹಗರಣದಲ್ಲಿ ಭಾಗಿಯಾಗಿರುವ ಆರೋಪಕ್ಕೆ ಒಳಗಾಗಿರುವ ಮಧ್ಯಪ್ರದೇಶದ ರಾಜ್ಯಪಾಲರಾದ ರಾಮ್ ನರೇಶ್ ಯಾದವರ ಮಗ ಶೈಲೇಶ್ ಯಾದವ್ ಕೂಡ ಅಸಹಜವಾಗಿ, ಇಂತದ್ದೇ ನಿರ್ದಿಷ್ಟ ಕಾರಣದಿಂದ ಸತ್ತರು ಎಂದು ಅರಿಯಲಾಗದ ರೀತಿಯಿಂದ ಸಾವನ್ನಪ್ಪಿರುವುದು ಹಗರಣದ ವ್ಯಾಪ್ತಿಯ ಸಂಕೇತ.

MadhyaPradesh Professional Examination Boardನ ಹಿಂದಿ ರೂಪ ವ್ಯಾಪಂ, ಮಧ್ಯಪ್ರದೇಶ ವ್ಯವಸಾಯಿಕ್ ಪರೀಕ್ಷಾ ಮಂಡಳಿ. ವಿವಿಧ ಸರಕಾರಿ ಇಲಾಖೆಗಳ ನೇಮಕಾತಿಯ ಪರೀಕ್ಷೆಗಳನ್ನು ಈ ವ್ಯಾಪಂ ನಡೆಸುತ್ತದೆ. ಜೊತೆ ಜೊತೆಗೆ ವೈದ್ಯಕೀಯ ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆ ಕೂಡ ವ್ಯಾಪಂ ಮುಂದಾಳತ್ವದಲ್ಲಿ ನಡೆಯುತ್ತದೆ. ಒಂದು ರೀತಿಯಲ್ಲಿ ನಮ್ಮ ಕರ್ನಾಟಕದ ಕೆ.ಪಿ.ಎಸ್.ಸಿ ಮತ್ತು ಸಿಇಟಿ ಕೇಂದ್ರಗಳೆರಡನ್ನೂ ಸೇರಿಸಿದರೆ ಮಧ್ಯಪ್ರದೇಶದ ವ್ಯಾಪಂ ಸೃಷ್ಟಿಯಾಗುತ್ತದೆ. ಕೆ.ಪಿ.ಎಸ್.ಸಿ ಮತ್ತು ಸಿಇಟಿಗಳೆರಡರ ಹಗರಣಗಳನ್ನು ಸೇರಿಸಿದರೆ ಎಷ್ಟಾಗುತ್ತದೋ ಅಷ್ಟನ್ನೂ ವ್ಯಾಪಂ ಮಾಡುತ್ತಿದೆ, ವ್ಯಾಪಕವಾಗಿ ಮಾಡುತ್ತಿದೆ. ಸಬ್ ಇನ್ಸ್ ಪೆಕ್ಟರ್, ಪೋಲೀಸ್ ಪೇದೆ, ಫುಡ್ ಇನ್ಸ್ ಪೆಕ್ಟರ್ ಹುದ್ದೆಗಳ ಪರೀಕ್ಷೆಗಳಲ್ಲೂ ಅಕ್ರಮ ನಡೆದಿದೆ. ಎಲ್ಲಕ್ಕಿಂತ ಹೆಚ್ಚು ಹಗರಣಗಳಾಗಿರುವುದು ವೈದ್ಯಕೀಯ ಪದವಿ ಮತ್ತು ಸ್ನಾತಕ್ಕೋತ್ತರ ವೈದ್ಯ ಪದವಿಗೆ ಸಂಬಂಧಪಟ್ಟ ಪರೀಕ್ಷೆಗಳಲ್ಲಿ. 

ಹಾಗೆ ನೋಡಿದರೆ ವೈದ್ಯ ಪರೀಕ್ಷೆಗಳಲ್ಲಿ ನಡೆಯುವ ಹಗರಣಗಳು ಹೊಸದೇನಲ್ಲ. ಕರ್ನಾಟಕದ್ದೇ ಉದಾಹರಣೆಗಳನ್ನು ನೋಡುವುದಾದರೆ ಇಂತಹ ಪರೀಕ್ಷೆಗಳಲ್ಲಿ, ಅದರಲ್ಲೂ ಸ್ನಾತಕ್ಕೋತ್ತರ ವೈದ್ಯ ಪರೀಕ್ಷೆಗಳಲ್ಲಿ ಮೋಸ ನಡೆಯುತ್ತಲೇ ಇದೆ. ಮೊದಮೊದಲು ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುವ ಹಳೆಯ ವಿಧಾನ ಚಾಲ್ತಿಯಲ್ಲಿತ್ತು. ಅದನ್ನು ತಡೆದ ನಂತರ ನಕಲಿ ಅಭ್ಯರ್ಥಿಯನ್ನು ಕರೆತಂದು ಪರೀಕ್ಷೆ ಬರೆಸುವ ಪರಿಪಾಟವಿತ್ತು. ಪಕ್ಕದಲ್ಲಿ ಜಾಣ ವಿದ್ಯಾರ್ಥಿಯನ್ನು ಕೂರಿಸಿಕೊಳ್ಳಲು ದುಡ್ಡು ಚೆಲ್ಲಲಾಗುತ್ತಿತ್ತು. ಈ ಪರೀಕ್ಷೆಗಳಲ್ಲಿ ಎಲ್ಲರಿಗೂ ಒಂದೇ ಪ್ರಶ್ನೆಗಳಿದ್ದರು ಪ್ರಶ್ನೆಗಳ ಕ್ರಮಸಂಖೈಯಲ್ಲಿ ವ್ಯತ್ಯಾಸವಿರುತ್ತದೆ. ಒಬ್ಬಾತನಿಗೆ ಮೊದಲ ಕ್ರಮಸಂಖೈಯಲ್ಲಿರುವ ಪ್ರಶ್ನೆ ಅವನ ಪಕ್ಕದಲ್ಲಿ ಕುಳಿತವನಿಗೆ ಇಪ್ಪತ್ತೊಂದನೇ ಕ್ರಮಸಂಖೈಯಲ್ಲಿರುತ್ತದೆ, ಅವನ ಹಿಂದೆ ಕುಳಿತವನಿಗೆ ನಲವತ್ತೊಂದನೇ ಕ್ರಮಸಂಖೈಯಲ್ಲಿರುತ್ತದೆ. ನಂತರದ ಪ್ರಶ್ನೆಗಳು ಅದೇ ಆರ್ಡರ್ರಿನಲ್ಲಿರುತ್ತವೆ. ಈ ಸಂಗತಿ ತಿಳಿದುಕೊಂಡ ನಂತರ ನಕಲು ಮಾಡುವುದು ಸುಲಭವಾಗಿಬಿಡುತ್ತದೆ. ಇದಕ್ಕಿಂತಲೂ ಸುಲಭ ಮೋಸದ ಮಾರ್ಗವೆಂದರೆ ಪರೀಕ್ಷೆಯಲ್ಲಿ ಒ.ಎಮ್.ಆರ್ ಉತ್ತರ ಪತ್ರಿಕೆಯ ಮೇಲೆ ಏನನ್ನೂ ಬರೆಯದೆ ಖಾಲಿ ಹಾಳೆಯನ್ನು ವಾಪಸ್ಸು ಕೊಟ್ಟು ನಂತರದಲ್ಲಿ ಸರಿ ಉತ್ತರಗಳನ್ನು ತುಂಬಿಸುವುದು. ಇಷ್ಟೆಲ್ಲ ಕಷ್ಟಪಟ್ಟು ಏತಕ್ಕೆ ನಕಲು ಮಾಡುತ್ತಾರೆಂದರೆ ಮ್ಯಾನೇಜ್ ಮೆಂಟ್ ಪಿ.ಜಿ ಸೀಟುಗಳು ಕೋಟಿ ಕೋಟಿ ಲೆಕ್ಕಕ್ಕೆ ಹರಾಜಾಗುತ್ತವೆ. ನಕಲು ಮಾಡಲು ಲಕ್ಷಗಳ ಲೆಕ್ಕದಲ್ಲಿ ಹಣ ಖರ್ಚು ಮಾಡಿದರೆ ಸಾಕು. ಇನ್ನು ಎಂ.ಬಿ.ಬಿ.ಎಸ್ ಸೀಟುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕಾಮೆಡ್ ಕೆ ಕೌನ್ಸಲಿಂಗ್ನಲ್ಲಿ ಸೀಟುಗಳನ್ನು ಬ್ಲಾಕ್ ಮಾಡಿ ಅದನ್ನು ಹೆಚ್ಚು ದುಡ್ಡಿಗೆ ಮಾರಿಕೊಳ್ಳಲಾಗುತ್ತದೆ. ಇಂತಹ ನಕಲು ಪ್ರಕರಣಗಳು ಕರ್ನಾಟಕದಲ್ಲಿ ಅಲ್ಲೊಂದು ಇಲ್ಲೊಂದರಂತೆ ನಡೆದು, ಅಪರೂಪಕ್ಕೆ ಪತ್ತೆಯಾದರೆ ಮಧ್ಯಪ್ರದೇಶದಲ್ಲಿ ಇದು ಹೆಚ್ಚಿನ ಸಂಖೈಯಲ್ಲಿ ನಡೆಯಲಾರಂಭಿಸಿತ್ತು. 1995ರಿಂದಲೇ ಮಧ್ಯಪ್ರದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆಯುತ್ತಿದ್ದ ಬಗ್ಗೆ ವರದಿಗಳಾಗುತ್ತಿದ್ದವಾದರೂ ಮೊದಲ ಎಫ್.ಐ.ಆರ್ ದಾಖಲಾಗಿದ್ದು 2000 ಇಸವಿಯಲ್ಲಿ. ಕರ್ನಾಟಕದಲ್ಲಾಗುವಂತೆ ಅಲ್ಲೊಂದು ಇಲ್ಲೊಂದು ಎಂದು ವರದಿಯಾಗುತ್ತಿದ್ದ ಅಕ್ರಮಗಳವು. ಇಂದೋರಿನ ವೈದ್ಯ ಡಾ. ಆನಂದ್ ರಾಯ್ ವ್ಯಾಪಂ ಮೂಲಕ ಅಕ್ರಮವಾಗಿ ವೈದ್ಯಕೀಯಕ್ಕೆ ಪ್ರವೇಶ ಪಡೆದವರ ಬಗ್ಗೆ ವಿಸ್ತೃತವಾದ ತನಿಖೆಯಾಗಬೇಕು ಎಂದು ಕೋರ್ಟಿನ ಮೊರೆ ಹೋಗುತ್ತಾರೆ. 2009ರಲ್ಲಿ ಆಗಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತನಿಖೆಗೆ ಆದೇಶಿಸುತ್ತಾರೆ.

anand rai vyapam
ಡಾ. ಆನಂದ್ ರಾಯ್
ತನಿಖೆ ಪ್ರಾರಂಭವಾದ ನಂತರ ಒಬ್ಬರ ನಂತರ ಒಬ್ಬರು ಈ ಹಗರಣದಲ್ಲಿ ಸಿಕ್ಕಿಹಾಕಿಕೊಳ್ಳತೊಡಗುತ್ತಾರೆ. ವ್ಯಾಪಂನ ಅಧಿಕಾರಿಗಳು, ರಾಜಕಾರಣಿಗಳು, ವಿದ್ಯಾರ್ಥಿಗಳು, ಪೋಷಕರು, ಮತ್ತಿವರ ಮಧ್ಯೆ ಕಾರ್ಯನಿರ್ವಹಿಸುವ ದಲ್ಲಾಳಿಗಳ ಹೆಸರುಗಳೆಲ್ಲ ಹಗರಣದ ವ್ಯಾಪ್ತಿಗೆ ಬರತೊಡಗುತ್ತಾರೆ. ವ್ಯಾಪಂ ಹಗರಣಕ್ಕೆ ಸಂಬಂಧಪಟ್ಟಂತೆ ನಡೆದ ತನಿಖೆಯಲ್ಲಿ ಮೇಲ್ನೋಟಕ್ಕೆ ಲೋಪಗಳಿವೆ ಎಂದೆನ್ನಿಸುವುದಿಲ್ಲ, ಕಾರಣ ಆರು ವರುಷಗಳ ಅವಧಿಯಲ್ಲಿ ಎರಡು ಸಾವಿರಕ್ಕೂ ಅಧಿಕ ಮಂದಿಯನ್ನು ತನಿಖಾ ತಂಡಗಳು ಹಗರಣದಲ್ಲಿ ಭಾಗಿಯಾದ ಕಾರಣಕ್ಕಾಗಿ ಬಂಧಿಸಿವೆ! ಬಂಧಿತರಲ್ಲಿ ಬಿಜೆಪಿಯ ಶಿಕ್ಷಣ ಮಂತ್ರಿಯಾಗಿದ್ದ ಲಕ್ಷ್ಮಿಕಾಂತ್ ಶರ್ಮಾ ಕೂಡ ಇದ್ದರು ಎಂಬ ಸಂಗತಿ ಮಧ್ಯಪ್ರದೇಶದ ಬಿಜೆಪಿ ಸರಕಾರ ಇದ್ದುದರಲ್ಲಿ ನಿಷ್ಪಕ್ಷಪಾತವಾಗಿಯೇ ತನಿಖೆಯನ್ನು ನಡೆಸುತ್ತಿದೆ ಎಂದೆನ್ನಿಸುವಂತೆ ಮಾಡಿತ್ತು. ಆದರೂ ಸರಕಾರಕ್ಕೆ ವ್ಯಾಪಂ ಹಗರಣ ಮಸಿ ಬಳಿದಿದ್ಯಾಕೆ?

ಮೇಲ್ನೋಟಕ್ಕೆ ಸರ್ಕಾರದ ಕ್ರಮಗಳು ಸರಿದಿಕ್ಕಿನಲ್ಲಿವೆ ಎನ್ನಿಸಿದರೂ ಹಗರಣ ಕೊನೆಗೆ ಮುಖ್ಯಮಂತ್ರಿ ಶಿವರಾಜ್ ಚೌಹಾಣರನ್ನು ಕಾಡಿದ್ದ್ಯಾಕೆ ಎಂದು ನೋಡಿದಾಗ ಸಾಲು ಸಾಲು ಹೆಣಗಳು ಕಾಣಿಸುತ್ತವೆ. ಒಂದಷ್ಟು ಸ್ವಾಭಾವಿಕ ಮೃತ್ಯುಗಳು, ಕುಡಿತದ ದುಷ್ಪರಿಣಾಮದಿಂದಾದ ಸಾವುಗಳನ್ನು ಹೊರತುಪಡಿಸಿದರೂ ವ್ಯಾಪಂ ಹಗರಣಕ್ಕೆ ಸಂಬಂಧಿಸಿದವರ ಅನಿರೀಕ್ಷಿತ, ಅಸ್ವಾಭಾವಿಕ ಮರಣ ಆಘಾತ ಮೂಡಿಸುತ್ತದೆ. ಮೂವತ್ತು ವರುಷವೂ ದಾಟದ ಅನೇಕರು ಹೃದಯಾಘಾತದಿಂದ ಸಾವನ್ನಪ್ಪುವುದು ಸಹಜವೆನ್ನಿಸುವುದಿಲ್ಲ. ಇದೇ ಜುಲೈ ಆರರಂದು ವ್ಯಾಪಂ ಹಗರಣದ ಮೂಲಕ ಕೆಲಸ ಗಿಟ್ಟಿಸಿಕೊಂಡ ಸಬ್ ಇನ್ಸ್ ಪೆಕ್ಟರ್ ಅನಾಮಿಕ ಕುಶ್ವಾಹ ಮೃತದೇಹ ಕೆರೆಯೊಂದರ ಬಳಿ ಪತ್ತೆಯಾಗಿತ್ತು. ವಿಚಾರಣೆಗೊಳಪಟ್ಟಿದ್ದ ಪೇದೆ ರಮಾಕಾಂತ್ ಪಾಂಡೆ ಅದೇ ಆರನೇ ತಾರೀಖಿನಂದು ಡೆತ್ ನೋಟುಗಳನ್ನೇನೂ ಬರೆಯದೆ ನೇಣು ಬಿಗಿದುಕೊಳ್ಳುತ್ತಾನೆ. ಒಂದು ದಿನಕ್ಕೆ ಮುಂಚೆ ಜಬಲ್ಪುರದ ನೇತಾಜಿ ಸುಭಾಷ್ ಚಂದ್ರ ಬೋಸ್ ಮೆಡಿಕಲ್ ಕಾಲೇಜಿನ ಡೀನ್ ಅರುಣ್ ಶರ್ಮ ದೆಹಲಿಯ ಹೋಟೆಲೊಂದರಲ್ಲಿ ಹೆಣವಾಗಿ ಸಿಗುತ್ತಾರೆ, ತನಿಖೆಗೆ ಸಹಕರಿಸುತ್ತಿದ್ದ ವ್ಯಕ್ತಿ ಅರುಣ್ ಶರ್ಮ. ಅದೇ ಕಾಲೇಜಿನಲ್ಲಿ ಅರುಣ್ ಶರ್ಮರವರಿಗೆ ಮುಂಚೆ ಡೀನ್ ಆಗಿದ್ದ ಡಿ.ಕೆ.ಸಾಕಲೆ ಬೆಂಕಿ ಹಚ್ಚಿಕೊಂಡು ಸತ್ತರು. ಅದು ಆತ್ಮಹತ್ಯೆಯೋ ಹತ್ಯೆಯೋ ಎಂಬುದು ಇನ್ನೂ ನಿಕ್ಕಿಯಾಗಿಲ್ಲ. ಹೀಗೆ ಒಂದಾದ ನಂತರ ಒಂದು ‘ಹತ್ಯೆ’ಗಳೆಂದು ಅನುಮಾನಿಸಬಹುದಾದ ಸಾವುಗಳು ವ್ಯಾಪಂ ಹಗರಣದ ವ್ಯಾಪ್ತಿಯಲ್ಲಿ ನಡೆಯುತ್ತಿವೆ. ಇವೆಲ್ಲದರ ಮಧ್ಯೆ ಹಗರಣ ಹೊರಬರಲು ಕಾರಣರಾದ ಡಾ. ಆನಂದ್ ರಾಯ್ ತಮಗೆ ಜೀವ ಬೆದರಿಕೆ ಇದೆ, ರಕ್ಷಣೆ ಬೇಕು ಎಂದು ಸರಕಾರದ ಮೊರೆ ಹೋದರೆ ಐವತ್ತು ಸಾವಿರ ಪ್ರತೀ ತಿಂಗಳು ಕಟ್ಟಿದರೆ ಪೋಲೀಸ್ ರಕ್ಷಣೆ ಕೊಡುವುದಾಗಿ ಹೇಳುತ್ತದೆ. ಆಗ ಡಾ.ಆನಂದ್ ರಾಯರ ಮಾಸಿಕ ಆದಾಯ ಮೂವತ್ತೆಂಟು ಸಾವಿರ! ಕೊನೆಗೆ ಕೋರ್ಟಿನ ನಿರ್ದೇಶನದ ಮೇರೆಗೆ ಡಾ.ಆನಂದ್ ರಾಯ್ ಗೆ ಪೋಲೀಸ್ ಸೆಕ್ಯುರಿಟಿ ನೀಡಲಾಗುತ್ತದೆ. ಸ್ವತಃ ಕಣ್ಣಿನ ತಜ್ಞರಾದ ಆನಂದ್ ರಾಯ್ ತಮಗೆ ರಕ್ಷಣೆ ಕೊಡಲು ಬಂದಿದ್ದ ಪೋಲೀಸಪ್ಪನ ಕಣ್ಣು ಪರೀಕ್ಷಿಸಿದಾಗ ಅಚ್ಚರಿಯಾಗುತ್ತದೆ. ಕೊಲೆ ಬೆದರಿಕೆ ಇರುವ ವ್ಯಕ್ತಿಯ ರಕ್ಷಣೆಗೆಂದು ನೇಮಕಗೊಂಡಿದ್ದ ಪೋಲೀಸಪ್ಪನಿಗೆ ಸರಿಯಾಗಿ ಕಣ್ಣೇ ಕಾಣಿಸುವುದಿಲ್ಲ! 

ಸರಕಾರ ಹತ್ಯೆಗಳ ವಿಚಾರದಲ್ಲಿ ತೋರಿದ ನಿರ್ಲಕ್ಷ್ಯ, ಸೀಟಿಯೂದುಗರ ಬಗ್ಗೆ ತೋರಿದ ಅನಾದಾರ ಅವರ ನಡೆಯ ಬಗ್ಗೆ ಸಂಶಯ ಮೂಡಿಸುತ್ತದೆ. ಮಧ್ಯಪ್ರದೇಶದ ಪೋಲೀಸರಲ್ಲನೇಕರು ಕೂಡ ವ್ಯಾಪಂ ಮೂಲಕವೇ ನೇಮಕಗೊಂಡಿರುವ ಕಾರಣ ಅವರೇ ತನಿಖೆ ನಡೆಸಿದರೆ ಉಪಯೋಗವಾದೀತೆ? ಕಿಂಗ್ ಪಿನ್ನುಗಳನ್ನು ಬಂಧಿಸಿದ್ದೇವೆ ಎಂದವರು ಹೇಳುತ್ತಿದ್ದರೂ ನಡೆಯುತ್ತಿರುವ ಸಾವಿನ ಸರಣಿಯನ್ನು ನೋಡಿದರೆ ಕಿಂಗ್ ಪಿನ್ನುಗಳನ್ನು ನಿಯಂತ್ರಿಸುತ್ತಿದ್ದವರು ಇನ್ನೂ ಉನ್ನತ ಸ್ಥಾನದಲ್ಲಿರುವ ಅನುಮಾನ ಮೂಡಿಸುತ್ತದೆ. ಮಧ್ಯಪ್ರದೇಶದ ಹೈಕೋರ್ಟ್ ಸಿಬಿಐ ನಿರ್ದೇಶನಕ್ಕೆ ಆದೇಶಿಸಿಲ್ಲ ಎಂಬ ನೆಪವನ್ನೇ ಇಷ್ಟು ದಿವಸ ಸರಕಾರ ಬಳಸಿಕೊಳ್ಳುತ್ತಿತ್ತು. ಈಗ ಸುಪ್ರೀಂ ಕೋರ್ಟ್ ಆದೇಶದ ಮೂಲಕ ಸಿಬಿಐ ತನಿಖೆ ಪ್ರಾರಂಭವಾಗಿದೆ. ಇನ್ನಾದರೂ ನಿಜವಾದ ಸತ್ಯಗಳು ಹೊರಬರಲಿ ಎಂದು ಆಶಿಸೋಣ.
ಆಧಾರ: ವಿಕಿಪೀಡಿಯಾ, ಟೈಮ್ಸ್ ಆಫ್ ಇಂಡಿಯಾ, ದಿ ಹಿಂದೂ.

No comments:

Post a Comment