Apr 15, 2015

ಸೈದ್ಧಾಂತಿಕ ‘ಯಾನ’ದಲ್ಲಿ ಕಳೆದುಹೋಗುವ ಭೈರಪ್ಪ.

yaana
Dr Ashok K R
ಯಾನ ಕಾದಂಬರಿಯ ಹಿನ್ನುಡಿಯಲ್ಲಿ ಭೈರಪ್ಪನವರು ‘ಇಂಗ್ಲೀಷಿನಲ್ಲಿ ವಿಜ್ಞಾನಕಥೆ ಎಂಬ ಒಂದು ಹೊಸ ಜಾತಿಯೇ ಬೆಳೆದು ಸಮೃದ್ಧವಾಗಿದೆ. ಇದರ ಕೆಲವು ಉಪಯೋಗಗಳನ್ನು ಕೆಲವು ಮಾಂತ್ರಿಕ ವಾಸ್ತವವಾದೀ ಲೇಖಕರು ಬಳಸಿಕೊಂಡಿದ್ದಾರೆ. ‘ಯಾನ’ವು ಈ ಯಾವ ಜಾತಿಗೂ ಸೇರಿದ್ದಲ್ಲ. ನನ್ನ ಇತರ ಕಾದಂಬರಿಗಳಂತೆ ಮನುಷ್ಯನ ಅನುಭವವನ್ನು ಶೋಧಿಸುತ್ತದೆ. ಮುಂದಿನ ಶತಮಾನಗಳಲ್ಲಿ ಘಟಿಸುವ ಮಾನವ ಅನುಭವಗಳನ್ನು ಹುಡುಕುತ್ತದೆ ಅಷ್ಟೇ’ ಎಂಬ ಮಾತನ್ನಾಡುತ್ತಾರೆ. ಶತಮಾನಗಳು ಕಳೆದ ನಂತರದ ಮನುಷ್ಯ ಯಾನದಲ್ಲೂ ಪುರುಷ ಅಹಂಕಾರವನ್ನು ಸಮರ್ಥಿಸುವುದೇ ಮುಖ್ಯವಾಗಿಬಿಟ್ಟ ಕಾರಣ ಕಥನಕಲೆ ಹಿಂದಾಗಿಬಿಟ್ಟಿದೆ. ಇಡೀ ಯಾನ ಕಾದಂಬರಿಯ ಗುರಿ ಮಹಿಳೆ ಪುರುಷನಿಗಿಂತ ಎಲ್ಲ ವಿಧದಲ್ಲೂ ಕೀಳು ಎಂಬ ಸಿದ್ಧಾಂತವನ್ನು ನಿರೂಪಿಸುವುದು. ಹೋಗಲಿ ಆ ನಿರೂಪಣೆಯಲ್ಲಿ ಭೈರಪ್ಪನವರ ಹಿಂದಿನ ಕಾದಂಬರಿಗಳ ಚಾಕಚಕ್ಯತೆ ಇದೆಯೇ ಎಂದರೆ ಅಲ್ಲೂ ನಿರಾಸೆ ಮೂಡುತ್ತದೆ. 

ಭೂಮಿಯಿಂದ ದೂರದೂರಕೆ ಭಾರತದಿಂದ ಒಂದು ಆಕಾಶನೌಕೆ ಪಯಣ ಬೆಳೆಸುತ್ತದೆ, ಲಕ್ಷಾಂತರ ಮಿಲಿಯನ್ ವರುಷದ ಪಯಣವದು. ಪಯಣದಲ್ಲಿ ಒಂದು ಗಂಡು ಸುದರ್ಶನ್, ಒಂದು ಹೆಣ್ಣು ಉತ್ತರೆ. ಲೈಂಗಿಕ ಸಂಪರ್ಕದಿಂದ ಒಂದು ಮಗು ಪಡೆಯಬೇಕು. ಶೇಖರಿಸಲ್ಪಟ್ಟ ವೀರ್ಯಾಣುವಿನಿಂದ ಮತ್ತೊಂದು ಲಿಂಗದ ಮಗುವನ್ನು ಕೃತಕ ಗರ್ಭಧಾರಣೆಯ ಮುಖಾಂತರ ಪಡೆಯಬೇಕು. ಹುಟ್ಟಿದ ಹೆಣ್ಣು ಮತ್ತು ಗಂಡು ಮಗು ಆಕಾಶನೌಕೆಯ ಪಾಠವನ್ನೆಲ್ಲ ಕಲಿಯುತ್ತ ದೊಡ್ಡವರಾಗಿ ಮದುವೆಯಾಗಿ ವಂಶವನ್ನು ಮುಂದುವರೆಸಬೇಕು, ಮಿಲಿಯಾಂತರ ವರುಷಗಳ ತನಕ ಇದು ಮುಂದುವರೆಯುತ್ತಲೇ ಇರಬೇಕು. ಆಕಾಶನೌಕೆ ಸಾಯುವವರೆಗೆ. ಇದಿಷ್ಟು ಯಾನದ ವೈಜ್ಞಾನಿಕ ತಿರುಳು. ಹುಟ್ಟಿದ ಮಕ್ಕಳು ವಯಸ್ಕರಾಗುವುದಕ್ಕೆ ಮುಂಚೆಯೇ ಖಾಯಿಲೆ ಬಂದು ಸತ್ತರೆ? ಎಂಬಂತಹ ಅನೇಕ ಪ್ರಶ್ನೆಗಳು ಈ ತಿರುಳಿನ ಕುರುತಾಗಿ ಬರುತ್ತವಾದರೂ ಕಾಲ್ಪನಿಕ ವೈಜ್ಞಾನಿಕ ಕಾದಂಬರಿಯಾದ ಕಾರಣ ಆ ಪ್ರಶ್ನೆಗಳನ್ನೆಲ್ಲ ಮರೆತುಬಿಡಬಹುದು. ಭೈರಪ್ಪನವರ ಕಾದಂಬರಿಗಳೆಂದರೆ ಅತ್ಯದ್ಭುತ ವಿವರಗಳ ಸಂಗ್ರಹ. ಅವರ ನಿರಾಕರಣ ಕಾದಂಬರಿಯಲ್ಲಿನ ಹಿಮಾಲಯದ ವಿವರಗಳನ್ನು ಓದಿ ಹಿಮಾಲಯಕ್ಕೆ ಹೋಗಬೇಕೆಂದು ನಿರ್ಧರಿಸಿದವರು ಬಹಳಷ್ಟು ಜನರಿದ್ದಾರೆ. ಮಂದ್ರ ಕಾದಂಬರಿಯನ್ನು ಓದಿ ವೀಣೆ ಹಿಡಿದು ಸಂಗೀತ ಕಲಿಯಲೊರಟವರಿದ್ದಾರೆ. ಆ ರೀತಿಯ ಅದ್ಭುತ ವಿವರಗಳು ಯಾನದಲ್ಲಿ ಕಾಣಸಿಗುವುದಿಲ್ಲ. ಪ್ರಕೃತಿ ಮತ್ತು ಸಂಗೀತ ನಮ್ಮ ದಿನನಿತ್ಯದ ವ್ಯವಹಾರದಲ್ಲಿ ಒಂದಲ್ಲ ಒಂದು ಕಡೆ ಮನಸ್ಸಿಗೆ ತಟ್ಟುತ್ತಲೇ ಇರುತ್ತದೆ. ಆದರೆ ಆಕಾಶದ ಸಂಗತಿಗಳು ದಿನವಹೀ ಮನಸ್ಸು ತಲುಪುವ ಸಂಗತಿಗಳಲ್ಲ. ಈ ಕಾರಣವೂ ಯಾನದ ವಿವರಗಳು ಸಪ್ಪೆ ಎಂಬ ಭಾವ ಮೂಡಿಸಬಹುದು. 

ಈ ವೈಜ್ಞಾನಿಕ ತಿರುಳಿನ ಹಿಂದೆ ಸುದರ್ಶನ್ ಮತ್ತು ಉತ್ತರೆಯ ಭೂಮಿ ಮೇಲಿನ ಜೀವನ ತೆರೆದುಕೊಳ್ಳುತ್ತಾ ಹೋಗುತ್ತದೆ. ಉತ್ತರೆ ಬುದ್ಧಿವಂತ ಧೈರ್ಯಸ್ಥ ಹೆಣ್ಣುಮಗಳಾಗಿ, ದೇಶದ ಪ್ರಪ್ರಥಮ ಯುದ್ಧ ವಿಮಾನದ ಚಾಲಕಳಾಗಿ ಪರಿಚಯವಾಗುತ್ತಾಳೆ. ಅಂತರಿಕ್ಷ ಕೇಂದ್ರದ ಮೊದಲ ಪ್ರಯೋಗಕ್ಕೆ ಆಹ್ವಾನಿತಳಾಗುತ್ತಾಳೆ. ಅಂತರಿಕ್ಷದಲ್ಲಿ ಗಂಡು ಹೆಣ್ಣಿನ ನಡುವೆ ನಡೆಯುವ ಲೈಂಗಿಕತೆ ದೇಹದಲ್ಲಿ ಮೂಡಿಸುವ ಬದಲಾವಣೆಗಳೇನು ಎಂಬ ಪ್ರಯೋಗವದು. ಮತ್ತೊಬ್ಬ ಪೈಲಟ್ ಯಾದವನೊಡನೆ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕು ಎಂಬ ಮಾತು ಕೇಳಿ ಉತ್ತರೆ ಮೊದಲಿಗೆ ಒಪ್ಪುವುದಿಲ್ಲ. ನಂತರ ಯಾದವನೊಡನೆ ಮಾತನಾಡಿ ದೇವಸ್ಥಾನವೊಂದರಲ್ಲಿ ಮದುವೆಯಾಗಿ ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಾರೆ. ಇಲ್ಲಿಂದಲೇ ‘ಹೆಣ್ಣಿನ ಬುದ್ಧಿ ಮೊಣಕಾಲಿನ ಕೆಳಗೆ’ ಎಂಬ ‘ಸಿದ್ಧಾಂತ’ವನ್ನು ನಿರೂಪಿಸುವುದಕ್ಕೆ ಲೇಖಕರು ಪ್ರಾರಂಭಿಸುತ್ತಾರೆ. ಪ್ರೀತಿಸುವ ಯಾದವನೂ ಕೂಡ ನಿನ್ನ ಸೌಂದರ್ಯದಿಂದ ಇಷ್ಟು ಮೇಲೆ ಬಂದಿದ್ದೀಯ, ನೀನು ಇಷ್ಟಕ್ಕೆಲ್ಲ ಅರ್ಹಳಲ್ಲ ಎಂದು ಪದೇ ಪದೇ ಹೇಳುತ್ತಾನೆ. ಮುಂದಿನ ಹಂತದ ಪ್ರಯೋಗ ಮಿಲಿಯನ್ ವರ್ಷದ ಆಕಾಶನೌಕೆಯ ಪಯಣ. ಕುಟುಂಬದ ಕಾರಣಕ್ಕೆ ಯಾದವ ಬರಲು ಒಪ್ಪುವುದಿಲ್ಲ. ಯಾದವ ಬರುವುದು ಪ್ರಯೋಗದ ದೃಷ್ಟಿಯಿಂದ ಸಂಶೋಧನಾ ಕೇಂದ್ರದವರಿಗೂ ಇಷ್ಟವಿರುವುದಿಲ್ಲ. ಅಲ್ಲಿ ಆಯ್ಕೆಯಾಗಿದ್ದು ಭಯಂಕರ ಬುದ್ಧಿವಂತ, ಧ್ರುವ ಪ್ರದೇಶದ ಆರು ತಿಂಗಳ ರಾತ್ರಿಯಲ್ಲಿ ಒಬ್ಬನೇ ಸಂಶೋಧನೆಗಳನ್ನು ಮಾಡಿದ್ದ ಸುದರ್ಶನ. ಆಕಾಶನೌಕೆಯಲ್ಲಿ ಸುದರ್ಶನ ಮತ್ತು ಉತ್ತರೆ ಗಂಡ ಹೆಂಡತಿಯಾಗಿ ಬಾಳಬೇಕು. ಈ ಅಂತರಿಕ್ಷ ಮದುವೆಯ ಪೂರ್ವದಲ್ಲಿ ಉತ್ತರೆಗೆ ಲೈಂಗಿಕ ಅನುಭವಗಳಿರುವ ಹಾಗೆಯೇ ದೇಶ ವಿದೇಶದಲ್ಲಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಸುದರ್ಶನನಿಗೂ ಎರಡು ಗಾಢ ಲೈಂಗಿಕ ಅನುಭವಗಳಾಗಿರುತ್ತವೆ. ಉತ್ತರೆ ಯಾದವನೊಡನೆ ಕೂಡುವ ಮೊದಲು ದೇವಸ್ಥಾನದಲ್ಲಿ ಮದುವೆಯಾಗುತ್ತಾಳೆ. ಸುದರ್ಶನ ಮದುವೆಯ ಕಟ್ಟುಪಾಡಿರದೆ ಲೀಸಾ ಎಂಬ ಸಹಪಾಠಿ ಮತ್ತು ಇಂಗಾ ಎಂಬ ಜರ್ಮನ್ ಪ್ರವಾಸಿಯ ಜೊತೆಗೆ ಲೈಂಗಿಕತೆಯನ್ನನುಭವಿಸುತ್ತಾನೆ. ಸಂಸ್ಕೃತಿಯೆಂಬುದು ಹೆಣ್ಣಿಗಿರಬೇಕೆ ಹೊರತು ಗಂಡಸಿಗಲ್ಲ ಎಂಬುದನ್ನು ತಿಳಿಸುತ್ತಾರೆ ಭೈರಪ್ಪ! ಕೊನೆಗೆ ಅಧಿಕೃತ ಮದುವೆಗೆ ಮುಂಚೆಯೇ ಲೈಂಗಿಕ ಅನುಭವದಲ್ಲಿ ತೊಡಗಿದ್ದ ಉತ್ತರೆ ‘ಎಂಜಲೆಂದು’ ಬಯ್ಯಿಸಿಕೊಳ್ಳುತ್ತಾಳೆ, ಸುದರ್ಶನನಿಂದ!

ಯಾನದ ಸಮಯದಲ್ಲಿ ಸಂಶೋಧನಾ ಕೇಂದ್ರದವರು ಮಾಡಿದ ಮೋಸದಿಂದ, ಯಾದವ ಬರಲು ಒಪ್ಪದ ಬೇಸರದಿಂದ ಉತ್ತರೆ ಖಿನ್ನತೆಯಲ್ಲಿರುತ್ತಾಳೆ. ಸುದರ್ಶನನೊಡನೆ ಲೈಂಗಿಕ ಸಂಪರ್ಕಕ್ಕೆ ಒಪ್ಪುವುದಿಲ್ಲ, ಕೃತಕ ಗರ್ಭಧಾರಣೆಗೂ ಒಪ್ಪುವುದಿಲ್ಲ. ಈ ಸಂಶೋಧನೆ ವ್ಯರ್ಥವಾದರೆ ಆಗಲಿ ಎಂದು ಸುಮ್ಮನಾಗುತ್ತಾಳೆ. ಸುದರ್ಶನನ ಲೈಂಗಿಕ ಆಸಕ್ತಿಗೆ ಉತ್ತರೆ ಸ್ಪಂದಿಸದಾದಾಗ ಬಲಾತ್ಕರಿಸುವ ಮಟ್ಟಕ್ಕೂ ಹೋಗುತ್ತಾನೆ. ಆ ಬಲಾತ್ಕಾರಕ್ಕೂ ಸಮರ್ಥನೆಗಳಿವೆ! ‘ಹೆಣ್ಣುಮಕ್ಕಳು ಬಲಾತ್ಕರಿಸುವುದನ್ನು ಇಷ್ಟಪಡುತ್ತಾರೆ’ ಎಂಬ ಮಾತನ್ನು ಮಹಿಳೆಯಿಂದಲೇ ಹೇಳಿಸಿಬಿಟ್ಟಿದ್ದಾರೆ! ಭಾರತೀಯ ಮಹಿಳೆ ಆ ರೀತಿ ಹೇಳಬಾರದು ಎಂಬ ಕಾರಣಕ್ಕೋ ಏನೋ ಇಂಗಾ ಎಂಬ ಜರ್ಮನ್ ಮಹಿಳೆಯ ಬಾಯಿಂದ ಈ ಹಿತೋಕ್ತಿಯನ್ನು ಹೇಳಿಸಿ ಬೆಚ್ಚಿ ಬೀಳಿಸುತ್ತಾರೆ ಭೈರಪ್ಪ! ಮತ್ತೊಂದು ಸಮರ್ಥನೆ ಸಂಶೋಧನೆ ಮುಂದುವರಿಯಲೇಬೇಕಾದ ಒತ್ತಡ. ದೇಶದ ಸಂಶೋಧನೆಯ ಮುಂದುವರಿಕೆಯ ಸಲುವಾಗಿ ಅತ್ಯಾಚಾರ ಮಾಡುವುದು ತಪ್ಪಲ್ಲ ಎಂಬ ಭಾವ. ಪುಣ್ಯಕ್ಕೆ ಕಾದಂಬರಿಯಲ್ಲಿ ಅತ್ಯಾಚಾರದ ಪ್ರಯತ್ನವಾಗುತ್ತದೆಯೇ ಹೊರತು ಅತ್ಯಾಚಾರವಾಗುವುದಿಲ್ಲ! ಕೊನೆಗೆ ಉತ್ತರೆ ಮಕ್ಕಳು ಮಾಡಿಕೊಳ್ಳುವುದಕ್ಕೆ ಒಪ್ಪಿಕೊಳ್ಳುವುದ್ಹೇಗೆ ಎಂಬ ವಿವರಗಳನ್ನು ತಿಳಿದುಕೊಳ್ಳಲು ಕಾದಂಬರಿ ಓದಿ.

ಉತ್ತರೆ ಬುದ್ಧಿವಂತೆ, ಯಾನದ ಕಾದಂಬರಿ ಲೇಖಕರೇ ತಿಳಿಸಿರುವಂತೆ ಶತಮಾನಗಳ ನಂತರ ನಡೆಯುವಂತಹದ್ದು. ಆದರೆ ಲೇಖಕರ ಮನಸ್ಸು ಶತಮಾನಗಳ ನಂತರವೂ ಮನುಷ್ಯನ ಆಲೋಚನೆಗಳು ಇವತ್ತು ಅಥವಾ ಹಿಂದೆ ಇದ್ದಂತೆಯೇ ಇರಬೇಕು ಎಂದು ಭಾವಿಸಿದಂತಿದೆ. ಆ ಕಾರಣದಿಂದ ಯಾನದಲ್ಲೂ ಮಹಿಳೆಯನ್ನು ಅಡುಗೆಮನೆಗೆ ಮತ್ತು ಅಬ್ಬಬ್ಬಾ ಎಂದರೆ ಕೃಷಿಗೆ ಸೀಮಿತಗೊಳಿಸಿಬಿಟ್ಟಿದ್ದಾರೆ. ಗಂಡಸು ಆಗೊಮ್ಮೆ ಈಗೊಮ್ಮೆ ಅಡುಗೆಮನೆ ಪ್ರವೇಶಿಸುತ್ತಾನಾದರೂ ಅಡುಗೆ ಮಹಿಳೆಯ ಕೆಲಸ ಎಂದು ನಿರ್ಧರಿಸಿಬಿಟ್ಟಿದ್ದಾರೆ! ವಂಶವೃಕ್ಷದ ಕಾತ್ಯಾಯಿನಿಗೂ ಉತ್ತರೆಗೂ ಅನೇಕ ಸಾಮ್ಯತೆಗಳಿವೆ. ಇಬ್ಬರೂ ಮನೆಯವರ ವಿರೋಧದ ನಡುವೆ ಮನೆಯಿಂದ ಹೊರನಡೆಯುತ್ತಾರೆ. ಇಬ್ಬರೂ ಸಂಕಷ್ಟಗಳನ್ನನುಭವಿಸುತ್ತಾರೆ. ಕೊನೆಗೆ ಎರಡೂ ಕಾದಂಬರಿಗಳಲ್ಲಿ ಮಹಿಳೆಯದೇ ತಪ್ಪು ಎಂದು ನಿರೂಪಿಸಿದ್ದಾರೆ. ವಂಶವೃಕ್ಷದ ಕಾತ್ಯಾಯಿನಿ ಮಾಡಿದ್ದೆಲ್ಲವೂ ತಪ್ಪು ಎಂದು ಮೊದಲ ಓದಿನಲ್ಲಿ ಅನ್ನಿಸುವುದಕ್ಕೆ (ಕಾತ್ಯಾಯಿನಿ ಪಾತ್ರರಚನೆ ಎಷ್ಟು ತಪ್ಪಿಂದ ಕೂಡಿತ್ತು ಎಂದು ನನಗೆ ಅರಿವಾಗಿದ್ದು ಲಿಯೋ ಟಾಲ್ ಸ್ಟಾಯ್ ರ ಅನ್ನಾ ಕೆರಾನೀನ ಓದಿದ ನಂತರ) ಮುಖ್ಯ ಕಾರಣ ಕಾತ್ಯಾಯಿನಿ ವಿರುದ್ಧವಿರುವ ಶ್ರೀನಿವಾಸ ಶ್ರೋತ್ರಿಗಳ ಪಾತ್ರದ ಶುದ್ಧತೆ ಮತ್ತು ಬದ್ಧತೆ. ಇಲ್ಲಿ ಉತ್ತರೆಗೆ ಎದುರಿಗಿರುವ ಸುದರ್ಶನ್ ಅಥವಾ ಯಾದವರಲ್ಲಿ ಆ ಶುದ್ಧತೆಯೂ ಇಲ್ಲ ಬದ್ಧತೆಯೂ ಇಲ್ಲ. ಗಂಡಸೆಂಬ ಪ್ರಾಣಿ ಏನು ಬೇಕಾದರೂ ಮಾಡಬಹುದು, ಹೆಣ್ಣು ಸಂಸ್ಕೃತಿ ರಕ್ಷಿಸಬೇಕು ಎಂಬ ಅಹಂಕಾರವಷ್ಟೇ ಇದೆ. ಈ ಅಹಂಕಾರದ ಭಾವವೇ ಕಾದಂಬರಿಯನ್ನು ಪೇಲವವಾಗಿಸಿಬಿಡುತ್ತದೆ, ಹಿಮಾಲಯದ ವಿವರಗಳ ಕೆಲವು ಪುಟಗಳನ್ನೊರತುಪಡಿಸಿ. ಹಿಂದಿನ ಶತಮಾನದ ಮನಸ್ಥಿತಿಯನ್ನೇ ಮುಂದಿನ ಶತಮಾನದಲ್ಲೂ ಕಾಣಬಯಸುವ ಭೈರಪ್ಪನವರ ಕಾದಂಬರಿಯ ಪಾತ್ರಗಳು ಮನುಷ್ಯನ ಆಲೋಚನೆಯಲ್ಲಿನ ಚಲನೆಯನ್ನೇ ಮರೆತುಬಿಟ್ಟಂತೆ ಕಾಣುತ್ತದೆ.

2 comments:

  1. if a man's attitude has not changed significantly in last 50 years (i believe before that we had better men and women, who understood each other...), may be bairappa is being realistic in his expectations about furture...

    ReplyDelete
    Replies
    1. it is very unrealistic! Nothing new in this novel except that the story takes place in space!

      Delete