Apr 10, 2015

ಯೆಮೆನ್ನಿನ ಆಂತರಿಕ ಯುದ್ಧದಲ್ಲಿ ಪರದೇಶಗಳದ್ದೇ ಕಾರುಬಾರು

indian army in yemen
Dr Ashok K R
ಯೆಮೆನ್ ದೇಶದಲ್ಲಿ ಭಾರತೀಯ ಸೈನಿಕರು ಪರಾಕ್ರಮ ಮೆರೆದಿದ್ದಾರೆ. ಆಂತರಿಕ ಯುದ್ಧ ಮತ್ತು ಬಾಹ್ಯ ಶಕ್ತಿಗಳ ಕೈವಾಡದಿಂದ ಭುಗಿಲೆದ್ದಿರುವ ಹಿಂಸೆಯಲ್ಲಿ ವಿವಿಧ ದೇಶದ ನಾಗರೀಕರು ಸಿಕ್ಕಿಹಾಕಿಕೊಂಡಿದ್ದಾರೆ. ಮೂರು ಸಾವಿರಕ್ಕೂ ಅಧಿಕ ಭಾರತೀಯರನ್ನು ನಮ್ಮ ಸೈನಿಕರು ಸುರಕ್ಷಿತವಾಗಿ ವಾಪಸ್ಸು ತರುವಲ್ಲಿ ಯಶಸ್ಸು ಕಂಡಿದ್ದಾರೆ. ಜೊತೆ ಜೊತೆಗೇ ಅನ್ಯದೇಶದ ಪ್ರಜೆಗಳನ್ನು ಕಾಪಾಡಿದ್ದಾರೆ. ಮಾಜಿ ಜೆನರಲ್ ಆದ ಕೇಂದ್ರ ಸಚಿವ ವಿ.ಕೆ.ಸಿಂಗ್ ಗಲಭೆಗ್ರಸ್ಥ ದೇಶದ ಸಮೀಪದಲ್ಲೇ ಇದ್ದು ಕಾರ್ಯಾಚರಣೆಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಭಾರತೀಯ ಸೈನಿಕರ ಈ ಸಾಹಸದ ಕಾರ್ಯವನ್ನು ಮೆಚ್ಚಿದ ಅನೇಕ ದೇಶಗಳು ಭಾರತದ ವಿದೇಶಾಂಗ ಕಛೇರಿಗೆ ತಮ್ಮ ದೇಶವಾಸಿಗಳನ್ನೂ ಪಾರು ಮಾಡಬೇಕೆಂದು ಕೇಳಿದ್ದಾರೆಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ದೇಶ ನಿವಾಸಿಗಳನ್ನು ಕಾಪಾಡಲು ಯೆಮೆನ್ನಿಗೆ ತೆರಳಿದ್ದ ಪಾಕಿಸ್ತಾನಿ ಸೈನಿಕರು ಭಾರತದ ಕೆಲವು ಪ್ರಜೆಗಳನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹದಗೆಡುತ್ತಲೇ ಸಾಗುತ್ತಿದ್ದ ಪಾಕ್ – ಭಾರತ ನಡುವಿನ ಸಂಬಂಧ ಯೆಮೆನ್ನಿನ ಹಿಂಸೆ ಮತ್ತಾ ಹಿಂಸೆ ಮೂಡಿಸಿದ ಮಾನವೀಯತೆಯ ಅನುಭವದಿಂದ ಒಂದಷ್ಟು ಸುಧಾರಣೆಗೊಳ್ಳಬಹುದೇ?

ಮಧ್ಯ ಪ್ರಾಚ್ಯದಲ್ಲಿ ಒಂದಾದ ನಂತರ ಮತ್ತೊಂದು ದೇಶಕ್ಕೆ ಹಿಂಸೆ ಹರಡುತ್ತಲೇ ಇದೆ. ಬಹುತೇಕ ಕಡೆಗಳಲ್ಲಿ ಹಿಂಸೆಗೆ – ಯುದ್ಧಕ್ಕೆ ಕಾರಣವಾಗುವ ಅನೇಕ ಅಂಶಗಳು ಪುನರಾವರ್ತನೆಯಾಗುತ್ತಿದೆ. ತೈಲಭರಿತ ದೇಶಗಳು, ಸರ್ವಾಧಿಕಾರಿ, ಮುಸ್ಲಿಂ ಮೂಲಭೂತವಾದಿಗಳು, ಸುನ್ನಿ – ಶಿಯಾ ಮುಸ್ಲಿಮರ ನಡುವಿನ ಕಿತ್ತಾಟ, ಪ್ರಭಾವಿ ದೇಶಗಳ ತೈಲ ದಾಹ – ಇವಿಷ್ಟು ಕಾರಣಗಳು ಮಧ್ಯ ಪ್ರಾಚ್ಯದ ಅನೇಕ ದೇಶಗಳಲ್ಲಿ ಆಂತರಿಕ ಹಿಂಸೆಗೆ ಪ್ರೇರಣೆಯಾಗಿವೆ. ದೇಶವೊಂದರ ಆಂತರಿಕ ಹಿಂಸೆಯನ್ನು ಹತ್ತಿಕ್ಕಿ, ಮಾನವ ಹಕ್ಕು ಉಲ್ಲಂಘನೆಯನ್ನು ತಡೆದು, ‘ಪ್ರಜಾಪ್ರಭುತ್ವ’ವನ್ನು ಸ್ಥಾಪಿಸುವ ಸಲುವಾಗಿ ಅನ್ಯ ದೇಶಗಳು ಹಿಂಸೆಯನ್ನು ಪ್ರಿಯವಾಗಿಸಿಕೊಂಡ ಒಂದು ಗುಂಪನ್ನು ಪರೋಕ್ಷವಾಗಿ ಬೆಂಬಲಿಸುವ ಮತ್ತು ಅನೇಕ ಬಾರಿ ಪ್ರತ್ಯಕ್ಷವಾಗಿಯೇ ಯುದ್ಧದಲ್ಲಿ ತೊಡಗಿಕೊಳ್ಳುತ್ತಿವೆ. ಸಾಮಾಜಿಕ ಜಾಲತಾಣಗಳ ನೆರವಿನಿಂದ, ಸ್ಪೂರ್ತಿಯಿಂದ ಶುರುವಾದ ‘ಅರಬ್ ಕ್ರಾಂತಿ’ ಕ್ರಾಂತಿಗಿಂತ ಹೆಚ್ಚಾಗಿ ಹಿಂಸಾವಿನೋದದಲ್ಲೇ ಅಂತ್ಯವಾಗುತ್ತಿರುವುದು ‘ಕ್ರಾಂತಿ’ಯ ಅಪಹಾಸ್ಯವಲ್ಲದೇ ಮತ್ತೇನೂ ಅಲ್ಲ. ಸರ್ವಾಧಿಕಾರಿ ಹೊಸ್ನಿ ಮುಬಾರಕ್ ವಿರುದ್ಧ ನಡೆದ ಇಜಿಪ್ಟ್ ಕ್ರಾಂತಿ ಪ್ರಜಾಪ್ರಭುತ್ವಕ್ಕಾಗಿ ನಡೆದ ಹೋರಾಟವೇ ಆಗಿತ್ತಾದರೂ ಕೊನೆಗದು ಪರ್ಯಾವಸನಗೊಂಡದ್ದು ಮಿಲಿಟರಿ ಮತ್ತು ಮುಸ್ಲಿಂ ಮೂಲಭೂತವಾದಿಗಳ ಅಟ್ಟಹಾಸದಲ್ಲಿ. ಗದಾಫಿಯ ಸರ್ವಾಧಿಕಾರತನವಿದ್ದ ಲಿಬಿಯಾದಲ್ಲಿ ನಡೆದ ಹೋರಾಟ ಮತ್ತು ಅಲ್ಲಿನ ರೆಬೆಲ್ ಗಳಿಗೆ ಅಮೆರಿಕಾ ನೀಡಿದ ಸರಕಾರದಿಂದ ಗದಾಫಿಯ ಆಡಳಿತವೇನೋ ಅಂತ್ಯಗೊಂಡಿತು, ಆದರೆ ಪ್ರಜಾಪ್ರಭುತ್ವ ಸ್ಥಾಪನೆಯಾಯಿತಾ? ಇನ್ನು ಇರಾಕಿನ ವಿಷಯವಂತೂ ಹೇಳುವುದೇ ಬೇಡ. ಭಯಂಕರ ಯುದ್ಧಾಸ್ತ್ರಗಳನ್ನು ಸದ್ದಾಂ ಹುಸೇನ್ ಅಡಗಿಸಿಕೊಂಡಿದ್ದಾನೆ ಎಂದು ನೂರು ಸಲ ಹೇಳಿ ಅದನ್ನೇ ಸತ್ಯವೆಂದು ನಂಬಿಸಿಬಿಟ್ಟಿತು ಅಮೆರಿಕಾ. ಪ್ರಜಾಪ್ರಭುತ್ವದ ಸ್ಥಾಪನೆಯೇ ನಮ್ಮ ಗುರಿ ಎಂದು ಯುದ್ಧ ಪ್ರಾರಂಭಿಸಿಬಿಟ್ಟಿತು. ಸದ್ದಾಂ ಬಂಧಿತನಾಗಿ ನೇಣಿಗೇರಿ ವರುಷಗಳು ಕಳೆದರೂ ಯಾವ ಭಯಂಕರ ಯುದ್ಧಾಸ್ತ್ರವೂ ಯಾರಿಗೂ ಸಿಗಲಿಲ್ಲ! ಬಹುಶಃ ಇರಾಕಿನ ಜನತೆ ಸದ್ದಾಮಿನ ಆಡಳಿತದಲ್ಲೇ ಈಗಿರುವುದಕ್ಕಿಂತ ನೆಮ್ಮದಿಯಾಗಿದ್ದರೇನೋ! ಸುನ್ನಿ ಪಂಗಡಕ್ಕೆ ಸೇರಿದ್ದ ಸದ್ದಾಂ ಹುಸೇನ್ ಶಿಯಾ ಪಂಗಡದವರ ಮೇಲೆ ನಡೆಸಿದ ದೌರ್ಜನ್ಯಗಳಿಗೆ ಲೆಕ್ಕವಿಲ್ಲ. ಕಾಲಚಕ್ರ ತಿರುಗಿದೆ. ಆಡಳಿತದಲ್ಲಿ ಶಿಯಾಗಳಿದ್ದಾರೆ, ಶಿಯಾಗಳ ಪ್ರಾಬಲ್ಯವನ್ನು ಅಂತ್ಯಗೊಳಿಸುವ ಸಲುವಾಗಿ ಸುನ್ನಿ ಮುಸ್ಲಿಮರು ಉಗ್ರರಾಗಿದ್ದಾರೆ. ಇರಾಕ್ ಮತ್ತು ಸಿರಿಯಾದ ಸುನ್ನಿ ಮುಸ್ಲಿಂ ಉಗ್ರರು ‘ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ’ (ISIS) ಕಟ್ಟಿಕೊಂಡು ಅವೆರಡು ದೇಶಗಳಿಗೇ ಅಲ್ಲದೇ ಪ್ರಪಂಚದ ಅನೇಕ ದೇಶಗಳ ನಿದ್ದೆಗೆಡಿಸುತ್ತಿದ್ದಾರೆ. ನಮ್ಮ ಬೆಂಗಳೂರಿನಲ್ಲೇ ಐ. ಎಸ್. ಐ. ಎಸ್ ಸಂಘಟನೆಯನ್ನು ಬೆಂಬಲಿಸಿ ಟ್ವೀಟುಗಳನ್ನು ಮಾಡುತ್ತಿದ್ದ ಮೆಹದಿ ಬಂಧಿತನಾಗಿರುವುದು ಮುಸ್ಲಿಂ ಮೂಲಭೂತವಾದಿಗಳು ನಿಧಾನಕ್ಕೆ ಆಲ್ ಖೈದಾದ ಪ್ರಭಾವದಿಂದ ಐ.ಎಸ್.ಐ.ಎಸ್ ನ ಕಡೆಗೆ ಹೋಗುತ್ತಿರುವುದರ ಸಂಕೇತ. ಈಗ ಯೆಮೆನ್ ದೇಶದ ಸರದಿ. ಆಂತರಿಕ ಹಿಂಸೆಯಿಂದ ಸೊರಗಿ ಹೋಗಿದ್ದ ದೇಶದಲ್ಲೀಗ ಅನ್ಯದೇಶಗಳ ವಿಮಾನ – ಗುಂಡುಗಳು ಸದ್ದು ಮಾಡಲು ಪ್ರಾರಂಭಿಸಿದೆ. 

yemen crisis
ಯೆಮೆನ್ನಿನ ಇತಿಹಾಸವನ್ನು ಗಮನಿಸಿದರೆ ಅನಕ್ಷರತೆ, ಭ್ರಷ್ಟಾಚಾರ, ಬಡತನ, ಅಪೌಷ್ಟಿಕತೆಯ ವಿವರಗಳೇ ಹೆಚ್ಚಾಗಿ ದೊರಕುತ್ತದೆ. ಸಮುದ್ರ ತೀರದ ಯೆಮೆನ್ ದೇಶ ಒಮನ್ ಮತ್ತು ಸೌದಿ ಅರೇಬಿಯಾದೊಡನೆ ಗಡಿಯನ್ನು ಹಂಚಿಕೊಂಡಿದೆ. ಭಾರತಕ್ಕೆ ಬರುವ ಸಮುದ್ರದ ಹಾದಿಯಲ್ಲಿ ಯೆಮೆನ್ ಬರುವುದರಿಂದ ಬ್ರಿಟೀಷರು ಹಡಗುಯಾನಕ್ಕೆ ಬೇಕಾದ ಕಲ್ಲಿದ್ದಲ್ಲನ್ನು ಶೇಖರಿಸಲು ಯೆಮೆನ್ ದೇಶವನ್ನು ಆಯ್ದುಕೊಂಡಿತ್ತಂತೆ. ಬ್ರಿಟೀಷರ ಆಡಳಿತ, ರಷ್ಯಾದ ಆಕ್ರಮಣಕಾರಿ ನೀತಿಗಳನ್ನೆಲ್ಲಾ ಸಹಿಸಿ ಬಿಡುಗಡೆ ಹೊಂದಿ ಸ್ವಾತಂತ್ರ್ಯ ಪಡೆದಿದ್ದ ಯೆಮೆನ್ ದೇಶದ ಆಧುನಿಕ ಇತಿಹಾಸದುದ್ದಕ್ಕೂ ಹಿಂಸಾ ಕ್ರಾಂತಿಗಳೇ ತುಂಬಿಕೊಂಡಿವೆ. ಯಾರ ಪರ ನಿಮ್ಮ ಅಭಿಪ್ರಾಯ ಮೂಡುತ್ತದೆ ಎಂಬುದರ ಆಧಾರದ ಮೇಲೆ ಹಿಂಸೆ ನಡೆಸಿದವರು ಕ್ರಾಂತಿಕಾರಿಗಳೋ ವಿಧ್ವಂಸಕ ಕೃತ್ಯ ಎಸಗುವ ಭಯೋತ್ಪಾದಕರೋ ಎಂಬುದು ನಿರ್ಧರಿತವಾಗುತ್ತದೆ. ಸೈದ್ಧಾಂತಿಕ ಭಿನ್ನತೆಯನ್ನು ತಳೆದ ಕಾರಣ ಯೆಮೆನ್ ದೇಶ ಉತ್ತರ ಮತ್ತು ದಕ್ಷಿಣ ಭಾಗಗಳಾಗಿ ಒಡೆದು ಹೋಗಿದ್ದು 1967ರಲ್ಲಿ. ಅನೇಕ ಆಂತರಿಕ ಕಲಹಗಳು, ಎರಡು ದೇಶಗಳ ನಡುವೆ ನಡೆದ ಅನೇಕ ಯುದ್ಧಗಳ ತರುವಾಯ ಯೆಮೆನ್ ಮತ್ತೆ ಒಂದಾಗಿದ್ದು 1990ರಲ್ಲಿ. 1978ರಿಂದಲೇ ಉತ್ತರ ಯೆಮೆನ್ನಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಅಲಿ ಮೊಹಮದ್ ಸಲ್ಹೇ ಒಂದಾದ ದೇಶದ ಅಧ್ಯಕ್ಷರಾಗಿ ಮುಂದುವರೆದರು. 2011ರ ಟ್ಯುನೀಷಿಯ ಮತ್ತು ಇಜಿಪ್ಟಿನ ಕ್ರಾಂತಿಯ ಸಂದರ್ಭದಲ್ಲಿಯೇ ಯೆಮೆನ್ನಿನಲ್ಲೂ ಕ್ರಾಂತಿಯ ಕಿಡಿಗಳು ಹೊತ್ತಿಕೊಂಡಿತು. ನಿರುದ್ಯೋಗ, ಭ್ರಷ್ಟಾಚಾರ, ಬಡತನ ವಿರುದ್ಧ ನಡೆಯಲಾರಂಭಿಸಿದ ಪ್ರತಿಭಟನೆಗಳು ಭಗ್ಗನೆ ಉರಿಯಲಾರಂಭಿಸಿದ್ದು ಅಲಿ ಮೊಹಮದ್ ಸಲ್ಹೇ ಸಾಯುವವರೆಗೂ ಅಧ್ಯಕ್ಷನಾಗಿ ಮರಣಾನಂತರ ಆ ಅಧ್ಯಕ್ಷ ಪದವಿ ತನ್ನ ಮನೆತನದಲ್ಲೇ ಉಳಿಯುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಲು ಪ್ರಯತ್ನಿಸಿದಾಗ. ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದು ಸಲ್ಹೇನನ್ನು ವಿರೋಧಿಸಿದವರನ್ನು ಹತ್ಯೆಗೈಯ್ಯಲಾಯಿತು. ಕೊನೆಗೂ ಪ್ರತಿಭಟನೆಗೆ ಮಣಿದ ಅಲಿ ಮೊಹಮದ್ ಸಲ್ಹೇ 2011ರ ನವೆಂಬರಿನಲ್ಲಿ ಉಪಾಧ್ಯಕ್ಷ ಅಬ್ದುಲ್ ರಬ್ಬೋ ಮನ್ಸೂರ್ ಅಲ್ ಹದಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ಮೂವತ್ತಮೂರು ವರುಷದ ಸಲ್ಹೇ ಆಡಳಿತ ಕೊನೆಗಂಡಿತ್ತು. ಇಷ್ಟರಲ್ಲಾಗಲೇ ಮೊಹಮದ್ ಸಲ್ಹೇ ರಿಯಾದಿಗೆ ಪರಾರಿಯಾಗಿದ್ದರು. ಜನರ ಪ್ರತಿಭಟನೆಗೆ ಒಂದು ಹಂತದ ಗೆಲುವು ಸಿಕ್ಕಿತ್ತು. ಆದರೆ ಆ ಗೆಲುವಿಗೆ ಜನರ ಬದುಕನ್ನು ಬದಲಿಸುವಷ್ಟು ಶಕ್ತಿಯಿರಲಿಲ್ಲ.

ವಿಶ್ವ ಬ್ಯಾಂಕಿನ ಒತ್ತಾಯದ ಮೇರೆಗೆ 2014ರ ಜುಲೈ ತಿಂಗಳಲ್ಲಿ ಹದಿ ನೇತೃತ್ವದ ಯೆಮೆನ್ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸಬ್ಸಿಡಿಯನ್ನು ನಿಲ್ಲಿಸಿದ್ದು ಮತ್ತೊಂದು ಆಂತರಿಕ ಯುದ್ಧಕ್ಕೆ ಮುನ್ನುಡಿ ಬರೆಯತೊಡಗಿತು. ಅಬ್ದುಲ್ ಮಲಿಕ್ ಹಲ್ ಹುತಿ ನೇತೃತದ ತಂಡ ಸೆಪ್ಟೆಂಬರ್ ಕ್ರಾಂತಿಯನ್ನು ಪ್ರಾರಂಭಿಸಿತು. ಶಿಯಾ ಪಂಗಡಕ್ಕೆ ಸೇರಿದ ಈ ಹುತಿ ತಂಡವನ್ನು ಭಯೋತ್ಪಾದಕರು ಅಥವಾ ಕ್ರಾಂತಿಕಾರಿಗಳೆಂದು ಕರೆಯಲು ನೀವು ಯಾರ ಪರ ಎಂಬುದೇ ಮುಖ್ಯವಾಗುತ್ತದೆ! ಪ್ರಧಾನಿ ಮಂತ್ರಿಯ ರಾಜೀನಾಮೆ ಪಡೆದ ಈ ಹುತಿಗಳು ಯೆಮೆನ್ನಿನ ರಾಜಧಾನಿ ‘ಸನಾ’ವನ್ನು ಎರಡೇ ದಿನದೊಳಗೆ ತಮ್ಮ ಕೈವಶ ಮಾಡಿಕೊಂಡುಬಿಡುತ್ತಾರೆ. ಉತ್ತರ ಯೆಮೆನ್ನಿನ ಈ ಹುತಿಗಳ ತಂಡ ಅಲ್ ಖೈದಾ ಪ್ರೇರಿತ ಅನ್ಸಾರ್ ಅಲ್ ಶರಿಯಾ ಗುಂಪಿನ ವಿರುದ್ಧವೂ ಆಂತರಿಕ ಯುದ್ಧದಲ್ಲಿ ತೊಡಗಿದೆ. ಆಲ್ ಖೈದಾದ ವಿರುದ್ಧ ಹೋರಾಡುತ್ತಿದ್ದೇವೆಂದು ಹೇಳುವ ಅಮೆರಿಕಾ ಮತ್ತದಕ್ಕೆ ಬೆಂಬಲ ಸೂಚಿಸುವ ಮಾತನಾಡುವ ಸೌದಿ ಅರೇಬಿಯಾ ದೇಶಗಳು ಈಗ ಅಲ್ ಖೈದಾದ ಅನ್ಸಾರ್ ಅಲ್ ಶರಿಯಾ ಗುಂಪಿನ ವಿರುದ್ಧ ಹೋರಾಡುತ್ತಿರುವ ಹುತಿಯ ಮೇಲೇಕೆ ಯುದ್ಧ ಸಾರಿದೆ?

saudi airstrike in yemen
ಯೆಮೆನ್ನಿನ ಮಾನವ ಹಕ್ಕು ಹೋರಾಟಗಾರ ಬರಾ ಶಿಬಾನ್ ಹೇಳುವ ಪ್ರಕಾರ ‘ಇದು ಇರಾನ್ ಮತ್ತು ಸೌದಿ ಅರೇಬಿಯಾ ನಡುವೆ ನಡೆಯುತ್ತಿರುವ ಪರೋಕ್ಷ ಯುದ್ಧ. ಈ ಯುದ್ಧ ಇರಾನ್ ಅಥವಾ ಸೌದಿ ಅರೇಬಿಯಾದಲ್ಲಿ ನಡೆಯದೆ ಯೆಮೆನ್ನಿನಲ್ಲಿ ನಡೆಯುತ್ತಿದೆ. ಯಾರನ್ನು ಬೆಂಬಲಿಸಿದರೆ ಯೆಮೆನ್ನಿಗೆ ಏನುಪಯೋಗ ಎಂದು ಅನೇಕರು ಕೇಳುತ್ತಿದ್ದಾರೆ. ಯುದ್ಧದ ಪರಿಣಾಮ ಏನೇ ಆದರೂ ಅದರ ಲಾಭ, ನಷ್ಟ ಉಂಟಾಗುವುದು ಇರಾನ್ ಅಥವಾ ಸೌದಿ ಅರೇಬಿಯಾ ದೇಶಗಳಿಗೆ; ಯೆಮೆನ್ ಸೋಲುತ್ತದೆ’. ಅಲ್ ಹುತಿ ಹೋರಾಟಗಾರರಿಗೆ ಬೆಂಬಲ ನೀಡುವವರ ಪಟ್ಟಿಯಲ್ಲಿ ಮೊದಲು ಇರಾನ್ ದೇಶವಿದ್ದರೆ ನಂತರದ ಸ್ಥಾನದಲ್ಲಿ ಯೆಮೆನ್ನಿನ ಪದಚ್ಯುತ ಅಧ್ಯಕ್ಷ ಅಲ್ ಮೊಹಮದ್ ಸಲ್ಹೇ ಇದ್ದಾರೆ. ಜನರ ಬೆಂಬಲ ಗಳಿಸಿಕೊಳ್ಳುವುದಕ್ಕಾಗಿ ಸಲ್ಹೇ ಅಗತ್ಯವಾದರೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒಟ್ಟುಮಾಡಿಕೊಳ್ಳಲು ಅಲ್ ಹುತಿ ಉಗ್ರರಿಗೆ ಇರಾನ್ ಅತ್ಯಗತ್ಯ. ಇನ್ನು ವಿರೋಧಿ ಹೋರಾಟಗಾರರಿಗೆ / ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಲು ಸೌದಿ ಅರೇಬಿಯಾ ಮತ್ತು ಅಮೆರಿಕಾ ಕೈಚಾಚಿದೆ. ಇಷ್ಟಕ್ಕೂ ಯೆಮೆನ್ನಿನಲ್ಲಿ ಪರೋಕ್ಷ ಯುದ್ಧ ಮಾಡಬೇಕಾದ ಅವಶ್ಯಕತೆ ಇರಾನ್ ಮತ್ತು ಸೌದಿ ಅರೇಬಿಯಾಕ್ಕೆ ಏನಿದೆ ಎಂದು ಗಮನಿಸಿದಾಗ ಇಡೀ ಮಧ್ಯ ಪ್ರಾಚ್ಯದಲ್ಲಿ ತಾವು ನಂಬಿದ ‘ನೈಜ’ ಇಸ್ಲಾಮೇ ವಿಜೃಂಬಿಸಬೇಕು ಎಂಬ ಹಪಾಹಪಿ ಕಾಣುತ್ತದೆ. ಶ್ರೇಷ್ಟತೆಯ ವ್ಯಸನ ಲಕ್ಷಾಂತರ ಜನರ ಹತ್ಯೆಯಲ್ಲಿ ಪರ್ಯಾಯವಸನವಾಗುತ್ತಿದೆ. ಸೌದಿ ಅರೇಬಿಯಾ ಯೆಮೆನ್ನಿನ ಮೇಲೆ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸಮರ್ಥಿಸಿಕೊಳ್ಳುತ್ತ ಅಮೆರಿಕಾದ ಸೆನೇಟರ್ ಜಾನ್ ಮೆಕ್ ಕೇನ್ ‘ಇರಾನಿನ ಬೆಂಬಲ ಹೊಂದಿರುವ ಅಲ್ ಹುತಿ ಉಗ್ರರ ಮೇಲೆ ದಾಳಿ ಮಾಡುತ್ತಿರುವ ಸೌದಿ ಅರೇಬಿಯಾದ ನಿರ್ಧಾರ ಸರಿಯಾಗಿದೆ’ ಎಂದು ಹೇಳಿರುವುದು ಅಮೆರಿಕಾಕ್ಕೆ ‘ಪ್ರಜಾಪ್ರಭುತ್ವ’ ಜಾರಿಗೆ ತರಲು ಮತ್ತೊಂದು ತೈಲ ದೇಶ ಸಿಕ್ಕಿರುವ ಖುಷಿ ಎದ್ದು ಕಾಣುತ್ತಿದೆ. 

ಅಲ್ ಹುತಿ ಉಗ್ರರು ಶಿಯಾ ಪಂಗಡಕ್ಕೆ ಸೇರಿದವರು. ಇರಾನ್ ಹೇಳಿಕೇಳಿ ಶಿಯಾ ಪಂಗಡದ ಪ್ರಾಬಲ್ಯದ ದೇಶ. ಮತ್ತೊಂದೆಡೆ ಸೌದಿ ಅರೇಬಿಯಾದಲ್ಲಿರುವುದು ಸುನ್ನಿ ಇಸ್ಲಾಂ. ಸುನ್ನಿ ಇಸ್ಲಾಂ ಅನ್ನು ಮತ್ತಷ್ಟು ಮೂಲಭೂತವಾದವನ್ನಾಗಿ ಪರಿವರ್ತಿಸಿ ವಹಾಬಿಸಂ ಅನ್ನು ಹುಟ್ಟು ಹಾಕಿರುವುದು ಇದೇ ಸೌದಿ ಅರೇಬಿಯಾ ದೇಶ. ತನ್ನ ಗಡಿ ಭಾಗದ ಯೆಮೆನ್ ದೇಶದಲ್ಲಿ ಇರಾನ್ ಪ್ರೇರಿತ ಶಿಯಾ ಉಗ್ರರು ಮೇಲುಗೈ ಸಾಧಿಸುವುದು ಸೌದಿಗೆ ಬೇಕಿಲ್ಲ. ಸೌದಿಯ ವಹಾಬಿ ಪಂಥ ಯೆಮೆನ್ನಿನಲ್ಲಿ ಬೇರೂರುವುದು ಇರಾನಿಗೆ ಬೇಕಿಲ್ಲ. ಯೆಮೆನ್ನಿನ ಜನತೆಯ ಆಯ್ಕೆಯೇನೆಂಬುದು ಬಹುಶಃ ಯಾರಿಗೂ ಬೇಕಾಗಿಲ್ಲ. ಸ್ವತಃ ತಮ್ಮ ದೇಶದಲ್ಲೇ ಪ್ರಜಾಪ್ರಭುತ್ವಕ್ಕೆ ಅವಕಾಶ ಕೊಡದ ದೇಶವೊಂದು ನೆರೆದೇಶದ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತೇನೆ ಎಂದು ಹೇಳುವ ಮಾತುಗಳನ್ನು ನಂಬಲಾದೀತೆ. ಲೆಬನಾನಿನ ಹೆಜ್ಬೊಲ್ಲಾ, ಸಿರಿಯಾದ ಬಶರ್ – ಅಲ್ – ಅಸ್ಸಾದ್, ಐ.ಎಸ್.ಐ.ಎಸ್ ವಿರುದ್ಧದ ಹೋರಾಟಕ್ಕೆ ನೆರವು ನೀಡುತ್ತಿರುವ ಇರಾನ್ ಯೆಮೆನ್ನಿನ ಅಲ್ – ಹುತಿ ಉಗ್ರರನ್ನು ಬೆಂಬಲಿಸುತ್ತಿರುವುದರಲ್ಲಿ ಹೆಚ್ಚಿನ ಅನುಮಾನವಿಲ್ಲ. ಇರಾನ್ ಈ ಎಲ್ಲಾ ತಂಡಗಳಿಗೆ ನೀಡುತ್ತಿರುವ ಬೆಂಬಲ ನ್ಯಾಯದ ಪರವಾಗೂ ಅಲ್ಲ, ಪ್ರಜಾಪ್ರಭುತ್ವದ ಪರವಾಗೂ ಅಲ್ಲ, ಅನ್ಯದೇಶದ ಆಕ್ರಮಣದ ವಿರುದ್ಧದ ಹೋರಾಟಕ್ಕೆ ಕೊಡುತ್ತಿರುವ ನೈತಿಕ ಬೆಂಬಲವೂ ಅಲ್ಲ; ಶಿಯಾ ಮುಸ್ಲಿಮರ ವಿವಿಧ ಸಂಘಟನೆಗಳು ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ಪ್ರಬಲವಾದರೆ ತಾನೂ ಪ್ರಬಲನಾಗುತ್ತೇನೆ ಎಂಬ ದುರಾಸೆ ಮಾತ್ರ ಈ ಬೆಂಬಲಕ್ಕೆ ಕಾರಣ. ಇನ್ನು ಸೌದಿ ಅರೇಬಿಯಾದ ದಾಳಿಯನ್ನು ಬಹ್ರೇನ್, ಕತಾರ್, ಯು.ಎ.ಇ, ಪಾಕಿಸ್ತಾನ, ಟರ್ಕಿ, ಸೂಡಾನ್, ಮೊರಕ್ಕೋ, ಜೋರ್ಡಾನ್, ಇಜಿಪ್ಟ್, ಕುವೈತ್ ದೇಶಗಳು ಬೆಂಬಲಿಸುತ್ತಿರುವುದು ಸುನ್ನಿ ಇಸ್ಲಾಮಿನ ಮೇಲಿನ ಪ್ರೀತಿಯಿಂದ ಮಾತ್ರ. ಸೌದಿ ನೇತೃತ್ವದ ತಂಡವನ್ನು ಅಮೆರಿಕಾ ಬೆಂಬಲಿಸುತ್ತಿರುವುದಕ್ಕೆ ಇರಾನ್ ಮೇಲಿನ ಮುಗಿಯದ ದ್ವೇಷ ಮತ್ತು ಯೆಮೆನ್ ಕೂಡ ಒಂದು ಪ್ರಮುಖ ತೈಲ ಉತ್ಪಾದಕ ರಾಷ್ಟ್ರವಾಗಿರುವುದು ಕಾರಣ. ಸೌದಿ ಅರೇಬಿಯಾ ತನ್ನ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವುದು ಅಮೆರಿಕಾದಿಂದ. ಯುದ್ಧದಂತಹ ಅತ್ಯುತ್ತಮ ವ್ಯಾಪಾರದ ಸ್ಥಳವನ್ನು ಕಳೆದುಕೊಳ್ಳಲು ಅಮೆರಿಕ ಏನು ‘ದಡ್ಡ’ರ ದೇಶವೇ? ಮತ್ತಷ್ಟು ಮಗದಷ್ಟು ಯುದ್ಧ ನಡೆಯುವಂತಾದರೆ ಶಸ್ತ್ರ ವ್ಯಾಪಾರಿಗಳಿಗೆ ಖುಷಿಯೋ ಖುಷಿ. ಸಿರಿಯಾ, ಇರಾಕ್, ಐ.ಎಸ್.ಐ.ಎಸ್, ಲಿಬಿಯಾದ ಬಗ್ಗೆ ಸೊಲ್ಲೆತ್ತದ ಸೌದಿ ಅರೇಬಿಯಾಗೆ ಪಕ್ಕದ ಯೆಮೆನ್ ದೇಶದ ಬಗ್ಗೆ ಅಪರಿಮಿತ ಉತ್ಸಾಹ; ಶಿಯಾ ಹೋರಾಟಗಳನ್ನೇ ಬೆಂಬಲಿಸುವ ಇರಾನಿಗೆ ಅಲ್-ಹುತಿಗಳೆಂದರೆ ತೀರದ ಪ್ರೀತಿ. ಮೊದಲೇ ಬಡತನದ ಕೂಪದಲ್ಲಿ ತೊಳಲಾಡುತ್ತಿದ್ದ ಯೆಮೆನ್ ದೇಶ; ತಿನ್ನುವ ಗೋಧಿ ಮತ್ತು ಅಕ್ಕಿಯಲ್ಲಿ ತೊಂಭತ್ತು ಪ್ರತಿಶತಃದಷ್ಟನ್ನು ಆಮದು ಮಾಡಿಕೊಳ್ಳುವ ಯೆಮೆನ್ ದೇಶದ ಪರಿಸ್ಥಿತಿ ಅನ್ಯದೇಶಗಳ ಆಟದಲ್ಲಿ ಏನಾಗಿ ಹೋಗಬಹುದು? ಯುದ್ಧದಾಚೆಯೇ ಉಳಿದುಹೋದ ಯೆಮೆನ್ ದೇಶದ ಲಕ್ಷಾಂತರ ಜನತೆ ಹಸಿವಿನಿಂದಲೇ ನಿರ್ನಾಮ ಹೋದರೆ ಅದಕ್ಯಾರು ಹೊಣೆ? ಮಾನವೀಯತೆ ಕಳೆದುಕೊಂಡ ಮನುಷ್ಯರಿಂದ, ಮನುಷ್ಯತ್ವ ಕಲಿಸಲು ಮರೆತುಹೋದ ಧರ್ಮಗಳಿಂದಲೇ ಮಾನವ ಸಂತತಿ ಈ ಭೂಮಿಯಿಂದ ನಶಿಸಿಹೋಗಬಹುದೇ?
ಪೂರಕ ಮಾಹಿತಿ: ವಿಕಿಪೀಡಿಯಾ, ಎಫ್.ಎಸ್.ಆರ್.ಎನ್, ಮುಫ್ತಾ, ಟೈಮ್ಸ್ ಆಫ್ ಇಂಡಿಯಾ, ಆರ್.ಟಿ ಮತ್ತಿತರ ಅಂತರ್ಜಾಲ ತಾಣಗಳು

No comments:

Post a Comment