Mar 7, 2015

ಸಕಲ ಜೀವಾತ್ಮರಿಗೆ ಲೇಸ ಬಯಸುವ ಮಹಿಳಾ ಚಳುವಳಿ

ಕೆ. ನೀಲಾ
ಲಡಾಯಿ ಪ್ರಕಾಶನದಿಂದ ಪ್ರಕಟವಾಗಿರುವ ಬಿಡುಗಡೆಗೆ ಸಿದ್ಧವಾಗಿರುವ 'ಸಾಕಾರದತ್ತ ಸಮಾನತೆಯ ಕನಸು' ಪುಸ್ತಕದ ಒಂದು ಅಧ್ಯಾಯ 'ಹಿಂಗ್ಯಾಕೆ'ಯ ಓದುಗರಿಗಾಗಿ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಈ ಪ್ರಭುತ್ವದ ಕಾನೂನಿನಿಂದಾಗಿ ಖರೇವು ಅರ್ಥದೊಳಗೆ ನಾ ಮಾಡ್ಲಿಕ್ ಹೊಂಟ್ರ ಕದನ ಗ್ಯಾರಂಟಿ. ಕದನದ ಹಿನ್ನೆಲೆಯೊಳಗೆ ಅಂತಾರಾಷ್ಟ್ರೀಯ ದಿನಾಚರಣೆ ಹುಟ್ಟಿಕೊಂಡಿದೆ. ಮತ್ತ 8ನೇ ತಾರೀಕಿನ ಘೋಷಣೆ ಇತ್ತಲ್ಲ, ಅವತ್ತು ನಮ್ಮ ಕಾರ್ಮಿಕ ಮಹಿಳೆಯರು ಉಳಿದೆಲ್ಲ ಆರ್ಥಿಕ ಬೇಡಿಕೆಗಳ ಜೊತೆಗೆ ಮುನ್ನೆಲೆಯಾಗಿ ಮತದಾನ ಹಕ್ಕಿನ ಬೇಡಿಕೆಯನ್ನು ಇಟ್ಟು ಹೋರಾಟ ಮಾಡಿದ್ರು. ಅದು ರಾಷ್ಟ್ರೀಯ ಪ್ರಜ್ಞೆಯ ಹೋರಾಟ ಆಗಿತ್ತು. ಅದನ್ನು ನೆನಪಿಸಿಕೊಳ್ಳುತ್ತಾ... ಮಹಿಳೆಯರ ಪ್ರಶ್ನೆಯಂದ್ರಾ ಅದೊಂದು ಹಂಗಿಸಿ ಅನುಮಾನಿಸುವ ಪದವಲ್ಲ. ಪುರುಷ ಮತ್ತು ಮಹಿಳೆ ಎದುರು ಬದುರು ನಿಂತಿರುವ ಪ್ರಶ್ನೆಯಲ್ಲ. ಅದನ್ನು ನಾನು ಉತ್ತರ ಕರ್ನಾಟಕ ಭಾಷೆಯ ಒಳಗ ಹೇಳಬೇಕು ಅಂತಂದ್ರ ಇದು ಸಕಲ ಜೀವಾತ್ಮರಿಗೆ ಲೇಸು ಬಯಸುವ ಒಂದು ಚಳುವಳಿ. ಅದೇ ನಮ್ಮ ಸಂಸ್ಕೃತಿ. ಸಕಲ ಜೀವಾತ್ಮರಿಗೆ ಲೇಸು ಬಯಸುವಂಥ ಈ ಚಳುವಳಿಯನ್ನು ನಾವು ನಾಡಿನಾದ್ಯಂತ ಪ್ರಖರವಾಗಿ ಮುಂದಕ್ಕ ತೊಕ್ಕೊಂಡು ಹೋಗುವಂಥ ಹೊಣೆಗಾರಿಕೆ ನಮ್ಮ ಮ್ಯಾಲ ಐತಿ. 

ಕಳೆದ ಅನೇಕ ವರ್ಷಗಳಿಂದ ನಮ್ಮ ನಾಡಿನೊಳಗ ಅನೇಕ ಸಂಘ ಸಂಸ್ಥೆಗಳು ಮಹಿಳಾ ಪರ ಕಾರ್ಯಕ್ರಮಗಳನ್ನ ನಿರ್ವಹಿಸುತ್ತಾ ಇದಾರ. ಆ ರೀತಿಯ ಪ್ರತಿ ವ್ಯಕ್ತಿ ಶಕ್ತಿ ಎಲ್ಲರಿಗೂ ನಾನೊಂದು ದೊಡ್ಡ ಸಲಾಮು ಹೇಳಿ, ಕೆಲವು ಅಂಶ ನಿಮ್ಮ ಮುಂದೆ ಮಂಡಿಸುತ್ತೀನಿ. ವೇದಿಕೆಯ ಮೇಲೆ ಇಷ್ಟು ತನಕ ಲಿಂಗರಾಜಕಾರಣ, ವರ್ಗ ರಾಜಕಾರಣ, ಜಾತಿ ರಾಜಕಾರಣ ಎಲ್ಲಾ ವಿಷಯಗಳನ್ನು ನಿಮ್ಮ ಮುಂದೆ ಇಟ್ಟಿದ್ರು. 

ನಾವು ಇಲ್ಲಿ ಮುಂಜಾನೆದ್ದು ಯಾರ್ಯಾರ್ನ ನೆನೆಯಬೇಕು ಅಂತ ಕೇಳಿದ್ರ, ನಮ್ಮ ಜಾನಪದ ಅಕ್ಕ ಅಥವಾ ತಾಯಿ ಬೀಸುತ್ತಾ ಒಂದು ಮಾತು ಹೇಳುತ್ತಿರುತ್ತಾರೆ. 

ಮುಂಜಾನೆ ನಾನೆದ್ದು ಯಾರ್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯುವ ತವರವರ ಎದ್ದೊಂದು ಗಳಿಗೆ

ಆಯ್ತು ತವರವರನ್ನು ನೆನೆಯೋಣ. ಆದ್ರ ಇವತ್ತಿಗೂ ಸಹಿತ 90-95 ಪರ್ಸೆಂಟು ನಮ್ಮ ಹೆಣ್ಣು ಮಕ್ಕಳು ಆಸ್ತಿವಂಚಿತರು ಆಗ್ಯಾರಲ್ಲ. ನಮ್ಮನ್ನು ಹೆತ್ತವರೇ ನಮಗೆ ಆಸ್ತಿ ಕೊಡಲು ತಯಾರಿಲ್ಲ. ಕಟ್ಟಿಕೊಂಡಿರುವ ಗಂಡನ ಮನೆಯವರು ಆಸ್ತಿ ಕೊಡಲು ತಯಾರಿಲ್ಲ. ಇಂಥ ಸಂದರ್ಭದಲ್ಲಿ ನಮಗೊಂದು ಬಲವಾದ ಕಾನೂನು ಮಾಡಿಕೊಟ್ಟಂತಹ, ಹೆಣ್ಣುಮಕ್ಕಳಿಗೆ, ಸಮಸ್ತಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ಇರಬೇಕು ಅಂತ ಕಾನೂನು ಮಾಡಿಕೊಟ್ಟಂತಹ ಡಾ. ಬಾಬಾ ಸಾಹೇಬ್ ಅಂಬೇಡ್ಕರರನ್ನು ಮುಂಜಾನೆದ್ದು ನಮ್ಮ ಹೆಣ್ಣುಮಕ್ಕಳು ಮತ್ತು ಸಮಸ್ತ ಜನತೆ ನೆನೆಯಲಿಕ್ಕೆ ಸಾಧ್ಯವಾಗಬೇಕು. 

ಹೆಣ್ಣುಮಕ್ಕಳನ್ನು ಜಾಗತಿಕ ದಲಿತತ್ವಕ್ಕೆ ದೂಡಿದ ಪ್ರಕ್ರಿಯೆಯನ್ನು ವಿವರಿಸಲು ನಾನು ಹೋಗುವುದಿಲ್ಲ. ಸಮಸ್ತ ಹೆಣ್ಣುಮಕ್ಕಳು ಜಾಗತಿಕ ದಲಿತತ್ವಕ್ಕೆ ತಳ್ಳಲ್ಪಟ್ಟವರು. ಅದರೊಂದಿಗೆ ಭಾರತದ ಪರಿಸ್ಥಿತಿಯೊಳಗ ಇವತ್ತು ಬಹಳ ದೊಡ್ಡ ಸಂಖ್ಯೆಯಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೀತದ, ಅದು ನಮ್ಮ ಶ್ರೇಣೀಕೃತ ವ್ಯವಸ್ಥೆಗೆ ಅನುಸರಿಸಿ ನಡೀತದ. 

ಬಡವರು, ಭೂರಹಿತರು ಮತ್ತು ಅತ್ಯಂತ ಕಡು ಬಡತನಕ್ಕೆ ಒಳಗಾದವರು, ದಲಿತರು, ಹಿಂದುಳಿದವರು, ಗ್ರಾಮೀಣ ಪ್ರದೇಶದಲ್ಲಿರುವವರು, ಈ ರೀತಿ ಶ್ರೇಣೀಕೃತ ವ್ಯವಸ್ಥೆ ರೀತಿಯೊಳಗೇನೆ ನಮ್ಮ ಬಡತನದ ಅಂಕಿ ಅಂಶ ಸಿಗುತ್ತವೆ ಅಂತ ನಮಗ ಗಮನಿಸಲು ಸಾಧ್ಯವಾಗಬೇಕು. ವರ್ಗ ಮತ್ತು ಜಾತಿ ಈ ಎರಡು ಪ್ರಶ್ನೆಗಳು ಸಹಿತ ಒಂದಕ್ಕೊಂದು ತಳಕು ಹಾಕಿಕೊಂಡು ಇವತ್ತು ಬೆಳೆದು ಬಂದಿರುವುದನ್ನು ನೋಡ್ತೇವೆ. ಹಾಗಾಗಿ ನಮ್ಮ ಚಳುವಳಿಯನ್ನು, ಇವತ್ತು ವರ್ಗ ತಾರತಮ್ಯದ ವಿರುದ್ಧ ಚಳುವಳಿಯನ್ನು ಮಾಡ್ತ ಮಾಡ್ತನೆ ಜಾತಿಯ ತಾರತಮ್ಯದ ವಿರುದ್ಧ ಸಹ ಚಳುವಳಿ ಮಾಡುವಂತಹ ಅವಶ್ಯಕತೆ ಹಿಂದೆಂದಿಗಿಂತ ಇವತ್ತು ಹೆಚ್ಚದ. ಅದನ್ನು ಮುಂದೆಯೂ ಅದನ್ನು ಗಮನಿಸಲು ನಮಗ ಸಾಧ್ಯವಾಗಬೇಕು. 

ನಾನು ಇಲ್ಲಿ ಬಂದಂತಹ ಎಲ್ಲ ಹೆಣ್ಮಕ್ಳು ಸಹಿತ ಮನೆಯೊಳಗೆ ಕೆಲಸ ಮಾಡಿಬಂದಿದೀವಿ. ನಮ್ಮ ಯಾರ ಮನೆಯೊಳಗೂ ರೊಟ್ಟಿ ತಟ್ಟಿದ್ದಕ್ಕೂ, ಮುದ್ದೆ ತಟ್ಟಿದ್ದಕ್ಕೂ, ಅಡಿಗೆ ಮನೆ ಕೆಲಸ ಮಾಡಿದ್ದಕ್ಕೂ, ಬಟ್ಟೆ ತೊಳೆದದ್ದಕ್ಕೂ, ಪಾತ್ರೆ ತೊಳೆದಿದ್ದಕ್ಕೂ ನಮಗೆ ಖಂಡಿತಾ ಕೂಲಿಯಿಲ್ಲ. ನೀವು ಏನಾದರೂ ಆರ್ಥಿಕ ವಿಚಾರ ಮಾತಾಡಕ ಚಾಲು ಮಾಡಿದ್ರಿ ಅಂದ್ರ, ಆವಾಗ ಹೊಸ ವಾದ ನಿಮ್ಮ ಎದುರು ಬಂದು ಬಿಡ್ತದ. ಅದು ಎನು ಅಂತಂದ್ರ ‘ನೀವು ತಾಯಿಯಾಗಿ, ಅಕ್ಕ-ತಂಗಿ ಇಷ್ಟೆಲ್ಲ ಆಗಿ ಇಷ್ಟೊಂದು ನಮ್ಮ ನಿಮ್ಮ ಮಧ್ಯದ ಭಾವನಾತ್ಮಕ ಸಂಬಂಧ ಇಟ್ಟುಕೊಂಡು ನೀವು ವ್ಯವಹಾರಿಕವಾಗಿ ನೋಡ್ತಿರೇನೂ’ ಅಂತ ನಮಗ ಪ್ರಶ್ನೆ ಮಾಡ್ತಾರ. ಅಂದ್ರ ನಾವು ವ್ಯಾವಹಾರಿಕ ಮಾತನಾಡಿದಾಗ ಭಾವನಾತ್ಮಕ ಪ್ರಶ್ನೆ ಎತ್ತಿ, ಭಾವನಾತ್ಮಕ ಮಾತನಾಡಿದಾಗ ವ್ಯವಹಾರಿಕ ಪ್ರಶ್ನೆ ಎತ್ತಿ ಗಲಿಬಿಲಿ ಮಾಡ್ತಾರ. 

ಇದ್ರ ಉದ್ದೇಶವೇನು ಅಂದ್ರ ಹೆಂಗಸರನ್ನು ಬಿಟ್ಟಿಯಾಗಿ, ಪುಕ್ಕಟೆಯಾಗಿ ದುಡಿಯುವುದಕ್ಕ ಬೇಕಾದಂತಹ ತಂತ್ರ ಕುತಂತ್ರವನ್ನು ಹೆಣ್ದಿದ್ದಾರ ಅಂತ ಅನ್ನುವುದು ನಮಗೆ ಸ್ಪಷ್ಟವಾಗುತ್ತದೆ. ಬಂಧುಗಳೇ, ನಾನು ಹಳ್ಳಿಯಲ್ಲಿ ಕೆಲಸ ಮಾಡ್ತೀನಿ. ನಮ್ಮ ಗೌಡರ ಮನೆಯಾಗ ಜಮೀನ್ದಾರರ ಹೆಂಡತಿ ಬಂಗಾರ ಹೇರಿಕೊಂಡು ಮೀಟಿಂಗ್‍ಗೆ ಬಂದಿರ್‍ತಾರ. ಅಂಥವ್ರನ್ನ ಒಂದು ಮಾತು ಕೇಳ್ತೀನಿ, ‘ಏನಕ್ಕ ನಿಮ್ಮ ತಂಗಿ ಬಡತನದಲ್ಲಿ ಇದ್ದಳಾ, ನಿಮ್ಮ ಒಂದು ತೊಲ ಬಂಗಾರನ ತೆಗೆದು ಕೊಡ್ತೀಯಾ?’ ಅಂದ್ರ ‘ಇಲ್ಲ’. ಆಕೆಯ ಮೈಮೇಲೆ ಹಾಕಿಕೊಂಡಿರುವ ಬಂಗಾರ ಆ ಗೌಡ/ಸಾಹುಕಾರನ ಹೆಂಡತಿ ಅಂತ ತೋರಿಸಿಕೊಳ್ಳಲು ಹಾಕಿಕೊಂಡಿರುವುದೇ ವಿನ: ಆಕೆಗೆ ಅದರ ಮ್ಯಾಲೆ ಯಾವ ರೀತಿಯ ಅಧಿಕಾರನೂ ಇಲ್ಲ. ಹಂಗೇನೇ ನಮ್ಮ ಉದ್ಯೋಗಸ್ತ ಹೆಣ್ಣು ಮಕ್ಕಳು ಸಹಿತ ಒಂದು ಲಕ್ಷ ರೂಪಾಯಿ ಯುಜಿಸಿ ಸಂಬಳ ತೆಗೆದುಕೊಂಡ್ರ ಸಹಿತ, ಅದರ ಮೇಲೆ ಅವಳದು ಎಷ್ಟು ಅಧಿಕಾರ ಇರ್ತದ? ನೀವು ಅವರನ್ನು ಕೇಳಬಹುದು, ಆ ಮಾತು ಬೇರೆ. ನಮ್ಮ ಹೆಣ್ಣುಮಕ್ಕಳನ್ನು ಮನೆಯ ಒಳಗೂ ಹೊರಗೂ ಪುಕ್ಸಟೆ ದುಡಿಸಿಕೊಳ್ಳಲು ಬೇಕಾದಂತಹ ವ್ಯವಸ್ಥೆ ನಮ್ಮ ಸಮಾಜದ್ದು ಅದಲ್ಲ ಅದನ್ನು ಗಮನಿಸಲು ನಮಗ ಸಾಧ್ಯವಾಗಬೇಕು. ಮತ್ತೆ ಹಿಂಗೇನೆ ಅಂಗನವಾಡಿ, ಬಿಸಿಯೂಟ, ಇಟ್ಟಿಗೆ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುವವರು, ಗಾರ್ಮೆಂಟ್‍ನಲ್ಲಿ ಕೆಲಸ ಮಾಡುವವರು, ಬೇರೆ ಬೇರೆ ರೀತಿ (ಇತ್ತೀಚಿನ ಹತ್ತು ವರ್ಷಗಳಿಂದ) ಹಳ್ಳಿಗಳಿಂದ ನಗರಕ್ಕೆ ವಲಸೆ ಶುರುವಾಗಿಬಿಟ್ಟಿದೆ. ಈ ವಲಸೆ ಬರುವ ಸಂಖ್ಯೆ ಬಹಳ ದೊಡ್ಡದಾಗಿದೆ. ದಲಿತ ಮಹಿಳೆಯರ ಸಂಖ್ಯೆಯೂ ಅಷ್ಟೇ ದೊಡ್ಡ ರೀತಿಯಲ್ಲಿ ಅಗಿದೆ. ಸಣ್ಣ ರೈತರು, ಬಡ ರೈತರು, ಸಾಮಾನ್ಯ ರೈತರು, ಕೃಷಿ ಕೂಲಿ ಕಾರ್ಮಿಕರು ಇವರೆಲ್ಲರೂ ಪಟ್ಟಣಕ್ಕೆ ಬರಲು ಶುರುಮಾಡಿದ್ದಾರೆ.

ಎಲ್ಲಿ ಒಂದು ಆರ್ಥಿಕ ಅಸಮಾನತೆ ಉಂಟಾಗುತ್ತದೋ ಎಲ್ಲಿ ಸಂಪತ್ತು ಒಂದು ಕಡೆ ಕ್ರೋಢೀಕರಣವಾಗಿ ಬಡತನ ಜಾಸ್ತಿಯಾಗುತ್ತೋ ಅಲ್ಲಿ ವಿಚಿತ್ರವಾದ, ವಿಕಾರವಾದ ಎಲ್ಲ ರೀತಿಯ ಕ್ರೌರ್ಯ ತಲೆದೋರುತ್ತ ಅನ್ನೋದನ್ನು ಗಮನಿಸಲಿಕ್ಕೆ ನಮಗೆ ಸಾಧ್ಯವಾಗಬೇಕು. ಹಾಗಾಗಿ ಇವತ್ತು ನಗರದೊಳಗೆ ಹೆಣ್ಣುಮಕ್ಕಳನ್ನು ಅವಳ ಶರೀರ, ಅವಳ ಮನಸ್ಸು, ಅವಳ ಶ್ರಮ ಎಲ್ಲವನ್ನು ಸಹಿತ ಪುಕ್ಸಟೆಯಾಗಿ ದುಡಿಸಿಕೊಳ್ಳಲು ಬೇಕಾದ ಫ್ಲೆಕ್ಸಿಬಲ್ ರೀವರ್ ರೀತಿಯಲ್ಲಿ ದುಡಿಸಿಕೊಳ್ಳಲು ಬೇಕಾದಂತಹ ಕಾನೂನು ಸರ್ಕಾರದಿಂದ ಆಗಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯೆನ್ನುವುದು ಮಹಿಳೆಯ ಅಸ್ಮಿತೆ, ಸ್ವಾಭಿಮಾನ, ವಿಮೋಚನೆಯ ಹಕ್ಕಿಗಾಗಿ ನಮ್ಮ ಚಳವಳಿಯನ್ನು ತೀವ್ರಗೊಳಿಸಬೇಕಾಗಿದೆ. ಮಹಿಳೆಯರು ಒಂದು ವರ್ಗದ ದಾಳಿಯಿಂದ, ಜಾತಿಯ ದಾಳಿಯಿಂದ ಕಷ್ಟಪಡುತ್ತಿರುವ ಈ ಸಂದರ್ಭದೊಳಗೆ ನಾವು ಮಹಿಳಾ ಚಳುವಳಿಯನ್ನು ತೀವ್ರಗೊಳಿಸಬೇಕು ಅನ್ನುವ ಮಾತನ್ನು ಹೇಳುತ್ತಾ, ಈ ಚಳುವಳಿಗೆ ಹೆಗಲು ಕೊಟ್ಟಂತಹ ಇಲ್ಲಿ ಸೇರಿದಂತಹ ನಿಮಗೆಲ್ಲರಿಗೂ ವಂದಿಸುತ್ತೇನೆ. 

No comments:

Post a Comment