Mar 25, 2015

ದಲಿತ ಕೂಲಿಗಳ ಶಿರಚ್ಛೇಧ ಪ್ರಕರಣ : ದಿಕ್ಕುತಪ್ಪಿಸುವ ಯತ್ನ?

dalits beheaded in chamrajnagar
ರಘೋತ್ತಮ ಹೊ.ಬರವರ ಫೇಸ್‍ಬುಕ್ ಪುಟದಿಂದ

ಡಿ.ಕೆ.ರವಿ ಸಾವಿನ ಪ್ರಕರಣದ ನಡುವೆಯೇ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಬರ್ಬರ ಕೃತ್ಯವೊಂದು ನಡೆದುಹೋಗಿದೆ. ಕಳೆದ ಗುರುವಾರ ಮಾರ್ಚಿ 19, ಚಾಮರಾಜನಗರ ತಾಲ್ಲೂಕಿನ ಸಂತೆಮರಹಳ್ಳಿಯಲ್ಲಿ ತೋಟವೊಂದಕ್ಕೆ ಕೂಲಿಗೆಂದು ಹೋಗಿದ್ದ ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ಕೂಲಿಗಳನ್ನು ಆ ತೋಟದ ಮಾಲೀಕನೇ ಶಿರಚ್ಛೇಧಗೈದಿದ್ದಾನೆ. ನಿಜಕ್ಕೂ ಈ ಘಟನೆ ಹೈಟೆಕ್ ಯುಗದಲ್ಲೂ ದಲಿತರ ಸ್ಥಿತಿ ಯಾವ ಪರಿ ದಾರುಣವಾಗಿದೆ ಎಂಬುದನ್ನು ಜಗಜ್ಜಾಹೀರುಗೊಳಿಸಿದೆ ಹಾಗೆಯೇ ಕೊಂದ ಆ ಸವರ್ಣೀಯನ ಕ್ರೌರ್ಯವನ್ನೂ ಕೂಡ.
ಘಟನೆಯ ಭೀಭತ್ಸತೆಯನ್ನೇ ದಾಖಲಿಸುವುದಾದರೆ ಬಲಿಯಾದ ದಲಿತ ಕೂಲಿಗಳಾದ ಸಂತೆಮರಹಳ್ಳಿ ಸಮೀಪದ ಕಾವುದವಾಡಿ ಗ್ರಾಮದ ನಂಜಯ್ಯ (50) ಬಿನ್ ಮರಸಯ್ಯ, ದೇಶವಳ್ಳಿ ಗ್ರಾಮದ ಕೃಷ್ಣಯ್ಯ(60) ಬಿನ್ ನಂಜಯ್ಯ ಅಂದು ಅದೇ ಸಂತೇಮರಹಳ್ಳಿ ಸಮೀಪದ ದೇಶವಳ್ಳಿ ಗ್ರಾಮದ ಆರೋಪಿ ಮಹದೇವ(38) ಬಿನ್ ಶಿವಪ್ಪನವರ ಬಾಳೆ ತೋಟಕ್ಕೆ ಕೂಲಿಗೆಂದು ಆಗಮಿಸಿದ್ದಾರೆ. ಕೂಲಿಗೆಂದು ಇವರನ್ನು ಕರೆತಂದದ್ದು ಆರೋಪಿಯ ಅಣ್ಣ ನಾಗಪ್ಪ. ನಾಗಪ್ಪ ಕೂಲಿಯಾಳುಗಳಿಗೆಂದು ಟೀ ತರಲು ಹೋಗಿದ್ದಾಗ ಮಹದೇವ ಜಮೀನಿಗೆ ಆಗಮಿಸಿದ್ದಾನೆ ಹಾಗೆಯೇ ದಲಿತ ಕೂಲಿಗಳಿಗೆ ಆತ ಇಂತಿಂಥ ಕೆಲಸ ಮಾಡಿ ಎಂದು ತಾಕೀತುಮಾಡಿದ್ದಾನೆ. ಪರಿಣಾಮ ಮಾತಿಗೆ ಮಾತು ಬೆಳೆದು ಆರೋಪಿ ಮಹದೇವ ತನ್ನ ಕೈಯಲ್ಲಿದ್ದ ಮಚ್ಚಿನಿಂದ ಒಬ್ಬ ಕೂಲಿಯವನಿಗೆ ಬಲವಾಗಿ ಹೊಡೆದಿದ್ದಾನೆ ತಡೆಯಲು ಬಂದ ಮತ್ತೊಬ್ಬನಿಗೂ ಆತ ಮಚ್ಚು ಬೀಸಿದ್ದಾನೆ. ಪೊಲೀಸರ ಪ್ರಕಾರ ಮಚ್ಚು ಹರಿತವಿದ್ದರಿಂದ ಒಮ್ಮೆಯೇ ಆ ಇಬ್ಬರು ದಲಿತ ಕೂಲಿಗಳ ಶಿರಚ್ಛೇಧನವಾಗಿದೆ.

ದುರಂತವೆಂದರೆ ಇಲ್ಲಿ ಕಗ್ಗೊಲೆ ನಡೆದಿರುವುದಲ್ಲ, ಆದರೆ ಆ ಕಗ್ಗೊಲೆಯನ್ನು ದಿಕ್ಕುತಪ್ಪಿಸುವ ಯತ್ನ ನಡೆದಿರುವುದು. ಹೇಗೆಂದರೆ ಸವರ್ಣೀಯ ಸಮುದಾಯಕ್ಕೆ ಸೇರಿದ ಆ ಕೊಲೆಗಾರ ಮಹದೇವನನ್ನು ಮಾನಸಿಕ ಅಸ್ವಸ್ಥನೆಂದು ಬಿಂಬಿಸಲಾಗುತ್ತಿದೆ! ಆ ಮೂಲಕ ಆತನನ್ನು ರಕ್ಷಿಸುವ, ಆತನಿಗೆ ವಿಧಿಸಲ್ಪಡುವ ಶಿಕ್ಷೆಯನ್ನು ತಗ್ಗಿಸುವ ಕುತಂತ್ರ ಎಗ್ಗಿಲ್ಲದೆ ನಡೆದಿದೆ. ಯಾವ ಪರಿ ಎಂದರೆ ಮಾರನೇ ದಿನದ ಸ್ಥಳೀಯ ಪತ್ರಿಕೆಗಳ ವರದಿಯಂತೆ ದಲಿತ ಕೂಲಿಗಳನ್ನು ಹೀಗೆ ಬರ್ಬರವಾಗಿ ಕೊಂದ “ಆರೋಪಿ ಮಾನಸಿಕ ಅಸ್ವಸ್ಥನೇ?” ಎಂದು ಪೊಲೀಸರ ಕೈಯಲ್ಲಿ ಹೇಳಿಸಲಾಗುತ್ತದೆಯೆಂದರೆ... ಅದನ್ನು ತನಿಖೆಯನ್ನು ಹಳ್ಳಹಿಡಿಸುವ ಹಾದಿಯೆನ್ನದೆ ಬೇರೇನೆನ್ನಬಹುದು? ಇನ್ನು ಸಮೂಹ ಮಾಧ್ಯಮಗಳಲ್ಲಿ ಈ ಸಂಬಂಧ ಆರೋಪಿ ಮಹದೇವನಿಗೆ ‘ಸ್ಪ್ಲಿಟ್ ಪರ್ಸನಾಲಿಟಿ’ ಇತ್ತು, ‘ಬೈಪೋಲಾರ್ ಡಿಸೀಸ್’ ಇತ್ತು, ‘ಅನ್ನಿಯನ್’ ಚಿತ್ರದ ನಾಯಕನಿಗೆ ಇದ್ದಂತಹ ಕಾಯಿಲೆ ಇತ್ತು ಎಂಬ ವ್ಯವಸ್ಥಿತ ಪ್ರಚಾರ! ಆದರೆ ವಾಸ್ತವ? ಆತ ಮಾಡಿದ ದಲಿತರ ಕಗ್ಗೊಲೆ? ದಲಿತ ಕಾರ್ಮಿಕರ ಆ ರುಂಡಗಳನ್ನು ಕತ್ತರಿಸಿ ಅವುಗಳನ್ನು ಪ್ಲಾಸ್ಟಿಕ್ ಚೀಲವೊಂದರಲ್ಲಿಟ್ಟು ರುಂಡವೊಂದೆಡೆ ಮುಂಡವೊಂದೆಡೆ ಎಂಬಂತೆ ಅವುಗಳನ್ನು ಅಡಗಿಸಿ ಇಟ್ಟ ಆತನ ಕ್ರೂರತನ? ಅದಕ್ಕೆ ಬಲಿಯಾದ ದಲಿತ ಕೂಲಿಗಳ ದುರಂತ ಅಂತ್ಯ? ಆ ಕುಟುಂಬಗಳ ಆಕ್ರಂಧನ?

ಖಂಡಿತ, ಸದರಿ ದಲಿತ ಕೂಲಿಗಳ ಈ ಹತ್ಯೆಯನ್ನು ಅವರೆಡೆಗಿನ ವ್ಯವಸ್ಥೆಯ ನಿರ್ಲಕ್ಷ್ಯವನ್ನು ನಾವು ಡಿ.ಕೆ.ರವಿಯವರ ಪ್ರಕರಣದೊಡನೆ ಹೋಲಿಸಬಹುದು. ಡಿ.ಕೆ.ರವಿ ಮೇಲ್ವರ್ಗದವರು ಅವರ ಸಾವಿಗೆ ಇಡೀ ವ್ಯವಸ್ಥೆಯೇ ದನಿ ಎತ್ತರಿಸುತ್ತದೆ. ಆದರೆ ದಲಿತರ ಸಾವು? ದಲಿತ ಕೂಲಿಗಳಿಬ್ಬರ ದಾರುಣ ಹತ್ಯೆ? ವ್ಯವಸ್ಥೆ ಅವರ ಪರ ದನಿ ಇರಲಿ, ಕಾನೂನು ಮತ್ತು ನ್ಯಾಯವೇ ಅವರ ಪರ ಇರದಂತೆ ನೋಡಕೊಳ್ಳಲೆತ್ನಿಸುತ್ತದೆ! ಇದನ್ನು ತಮಾಷೆಗೆ ಹೇಳುತ್ತಿಲ್ಲ. ಹದಿನೈದು ವರ್ಷಗಳ ಹಿಂದೆ(2000) ಇದೇ ಮಾರ್ಚ್ ತಿಂಗಳ ಸಮಯದಲ್ಲಿ ಕೋಲಾರ ಜಿಲ್ಲೆಯ ಕಂಬಾಲಪಲ್ಲಿ ಎಂಬ ಗ್ರಾಮದಲ್ಲಿ ಸಾರ್ವಜನಿಕರ ಸಮ್ಮುಖದಲ್ಲೇ 7 ಜನ ದಲಿತರನ್ನು ಮನೆಯೊಂದಕ್ಕೆ ಕೂಡಿಹಾಕಿ ಹಾಡಹಗಲೇ ಭಸ್ಮಮಾಡಲಾಯಿತು. ದುರಂತವೆಂದರೆ ಕಳೆದ ವರ್ಷ ಸದರಿ ಕಂಬಾಲಪಲ್ಲಿಯ ಆರೋಪಿಗಳು ಹೈಕೋರ್ಟ್ ತೀರ್ಪೊಂದರಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಮುಕ್ತರಾಗಿ ಹೊರಬಂದಿದ್ದಾರೆ. ಇನ್ನು ಬಿಹಾರದ ಲಕ್ಮಣ್ ಪುರ್‍ಬಾಥೆ ಘಟನೆ ಇಲ್ಲಿ ದಾಖಲಿಸುವುದಾದರೆ 1997ರ ಡಿಸೆಂಬರ್ 1ರ ಮಧ್ಯರಾತ್ರಿ 11 ಗಂಟೆಯಲ್ಲಿ ರಣವೀರ ಸೇನೆ ಎಂಬ ಮೇಲ್ಜಾತಿ ಭೂಮಿಹಾರ್ ಸಮುದಾಯದ ದೌರ್ಜನ್ಯಕೋರ ಗುಂಪು 27 ಮಹಿಳೆಯರು, 16 ಮಕ್ಕಳನ್ನೂ ಒಳಗೊಂಡಂತೆ ಲಕ್ಷ್ಮಣ್‍ಪುರ್‍ಬಾಥೆ ಗ್ರಾಮದ 58 ದಲಿತರನ್ನು ಸಾಮೂಹಿಕವಾಗಿ ಕೊಂದಿತ್ತು. ಅಂದಹಾಗೆ ಅಂತಹ ಗುಂಪುಕೊಲೆಯಲ್ಲಿ ಒಂದು ವರ್ಷದ ಹಾಲುಗಲ್ಲದ ಕಂದನೂ ಇತ್ತೆಂದರೆ ಹಂತಕರಿಗೆ ನೀಡಬಹುದಾದ ಶಿಕ್ಷೆಯ ಪ್ರಮಾಣವನ್ನು ಎಂಥವರಾದರೂ ಊಹಿಸಬಹುದು. ದುಂರಂತವೆಂದರೆ 2013 ಅಕ್ಟೋಬರ್ 9ರಂದು ನೀಡಿದ ತೀರ್ಪಿನಲ್ಲಿ ಪಾಟ್ನಾ ಉಚ್ಛ ನ್ಯಾಯಾಲಯ ಲಕ್ಷ್ಮಣ್‍ಪುರ್ ಬಾಥೆ ಹತ್ಯಾಕಾಂಡದ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿತು! ಇಲ್ಲಿಯೂ ಅಷ್ಟೆ ನ್ಯಾಯಾಲಯ ಹೇಳಿದ್ದು ಸಾಕ್ಷ್ಯಾಧಾರಗಳ ಕೊರತೆ ಎಂದು. ಇನ್ನು ಸ್ವತಂತ್ರ ಭಾರತದಲ್ಲೇ ಅತಿ ಭಯಂಕರ ಎನಿಸುವ ಮಹಾರಾಷ್ಟ್ರದ ಖೈರ್ಲಾಂಜಿ ಘಟನೆಯೂ ಕೂಡ ಇಲ್ಲಿ ಉಲ್ಲೇಖನೀಯ. 2006 ಸೆಪ್ಟೆಂಬರ್ 29 ರಂದು ಖೈರ್ಲಾಂಜಿಯಲ್ಲಿ ದಲಿತ ಕುಟುಂಬದ ನಾಲ್ವರನ್ನು ಊರ ತುಂಬಾ ಅಟ್ಟಾಡಿಸಿದ ಸವರ್ಣೀಯರ ಗುಂಪು ಆ ನಾಲ್ವರನ್ನು ಬಹಿರಂಗವಾಗಿ ಕೊಲೆಗೈದಿತ್ತು. ಹಾಗೇ ಕೊಲೆಗೂ ಮುನ್ನ ಹತ ಆ ಕುಟುಂಬದ ಪ್ರಿಯಾಂಕ ಭೂತ್‍ಮಾಂಗೆ ಎಂಬ ಹೆಣ್ಣುಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಕೂಡ ನಡೆದಿತ್ತು. ದುರಂತವೆಂದರೆ ಇಲ್ಲಿಯೂ ಇಷ್ಟೆ ಕೆಳ ಹಂತದ ನ್ಯಾಯಾಲಯವೊಂದು ಆರೋಪಿಗಳಿಗೆ ಮರಣದಂಡನೆ ವಿಧಿಸಿದ್ದರೆ ನಾಗಪುರದ ಹೈಕೋರ್ಟ್ ಪೀಠ 2010 ಜುಲೈ 12ರಂದು ತೀರ್ಪು ನೀಡಿ ಖೈರ್ಲಾಂಜಿ ಆ ಆರೋಪಿಗಳ ಮರಣದಂಡನೆಯನ್ನು ರದ್ದುಗೊಳಿಸಿ ಶಿಕ್ಷೆಯನ್ನು ಜೀವಾವಧಿಗಿಳಿಸಿತು. ಒಟ್ಟಾರೆ ಹೇಳುವುದಾದರೆ ದಲಿತರ ಹತ್ಯಾಕಾಂಡದ ಬಹುತೇಕ ಪ್ರಕರಣಗಳಲ್ಲಿ ದಲಿತರಿಗೆ ನ್ಯಾಯ ದೊರಕಿಲ್ಲ.

ದುರಂತವೆಂದರೆ ಸಂತೇಮರಹಳ್ಳಿಯ ಸದ್ಯದ ದಲಿತರ ಶಿರಚ್ಛೇಧನ ಪ್ರಕರಣ? ಆರೋಪಿಗೆ ಮಾನಸಿಕ ಅಸ್ವಸ್ಥ ಪಟ್ಟಕಟ್ಟುವ ಹುನ್ನಾರ ನಡೆದಿದೆಯೆಂದರೆ ಇದೂ ಕೂಡ ಕಂಬಾಲಪಲ್ಲಿಯ ಹಾಗೆ ಹಳ್ಳ ಹಿಡಿಯುವ ಸಾಧ್ಯತೆಯಿದೆ. ಅಂದಹಾಗೆ ಘಟನೆ ನಡೆದ ಒಂದೆರಡು ದಿನದ ನಂತರ ಕೇಳಿಬರುತ್ತಿರುವ ಮಾತೆಂದರೆ ಇದೊಂದು ನರಬಲಿ ಯಾಗಿರುವ ಸಾಧ್ಯತೆ ಇದೆ ಎಂದು! ಯಾಕೆಂದರೆ ಘಟನಾ ಸ್ಥಳದ ಪಕ್ಕದಲ್ಲೇ ಹೊಸದೊಂದು ಕಲ್ಯಾಣಮಂಟಪ ನಿರ್ಮಾಣವಾಗಿದೆ. ಅದಕ್ಕಾಗಿ ಈ ಬಲಿ ನಡೆದಿದೆ ಎಂದು. ಹಾಗೆಯೇ ಹತರಾದ ಈರ್ವರನ್ನು ಓರ್ವನೇ ಕೊಂದಿದ್ದಾನೆ ಎಂಬುದನ್ನೂ ಕೂಡ ನಂಬುವುದು ಕಷ್ಟ ಮತ್ತು ಆರೋಪಿ ಮತ್ತು ಹತರಾದ ಕೂಲಿಗಳ ನಡುವೆ ಹಳೆಯ ದ್ವೇಷವಾಗಲೀ ಮತ್ತೊಂದಾಗಲೀ ಇರಲಿಲ್ಲ! ಖಂಡಿತ ಇದರ ಹಿಂದೆ ಒಂದು ತಂಡ, ಮತ್ತು ಒಂದು ಸಂಚು ಇದ್ದೇ ಇರುವಂತೆ ಕಾಣುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಸಂತೇಮರಹಳ್ಳಿಯಲ್ಲಿ ಸದ್ಯ ನಡೆದಿರುವ ದಲಿತ ಕೂಲಿಗಳಿಬ್ಬರ ಅಮಾನುಷ ಹತ್ಯೆಯನ್ನು ಅದು ಸಿಐಡಿಗೆ ವಹಿಸಿ ಘಟನೆಯ ಹಿನ್ನೆಲೆಯನ್ನು ಪತ್ತೆ ಹಚ್ಚಿ ಎಲ್ಲಾ ಸಂಚುಕೋರರನ್ನು ಬಂಧಿಸಲಿ. ತನ್ಮೂಲಕ ಅಮಾನುಷ ಈ ಹತ್ಯೆಯಲ್ಲಿ ದಲಿತರಿಗೆ ನ್ಯಾಯ ದೊರಕಿಸಿಕೊಡಲಿ.

No comments:

Post a Comment