Jan 22, 2015

ಅಭಿವ್ಯಕ್ತಿ ಸ್ವಾತಂತ್ರ್ಯವೂ ಉಡಾಫೆಯ ಸ್ವೇಚ್ಛಾಚಾರವೂ

dinesh amin mattu
ದಿನೇಶ್ ಅಮೀನ್
Dr Ashok K R
ಫ್ರಾನ್ಸಿನ ವಿಡಂಬನಾತ್ಮಕ ವಾರಪತ್ರಿಕೆ 'ಚಾರ್ಲಿ ಹೆಬ್ಡೋ' ಕಛೇರಿಯ ಮೇಲೆ ಶಸ್ತ್ರಸಜ್ಜಿತ ಮುಸ್ಲಿಂ ಮೂಲಭೂತವಾದಿ ಉಗ್ರರು ಪೈಶಾಚಿಕ ದಾಳಿ ನಡೆಸಿದ್ದಾರೆ. ಪತ್ರಿಕೆಯ ಮುಖ್ಯ ಸಂಪಾದಕ, ನಾಲ್ವರು ಕಾರ್ಟೂನಿಷ್ಟರು, ಇಬ್ಬರು ಪೋಲೀಸರು ಸೇರಿದಂತೆ ಹನ್ನೆರಡು ಮಂದಿ ಹತರಾಗಿದ್ದಾರೆ. ಬಹಳಷ್ಟು ಜನರಿಗೆ ಮಾರಣಾಂತಿಕ ಗಾಯಗಳಾಗಿವೆ. ಶಾರುಖ್ ಖಾನ್ ಸಂದರ್ಶನವೊಂದರಲ್ಲಿ ಎರಡು ಇಸ್ಲಾಂ ಅಸ್ತಿತ್ವದಲ್ಲಿದೆ, ಒಂದು ಅಲ್ಲಾ ಇಸ್ಲಾಂ ಮತ್ತೊಂದು ಮುಲ್ಲಾ ಇಸ್ಲಾಂ ಎಂದು ಹೇಳಿದ್ದರು. ಆಲ್ ಖೈದಾದ ಪತನದ ನಂತರ ಹುಟ್ಟಿಕೊಂಡಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೈತಾನರ ಇಸ್ಲಾಂ ಎಂಬ ಹೊಸ ಇಸ್ಲಾಮನ್ನು ಸೃಷ್ಟಿಸಿದೆಯಾ? ಇಸ್ಲಾಮಿಕ್ ಸ್ಟೇಟ್ ಸಂಘಟನೆ ಮತ್ತದರ ಬೆಂಬಲಿಗರು ನಡೆಸುತ್ತಿರುವ ದುಷ್ಕೃತ್ಯಗಳು ಹೌದೆನ್ನುತ್ತಿವೆಉಗ್ರರ ಈ ದುಷ್ಕೃತ್ಯ ‘ಅಭಿವ್ಯಕ್ತಿ ಸ್ವಾತಂತ್ರ್ಯದ’ ಬಗ್ಗೆ ಮತ್ತಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಇದೇ ಸಂದರ್ಭದಲ್ಲಿ ತಮಿಳುನಾಡಿನ ಪೆರುಮಾಳ್ ಮುರುಗನ್ ಎಂಬ ಕಾದಂಬರಿಕಾರ – ಲೇಖಕ ಹಿಂದೂ ಮೂಲಭೂತವಾದಿಗಳ ನಿರಂತರ ಕಿರುಕುಳದಿಂದ ನೊಂದು ನನ್ನೊಳಗಿನ ಲೇಖಕ ಸತ್ತಿದ್ದಾನೆ ಎಂದು ಘೋಷಿಸಿದ್ದಾರೆ. ನಿಲುಮೆಯೆಂಬ ಫೇಸ್ ಬುಕ್ಕಿನ ಗುಂಪಿನಲ್ಲಿ ಅನೇಕ ನೆಟ್ಟಿಗರು ಸತತವಾಗಿ ಅವಹೇಳನಕಾರಿ ಭಾಷೆಯನ್ನು ಬಳಸಿ ಟೀಕಿಸಿದ್ದರಿಂದ ಬೇಸರಗೊಂಡು ದಿನೇಶ್ ಅಮೀನ್ ಮಟ್ಟು ಐಟಿ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ. ಹಿಂದೂವಾದದಿಂದ ಪ್ರಭಾವಿತರಾದವರು ಈ ಅಶ್ಲೀಲ ಭಾಷೆಗೂ ಅಭಿವ್ಯಕ್ತಿ ಸ್ವಾತಂತ್ರ್ಯದಡಿಯಲ್ಲಿ ತಾವು ಕೊಡಲು ಪ್ರಯತ್ನಿಸುತ್ತಿರುವ ದಿನಮಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಉಡಾಫೆಯ ಸ್ವೇಚ್ಛಾಚಾರದ ನಡುವಿನ ತೆಳುವಾದ ಗೆರೆಯನ್ನು ಗುರುತಿಸುವ ಕೆಲಸ ಕಷ್ಟಕರವಾಗಿ ಪರಿಣಮಿಸುತ್ತಿದೆ.

ಚಾರ್ಲಿ ಹೆಬ್ಡೋ ಪತ್ರಿಕೆ ಇಂದು ನಿನ್ನೆಯದಲ್ಲ, 1969ರಲ್ಲೇ ಶುರುವಾದ ಪತ್ರಿಕೆಗೆ ಮೊದಲಿದ್ದ ಹೆಸರು ಹರಾ - ಕಿರಿ. ಮೊದಲಿನಿಂದಲೂ ವಿಡಂಬನಾತ್ಮಕವಾಗಿದ್ದ ಪತ್ರಿಕೆ ಧಾರ್ಮಿಕ ಮೂಲಭೂತವಾದಿಗಳಿಗೆ ಹೋಲಿಸಿದರೆ ವಿಡಂಬನೆಯಲ್ಲಿ ಮೂಲಭೂತವಾದಿತನದಿಂದ ಕೆಲಸ ಮಾಡುತ್ತಿತ್ತೆಂದು ಅದರ ವಿರುದ್ಧ ಇದ್ದ ಆರೋಪ. ಫ್ರಾನ್ಸಿನ ಪ್ರಧಾನಿಯೊಬ್ಬರ ಬಗ್ಗೆ ಬರೆದ ಕೀಳು ಅಭಿರುಚಿಯ ವಿಡಂಬನೆಯಿಂದಾಗಿ ಪತ್ರಿಕೆಯ ಮೇಲೆ ನಿಷೇಧ ಹೇರಲಾಗಿತ್ತು. ನಂತರದಲ್ಲಿ ಅದೇ ತಂಡ ಚಾರ್ಲಿ ಹೆಬ್ಡೋ ಹೆಸರಿನಲ್ಲಿ ಹೊಸ ಪತ್ರಿಕೆ ಪ್ರಾರಂಬಿಸಿತು. ಧಾರ್ಮಿಕ ಮುಖಂಡರು ಅದರ ಗುರಿಯಾಗಿದ್ದು ಹೌದು. ಪೋಪ್, ಜೀಸಸ್, ಪ್ರವಾದಿ ಮೊಹಮ್ಮದ್ ಬಗೆಗೆ ವಿಡಂಬನಾತ್ಮಕ ಕಾರ್ಟೂನುಗಳನ್ನು ಬರೆದು ಬರೆದೇ ಹೆಸರು ಮಾಡಿತು ಚಾರ್ಲಿ ಹೆಬ್ಡೋ. ಮುಸ್ಲಿಂ ಮೂಲಭೂತವಾದತನ ಹೆಚ್ಚುವುದಕ್ಕೂ ಚಾರ್ಲಿ ಹೆಬ್ಡೋ ಪ್ರಸಿದ್ಧಿಯಾಗುವುದಕ್ಕೂ ಹತ್ತಿರದ ಸಂಬಂಧವಿದೆ! ಚಾರ್ಲಿ ಹೆಬ್ಡೋದಲ್ಲಿ ಪ್ರಕಟವಾಗುತ್ತಿದ್ದ ವಿಡಂಬನಾತ್ಮಕ ಕಾರ್ಟೂನುಗಳು ಕೂಡ ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಹಿಂಸಾ ಪ್ರವೃತ್ತಿ ಮೂಡಿಸುವುದಕ್ಕೆ ಮೂಲಭೂತವಾದಿಗಳು ಯಶ ಕಂಡರು. ಹಿಂದೊಮ್ಮೆ ಪತ್ರಿಕಾ ಕಛೇರಿಯ ಮೇಲೆ ದಾಳಿ ನಡೆಸಿದಾಗಲೂ ಹಿಂಜರಿಯಲಿಲ್ಲ ಚಾರ್ಲಿ ಹೆಬ್ಡೋ. ದಾಳಿಯ ಬಗ್ಗೆಯೂ ವಿಡಂಬನೆ ಮಾಡಿಕೊಂಡಿದ್ದರು! ನಮ್ಮದಷ್ಟೇ ಶ್ರೇಷ್ಟ ಉಳಿದುದೆಲ್ಲಾ ಕನಿಷ್ಟವೆಂಬ ಮುಸ್ಲಿಂ ಮೂಲಭೂತವಾದಿಗಳ ಸಂಕುಚಿತ ದೃಷ್ಟಿಗೆ ವಿಡಂಬನೆಗಳನ್ನು ಎದುರಿಸಬೇಕಾದ ರೀತಿಯೇನು ಎನ್ನುವುದಕ್ಕೆ ಉತ್ತರವಾಗಿ ಕಂಡಿದ್ದು ಬಂದೂಕುಗಳೇ ಇರಬೇಕು.

ಒಂದು ವರದಿಯ ಪ್ರಕಾರ ಚಾರ್ಲಿ ಹೆಬ್ಡೋದ ಪ್ರಸಾರ ಅರವತ್ತು ಸಾವಿರದಿಂದ ಒಂದು ಲಕ್ಷದವರೆಗೆ ಇರುತ್ತಿತ್ತು. ವಿವಾದಿತ ಕಾರ್ಟೂನುಗಳಿದ್ದಾಗ ಒಂದೂವರೆ ಲಕ್ಷದಷ್ಟಿರುತ್ತಿತ್ತಂತೆ. ಇಷ್ಟು ಪ್ರಸಾರದ ಪತ್ರಿಕೆಯಲ್ಲಿ ತಮ್ಮ ಧಾರ್ಮಿಕ ಗುರುಗಳ ಬಗ್ಗೆ ಬರುವ ಕಾರ್ಟೂನುಗಳ ಬಗೆಗಿನ ಅಸಹನೆ ವ್ಯಕ್ತಪಡಿಸಲು ಮೂಲಭೂತವಾದಿಗಳು ಆರಿಸಿಕೊಂಡ ದಾರಿ ಏನನ್ನು ಸೂಚಿಸುತ್ತಿದೆ? ನಮ್ಮ ಧರ್ಮದ ಮೇಲೆ, ನಾವು (ಪಾ)ರ್ಥಿಸಿಕೊಂಡ ಧರ್ಮದ ಬಗ್ಗೆ ಯಾವ ದೇಶದವರೂ ಸೊಲ್ಲೆತ್ತುವಂತಿಲ್ಲ, ಸೊಲ್ಲೆತ್ತಿದರೆ ಅವರಿಗೆ ಚಾರ್ಲಿ ಹೆಬ್ಡೋ ತಂಡದವರಿಗೆ ಆದ ಗತಿಯೇ ಕಾದಿದೆ ಎನ್ನುವ ಸೂಚನೆ ಕೊಡುತ್ತಿದ್ದಾರಾ? ಮೊದಲೇ ಹಬ್ಬಿ ನಿಂತಿರುವ ಇಸ್ಲಾಮೋಫೋಬಿಯಾಕ್ಕೆ ಮೂಲಭೂತವಾದಿಗಳು ಮತ್ತಷ್ಟು ನೀರೆರೆಯುತ್ತಿದ್ದಾರೆ. ಬಂಡವಾಳಶಾಹಿಗಳ ಸ್ವಾರ್ಥಕ್ಕೆ ಮುಸ್ಲಿಂ ಮೂಲಭೂತವಾದಿಗಳು ಬಲಿಯಾಗುತ್ತಿದ್ದಾರೆ, ಇಸ್ಲಾಂ ಬಾಹುಳ್ಯದ ರಾಷ್ಟ್ರಗಳಲ್ಲಿ ಹಿಂಸೆ ತಾಂಡವವಾಡುತ್ತಿದೆ ಎಂದು ಅನುಕಂಪ ತೋರುತ್ತಿದ್ದ ಜನರನ್ನೂ ತರಹದ ಘಟನೆಗಳು ದೂರ ಮಾಡುತ್ತವೆ. ಮುಸ್ಲಿಂ ಮೂಲಭೂತವಾದಿಗಳಿಗೂ ಬೇಕಿರುವುದು ಅದೇ. ಇಸ್ಲಾಮೋಫೋಬಿಯಾ ಹೆಚ್ಚಿದಷ್ಟೂ ಮೂಲಭೂತವಾದವನ್ನು ಬೆಂಬಲಿಸುವವರ ಸಂಖೈಯಲ್ಲಿ ಹೆಚ್ಚಳವಾಗುತ್ತದೆಂಬ ಸತ್ಯದ ಅರಿವಾಗಿಬಿಟ್ಟಿದೆ ಅವರಿಗೆ. ಸ್ಥಳೀಯ ಕಾನೂನುಗಳಿಗಿಂತ ಧಾರ್ಮಿಕ ಶೃದ್ಧೆಗಳೆಡೆಗೆ ಜನರು ನಿಷ್ಠರಾಗಿಬಿಟ್ಟಾಗ ರೀತಿಯ ಅನಾಚಾರಗಳು ನಡೆಯುತ್ತವೆ

ಒಂದು ಧರ್ಮದ ಅನುಯಾಯಿಗಳನ್ನು ನೋಯಿಸುವಂತಹ ವ್ಯಂಗ್ಯಚಿತ್ರಗಳನ್ನು ಬರೆಯುವುದು ‘ಅಭಿವ್ಯಕ್ತಿ ಸ್ವಾತಂತ್ರ್ಯ’ವಾ? ಎಂಬ ಪ್ರಶ್ನೆ ಕೇಳಿಬರುತ್ತಿದೆ. ಪತ್ರಕರ್ತ ಬಿ.ಎಂ.ಬಷೀರ್‍ ನೇರವಾಗಿ ಉಗ್ರರದೂ ತಪ್ಪು ಚಾರ್ಲಿ ಹೆಬ್ಡೋ ಪತ್ರಿಕೆಯವರದೂ ತಪ್ಪು ಎಂದು ಇಬ್ಬರನ್ನೂ ಒಂದೇ ತಕ್ಕಡಿಗೆ ಹಾಕಿ ತೂಗಿಬಿಡುತ್ತಾರೆ. ಇಬ್ಬರಿಂದಲೂ ವರ್ತಮಾನಕ್ಕೆ ಅಪಾಯವಿದೆ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತಹ ಮಾತುಗಳನ್ನು ಆಡುತ್ತಾರೆ. ಇಂತಹ ಅಡ್ಡಗೋಡೆಯ ಮೇಲೆ ದೀಪವಿಡುವಂತಹ ಮಾತುಗಳೂ ಕೂಡ ವರ್ತಮಾನಕ್ಕೆ ಅಪಾಯಕಾರಿ ಎಂಬ ಸಂಗತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚುತ್ತಾರೆ. ಅನ್ಯಧರ್ಮದ ಸಂಗತಿಗಳ ಬಗ್ಗೆ ವಿಮರ್ಶೆಗಳು ಕೇಳಿ ಬಂದಾಗ ‘ಅಭಿವ್ಯಕ್ತಿ ಸ್ವಾತಂತ್ರ್ಯದ’ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಬಿಗಿಯುವವರು ತಮ್ಮ ಧರ್ಮದ ಬಗ್ಗೆ ಬಂದ ಕಾರ್ಟೂನುಗಳನ್ನು ಮತ್ತದರ ಸೃಷ್ಟಿಕರ್ತ ಕಾರ್ಟೂನಿಷ್ಟರನ್ನು ಸಹಿಸುವುದಿಲ್ಲ ಎಂಬ ಸಂಗತಿ ಅವರು ಹೇಳುವ ‘ಅಭಿವ್ಯಕ್ತಿ ಸ್ವಾತಂತ್ರ್ಯದ’ ಬಗ್ಗೆಯೇ ಗುಮಾನಿಗಳನ್ನು ಮೂಡಿಸುತ್ತದೆ. ‘ದಾರಿ ತಪ್ಪಿದ ಕಾರ್ಟೂನಿಷ್ಟರನ್ನು’ ಸರಿದಾರಿಗೆ ತರಲು ತಪ್ಪು ದಾರಿಯನ್ನೇ ತುಳಿಯಬೇಕೆ? ಅಭಿವ್ಯಕ್ತಿ ಸ್ವಾತಂತ್ರ್ಯ ದೇಶದಿಂದ ದೇಶಕ್ಕೆ ಬದಲಾಗುತ್ತಲೇ ಸಾಗುತ್ತದೆ. ಭಾರತದಲ್ಲಿ ಒಪ್ಪಿತವಾದ ಅಭಿವ್ಯಕ್ತಿ ಪಾಕಿಸ್ತಾನದಲ್ಲಿ ತಿರಸ್ಕೃತವಾಗಬಹುದು, ಪಾಕಿಸ್ತಾನಕ್ಕೆ ಅಪ್ರಿಯವೆನಿಸದ ಸಂಗತಿ ಸೌದಿ ಅರೇಬಿಯಾಕ್ಕೆ ಅಸಹ್ಯದ ಭಾವನೆ ಮೂಡಿಸಬಹುದು. ಫ್ರಾ‍ನ್ಸಿನ ವಿಡಂಬನೆ ಉಳಿದ ದೇಶದವರಿಗೆ ಅರ್ಥವಾಗದೇ ಹೋಗಬಹುದು ಎಂಬ ಸತ್ಯವನ್ನು ಅರಿಯುವುದಕ್ಕೆ ಹತ್ಯೆ ನಡೆಸಿದ ಮುಸ್ಲಿಂ ಮೂಲಭೂತವಾದಿಗಳಿಗೆ ಸಾಧ್ಯವಾಗಲಿಲ್ಲ, ಉಗ್ರರು ನಡೆಸಿದ ಕೃತ್ಯವನ್ನು ಮೃದು ಮಾತುಗಳಲ್ಲಿ ಖಂಡಿಸುತ್ತಲೇ ಚಾರ್ಲಿ ಹೆಬ್ಡೋದ ಮೇಲೆ ಬೆಂಕಿಯುಗುಳುವವರಿಗೂ ಸಾಧ್ಯವಾಗಲಿಲ್ಲ.

charlie hebdo
ಚಾರ್ಲಿ ಹೆಬ್ಡೋ ಪ್ರಕರಣದಲ್ಲಿ ಚಾರ್ಲಿ ಹೆಬ್ಡೋದ ಪರವಾಗಿ ಲೇಖನ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕಾನೇಕ ಸ್ಟೇಟಸ್ಸುಗಳನ್ನು ಹಾಕಿಕೊಂಡ ಬಹುತೇಕ ಮಂದಿ ಮತ್ತೊಂದು ಆಷಾಢಭೂತಿತನ ಪ್ರದರ್ಶಿಸಿದರು. ಇತ್ತೀಚೆಗಷ್ಟೇ ಹಿಂದಿಯಲ್ಲಿ ಪಿ.ಕೆಯೆಂಬ ಹಿಂದಿ ಸಿನಿಮಾ ತೆರೆಕಂಡಿತ್ತು. ಅನ್ಯಗ್ರಹ ಜೀವಿಯೊಬ್ಬ ಭೂಮಿಗೆ, ಭಾರತಕ್ಕೆ ಬಂದು ದೇವರ ಹುಡುಕಾಟದಲ್ಲಿ ತೊಡಗುವ ಚಿತ್ರದಲ್ಲಿ ಎಲ್ಲಾ ಧರ್ಮವೂ ಒಂದಷ್ಟು ಗುರಿಯಾಗಿದ್ದರು ಕೊನೆಗೆ ಹೆಚ್ಚು ಗುರಿಯಾಗಿದ್ದು ಹಿಂದು ಧರ್ಮ. ಹಿಂದೂ ಸಂಘಟನೆಗಳು ಪಿ.ಕೆ ವಿರುದ್ಧ ಪ್ರತಿಭಟನೆ ಪ್ರಾರಂಭಿಸಿದರು. ಸೆನ್ಸಾರ್ ಆದ ಸಿನಿಮಾವೊಂದರಲ್ಲಿ ತಮಗೆ ಒಪ್ಪಿತವಾಗದ ದೃಶ್ಯಾವಳಿಗಳಿದ್ದರೆ ಅದನ್ನು ವಿರೋಧಿಸುವುದಕ್ಕೆ ಪ್ರಜಾಪ್ರಭುತ್ವದಲ್ಲಿ ಅನೇಕ ಮಾರ್ಗಗಳಿವೆ. ಅವುಗಳನ್ನೆಲ್ಲ ಬಿಟ್ಟು ಅವರು ಹಿಡಿದಿದ್ದು ಚಿತ್ರಮಂದಿರಕ್ಕೆ ಕಲ್ಲು ಹೊಡೆಯುವ, ಬಲವಂತದಿಂದ ಪ್ರದರ್ಶನ ನಿಲ್ಲಿಸುವ ಹುಚ್ಚುತನದ ಮಾರ್ಗವನ್ನು. ಹಿಂದೂ ದೇವರನ್ಯಾಕೆ ಹಂಗಿಸಬೇಕು ಎಂಬ ದಾಟಿಯಲ್ಲಿ ಈ ಕಲ್ಲು ಹೊಡೆಯುವ ಕಾರ್ಯವನ್ನು ಬೆಂಬಲಿಸಿದವರು ಇದ್ದಕ್ಕಿದ್ದಂತೆ ಇನ್ನೊಂದು ಧರ್ಮವನ್ನು ವಿಡಂಬಿಸಿದ ಪತ್ರಿಕೆಯ ಬೆಂಬಲಕ್ಕೆ ನಿಂತುಬಿಟ್ಟರು! ಚಾರ್ಲಿ ಹೆಬ್ಡೋ ಪ್ರವಾದಿಯ ಬಗ್ಗೆ, ಪೋಪ್ ಬಗ್ಗೆ, ಜೀಸಸ್ ಬಗ್ಗೆ ಮಾಡಿದ ವಿಡಂಬನೆಯನ್ನು ಹಿಂದೂ ಧರ್ಮದ ದೇವರ ಬಗ್ಗೆಯೂ ಮಾಡಿಬಿಟ್ಟಿದ್ದರೆ ಈ ಬೆಂಬಲ ಸಿಗುತ್ತಿತ್ತಾ? ಅನುಮಾನ. ಈ ಧರ್ಮ ಮೂಲಭೂತವಾದತನ ಎಲ್ಲಿಯವರೆಗೆ ಮನಸ್ಸನ್ನು ಬದಲಿಸುತ್ತದೆಂದರೆ ಹಿಂದೂ ಧರ್ಮವನ್ನು ಅವಮಾನಿಸಿದವರಿಗೂ ಇದೇ ರೀತಿಯ ಶಿಕ್ಷೆಯಾಗಬೇಕು ಎಂದು ಉಗ್ರರ ಕೃತ್ಯವನ್ನು ಬೆಂಬಲಿಸುವವರೆಗೆ!

ಇಸ್ರೇಲಿಗಳ ಗುಂಡಿಗೆ ಬಲಿಯಾದ ಪ್ರಾಲೆಸ್ತೀನಿನ ಮಕ್ಕಳ ಸ್ಥಿತಿಗೂ .ಎಸ್..ಎಸ್ ಗುಂಡಿಗೆ ಬಲಿಯಾದ ಯಾಜಿದಿ ಮಕ್ಕಳ ಸ್ಥಿತಿಗೂ ಇರುವ ಸಾಮ್ಯತೆ ತಿಳಿಯದಿದ್ದಾಗ .ಎಸ್..ಎಸ್ ಗೆ ಬೆಂಬಲ ನೀಡುವ ಮೆಹದಿ ಬಿಸ್ವಾಸ್ ನಂತವರು ಜನ್ಮ ತಳೆಯುತ್ತಾರೆ. ಹೆಚ್ಚೇನೂ ಬೇಡ, ಊರಿಗೆ ನಾಲ್ಕು ಮೆಹದಿ ಬಿಸ್ವಾಸ್ ಗಳು ಸೃಷ್ಟಿಯಾದರೆ ನಾಲ್ಕು ನೂರು ಮುಸ್ಲಿಮರಿಗೆ ತಮಗೆ ಬೇಕಾದ ಕಡೆ ಮನೆಗಳು ಬಾಡಿಗೆಗೆ ಸಿಗುವುದಿಲ್ಲ (ಈಗಾಗಲೇ ಸಮಸ್ಯೆ ಜಾತಿ - ಧರ್ಮದ ಕಾರಣದಿಂದ ಬೇಕಾದಷ್ಟಿದೆ). ಓನರನ್ನು ದೂಷಿಸೋಣವೆಂದರೆ ಆತ ಮೆಹದಿ ಬಿಸ್ವಾಸಿನಂತಹ Literate Uneducated ಕಡೆ ಕೈತೋರಿಸುತ್ತಾರೆ. ಇಸ್ಲಾಮಿನೊಳಗಿನ ಸೈತಾನರನ್ನು ಅಲ್ಲಾ ಇಸ್ಲಾಂ, ಒಂದು ಮಟ್ಟಿಗೆ ಮುಲ್ಲಾ ಇಸ್ಲಾಂನ ಬೆಂಬಲಿಗರು ಮತ್ತು ಹುಟ್ಟಿನಿಂದ ಮುಸಲ್ಮಾನನಾದ ನಾಸ್ತಿಕರು ವಿರೋಧಿಸದಿದ್ದರೆ ಸೈತಾನರ ಇಸ್ಲಾಂ ಜನ್ಮ ತಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

perumal murugan
ಪೆರುಮಾಳ್ ಮುರುಗನ್
ಬಿಡಿ. ಫ್ರಾನ್ಸೆಂಬುದು ದೂರದ ದೇಶದ ಮಾತಾಯಿತು. ನಮ್ಮ ದೇಶದೊಳಗೇ ಕಾರ್ಯನಿರ್ವಹಿಸುತ್ತಿರುವ ಮತೀಯ ಸಂಘಟನೆಗಳು ಫ್ರಾನ್ಸಿನ ಚಾರ್ಲಿ ಹೆಬ್ಡೋದ ಮೇಲೆ ದಾಳಿ ನಡೆಸಿದ ಉಗ್ರರಿಗಿಂತ ಭಿನ್ನವಾಗಿ ಕಾರ್ಯನಿರ್ವಹಿಸುತ್ತಿದ್ದಾರಾ? ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ತಮಿಳಿನ ಲೇಖಕ ಪೆರುಮಾಳ್ ಮುರುಗನ್ ಇದ್ದಾರೆ. ಪೆರುಮಾಳ್ ಮುರುಗನ್ ಬರೋಬ್ಬರಿ ನಾಲ್ಕು ವರುಷಗಳ ಹಿಂದೆ ಬರೆದ ಕಾದಂಬರಿಯೊಂದು ಈಗ ವಿವಾದಕ್ಕೀಡಾಗಿದೆ! ‘ಮನೋರೂಭಗಂ’ ಎಂಬ ಇತಿಹಾಸದಲ್ಲಿ ನಡೆಯುವ ಕಥಾವಸ್ತುವನ್ನೊಳಗೊಂಡ ತಮಿಳು ಕಾದಂಬರಿಯನ್ನು ಅವರು ಬರೆದು ವರುಷಗಳುರುಳಿತ್ತು. ವಿವಾದಾಸ್ಪದ ಕೃತಿಯಾಗಿ ಪರಿಗಣಿತವಾಗಿರಲಿಲ್ಲ. ಈ ತಮಿಳು ಕಾದಂಬರಿ ಕಳೆದ ವರುಷ ಇಂಗ್ಲೀಷಿಗೆ ಅನುವಾದಗೊಂಡಿತ್ತು. ಇಂಗ್ಲೀಷಿಗೆ ಅನುವಾದಗೊಂಡ ನಂತರ ವಿವಾದದ ಕಿಡಿ ಹೊತ್ತಿತು. ಕಾದಂಬರಿಯಲ್ಲಿ ಪ್ರಸ್ತಾಪವಾಗಿರುವ ನಿಯೋಗ ಪದ್ಧತಿ, ಸಾಮೂಹಿಕ ಲೈಂಗಿಕತೆಯ ಪದ್ಧತಿಗಳು ಹಿಂದೂ ಧರ್ಮವನ್ನು ಹೀಗಳೆಯುತ್ತವೆ, ಹಿಂದೂ ಮಹಿಳೆಯನ್ನು ಅಪಮಾನಿತಗೊಳಿಸುತ್ತಿವೆ ಎಂಬಂತಹ ದನಿಗಳು ದಿನೇ ದಿನೇ ಹೆಚ್ಚಾಯಿತು. ತಮಿಳು ಭಾಷೆಯಲ್ಲಿದ್ದಾಗ ವಿವಾದದ ಕಿಡಿ ಹೊತ್ತಿಸದೇ ಇದ್ದ ಕೃತಿ ಇಂಗ್ಲೀಷಿಗೆ ಅನುವಾದಗೊಂಡ ನಂತರ ಇಷ್ಟೊಂದು ವಿವಾದಕ್ಕೊಳಗಾಗಿದ್ದ್ಯಾಕೆ ಎಂದು ಗಮನಿಸಿದರೆ ತಮಿಳುನಾಡಿನಲ್ಲಿ ಹಿಂದೂ ಧರ್ಮಾಧಾರಿತ ಪಕ್ಷವಾದ ಬಿಜೆಪಿಗೆ ಅಷ್ಟೇನೂ ಅಸ್ತಿತ್ವವಿಲ್ಲದ ಸಂಗತಿ ಬೇಡವೆಂದರೂ ಗಮನಕ್ಕೆ ಬರುತ್ತದೆ. ಬಿಜೆಪಿಯವರು ನೇರವಾಗಿ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಿದ್ದರೂ ಸ್ಥಳೀಯರನ್ನು ಪ್ರಚೋದಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರ ಕೆಲಸ ಕೊನೆಗೆ ಮತವಾಗಿ ಪರಿವರ್ತಿತವಾಗಿ ಪ್ರಯೋಜನವಾಗುವುದು ಬಿಜೆಪಿ ಪಕ್ಷಕ್ಕೆ ಎಂಬುದನ್ನು ಅಲ್ಲಗೆಳೆಯಲಾಗದು. ಹಿಂದೂ ಮತೀಯವಾದಿಗಳು ಪೆರುಮಾಳ್ ಮುರುಗನ್ ಮೇಲೆ ನಡೆಸಿದ ದಾಳಿ ಎಷ್ಟು ಪ್ರಬಲವಾಗಿತ್ತೆಂದರೆ ವಿವಾದಾತ್ಮಕ ಅಂಶಗಳನ್ನು ಪುಸ್ತಕದಿಂದ ತೆಗೆದುಹಾಕುವುದಾಗಿ ಸ್ವತಃ ಪೆರುಮಾಳ್ ಮುರುಗನ್ ಹೇಳಿದ ಮೇಲೂ ಅವರಿಗೆ ಮತ್ತವರ ಮನೆಯವರಿಗೆ ಬರುತ್ತಿದ್ದ ಬೆದರಿಕೆಯ ಕರೆಗಳು ನಿಲ್ಲಲಿಲ್ಲ. ಕೊನೆಗೆ ಬಹುಶಃ ಇವೆಲ್ಲವುಗಳಿಂದ ಬೇಸತ್ತ ಪೆರುಮಾಳ್ ಮುರುಗನ್ ತನ್ನೊಳಗೆ ವರುಷಗಳಿಂದ ಇದ್ದ ಲೇಖಕ ಬದುಕಿಲ್ಲ, ಆತ ಸತ್ತು ಹೋಗಿದ್ದಾನೆ ಎಂದು ಘೋಷಿಸಬೇಕಾಯಿತು. ತನ್ನಿತರ ಕಾದಂಬರಿಗಳೂ ಮುಂದೊಂದು ದಿನ ವಿವಾದಕ್ಕೊಳಪಡುತ್ತವೋ ಏನೋ ಎಂಬ ಆತಂಕ ವ್ಯಕ್ತ ಪಡಿಸುತ್ತಲೇ ತನ್ನೆಲ್ಲಾ ಕೃತಿಗಳನ್ನೂ ಮಾರುಕಟ್ಟೆಯಿಂದ ಹಿಂದಕ್ಕೆ ತೆಗೆದುಕೊಳ್ಳುವುದಾಗಿಯೂ, ಈ ಪ್ರಕ್ರಿಯೆಯಿಂದ ಪ್ರಕಾಶಕರಿಗಾಗಿರುವ ನಷ್ಟವನ್ನು ತಾನೇ ತುಂಬಿಕೊಡುವುದಾಗಿಯೂ ಹೇಳಿಕೆ ನೀಡಿದ್ದಾರೆ. ಈಗಾಗಲೇ ಪುಸ್ತಕ ಖರೀದಿಸಿರುವವರು ಪುಸ್ತಕಗಳನ್ನು ಸುಟ್ಟುಹಾಕಬಹುದು ಮತ್ತು ಪುಸ್ತಕ ಖರೀದಿಗಾದ ವೆಚ್ಚವನ್ನು ಕೊಡುವುದಾಗಿ ತಿಳಿಸಿದ್ದಾರೆ. ಪ್ಯಾರಿಸ್ಸಿನಲ್ಲಿ ನಡೆದಂತೆ ಭೌತಿಕ ಹತ್ಯೆ ಇಲ್ಲಿ ನಡೆಯಲಿಲ್ಲವಾದರೂ ಮಾನಸಿಕವಾಗಿ ಒಬ್ಬ ಬರಹಗಾರರನ್ನು ಹತ್ಯೆಗೈಯ್ಯಲಾಗಿದೆ. ಇದು ಮುಂದೊಂದು ದಿನ ನಡೆಯಬಹುದಾದ ಭೌತಿಕ ಹತ್ಯೆಯ ಮುನ್ಸೂಚನೆಯೂ ಆಗಿರಬಹುದಾ?
ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೆಂಬುದು ಬಹಳಷ್ಟು ಬಾರಿ ಸಂಪಾದಕರ, ಮಾಲೀಕರ ಮನಸ್ಥಿತಿಗೆ ತಕ್ಕಂತೆ ಬದಲಾಗುತ್ತಿರುತ್ತದೆ. ಚಾರ್ಲಿ ಹೆಬ್ಟೋ ಪತ್ರಿಕೆ ಕೂಡ ಯಹೂದಿ ವಿರೋಧಿ ಮನಸ್ಥಿತಿಯ ಕಾರ್ಟೂನಿಷ್ಟರಿಗೆ ಹೆಚ್ಚು ದಿನಗಳ ಕಾಲ ಕೆಲಸದಲ್ಲಿಟ್ಟುಕೊಳ್ಳುತ್ತಿರಲಿಲ್ಲ ಎಂಬ ವರದಿಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ. ಮುದ್ರಣ ಮತ್ತು ದೃಶ್ಯ ಮಾಧ‍್ಯಮದ ಸೀಮಿತ ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಜನಸಾಮಾನ್ಯರನ್ನು ಬಿಡುಗಡೆಗೊಳಿಸಿದ್ದು ಅಂತರ್ಜಾಲ ತಾಣಗಳು. ಪತ್ರಿಕೆಯ ತತ್ವ ಸಿದ್ಧಾಂತಗಳಿಗೆ ಹೊಂದದ ಲೇಖನಗಳನ್ನು ತಿರಸ್ಕರಿಸುವ, ಕಸದ ಬುಟ್ಟಿಗೆ ಸೇರಿಸುವ ಹಕ್ಕು ಸಂಪಾದಕರಿಗಿತ್ತು. ಅಂತರ್ಜಾಲದ ವ್ಯಾಪಕತೆ, ಕಡಿಮೆ ವೆಚ್ಚಕ್ಕೆ ವೆಬ್ ಪುಟವನ್ನು ತೆರೆಯುವ ಸೌಕರ್ಯ, ಹಣ ನೀಡದೆ ಬ್ಲಾಗ್ ಪ್ರಾರಂಭಿಸುವ ಅನುಕೂಲಗಳೆಲ್ಲವೂ ಮಾಧ್ಯಮ ರಂಗದಲ್ಲಿ ಮಹತ್ವದ ಬದಲಾವಣೆಗಳನ್ನು ತರುವುದರ ಜೊತೆಜೊತೆಗೆ ಮಾಧ್ಯಮಕ್ಕೆ, ವರದಿಗಳಿಗೆ ಹೊಸ ಅರ್ಥವನ್ನೂ ನೀಡಲಾರಂಭಸಿತು. ಮಾಧ್ಯಮಗಳ ಒಳಗಿನ ಸುದ್ದಿಗಳನ್ನು ತೆರೆದಿಡುತ್ತಿದ್ದ ಸಂಪಾದಕೀಯ.ಬ್ಲಾಗ್‍ಸ್ಪಾಟ್.ಕಾಂನಂತಹ ವೆಬ್‍ಪುಟಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ನಂತರದ ದಿನಗಳಲ್ಲಿ ಮತ್ತಷ್ಟು ಮಹತ್ವದ ಬದಲಾವಣೆಯಾಗಿದ್ದು ಫೇಸ್‍ಬುಕ್, ಟ್ವಿಟ್ಟರಿನಂತಹ ಸಾಮಾಜಿಕ ಜಾಲತಾಣಗಳು ಮುನ್ನೆಲೆಗೆ ಬಂದಾಗ. ಅಂತರ್ಜಾಲ ಮಾಧ್ಯಮವನ್ನೇ ಬದಲಿಸಿದ ಖ್ಯಾತಿ ಈ ಸಾಮಾಜಿಕ ಜಾಲತಾಣಗಳದ್ದು. ವೆಬ್‍ಪುಟಗಳಲ್ಲಿ ಕೊನೇಪಕ್ಷ ಅದನ್ನು ನಡೆಸುವವರ ಮರ್ಜಿಗೆ ಕಾಯುವ ಅಗತ್ಯವಾದರೂ ಇರುತ್ತದೆ ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಆ ನಿರ್ಬಂಧವೂ ಇಲ್ಲ. ಅಭಿವ್ಯಕ್ತಿಯನ್ನು ಮತ್ತಷ್ಟು ಸ್ವಾತಂತ್ರ್ಯಗೊಳಿಸಿದ ಸಾಮಾಜಿಕ ಜಾಲತಾಣಗಳು ಈಗ ಆ ಸ್ವಾತಂತ್ರ್ಯವನ್ನು ಉಡಾಫೆಯ ಸ್ವೇಚ್ಛಾಚಾರವನ್ನಾಗಿ ಮಾಡುವುದಕ್ಕೆ ಸಹಕರಿಸುತ್ತಿವೆ! ಇಲ್ಲಿ ನಿಜವಾದ ಹೆಸರು, ಫೋನ್ ನಂಬರ್, ವಿಳಾಸ ತಿಳಿಸುವ ಅವಶ್ಯಕತೆಯಿಲ್ಲವಾದ್ದರಿಂದ ನಕಲಿ ಖಾತೆಗಳ ಹಾವಳಿ ವಿಪರೀತ. ನಕಲಿ ಖಾತೆಗಳ ಮೂಲಕ ಅವಾಚ್ಯ ಅಶ್ಲೀಲ ಶಬ್ದಗಳನ್ನು ಬಳಸುವವರ ಸಂಖೈ ಮಿತಿಮೀರಿದೆ. ನಕಲಿ ಖಾತೆಗಳ ಜೊತೆಜೊತೆಗೆ ಅಸಲಿ ಖಾತೆಗಳನ್ನು ಹೊಂದಿದ so called ವಿದ್ಯಾವಂತರೂ ಕೂಡ ಇಂತಹ ಅವಹೇಳನಕಾರಿ ಮಾನಹಾನಿಯ ಪದಪುಂಜಗಳನ್ನು ಉಪಯೋಗಿಸಲು ಪ್ರಾರಂಭಿಸಿದರು. ಇಂತಹವರನ್ನು ಸಾಯಿಸಬೇಕು, ಅತ್ಯಾಚಾರ ಮಾಡಬೇಕು ಎಂಬಂತಹ ಬೆದರಿಕೆಗಳೂ ಕೇಳಿಬರುತ್ತಿತ್ತು. ಪ್ರಭಾ ಬೆಳವಂಗಲ ಎಂಬುವವರಿಗೆ ಇಂತಹುದೊಂದು ಬೆದರಿಕೆ ಒಡ್ಡಿದ್ದ ವಿ.ಆರ್.ಭಟ್ ಎಂಬ ವ್ಯಕ್ತಿಯ ಮೇಲೆ ಕೇಸೂ ದಾಖಲಾಗಿದೆ. ವರ್ಚುಯಲ್ ಸ್ಪೇಸಿನಲ್ಲಿ ಏನನ್ನಾದರೂ ಒದರಿ ತಪ್ಪಿಸಿಕೊಳ್ಳಬಹುದು ಎಂಬ ಭಾವನೆಯಿಂದ ಜನರು ತಮ್ಮ ಗಲೀಜು ಮನಸ್ಸನ್ನು ತೋರಿಸುತ್ತಾರಾ? ಹೆಣ್ಣುಮಕ್ಕಳಿಗೆ ಕೆಟ್ಟ ಕೆಟ್ಟ ಮೆಸೇಜುಗಳನ್ನು ಕಳಿಸುವವರ ಸಂಖೈಯೂ ಹೆಚ್ಚೇ ಇದೆ. ನಿಲುಮೆ ಗುಂಪಿನ ಸದಸ್ಯರು ನಿಲುಮೆಯ ವೇದಿಕೆಯಲ್ಲಿ ದಿನೇಶ್ ಅಮೀನ್ ಮಟ್ಟು ವಿರುದ್ಧ ಒಂದೇ ಸಮನೆ ಅವಾಚ್ಯ ಪದಗಳನ್ನುಪಯೋಗಿಸಿದ್ದಾರೆ. ಇದು ಅಲ್ಲೊಮ್ಮೆ ಇಲ್ಲೊಮ್ಮೆ ನಡೆದ ಘಟನೆಯಾಗಿರದೆ ಪುನರಾವರ್ತಿತ ಘಟನೆಯಾಗಿದೆ. ಆ ರೀತಿಯಾಗಿ ಕಮೆಂಟಿಸಿದವರ ಜೊತೆಜೊತೆಗೆ ನಿಲುಮೆ ಗುಂಪಿನ ಅಡ್ಮಿನ್‍ಗಳಾದ ಸಾತ್ವಿಕ್ ಮತ್ತು ರಾಕೇಶ್ ಶೆಟ್ಟಿಯವರ ಮೇಲೂ ದಿನೇಶ ಅಮೀನ್ ಕೇಸು ದಾಖಲಿಸಿದ್ದಾರೆ. ಇವರಲ್ಲಿ ಸಾತ್ವಿಕ್ ಫೇಸ್‍ಬುಕ್ ತೊರೆದೇ ಎರಡು ಮೂರು ವಾರಗಳ ಮೇಲಾಗಿದೆ. ಆ ಸಂಗತಿಯನ್ನು ದಿನೇಶ್ ಅಮೀನ್ ಮತ್ತು ಪೋಲೀಸರಿಗೆ ವಿವರಿಸಿದ್ದಾರೆ. ಕೆಟ್ಟ ಕೆಟ್ಟ ಬಯ್ಗುಳಗಳನ್ನು ತಡೆಯುವ ಸಲುವಾಗಿ ಕೇಸು ಹಾಕಿದರೆ ಇದು ‘ಅಭಿವ್ಯಕ್ತಿ ಸ್ವಾತಂತ್ರ್ಯದ’ ದಮನ ಎಂಬಂತಹ ಕೂಗುಗಳೇಳುತ್ತಿವೆ! ದಿನೇಶ್ ಅಮೀನ್ ಮಟ್ಟು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾಗಿರುವುದರಿಂದ ಅಧಿಕಾರದ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನೂ ಮಾಡಲಾಗುತ್ತಿದೆ! ಮತ್ತೀ ಆರೋಪ ಮಾಡುತ್ತಿರುವವರ್ಯಾರು ಎಂದು ಗಮನಿಸಿದರೆ ಮತ್ತದೇ ಹಿಂದೂ ಧರ್ಮದ ಉದ್ಧಾರಕ್ಕೆ ಟೊಂಕ ಕಟ್ಟಿ ನಿಂತಿದ್ದೇವೆಂದು ಹೇಳಿಕೊಳ್ಳುತ್ತಿರುವವರು! ಸೂಕ್ತವಾದ ಚರ್ಚೆ ಮಾಡುವವರೊಡನೆ ದಿನೇಶ್ ಅಮೀನ್ ಮುಕ್ತವಾಗಿಯೇ ಚರ್ಚಿಸುತ್ತಾರೆ ಎಂಬ ವಿಷಯವನ್ನು ಅವರೊಡನೆ ಒಡನಾಡುವವರೆಲ್ಲರಿಗೂ ತಿಳಿದ ವಿಷಯ. ಅವರ ಜೊತೆಗಿರುವವರು ಅವರೊಡನೆ ಜಗಳವಾಡುವಷ್ಟು ಅವರ ವಿರೋಧಿಗಳೂ ಆಡುವುದಿಲ್ಲ! ಮತ್ತಾ ಜಗಳದಲ್ಲಿ ಕೆಟ್ಟ ಕೆಟ್ಟ ಪದಪುಂಜಗಳ ನರ್ತನವಿರುವುದಿಲ್ಲ! ಆರೋಗ್ಯಕರ ಚರ್ಚೆಗಳ ಜಾಗದಲ್ಲಿ ಇಂತಹ ಅಸಂಬದ್ಧ ಪ್ರಲಾಪ ಮಾಡುವ, ವೈಯಕ್ತಿಕ ಟೀಕೆಗೆ ನಿಲ್ಲುವ ಜನರ ಸಂಖೈ ದಿನೇ ದಿನೇ ಹೆಚ್ಚುತ್ತಿರುವುದು ಸಾಮಾಜಿಕ ಜಾಲತಾಣಗಳ ಉಪಯುಕ್ತತೆಯನ್ನು ಕಡಿಮೆ ಮಾಡುತ್ತಿವೆ. ಚಕ್ರವರ್ತಿ ಸೂಲಿಬೆಲೆಯಂತಹ ದಿನಬೆಳಗಾದರೆ ಸಂಸ್ಕೃತಿಯ ಬಗ್ಗೆ ಮಾತನಾಡುವವರು ಕೂಡ ಇಂತಹ ಅಸಂಸ್ಕೃತ ಪದಪುಂಜಗಳನ್ನುದುರಿಸಿದವರಿಗೆ ಬೆಂಬಲ ಕೊಡುತ್ತೇನೆನ್ನುವ ಮಾತನಾಡುವುದು ಏನನ್ನು ಸೂಚಿಸುತ್ತದೆ. ವಿಪರ್ಯಾಸವೆಂದರೆ ಈ ಐಟಿ ಕಾಯ್ದೆ ದುರುಳ ಸರಕಾರದ ಕೈಯಲ್ಲಿ ಅದರ ವಿರುದ್ಧವಿರುವವರ ಮೇಲೆಲ್ಲಾ ದುರುಪಯೋಗಪಡಿಸುವ ಆತಂಕವಿತ್ತು. ಶಿವಸೇನಾ ಮುಖ್ಯಸ್ಥರು ಸತ್ತಾಗ ಫೇಸ್‍ಬುಕ್ಕಿನಲ್ಲಿ ಅವತ್ತಾದ ಟ್ರಾಫಿಕ್ ಜಾಮ್ ವಿರುದ್ಧ ಬರೆದುಕೊಂಡಿದ್ದ ಯುವತಿಯನ್ನು ಬಂಧಿಸಲಾಗಿತ್ತು! ಆ ಸ್ಟೇಟಸ್ಸಿಗೆ ಲೈಕ್ ಒತ್ತಿದವಳನ್ನೂ ಬಂಧಿಸಲಾಗಿತ್ತು! ಇಂತಹ ಕಾಯ್ದೆಯನ್ನು ಮಾರ್ಪಡಿಸುವಂತೆ ಜನರು ಒತ್ತಾಯಿಸಬೇಕಿತ್ತು. ಆದರೆ ತಮ್ಮ ಅಸುಂಸ್ಕೃತ ಮಾತುಗಳಿಂದ ಈ ಕಾಯ್ದೆ ಉಳಿದು ಬೆಳೆದು ಬಲಿಷ್ಟವಾಗುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿ ಕಾಣುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಮತ್ತು ಉಡಾಫೆಯ ಸ್ವೇಚ್ಛಾಚಾರಕ್ಕೂ ನಡುವಿರುವ ವ್ಯತ್ಯಾಸವನ್ನು ಗುರುತಿಸದೇ ಹೋದರೆ ಸಾಮಾಜಿಕ ಜಾಲತಾಣಗಳು ಮನಸ್ಸುಗಳ ಗಲೀಜಿನಿಂದ ತುಂಬಿಹೋಗುವುದು ಖಂಡಿತ.

No comments:

Post a Comment