Jan 9, 2015

ಕಣಗಾಲಿನಲ್ಲಿ 'ಆರಂಭ' ಚಿತ್ರದ ಪ್ರೀಮಿಯರ್ ಶೋ!

ಚಲನಚಿತ್ರ ನಿರ್ದೇಶಕನಾಗುವುದೆಂದರೆ ಹತ್ತು ಸರ್ಕಸ್ಸು ಕಂಪನಿಗಳನ್ನು ನಡೆಸಿದಂತೆ ಎಂದು ಬರೆದಿದ್ದು ರವಿ ಬೆಳಗೆರೆ! ಒಂದು ಚಿತ್ರಕ್ಕೆ ನಾಯಕ ನಾಯಕಿ ಸಂಗೀತ ತಾಂತ್ರಿಕ ತಂಡದ್ದು ಒಂದು ತೂಕವಾದರೆ ನಿರ್ದೇಶಕ ಸ್ಥಾನದ್ದೇ ಒಂದು ತೂಕ. Director is Captain of the Ship ಎಂಬ ಮಾತು ಸುಖಾಸುಮ್ಮನೆ ಹುಟ್ಟಿದ್ದಲ್ಲ. ಪ್ರಪಂಚದ ಅತಿ ಉತ್ತಮ ಚಿತ್ರಗಳ ಹೆಸರು ಕೇಳಿದಾಗಲೆಲ್ಲ ನೆನಪಾಗುವುದು ಅದರ ನಿರ್ದೇಶಕರು. ಅಕಿರಾ ಕುರಸೋವಾ, ಮಾಜಿದ್ ಮಾಜಿದಿ ನೆನಪಲ್ಲಿರುವಷ್ಟು ಅವರ ಚಿತ್ರಗಳ ಕಲಾವಿದರು ನೆನಪಿನಲ್ಲಿರುವುದಿಲ್ಲ. ಕಥೆಯಾಧಾರಿತ ಚಿತ್ರಗಳಲ್ಲಿ ನಿರ್ದೇಶಕರು ಮಿಂಚಿದರೆ ಭಾರತದ ಬಹುತೇಕ ಚಲನಚಿತ್ರಗಳಲ್ಲಿ ಮಿಂಚುವುದು ಕಲಾವಿದರು. ಇದಕ್ಕೆ ಬಹುಮುಖ್ಯ ಕಾರಣ ಭಾರತದ ಮನೋರಂಜನಾತ್ಮಕ ಚಿತ್ರಗಳು ಕಲಾವಿದನ ಅದರಲ್ಲೂ ನಾಯಕನಟನ ಸುತ್ತ ಸುತ್ತುವುದು. ಕಥೆಗಾಗಿ ತಮ್ಮ ಇಮೇಜನ್ನು ಮೀರುವ ನಟರ ಸಂಖೈ ಕಡಿಮೆಯೆಂದೇ ಹೇಳಬೇಕು. ಇಮೇಜಿರುವ ಕಲಾವಿದರ ಆರಾಧಕರ ಸಂಖೈಯೂ ಹೆಚ್ಚಿರುವುದು ಇದೇ ಕಾರಣಕ್ಕೆ. 


ಇಷ್ಟೆಲ್ಲ ಅಡೆತಡೆಗಳ ನಡುವೆಯೂ ಕನ್ನಡದ ಅನೇಕ ನಿರ್ದೇಶಕರು ಕಲಾವಿದರ ಇಮೇಜನ್ನು ಮೀರಿ ಬೆಳೆದಿದ್ದಾರೆ. ಅವರಲ್ಲಿ ಮೊದಲಿಗೆ ನೆನಪಾಗುವುದು ಪುಟ್ಟಣ್ಣ ಕಣಗಾಲ್. ಈ ಪೀಳಿಗೆಯ ನಿರ್ದೇಶಕರಿಗೂ ಅವರು ಸ್ಪೂರ್ತಿ, ಅವರೆತ್ತರಕ್ಕಲ್ಲದಿದ್ದರೂ ಅವರ ಚಿತ್ರಗಳು ಮೂಡಿಸುವ ಉತ್ಸಾಹದಿಂದ ಒಂದಷ್ಟು ಒಳ್ಳೆಯ ಚಿತ್ರಗಳನ್ನು ನೀಡುವ ತುಡಿತ ಅನೇಕ ಚಿತ್ರ ನಿರ್ದೇಶಕರದ್ದು. 'ಆರಂಭ' ಚಿತ್ರದಿಂದ ಸ್ವತಂತ್ರ್ಯ ನಿರ್ದೇಶಕರಾಗುತ್ತಿರುವ ಎಸ್. ಅಭಿ ಹನಕೆರೆ ಇದೇ ತುಡಿತದಿಂದ ಪುಟ್ಟಣ್ಣನವರ ಸ್ವಂತ ಊರಾದ ಕಣಗಾಲಿನಲ್ಲಿ ಚಿತ್ರದ ಕೆಲವೊಂದು ಭಾಗ ಚಿತ್ರೀಕರಿಸಲು ನಿರ್ಧರಿಸಿದ್ದರು. ಚಿತ್ರೀಕರಣದ ಸಂದರ್ಭದಲ್ಲಿ ಕಣಗಾಲಿನ ದುರವಸ್ಥೆಯನ್ನು ಕಣ್ಣಾರೆ ಕಂಡಿದ್ದರು. ಜೊತೆಗೆ ಪುಟ್ಟಣ್ಣ ಹುಟ್ಟಿ ಬೆಳೆದ ಮನೆ ಅನಾಥವಾಗಿ ಬಿದ್ದಿತ್ತು. 'ಆರಂಭ' ಚಿತ್ರದ ಪ್ರೀಮಿಯರ್ ಶೋಅನ್ನು ಕಣಗಾಲಿನಲ್ಲೇ ಮಾಡಬಾರದೇಕೆ ಎಂಬ ಯೋಚನೆಯೊಂದಿಗೆ ಚಿತ್ರತಂಡದವರೊಡನೆ ಕಣಗಾಲಿಗೆ ಭೇಟಿ ನೀಡಿದರು.
puttanna kanagal house
ಪುಟ್ಟಣ್ಣ ಕಣಗಾಲರ ಮನೆ
 ಅಲ್ಲಿನ ಜನತೆಗೆ ಪುಟ್ಟಣ್ಣನವರ ಬಗೆಗಿದ್ದ ಪ್ರೀತಿ, ಅವರಿಂದಲೇ ಎತ್ತರೆತ್ತರಕ್ಕೆ ಬೆಳೆದ ಕಲಾವಿದರ ಬಗೆಗಿನ ಆಕ್ರೋಶವೆಲ್ಲವೂ ಅಲ್ಲಿ ವ್ಯಕ್ತವಾಯಿತು. ಅವರ ಹೆಸರಿನಲ್ಲಿ ಪ್ರಶಸ್ತಿ ಕೊಡೋ ಸರಕಾರ ಅದನ್ನು ನಿಲ್ಲಿಸಿ ಪಾಳು ಬಿದ್ದ ಅವರ ಮನೆಯನ್ನು ಸ್ಮಾರಕವನ್ನಾಗಾದರೂ ಮಾಡಬಾರದೇಕೆ ಎಂಬ ಪ್ರಶ್ನೆ ಹಾಕಿದರು. ಅವರ ಮಾತುಗಳನ್ನೇ ರೆಕಾರ್ಡ್ ಮಾಡಿಕೊಂಡು ಹೊಸತೊಂದು ಟ್ರೇಲರ್ ಬಿಡುಗಡೆ ಮಾಡಿದೆ 'ಆರಂಭ' ಚಿತ್ರತಂಡ! ಬೆಂಗಳೂರಿನಿಂದ ದೂರ ಕಣಗಾಲಿನಲ್ಲಿ ಪ್ರೀಮಿಯರ್ ಶೋ ಮಾಡಲಿಚ್ಛಿಸುತ್ತಿರುವ 'ಆರಂಭ' ಚಿತ್ರತಂಡದ ಹೊಸ ಟ್ರೇಲರ್ ನಲ್ಲೇನಿದೆ ಎಂಬುದನ್ನು ನೀವೇ ನೋಡಿ ಅಭಿಪ್ರಾಯಿಸಿ!
ಪುಟ್ಟಣ್ಣರ ಹೆಸರಿನಲ್ಲಿ, ಪುಟ್ಟಣ್ಣರು ಸೃಷ್ಟಿಸಿದ ಪಾತ್ರಗಳ ಹೆಸರಿನಲ್ಲಿ  ಕೋಟಿ ಕೋಟಿ ಹಣ ದುಡಿಯುತ್ತಿರುವಾಗ ಕಣಗಾಲಿಗೆ ಇಷ್ಟಾದರೂ ಮಾಡಬಾರದೇ ಎಂದು ಹೇಳಿದ್ದು ಕ್ಯಾಮೆರಾ ಸ್ವಿಚ್ ಆಫ್ ಆದ ನಂತರ!

No comments:

Post a Comment