Jan 8, 2015

ಪೀಸ್ ಫುಲ್ಲಾಗಿಲ್ಲದ 'ಮಾಸ್ಟರ್ ಪೀಸ್' ಫಸ್ಟ್ ಲುಕ್!

manju mandavya
ಮಂಜು ಮಾಂಡವ್ಯ
ಕಳೆದ ಒಂದೆರಡು ವರ್ಷದಿಂದ ಕನ್ನಡ ಚಿತ್ರರಂಗದ ನಂಬರ್ ಒನ್ ನಾಯಕ ಸ್ಥಾನದ ಪಟ್ಟ ಯಶ್ ಗೇ ಸಿಗಬೇಕು ಎಂದು ಯಾವುದೇ ಅನುಮಾನವಿಲ್ಲದೇ ಹೇಳ್ಬೋದು.ವೆರೈಟಿ ಚಿತ್ರಗಳು, ರಿಮೇಕೂ ಯಶಸ್ಸಾಗಿ ಸ್ವಮೇಕೂ ಯಶಸ್ಸಾಗಿ ಯಶ್ ನಂಬರ್ ಒನ್ ಸ್ಥಾನಕ್ಕೆ ಬಹುಶಃ ಈಗಾಗಲೇ ತಲುಪಿಬಿಟ್ಟಿದ್ದಾರೆ, ಇಲ್ಲಾ ಒಂದೆರಡು ಹೆಜ್ಜೆಯಷ್ಟೇ ಹಿಂದಿದ್ದಾರೆ. ಮೊಗ್ಗಿನ ಮನಸ್ಸು ಗೆಲುವು ಕಂಡಿತ್ತಾದರೂ ಅದರಲ್ಲಿ ರಾಧಿಕಾ ಪಂಡಿತ್ ಪಾತ್ರ ಹೆಚ್ಚಿತ್ತು. ಮೊದಲ ಸಲ ತಾಜಾತನದಿಂದ ಹೆಸರು ಮಾಡಿತಾದರೂ ಯಶ್ ಗೆಲುವು ಕಂಡ ಚಿತ್ರ 'ಕಿರಾತಕ'. ರಿಮೇಕ್ ಚಿತ್ರ ಗೆದ್ದ ತಕ್ಷಣ ರಿಮೇಕ್ ಹಿಂದೆಯೇ ಬೀಳುವ ಚಾಳಿ ಬೆಳೆಸಿಕೊಳ್ಳದ ಯಶ್ ನಂತರ ಸ್ವಮೇಕ್ ಚಿತ್ರಗಳಾದ ಡ್ರಾಮಾ, ಗೂಗ್ಲಿಯಲ್ಲಿ ಮಿಂಚಿದರು. ಮತ್ತೆ ದೊಡ್ಡ ಮಟ್ಟದ ಯಶಸ್ಸು ಕಂಡದ್ದು ರಾಜಾಹುಲಿ ಎಂಬ ರೀಮೇಕ್ ಚಿತ್ರದಲ್ಲಿ! ಲವ್ ಸ್ಟಾರ್ ಇಮೇಜಿನಿಂದ ಮಾಸ್ ಸ್ಟಾರ್ ಇಮೇಜಿಗೆ ಬದಲಿಸಿದ ಖ್ಯಾತಿಯೂ ರಾಜಾಹುಲಿಯದ್ದೇ!

Master Piece kannada movie
ಖ್ಯಾತಿ ಬಂದಂತೆ ಹೆಸರಾಂತ ನಿರ್ದೇಶಕರ ಜೊತೆ ಚಿತ್ರ ಮಾಡುವ ಮಂದಿಯೇ ಹೆಚ್ಚು. ಅಪವಾದವೆಂಬಂತೆ ಯಶ್ ಹೊಸಬರ ಜೊತೆ ಸ್ವಮೇಕ್ ಚಿತ್ರ ಮಾಡುವ ನಿರ್ಧಾರ ಮಾಡಿದರು. ಮೊದಲ ಕಂತಿನಲ್ಲಿ ಸಂತೋಷ್ ಆನಂದಮ್ ನಿರ್ದೇಶನದ 'ಮಿ ಅಂಡ್ ಮಿಸ್ಸೆಸ್ ರಾಮಾಚಾರಿ' 2014ರ ಕೊನೆಯಲ್ಲಿ ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸು ಕಾಣುತ್ತಿದೆ. 2014ರಲ್ಲಿ ಕನ್ನಡದಲ್ಲಿ ಗೆಲುವು ಕಂಡ ಬಹುತೇಕ ಚಿತ್ರಗಳು ರೀಮೇಕ್. ಕೊನೆಯಲ್ಲೊಂದು ಸ್ವಮೇಕ್ ಗೆದ್ದಿರುವುದು ಖುಷಿಯ ಸಂಗತಿಯೇ ಹೌದು. ಎರಡನೇ ಕಂತಿನಲ್ಲಿ ಮಂಜು ಮಾಂಡವ್ಯ ನಿರ್ದೇಶನದ 'ಮಾಸ್ಟರ್ ಪೀಸ್' ಚಿತ್ರ. ಮಂಜು ಮಾಂಡವ್ಯ ನಿರ್ದೇಶನಕ್ಕೆ ಹೊಸಬರಾದರೂ ಚಿತ್ರರಂಗದಲ್ಲಿ ಸೈಕಲ್ ಹೊಡೆಯಲು ಪ್ರಾರಂಭಿಸಿ ದಶಕದ ಮೇಲಾಗಿದೆ. ನಿರ್ದೇಶಕನಾಗಲು ಬಂದು ಒಂದಷ್ಟು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ, ಜೊತೆಜೊತೆಗೆ ಸಂಭಾಷಣೆಕಾರನಾಗಿ ಸಿನಿಪಯಣ ಪ್ರಾರಂಭಿಸಿದ ಮಂಜು ಮಾಂಡವ್ಯ ಹೆಸರು ಮಾಡಿದ್ದು ಸಂಭಾಷಣೆಕಾರನಾಗಿ. ಮಂಜು ಮಾಂಡವ್ಯನ ಸಂಭಾಷಣೆ ಇದೆಯೆಂದರೆ ಅದರಲ್ಲೇನಾದರೂ ವಿಶೇಷವಿರಲೇಬೇಕು ಎಂಬ ನಿರೀಕ್ಷೆ ಮೂಡುವಷ್ಟು ಚೆಂದದ, ಚಿತ್ರರಂಗದ ಭಾಷೆಯಲ್ಲೇಳುವುದಾದರೆ ಪಂಚಿಂಗ್ ಡೈಲಾಗ್ ಬರೆಯುವುದರಲ್ಲಿ ನಿಸ್ಸೀಮರು. ಕೆಲವು ಚಿತ್ರಗಳಲ್ಲಿ ನಟನೆಯೂ ಮಾಡಿರುವ ಮಂಜು ಮಾಂಡವ್ಯ ನಟನೆಯಲ್ಲಿ ಒಂದಷ್ಟು ಗುರುತಿಸಿಕೊಂಡಿದ್ದು ರಾಜಾಹುಲಿ ಚಿತ್ರದಿಂದ.  ಹೊಂಬಾಳೆ ಫಿಲಮ್ಸ್ ಲಾಂಛನದಲ್ಲಿ ವಿಜಯ್ ಕಿರಂಗಂದೂರು ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಮಾಸ್ಟರ್ ಪೀಸ್' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಮಾಸ್ ಮೂವಿಯ ಮಾಮೂಲಿ ಟ್ರೇಲರ್ ಎಂದು ನಿರೀಕ್ಷಿಸಿದವರಿಗೆ 'ಇನ್ಕಿಲಾಬ್ ಜಿಂದಾಬಾದ್' ಎಂಬ ಘೋಷಣೆ ಬೆಚ್ಚಿಬೀಳಿಸುತ್ತದೆ! ಒಂದಷ್ಟು ವರ್ಕಿಂಗ್ ಸ್ಟಿಲ್ಸಿನ ನಂತರ ಭಗತ್ ಸಿಂಗ್ ರೂಪದಲ್ಲಿ ಬುಲೆಟ್ಟಿನಲ್ಲಿ ಕಾಣಿಸುವ ಯಶ್ ಇಷ್ಟವಾಗದೆ ಇರಲಾರರು. ಹೊಸತೇನನ್ನಾದರೂ ನಿರೀಕ್ಷಿಸಬಹುದು ಈ ಚಿತ್ರದಿಂದ ಎಂದು ಹೇಳುವಂತಿದೆ ಈ ಫಸ್ಟ್ ಲುಕ್. ಓಶೋ ಸಿದ್ಧಾಂತಗಳ ಬಗ್ಗೆ, ತತ್ವಜ್ಞಾನದ ಬಗ್ಗೆ, ಪ್ರಪಂಚದ ಆಫ್ ಬೀಟ್ ಸಿನಿಮಾಗಳ ಬಗ್ಗೆ ಆಸಕ್ತಿ ಹೊಂದಿರುವ ಮಂಜು ಮಾಂಡವ್ಯ ಕಮರ್ಷಿಯಲ್ ಸಿನಿಮಾದ ಒತ್ತಡಗಳ ನಡುವೆಯೂ ಒಂದಷ್ಟು ಹೊಸ ನೀರನ್ನು ಸಿನಿಮಾ ರಂಗಕ್ಕೆ ಸೇರಿಸಲಿ ಎಂಬುದು 'ಹಿಂಗ್ಯಾಕೆ'ಯ ಆಶಯ.

No comments:

Post a Comment