Dec 9, 2014

ಮೌಡ್ಯದ ವಿರುದ್ಧ ಕಿಕ್ ಔಟ್ ಸಮರ

kickout astrologers
Dr Ashok K R
ನಂಬಿಕೆಗೂ ಮೂಢನಂಬಿಕೆಗೂ ನಡುವಿನ ಗೆರೆ ಅತಿ ತೆಳುವಾದದ್ದು. ಜೊತೆಗೆ ಅನಾದಿ ಕಾಲದಿಂದ ನಂಬಿಕೊಂಡು ಬಂದ ಮೂಢನಂಬಿಕೆ ಕಾಲ ಸವೆದ ಹಾಗೆ ನಂಬಿಕೆಯಾಗಿ ಮಾರ್ಪಟ್ಟು ಆ ಆಚರಣೆಯನ್ನು ಮೌಡ್ಯವೆಂದು ಹೇಳುವವರೇ ಮೂಢರೆಂದು ಜರೆಯುವವರ ಸಂಖೈ ಹೆಚ್ಚುತ್ತದೆ. ಪ್ರತಿ ನಂಬಿಕೆಗೆ ಹೇಗೆ ಪ್ರತ್ಯಕ್ಷ ಪರೋಕ್ಷ ಕಾರಣಗಳಿವೆಯೋ ಅದೇ ರೀತಿ ಮೂಢನಂಬಿಕೆಗೂ ಕಾರಣಗಳಿವೆ. ನಂಬಿದವರಿಗದು ಮೌಡ್ಯತೆ ಎಂದು ತಿಳಿಹೇಳಬೇಕಿರುವುದು ವೈಚಾರಿಕ ಸಮಾಜದ ಕರ್ತವ್ಯವಾ? ಅಥವಾ ಒಬ್ಬರ ನಂಬಿಕೆಯನ್ನು ಪ್ರಶ್ನಿಸುವುದು ತಪ್ಪಾಗುತ್ತದೆ ಎಂಬ ನಂಬುಗೆಯೊಂದಿಗೆ ಮೂಡತೆಯೆಡೆಗೆ ಸಾಗುವವರ ಸಂಖೈ ಹೆಚ್ಚಾಗುತ್ತಿದ್ದರೂ ತೆಪ್ಪಗಿರಬೇಕಾ? ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿವಿಧ ಘಟನಾವಳಿಗಳು, ಅದಕ್ಕೆ ಪ್ರತಿಯಾಗಿ ನಡೆಯುತ್ತಿರುವ ಪ್ರತಿಭಟನೆಗಳು, ಎಫ್ ಐ ಆರ್, ಪ್ರತಿ – ಎಫ್ ಐ ಆರ್ ಗಳು ಇಂತಹ ಪ್ರಶ್ನೆಗಳನ್ನು ಮೂಡಿಸಿ ಒಂದಷ್ಟು ದ್ವಂದ್ವಗಳನ್ನು ಮೂಡಿಸುತ್ತವೆ.

‘ಆಧುನೀಕರಣ’, ‘ಸಾಕ್ಷರತೆ’ಯ ಹೆಚ್ಚಳ, ತಂತ್ರಜ್ಞಾನದ ಹೊಸ ಹೊಸ ಆವಿಷ್ಕಾರಗಳು, ವಿಜ್ಞಾನದ ನವೀನ ಹೊಳಹುಗಳೆಲ್ಲವೂ ಜನರಲ್ಲಿ ವೈಚಾರಿಕ ಪ್ರಜ್ಞೆಯನ್ನು ಹೆಚ್ಚೆಚ್ಚು ಜಾಗೃತಗೊಳಿಸಬೇಕಿತ್ತು. ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆ ಹೊಂದುವ ಜೊತೆಯಲ್ಲೇ ಆಧುನೀಕರಣದ ಜಗತ್ತು ಮೌಡ್ಯವೆಂದೇ ಕರೆಯಬಹುದಾದ ನಂಬಿಕೆಗಳತ್ತ ವಾಲುತ್ತಿರುವುದು ದುರದೃಷ್ಟಕರ. ಆಧುನಿಕ ಜಗತ್ತಿನ ತಂತ್ರಜ್ಞಾನವೇ ಮೌಡ್ಯವನ್ನು ವೇಗವಾಗಿ ಪಸರಿಸಲು ನೆರವಾಗುತ್ತ ವಿಜ್ಞಾನವನ್ನು ಅಣಕಿಸುತ್ತಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ಉರುಳಾಡಿ (ಉರುಳಾಡುವವರಲ್ಲಿ ಬ್ರಾಹ್ಮಣ – ಅಬ್ರಾಹ್ಮಣರೀರ್ವರೂ ಇರುತ್ತಾರೆ) ತಮಗಿರುವ ಚರ್ಮ ಖಾಯಿಲೆಯನ್ನು ವಾಸಿ ಮಾಡಿಕೊಂಡು ಉತ್ತಮರಾಗಲು ನೆರವಾಗುತ್ತದೆಂಬ ನಂಬಿಕೆ ಸ್ಥಳೀಯರು ಹೇಳುವಂತೆ ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದೆ. ಬ್ರಾಹ್ಮಣರು, ವೇದ ತಿಳಿದವರು ಶ್ರೇಷ್ಠರೆಂಬ ವರ್ಣಾಶ್ರಮ ನೀತಿಯಿಂದ ಪ್ರೇರಿತವಾದ ಆಚರಣೆಯಿದು. ಎಂಜಲೆಲೆ ಬಿಟ್ಟು ಮೇಲೇಳುವವರಿಗೂ, ಎಲೆಯ ಮೇಲೆ ಉರುಳಾಡುವವರಿಗೂ ಈ ಆಚರಣೆ ನಂಬಿಕೆಯಾಗಿ ಸತ್ಯವಾಗಿ ಕಾಣಿಸುತ್ತದೆಯೇ ಹೊರತು ಮೌಡ್ಯತೆಯಾಗಲ್ಲ. ಬಹಳಷ್ಟು ವಿರೋಧದ ನಂತರ ತಾತ್ಕಾಲಿಕವಾಗಿ ಮಡೆ ಸ್ನಾನಕ್ಕೆ ನಿಷೇಧವೇರ್ಪಟ್ಟು ಅದರ ಜಾಗದಲ್ಲಿ ಪ್ರಸಾದದ ಮೇಲೆ ಉರುಳಾಡುವ ಎಡೆ ಸ್ನಾನ ಕಳೆದ ಬಾರಿ ಕೋರ್ಟಿನ ಆದೇಶದಂತೆ ನಡೆದಿತ್ತು. ಈ ಬಾರಿ ನ್ಯಾಯಾಲಯ ಮತ್ತೆ ಮಡೆ ಮಡೆ ಸ್ನಾನಕ್ಕೆ ಅವಕಾಶ ಮಾಡಿಕೊಡುವ ಮೂಲಕ ಒಂದೆಜ್ಜೆ ಮುಂದಿಟ್ಟು ಎರಡೆಜ್ಜೆ ಹಿಂದೆ ಇಟ್ಟಿದೆ. ಉರುಳಾಡುವವರು, ಉರುಳಾಡಿಸಿದವರು, ಉರುಳಾಟವನ್ನು ವಿರೋಧಿಸಿದವರ ಪ್ರತಿಭಟನೆಗಳೆಲ್ಲವೂ ನಡೆದು ಹೋದವು. ಇಲ್ಲಿ ಮಡೆ ಮಡೆ ಸ್ನಾನ ಕೇವಲ ಒಂದು ಧರ್ಮದ ಒಂದು ಆಚರಣೆಯ ಉದಾಹರಣೆಯಷ್ಟೇ. ಮೊಹರ್ರಂ ದಿನದಂದು ರಕ್ತ ಬರುವಂತೆ ಹೊಡೆದುಕೊಳ್ಳುವುದು, ಜೈನಮುನಿಗಳಲ್ಲಿರುವ ಅತಿ ಎನ್ನಿಸುವಂತಹ ಹಿಂಸಾತ್ಮಕ ಪ್ರಯೋಗಗಳೆಲ್ಲವೂ ಹೊರಗಿನಿಂದ ನಿಂತು ನೋಡುವವರಿಗೆ ಮೌಡ್ಯದಂತೆ, ಹಿಂಸೆಯಂತೆ ಕಂಡರೆ ಒಳಗಿರುವವರಿಗೆ ಅದು ಪ್ರಶ್ನಿಸಬಾರದ ನಂಬುಗೆ! ಜನರಲ್ಲೇ ಒಂದು ಎಚ್ಚರ ಮೂಡದ ಹೊರತು ಮೂಡನಂಬಿಕೆಗಳು ಕಡಿಮೆಯಾಗುವ ಸಾಧ್ಯತೆಗಳು ಕ್ಷೀಣ. ಎಚ್ಚರ ಮೂಡಿಸುವ ಕೆಲಸ ಮಾಡುವವರನ್ನು ಹೀಗಳೆಯುವವರು ಹಿಂದೆಯೂ ಇದ್ದರು ಮುಂದೂ ಇರುತ್ತಾರೆ. ಆಚರಣೆಗಳನ್ನು ಬೆಂಬಲಿಸುವವರಷ್ಟೇ ಹೀಗಳೆಯುತ್ತಾರೆಂದುಕೊಂಡರೆ ತಪ್ಪು, ಅದನ್ನು ಬೆಂಬಲಿಸದವರೂ ಕೂಡ ಎಚ್ಚರ ಮೂಡಿಸಲೆತ್ನಿಸುವವರ ಮನೋಸ್ಥೈರ್ಯವನ್ನು ಕಡಿಮೆಗೊಳಿಸುವಂತಹ ಹೇಳಿಕೆಗಳನ್ನು ನೀಡುವುದು, ಲೇಖನ ಬರೆಯುವುದು ಸಮಾಜದ ಒಟ್ಟಾರೆ ಆರೋಗ್ಯಕ್ಕೆ ಹಾನಿಕಾರಕವಲ್ಲವೇ? ಹೀಗಳೆಯುವುದಕ್ಕಷ್ಟೇ ಸೀಮಿತವಾಗಿಸದೆ ದ್ವೇಷಿಸುವ ಮಟ್ಟಕ್ಕೂ ಬೆಳೆಯುತ್ತಿರುವುದು ಅನಾರೋಗ್ಯದ ಮತ್ತೊಂದು ಸಂಕೇತ.
ಪ್ರತಿದಿನ ದಿನಭವಿಷ್ಯ, ವಾರಕ್ಕೊಮ್ಮೆ ಸಾಪ್ತಾಹಿಕದಲ್ಲಿ ವಾರಭವಿಷ್ಯವನ್ನು ಪತ್ರಿಕೆಗಳು ಪ್ರಕಟಿಸುತ್ತವಾದರೂ ಅವೈಚಾರಿಕ ಸಂಗತಿಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದುದು ಕಡಿಮೆಯೇ. ದಿನಭವಿಷ್ಯ ಕಳುಹಿಸುವುದಕ್ಕೆ ಅಂಕಣಕಾರ ತಡ ಮಾಡಿದರೆ ಪತ್ರಿಕೆಯವರೇ ಹಳೆಯದೊಂದು ದಿನಭವಿಷ್ಯವನ್ನು ರಾಶಿ ಬದಲಿಸಿ ಪ್ರಕಟಿಸಿಬಿಡುವುದು ಸಾಮಾನ್ಯ. ಇಂತಹ ಭವಿಷ್ಯವನ್ನು ಕುತೂಹಲಕ್ಕೆ ಓದುವವರ ಜೊತೆಜೊತೆಗೆ ಓದಿ ಸೀರಿಯಸ್ಸಾಗುವವರ ಸಂಖೈಯೂ ಇದೆಯಾದರೂ ಅದು ಕಡಿಮೆಯೇ. ಜ್ಯೋತಿಷಿಗಳಿಗೆ ಬಂಪರ್ ಬಂದಿದ್ದು ಖಾಸಗಿ ದೃಶ್ಯ ಮಾಧ್ಯಮದ ಹೆಚ್ಚಳದೊಂದಿಗೆ. ಮನೋರಂಜನೆಗೆಂದು ಪ್ರಾರಂಭವಾದ ವಾಹಿನಿಗಳಲ್ಲಿ ಮೊದಮೊದಲಿಗೆ ಈ ರೀತಿಯ ಜ್ಯೋತಿಷ್ಯಕಾರರಿಗೆ ಹೆಚ್ಚಿನ ಪ್ರಾಮುಖ್ಯತೆಯಿರಲಿಲ್ಲ. ಬೆಳಗಿನ ಹೊತ್ತು ಕನ್ನಡ ಸಿನಿಮಾದ ಹಾಡುಗಳನ್ನೋ, ಹಾಸ್ಯ ದೃಶ್ಯಗಳನ್ನೋ ಪ್ರಸಾರ ಮಾಡಿ ಸಮಯ ತುಂಬುತ್ತಿದ್ದವು. ಒಂದು ವಾಹಿನಿ ಪ್ರಾಯೋಗಿಕವಾಗಿ ದಿನಭವಿಷ್ಯವನ್ನು ಬೆಳಗಿನ ಸಮಯ ಹೇಳಲಾರಂಭಿಸಿದ ಮೇಲೆ, ಆ ಕಾರ್ಯಕ್ರಮಕ್ಕೆ ಸಿಕ್ಕ ಟಿ.ಆರ್.ಪಿ ಉಳಿದ ವಾಹಿನಿಗಳಿಗೂ ಅಂತದ್ದೇ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಪ್ರೋತ್ಸಾಹ ನೀಡಿತು. ಬೆಳಗಿನ ಹೊತ್ತು ಸುಮ್ನೆ ಟಿವಿ ಓಡಲಿ ಎಂದು ಆನ್ ಮಾಡಿದವರಲ್ಲಿ ಒಂದಷ್ಟು ಜನ ಇಂತಹ ಜ್ಯೋತಿಷ್ಯ ಕಾರ್ಯಕ್ರಮದ ಮೋಡಿಗೆ ಒಳಗಾಗಲು ಶುರುವಾಯಿತು. ಫೋನ್ ಇನ್ ಕಾರ್ಯಕ್ರಮಗಳಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಅದಕ್ಕೆ ಜ್ಯೋತಿಷಿಗಳು ಹೇಳುವ ಸಲಹೆಗಳನ್ನು ಕೇಳಿಕೊಂಡು ಜನತೆ ಕೃತಾರ್ಥವಾಯಿತು. ಸೆನ್ಸಿಬಲ್ ಆಗಿ ಸಲಹೆ ನೀಡುವ ಜ್ಯೋತಿಷಿಗಳೂ ಕೆಲವರಿದ್ದರು. ಬಹುತೇಕರು ರಾಶಿ ಗ್ರಹ ದೋಷ ಎಂದು ತಲೆತಿಂದು ಸಮಸ್ಯೆಗಳಿಗಿರುವ ಮೂಲ ಕಾರಣವನ್ನು ಅರಿಯಲು ಭಯಪಡುವ ಜನರನ್ನು ಮತ್ತಷ್ಟು ಭಯಭೀತರನ್ನಾಗಿಸಿಬಿಟ್ಟರು!
ಇಡೀ ಜ್ಯೋತಿಷ್ಯ ವಲಯಕ್ಕೆ ಬಹುದೊಡ್ಡ ತಿರುವು ಸಿಕ್ಕಿದ್ದು ಮನೋರಂಜನೆ ನೀಡುವ ವಾಹಿನಿಗಳಿಂದಲ್ಲ. ಈ ವಾಹಿನಿಗಳಲ್ಲಿ ಅಬ್ಬಬ್ಬಾ ಎಂದರೆ ಬೆಳಗಿನ ಹೊತ್ತು ಅರ್ಧದಿಂದ ಒಂದು ಘಂಟೆಯವರೆಗಿನ ಸಮಯವಷ್ಟೇ ಸಿಗುತ್ತಿತ್ತು. ದಿನದ ಉಳಿದ ಸಮಯ ಅವರಿಗೆ ವಾಹಿನಿಗಳಲ್ಲಿ ಅವಕಾಶವಿರಲಿಲ್ಲ. ಈ ಕೊರತೆಯನ್ನು ನೀಗಿಸಿದ್ದು ದಿನದ ಇಪ್ಪತ್ತನಾಲ್ಕು ಘಂಟೆಯೂ ‘ಸುದ್ದಿ’ ನೀಡುವ ವಾಹಿನಿಗಳು! ಒಂದು ರಾಜ್ಯದಲ್ಲಾಗಲೀ ದೇಶದಲ್ಲಾಗಲೀ ದಿನವಿಡೀ ನೀಡುವುದಕ್ಕೆ ಸುದ್ದಿಗಳೆಲ್ಲಿರುತ್ತದೆ? ಸುದ್ದಿಯ ಕೊರತೆಯಿದೆಯೆಂದು ವಾಹಿನಿಯನ್ನು ಅನಿಯಮಿತವಾಗಿ ಪ್ರಸಾರ ಮಾಡುವಂತಿಲ್ಲವಲ್ಲ? ಹಾಗಾಗಿ ಇಪ್ಪತ್ತನಾಲ್ಕು ಘಂಟೆಯನ್ನು ತುಂಬಲು ಜ್ಯೋತಿಷಿಗಳ ಜೊತೆಜೊತೆಗೆ ವಾಸ್ತು ‘ಪಂಡಿತರಿಗೆ’, ಸಂಖ್ಯಾಶಾಸ್ತ್ರಜ್ಞರಿಗೆ ಮನ್ನಣೆ ದೊರೆಯಿತು. ನೀವು ಗಮನಿಸಿದರೆ ಕನ್ನಡದಲ್ಲಿರುವ ಅಷ್ಟೂ ಸುದ್ದಿ ವಾಹಿನಿಗಳ ಕಾರ್ಯಕ್ರಮಗಳು ಮತ್ತೊಂದು ವಾಹಿನಿಯ ತದ್ರೂಪಿನಂತೆಯೇ ಕಾಣಿಸುತ್ತದೆ. ತದ್ರೂಪು ಕಾರ್ಯಕ್ರಮಗಳು ಪ್ರಸಾರವಾಗುವ ಸಮಯವೂ ಹೆಚ್ಚು ಕಮ್ಮಿ ಒಂದೇ! ಏನೋ ಸಮಯ ತುಂಬಲು ಒಂದು ಘಂಟೆಯ ಸ್ಲಾಟನ್ನು ಇಂತಹ ಪ್ರಕಾಂಡ ಪಂಡಿತರಿಗೆ ನೀಡಿದ್ದರೆ ನೋಡುವವರ ಕರ್ಮವೆಂದು ಸುಮ್ಮನಾಗಬಹುದಿತ್ತೇನೋ. ಬೇಕೆನ್ನಿಸಿದಾಗ ದಿನದ ಇಪ್ಪತ್ತನಾಲ್ಕು ಘಂಟೆಯೂ ಅವರನ್ನು ಕೂರಿಸಿ ರಾಶಿ ಫಲ, ಗ್ರಹದೋಷ, ಕುಜದೋಷ ಎಂದು ಬೊಬ್ಬೆ ಹೊಡೆಯುವುದನ್ನು ಸಹಿಸಲು ಸಾಧ್ಯವೇ? ವಾಹಿನಿಯಲ್ಲಿ ಕೆಲಸ ಮಾಡುವವರನ್ನು ಕೇಳಿ ಅವರದು ಸಿದ್ಧ ಉತ್ತರ ‘ಜನರು ಇಂತಹ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ನೋಡ್ತಾರೆ, ಟಿ.ಆರ್.ಪಿ ಬರುತ್ತೆ. ಅದಕ್ಕೆ ಪ್ರಸಾರ ಮಾಡ್ತೀವಿ. ತಪ್ಪೇನು? ಜನರು ಏನು ಕೇಳ್ತಾರೋ ಅದನ್ನೇ ಕೊಡೋದು ನಾವು’. ಜನರು ಇವರಿಗೆ ಯಾವಾಗ ಪತ್ರ ಬರೆದು, ಫೋನ್ ಮಾಡಿ ಇಂತಹ ಕಾರ್ಯಕ್ರಮ ಕೊಡಿ ಎಂದು ಕೇಳಿದ್ದರು? ಸಮಯ ತುಂಬಿಸಲು ಇಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ, ಏನಾದರೊಂದು ಸಮಸ್ಯೆ ಇದ್ದೇ ಇರುವ ಜನರಿಗೆ ‘ನಿಮ್ಮ ಸಮಸ್ಯೆಗೆ ಇದು ಕಾರಣ’ ಎಂದು ಪೂರ್ಣ ಕಾನ್ಫಿಡೆನ್ಸಿನಿಂದ ತರತರದ ಮಣಿಮಾಲೆ ಧರಿಸಿದ ವ್ಯಕ್ತಿ ಹೇಳಿದಾಗ ಇದ್ದರೂ ಇರಬಹುದು ಎಂಬ ಭಾವ ಮೂಡಿಸಿ ಸಮಸ್ಯೆಗಿರುವ ಮೂಲವನ್ನು ಲೌಕಿಕ ಪ್ರಪಂಚದಲ್ಲಿ ಹುಡುಕದೆ ಗ್ರಹಗಳಲ್ಲಿ ಹುಡುಕುವಂತೆ ಮಾಡಿಬಿಟ್ಟಿದ್ದಾರೆ. ನಗರವಾಸಿ ‘ವಿದ್ಯಾವಂತರೇ’ ಇಂತಹ ಮೌಡ್ಯಕ್ಕೆ ಹೆಚ್ಚೆಚ್ಚು ಶರಣಾಗುತ್ತಿದ್ದಾರೆ.
ಮೇಲ್ನೋಟಕ್ಕೆ ‘ಅವಿದ್ಯಾವಂತರಲ್ಲಿ’, ನಗರದಿಂದ ದೂರವಿರುವ ಹಳ್ಳಿಗರಲ್ಲಿ ಮೌಡ್ಯ ಹೆಚ್ಚು ಎಂದು ಕಂಡುಬರುತ್ತದೆ. ಮಗುವಿಗೆ ಒಳ್ಳೆಯದಾಗಲಿ ಎಂದು ಹೊಟ್ಟೆಯ ಮೇಲೆ ಬರೆ ಎಳೆಸುವುದು, ಮೇಲಿನಿಂದ ಕೆಳಗೆ ಎಸೆಯುವುದು, ಊರ ಜಾತ್ರೆಯ ಸಮಯದಲ್ಲಿ ನಡೆಯುವ ವಿವಿಧ ರೀತಿಯ ಆಚರಣೆಗಳೆಲ್ಲವೂ ‘ಈ ಹಳ್ಳಿಯವರಿಗೆ ಮೂಡನಂಬಿಕೆ ಜಾಸ್ತಿ ಕಣ್ರೀ’ ಎಂಬ ಅನಿಸಿಕೆಯನ್ನು ಮೂಡಿಸುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಹಳ್ಳಿಗಳಲ್ಲಿ ಆಚರಿಸಲ್ಪಡುವ ಮೂಡನಂಬಿಕೆಗಳು ವರ್ಷಕ್ಕೊಂದೆರಡ್ಮೂರು ಬಾರಿ ಕಾಣಿಸಿಕೊಳ್ಳುತ್ತದೆಯಷ್ಟೇ. ಉಳಿದ ದಿನಗಳು ಕೆಲಸಗಳಲ್ಲೇ ಕಳೆದುಹೋಗುತ್ತದೆ. ಇದೇ ಕಾರಣಕ್ಕೆ ಹಳ್ಳಿಗಳಲ್ಲಿ ಆಚರಿಸಲ್ಪಡುವ ಹಬ್ಬಗಳ ಸಂಖೈಯೂ ಕಡಿಮೆಯೇ. ಒಂದೊಂದು ಊರಿನಲ್ಲಿ ಎರಡ್ಮೂರು ಹಬ್ಬಗಳು ಜೋರಾಗಿ ನಡೆದು ಉಳಿದವು ಹೆಸರಿಗಷ್ಟೇ ಇರುತ್ತವೆ. ನಗರಗಳ ಚಿತ್ರಣವೇ ಬೇರೆ. ನಾವು ತುಂಬಾ ಬ್ಯುಸಿ ಎಂದು ನಗರವಾಸಿಗಳು ಬೂಸಿ ಬಿಡುತ್ತರಾದರೂ ಖಾಲಿ ಕೂರೋದೇ ಜಾಸ್ತಿ. ಖಾಲಿ ಕುಂತಾಗ ತಲೆಗೆ ತರೇವಾರಿ ಯೋಚನೆ ಯೋಜನೆಗಳೆಲ್ಲ ಬಂದು ಅವುಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹೊಸ ಹೊಸ ಹಬ್ಬಗಳನ್ನು ತಲೆತಲಾಂತರದಿಂದ ಆಚರಿಸುವವರ ಹಾಗೆ ವರ್ತಿಸುತ್ತಾರೆ. ತುಂಬಾ ಹಿಂದೆಯೇನಲ್ಲ, ಹತ್ತದಿನೈದು ವರುಷದ ಕೆಳಗೆ ವರಮಹಾಲಕ್ಷ್ಮಿ ಹಬ್ಬವನ್ನು ಶೆಟ್ರ ಮನೆಯಲ್ಲಿ ಆಚರಿಸುವುದನ್ನು ಮಾತ್ರ ಕಂಡಿದ್ದೆ (ಬಹುಶಃ ಬ್ರಾಹ್ಮಣರೂ ಮಾಡುತ್ತಾರೇನೋ). ಈಗ ನಗರವಾಸಿಗಳು ಕಾಂಪಿಟೇಷನ್ನಿನ ಮೇಲೆ ವರಮಹಾಲಕ್ಷ್ಮಿಯನ್ನು ಕೂರಿಸುತ್ತಾರೆ. ದೇವರ ಮೇಲಿನ ಪ್ರೀತಿಯೋ ಲಕ್ಷ್ಮಿ ಮೇಲಿನ ಮೋಹವೋ ಕೇಳಬೇಡಿ! ಮತ್ತೊಂದು ಉದಾಹರಣೆಯೆಂದರೆ ಸತ್ಯನಾರಾಯಣ ಪೂಜೆ! ಬ್ರಾಹ್ಮಣರ ಮನೆಗಳಷ್ಟೇ ನಡೆಯುತ್ತಿದ್ದ ಈ ಪೂಜೆ ಈಗ ಬ್ರಾಹ್ಮಣರ ಮನೆಗಳಿಗಿಂತ ಶೂದ್ರ – ದಲಿತರ ಮನೆಗಳಲ್ಲೇ ಹೆಚ್ಚು! ಬ್ರಾಹ್ಮಣ್ಯದ ವಿಜಯವೆಂದು ಕರೆಯಬಹುದು! ವಾಹಿನಿಗಳ ಪ್ರಭಾವದಿಂದ ಹಳ್ಳಿಗಳಲ್ಲೂ ಈ ಎಲ್ಲಾ ಆಚರಣೆಗಳು ಕಾಲಿಡುತ್ತಿದೆ. ಹೋಗ್ಲಿ ಬಿಡ್ರೀ ಹಬ್ಬ ತಾನೆ ಎಂದುಕೊಳ್ಳುತ್ತಾ ಸುಮ್ಮನಾದ ಕಾರಣ ಜ್ಯೋತಿಷ್ಯ ಮತ್ತು ವಾಸ್ತು ಕೂಡ ಎಲ್ಲರ ಮನೆ – ಮನದೊಳಗೆ ಅಂತರ್ಗವಾಗುತ್ತ ಹೋಗಿದೆ. ನಂಬುವವರ ಮತ್ತು ನಂಬದವರ ಮಧ್ಯೆ ಮನಸ್ತಾಪ ಹುಟ್ಟುಹಾಕುತ್ತಿದೆ.
ವಾಹಿನಿಗಳು ಎಷ್ಟರಮಟ್ಟಿಗೆ ಈ ಜ್ಯೋತಿಷಿಗಳನ್ನು, ಗುರೂಜಿಗಳನ್ನು ಟಿ.ಆರ್.ಪಿಗೆ ಅವಲಂಬಿಸಿದೆ ಎಂಬುದಕ್ಕೆ ಒಂದು ಉದಾಹರಣೆ ಮಲೇಷ್ಯಾದ ವಿಮಾನವೊಂದು ನಿಗೂಡವಾಗಿ ನಾಪತ್ತೆಯಾದ ಪ್ರಕರಣ. ಅದರ ಕುರಿತಾಗಿ ಚರ್ಚೆ ನಡೆಸಬೇಕೆಂದರೆ ಪೈಲೆಟ್ಟನ್ನೋ, ವಿಮಾನ ಕಂಪನಿ ನಡೆಸಿದ ಅನುಭವವಿರುವರನ್ನೋ ಕರೆಸಬೇಕು. ಒಂದು ವಾಹಿನಿ ಗುರೂಜಿಯೊಬ್ಬರನ್ನು ಕರೆಯಿಸಿ ಓರ್ವ ಮಹಿಳೆ ಮತ್ತು ಪುರುಷನನ್ನು ‘ಹಿಪ್ನೊಟೈಸ್’ ಮಾಡಿ ಅವರನ್ನು ಅದ್ಯಾವುದೋ ಮಾಯೆಯಿಂದ ಮಲೇಷ್ಯಾ ವಿಮಾನದೊಳಗೆ ಕಳುಹಿಸಿ ಅಲ್ಲಿ ನಡೆದದ್ದೇನೆಂಬುದನ್ನು ತಿಳಿಸಿತು! ವಿಮಾನ  ಇನ್ನೂ ಪತ್ತೆಯಾಗಿಲ್ಲ ಬಿಡಿ. ಮೊನ್ನೆ ಮೊನ್ನೆಯಷ್ಟೇ ಭಾರತದ ಇಸ್ರೋದ ಮಂಗಳಯಾನ ಯಶಸ್ವಿಯಾದಾಗ ವಿಜ್ಞಾನಿಗಳನ್ನು, ಬಾಹ್ಯಾಕಾಶ ತಂತ್ರಜ್ಞರನ್ನು ಕರೆಸುವುದಕ್ಕೂ ಮೊದಲು ಸಂಘ ಪರಿವಾರದ ಸದಸ್ಯನನ್ನು ಜ್ಯೋತಿಷಿಗಳನ್ನು ಕರೆಸಿ ಚರ್ಚೆ ನಡೆಸುವ ಗುಣಮಟ್ಟ ನಮ್ಮ ವಾಹಿನಿಗಳದ್ದು! ಟೆಲಿಸ್ಕೋಪುಗಳಿಲ್ಲದಿದ್ದ ಕಾಲದಲ್ಲೇ ಗ್ರಹಗಳನ್ನು, ಅವುಗಳ ಚಲನೆಯನ್ನು ಒಂದಷ್ಟು ಕ್ರೂಡಾಗಿ ಕಂಡುಹಿಡಿದಿದ್ದ ಭಾರತದ ಪುರಾತನ ಕಾಲದ ಖಗೋಳ ಪಂಡಿತರ ಬಗ್ಗೆ ಇರುವ ಗೌರವವನ್ನೂ ವಾಹಿನಿಗಳ ಇಂತಹ ನಡೆಗಳು ಕಮ್ಮಿ ಮಾಡುತ್ತವೆ. ಆ ಪಂಡಿತರೂ ತಲೆ ತಲೆ ಚೆಚ್ಚುಕೊಳ್ಳುತ್ತಿರಬಹುದು!
ನೈಟಿ ಹಾಕ್ಕೊಂಡ್ರೆ ಕ್ಯಾನ್ಸರ್ ಬರುತ್ತೆ ಎಂದು ಹೇಳುವ ಮಾಜಿ ಜ್ಯೂನಿಯರ್ ಆರ್ಟಿಸ್ಟ್, ಹಾಲಿ ಬ್ರಹ್ಮಾಂಡ ಗುರೂಜಿಗಳಿದ್ದಾರೆ! ಒಂದು ವಾಹಿನಿಯಿಂದ ಓಡಿಸಿದಾಗ ಮತ್ತೊಂದು ವಾಹಿನಿಯವರು ಅಪ್ಪಿಕೊಳ್ಳುವಷ್ಟು ಅವರು ಫೇಮಸ್ಸು. ಇವೆಲ್ಲವಕ್ಕೂ ಕಳಶವಿಟ್ಟಂತೆ ಮೊನ್ನೆ ಮೊನ್ನೆ ಟಿವಿ 9 ವಾಹಿನಿಯಲ್ಲಿ ಸಚ್ಚಿದಾನಂದ ಬಾಬು ಎಂಬ ವಿದ್ವಾಂಸರು ಅತ್ಯಾಚಾರವನ್ನು ತಡೆಗಟ್ಟಲು ಅಮೋಘಾಮೋಘ ಸಲಹೆ ಸೂಚನೆಗಳನ್ನು ನೀಡಿದ್ದಾರೆ! ಯಾವ ಯಾವ ರಾಶಿಯ ಹುಡುಗಿಯರನ್ನು ಯಾರ್ಯಾರು ಅತ್ಯಾಚಾರ ಮಾಡುತ್ತಾರೆ, ಎಲ್ಲೆಲ್ಲಿ ಅತ್ಯಾಚಾರ ನಡೆಸಲಾಗುತ್ತದೆ, ಯಾವ ವಯಸ್ಸಿನವರ ಮೇಲೆ ಅತ್ಯಾಚಾರ ನಡೆಯುತ್ತದೆ ಎಂದೆಲ್ಲ ಒದರಿದ್ದಾರೆ. ಅತ್ಯಾಚಾರ ನಡೆಯುವಾಗ ಇವನು ಕೊಟ್ಟ ಮಂತ್ರದ ಚೀಟಿಯನ್ನು ಕೈಯಲ್ಲಿಟ್ಟುಕೊಳ್ಳಬೇಕಂತೆ, ಜಪಿಸಬೇಕಂತೆ! ಆಗ ಅತ್ಯಾಚಾರ ಸಂಪೂರ್ಣ ನಿಂತುಹೋಗುತ್ತಂತೆ! ಇಂತಹ ಕರ್ಮಕಾಂಡವನ್ನು ಸಹಿಸಲಾಗದೆ ಫೇಸ್ ಬುಕ್ಕಿನಲ್ಲಿ kickout astrologers (ಭಯೋತ್ಪಾದಕ ಜ್ಯೋತಿಷಿಗಳನ್ನು ಒದ್ದೋಡಿಸೋಣ) ಎಂಬ ಪುಟ ಪ್ರಾರಂಭಿಸಲಾಯಿತು. ಇದು ಫೇಸ್ ಬುಕ್ಕಿಗೆ ಸೀಮಿತವಾಗಷ್ಟೇ ಉಳಿಯದೆ ಕೆಲವೇ ದಿನಗಳಲ್ಲಿ ಬೆಂಗಳೂರಿನ ಟೌನ್ ಹಾಲ್ ಬಳಿ ಅನೇಕರು ಪ್ರತಿಭಟನೆಯನ್ನೂ ಕೈಗೊಂಡರು. ಭಾಸ್ಕರ ಪ್ರಸಾದ್ ಎಂಬುವವರ ಮೇಲೆ ಸಚ್ಚಿದಾನಂದ ಬಾಬು ಖೊಟ್ಟಿ ಕೇಸು ದಾಖಲಿಸಿದ್ದಾರೆ! ಉಳಿದ್ಯಾವ ವಾಹಿನಿಯೂ ಈ ಪ್ರತಿಭಟನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಿಲ್ಲವಾದರೂ ಬಿ.ಟಿವಿ ವಾಹಿನಿ ಪ್ರತಿಭಟನೆಯಲ್ಲಿ ಪಾಲ್ಗೊಂಡವರನ್ನು ಕರೆಸಿ ಚರ್ಚೆ ನಡೆಸಿತು. ಸಚ್ಚಿದಾನಂದ ಬಾಬುರವರನ್ನೂ ಆಹ್ವಾನಿಸಿದ್ದರು, ಬರಲಿಲ್ಲ ಎಂದು ಮತ್ತೆ ಹೇಳಬೇಕಾಗಿಲ್ಲ. ಬಿ.ಟಿವಿಯ ಮೇಲೆ, ವರದಿ ಪ್ರಕಟಿಸಿದ ಬೆಂಗಳೂರು ಮಿರರ್ ಮೇಲೂ ಕೇಸು ದಾಖಲಿಸಿದ್ದಾರಂತೆ ಸಚ್ಚಿದಾನಂದ ಬಾಬು! ಊರವರ ಭವಿಷ್ಯವನ್ನೆಲ್ಲಾ ಟಿವಿ ಮುಂದೆ ಒದರುವವರಿಗೆ ತಮ್ಮ ಮೇಲೆ ಕೇಸಾಗುತ್ತದೆಯೆನ್ನುವು ಭವಿಷ್ಯ ತಿಳಿಯಲಿಲ್ಲವಲ್ಲಾ?! ಗ್ರಹದ ಲೆಕ್ಕ ತಪ್ಪಿರಬೇಕು!

ಪ್ರತಿಭಟನೆಗಳು ಆ ಕ್ಷಣದ ಅಪಸವ್ಯಕ್ಕೆ ಪ್ರತಿಕ್ರಿಯೆಯಂತೆ ರೂಪಿತವಾಗಿ ಮುಂದಿನ ದಿನಗಳಲ್ಲಿ ಈ ಜ್ಯೋತಿಷಿಗಳ ಹಾವಳಿಗಳನ್ನು ಸ್ವಲ್ಪವಾದರೂ ಕಡಿಮೆಗೊಳಿಸಿದರೆ ಯಶಸ್ವಿಯಾದಂತೆ. ನಿಜವಾಗಿ ನೋಡಿದರೆ ಈ ಬ್ರಹ್ಮಾಂಡ ಗುರೂಜಿ, ಸಚ್ಚಿದಾನಂದ ಬಾಬು, ಇನ್ನು ಅನೇಕಾನೇಕ ಗುರುಗಳೆಲ್ಲರೂ ಅತ್ಯುತ್ತಮ ಉದ್ಯಮಿಗಳು. ಅವರೇನು ಯಾರಿಗೂ ಉಚಿತ ಸಲಹೆಗಳನ್ನು ನೀಡುವುದಿಲ್ಲ. ವಾಹಿನಿಗಳನ್ನು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುವುದರಲ್ಲಿ ನಿಸ್ಸೀಮರು. ಒಂದು ಸಲಹೆಗೆ ಐದು ಸಾವಿರ ಹತ್ತು ಸಾವಿರ ಪಡೆಯುವ ಜ್ಯೋತಿಷಿಗಳ ಸಂಖೈ ಬೆಂಗಳೂರಿನಲ್ಲಿ ಕಡಿಮೆಯೇನಿಲ್ಲ. ತಮ್ಮ ಬ್ಯುಸಿನೆಸ್ಸನ್ನು ಉತ್ತಮಗೊಳಿಸಲು ಯಾವ್ಯಾವ ಮಾರ್ಗವನ್ನನುಸರಿಸಬೇಕೋ ಅದನ್ನವರು ಮಾಡುತ್ತಿದ್ದಾರೆ. ಆದರೆ ಈ ವಾಹಿನಿಗಳಿಗೇನಾಗಿದೆ? ಒಂದೆಡೆ ಪವಾಡಗಳನ್ನು ಬಯಲುಗೊಳಿಸಲು ನಟರಾಜ್ ರಂತವರನ್ನು ಕರೆಸುತ್ತಾರೆ, ಅದು ಮುಗಿಯುತ್ತಿದ್ದಂತೆಯೇ ಗುರೂಜಿ ಇವತ್ತು ಇಂತಹ ಪ್ರಕರಣ ನಡೆದಿದೆ, ಇದಕ್ಕೆ ನಿಮ್ಮ ಗ್ರಹಗಳು ಏನೇಳ್ತಾವೆ ಎಂದು ಒದರುತ್ತಾರೆ! ಜನರು ಕೇಳಿದ್ದನ್ನಷ್ಟೇ(ಅವರು ಯಾವಾಗ ಕೇಳಿದ್ರು?) ಕೊಡುವ ಕೆಲಸವಲ್ಲ ವಾಹಿನಿಗಳದ್ದು, ಜನರ ಮನಸ್ಸನ್ನು ಉತ್ತಮವಾಗಿ ರೂಪಿಸುವುದು ಕೂಡ ಮಾಧ್ಯಮದ ಜವಾಬ್ದಾರಿ. ಇರುವ ಉತ್ತಮ ಮನಸ್ಸನ್ನೇ ಹಾಳುಗೆಡವುಹ ರೀತಿಯಲ್ಲಿ ಇವತ್ತಿನ ದೃಶ್ಯಮಾಧ್ಯಮ ಕಾರ್ಯನಿರ್ವಹಿಸುತ್ತಿದೆ. ಇಂತಹ ಪ್ರಖಾಂಡ ಜ್ಯೋತಿಷಿಗಳ ಮಾತು ಕೇಳಿಕೊಂಡು ಮನೆ ಮಠ ಜೀವನವನ್ನೆಲ್ಲ ಹಾಳು ಮಾಡಿಕೊಂಡವರ ಸಂಖೈ ದಿನೇ ದಿನೇ ಹೆಚ್ಚುತ್ತಿದೆ. ಕುಜ ದೋಷದ ನೆಪದಿಂದ ವರುಷಗಟ್ಟಲೇ ಏನೂ ಮಾಡದೆ ಸುಮ್ಮನೆ ಉಳಿದುಬಿಟ್ಟವರಿದ್ದಾರೆ, ವಾಸ್ತು ದೋಷದ ನೆಪದಲ್ಲಿ ಕಿಟಕಿ ತೆಗೆಸಿ, ಬಾಗಿಲು ತೆಗೆಸಿ, ಗೋಡಿ ಒಡೆದು, ಕೊನೆಗೆ ಮನೆಯನ್ನೇ ಒಡೆದು ಅಂತಿಮವಾಗಿ ಮನೆಯಿದ್ದ ಜಾಗವನ್ನು ಮಾರಿಕೊಂಡವರ ಸಂಖೈಯೂ ಕಡಿಮೆಯೇನಿಲ್ಲ. ಇಂತಹ ಸಂತ್ರಸ್ತರು ಯಾರನ್ನು ದೂರಬೇಕು? ದಿಲ್ಲಿ ಹೈಕೋರ್ಟ್ ಇತ್ತೀಚೆಗೆ ವಾಹಿನಿಗಳಲ್ಲಿ ಪ್ರಸಾರವಾಗುವ ಜ್ಯೋತಿಷ್ಯ ಕಾರ್ಯಕ್ರಮಗಳಿಗೆ ಕಡಿವಾಣ ಹಾಕದಿರುವ ಬಗ್ಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯನ್ನು ತರಾಟೆಗೆ ತೆಗೆದುಕೊಂಡಿದೆ. ಜ್ಯೋತಿಷ್ಯವೂ ವಿಜ್ಞಾನ, ವಾಸ್ತು ಕೂಡ ವಿಜ್ಞಾನ ಎಂದು ಬೊಬ್ಬೆಹೊಡೆಯುವವರು ಹೆಚ್ಚಾಗುತ್ತಿರುವಾಗ ನ್ಯಾಯಾಲಯದ ತರಾಟೆ ಉಪಯೋಗವಾದೀತೆ? ಜ್ಯೋತಿಷ್ಯದಲ್ಲೂ ವಿಜ್ಞಾನವಿದೆ, ವಾಸ್ತುವಿನಲ್ಲೂ ವಿಜ್ಞಾನವಿದೆ ಎಂಬುದನ್ನು ಒಪ್ಪುತ್ತಲೇ ವಿಜ್ಞಾನಕ್ಕಿಂತಲೂ ಹೆಚ್ಚಿನ ಅಜ್ಞಾನವಿದೆ, ಮತ್ತಷ್ಟು ಮಗದಷ್ಟು ಅಜ್ಞಾನವನ್ನು ಸೇರಿಸುತ್ತಾ ಜನರ ಭಯವನ್ನು ತಮ್ಮ ವ್ಯಾಪಾರಕ್ಕೆ ಬಳಸಿಕೊಳ್ಳುವವರ ಸಂಖ್ಯೆ ಹೆಚ್ಚಿದೆ ಎಂಬುದನ್ನು ಅರಿಯದಿದ್ದರೆ ಮತ್ತಷ್ಟು ಮನೆ – ಮನ ಒಡೆಯಲು ಈ ದೃಶ್ಯ ವಾಹಿನಿ ಮತ್ತವರು ಪೋಷಿಸುವ ಜ್ಯೋತಿಷಿಗಳು ಕಾರಣರಾಗುತ್ತಾರೆ ಎಂಬುದನ್ನು ಮರೆಯಬಾರದು.

No comments:

Post a Comment