Dec 22, 2014

ಮತಾಂತರವೂ ತಪ್ಪಲ್ಲ ಮರುಮತಾಂತರವೂ ತಪ್ಪಲ್ಲ; ಆದರೆ?

religious conversion
Dr Ashok K R
ಅಭಿವೃದ್ಧಿಯ ಹೆಸರಿನಿಂದ ಅಧಿಕಾರದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರಕಾರ ‘ಅಭಿವೃದ್ಧಿ’ಯ ಪಥದಿಂದ ಪಕ್ಕಕ್ಕೆ ಸರಿದು ತನ್ನ ಮಾತೃ ಸಂಸ್ಥೆಯಾದ ಆರ್.ಎಸ್.ಎಸ್ ಮತ್ತದರ ಪರಿವಾರದ ಇತರ ಸಂಸ್ಥೆಗಳ ತಾಳಕ್ಕೆ ಕುಣಿಯಲು ಸಿದ್ಧತೆಗಳು ನಡೆಯುತ್ತಿವೆಯಾ? ಇಂತಹುದೊಂದು ಅನುಮಾನಕ್ಕೆ ಕಾರಣವಾಗುವ ಅನೇಕ ಬಿಡಿ ಬಿಡಿ ಘಟನೆಗಳು ಒಂದಾದ ಮೇಲೊಂದರಂತೆ ನಡೆಯುತ್ತಿರುವುದು ಕಾಕತಾಳೀಯವಲ್ಲ. ಕೇಂದ್ರೀಯ ವಿದ್ಯಾಲಯಗಳಲ್ಲಿ ಸಂಸ್ಕೃತವನ್ನು ಕಡ್ಡಾಯಗೊಳಿಸುವ ಪ್ರಯತ್ನ, ಕ್ರಿಸ್ ಮಸ್ ದಿನದ ರಜಾ ವಿವಾದ, ಭಗವದ್ಗೀತೆಯನ್ನು ರಾಷ್ಟ್ರೀಯ ಪುಸ್ತಕವನ್ನಾಗಿಸುವ ಹೇಳಿಕೆಗಳು, ಉತ್ತರಪ್ರದೇಶದಲ್ಲಿ ಠುಸ್ಸೆಂದ ಲವ್ ಜೆಹಾದ್ ವಿವಾದ ಮತ್ತೀಗ ಪರಿವಾರದ ವಿವಿಧ ಅಂಗಸಂಸ್ಥೆಗಳು ನಡೆಸುತ್ತಿರುವ ‘ಘರ್ ವಾಪಸಿ’ ಎಂಬ ಮರುಮತಾಂತರದ ವಿವಾದಗಳೆಲ್ಲವೂ ಬಿಜೆಪಿಯೆಂದರೆ ಧರ್ಮಧಾರಿತ ರಾಜಕಾರಣ ಮಾಡುವುದಕ್ಕಷ್ಟೇ ಸರಿ ಎಂಬ ಆರೋಪಕ್ಕೆ ಪೂರಕವಾಗಿಯೇ ಇವೆ. ‘ಘರ್ ವಾಪಸಿ’ ಎಂಬ ಕಾರ್ಯಕ್ರಮ ಮುಂಚೆಯೂ ಅಲ್ಲಲ್ಲಿ ನಡೆದಿತ್ತು, ಈಗ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಬಹುಮತದ ಸರಕಾರವಿರುವಾಗ ಅದಕ್ಕೆ ಮತ್ತಷ್ಟು ರಂಗು ಬಂದಿದೆ. ಒಂದು ಧರ್ಮದವರನ್ನು ಓಲೈಸುವ ರಾಜಕಾರಣ ಮಾಡುವ ಆರೋಪಕ್ಕೆ ಗುರಿಯಾಗಿದ್ದ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಮತ್ತೊಂದು ಧರ್ಮದವರನ್ನು ಓಲೈಸುವ ರಾಜಕಾರಣ ಮಾಡುವ ಆರೋಪಕ್ಕೆ ಗುರಿಯಾಗುವ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಹೊರತುಪಡಿಸಿದರೆ ಹೆಚ್ಚೇನೂ ವ್ಯತ್ಯಾಸಗಳು ಗೋಚರಿಸುತ್ತಿಲ್ಲ.

ಬಹುಶಃ ‘ಹೋಮೋ ಸೇಪಿಯನ್ಸ್’ ಎಂಬ ಪ್ರಾಣಿ ಜನ್ಮ ತಳೆದ ದಿನದಿಂದಲೇ ಈ ಮತಾಂತರವೂ ಚಾಲ್ತಿಯಲ್ಲಿದೆ! ಭಾರತದ ಮಟ್ಟಿಗೆ ಮತಾಂತರ ಹಿಂದೂ ಧರ್ಮದಷ್ಟೇ ಹಳತು. ನಡೆದ ಕೆಲವು ಮತಾಂತರಗಳು ಮತ್ತೆ ಹಿಂದೂ ಧರ್ಮದ ಪರಿಧಿಯೊಳಗೇ ಬಂದು ನಿಂತರೆ, ಕೆಲವಷ್ಟು ಹಿಂದೂ ಧರ್ಮದಿಂದೊರತಾಗಿ ಪ್ರತ್ಯೇಕ ಐಡೆಂಟಿಟಿ ಪಡೆದುಕೊಂಡವು. ಭಾರತದ ಮಟ್ಟಿಗೆ ಈ ಮತಾಂತರಕ್ಕೆ ಹತ್ತಲವು ಕಾರಣಗಳು. ಪ್ರಮುಖ ಕಾರಣ ಹಿಂದೂ ಧರ್ಮದ ಜಾತಿಪದ್ಧತಿ ಎಂದರೆ ತಪ್ಪಾಗಲಾರದು. ಹುಟ್ಟಿನಿಂದ ಅಂಟಿಕೊಂಡ ಜಾತಿಯೆಂಬ ಶಾಪ(ಕೆಲವರಿಗೆ ವರ)ವನ್ನು ಹಿಂದೂ ಧರ್ಮದೊಳಗಿದ್ದುಕೊಂಡು ತೊಡೆದುಕೊಳ್ಳುವುದು ಅಸಾಧ್ಯ. ಅಸ್ಪೃಶ್ಯತೆಯ ಆಚರಣೆ ಕಡಿಮೆಯಾಗಿರಬಹುದು, ದೇವಾಲಯದೊಳಕ್ಕೆ ಪ್ರವೇಶವೂ ಸಿಕ್ಕುತ್ತಿರಬಹುದು ಆದರೆ ಕೊನೆಗೆ ಹಿಂದೂಗಳಲ್ಲನೇಕರ ಮನ ಈ ಜಾತಿಯಿಂದ ಮುಕ್ತವಾಗಿದೆಯಾ? ಎಂದು ಉತ್ತರವನ್ನರಸಿದರೆ ನಿರಾಶೆಯ ಪ್ರತಿಕ್ರಿಯೆಗಳೇ ಸಿಕ್ಕೀತು. ಜಾತಿಪದ್ಧತಿಯ ಕಾರಣದ ಜೊತೆಗೆ ಭಾರತವೆಂಬ ದೇಶದ ಮೇಲೆ ಕಾಲಕಾಲಕ್ಕೆ ನಡೆದ ಆಕ್ರಮಣಗಳು ಮತಾಂತರದ ಮತ್ತೊಂದು ಮಜಲನ್ನು ತೋರಿಸುತ್ತವೆ. ಸೋತ ರಾಜ್ಯದ ಜನತೆ ಗೆದ್ದ ರಾಜನ ಮತವನ್ನು ಒಪ್ಪಿಕೊಳ್ಳುತ್ತಿದ್ದರು. ಕೆಲವೊಮ್ಮೆ ಸ್ವಇಚ್ಛೆಯಿಂದ, ಕೆಲವೊಮ್ಮೆ ಬಲವಂತದಿಂದ. ಈ ರೀತಿಯ ಸ್ವಇಚ್ಛೆಯ ಮತಾಂತರ ಗೆದ್ದ ರಾಜನ ದ್ವೇಷ ಕಟ್ಟಿಕೊಳ್ಳಬಯಸದ, ರಾಜನ ಮತಕ್ಕೆ ಬದಲಾಯಿಸಿಕೊಂಡರೆ ಸಿಗಬಹುದಾದ ಸವಲತ್ತುಗಳ ಆಸೆಯಿಂದ ನಡೆದಿರುವ ಸಾಧ್ಯತೆಗಳೇ ಅಧಿಕ. ರಾಜನೊಬ್ಬ ಅನ್ಯಮತದೆಡೆಗೆ ಆಕರ್ಷಿತನಾಗಿ ಮತಾಂತರಗೊಂಡಾಗಲೂ ಪ್ರಜೆಗಳು ಧರ್ಮ ಬದಲಿಸುವ ಅನೇಕ ಉದಾಹರಣೆಗಳನ್ನು ಇತಿಹಾಸದ ಪುಟಗಳು ತಿಳಿಸಿಕೊಡುತ್ತದೆ. ನಂತರದ ದಿನಗಳಲ್ಲಿ ಮತದ ಜನಸಂಖೈ ಹೆಚ್ಚಿಸುವ ದೃಷ್ಟಿಯಿಂದ ಪ್ರಲೋಭನೆಗೊಳಪಡಿಸಿ ಮತಾಂತರ ನಡೆಸುವ ಕಾರ್ಯಗಳೂ ಸಾಂಗೋಪಸಾಂಗವಾಗಿ ನಡೆದವು. ಇದರಲ್ಲಿ ಪ್ರಮುಖ ಆರೋಪ ಕ್ರಿಶ್ಚಿಯನ್ ಮಿಷಿನರಿಗಳ ವಿರುದ್ಧ. ಅವರು ಮಾಡಿದ ಅನೇಕ ಸೇವಾಕಾರ್ಯಗಳನ್ನು ಮೆಚ್ಚುವವರೂ ಕೂಡ ಆ ಸೇವಾಕಾರ್ಯದ ಜೊತೆಜೊತೆಗೆ ಹಿಂದೂ ಧರ್ಮದ ವಿಗ್ರಹಾರಾಧನೆಯನ್ನು ಖಂಡಿಸುತ್ತ ಯೇಸುವಿನ ಮೂರ್ತಿಯನ್ನು ಆರಾಧಿಸಲು ಪ್ರೇರೇಪಿಸಿದ ಅವರ ನಡೆಗಳನ್ನು ಒಪ್ಪುವುದಿಲ್ಲ. ಹಿಂದೂ ಧರ್ಮದೊಳಗಿನ ಜಾತಿಪದ್ಧತಿ ಇಂತಹ ಪ್ರಲೋಭನೆಗೊಳಪಡಿಸಿದ ಮತಾಂತರಕ್ಕೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿತ್ತು ಎಂದರೆ ತಪ್ಪಲ್ಲ. ವಿಶೇಷವೆಂದರೆ ಈ ರೀತಿಯ ಪ್ರಲೋಭನೆಯ ಮತಾಂತರಕ್ಕೆ ಹಿಂದೂ, ಇಸ್ಲಾಂ, ಕ್ರಿಶ್ಚಿಯನ್ ಧರ್ಮದವರು ಅತಿ ಹೆಚ್ಚು ಆರಿಸಿಕೊಳ್ಳುವುದು ಕಾಡುಗಳಲ್ಲಿ ಯಾವ ಧರ್ಮದ ಗೊಡವೆಗೂ ಹೋಗದೆ ತಮ್ಮ ಭಯವನ್ನು ನಿವಾರಿಸುವ ಲೋಕಲ್ ಗಾಡುಗಳನ್ನು ನಂಬಿಕೊಂಡಿದ್ದ ಆದಿವಾಸಿಗಳನ್ನು. ಬಹಳಷ್ಟು ಪ್ರಸಂಗಗಳಲ್ಲಿ ಇದು ಹೆಸರಾಂತರಕ್ಕಷ್ಟೇ ಸೀಮಿತವಾಗಿ ಮತಾಂತರ ಮಾಡುವವರ ಉದ್ದೇಶವೇ ಮಣ್ಣುಪಾಲಾಗಿದೆ!

ಪ್ರಲೋಭನೆ ಮತ್ತು ಬಲವಂತ ಮತಾಂತರಕ್ಕೆ ಬಹುಮುಖ್ಯ ಕಾರಣಗಳಾದರೆ ಅತಿ ಚಿಕ್ಕ ಕಾರಣ ವ್ಯಕ್ತಿಯೊಬ್ಬ ತನ್ನ ವೈಯಕ್ತಿಕ ಅಧ್ಯಯನದಿಂದ ಮತ್ತೊಂದು ಧರ್ಮದ ತತ್ವ ಸಿದ್ಧಾಂತಗಳಿಗೆ ಆಕರ್ಷಿತನಾಗಿ ಆ ಮತವನ್ನು ಸ್ವೀಕರಿಸಿದರೆ ನನ್ನ ಜೀವನ ಮತ್ತಷ್ಟು ಉತ್ತಮವಾಗಬಲ್ಲದು ಎಂಬ ಭಾವನೆಯಿಂದ ಮತಾಂತರಗೊಳ್ಳುವುದು. ಮತಾಂತರಗೊಳ್ಳುತ್ತಿರುವ ಬಹುತೇಕರಿಗೆ ತಮ್ಮ ಮೂಲ ಧರ್ಮದ ಸಾರವಾಗಲೀ ಮತಾಂತರಗೊಳ್ಳುತ್ತಿರುವ ಧರ್ಮದ ಸಾರವಾಗಲೀ ತಿಳಿದೇ ಇರುವುದಿಲ್ಲ. ಹಿಂದೆ ಪ್ರಭುತ್ವದ ಮೇಲಾಟಕ್ಕೆ ಈಗ ರಾಜಕೀಯ ಮೇಲಾಟಕ್ಕೆ ಅವರ್ಯಾರೋ ಬಂದು ಹೇಳಿದರು, ಇವರು ಮತಾಂತರವಾದರು! ಆ ಧರ್ಮಕ್ಕಾಗಲೀ ಈ ಧರ್ಮಕ್ಕಾಗಲೀ ಇಂತಹ ಮತಾಂತರಗಳಿಂದ ಸಂಖೈಯನ್ನೊರತುಪಡಿಸಿದ ಇನ್ನ್ಯಾವುದಾದರೂ ಅನುಕೂಲವಾಯಿತಾ?

ಈಗ ಸಂಘ ಪರಿವಾರದ ವಿವಿಧ ಅಂಗ ಸಂಸ್ಥೆಗಳು ಮರುಮತಾಂತರದ ಮೂಲಕ ದಶಕಗಳ, ಶತಮಾನಗಳ ಹಿಂದೆ ಹಿಂದೂ ಧರ್ಮವನ್ನು ವಿಧವಿಧದ ಕಾರಣಗಳಿಗಾಗಿ ತೊರೆದು ಕ್ರಿಶ್ಚಿಯನ್, ಮುಸ್ಲಿಂ ಆದ ಜನರನ್ನು ಮತ್ತೆ ಹಿಂದೂ ಧರ್ಮಕ್ಕೆ ‘ಘರ್ ವಾಪಸಿ’ ಮಾಡುತ್ತಿದೆ. ‘ನೋಡಿ ಹಿಂದೂ ಧರ್ಮ ಹೀಗಿದೆ. ನಿಮ್ಮ ಪೂರ್ವಜರು ಅಪ್ಪಿಕೊಂಡ ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮ ಈ ರೀತಿಯಾಗಿದೆ. ಆಗಾಗಿ ಹಿಂದೂ ಧರ್ಮ ಶ್ರೇಷ್ಟ, ನೀವು ಹಿಂದೂ ಧರ್ಮಕ್ಕೆ ವಾಪಸ್ ಬನ್ನಿ’ ಎಂದು ಹಿಂದೂ ಧರ್ಮದ ಶ್ರೇಷ್ಟತೆಯನ್ನು ವರುಷಗಳ ಕಾಲ ಅವರಿಗೆ ತಿಳಿಸಿ ಹೇಳಿ ಅದವರ ಅರಿವಿಗೂ ಬಂದು ಸ್ವಇಚ್ಛೆಯಿಂದ ಹಿಂದೂ ಧರ್ಮಕ್ಕೆ ತಿರುಗಿ ಬಂದಿದ್ದರೆ ಮೆಚ್ಚುಗೆ ಮೂಡುತ್ತಿತ್ತೋ ಇಲ್ಲವೋ ತೆಗಳಿಕೆಯಂತೂ ಕೇಳಿ ಬರುತ್ತಿರಲಿಲ್ಲ. ಆದರೆ ಇವರು ನಡೆಸುತ್ತಿರುವುದು ಕೂಡ ಪ್ರಲೋಭನೆಯ ಮತಾಂತರ. ವರದಿಗಳ ಪ್ರಕಾರ ಆಗ್ರಾದಲ್ಲಿ ನಡೆದ ಮರುಮತಾಂತರ ಅಲ್ಲಿ ಭಾಗವಹಿಸಿದ್ದ ಮುಸ್ಲಿಮರಿಗೇ ಗೊತ್ತಿರಲಿಲ್ಲವಂತೆ! ಯಾವುದೋ ಹೋಮ ಕುಂತ್ಕಳ್ಳಿ ಅಂತೊಬ್ಬ ಹೇಳಿದನಂತೆ ಇವರು ಕುಳಿತರಂತೆ ನಂತರ ನಾವು ಹಿಂದೂ ಆದೋ ಅಂತ ಗೊತ್ತಾಯಿತಂತೆ! ಈ ಎಲ್ಲಾ ಅಂತೆ ಕಂತೆಗಳ ನಡುವೆ ಆ ಗುಂಪಿನಲ್ಲಿ ಬಾಂಗ್ಲಾದಿಂದ ವಲಸೆ ಬಂದಿದ್ದ ಮುಸ್ಲಿಮರೂ ಇದ್ದರು ಎಂಬುದು ಕೇವಲ ಅಂತೆ ಕಂತೆಯಾ ಅಥವಾ ನಿಜವಾ ತಿಳಿದುಬಂದಿಲ್ಲ! ಮತ್ತೊಂದು ವರದಿಯ ಪ್ರಕಾರ ಮರುಮತಾಂತರಕ್ಕೆ ಒಪ್ಪುವ ಕ್ರಿಶ್ಚಿಯನ್ನರಿಗೆ ಎರಡು ಲಕ್ಷ ಮತ್ತು ಮುಸ್ಲಿಮರಿಗೆ ಐದು ಲಕ್ಷ ಕೊಡುತ್ತಾರಂತೆ. (ಅದು ನಿಜವೇ ಆಗಿದ್ದಲ್ಲಿ ಒಮ್ಮೆ ಇತರ ಧರ್ಮಕ್ಕೆ ಮತಾಂತರಗೊಂಡು ಮತ್ತೆ ಹಿಂದೂ ಧರ್ಮಕ್ಕೆ ಮರುಮತಾಂತರವಾಗಲು ನಾನಂತೂ ರೆಡಿ!).


ಅಲ್ಲೊಂದಷ್ಟು ಇಲ್ಲೊಂದಷ್ಟು ನಡೆಯುತ್ತಲೇ ಇದ್ದ ಮರುಮತಾಂತರ, ಘರ್ ವಾಪಸಿಯಂತಹ ಕಾರ್ಯಕ್ರಮಗಳು ಇದ್ದಕ್ಕಿದ್ದಂತೆ ಮುನ್ನಲೆಗೆ ಬಂದಿದ್ದಾದರೂ ಯಾಕೆ? ನೇರವಾಗಿ ಬಿಜೆಪಿ ಅಥವಾ ಆರೆಸ್ಸಿಸಿನ ಕೈವಾಡ ಇವುಗಳಲ್ಲಿ ಕಾಣದಿದ್ದರೂ ಈ ಎಲ್ಲಾ ಬೆಳವಣಿಗೆಗಳ ಹಿಂದೆ ಅವುಗಳ ಸಿದ್ಧಾಂತ ಕೆಲಸನಿರ್ವಹಿಸುತ್ತಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಬಿಜೆಪಿಯ ಅಧ್ಯಕ್ಷರಾದ ಅಮಿತ್ ಶಾರವರು ಮರುಮತಾಂತರಕ್ಕೆ ಸಂಬಂಧಿಸಿದಂತೆ ನೀಡಿದ ಹೇಳಿಕೆಗಳು ಇದಕ್ಕೆ ಪುಷ್ಟಿ ನೀಡುತ್ತವೆ. ಮರುಮತಾಂತರವನ್ನು ಸದನದಲ್ಲಿ ವಿರೋಧ ಪಕ್ಷಗಳು ಒಕ್ಕೊರಲಿನಿಂದ ವಿರೋಧಿಸಿದವು. ಪ್ರಧಾನಿ ಮೋದಿಯವರು ಇದರ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಪಟ್ಟು ಹಿಡಿದರು. ಹಿಂದಿನ ಪ್ರಧಾನಿಯನ್ನು ಮೌನಿಯೆಂದು ಟೀಕಿಸುತ್ತಿದ್ದ ಮೋದಿ, ವಿದೇಶಗಳಲ್ಲಿ, ದೇಶದೊಳಗಡೆ ಯಾರೂ ಪ್ರಶ್ನೆ ಕೇಳದ ಸ್ಥಳಗಳಲ್ಲಿ ವಿಪರೀತವೆನ್ನಿಸುವಷ್ಟು ಮಾತನಾಡುವ ಮೋದಿ ವಿರೋಧ ಪಕ್ಷಗಳ ಸತತ ಒತ್ತಾಯದ ನಂತರವೂ ಸದನಕ್ಕೆ ಬಂದು ಮರುಮತಾಂತರದ ಬಗ್ಗೆ ಹೇಳಿಕೆ ನೀಡಲಿಲ್ಲ! ಇದನ್ನೇ ನೆಪವಾಗಿಟ್ಟುಕೊಂಡ ವಿರೋಧ ಪಕ್ಷಗಳು ಸದನವನ್ನು ನಡೆಯಲು ಬಿಡಲೇ ಇಲ್ಲ. ಬಿಜೆಪಿಗೂ ಸದನ ಸರಿಯಾಗಿ ನಡೆಯದಿದ್ದುದೇ ಬೇಕಾಗಿತ್ತಾ? ಅಧಿವೇಶನ ಮುಗಿದ ನಂತರ ಒಂದಾದ ಮೇಲೆ ಒಂದರಂತೆ ‘ಆರ್ಡಿನೆನ್ಸ್’ ರೂಪದ ತಾತ್ಕಾಲಿಕ ಕಾನೂನುಗಳನ್ನು ಜಾರಿ ಮಾಡುವ ಹುಮ್ಮಸ್ಸು ತೋರುತ್ತಿರುವ ಸರಕಾರಕ್ಕೆ ಸದನದಲ್ಲಿ ಚರ್ಚೆ ನಡೆಯಬಾರದೆಂಬುದೇ ಉದ್ದೇಶವಾಗಿತ್ತು ಎಂದು ತೋರುತ್ತದೆ. ಸಂಸತ್ ಅಧಿವೇಶನ ನಡೆಯದ ಸಮಯದಲ್ಲಿ ಜಾರಿಯಾಗಬೇಕಾದ ಆರ್ಡಿನೆನ್ಸುಗಳು ಅಧಿವೇಶನ ನಡೆದ ನಂತರ ಜಾರಿಯಾಗುತ್ತಿರುವುದು ದೇಶದ ಜನರಿಗೆ ‘ನೋಡ್ರಿ ಈ ವಿರೋಧ ಪಕ್ಷದವರು ಸದನ ಸರಾಗವಾಗಿ ನಡೆಯಲು ಬಿಡಲೇ ಇಲ್ಲ. ಆದರೂ ಜನರ ಅನುಕೂಲಕ್ಕಾಗಿ ನಾವು ಆರ್ಡಿನೆನ್ಸುಗಳನ್ನು ಜಾರಿ ಮಾಡಿದ್ದೇವೆ’ ಎಂಬ ಭಾವನೆ ಮೂಡಿಸುವ ಕೆಲಸವಿದು. ಈ ಆರ್ಡಿನೆನ್ಸುಗಳು ಜನತೆಗೆ ಎಷ್ಟು ಉಪಯೋಗವಾಗುತ್ತದೆ ಎಂಬುದು ಬೇರೆಯೇ ಪ್ರಶ್ನೆ. ಸಂಸತ್ ಕಲಾಪಕ್ಕೆ ಸರಿಯಾಗಿ ಘರ್ ವಾಪಸಿ ಪ್ರಚಾರಕ್ಕೆ ಬಂದಿದ್ದು ಕಲಾಪದ ಸರಾಗತೆಗೆ ಅಡ್ಡಿಯುಂಟು ಮಾಡಲೇ ಇರಬೇಕು. ಈ ಗದ್ದಲದ ನಡುವೆಯೇ ಬಿಜೆಪಿಯವರು ಮತಾಂತರವನ್ನೇ ನಿಷೇಧಿಸುವ ಕಾಯ್ದೆ ಜಾರಿಗೆ ತರಬೇಕು. ನಾವದನ್ನು ತಂದರೆ ನೀವದನ್ನು ಬೆಂಬಲಿಸುತ್ತೀರಾ ಎಂದು ವಿರೋಧ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನ ಮಾಡುತ್ತಿದ್ದಾರೆ. ಮತ್ತು ಮತಾಂತರವನ್ನು ನಿಷೇಧಿಸುವ ಕಾನೂನು ಜಾರಿ ಮಾಡುವುದಕ್ಕಾಗಿಯೇ ಬಿಜೆಪಿಯ ಮಾತೃ ಸಂಸ್ಥೆಗಳು ಈ ಮರುಮತಾಂತರ ಕಾರ್ಯಕ್ರಮವನ್ನು ಜೋರು ಸದ್ದಿನೊಂದಿಗೆ ನಡೆಸುತ್ತಿವೆಯಾ? ವಿರೋಧವನ್ನು ರಾಜಕೀಯ ಕಾರಣಕ್ಕಾಗಿ ಮಾತ್ರ ಮಾಡುವ ಅಭ್ಯಾಸ ಬೆಳೆಸಿಕೊಂಡಿರುವ ವಿರೋಧ ಪಕ್ಷಗಳಿಗೆ ಇದು ನುಂಗಲಾರದ ತುತ್ತು. ಮತಾಂತರವನ್ನೇ ನಿಷೇಧಿಸಿ ಎಂದರೆ ಅದು ವ್ಯಕ್ತಿಯ ಧಾರ್ಮಿಕ ಸ್ವಾತಂತ್ರ್ಯಕ್ಕಾಗುವ ಅಪಚಾರ, ಆ ಸ್ವಾತಂತ್ರ್ಯವನ್ನು ನೀಡಿರುವ ಸಂವಿಧಾನಕ್ಕಾಗುವ ಅಪಚಾರ. ನಿಷೇಧಿಸಬೇಡಿ ಎಂದರೆ ಮರುಮತಾಂತರವನ್ನು ಪ್ರಶ್ನಿಸಲಾಗದ ಅಸಹಾಯಕತೆ. ಒಟ್ಟಿನಲ್ಲಿ ಬಿಜೆಪಿಯ  ಗಾಳಕ್ಕೆ ಸಿಕ್ಕಿಬಿದ್ದ ಪರಿಸ್ಥಿತಿ ವಿರೋಧ ಪಕ್ಷಗಳದ್ದು. ಮತಾಂತರವಾಗಲಿ ಮರುಮತಾಂತರವಾಗಲಿ ತಪ್ಪಲ್ಲ, ಆದರೆ ಅದನ್ನು ಬಲವಂತದಿಂದ, ಪ್ರಲೋಭನೆಯಿಂದ, ಬೆದರಿಕೆಯಿಂದ ಮಾಡಿದರೆ ತಪ್ಪು ಎಂಬ ಸರಳ ಸತ್ಯವನ್ನು ಯಾವೊಬ್ಬ ರಾಜಕಾರಣಿಯೂ ಹೇಳದಿರುವುದು ಧರ್ಮವೆಂಬುದು ತಮ್ಮ ರಾಜಕೀಯ ಅನುಕೂಲಕ್ಕಷ್ಟೇ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ವಿವಿಧ ಹಿಂದೂ ಸಂಘಟನೆಗಳು ತಾವು ನಡೆಸುತ್ತಿರುವ ಘರ್ ವಾಪಸಿ ಕಾರ್ಯಕ್ರಮಕ್ಕೆ ನೀಡುತ್ತಿರುವ ಬಲವಾದ ಕಾರಣ ಭಾರತದ ನಿವಾಸಿಗಳೆಲ್ಲ ಮೂಲತಃ ಹಿಂದೂಗಳೇ ಆಗಿದ್ದರು ಎನ್ನುವುದು. ಹಿಂದೂ ಸಂಘಟನೆಗಳು ಅತ್ಯಂತ ಹೆಚ್ಚು ಪ್ರಚಾರದಿಂದ, ಪ್ರಲೋಭನೆಯಿಂದ ಹಿಂದೂಗಳ ಸಂಖೈಯನ್ನು ಹೆಚ್ಚಿಸುವ ಸಲುವಾಗಿ ಮರುಮತಾಂತರವನ್ನು ನಡೆಸುತ್ತಿರುವ ಸಂದರ್ಭದಲ್ಲೇ ಮಹಾರಾಷ್ಟ್ರದಿಂದ ಮತ್ತೊಂದು ರೀತಿಯ ಸುದ್ದಿ ಬಂದಿದೆ. ಖಂಡಿತವಾಗಿ ಇದು ಹಿಂದೂ ಸಂಘಟನೆಗಳಿಗೆ ಗಾಬರಿ ಹುಟ್ಟಿಸುವ ಬೆಳವಣಿಗೆ! ಸತ್ಯಶೋಧಕ ಒಬಿಸಿ ಪರಿಷತ್ತು 2011ರ ಅಕ್ಟೋಬರ್ ತಿಂಗಳಿನಿಂದಲೇ ‘ಘರ್ ವಾಪಸಿ’ ಕಾರ್ಯಕ್ರಮದ ತಯಾರಿ ನಡೆಸುತ್ತಿದೆ. 2016ರ ಅಕ್ಟೋಬರ್ ತಿಂಗಳಿನಲ್ಲಿ ಬಹುದೊಡ್ಡ ಮಟ್ಟದ ಮರುಮತಾಂತರ ಕಾರ್ಯಕ್ರಮವನ್ನು ನಡೆಸಲು ಯೋಜನೆ ಹಾಕಿಕೊಂಡಿದೆ. ಅಂದಹಾಗೆ ಇವರ ‘ಘರ್ ವಾಪಸಿ’ ಕಾರ್ಯಕ್ರಮ ಬೌದ್ಧ ಧರ್ಮಕ್ಕೆ! ಕಾರಣ? ಅವರ ಪ್ರಕಾರ ಭಾರತವೆಂಬುದು ಬೌದ್ಧ ಧರ್ಮದ ನಾಡು, ವಿಧವಿಧದ ಕಾರಣಗಳಿಂದ ಬೌದ್ಧ ಧರ್ಮೀಯರು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದಾರೆ. ಮತ್ತೆ ಮೂಲ ಧರ್ಮಕ್ಕೆ ಹೋಗುವ ಸಲುವಾಗಿ ಈ ಘರ್ ವಾಪಸಿ. ಇದಕ್ಕೆ ಪ್ರೇರೇಪಣೆ ಸಿಕ್ಕಿದ್ದು ಬೌದ್ಧ ಧರ್ಮದಿಂದ ಹಿಂದೂ ಧರ್ಮಕ್ಕೆ ವಲಸೆಯಾಗಿರುವ ಅನೇಕರು ಹಿಂದುಳಿದ ವರ್ಗಗಳಿಗೆ ಸೇರ್ಪಡೆಯಾಗಿದ್ದರು. ಹಿಂದೂ ಧರ್ಮದ ಜಾತಿ ವ್ಯವಸ್ಥೆಯಿಂದ ಅವರಿಗಾದ ಅವಮಾನ, ಅನಾನುಕೂಲಗಳೇ ಹೆಚ್ಚು. ಆ ಕಾರಣದಿಂದ ಮತ್ತೆ ಮೂಲ ಧರ್ಮಕ್ಕೆ ಹೋಗುವುದಕ್ಕಾಗಿ ಈ ಘರ್ ವಾಪಸಿ ಎಂಬುದು ಆಯೋಜಕರ ಮಾತು. ಹಿಂದುಳಿದ ವರ್ಗದವರಷ್ಟೇ ಅಲ್ಲದೆ ಬ್ರಾಹ್ಮಣ ಕುಟುಂಬಗಳು, ಕೆಲವು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಕುಟುಂಬಗಳೂ ಕೂಡ ಈ ಘರ್ ವಾಪಸಿಗೆ ಒಪ್ಪಿಕೊಂಡಿದ್ದಾರಂತೆ! ಲೇಖನದ ಮೊದಲಲ್ಲೇ ಹೇಳಿದಂತೆ ‘ಹೋಮೋ ಸೇಪಿಯನ್ಸ್’ ಎಂಬ ಪ್ರಾಣಿ ಜನ್ಮ ತಳೆದ ದಿನದಿಂದ ಮತಾಂತರ ಮರುಮತಾಂತರ ನಡೆಯುತ್ತಿದೆ. ಯಾವ ಕಾಲಘಟ್ಟದಿಂದ ನಡೆದ ಬದಲಾವಣೆಗಳನ್ನು ಮತಾಂತರವೆಂದು ಪರಿಗಣಿಸಬೇಕು? ಧರ್ಮಗಳು ಹುಟ್ಟುವುದಕ್ಕೂ ಮುಂಚಿನಿಂದಲೇ ಮಾನವ ಸಂತತಿ ಅಸ್ತಿತ್ವದಲ್ಲಿದೆ. ಈ ಧರ್ಮಗಳಿಗೆ ಸೇರಿದ ಮನುಷ್ಯರೆಲ್ಲರೂ ಮತಾಂತರಗೊಂಡವರೇ ಅವರನ್ನೆಲ್ಲಾ ಮೂಲ ಮಾನವ ಧರ್ಮಕ್ಕೆ ಮರುಮತಾಂತರಿಸುವುದೇಗೆ? ಕರ್ನಾಟಕದಲ್ಲಿ ಲಿಂಗಾಯತರ ಸಂಖೈ ಅಧಿಕ. ಲಿಂಗಾಯತ ಧರ್ಮದವರ (ಈಗದು ಹಿಂದೂ ಧರ್ಮದ ಒಂದು ಜಾತಿಯಾಗಿದೆ) ಸಂಖೈ ಹೆಚ್ಚಿದ್ದು ವಿವಿಧ ಹಿಂದೂ ಪಂಗಡಗಳ ಜನರು ಲಿಂಗ ಧರಿಸಿದ್ದು ಕಾರಣ. ಮುಂದೆ ಅವರನ್ನೂ ಮತ್ತೆ ಹಳೆಯ ಜಾತಿಗಳಿಗೆ ವಾಪಸ್ಸು ಕಳುಹಿಸಲಾಗುತ್ತದಾ? ಮಂಗನಿಂದ ಮಾನವ ಹುಟ್ಟಿದ್ದು ಎಲ್ಲಾ ಮಾನವರೂ ಮಂಗಧರ್ಮಕ್ಕೆ ಮತಾಂತರವಾಗಲೇಬೇಕು ಎಂದು ನಮ್ಮ ಪೂರ್ವಜರೆಲ್ಲಾ ಪ್ರತಿಭಟನೆಗೆ ಕುಳಿತರೆ ಏನು ಮಾಡುವುದು? 

ಈ ಎಲ್ಲಾ ಘಟನೆ ವರದಿಗಳಿಂದ ಒಂದಂತೂ ಸ್ಪಷ್ಟ. ಮರುಮತಾಂತರವನ್ನು ಸಮರ್ಥಿಸಿಕೊಂಡು ಮಾತನಾಡುತ್ತಿರುವ ‘ಹಿಂದೂ’ ಸಂಘಟನೆಯ ಮುಖಂಡರೆನ್ನಿಸಿಕೊಂಡವರಿಗೆ ಹಿಂದೂ ಧರ್ಮದ ಕೆಡುಕುಗಳನ್ನು ಸರಿಪಡಿಸುವುದಾಗಲೀ, ಒಳಿತುಗಳನ್ನು ಎಲ್ಲರಿಗೂ ತಿಳಿಯಪಡಿಸುವುದಾಗಲೀ ಮುಖ್ಯವಾಗಿಲ್ಲ, ಅವರಿಗೆ ಪ್ರಚಾರ ಬೇಕು. ಬಿಜೆಪಿಯ ನೇತೃತ್ವದ ಸರಕಾರ ಮುಂದೆಯೂ ಇದ್ದರೆ ನಮ್ಮ ಇಂತಹ ಕಾರ್ಯಕ್ರಮಗಳಿಗೆ ಅಧಿಕೃತ ಬೆಂಬಲ ದೊರಕುತ್ತದೆ, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬಹುದು ಎಂದು ಜನರನ್ನು ಭಾವನಾತ್ಮಕವನ್ನಾಗಿ ಸೆಳೆಯುವ ಪ್ರಯತ್ನವಿದು. ವಿವಿಧ ಹಿಂದೂ ಮುಖಂಡರು 800 ವರುಷದ ನಂತರ ದೆಹಲಿಯ ಗದ್ದುಗೆಯಲ್ಲಿ ಹಿಂದೂವೊಬ್ಬ ಕುಳಿತಿದ್ದಾನೆ ಎಂಬುದರ ಹಿಂದಿನ ತಾತ್ಪರ್ಯವೂ ಅದೇ. ಭಾರತ ಹಿಂದೂ ರಾಷ್ಟ್ರವಾಗಬೇಕು, ಪಾಕಿಸ್ತಾನದಂತಹ ಮುಸ್ಲಿಂ ರಾಷ್ಟ್ರಗಳಲ್ಲಿ ಮುಸ್ಲಿಮೇತರರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡಿ ಹಿಂಸಿಸುವ ರೀತಿಯಲ್ಲೇ ಭಾರತದಲ್ಲಿ ಹಿಂದೂಯೇತರರನ್ನು ಹಿಂಸಿಸಬೇಕು. ಆ ಹಿಂಸೆ ಮುಗಿದ ನಂತರ? ಪಾಕಿಸ್ತಾನದ ಪೇಶಾವರದಲ್ಲಿ ಅವರೇ ಪೋಷಿಸಿದ ಉಗ್ರಗಾಮಿಗಳು ಅದೇ ಧರ್ಮದ ಮಕ್ಕಳನ್ನು ಕೊಂದರು. ಅದು ಅವರ ಭಯೋತ್ಪಾದನೆಯ ರೀತಿ. ಹಿಂದೂವಾದಿಗಳ ಪ್ರಕಾರ ಹಿಂದೂ ಎಂಬುದು ಶಾಂತಿಯ ಧರುಮವಾದ್ದರಿಂದ ಆ ರೀತಿಯ ಉಗ್ರತೆ ಕಾಣದಿರಬಹುದು, ಹೆಚ್ಚೆಂದರೆ ಜಾತಿಯಾಧಾರಿತ ಹಿಂದೂ ಸನಾತನ ಧರ್ಮ ಮತ್ತೆ ಮುನ್ನೆಲೆಗೆ ಬಂದು ಕೆಲವರನ್ನು ದೇವಸ್ಥಾನದಿಂದ ಹೊರಗೆ ಕೆಲವರನ್ನು ಊರಿನಿಂದ ಹೊರಗೆ ಅಟ್ಟಲಾಗಬಹುದು ಅಷ್ಟೇ. ಇದು ಇವರ ಭಯೋತ್ಪಾದನೆಯ ರೀತಿ.

No comments:

Post a Comment