Dec 27, 2014

ಹಿಂದಿರುಗಿ ನೋಡಿದಾಗ

Dr Ashok K R
ಪೇಶಾವರದಲ್ಲಿ ತೆಹ್ರೀಕ್ ಇ ತಾಲಿಬಾನ್ ನಡೆಸಿದ ಪೈಶಾಚಿಕ ಕೃತ್ಯ ಧರ್ಮ ದೇಶಗಳ ಗಡಿ ದಾಟಿ ಮೂಡಿಸಿದ ಆಘಾತ, ಸತ್ತ ಪುಟ್ಟ ಮಕ್ಕಳ ಬಗೆಗೆ ಬೆಳೆದ ಆರ್ದ್ಯ ಭಾವದ ಕಣ್ಣೀರು ಒಣಗುವ ಮುನ್ನವೇ 2014ಕ್ಕೆ ತೆರೆಬೀಳಲಿದೆ. ಹಿಂದಿರುಗಿ ನೋಡಿದಾಗ ನೆನಪಾಗುವ ಸಂಗತಿಗಳು ಅನೇಕ. ಭಾರತದ ಮಟ್ಟಿಗೆ ರಾಜಕೀಯವಾಗಿ ಒಂದು ಪಕ್ಷ ಉತ್ತುಂಗಕ್ಕೇರಿದರೆ ಮತ್ತೊಂದು ಪಕ್ಷ ಪಾತಾಳಕ್ಕಿಳಿದಿದೆ. ದಶಕಗಳ ನಂತರ ಏಕಪಕ್ಷ ಬಹುಮತ ಪಡೆದಿದ್ದು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಸಾಧನೆ. ಹಿಂದೆಂದೂ ಕಾಣದಷ್ಟು ಕಡಿಮೆ ಸೀಟುಗಳನ್ನು ದಕ್ಕಿಸಿಕೊಂಡದ್ದು ಕಾಂಗ್ರೆಸ್ಸಿನ ಸಾಧನೆ! ಮಂಗಳಯಾನದ ಯಶಸ್ಸು ಇಡೀ ವಿಶ್ವ ಭಾರತದ ತಂತ್ರಜ್ಞಾನದೆಡೆಗೆ ಗಮನಹರಿಸುವಂತೆ ಮಾಡಿತು.
ಇದರೊಟ್ಟಿಗೆ ಎಂದಿನಂತೆ ಒಂದಷ್ಟು ವಿವಾದಗಳು, ಪ್ರಗತಿ, ಹಿನ್ನಡೆ, ಕಿತ್ತಾಟಗಳೆಲ್ಲವೂ ಹಿಂದಿನ ವರುಷಗಳಲ್ಲಿ ಜರುಗಿದಂತೆ ಮುಂದಿನ ವರುಷಗಳಲ್ಲಿ ಜರುಗುವಂತೆ ನಡೆಯಿತೆನ್ನಬಹುದು!
2014ರ ಮೊದಲರ್ಧವಿಡೀ ಭಾರತದಾದ್ಯಂತ ಚುನಾವಣೆಯದ್ದೇ ಕಾರುಬಾರು. ಹತ್ತು ವರುಷದ ಯು.ಪಿ.ಎ ಆಡಳಿತ, ಅದರಲ್ಲಿ ಕೊನೆಯ ಐದು ವರುಷದ ಭ್ರಷ್ಟಾಚಾರ ಭರಿತ ನಿರಾಡಳಿತ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರಕಾರವನ್ನು ಸೋಲಿಸಲು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿತ್ತು. ‘ವಿಕಾಸ ಪುರುಷ’ನೆಂಬ ಹೆಸರಿನಲ್ಲಿ ಭಾರತವನ್ನುಳಿಸಲು ಇವರೊಬ್ಬರಿಂದಲೇ ಸಾಧ್ಯವೆಂಬ ಭರ್ಜರಿ ಪ್ರಚಾರದೊಂದಿಗೆ ಮುನ್ನೆಲೆಗೆ ಬಂದ ನರೇಂದ್ರ ಮೋದಿ ಅವಶ್ಯವಿರುವ  ಎಲ್ಲಾ ರಾಜಕೀಯ ಪಟ್ಟುಗಳನ್ನೂ ಬಳಸಿ ಚುನಾವಣೆಯಲ್ಲಿ ಗೆಲುವು ಕಂಡರು. ಗೋದ್ರಾ ದುರಂತ ಮತ್ತು ಗೋದ್ರೋತ್ತರ ಹತ್ಯಾಕಾಂಡದ ನೆರಳು ನರೇಂದ್ರ ಮೋದಿಯವರ ಸುತ್ತಲಿದ್ದರೂ ಜನರು ಅದನ್ನು ಮರೆತೋ, ಅಥವಾ ಅಭಿವೃದ್ಧಿಯ ಮಾತಿನ ಮೋಡಿಗೆ ಮರುಳಾಗೋ ಅಥವಾ ಕೋಮುಭಾವನೆಯಿಂದಲೋ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಸ್ವತಃ ಬಿಜೆಪಿಯವರೇ ನಿರೀಕ್ಷಿಸದಿದ್ದ ಪ್ರಚಂಡ ಬಹುಮತ ದೊರಕಿಸಿಕೊಟ್ಟರು. ಚುನಾವಣಾ ಪ್ರಚಾರದ ಮಧ್ಯೆ ಗಿರಿರಾಜ್ ಸಿಂಗ್, ಅಮಿತ್ ಶಾರಂಥವರು ಕೋಮು ದ್ವೇಷದ ಭಾಷಣಗಳನ್ನು ಅಲ್ಲಲ್ಲಿ ಮಾಡುತ್ತಿದ್ದರಾದರೂ ಬಿಜೆಪಿಯ ಚುನಾವಣಾ ಪ್ರಚಾರದಲ್ಲಿ ಪ್ರಮುಖವಾಗಿದ್ದುದು ಅಭಿವೃದ್ಧಿ ಮತ್ತು ಕಾಂಗ್ರೆಸ್ಸಿನ ಭ್ರಷ್ಟಾಚಾರದ ಪ್ರಸ್ತಾಪ. ಅಭಿವೃದ್ಧಿಯ ಹೆಸರಿನಲ್ಲಿಯೇ ಅಧಿಕಾರವಿಡಿದ ಮೋದಿ ಸರಕಾರ ಸಾಗುತ್ತಿರುವ ದಿಕ್ಕು ಸರಿಯಾಗಿದೆಯಾ? Ofcourse, ಒಂದು ಹೊಸ ಸರಕಾರಕ್ಕೆ ಆಡಳಿತ ಪದ್ಧತಿಗೆ ಹೊಂದಿಕೊಳ್ಳಲು ಒಂದಷ್ಟು ಕಾಲಾವಕಾಶ ಬೇಕು. 2014ರ ಅಂತ್ಯ ಆ ಕಾಲಾವಕಾಶಕ್ಕೆ ಕೊನೆಯಾಗಲಿದೆ. ಈ ಆರು ತಿಂಗಳ ಮೋದಿ ಆಡಳಿತಾವಧಿಯನ್ನು ನೋಡಿದರೆ ಹೆಚ್ಚೇನೂ ಭರವಸೆ ಸಿಗಲಾರದು. ಸ್ವಚ್ಛ ಭಾರತ ಅಭಿಯಾನ ಎಂಬ ಅದ್ಭುತ ಕಲ್ಪನೆ ಗಿಮಿಕ್ಕುಗಳ ಮಟ್ಟಕ್ಕೇ ಸೀಮಿತವಾಗಿಬಿಟ್ಟಿದೆ. ಇನ್ನು ಮೇಕ್ ಇನ್ ಇಂಡಿಯಾ ಎಂಬುದು ತಪ್ಪು ಅಭಿವೃದ್ಧಿಯ ಮಾದರಿಯಷ್ಟೇ. ಮೇಲಿಂದ ಮೇಲೆ ವಿದೇಶಕ್ಕೆ ಭೇಟಿ ನೀಡುತ್ತಾ ಮಾತನಾಡುತ್ತಾ ಮತ್ತು ಮಾತನಾಡುತ್ತಾ ಇರುವ ಪ್ರಧಾನಿಯವರು ಮಾತಿನ ವಿಷಯದಲ್ಲಿ ಹಿಂದಿನ ಪ್ರಧಾನಿಯವರಿಗಿಂತ ಉತ್ತಮವೆನ್ನಿಸಿದ್ದಾರೆ! ಚುನಾವಣೆಯ ಭಾಷಣಗಳಲ್ಲಿ ಯು.ಪಿ.ಎ ಸರಕಾರದ ಯಾವ ನೀತಿಗಳನ್ನು ವಿರೋಧಿಸಿದ್ದರೋ ಆಡಳಿತದ ಖುರ್ಚಿಯೇರಿದ ನಂತರ ಅವುಗಳನ್ನೇ ಪುರಸ್ಕರಿಸುತ್ತಿದ್ದಾರೆ! ಉದಾಹರಣೆಗೆ ಆಧಾರ್, ವಿದೇಶಿ ಬಂಡವಾಳ ಹೂಡಿಕೆ. ಅಷ್ಟರಮಟ್ಟಿಗೆ ಇದು ಯು.ಪಿ.ಎ ಭಾಗ ಮೂರೆಂದು ತೋರುತ್ತದೆ. ಎಷ್ಟೇ ಅಭಿವೃದ್ಧಿಯ ಬಗ್ಗೆ ಮೋದಿ ಮಾತನಾಡಿದರೂ, ಅಭಿವೃದ್ಧಿ ಹೊರತುಪಡಿಸಿ ಬೇರೆಯದರ ಬಗ್ಗೆ ಮಾತನಾಡಬೇಡಿ ಎಂದು ತಮ್ಮ ಸಂಸದರಿಗೆ ಕಿವಿಮಾತು ಹೇಳಿದರೂ ಒಂದು ಧರ್ಮದ ಪಕ್ಷವಾಗಿಯೇ ಗುರುತಿಸಿಕೊಂಡ ಬಿಜೆಪಿಯ ಸಂಸದರು ಅಲ್ಲಲ್ಲಿ ತಮ್ಮ ಏಕಧರ್ಮ ಪ್ರೀತಿಯನ್ನು ಅನ್ಯಧರ್ಮ ದ್ವೇಷವನ್ನು ಕಾರುತ್ತ ವಿವಾದ ಸೃಷ್ಟಿಸುತ್ತಿದ್ದಾರೆ. ಸಂಘ ಪರಿವಾರ ಬಿಜೆಪಿಯ ಹಿಂದಿನ ಶಕ್ತಿ, ಹಿಂದೂ ಧರ್ಮ ರಾಷ್ಟ್ರವನ್ನಾಗಿ ಭಾರತವನ್ನು ಮಾಡಿ, ಉಳಿದ ಧರ್ಮದವರು ಎರಡನೇ ದರ್ಜೆಯ ಪ್ರಜೆಗಳಂತೆ ಬದುಕುವಂತೆ ಮಾಡಿಸುವುದು ಅವರ ಉದ್ದೇಶ. ‘ಭಗವದ್ಗೀತೆಯನ್ನು ರಾಷ್ಟ್ರೀಯ ಪುಸ್ತಕವನ್ನಾಗಿ ಮಾಡಿ’ ಎಂದು ಸುಷ್ಮಾ ಸ್ವರಾಜ್ ಹೇಳುವುದು, ಕೇಂದ್ರೀಯ ವಿದ್ಯಾಲಯಗಳಲ್ಲಿ ಸಂಸ್ಕೃತಿಯನ್ನು ಬಲವಂತವಾಗಿ ಹೇರುವುದು, ಸಾಧ್ವಿಯವರ ರಾಮ್ ಜಾದೆ, ಹರಾಮ್ ಜಾದೆ ಹೇಳಿಕೆಗಳು, ಪರಿವಾರದ ಅಂಗ ಸಂಸ್ಥೆಗಳು ನಡೆಸಲುದ್ದೇಶಿಸುವ ಬಲವಂತದ ಮರುಮತಾಂತರಗಳು, ಸ್ವತಃ ಮೋದಿಯೇ ಭಾರತದ ಪುರಾಣವನ್ನು ಆಧುನಿಕ ವಿಜ್ಞಾನವೆಂಬಂತೆ ನೀಡುವ ಹೇಳಿಕೆಗಳೆಲ್ಲವೂ ಅವರಿಗೆ ಪ್ರಿಯವೆನ್ನಿಸಿದ ಸಂಗತಿಗಳನ್ನು ಸತ್ಯವನ್ನಾಗಿ ಮಾರ್ಪಡಿಸುವ ಪ್ರಕ್ರಿಯೆ. ಅಬ್ರಾಹ್ಮಣ ವರ್ಗಕ್ಕೆ ಸೇರಿದ ನರೇಂದ್ರ ಮೋದಿ ಸುಷ್ಮಾ ಸ್ವರಾಜರನ್ನು ಹಿಂದಕ್ಕಾಕಿ ವಿದೇಶದಲ್ಲಿ ಪಡೆದುಕೊಳ್ಳುತ್ತಿರುವ ಪ್ರಸಿದ್ಧಿ ಬೆಂಗಳೂರಿನ ಪುಟ್ಟ ಆರೆಸ್ಸೆಸ್ ಶಾಖೆಯೊಂದರ ಸ್ಥಳೀಯ ಕಾರ್ಯಕರ್ತರಲ್ಲಿ ಹುಟ್ಟುಹಾಕಿದ ಅಸಹನೆ ತಳ್ಳಿಹಾಕುವಂತದ್ದಲ್ಲ! ಎಷ್ಟೇ ಅಭಿವೃದ್ಧಿಯ ಬಗ್ಗೆ ಜಪಿಸಿದರೂ ಸಂಘದ ನಿಲುವುಗಳಿಗೆ ನೆರವಾಗದಿದ್ದಲ್ಲಿ ನರೇಂದ್ರ ಮೋದಿಗೂ ಕಷ್ಟವಿದೆ. ಒಂದು ವಿಷಯದಲ್ಲಿ ನರೇಂದ್ರ ಮೋದಿ ಅದೃಷ್ಟಶಾಲಿ, ಕಳೆದ ಆರು ತಿಂಗಳುಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲದ ಬೆಲೆ ಇಳಿಯುತ್ತಲೇ ಇದೆ! ಕೇವಲ ಆರು ತಿಂಗಳಲ್ಲಿ ಪೆಟ್ರೋಲಿನ ಬೆಲೆ ಹದಿಮೂರು ರುಪಾಯಿಗಳಿಗಿಂತ ಕೆಳಗಿಳಿದಿದೆ. ಇದರಲ್ಲಿ ನರೇಂದ್ರ ಮೋದಿಯವರ ಪಾತ್ರವಿಲ್ಲವಾದರೂ ಅವರ ಅಧಿಕಾರದವಧಿಯಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆಯಾಗಿ ಅದರ ಪರಿಣಾಮದಿಂದ ದಿನಬಳಕೆ ವಸ್ತುಗಳ ಬೆಲೆಯೂ ನಿಯಂತ್ರಣಕ್ಕೆ ಸಿಕ್ಕಿದೆ. ಉಳಿದ ವಿಷಯಗಳಲ್ಲಿ ‘ಅಚ್ಛೇ ದಿನ್’ ಎಷ್ಟು ದಿನ ಇರುತ್ತದೋ ಗೊತ್ತಿಲ್ಲ, ಕೊನೇ ಪಕ್ಷ ಈ ವಿಷಯದಲ್ಲಾದರೂ ‘ಅಚ್ಛೇ ದಿನ್’ ಇನ್ನೊಂದಷ್ಟು ದಿನ ಇರಲಿ! ಸದ್ಯಕ್ಕಂತೂ ನರೇಂದ್ರ ಮೋದಿಯ ಆಡಳಿತ ಅದಾನಿ, ಅಂಬಾನಿಯಂಥವರಿಗೆ ಮಾತ್ರ ಎಂಬ ಭಾವ ಮೂಡಿಸುತ್ತಿದೆ 2015ಕ್ಕೆ ಅದು ಬದಲಾಗಲಿ ಎಂದು ಆಶಿಸೋಣ. 2015 ನರೇಂದ್ರ ಮೋದಿಯವರ ನೇತೃತ್ವದ ಸರಕಾರಕ್ಕೆ ಸವಾಲುಗಳು ಪ್ರಾರಂಭವಾಗುವ ವರುಷ.
ಇನ್ನು ಕರ್ನಾಟಕದ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ಇಲ್ಲೂ ಅಷ್ಟೇನೂ ಭರವಸೆಗಳಿಲ್ಲ. ಬಿಜೆಪಿಯ ಆಡಳಿತದ ವೈಖರಿಗೆ ಬೆಚ್ಚಿಬಿದ್ದು ಕಾಂಗ್ರೆಸ್ ಪಕ್ಷವನ್ನು ಆರಿಸಿತ್ತು ಜನತೆ. ಕಾಂಗ್ರೆಸ್ಸಿನ ಮೇಲೆ ಅಂತಹ ಭರವಸೆಗಳೇನೂ ಇಲ್ಲದಿದ್ದರೂ ಸಿದ್ಧರಾಮಯ್ಯನವರೇನಾದರೂ ಮಾಡಬಲ್ಲರು ಎಂದು ನಿರೀಕ್ಷಿಸಲಾಗಿತ್ತು. ಸರಕಾರ ಬಹಳಷ್ಟು ಕಾಲ ನಿದ್ರಾವಸ್ಥೆಯಲ್ಲೇ ಇತ್ತು. ಈಗ ಕೊಂಚ ತೆವಳುತ್ತಿದೆ ಎನ್ನಬಹುದು. ಸಿದ್ಧರಾಮಯ್ಯನವರು ಆರಂಭದಲ್ಲಿ ವಿರೋಧಿಸಿದ್ದರೂ ಡಿ.ಕೆ. ಶಿವಕುಮಾರರು ಸಚಿವ ಸ್ಥಾನ ಪಡೆಯಲು ಯಶ ಕಂಡರು. ಬಳ್ಳಾರಿಯ ಮಾದರಿಯಲ್ಲೆ ಕನಕಪುರ ರಿಪಬ್ಲಿಕ್ ಆಗುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿ ಗೋಚರಿಸುತ್ತಿದೆ. ಟಿವಿ 9 ವಾಹಿನಿಯನ್ನು ದಿನದ ಮಟ್ಟಿಗೆ ಪ್ರಸಾರವಾಗದಂತೆ ತಡೆದಿದ್ದು, ಆರ್ ಟಿ ಐ ಕಾರ್ಯಕರ್ತರೊಬ್ಬರನ್ನು ಪೋಲೀಸರು ಬಂಧಿಸುವಂತೆ ಮಾಡಿದ್ದೆಲ್ಲವೂ ದಿಕ್ಕು ತಪ್ಪುತ್ತಿರುವ ಆಡಳಿತದ ಸೂಚನೆ. ಬೆಂಗಳೂರಿನ ಭೂಕಬಳಿಕೆಯ ವಿರುದ್ಧ ನಡೆದ ದೊರೆಸ್ವಾಮಿ ನೇತೃತ್ವದ ಪ್ರತಿಭಟನೆಗೆ ಮಣಿದು ಕಬಳಿಕೆಗೊಂಡ ಭೂಮಿಯನ್ನು ವಾಪಸ್ಸು ಪಡೆಯು ಕಾರ್ಯವನ್ನು ಚುರುಕುಗೊಳಿಸಿದ ಸರಕಾರವೇ ಭೂಕಬಳಿಕೆಯ ಆರೋಪ ಹೊತ್ತ ಸಚಿವ – ಶಾಸಕರ ಬೆಂಬಲಕ್ಕೆ ನಿಲ್ಲುವುದು ಪ್ರಭಾವಿಗಳಿಗೆ ತಲೆಬಾಗುವ ಹಳೆಚಾಳಿಯ ಮುಂದುವರಿಕೆ. ಸದ್ಯದವರೆಗೆ ಹೆಚ್ಚೇನೂ ಹಗರಣಗಳಿಲ್ಲದ ರೀತಿಯಲ್ಲಿ ಆಡಳಿತ ನಡೆಸುತ್ತಿರುವ ಸಿದ್ಧರಾಮಯ್ಯನವರು ಇನ್ನಷ್ಟು ಆಕ್ಟಿವೇಟ್ ಆಗದಿದ್ದರೆ ಕಷ್ಟವಿದೆ. ಜನಪ್ರಿಯ ಯೋಜನೆಗಳಾದ ಅನ್ನಭಾಗ್ಯದ ಜೊತೆಜೊತೆಗೆ ದೂರಗಾಮಿ ಪ್ರಯೋಜನದ ಯೋಜನೆಗಳನ್ನು ರೂಪಿಸದಿದ್ದಲ್ಲಿ ಸಿದ್ಧರಾಮಯ್ಯ ಕೂಡ ಕರ್ನಾಟಕದ ಮತ್ತೊಬ್ಬ ಮುಖ್ಯಮಂತ್ರಿಯಾಗಿ ಇತಿಹಾಸದ ಪುಟಗಳನ್ನು ಸೇರುತ್ತಾರಷ್ಟೇ. ಸರಕಾರದ ವತಿಯಿಂದ ಬಿಡುಗಡೆಗೊಂಡ ದೇಶದಲ್ಲೆ ಮೊದಲ ಪ್ರಯತ್ನವಾದ ಕರ್ನಾಟಕ ಮೊಬೈಲ್ ಒನ್ ಸಿದ್ಧು ಸರಕಾರದ ಒಂದು ಉತ್ತಮ ಸಾಧನೆ (ಯೋಜನೆ ಪ್ರಾರಂಭವಾಗಿದ್ದು ಬಿಜೆಪಿಯ ಆಡಳಿತಾವಧಿಯ ಕೊನೆಯಲ್ಲಿ, ವೇಗ ಪಡೆದುಕೊಂಡಿದ್ದು ಸಿದ್ಧರಾಮಯ್ಯನವರ ಸರಕಾರದಲ್ಲಿ). ಟೀಕಿಸಲು ಯಾವುದೇ ಗಟ್ಟಿ ವಿಷಯ ಸಿಗದ ಕಾರಣ ಕರ್ನಾಟಕದ ಬಿಜೆಪಿ ಕೂಡ ಒಂದಷ್ಟು ತಾಳ್ಮೆ ಕಳೆದುಕೊಳ್ಳುತ್ತಿರುವುದರ ಸೂಚನೆಗಳು ಬೆಳಗಾವಿಯ ಅಧಿವೇಶನದಲ್ಲಿ ಕಾಣಿಸುತ್ತಿದೆ. ಕಾಂಗ್ರೆಸ್ಸಿನ ಶಾಸಕರೇ ಹೇಳುವಂತೆ ಈ ಸರಕಾರದ ಇಂಜಿನ್ (ಮುಖ್ಯಮಂತ್ರಿ) ಚೆನ್ನಾಗಿದೆ ಆದರೆ ಬೋಗಿಗಳು (ಸಚಿವರು) ಸರಿಯಿಲ್ಲ. ಬೋಗಿಗಳು ಮುನ್ನಡೆಯದಿದ್ದರೆ ಇಂಜಿನ್ ಕೂಡ ನಿಂತ ಜಾಗದಲ್ಲೇ ನಿಲ್ಲಬೇಕಾಗುತ್ತದೆ. ಮತ್ತೊಂದು ರೈಲಿಗೆ ದಾರಿಯಾಗುತ್ತದೆ!
ವಿಜ್ಞಾನದ ಕ್ಷೇತ್ರದಲ್ಲಿ ಇದು ಭಾರತಕ್ಕೆ ಹರ್ಷದ ವರುಷ. ಬಹುನಿರೀಕ್ಷೆಯ ಮಂಗಳಯಾನ ಯಶಸ್ಸು ಕಂಡ ವರುಷವಿದು. 2013ರ ನವೆಂಬರಿನಲ್ಲಿ ನಭಕ್ಕೇರಿದ ಯಂತ್ರ ಮಂಗಳನ ಸುತ್ತ ಗಿರಕಿ ಹೊಡೆಯಲಾರಂಭಿಸಿದ್ದು 2014ರ ಸೆಪ್ಟೆಂಬರ್ ಇಪ್ಪತ್ತನಾಲ್ಕರಂದು. ಅತ್ಯಂತ ಕಡಿಮೆ ಖರ್ಚಿನಲ್ಲಿ ಮೊದಲ ಪ್ರಯತ್ನದಲ್ಲೇ ಮಂಗಳನನ್ನು ತಲುಪುವುದರಲ್ಲಿ ಯಶಸ್ಸು ದಕ್ಕಿಸಿದ್ದು ನಮ್ಮ ವಿಜ್ಞಾನಿಗಳು. ಪ್ರತಿಯೊಂದು ಉಪಗ್ರಹ ಮೇಲೇರಿದಾಗಲೂ ‘ಇಲ್ಲೇ ಇಷ್ಟೊಂದು ಸಮಸ್ಯೆಗಳಿವೆ. ಅದನ್ನು ಬಗೆಹರಿಸುವುದು ಬಿಟ್ಟು ಉಪಗ್ರಹವನ್ನೇರಿಸುವ ಅನಿವಾರ್ಯತೆ ಏನು’ ಎಂಬ ಪ್ರಶ್ನೆಗಳು ಹುಟ್ಟಿ ಚರ್ಚೆಗೊಳಪಡುತ್ತವೆ. ವಿಜ್ಞಾನ ಮತ್ತು ಸಂಶೋಧನೆಗೆ ಪ್ರೋತ್ಸಾಹ ನೀಡುವುದು ಅವಶ್ಯಕ ಮತ್ತಾ ಸಂಶೋಧನೆಗೆ ಹಣ ವೆಚ್ಚ ಮಾಡುವುದು ವ್ಯರ್ಥವಾಗುವುದಿಲ್ಲ ಎಂಬಂಶವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಜೊತೆಗೆ ಇಸ್ರೋ ಎಂಬುದು ನಮ್ಮ ಉಪಗ್ರಹಗಳನ್ನು ಮಾತ್ರ ನಭಕ್ಕೆ ತಲುಪಿಸುತ್ತಿಲ್ಲ, ಅನೇಕ ದೇಶಗಳ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಹಾರಿಸುತ್ತಿದೆ, ಅದಕ್ಕೆ ತಕ್ಕ ಸಂಭಾವನೆಯನ್ನೂ ಪಡೆಯುತ್ತದೆ. ಮಂಗಳಯಾನದಂತಹ ಯಶಸ್ಸುಗಳು ಇಸ್ರೋದ ಉದ್ಯಮವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಸಂಶೋಧನೆಯ ಕ್ಷೇತ್ರಕ್ಕೆ ಜನರನ್ನು ಆಕರ್ಷಿಸುವುದಕ್ಕೂ ಈ ಯಶಸ್ಸು ಕಾರಣವಾಗುತ್ತದೆ.
ಟೀಕೆ ಹೊಗಳಿಕೆಗಳಿಗೆ ಬೆದರದೆ ಸಮಾಜದ ಪ್ರತಿ ಆಗುಹೋಗಿಗೂ ಪ್ರತಿಕ್ರಿಯಿಸುತ್ತಿದ್ದ ಮತ್ತು ಆ ಕಾರಣಕ್ಕಾಗಿಯೇ ಅನೇಕರ ಅಭಿಮಾನವನ್ನು ಮತ್ತಷ್ಟೇ ಸಂಖ್ಯೆಯ ದ್ವೇಷಕಾರುವವರನ್ನೂ ಸಂಪಾದಿಸಿದ್ದ ಯು.ಆರ್.ಅನಂತಮೂರ್ತಿಯವರು ಮರಣ ಹೊಂದಿದ ವರುಷವಿದು. ಕಲಾಗ್ರಾಮದಲ್ಲಿ ನಡೆದ ಅವರ ಅಂತ್ಯಸಂಸ್ಕಾರ ಅವರಿಷ್ಟು ದಿನದವರೆಗೆ ನಡೆದ ರೀತಿಯನ್ನು ಅಣಕಿಸುವಂತಿತ್ತು. ಕಲಾಗ್ರಾಮ ಸಮಾಧಿಗಳ ಆಗರವಾಗುತ್ತಿರುವ ಭಯವನ್ನೂ ಮೂಡಿಸಿತು. ಅನಂತಮೂರ್ತಿಯವರ ಸಾವು ತುಂಬಲಾರದ ನಷ್ಟವೆಂಬ ಮಾತುಗಳೆಲ್ಲ ಮಾತುಗಳಷ್ಟೇ. ತುಂಬು ಜೀವನ ನಡೆಸಿದರು, ಡಯಾಲಿಸಿಸ್ಸಿಗೆ ಒಳಗಾಗಿ ಅನಾರೋಗ್ಯದಿಂದ ಬಳಲುತ್ತಿದ್ದಾಗಲೂ ಸಮಾಜದ ಆಗುಹೋಗುಗಳಿಗೆ ಅವರು ಸ್ಪಂದಿಸುತ್ತಿದ್ದ ರೀತಿ (ಅದರಲ್ಲಿ ಸರಿಯೆಷ್ಟು ತಪ್ಪೆಷ್ಟು ಎಂಬುದು ಚರ್ಚೆಗೆ ಅರ್ಹ ಮತ್ತವರು ಆ ಚರ್ಚೆಗೆ ಸಿದ್ಧವಾಗಿರುತ್ತಿದ್ದರು) ನಮಗೆ ಮಾರ್ಗದರ್ಶಿಯಾಗಬೇಕು. ಅವರ ಸರಿ ಮತ್ತು ತಪ್ಪುಗಳೆರಡೂ ನಮಗೆ ಪಾಠವಾಗುತ್ತವೆ.
ಕನ್ನಡದಲ್ಲಿ ಗೆಲುವು ಕಂಡ ಮಾಣಿಕ್ಯ, ದೃಶ್ಯ, ಪವರ್ ಸ್ಟಾರ್, ಒಗ್ಗರಣೆ, ಅಧ್ಯಕ್ಷ ಚಿತ್ರಗಳೆಲ್ಲವೂ ರಿಮೇಕುಗಳಾಗಿತ್ತು. ದೃಶ್ಯ ರವಿಚಂದ್ರನ್ ಗೆ ಒಂದು ರಿಲೀಫಿನಂತೆ ಸಿಕ್ಕಿತ್ತೆನ್ನುವುದನ್ನು ಬಿಟ್ಟರೆ ಉಳಿದ ರಿಮೇಕು ಚಿತ್ರಗಳಲ್ಲಿ ತುಂಬಾ ವಿಶೇಷಗಳೇನಿರಲಿಲ್ಲ. ಸ್ವಮೇಕುಗಳಲ್ಲಿ ಒಂದು ಹಂತದ ಗೆಲುವು ಸಾಧಿಸಿದ್ದು ಉಗ್ರಂ, ಗಜಕೇಸರಿ, ಲವ್ ಇನ್ ಮಂಡ್ಯ, ಬಹಾದ್ದೂರ್. ಹೊಸತನದ ನಿರೂಪಣೆಯಿದ್ದೂ ಸೋತು ಹೆಸರು ಮಾಡಿದ್ದು ಉಳಿದವರು ಕಂಡಂತೆ. 2013ರಲ್ಲಿ ಅನೇಕ ಹೊಸಪ್ರಯೋಗಗಳನ್ನು ಮಾಡಿ ಗೆದ್ದಿದ್ದ ಕನ್ನಡ ಚಿತ್ರರಂಗ 2014ರಲ್ಲಿ ಒಂದಷ್ಟು ಸಪ್ಪೆಯಾಯಿತು. ಅನೇಕ ಚಿತ್ರಗಳ ಗೆಲುವು (ಮೇಲಿನ ಕೆಲವು ಚಿತ್ರಗಳನ್ನೂ ಸೇರಿಸಿ!) ಪತ್ರಿಕಾವರದಿಗೆ ಸೀಮಿತವಾಗುತ್ತಿದೆಯೇ ಹೊರತು ಹಿಟ್ ಚಿತ್ರ ನೋಡೋಣವೆಂದರೆ ಹತ್ತಿರದ ಚಿತ್ರಮಂದಿರಗಳಲ್ಲಿ ಚಿತ್ರವೇ ಇರುವುದಿಲ್ಲ! ಇನ್ನು ಹಿಂದಿಯಲ್ಲಿ ಹೈದರ್, ಕ್ವೀನ್ ನಂತಹ ಆಫ್ ಬೀಟ್ ಸಿನಿಮಾಗಳು ಬಂದವಾದರೂ ಹೇಳಿಕೊಳ್ಳುವಂತಹ ಯಶಸ್ಸು ಕಂಡ ಸಿನಿಮಾ ಬರಲಿಲ್ಲ. ಈ ವರುಷದ ಕೊನೆಯಲ್ಲಿ ಈ ಕಾಲದ ಹುಡುಗರನ್ನೂ ಆಕರ್ಷಿಸಿ ಸೆಳೆದ ಚಿತ್ರವೆಂದರೆ ಅದು ‘ಕಸ್ತೂರಿ ನಿವಾಸ’! ರಾಜ್ ಕುಮಾರ್ ಅಭಿನಯದ ಆ ಕಾಲದ ಕಪ್ಪು ಬಿಳುಪು ಚಿತ್ರ ಬಣ್ಣವನ್ನು ತುಂಬಿಕೊಂಡು ಹೊಸ ಚಿತ್ರದಷ್ಟೇ ಸಡಗರದಲ್ಲಿ ಬಿಡುಗಡೆಗೆ ಅಣಿಯಾದಾಗ ಇದ್ಯಾವ ಹುಚ್ಚು ಯೋಜನೆ ಎಂದನ್ನಿಸಿದ್ದು ಹೌದು. ಆದರೆ ಚಿತ್ರಮಂದಿರದ ಮುಂದೆ ಹೌಸ್ ಫುಲ್ ಬೋರ್ಡು ಬಿದ್ದಿದ್ದು ಕಥೆಯಾಧಾರಿತ ಚಿತ್ರಗಳಿಗೆ ಜನರನ್ನು ಸೆಳೆಯುವ ಶಕ್ತಿ ಹೆಚ್ಚು ಎಂಬುದನ್ನು ಮತ್ತೊಮ್ಮೆ ನಿರೂಪಿಸಿತು. ವರುಷಕ್ಕೆ ನೂರಿಪ್ಪತ್ತು ಚಿತ್ರಗಳು ಬಿಡುಗಡೆಯಾದರೂ ಇನ್ನೂ ಹಳೆಯ ಹಾಡುಗಳನ್ನೇ ಗುನುಗುನಿಸುವುದರ ಕಾರಣವನ್ನು ತಿಳಿಯಬೇಕಿದೆ.
ಇದ್ದುದರಲ್ಲಿ ಸಭ್ಯರ ಆಟ ಎಂದು ಪರಿಗಣಿತವಾದ ಕ್ರಿಕೆಟ್ಟಿನಲ್ಲಿ ಫಿಲಿಪ್ ಹ್ಯೂಸ್ ಸತ್ತ ರೀತಿ ಬೇಸರ – ಆಘಾತ ಮೂಡಿಸುವಂತದ್ದು. ಅಬಾಟ್ ಎಸೆದ ಬೌನ್ಸರ್ ವೊಂದು ಬಡಿದ ರೀತಿಗೆ ಫಿಲಿಪ್ ಹ್ಯೂಸ್ ಪ್ರಾಣ ತೆರಬೇಕಾಯಿತು. ಆತನ ಮನೆಯವರಿಗೆ, ಬೌನ್ಸರ್ ಎಸೆದ ಅಬಾಟ್ ಗೆ ಆದ ಆಘಾತವನ್ನು ಮಾತುಗಳಲ್ಲಿಡಿದಿಡುವುದು ಕಷ್ಟ. ಈ ಘಟನೆ ನಡೆದ ನಂತರ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದೆ. ಪಂದ್ಯವೊಂದರಲ್ಲಿ ಬೌನ್ಸರ್ ಚೆಂಡೊಂದು ವಿರಾಟ್ ಕೊಹ್ಲಿಯ ಹೆಲ್ಮಿಟ್ಟಿಗೆ ಬಡಿದಾಗ ಗಾಬರಿಯಿಂದ ಇಡೀ ಆಸ್ಟ್ರೇಲಿಯಾ ತಂಡ ಕೊಹ್ಲಿಯ ಬಳಿ ಧಾವಿಸಿ ಬಂದದ್ದು ಫಿಲಿಪ್ ಹ್ಯೂಸ್ ನ ಸಾವಿನ ಆಘಾತ ಮೂಡಿಸಿರುವ ನೆನಪುಗಳಿಗೆ ಸಾಕ್ಷಿ.
ಪಾಕಿಸ್ತಾನದ ಎಂದಿನ ಉಗ್ರರ ನುಸುಳುವಿಕೆಗೆ ಸಹಾಯ, ಭಾರತದ ಪ್ರಜಾಪ್ರಭುತ್ವ ಸರಕಾರಕ್ಕಿಂತ ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಅವರು ನೀಡುವ ಮರ್ಯಾದೆ, ಒಂದಷ್ಟು ಆತುರ ಪ್ರದರ್ಶಿಸಿದ ಮೋದಿ ಸರಕಾರದ ನೀತಿಗಳೆಲ್ಲವೂ ಸೇರಿ ಭಾರತ – ಪಾಕಿಸ್ತಾನ ಮುಖ ತಿರುಗಿಸಿ ಕುಳಿತುಕೊಳ್ಳುವಂತೆ ಮಾಡಿತು. ಭಾರತ – ಪಾಕ್ ಗಡಿಯ ಮಧ್ಯೆ ಅಸಹನೆ ಹೆಚ್ಚಿದ್ದ ದಿನಗಳಲ್ಲೇ ಕಾಕತಾಳೀಯವೆಂಬಂತೆ ಈ ಬಾರಿಯ ನೋಬೆಲ್ ಶಾಂತಿ ಪ್ರಶಸ್ತಿಯನ್ನು ಭಾರತ ಮತ್ತು ಪಾಕ್ ಪ್ರಜೆಗಳ ನಡುವೆ ಹಂಚಲಾಯಿತು! ತಾಲಿಬಾನಿಗಳ ಕಪಿಮುಷ್ಠಿಯ ಬಗ್ಗೆ ಬಿಬಿಸಿಗೆ ಬರೆದು ತಾಲಿಬಾನಿಗಳಿಂದ ಗುಂಡೇಟಿನ ದಾಳಿಗೊಳಗಾಗಿದ್ದ ಮಲಾಲ ಯೂಸುಫ್ ಝಾಹಿ ಮೂಲಭೂತವಾದಿ ಉಗ್ರರ ವಿರುದ್ಧ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕಿನ ಪರವಾಗಿ ಹೋರಾಟದ ಸಂಕೇತವಾಗಿರುವವಳು. ಪಾಕಿಸ್ತಾನದ ಮಲಾಲ ಜೊತೆಗೆ ಪ್ರಶಸ್ತಿ ಹಂಚಿಕೊಂಡಿದ್ದು ನಮ್ಮದೇ ದೇಶದ ರಾಜಧಾನಿಯಲ್ಲಿ ಅನೇಕ ವರುಷಗಳಿಂದ ಬಾಲಕಾರ್ಮಿಕರನ್ನು ರಕ್ಷಿಸುತ್ತ ಬಡ ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕೈಲಾಶ್ ಸತ್ಯಾರ್ಥಿ. ನೋಬೆಲ್ ಪ್ರಶಸ್ತಿ ಘೋಷಣೆಯಾಗುವವರೆಗೆ ನಮಗ್ಯಾರಿಗೂ ಕೈಲಾಶ್ ಸತ್ಯಾರ್ಥಿಯ ಬಗ್ಗೆ ಏನೂ ತಿಳಿದೇ ಇರಲಿಲ್ಲವೆಂಬುದು ಮಾಧ್ಯಮದ ವೈಫಲ್ಯವೆಂದು ಹೇಳಬಹುದು. ಮಕ್ಕಳ ಶಿಕ್ಷಣ ಮತ್ತು ಮಕ್ಕಳ ಶ್ರೇಯೋಭಿವೃದ್ಧಿಗೆ ಕೆಲಸ ಮಾಡಿದವರಿಗೆ ನೋಬೆಲ್ ಪ್ರಶಸ್ತಿ ದಕ್ಕಿದ ಕೆಲವೇ ದಿನಗಳೊಳಗೆ ಪೇಶಾವರದಲ್ಲಿ ತೆಹ್ರೀಕ್ ಇ ತಾಲಿಬಾನ್ ಸಂಘಟನೆ ಸೈನಿಕ ಮಕ್ಕಳ ಶಾಲೆಯ ಮೇಲೆ ದಾಳಿ ನಡೆಸಿ ನೂರೈವತ್ತಕ್ಕೂ ಹೆಚ್ಚಿನ ಮಕ್ಕಳನ್ನು ಹತ್ಯೆ ಮಾಡಿದೆ. ಧರ್ಮಗೃಂಥದ ಸಾಲುಗಳನ್ನು ಓದಿಸುತ್ತಾ ಗುಂಡು ಹಾರಿಸಿದ ಇವರ ಮನಸ್ಥಿತಿಯನ್ನು ಯಾವ ದೇವರು ಕ್ಷಮಿಸುತ್ತಾನೆ? ಕ್ಷಮಿಸುವ ದೇವರಿದ್ದರೆ ದೇವರ ಪೋಸ್ಟಿಗೆ ಆತ ನಾಲಾಯಕ್ಕು. ಪಾಕಿಸ್ತಾನದಲ್ಲಿ ಭಯೋತ್ಪಾದನೆಯನ್ನು ಪೋಷಿಸಿವುಲ್ಲಿ ಸೈನ್ಯದ ಪಾತ್ರ ಮಹತ್ವದ್ದು. ಮುಖ್ಯವಾಗಿ ಭಾರತದ ವಿರುದ್ಧ ಪರೋಕ್ಷ ಯುದ್ಧ ನಡೆಸಲು ಪಾಕಿಗಳಿಗೆ ಈ ಉಗ್ರರು ಬೇಕೆ ಬೇಕು. ಕಾಶ್ಮೀರದಲ್ಲಿ ಪ್ರಾಕ್ಸಿ ವಾರ್ ನಡೆಸಲು, ಮುಂಬೈನ ಜನನಿಬಿಡ ಪ್ರದೇಶಗಳಿಗೆ ಉಗ್ರರನ್ನು ನುಗ್ಗಿಸಿ ಅಮಾಯಕರನ್ನು ಕೊಲ್ಲಲು ಪಾಕಿ ಸೈನ್ಯಕ್ಕೆ ಈ ಉಗ್ರರೇ ಬೇಕು. ಮತಾಂಧತೆ ತುಂಬಿದ ಉಗ್ರರ ಕೈಗೆ ಬಂದೂಕು ಕೊಟ್ಟರೆ ಏನಾಗುತ್ತದೆ ಎಂಬುದಕ್ಕೆ ಪೇಶಾವರವೇ ಸಾಕ್ಷಿ. ಸಣ್ಣದೊಂದು ಅಸಮಾಧಾನತೆ ಸಾಕಾಯಿತು ಈ ಉಗ್ರರಿಗೆ ಸೈನಿಕ ಶಾಲೆಯ ಮೇಲೆ ದಾಳಿ ನಡೆಸಲು. ಪಾಕಿಸ್ತಾನ ಈ ಘಟನೆಯಿಂದಾದರೂ ಪಾಠ ಕಲಿಯುತ್ತದಾ? ಇತಿಹಾಸವನ್ನು ಗಮನಿಸಿದರೆ ಪಾಠ ಕಲಿಯುವ ಸೂಚನೆಗಳು ಹೆಚ್ಚಿಲ್ಲ.
ಪ್ರತಿ ವರುಷವೂ ಹಳೆಯ ಪುನರಾವರ್ತನೆಯಂತೆಯೇ ಕಾಣಿಸುವುದು ಅಧಿಕ. ಕಡಿಮೆಯೇ ಆಗದ ಅತ್ಯಾಚಾರ ಪ್ರಕರಣಗಳು, ಸದ್ದಿಲ್ಲದೆ ನಡೆಯುವ ಹೆಣ್ಣು ಭ್ರೂಣ ಹತ್ಯೆ, ನಾಗರೀಕವೆನ್ನಿಸಿಕೊಂಡ ಸಮಾಜದಲ್ಲೂ ಜೀವಂತವಿರುವ ಅಸ್ಪ್ರಶ್ಯತೆಯ ಆಚರಣೆಗಳೆಲ್ಲ ಬದಲಾವಣೆ ಎಂಬುದೇ ಸುಳ್ಳಾ ಎಂಬ ಪ್ರಶ್ನೆ ಮೂಡಿಸುತ್ತದಾದರೂ ಬದಲಾವಣೆಗಾಗಿ ನಿರಂತರ ಹೋರಾಟ ಅಗತ್ಯ ಎಂಬ ಅರಿವು ಮೂಡಿಸುತ್ತದೆ.

No comments:

Post a Comment