Nov 2, 2014

ನಾಲ್ಕಕ್ಷರ ಕಲಿ(ತ)ಯದ ದಲಿತರು ಮೊದಲು ಅಟ್ರಾಸಿಟಿ ಮನಸ್ಥಿತಿಯಿಂದ ಹೊರಬರಬೇಕು

false atrocity case
M L Lingaraju, Prajasamara
   ಸದುದ್ದೇಶದಿಂದ ಜಾರಿಗೆ ಬಂದಿದ್ದ ಜಾತಿನಿಂದನೆ, ಅಟ್ರಾಸಿಟಿ ಪ್ರಕರಣ ಇಂದು ಎಷ್ಟರ ಮಟ್ಟಿಗೆ ದುರುಪಯೋಗವಾಗುತ್ತಿದೆ ಎಂದರೆ, ನಿಜಕ್ಕೂ ಬೇಸರವಾಗುತ್ತದೆ. ಮೊನ್ನೆ ಫೇಸ್ಬುಕ್ನಲ್ಲಿ ದಲಿತ ಯುವಕನು ಹಾಕಿದ್ದ ಸ್ಟೇಟಸ್ಗೆ ಇನ್ನಾವುದೋ ಕೋಮಿನ ಯುವಕ ಕಮೆಂಟು ಮಾಡಿದ್ದಕ್ಕೆ ರಾದ್ಧಾಂತವೇ ನಡೆದುಹೋಯಿತು. ಸ್ಟೇಟಸ್ ಹಾಕಿದ್ದ ದಲಿತ ಯುವಕ, ಕಮೆಂಟ್ ಮಾಡಿದವನ ಮೇಲೆ ನಾಳೆ ಅಟ್ರಾಸಿಟಿ ದಾಖಲು ಮಾಡುವುದಾಗಿ ಅದಕ್ಕಾಗಿ ನನ್ನ ಬೆಂಬಲಕ್ಕೆ ಬರುವ ಸ್ನೇಹಿತರಿದ್ದರೆ, ಬನ್ನಿ ಎಂದು ಕರೆ ನೀಡಿದ್ದ.

   ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಸಣ್ಣಪುಟ್ಟ ವಾಗ್ವಾದಕ್ಕೂ ಅಟ್ರಾಸಿಟಿ ಎಂದರೆ, ಏನರ್ಥ. ಬಹುಶಃ ಇದನ್ನು ಜಾರಿಗೆ ತರಬೇಕೆಂದು ಅಂದು ಹೋರಾಟ ನಡೆಸಿದವರು ಕೂಡ ಅಟ್ರಾಸಿಟಿ ಹಂತಕ್ಕೆ ಬಂದು ತಲುಪುತ್ತದೆ ಎಂದುಕೊಂಡಿರಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ರನ್ನು ಸರಿಯಾಗಿ ಒದಿಕೊಂಡ ಯಾರೂ ಅಟ್ರಾಸಿಟಿಯಂತಹ ಪ್ರಕರಣ ದಾಖಲು ಮಾಡಲು ಇಚ್ಚಿಸುವುದಿಲ್ಲ. ಬಾಬಾ ಸಾಹೇಬರ ನಾಲ್ಕು ಸಾಲುಗಳನ್ನು ಕಂಠಪಾಠ ಮಾಡಿಕೊಂಡಿರುವ ಕೆಲವು  ಬಲಿತ ದಲಿತರು ಅಟ್ರಾಸಿಟಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೆಲವು ದುರ್ಬಳಕೆ ಮಾಡಿಕೊಂಡದ್ದೇ ಇಡೀ ಸಮುದಾಯಕ್ಕೆ ಜಾತಿನಿಂದನೆ ಶಾಪವಾಗಿ ಅಂಟಿಕೊಂಡಿದೆ.
   ಈಗ್ಗೆ ಕಳೆದೆರಡು ತಿಂಗಳುಗಳ ಹಿಂದೆ ನಮ್ಮಲ್ಲಿ ಪೋಲಿಸ್ ಇಲಾಖೆಯ ಉನ್ನತ ಅಧಿಕಾರಿಗಳ ಶೀತಲ ಸಮರ ನಡೆದು ವಾರವೀಡಿ ಇವರಿಬ್ಬರ ಸುದ್ದಿಯೇ ಎಲ್ಲಾ ಚಾನೆಲ್ಗಳಿಗೆ ಆಹಾರವಾಗಿದ್ದು ತಮಗೆಲ್ಲ ಗೊತ್ತು. ಅವರವರ ಆಂತರಿಕ ಜಗಳ ಹೋಗಿ ಕೊನೆಗದು ಜಾತಿವೈಷಮ್ಯದ ನಂಟು ಪಡೆಯಿತು. ಪರ-ವಿರೋಧದ ಬಣಗಳು ಹುಟ್ಟುಕೊಂಡು ಹಾರಾಟ-ಚೀರಾಟದ ಪ್ರತಿಭಟನೆಗಳು ನಡೆದವು. ಸಾರ್ವಜನಿಕ ವಲಯದಲ್ಲಿ ಇಲಾಖೆಯ ಬಗ್ಗೆ ತಪ್ಪು ಅಭಿಪ್ರಾಯ ಮೂಡದಂತೆ ಎಚ್ಚರ ವಹಿಸಬೇಕಾದ ಅಧಿಕಾರಿಗಳು ಬಹುಬೇಗನೇ ಎಚ್ಚೆತ್ತುಕೊಂಡಿದ್ದರೆ, ಘಟನೆ ಅಷ್ಟೊಂದು ಮಹತ್ವ ಪಡೆಯುತ್ತಿರಲಿಲ್ಲ. ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಮತ್ತು ಎಡಿಜಿಪಿ ರವೀಂದ್ರನಾಥ್ ಪ್ರಕರಣ ಇಬ್ಬರು ಸಚಿವರ ಮಧ್ಯಸ್ಥಿಕೆ ಮಧ್ಯೆ ಇತ್ಯರ್ಥಗೊಂಡಿದ್ದು ಬೇರೆ ಮಾತು.
   ಆದರೆ, ಎಡಿಜಿಪಿ ದಲಿತ ಅಧಿಕಾರಿ ಎನ್ನುವ ಕಾರಣಕ್ಕೆ ಆತ ತನ್ನ ತಪ್ಪನ್ನು ಸಮರ್ಥಿಸಿಕೊಳ್ಳಲು ಇಲಾಖೆಯ ಅಧಿಕಾರಿಗಳ ಮೇಲೆ ಅಟ್ರಾಸಿಟಿ ಕೇಸು ದಾಖಲಿಸಿದ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಯಿತು. ಕೆಲಸಕ್ಕೆ ಸೇರಿದಾಗಿನಿಂದ ಎಂದು ದಲಿತನೆಂದು ಹೇಳಿಕೊಳ್ಳದ ಅಧಿಕಾರಿ, ತನ್ನ ಮೇಲೆ ಆರೋಪ ಬಂತು ಎಂಬ ಒಂದೇ ಕಾರಣಕ್ಕೆ ನಾನೊಬ್ಬ ದಲಿತ ಅಧಿಕಾರಿ, ನನ್ನ ರಕ್ಷಣೆಗೆ ಯಾರೂ ಇಲ್ಲ, ನನ್ನ ಬೆಳವಣಿಗೆ ಸಹಿಸದೇ ರೀತಿ ಮಾಡಲಾಗಿದೆ. ನಾನು ಅಧಿಕಾರಿ ಎಂದು ಹೇಳಿದಾಗ್ಯೂ ಬಹಳ ಕನಿಷ್ಟವಾಗಿ ನನ್ನನ್ನು ನಡೆಸಿಕೊಳ್ಳಲಾಗಿದೆ ಅದಕ್ಕಾಗಿ ನಾನು ಅಟ್ರಾಸಿಟಿ ದಾಖಲು ಮಾಡುತ್ತಿದ್ದೇನೆ ಎಂದು ಮಾಧ್ಯಮಗಳ ಮುಂದೆ ಅಲವತ್ತುಕೊಂಡ. ಕೊನೆಗೆ ಸಿಐಡಿ ತನಿಖೆಯಲ್ಲಿ ಅದೇ ಅಧಿಕಾರಿ ತನ್ನ ಮೊಬೈಲ್ನಿಂದ ಪೋಟೋ ತೆಗೆದಿರುವುದಾಗಿ ಸಾಭೀತಾಗುತ್ತಿದ್ದಂತೆ, ಸರ್ಕಾರ ಕೂಡಲೇ ಅವರನ್ನು ಇನ್ನೊಂದು ಸ್ಥಳಕ್ಕೆ ವರ್ಗ ಮಾಡಿತು. ನಂತರ ಅದು ಸುದ್ದಿಯೇ ಇಲ್ಲದಂತಾಯಿತು.
   ಪ್ರಸ್ತುತ ಯಾಕೆ ಘಟನೆಯನ್ನು ನೆನಪಿಸಬೇಕಾಯಿತೆಂದರೆ, ಸ್ವತಂತ್ರ ಭಾರತದಲ್ಲಿ ಒರ್ವ ಎಡಿಜಿಪಿ ಮಟ್ಟದ ಅಧಿಕಾರಿ ಕೂಡ ಅಟ್ರಾಸಿಟಿಯ ಮನಸ್ಥಿತಿಯಲ್ಲಿ ಹೊರಳಾಡು ತ್ತಿದ್ದರೆ, ನಾಲ್ಕಕ್ಷರ ಕಲಿಯದ ಬಹುಸಂಖ್ಯಾತ ದಲಿತರ ಮನಸ್ಥಿತಿಯೇನು..? ಅವರ ಪಾಡೇನು. .? ಕ್ಷುಲ್ಲಕ ಕಾರಣಕ್ಕೆ ಅಟ್ರಾಸಿಟಿಯನ್ನು ದುರ್ಬಳಕೆ ಮಾಡುತ್ತಿರುವವರಿಗೂ, ನಾಲ್ಕಕ್ಷರ ಕಲಿತು ದೊಡ್ಡದೊಡ್ಡ ಹುದ್ದೆ ಗಿಟ್ಟಿಸಿಕೊಂಡಿರುವವರಿಗೆ ಇರುವ ವ್ಯತ್ಯಾಸವಾದರೂ ಏನು..? ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ.
   ನಿಮಗೆ ಗೊತ್ತಿರಲಿ ರಾಯಚೂರು ಜಿಲ್ಲೆಯ ಲಿಂಗಸೂರು ವಿಧಾನಸಭಾ ಕ್ಷೇತ್ರದಲ್ಲಿ ಅಸ್ಪøಶ್ಯರು ಆಯ್ಕೆಯಾದರೆ, ಬರೀ ಅಟ್ರಾಸಿಟಿ ಕೇಸುಗಳನ್ನೇ ಮಾಡುತ್ತಾರೆಂದು ಮೇಲ್ಜಾತಿಯ ಜನರು ಕಳೆದೆರಡು ಅವಧಿಯ ಚುನಾವಣೆಗಳಲ್ಲಿ ಸ್ಪøಶ್ಯ ಗುಂಪಿನ, ತಾಲೂಕಿಗೆ ಯಾವುದೇ ರೀತಿಯ ಸಂಬಂಧವು ಇರದ ಅಭ್ಯರ್ಥಿಯನ್ನು ಗೆಲ್ಲಿಸುತ್ತಾ ಬಂದಿದ್ದಾರೆ. ಬಹುಶಃ ಇದು ಎಲ್ಲಾ ಮೀಸಲು ಕ್ಷೇತ್ರಗಳ ಕತೆಯೂ ಆಗಿರಬಹುದು.
   ಆದರೆ, ಲಿಂಗಸೂರು ಕ್ಷೇತ್ರದಲ್ಲಿ ಪ್ರತಿಯೊಂದು ಕೆಲಸಕಾರ್ಯ ನಡೆಯಬೇಕಾದರೆ, ಎಲ್ಲದರಲ್ಲೂ ದಲಿತರನ್ನು ಮುಂದೆ ಬಿಡಲಾಗುತ್ತದೆ. ಚುನಾವಣೆ ಅಧಿಕಾರದ ವಿಷಯ ಬಂದಾಗ ಎಂದಿನಂತೆ ಕಡೆಗಣಿಸಲಾಗುತ್ತದೆ. ಇನ್ನೊಂದು ತಾಲೂಕಿನಲ್ಲಿ ನಡೆದಿರುವ ಅಷ್ಟು ಅಟ್ರಾಸಿಟಿ ಪ್ರಕರಣಗಳಲ್ಲಿ ಬಹುಪಾಲು ಅಟ್ರಾಸಿಟಿ ಪ್ರಕರಣಗಳನ್ನು ದಾಖಲಿಸಿದವರು ಸ್ಪøಶ್ಯರೇ ವಿನಃ ಅಸ್ಪøಶ್ಯರಲ್ಲ.
   ಅಸಲಿ ಸತ್ಯ ಗೊತ್ತಿದ್ದರೂ ಕೂಡ ಮೇಲ್ವರ್ಗಗಳು ಹೆಚ್ಚಾಗಿ ಸ್ಪøಶ್ಯರನ್ನು ಓಲೈಸಿಕೊಂಡು ಅವರನ್ನೇ ಚುನಾವಣೆಗಳಲ್ಲಿ ಗೆಲ್ಲಿಸಿಕೊಂಡು ಬರುತ್ತಿವೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ಪøಶ್ಯರು ಗೆಲ್ಲಲು ಇದು ಕೂಡ ಒಂದು ಕಾರಣಗ್ರಾಮೀಣ ಪ್ರದೇಶದಲ್ಲಿ ದಾಖಲಾಗುವ ಜಾತಿನಿಂದನೆ ಪ್ರಕರಣಗಳು ಕೊನೆಗೆ ರಾಜಕೀಯದೊಂದಿಗೆ ತಳುಕು ಹಾಕಿಕೊಂಡು ಸಂಧಾನವಾಗುತ್ತವೆ. ಪ್ರಕರಣ ಸಂಧಾನವಾಗುತ್ತಿದ್ದಂತೆ ಒಟ್ಟು ಸಮುದಾಯದಲ್ಲಿ ದಲಿತರ ಕುರಿತು ಕೆಟ್ಟ ಅಭಿಪ್ರಾಯ ಮೂಡುತ್ತದೆ.
   ದಲಿತರು ತಮ್ಮ ಅನುಕೂಲಕ್ಕಾಗಿ ಮಾತ್ರ ಅಟ್ರಾಸಿಟಿ ಬಳಸಿಕೊಳ್ಳುತ್ತಾರೆ. ಯಾರಾದರೂ ಆಮಿಷ ಒಡ್ಡಿದರೆ, ಮತ್ತೊಬ್ಬರ ಮೇಲೆ ಅಟ್ರಾಸಿ ಟಿ ದಾಖಲು ಮಾಡುವುದು, ದುಡ್ಡುಕೊಟ್ಟರೆ ಅದನ್ನು ವಾಪಸ್ಸು ಪಡೆಯುವುದು ಸಾಮಾನ್ಯ ವಾಗಿ ಬಿಟ್ಟಿದೆ. ಅವರವರ ಅನುಕೂಲಕ್ಕಾಗಿ ಜಾತಿನಿಂದನೆ ಅಸ್ತ್ರ ಬಳಕೆಯಾಗುತ್ತಿದೆ ಎಂಬ ಸಾರ್ವಜನಿಕ ಅಭಿಪ್ರಾಯಕ್ಕೆ ಪುಷ್ಠಿ ಸಿಗುವಂತೆ ಕೆಲವೊಂದು ಪ್ರಕರಣಗಳು ನಡೆದಿವೆ.
   ಕರ್ನಾಟಕದಲ್ಲಿ ಒಂದು ಮಾಡಿಸಿದ್ದೇ ಆದರೆ, ಸಮಾಜದಲ್ಲಿ ತುಳಿತಕ್ಕೊಳಗಾಗಿ, ನೋವು ಅನುಭವಿಸುತ್ತಿರುವ ಅಸ್ಪøಶ್ಯರಲ್ಲಿ ಅಸ್ಪøಶ್ಯರಾಗಿ ಬದುಕುತ್ತಿರುವ ಕಟ್ಟಕಡೆಯ ಜನರು ಜಾತಿ ನಿಂದನೆ ಪ್ರಕರಣ ದಾಖಲು ಮಾಡಿದ್ದು ಕಡಿಮೆ. ಬದಲಿಗೆ ಸ್ಪøಶ್ಯರೆನಿಸಿಕೊಂಡ ವರೇ, ತಮ್ಮ ಮೇಲೆ ಜಾತಿ ದೌರ್ಜನ್ಯವಾಗುತ್ತಿದೆ. ಸವರ್ಣೀಯರು ನಮ್ಮನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಅಟ್ರಾಸಿಟಿ ದಾಖಲಿಸಿದ್ದು ಹೆಚ್ಚು. ಆದ್ದರಿಂದ ಕರ್ನಾಟಕದಲ್ಲಿ ಬಹುಪಾಲು ಸ್ಪøಶ್ಯರು ಮಾಡುತ್ತಿರುವ ಅಟ್ರಾಸಿಟಿ ಕೇಸುಗಳಿಗೆ ಮೂಲ ಅಸ್ಪøಶ್ಯರು ಬಲಿಯಾಗುತ್ತಿದ್ದಾರೆ. ಜೊತೆ ಸ್ಪøಶ್ಯರಂತೆಯೇ ಮೇಲೆ ತಿಳಿಸಿದ ನಾಲ್ಕಕ್ಷರ ಕಲಿತ ಬಲಿತ ದಲಿತರು ಕೂಡ ಅಜ್ಞಾನಿಗಳಾಗಿ ಅಟ್ರಾಸಿಟಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.
   ಯಾವುದೋ ಒಂದು ವಿಶ್ವವಿದ್ಯಾನಿಲಯದಲ್ಲಿ ದಲಿತ ವಿದ್ಯಾರ್ಥಿಯೊಬ್ಬ ಪಿಎಚ್.ಡಿ ವ್ಯಾಸಾಂಗಕ್ಕೆ ಅರ್ಜಿ ಸಲ್ಲಿಸಿದರೆ, ಅವನಿಗೆ ಮಾರ್ಗದರ್ಶಕರೇ ಸಿಗುತ್ತಿಲ್ಲ. (ಪ್ರಸ್ತುತ ಯುಜಿಸಿಯ ಕೆಲವು ನಿಯಮಗಳು ಬದಲಾದ ಕಾರಣಕ್ಕೆ ಮಾರ್ಗದರ್ಶಕರು ಅನಿವಾರ್ಯವಾಗಿ ದಲಿತ ಮಕ್ಕಳನ್ನು ತಮ್ಮ ಬಳಿ ಸಂಶೋಧನೆ ಮಾಡಲು ಒಪ್ಪಿಕೊಳ್ಳಬೇಕಾಗಿರುವುದು ಬೇರೆ ಮಾತು). ಹಾಗೂ ಒಂದು ವೇಳೆ ಸಿಕ್ಕರೂ ಮೇಲ್ಜಾತಿಯ ಮಾರ್ಗದರ್ಶಕರ ಬಳಿ ಪಿಎಚ್.ಡಿ ಬೇಗನೇ ಮುಗಿಸುತ್ತೇವೆಂಬ ಯಾವ ಖಾತ್ರಿಯೂ ವಿದ್ಯಾರ್ಥಿಗಳಿಗೆ ಇಲ್ಲ. ಈಗಾಗಲೇ ವಿಶ್ವವಿದ್ಯಾಲಯ ಸೇರಿರುವ ಕೆಲವು ದಲಿತ ಫ್ರೋಪೆಸರ್ಸ್ ಕೂಡ ತಮ್ಮ ಸಮುದಾಯದ ಅಭ್ಗರ್ಥಿಯೊಬ್ಬ ವಿಶ್ವವಿದ್ಯಾನಿಲಯದ ಮಟ್ಟಕ್ಕೆ ಬರುತ್ತಾನಂದರೆ ಸಹಿಸುವುದಿಲ್ಲ. ಬದಲಿಗೆ ತಮ್ಮ ಸಮೀಪಕ್ಕೂ ಅವನನ್ನು ಬಿಟ್ಟುಕೊಡುವುದಿಲ್ಲ. ಯಾಕೆಂದೆರೆ, ನಾಳೆ ಅವನೊಬ್ಬ ತಮ್ಮಲ್ಲಿಯೇ ಎದುರಾಳಿ ಸ್ಪರ್ಧಿಯಾಗಿ ಹುಟ್ಟಿಕೊಳ್ಳುತ್ತಾನಲ್ಲ ಎಂಬ ಭಯದಿಂದ. ಅಸ್ಪøಶ್ಯರಾಗಿ ಹುಟ್ಟಿ ಬೆಳೆದು, ಅದರ ನೋವುಂಡವರೇ ವಿವಿಯ ಫ್ರೋಪೆಸರ್ ಹುದ್ದೆಗೆ ಹೋಗುತ್ತಿದ್ದಂತೆ ಮೇಲ್ಜಾತಿಯವರಂತೆ ಆಡಿದರೆ, ಆಗ ತಾನೇ ಪದವಿ ಮುಗಿಸಿ ಸ್ನಾತಕೋತ್ತರ ಪದವಿಗೆ ಸೇರುವ ಹುಡುಗರ ಕಥೆಯೇನು..? ಇದು ನನಗಾದ ಅನುಭವ.
   ಕಾರಣಕ್ಕೆ ದಲಿತರು ಮೊದಲು ಅಟ್ರಾಸಿಟಿ ಮನಸ್ಥಿತಿಯಿಂದ ಹೊರಬಂದು ಪ್ರತ್ಯೇಕವಾಗಿ ಆಲೋಚಿಸಬೇಕು. ಪ್ರಸ್ತುತ ಅಟ್ರಾಸಿಟಿಯ ಅವಶ್ಯಕತೆ ಇಲ್ಲ. ತಪ್ಪು ಮಾಡಿದವನಿಗೆ ಶಿಕ್ಷೆ ನೀಡಲು ಕಾನೂನಿನಲ್ಲಿ ಸಾಕಷ್ಟು ಅವಕಾಶಗಳಿವೆ. ಅದನ್ನು ಬಿಟ್ಟು ದಲಿತರು ಬರೀ ಅಟ್ರಾಸಿಟಿಗೆ ಗಂಟು ಬೀಳುವುದರಲ್ಲಿ ಯಾವ ಮಹತ್ವವಿಲ್ಲ. ಹಿಂದೆ ಯಾವುದೇ ವ್ಯಕ್ತಿಯ ಮೇಲೆ ಜಾತಿನಿಂದನೆ ಪ್ರಕರಣ ದಾಖಲಾದರೆ, ಆತನಿಗೆ ಜಾಮೀನು ಸಿಗಲು ಕನಿಷ್ಟ ಒಂದು ವಾರವಾದರೂ ಬೇಕಾಗುತ್ತಿತ್ತು. ಜೈಲಿನಲ್ಲಿ ವಾರಗಟ್ಟಲೇ ಜಾಮೀನುಗಾಗಿ ಕಾಯುವುದು ಒಂದು ರೀತಿಯ ಶಿಕ್ಷೆಯಾಗಿರುತ್ತಿತ್ತು. ಆದರೆ, ಪರಿಸ್ಥಿತಿ ಅಂದಿನಂತಿಲ್ಲ. ಬದಲಾದ ಮನಸ್ಥಿತಿಗಳಿಗೆ ಅನುಗುಣವಾಗಿ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಅಭಿಯೋಜಕರು, ನ್ಯಾಯವಾದಿಗಳು ಮತ್ತು ನ್ಯಾಯಮೂರ್ತಿಗಳು ಬದಲಾಗಿದ್ದಾರೆ. ತಮಗೆ ಬೇಕಿದ್ದರೆ, ಕೂಡಲೇ ಜಾಮೀನು ನೀಡುತ್ತಾರೆ. ಇಲ್ಲವೆಂದರೆ, ಜಾಮೀನು ಅರ್ಜಿಯನ್ನು ತಿರಸ್ಕರಿಸುತ್ತಾರೆ. ನ್ಯಾಯಾಂಗ ನಿಂದನೆ ಆಗುತ್ತದೆ ಎಂಬ ಕಾರಣಕ್ಕೆ ಯಾರೂ ನ್ಯಾಯಮೂರ್ತಿಗಳ ನಡೆಯನ್ನು ಪ್ರಶ್ನಿಸುವುದಿಲ್ಲ.
   ಕಳೆದ ವರ್ಷ ನಮ್ಮೂರ ಬಳಿ ಜಾತನಿಂದನೆ ಪ್ರಕರಣ ಒಂದು ದಾಖಲಾಯಿತು. ಕೇಸು ದಾಖಲಾದ 24 ಘಂಟೆಯೊಳಗೆ ಆರೋಪಿಗಳಿಗೆ ಅಲ್ಲಿನ ನ್ಯಾಯಾಲಯ ಜಾಮೀನು ನೀಡಿತು. ನಂತರ ಬೇಲ್ ಪಡೆದ ಮೇಲ್ವರ್ಗದ ಪಡ್ಡೆ ಹುಡುಗರ ಗುಂಪು ನೇರವಾಗಿ ದಲಿತರ ಕೇರಿಗೆ ಹೋಗಿ, ಅವಾಚ್ಯ ಶಬ್ದಗಳಿಂದ ದಲಿತರನ್ನು ಬೈಯುತ್ತಾ, ನೀವು ಅಟ್ರಾಸಿಟಿ ಮಾಡಿದರೂ ನಾವು 24 ಘಂಟೆಯಲ್ಲಿ ಹೊರಗೆ ಬಂದಿದ್ದೇವೆ.. ಇದನ್ನು ಬಿಟ್ಟು ನೀವು ಇನ್ನೇನು ಮಾಡಲು ಸಾಧ್ಯ.. ನಿಮಗೆ ಕಂಬಾಲಪಲ್ಲಿ ಕತೆ ಗೊತ್ತು ತಾನೇ.. ಮುಂದೆಯೂ ಅದರಂತೆ ನಿಮ್ಮ ಪಾಡಾಗುತ್ತದೆ ಹುಷಾರ್ ಇರ್ರೀ ಎಂದು ಕೇಕೆ ಹಾಕುತ್ತಾ ಮತ್ತೊಮ್ಮೆ ಜಗಳವಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿದರು.
   ಎರಡು ದಿನದ ಹಿಂದೆ ಅಟ್ರಾಸಿಟಿ ದಾಖಲಿಸಿದ್ದ ದಲಿತರು, ಮಾರಣಾಂತಿಕವಾಗಿ ಏಟು ತಿಂದರೂ ಏನು ಮಾಡದ ಅಸಹಾಯಕ ಸ್ಥಿತಿಗೆ ಬಂದು ತಲುಪಿದ್ದರು. ಮತ್ತೊಮ್ಮೆ ಅಟ್ರಾಸಿಟಿ ದಾಖಲು ಮಾಡಲು ಹೋದರೆ, ಆರೋಪಿಗಳಿಗೆ ಮತ್ತೇ ಬೇಲ್ ಸಿಗುತ್ತದೆ. ಹೊಡೆದಿದ್ದಾರೆಂದು ಪೊಲೀಸ್ ಸ್ಟೇಷನ್ಗೆ ಹೋದರೆ, ಪೊಲೀಸರು ನಮ್ಮನ್ನೇ ತರಾಟೆಗೆ ತೆಗೆದುಕೊಳ್ಳುತ್ತಾರೆ. ಏನು ಮಾಡೋದು ಇದು ನಮ್ಮ ಕರ್ಮ ಎಂದು, ತಮ್ಮಲ್ಲಿಯೇ ನೋವುಂಡು ಆಸ್ಪತ್ರೆ ಸೇರಿದರು. ಇಂತಹ ಹತ್ತಾರು ಪ್ರಕರಣಗಳು ಕರ್ನಾಟಕದ ಬೇರೆಡೆಯೂ ನಡೆದಿರಬಹುದು. ಆದರೆ, ನಮ್ಮ ಕಣ್ಮುಂದೆಯೇ ಇಂತಹದೊಂದು ಘಟನೆ ನಡೆದದ್ದು ನೋಡಿ ಬಹಳ ಬೇಸರವಾಯಿತು.
   ಇದೀಗ ನಾವು ಮಾತನಾಡುವ ಕಂಬಾಲಪಲ್ಲಿ ದಲಿತರ ಸಜೀವ ದಹನ ಪ್ರಕರಣದ್ದು ಅದೇ ಕಥೆ. ಘಟನೆ ಸಂಭವಿಸಿದಾಗ ದಲಿತರೇ ರಾಜ್ಯದ ಗೃಹಮಂತ್ರಿಗಳಾಗಿದ್ದರು. ಮನಸ್ಸು ಮಾಡಿದ್ದರೆ, ಆರೋಪಿಗಳನ್ನು 24 ಘಂಟೆಯಲ್ಲಿ ಅರೆಸ್ಟ್ ಮಾಡಿ ಶಿಕ್ಷೆಗೊಳಪಡಿಸಬಹುದಿತ್ತು. ಕೆಲವು ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಹಿಡಿಯಲು ಹೋದಾಗ, ಖುದ್ದು ಗೃಹಮಂತ್ರಿಯವರೇ ತಡೆದಿದ್ದರು ಎಂಬ ಆರೋಪವಿದೆ.!. ಯಾಕೆಂದರೆ, ಪ್ರಬಲ ಸಮುದಾಯವಾದ ವ್ಯಕ್ತಿಯೊಬ್ಬರು ಮುಖ್ಯಮಂತ್ರಿಗಳಾಗಿ ಅವರೇ ಪ್ರಕರಣ ಬಿದ್ದುಹೋಗುವಂತೆ ಎಲ್ಲಾ ರೀತಿಯಲ್ಲಿ ತಮ್ಮ ಪ್ರಭಾವವನ್ನು ಬಳಸಿದ್ದರು. ಕೊನೆಗೆ ಗೃಹಸಚಿವರ ಮೇಲೆ ಒತ್ತಡ ಹೇರಿದಾಗ, ಅವರು ಆರೋ ಪಿಗಳನ್ನು ಬಂಧಿಸದಂತೆ ಅಧಿಕಾರಿಗಳಿಗೆ ಮೌಖಿಕವಾಗಿ ಸೂಚಿಸಿದ್ದರು! ಇದೀಗ ಕಂಬಾಲ ಪಲ್ಲಿಯ ನ್ಯಾಯಕ್ಕಾಗಿ ಹೋರಾಡುತ್ತಿರುವ ನಾವು ಗಳು ಅಂದು ನಮ್ಮದೇ ದಲಿತ ಗೃಹಮಂತ್ರಿ ಯನ್ನು ಇಟ್ಟುಕೊಂಡು ಆರೋಪಿಗಳಿಗೆ ಶಿಕ್ಷೆ ಯಾಗುವಂತೆ ನೋಡಿಕೊಂಡಿಲ್ಲವೆಂದರೆ, ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಇವತ್ತು ಪ್ರಕರಣದಲ್ಲಿನ ಬಹುಪಾಲು ಆರೋಪಿಗಳು ಖುಲಾಸೆಗೊಂಡಿ ದ್ದಾರೆ. ಉಳಿದ ಒಬ್ಬಿಬ್ಬರು ನ್ಯಾಯಕ್ಕಾಗಿ ಹೋರಾಟ ನಡೆಸಿದ್ದಾರೆ. ಜಾತಿ-ಧರ್ಮವನ್ನು ಮೀರಿ ಮಾನವೀಯ ನೆಲೆಯ ದೃಷ್ಟಿಯಲ್ಲಿ ಅವರಿಗೆ ನಾವೆಲ್ಲರೂ ಸೇರಿ ಬೆಂಬಲ ನೀಡೋ ಜೊತೆಗೆ ಕಂಬಾಲಪಲ್ಲಿ ಪ್ರಕರಣಕ್ಕೆ ಸಂಬಂ ಧಿಸಿ ಸರ್ಕಾರದ ಮೇಲೆ ಒತ್ತಡವನ್ನು ತರೋಣ.

   ಅದರ ಜೊತೆ-ಜೊತೆಗೆ ನಾವುಗಳು ಅಟ್ರಾಸಿಟಿಯಂತಹ ಮನಸ್ಥಿತಿಯಿಂದ ಮೊದಲು ಹೊರಬಂದು ಚಿಂತನೆ ಮಾಡೋಣ. ಬದುಕಲು ಪರ್ಯಾಯ ಮಾರ್ಗಗಳನ್ನು ಹುಡುಕಿಕೊಂಡು ಮತ್ತೊಬ್ಬರಿಗೆ ಮಾದರಿಯಾಗೋಣ. ನಾಲ್ಕಕ್ಷರ ಕಲಿತ ತಕ್ಷಣ ನಾವೇ ಅಂಬೇಡ್ಕರ್ ಎಂಬ ಅಹಂ ಬಿಟ್ಟು ಅಂಬೇಡ್ಕರರು ಈವರೆಗೆ ಎಳೆದು ತಂದಿರುವ ವಿಮೋಚನೆಯ ರಥವನ್ನು ಎಲ್ಲರು ಸೇರಿ ಮುಂದೆ ಎಳೆಯೋಣ.

No comments:

Post a Comment