Sep 25, 2014

ಚಿಕ್ಕ ಹಗರಣ

ಮೂಲ – ಹರ್ಷ Think Bangalore
ಅನುವಾದ – ಡಾ ಅಶೋಕ್ ಕೆ ಆರ್.
ರಾಮಸ್ವಾಮಿ ಪ್ರಖ್ಯಾತ ವ್ಯಕ್ತಿ. ಊರಿನ ಹೈಸ್ಕೂಲಿನಲ್ಲಿ ಹೆಡ್ ಮಾಸ್ಟರ್ ಆಗಿ ಕೆಲಸಮಾಡುತ್ತಿದ್ದರು. ಅವರ ಮಾತೆಂದರೆ ಊರವರಿಗೆಲ್ಲ ಬಹಳ ಗೌರವ. ಕಾರಣ, ಅವರ ಆದರ್ಶಯುತ ಜೀವನ. ಸುಳ್ಳಾಡದೆ, ಯಾರೊಬ್ಬರಿಗೂ ಮೋಸ ಮಾಡದೆ, ಕೆಟ್ಟದನ್ನು ಮಾಡದೆ ಎಲ್ಲರೊಡನೆ ಸೌಮ್ಯದಿಂದ ಸ್ನೇಹಮಯದಿಂದಿರುತ್ತಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳು. ಬುದ್ಧಿವಂತರು. ಚೆನ್ನಾಗಿ ಓದಿಕೊಂಡರು. ದೊಡ್ಡವ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದರೆ ಚಿಕ್ಕವ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ.
ಐದು ವರ್ಷದ ಸತತ ಕೆಲಸದ ನಂತರ ಬೇರೆಯವರ ಕೈಕೆಳಗೆ ದುಡಿಯುವ ಬದಲು ನಾವೇ ಸೇರಿ ಒಂದು ವ್ಯಾಪಾರ ಶುರು ಮಾಡಿ ಕೆಲಸ ಕೊಡುವಂತಾದರೆ ಚೆಂದವಲ್ಲವೇ ಎಂಬ ಯೋಚನೆ ಸುಳಿಯಿತು ಮಕ್ಕಳಿಬ್ಬರಲ್ಲಿ. ತಂದೆಯೊಡನೆ ಚರ್ಚಿಸಿದರು. ‘ಒಳ್ಳೆ ಯೋಚನೆ’ ಎಂದು ರಾಮಸ್ವಾಮಿ ಒಪ್ಪಿಕೊಂಡರು. “ಮಕ್ಕಳೇ, ಒಳ್ಳೆ ವ್ಯಾಪಾರ ಮಾಡಿ. ಪ್ರಾಮಾಣಿಕತೆಯಿಂದ ನಿಮ್ಮ ಗುರಿಯೆಡೆಗೆ ಸಾಗಿ. ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಮಾಡುವ ದುರಾಸೆಯಿಂದ ಮೋಸ ತಟ ವಟದಲ್ಲಿ ತೊಡಗಿಕೊಂಡು ನಿಮ್ಮ ವ್ಯಕ್ತಿತ್ವವನ್ನು ಕುಂದುಗೊಳಿಸಿಕೊಳ್ಳಬೇಡಿ” ಎಂದು ಸಲಹೆ ನೀಡಿ ಆಶೀರ್ವದಿಸಿದರು. ಮಕ್ಕಳು ಒಪ್ಪಿ ವ್ಯಾಪಾರ ಶುರುಮಾಡಿದರು. ವ್ಯಾಪಾರ ಯಶಗಳಿಸುತ್ತ ಸಾಗುತ್ತಿತ್ತು. ಒಂದು ದಿನ ರಾಮಸ್ವಾಮಿಯನ್ನು ಭೇಟಿಯಾದ ಸ್ನೇಹಿತರೊಬ್ಬರು ಅವರ ಮಕ್ಕಳ ವ್ಯವಹಾರದಲ್ಲಿ ಒಂದಷ್ಟು ಹಗರಣಗಳು ನಡೆಯಲಾರಂಭಿಸುತ್ತಿದೆ ಎಂದು ಸೂಚ್ಯವಾಗಿ ತಿಳಿಸಿದರು. ಜೀವನದ್ದುದಕ್ಕೂ ಆದರ್ಶದ ಚೌಕಟ್ಟಿನೊಳಗೇ ಬೆಳೆದ ರಾಮಸ್ವಾಮಿಯವರಿಗೆ ಆಘಾತವಾಯಿತು. ಯಾವುದಕ್ಕೂ ಮಕ್ಕಳ ಜೊತೆ ಚರ್ಚಿಸಿ ಸತ್ಯವನ್ನರಿತುಕೊಳ್ಳುವುದೊಳ್ಳೆಯದು ಎಂದು ನಿರ್ಧರಿಸಿ ಮಕ್ಕಳನ್ನು ಕರೆಸಿದರು. ಅಪ್ಪನ ಪ್ರಶ್ನೆಗೆ “ಹೌದಪ್ಪ. ನಿಮಗೆ ಗೊತ್ತಿಲ್ಲದೇನಿಲ್ಲ. ವ್ಯಾಪಾರ ವ್ಯವಹಾರ ಅಂದ ಮೇಲೆ ಯಾವಾಗಲೂ ಪ್ರಾಮಾಣಿಕರಾಗೇ ಇರುತ್ತೇವೆ ಎಂದರೆ ಅದು ಅಸಾಧ್ಯ. ಕೆಲವೊಮ್ಮೆ ವಿಧಿಯಿಲ್ಲದೇ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ, ಸಣ್ಣ ಪುಟ್ಟ ಮೋಸ, ಚಿಕ್ಕ ಪುಟ್ಟ ಹಗರಣಗಳು ನಮಗಿಷ್ಟವಿಲ್ಲದಿದ್ದರೂ ಮಾಡಬೇಕಾಗುತ್ತದೆ. ಅದೇನೂ ಅಂಥಹ ತಲೆ ಹೋಗುವಂತಹ ವಿಷಯವೇನಲ್ಲ. ನೀವೇನೂ ಅದರ ಬಗ್ಗೆ ಜಾಸ್ತಿ ಚಿಂತಿಸಿ ತಲೆಕೆಡಿಸಿಕೊಳ್ಳಬೇಡಿ” ಎಂದುತ್ತರಿಸಿದರು. ರಾಮಸ್ವಾಮಿಗೆ ತನ್ನ ಮಕ್ಕಳು ಈ ರೀತಿ ಮಾತನಾಡಬಲ್ಲರು ಎಂಬುದನ್ನರಗಿಸಿಕೊಳ್ಳುವುದು ಕಷ್ಟವಾಯಿತು. ಪ್ರತ್ಯುತ್ತರ ನೀಡದೇ ಮೌನವಾಗುಳಿದರು. ಅವರ ತಪ್ಪನ್ನು ಅವರಿಗೆ ಅರಿವು ಮಾಡಿಸಲೇ ಬೇಕು ಎಂದು ತೀರ್ಮಾನಿಸಿದರು.

ಇದಾಗಿ ಕೆಲವು ದಿನಗಳಲ್ಲಿ ಮನೆಯಲ್ಲಿ ಹಬ್ಬವಿತ್ತು. ವಿಧವಿಧದ ಸಿಹಿತಿಂಡಿಗಳನ್ನು ಮಾಡುವಂತೆ ಮನೆಯವರಿಗೆ ತಿಳಿಸಿದ್ದರು ರಾಮಸ್ವಾಮಿ. ಹಬ್ಬದ ಪ್ರಯುಕ್ತ ಅಂದು ಮಕ್ಕಳಿಬ್ಬರು ಮನೆಯಲ್ಲೇ ಉಳಿದಿದ್ದರು. ಊಟಕ್ಕೆ ಕುಳಿತಾಗ ರಾಮಸ್ವಾಮಿ ಮಕ್ಕಳನ್ನುದ್ದೇಶಿಸಿ “ಇವತ್ತು ಹಬ್ಬವಲ್ಲವೇ. ಅದಕ್ಕೆ ನಿಮ್ಮಮ್ಮನಿಗೆ ಹೇಳಿ ಸಿಹಿತಿಂಡಿಗಳನ್ನಷ್ಟೇ ಮಾಡಿಸಿದ್ದೇನೆ. ಹಾಲು, ಕೇಸರಿ, ಪರಿಶುದ್ಧ ತುಪ್ಪ, ಡ್ರೈ ಫ್ರೂಟ್ಸ್... ಆಹಾ ತಿಂಡಿಯ ಪರಿಮಳವೇ ಬಾಯಲ್ಲಿ ನೀರೂರಿಸುತ್ತಿದೆ. ನಿಧಾನಕ್ಕೆ ತಿನ್ನಿ. ಒಂದು ವಿಷಯ ತಿಳಿಸುವುದು ಮರೆತೆ. ಇನ್ನೊಂದು ವಸ್ತುವನ್ನು ತಿಂಡಿಗೆ ಮಿಕ್ಸ್ ಮಾಡಿಸಿದ್ದೀನಿ. ಜಾಸ್ತಿ ಇಲ್ಲ ಚೂರೇ ಚೂರು ನಮ್ಮ ನಾಯಿಯ ಗಲೀಜನ್ನು ಬೆರೆಸರು ಹೇಳಿದ್ದೇನೆ. ಸ್ವಲ್ಪೇ ಸ್ವಲ್ಪೇ ಹಾಕಿಸಿರೋದು – ಅದರಿಂದ ಯಾವ ದುರ್ವಾಸನೆಯೂ ಬಂದಿಲ್ಲ. ತಿನ್ನುವಾಗಲೂ ಅದನ್ನು ಬೆರೆಸಿರುವುದು ನಿಮ್ಮ ಗಮನಕ್ಕೆ ಬರುವುದಿಲ್ಲ. ಎಲ್ರೂ ತಿಂಡಿ ತಕ್ಕೊಳ್ಳಿ”. ಮಕ್ಕಳ ಮುಖದಲ್ಲಿ ಅಸಹ್ಯ ಮೂಡಿತ್ತು. “ಇದನ್ನೇಗ್ ತಿನ್ನೋದಪ್ಪ. ವ್ಯಾಕ್”. ರಾಮಸ್ವಾಮಿ ಮುಗುಳ್ನಗುತ್ತ “ಏನಾಯ್ತು? ಎಲ್ಲ ಉತ್ತಮ ಪರಿಶುದ್ಧ ವಸ್ತುಗಳನ್ನೇ ಹಾಕಿ ಮಾಡಿರೋದು. ನಾಯಿ ಗಲೀಜು ಸ್ವಲ್ಪ ಮಾತ್ರ ಇರೋದು. ತಿನ್ನಿ ತಿನ್ನಿ”. ದೊಡ್ಡವ ಮಾತನಾಡಿದ “ಅಪ್ಪ. ಇದನ್ನು ತಿನ್ನೋದಿಕ್ಕೆ ಅಸಾಧ್ಯ. ಸ್ವಲ್ಪ ಗಲೀಜು, ಜಾಸ್ತಿ ಗಲೀಜು ಅಂಥ ಇರುತ್ತ? ಗಲೀಜು ಅಂದ ಮೇಲೆ ಗಲೀಜೇ”. ರಾಮಸ್ವಾಮಿ ತಕ್ಷಣ “ಅದೇ ರೀತಿ ಮಗನೇ ವ್ಯಾಪಾರ ವ್ಯವಹಾರದಲ್ಲಿ ಚಿಕ್ಕ ಹಗರಣ, ದೊಡ್ಡ ಹಗರಣ ಅಂತಿರುತ್ತದೆಯಾ? ಮೋಸದ ಪ್ರಮಾಣ ಯಾವುದಿದ್ದರೂ ಅದು ಮೋಸವೇ ಅಲ್ಲವೇ?”. ಮಕ್ಕಳಿಗೆ ತಮ್ಮ ತಪ್ಪಿನ ಅರಿವಾಯಿತು. ಕ್ಷಮೆಯಾಚಿಸಿದರು. 

No comments:

Post a Comment