Sep 20, 2014

‘ಡೆಲ್ಲಿ’ಯ ಗಲ್ಲಿಯೊಳಗೆ…….
khushwant singh
ಖುಷ್ವಂತ್ ಸಿಂಗರ 'ಡೆಲ್ಲಿ'
ಡಾ ಅಶೋಕ್ ಕೆ ಆರ್.

‘ಡೆಲ್ಲಿ’ – ಖುಷ್ವಂತ್ ಸಿಂಗರ ಅತ್ಯುತ್ತಮ ಪುಸ್ತಕವೆನ್ನಲಾಗುತ್ತದೆ. ಖುಷ್ವಂತ್ ಸಿಂಗರ ‘ದಿ ಕಂಪನಿ ಆಫ್ ವಿಮೆನ್’ ಮತ್ತು ‘ಟ್ರೈನ್ ಟು ಪಾಕಿಸ್ತಾನ್’ ಓದಿದ್ದೆನಷ್ಟೇ. ಕಂಪನಿ ಆಫ್ ವಿಮೆನ್ ಸಾಧಾರಣ ಎನ್ನಿಸಿದರೆ ಟ್ರೈನ್ ಟು ಪಾಕಿಸ್ತಾನ್ ಮೆಚ್ಚುಗೆಯಾಗಿತ್ತು. ಇತ್ತೀಚೆಗೆ ‘ಡೆಲ್ಲಿ’ ಖರೀದಿಸಿ ಓದಿ ಮುಗಿಸಿದೆ. ಒಂದಷ್ಟು ಆಕಳಿಕೆಯೊಂದಿಗೇ ಓದು ಮುಂದುವರೆಯಿತು ಎಂದರೆ ಸುಳ್ಳಲ್ಲ! ಆಕಳಿಸುತ್ತಲೇ ಓದು ಮುಗಿಸಿದ ನಂತರ ತನ್ನ ವಸ್ತುವಿನಿಂದ, ಅರ್ಥಗಳಿಂದ ‘ಡೆಲ್ಲಿ’ ನನ್ನ ಮೆಚ್ಚಿನ ಕಾದಂಬರಿಗಳಲ್ಲೊಂದು ಸ್ಥಾನ ಪಡೆದುಕೊಂಡಿತು ಎಂಬುದೂ ಸತ್ಯ!

ಡೆಲ್ಲಿ ಕಾದಂಬರಿ ವರ್ತಮಾನ ಮತ್ತು ಭೂತಕಾಲದ ನಡುವೆ ತುಯ್ದಾಡುತ್ತಾ ಕೊನೆಗೆ ವರ್ತಮಾನದ ದುರಂತ ಅಂತ್ಯದೊಂದಿಗೆ ಕೊನೆಗೊಳ್ಳುತ್ತದೆ. ವರ್ತಮಾನದ ಕಥಾನಾಯಕ, ಆತನ ಪ್ರಣಯ ಕಥೆಗಳು, ತಿಕ್ಕಲುತನಗಳ ಜೊತೆಜೊತೆಗೆ ಭೂತಕಾಲದ ವಿಸ್ಮಯ ಓದುಗರಿಗೆ ಉಣಬಡಿಸಲಾಗುತ್ತದೆ. ಕಾದಂಬರಿಯ ಮೊದಮೊದಲಿಗೆ ದೆಹಲಿಯನ್ನು ಭಾಗಮತಿಯೆಂಬ ಹಿಜ್ಡಾ ವೇಶ್ಯೆಗೆ ಹೋಲಿಸಿ ಅಚ್ಚರಿಗೊಳಿಸುತ್ತಾರೆ ಖುಷ್ವಂತ್! ದುರುಳರ ತೆಕ್ಕೆಗೆ ಸಿಲುಕಿ ದೆಹಲಿ ಮತ್ತು ಭಾಗಮತಿ ತಮ್ಮ ಮಾದಕತೆಯನ್ನು ಮರೆಮಾಡಿದ್ದಾರೆ ಎನ್ನುತ್ತಾರೆ. ಅನೇಕರು ಖುಷ್ವಂತರ ಬಗ್ಗೆ ಬರೆಯುವಾಗ ‘ಪೋಲಿ ಮುದುಕ’ ಎಂದು ಬರೆಯುತ್ತಿದ್ದರು, ಖುಷ್ವಂತರೂ ತಮ್ಮ ಬಗ್ಗೆ ಹಾಗೇ ಕರೆದುಕೊಳ್ಳುತ್ತಿದ್ದರಂತೆ. ಅವರು ನಿಜಕ್ಕೂ ಎಷ್ಟು ಪೋಲಿಯಿದ್ದರೋ ಗೊತ್ತಿಲ್ಲ ಅವರ ಡೆಲ್ಲಿಯಲ್ಲಿ ಮಾತ್ರ ಪೋಲಿತನ ಮೊದಲರ್ಧದಲ್ಲಿ ವಿಪರೀತವಾಗಿಯೇ ಇದೆ. ಕೆಲವೊಮ್ಮೆ ಇದೇನು ನಾವು ದೆಹಲಿ ಕುರಿತಾದ ಕಾದಂಬರಿ ಓದುತ್ತಿದ್ದೇವೋ ಅಥವಾ ಮೋಜು ಗೋಜುವಿನಂಥಹ ಪೋಲಿ ಪುಸ್ತಕವನ್ನೋದುತ್ತಿದ್ದೇವೆಯೋ ಎಂಬ ಅನುಮಾನ ಬಂತು! ಭಾಗಮತಿ ಎಂಬ ಹಿಜ್ಡಾ ಜೊತೆಗಿನ ಕಥಾನಾಯಕನ ಪ್ರಣಯ ಪ್ರಸಂಗವನ್ನೂ ಅಷ್ಟು ರಸವತ್ತಾಗಿ ರೋಮಾಂಚಕವಾಗಿ ಬಣ್ಣಿಸಿದ್ದಾರೆ ಖುಷ್ವಂತ್.
1265ರಿಂದ ಶುರುವಾಗುವ ಇತಿಹಾಸದ ಕಥಾನಕ ಕೊನೆಗೊಳ್ಳುವುದು ಭಾರತದ ಸ್ವಾತಂತ್ರ್ಯದ ಸಂಭ್ರಮದಲ್ಲಿ, ಗಾಂಧಿಯ ಸಾವಿನ ಸಂಭ್ರಮದಲ್ಲಿ. ಇತಿಹಾಸದ ಪ್ರತಿ ಕಥೆಯನ್ನು ಆ ಕಾಲಘಟ್ಟದವನೇ ಹೇಳುತ್ತಾನೆ. ಕೆಲವೆಡೆ ಕಥೆ ಹೇಳುವವನು ಸಾಮಾನ್ಯ ಕಾವಲುಗಾರ ಮತ್ತೆ ಕೆಲವೆಡೆ ಕಥೆ ಹೇಳುವವನು ಮಹಾರಾಜ. ಇತಿಹಾಸವೆಂದರೆ ಮಹಾರಾಜರ ಕಥೆ, ಅವರ ಯುದ್ಧದ ಕಥೆಗಷ್ಟೇ ಸೀಮಿತವಾಗುವಾಗ ಈ ಕಾದಂಬರಿಯಲ್ಲಿ ಇತಿಹಾಸದ ಘಟನೆಗಳು ಸಾಮಾನ್ಯನ ಮೇಲೆ ಬೀರಿದ ಪರಿಣಾಮಗಳೇನು ಎಂಬುದರತ್ತವೂ ಗಮನಹರಿಸುತ್ತದೆ. ಭಾರತದ ಮೇಲೆ ದಾಳಿಯಿಟ್ಟು ಭಾರತದಲ್ಲಿದ್ದ ರಾಜ – ಮಹಾರಾಜರನ್ನು ಸೋಲಿಸಿ ರಾಜ್ಯವನ್ನು ವಶಪಡಿಸಿಕೊಂಡ ಮುಸ್ಲಿಮ್ ರಾಜರಿಂದ ಇತಿಹಾಸದ ಕಥಾನಕ ಪ್ರಾರಂಭವಾಗುತ್ತದೆ. ಮೊದಲೇ ತಿಳಿಸಿದಂತೆ ಈ ರಾಜರ ಆಳ್ವಿಕೆಯ ಕಥೆಗಳಲ್ಲಿಯೂ ಲೈಂಗಿಕತೆಯ ಘಾಟು ದಟ್ಟವಾಗಿದೆ. ಪುಸ್ತಕದ ಓದೇ ಬೇಸರ ಬರಿಸುವಷ್ಟು ಕೆಲವೆಡೆ ಲೈಂಗಿಕ ಸಂಗತಿಗಳನ್ನು ತುರುಕಲಾಗಿದೆ. ಅವುಗಳ ಮಧ್ಯೆಯೇ ಹಿಂದೂ ಮತ್ತು ಜೈನ ದೇಗುಲಗಳ ನಾಶ, ಮತಾಂತರ, ತಿಕ್ಕಲು ಮುಸ್ಲಿಂ ದೊರೆಗಳು – ಒಳ್ಳೆಯ ಮುಸ್ಲಿಂ ದೊರೆಗಳು, ಅವರ ಆಡಳಿತ ವೈಖರಿಗಳೆಲ್ಲವೂ ಮಿಳಿತವಾಗಿದೆ. ಅನ್ಯಧರ್ಮ ದ್ವೇಷವೆಂಬುದು ಹೇಗೆ ಇವತ್ತಿಗೂ ಆಡಳಿತದಲ್ಲಿರುವವರ ಅನುಕೂಲಕ್ಕೆ ತಕ್ಕಂತೆ ಬದಲಾಗುತ್ತದೋ ಅದೇ ರೀತಿಯ ಅನುಕೂಲಸಿಂಧುತ್ವವನ್ನು ಆಗಲೂ ನೋಡಬಹುದು.
ವಿಷಯದ ನಿರೂಪಣೆ ಅಚ್ಚುಕಟ್ಟಾಗಿದ್ದರೂ ತುಂಬಾ ಉತ್ಸಾಹದಿಂದ ಮೊದಲ ಭಾಗ ಓದಿಸಿಕೊಳ್ಳಲಿಲ್ಲ. ಇತಿಹಾಸದ ಪುಟಗಳಲ್ಲಿ ಮುಳುಗುತ್ತಿದ್ದಂತೆ ಇದ್ದಕ್ಕಿದ್ದಂತೆ ವರ್ತಮಾನಕ್ಕೆ ಕರೆತರುವ ಲೇಖಕ ಮತ್ತೆ ಭಾಗಮತಿಯೊಡಗಿನ ಸರಸ-ವಿರಸವನ್ನು ವಿವರಿಸಲು ಶುರುಮಾಡುತ್ತಾನೆ. ಜೊತೆಗೆ ಕಾವಲುಗಾರ ಬುದ್ ಸಿಂಗ್, ಪತ್ರಕರ್ತ ಮಿತ್ರ, ರಾಜಕೀಯ ಮಿತ್ರನ ಬಗೆಗೂ ಮಧ್ಯೆ ಮಧ್ಯೆ ಕೆಲವು ಘಟನೆಗಳು ಬರುತ್ತವೆ. ಪೂರ್ಣ ಕಾದಂಬರಿ ಓದಿದ ಮೇಲೆ ಪ್ರತಿ ಪಾತ್ರದ ಮಹತ್ವವೂ ತಿಳಿಯುತ್ತದಾದರೂ ಮೊದಮೊದಲಿಗೆ ಬೇಸರ ಮೂಡಿಸುತ್ತದೆ. ಕಾದಂಬರಿ ಅಮೋಘವೆನ್ನಿಸುವ ವೇಗ ಪಡೆದುಕೊಳ್ಳುವುದು ಬ್ರಿಟೀಷರ ದೃಷ್ಟಿಯಲ್ಲಿ ದಂಗೆ ಎನ್ನಿಸಿಕೊಂಡ 1857ರ ಮೊದಲ ಸ್ವಾತಂತ್ರ್ಯ ಚಳುವಳಿಯಿಂದ. ಇಷ್ಟರಳೊಗೆ ಹಿಂದೂ ಮಹಾರಾಜರ ಕಾಲವೂ ಮುಗಿದು, ಮುಸ್ಲಿಂ ದೊರೆಗಳ ಕಾಲವೂ ಅಂತ್ಯವಾಗಿ ಫಿರಂಗಿಗಳ ಕಾಲ ಪ್ರಾರಂಭವಾಗಿರುತ್ತದೆ. ನಮ್ಮ ದೇವಾಲಯಗಳನ್ನೆಲ್ಲ ನಾಶ ಮಾಡುತ್ತಿದ್ದ, ಹಿಂದೂಗಳನ್ನು ಮತಾಂತರ ಮಾಡುತ್ತಿದ್ದ ಮುಸ್ಲಿಮರ ಆಡಳಿತ ಕೊನೆಗೊಳ್ಳುತ್ತಿದೆ ಎಂಬ ಖುಷಿಯ ಜೊತೆಗೆ ಹಿಂದೂಗಳಿಗೆ ಈಗ ದೇಶವನ್ನು ತೆಕ್ಕೆಗೆ ತೆಗೆದುಕೊಳ್ಳುತ್ತಿರುವ ಕ್ರಿಶ್ಚಿಯನ್ನರೂ ದನ ತಿನ್ನುವವರು ಎಂಬ ಸಂಕಟ (ಈ ಉತ್ತರ ಭಾರತದಲ್ಲಿ ಹಿಂದೂಗಳು ದನ ತಿನ್ನೋದೇ ಇಲ್ವಾ?!). ದೇಶವಾಸಿಗಳ ಮಧ್ಯೆ ಇದ್ದ ಅಪನಂಬಿಕೆಯಿಂದಾಗಿಯೇ ಆಂಗ್ಲರು ಸುಲಭವಾಗಿ ಭಾರತವನ್ನು ವಶಪಡಿಸಿಕೊಂಡುಬಿಟ್ಟರು. ಪಠಾಣರು, ಬಲೂಚಿ ಮುಸ್ಲಿಮರು, ಸಿಖ್ಖರ ಸಹಾಯದಿಂದ ಬ್ರಿಟೀಷರು ದೆಹಲಿಯನ್ನು ಸುಲಭವಾಗಿ ಗೆದ್ದುಕೊಂಡರು. ಸಿಪಾಯಿ ದಂಗೆ ಅರ್ಥಾತ್ ಭಾರತದ ಸ್ವಾತಂತ್ರ್ಯ ಸಂಗ್ರಾಮದ ವಿವರಗಳು ಬಹಳವಾಗಿ ಕಾಡುತ್ತವೆ. 1857ರಿಂದ ಕಾದಂಬರಿ ಇದ್ದಕ್ಕಿದ್ದಂತೆ ಹತ್ತೊಂಬತ್ತನೇ ಇಸವಿಗೆ ಜಿಗಿಯುತ್ತದೆ. ದೆಹಲಿಯನ್ನು ಕಟ್ಟಲು ಬರುವವರ ವಿವರ, ಅವರ ವ್ಯಾಪಾರಿ ಬುದ್ಧಿ, ಲಂಚ ನೀಡುವ ಮೂಲಕ ಆಳುವವರಿಗೆ ಹತ್ತಿರವಾಗುವ ಪರಿ ಇಂದಿನ ವ್ಯಾಪಾರಿಗಳ ಮನಸ್ಥಿತಿಯನ್ನೇ ಪ್ರತಿಬಿಂಬಿಸುತ್ತದೆ. ದುತ್ತನೆ ಗಾಂಧಿ ಮತ್ತು ಕಾಂಗ್ರೆಸ್ಸಿನ ಪ್ರವೇಶವಾಗುತ್ತದೆ. ಇಡೀ ಸ್ವಾತಂತ್ರ್ಯ ಸಂಗ್ರಾಮವನ್ನೇ ಲೇವಡಿ ಮಾಡುವ, ಬ್ರಿಟೀಷರು ಹೊರಟೇ ಹೋದರೆ ಭಾರತವೇ ಸರ್ವನಾಶವಾಗುತ್ತದೆ ಎಂದು ಭಯಭೀತರಾಗುವ ವ್ಯಾಪಾರಿಗಳ ದರ್ಶನವಾಗುತ್ತದೆ. ಕೊನೆಗೆ ಭಾರತ ಸ್ವಾತಂತ್ರ್ಯವಾಗುತ್ತದೆ, ಪಾಕಿಸ್ತಾನವನ್ನು ಬೇರ್ಪಡಿಸಲಾಗುತ್ತದೆ. ಗಡಿಭಾಗದಲ್ಲಿ ಮುಸ್ಲಿಂ ಮತ್ತು ಹಿಂದೂ, ಸಿಖ್ಖರ ನಡುವೆ ಇತಿಹಾಸದ ಅತಿ ದೊಡ್ಡ ಮಾರಣಹೋಮ ನಡೆದುಹೋಗುತ್ತದೆ. ಗಾಂಧಿಯನ್ನು ಆರೆಸ್ಸೆಸ್ ಕಣ್ಣಿನಿಂದ ಚಿತ್ರಿಸಲಾಗಿದೆ. ಸಂತ್ರಸ್ತ ಸಿಖ್ಖನೊಬ್ಬನನ್ನು ತನ್ನತ್ತ ಸೆಳೆದುಕೊಂಡ ಆರೆಸ್ಸೆಸ್ ಕೊನೆಯವರೆಗೂ ಗಾಂಧಿಯ ಚಲನವಲನಗಳನ್ನು ಗಮನಿಸಲು ನೇಮಿಸಲಾಗುತ್ತದೆ. ಗಾಂಧಿಯೊಬ್ಬ ದೊಡ್ಡ ಹುಚ್ಚ, ಆತನ ಉಪವಾಸಗಳಿಗೆ ಅಂಜಿ ಆತನನ್ನು ಸಂತೈಸಲು ಸಮಾಧಾನಿಸಲು ಎಲ್ಲಾ ಧರ್ಮದ ಜನರು, ರಾಜಕೀಯ ನೇತಾರರು ಓಡಿಬರುವುದು ತಿಕ್ಕಲುತನವಲ್ಲದೇ ಮತ್ತೇನು ಎಂದೇ ನಂಬಿದ ಸಂತ್ರಸ್ತ ಸಿಖ್ ಯುವಕ ಕೂಡ ಗಾಂಧಿ ಹತ್ಯೆಯಾದಾಗ ‘ನನ್ನ ಬಾಪೂವನ್ನು ಕೊಂದುಬಿಟ್ಟರು’ ಎಂದು ಅಳಲಾರಂಭಿಸುವುದು ಗಾಂಧಿಗಿದ್ದ, ಇನ್ನು ಕೂಡ ನಮ್ಮವರಿಗೆ – ನಮ್ಮರಿವಿಗೆ ದಕ್ಕದ ಶಕ್ತಿಯಲ್ಲವೇ? ಭೂತದ ಕಥೆ ಗಾಂಧಿಯ ಸಾವಿನೊಡನೆ ಮುಕ್ತಾಯ ಕಂಡರೆ ವರ್ತಮಾನದ ಕಥೆ ಬಿಂದ್ರನ್ ವಾಲೆಯನ್ನು ಮುಗಿಸಲು ಇಂದಿರಾ ಗಾಂಧಿ ಗುರುದ್ವಾರಕ್ಕೆ ಸೈನಿಕರನ್ನು ನುಗ್ಗಿಸಿ ನಡೆಸಿದ ಆಪರೇಷನ್ ಬ್ಲೂಸ್ಟಾರ್ ಮತ್ತು ತದನಂತರ ತನ್ನದೇ ಸಿಖ್ ಅಂಗರಕ್ಷಕರಿಂದ ಹತ್ಯೆಗೀಡಾಗುವುದರೊಂದಿಗೆ ನಡೆದ ಸಿಖ್ ನರಮೇಧದೊಂದಿಗೆ ಡೆಲ್ಲಿ ಕಾದಂಬರಿ ಕೊನೆಗೊಳ್ಳುತ್ತದೆ.
ಇಡೀ ಕಾದಂಬರಿ ನಾಗರೀಕತೆಯ, ಮನುಷ್ಯ ವರ್ತನೆಯ ಸ್ಥಗಿತತೆಯನ್ನು ಎತ್ತಿ ತೋರಿಸುತ್ತದೆ. ಲೈಂಗಿಕತೆ ಕೂಡ ಕಾದಂಬರಿಯ ಮುಖ್ಯಪಾತ್ರವಾಗಿರುವುದು ಸಿಗ್ಮಂಡ್ ಪ್ರಾಯ್ಡ್ ನ ಸಿದ್ಧಾಂತಗಳನ್ನು ನೆನಪಿಸುತ್ತದೆ. ಕಾದಂಬರಿಯ ಮತ್ತೊಂದು ಮುಖ್ಯಪಾತ್ರ ಧರ್ಮಾಧಾರಿತ ಹಿಂಸೆ. 1265ರಿಂದ ಹಿಡಿದು ಇಂದಿರಾ ಗಾಂಧಿ ಮರಣದವರೆಗೂ ಧರ್ಮಾಧಾರಿತ ಹಿಂಸೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ, ಹತ್ಯೆ ಮಾಡುವವರು ಮತ್ತು ಸಾಯುವವರ ಪಾತ್ರ ಕಾಲಘಟ್ಟಕ್ಕೆ ತಕ್ಕಂತೆ ಬದಲಾಗಿರುವುದನ್ನು ಬಿಟ್ಟು. ಈ ಧರ್ಮಾಧಾರಿತ ಹಿಂಸೆ ಇಂದಿಗೂ ಬದಲಾಗಿಲ್ಲವೆಂಬುದು ‘ನಾವು ನಾಗರೀಕರಾಗಿದ್ದೇವೆ’ ಎಂದು ಕೊಚ್ಚಿಕೊಳ್ಳುವ ಬಡಾಯಿಯನ್ನು ಅಪಹಾಸ್ಯ ಮಾಡುತ್ತದೆ. ಮೊದಲು ಮುಸ್ಲಿಮರು ಹಿಂದೂಗಳನ್ನು, ಸಿಖ್ಖರನ್ನು ಕೊಂದರು, ನಂತರ ಬಂದ ಕ್ರಿಶ್ಚಿಯನ್ನರು ದೇಶ ವಶಪಡಿಸಿಕೊಳ್ಳುವುದಕ್ಕಾಗಿ ಧರ್ಮ ನಿರಪೇಕ್ಷತೆಯೊಂದಿಗೆ ಎಲ್ಲರನ್ನೂ ಕೊಂದರು, ದೇಶ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಸಿಖ್ಖರ, ಹಿಂದೂಗಳ ಮಾರಣಹೋಮ ನಡೆದರೆ, ಇತ್ತ ಕಡೆ ಹಿಂದೂ ಸಿಖ್ಖರಿಬ್ಬರೂ ಸೇರಿ ಮುಸ್ಲಿಮರನ್ನು ಸಾಯಿಸಿದರು. ಕೆಲವೇ ವರುಷಗಳ ನಂತರ ಇಂದಿರಾ ಗಾಂಧಿಯ ಹತ್ಯೆಯೇ ನೆಪವಾಗಿ ಹಿಂದೂಗಳು ಕತ್ತಿ ಹಿರಿದಿದ್ದರು, ಈ ಬಾರಿ ಮುಸ್ಲಿಮರ ವಿರುದ್ಧವಲ್ಲ, ಸಿಖ್ಖರ ವಿರುದ್ಧ………………… ಹಿಂಸೆ ಜಾರಿಯಲ್ಲಿದೆ.
image source - dnaindia

2 comments:

  1. Even i have wondered about the excessive usage of sexual vocabulary in kushwanth's literature. Is it a deliberate marketing strategy? Or is it that kushwant wants his stories and characters to be uninhibited? I guss i am more inclined to the latter reason. Nevertheless you cant disagree with the fact that his books are all full of life. I discovered a whole new dimension to the life when i first read kushwant. Few of my favorites are "India an introduction" and "not a nice man to know"

    ReplyDelete
    Replies
    1. I dont think its marketing strategy. . . Now reading his nightingale novel. . . Wonderful writer

      Delete