Aug 5, 2014

ಯಾವ ಮಹಾಭಾರತವನ್ನು ಪಠ್ಯವಾಗಿಸಬೇಕು?ಡಾ ಅಶೋಕ್ ಕೆ ಆರ್
ಸುಪ್ರೀಂಕೋರ್ಟಿನ ನ್ಯಾಯಧೀಶರೊಬ್ಬರು ‘ನಾನೇನಾದರೂ ಸರ್ವಾಧಿಕಾರಿಯಾಗಿದ್ದರೆ ಗೀತೆ ಮತ್ತು ಮಹಾಭಾರತವನ್ನು ಒಂದನೇ ತರಗತಿಯಲ್ಲಿದ್ದಾಗಲೇ ಪಠ್ಯವಾಗಿಸುತ್ತಿದ್ದೆ’ ಎಂಬ ಹಿತನುಡಿದಿದ್ದಾರೆ. ಒಂದು ದೇಶದ, ಹಿಂದು ಎಂಬ ಧರ್ಮದ ಪೌರಾಣಿಕ ಕೃತಿಯೆಂದೆನ್ನಿಸಿಕೊಂಡ ಮಹಾಭಾರತ, ಅದರಲ್ಲಿನ ಪಾತ್ರವರ್ಗದ ಪರಿಚಯ ಮುಂದಿನ ಪೀಳಿಗೆಗೂ ಇರಬೇಕೆಂಬುದು ಸ್ತುತ್ಯಾರ್ಹ. ಗೀತೆ ಮತ್ತು ಭಾರತವಷ್ಟೇ ಯಾಕೆ ಒಳ್ಳೆಯ ಅಂಶಗಳು ಯಾವ ಗೃಂಥದಲ್ಲೇ ಇದ್ದರೂ ಅದನ್ನು ಮಕ್ಕಳು ಓದುವಂತೆ ಪ್ರೇರೇಪಿಸುವುದು ಸರಿಯಾದ ಕ್ರಮವೇ. ಆದರೆ ಮಕ್ಕಳು ತಿಳಿಯುವಂತೆ ಮಾಡುವುದಕ್ಕೂ, ಪಠ್ಯವಾಗಿಸುವುದಕ್ಕೂ ಇರುವ ಅಗಾಧ ವ್ಯತ್ಯಾಸವನ್ನು ಅರಿಯಲು ಸನ್ಮಾನ್ಯ ನ್ಯಾಯಾಧೀಶರಿಗೂ ಸಾಧ್ಯವಾಗಿಲ್ಲ. ಯಾವ ಮಹಾಭಾರತವನ್ನು ಪಠ್ಯವಾಗಿಸಬಹುದು? ಮತ್ತದನ್ನು ನಿರ್ಧರಿಸುವವರು ಯಾರು?

ಮಹಾಭಾರತವಿರಲಿ, ರಾಮಾಯಣವೇ ಇರಲಿ ಪ್ರಸಿದ್ಧಿ ಪಡೆದಿದ್ದು ಮತ್ತು ಎಲ್ಲೆಡೆ ಹಬ್ಬಿದ್ದು ಮೌಖಿಕ ರೂಪದಲ್ಲಿಯೇ ಹೊರತು ಲಿಖಿತ ರೂಪದಲ್ಲಲ್ಲ. ಹೀಗಾಗಿಯೇ ಭಾರತದಲ್ಲಿ ಸಾವಿರಾರು ಮಹಾಭಾರತಗಳಿವೆ, ಅಷ್ಟೇ ಸಂಖೈಯ ರಾಮಾಯಣಗಳಿವೆ (ಎಕೆ ರಾಮಾನುಜಂರ ಮುನ್ನೂರು ರಾಮಾಯಣ ನಿಷೇಧಕ್ಕೊಳಗಾಗಿದ್ದನ್ನಿಲ್ಲಿ ಸ್ಮರಿಸಬಹುದು). ಪ್ರದೇಶದಿಂದ ಪ್ರದೇಶಕ್ಕೆ ರಾಜ್ಯದಿಂದ ರಾಜ್ಯಕ್ಕೆ ಜಾತಿಯಿಂದ ಜಾತಿಗೆ ಬದಲಾಗುತ್ತಲೇ ಸಾಗುವ ಮಹಾಭಾರತವನ್ನು ಯಾವ ರೂಪದಲ್ಲಿ ಪಠ್ಯವಾಗಿಸಿ ಕಲಿಸಬಹುದು?
ಪಾಂಡವಪುರದ ಸಮೀಪವಿರುವ ಬೆಟ್ಟವೊಂದಕ್ಕೆ ಕುಂತಿ ಬೆಟ್ಟವೆಂದು ಹೆಸರು. ಅಲ್ಲಿಯ ಪುರಾಣದ ಪ್ರಕಾರ ಕುಂತಿ ಬೆಟ್ಟ ಕೂಡ ಮಹಾಭಾರತದ ಒಂದು ಭಾಗ. ಈ ರೀತಿಯ ಸಾವಿರಾರು ಊರುಗಳು ಮೌಖಿಕ ಪರಂಪರೆಯಲ್ಲಿ ಮಹಾಭಾರತದ ಭಾಗವಾಗಿಬಿಟ್ಟಿವೆ. ಅದೆಲ್ಲವನ್ನೂ ಸೇರಿಸಲು ಸಾಧ್ಯವೇ? ಅನೇಕ ಮಹಾಭಾರತಗಳು ಅನೇಕಾನೇಕ ಪ್ರಶ್ನೆಗಳನ್ನು ಮೂಡಿಸುತ್ತವೆ, ವಿಧವಿಧವಾದ ಭಾವನೆಗಳನ್ನುಟ್ಟಿಸುತ್ತವೆ. ಏಕಲವ್ಯ ದ್ರೋಣಾಚಾರ್ಯರಿಗೆ ಹೆಬ್ಬೆರಳನ್ನು ದಕ್ಷಿಣೆಯ ರೂಪದಲ್ಲಿ ಕೊಟ್ಟಿದ್ದು ಕೆಲವರಿಗೆ ಗುರು-ಶಿಷ್ಯ ಪರಂಪರೆಯ ಅತ್ಯುನ್ನತ ನಿದರ್ಶನವಾಗಿ ಕಂಡರೆ ಕೆಲವರಿಗೆ ಕುಟಿಲ ಗುರುವೊಬ್ಬ ಬಲ್ಲಿದನ ಮನಸ್ಸಂತೋಷಪಡಿಸಲು ಬಡವನ ಪ್ರತಿಭೆಯನ್ನೇ ಕಸಿದ ದುಷ್ಕೃತ್ಯವಾಗಿ ಗೋಚರಿಸುತ್ತದೆ. ಬಹುತೇಕ ಮಹಾಭಾರತದ ಎಲ್ಲಾ ಪಾತ್ರಗಳನ್ನು ಏಕಕಾಲದಲ್ಲಿ ಪ್ರೀತಿಸುತ್ತಲೇ ದ್ವೇಷಿಸಬಹುದು, ದ್ವೇಷಿಸುತ್ತಲೇ ಪ್ರೀತಿಸಬಹುದು.
ಇನ್ನು ಮಹಾಭಾರತ, ರಾಮಾಯಣ, ಭಗವದ್ಗೀತೆಗಳೆಲ್ಲಾ ‘ಭಾರತೀಯ ಸಂಸ್ಕೃತಿ’ಯ ಭಾಗವಾಗಿರುವುದರಿಂದ ಅದನ್ನು ಪಠ್ಯವಾಗಿಸಬೇಕೆಂಬುದು ನ್ಯಾಯಾಧೀಶರ ಅಭಿಪ್ರಾಯವಾಗಿದ್ದರೆ ಅದು ಸರ್ವಥಾ ತಪ್ಪು. ಏಕೆಂದರೆ ಈ ‘ಭಾರತೀಯ ಸಂಸ್ಕೃತಿ’ಯಲ್ಲಿ ಕುಂತಿ ಬೆಟ್ಟವೂ ಇಲ್ಲ, ಲಕ್ಷ್ಮಣತೀರ್ಥವೂ ಇಲ್ಲ. ಕಾರಣ ಒಂದು ಜಾತಿಯ ಕಟ್ಟುಪಾಡಿಗೊಳಗಾದ ‘ವೈದಿಕ ಸಂಸ್ಕೃತಿ’ಯನ್ನೇ ‘ಭಾರತೀಯ ಸಂಸ್ಕೃತಿ’ಯೆಂದು ತಪ್ಪಾಗಿ (ಅದು ಉದ್ದೇಶಪೂರ್ವಕ ತಪ್ಪಾಗಿರುವ ಸಾಧ್ಯತೆಯೇ ಅಧಿಕ) ವ್ಯಾಖ್ಯಾನಿಸಿ ಅರ್ಥೈಸುವುದೇ ಆಗಿದೆ. ‘ವೈದಿಕ ಸಂಸ್ಕೃತಿ’ಯನ್ನೇ ‘ಭಾರತೀಯ ಸಂಸ್ಕೃತಿ’ ‘ಹಿಂದೂ ಸಂಸ್ಕೃತಿ’ ಎಂದು ಸಮೀಕರಿಸುವುದರಿಂದಲೇ ಗೋಮಾಂಸ ಸೇವನೆಯಂತಹ ಕೆಲವು ಶೂದ್ರ ಮತ್ತು ದಲಿತ ಸಮುದಾಯದ ಆಹಾರ ಪದ್ಧತಿಯಾಗಿದ್ದ ಸಂಗತಿಗಳು ‘ಧರ್ಮ ಭ್ರಷ್ಟತೆಯ’ ಪರಿಧಿಗೆ ಬಂದಿರುವುದು. “ಭ್ರಾತೃಮಿತ್ರ ವಿರೋಧಕರಿಗೆ, ಪಿತೃಮಾತೃಘಾತುಕರಿಗೆ, ಖಳನಿಗೆ, ಉತ್ತಮ ಜಾತಿಯನ್ನು ನಾಶ ಮಾಡುವವನಿಗೆ, ವರ್ಣಾಶ್ರಮ ದೂಷಕನಿಗೆ, ಜಾತಿಸಂಕರಕಾರನಿಗೆ, ಕ್ರೋಧಾತಿರೇಕವುಳ್ಳವನಿಗೆ, ಗಾಡಗರ್ವಿಗೆ, ಭೂತವೈರಿಗೆ – ಪಾರ್ಥಾ, ಪರಲೋಕವಿಲ್ಲ” ಎಂದು ನೀತಿಪಾಠವಿದೆ ಕುಮಾರವ್ಯಾಸ ಕರ್ಣಾಟಕ ಭಾರತ ಕಥಾಮಂಜರಿಯಲ್ಲಿ. ಜಾತೀಯತೆಯನ್ನು ಉಳಿಸಿಕೊಳ್ಳಲೇಬೇಕೆಂದು ಪ್ರತಿಪಾದಿಸುವ ಇಂತಹ ಪಠ್ಯವನ್ನು ಸೇರಿಸಲಾದೀತೇ?
ಮಹಾಭಾರತ, ರಾಮಾಯಣ ಅಪ್ಪ, ಅಮ್ಮ, ಅಜ್ಜ, ಅಜ್ಜಿಯ ಮುಖಾಂತರ ಮೌಖಿಕವಾಗಿಯೇ ಮಕ್ಕಳನ್ನು ತಲುಪಬೇಕು, ನಂತರದ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಅನೇಕಾನೇಕ ರೂಪಗಳಲ್ಲಿ ದೊರೆಯುವ ಪುಸ್ತಕದ ಮುಖಾಂತರ ಬೆಳೆದ ಮಗುವಿನಲ್ಲಿ ವಿಮರ್ಶೆಗೊಳಗಾಗಬೇಕು. ಮುಂದಿನ ತಲೆಮಾರಿಗೆ ಮತ್ತಷ್ಟು ಬದಲಾವಣೆಯೊಂದಿಗೆ ಮತ್ತಷ್ಟು ಸ್ಥಳೀಯ ಸ್ಪರ್ಷದೊಂದಿಗೆ ತಲುಪಬೇಕು. ಅದು ಬಿಟ್ಟು ಪಠ್ಯವಾಗಿಸಬೇಕು, ಈ ಪಠ್ಯವೇ ಅಧಿಕೃತ ಎಂಬ ಭಾವ ಬೆಳೆಸಿಕೊಂಡರೆ ಸಾವಿರಾರು ವರುಷಗಳಿಂದ ಜೀವಂತವಿರುವ ಪಾಠಗಳು ಮರಣ ಹೊಂದುವುದರಲ್ಲಿ ಸಂದೇಹವಿಲ್ಲ.

No comments:

Post a Comment