Aug 25, 2014

ಉಪಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ

hingyake
ಬಿಜೆಪಿಯ ಶ್ರೀರಾಮುಲು, ಬಿ.ಎಸ್.ಯಡಿಯೂರಪ್ಪ ಮತ್ತು ಕಾಂಗ್ರೆಸ್ಸಿನ ಪ್ರಕಾಶ್ ಹುಕ್ಕೇರಿ ಲೋಕಸಭಾ ಚುನಾವಣೆಯಲ್ಲಿ ಜಯಿಸಿದ್ದ ಕಾರಣ ಬಳ್ಳಾರಿ ಗ್ರಾಮಾಂತರ, ಚಿಕ್ಕೋಡಿ ಮತ್ತು ಶಿಕಾರಿಪುರದಲ್ಲಿ ನಡೆದ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ಎರಡರಲ್ಲಿ ಮತ್ತು ಬಿಜೆಪಿ ಒಂದರಲ್ಲಿ ಜಯ ಸಾಧಿಸಿದೆ.

ಮೂರು ಸ್ಥಾನಗಳಲ್ಲಿ ಕಳೆದ ಬಾರಿ ಎರಡರಲ್ಲಿ ಬಿಜೆಪಿ ಜಯ ಸಾಧಿಸಿದ್ದರೆ ಒಂದರಲ್ಲಿ ಕಾಂಗ್ರೆಸ್ ಜಯಶಾಲಿಯಾಗಿತ್ತು. ಈಗಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಪೈಪೋಟಿಯಿತ್ತು. ಜೆ.ಡಿ.ಎಸ್ ಬಹಿರಂಗವಾಗಿಯಲ್ಲದಿದ್ದರೂ ಆಯಾ ಕ್ಷೇತ್ರದಲ್ಲಿ ಕಾಂಗ್ರೆಸ್ಸನ್ನು ಬೆಂಬಲಿಸಿತ್ತು. ಚಿಕ್ಕೋಡಿಯಲ್ಲಿ ಸಚಿವ ಪ್ರಕಾಶ್ ಹುಕ್ಕೇರಿಯವರ ಲೋಕಸಭಾ ಪ್ರವೇಶದಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಅವರ ಮಗ ಗಣೇಶ್ ಹುಕ್ಕೇರಿ ಸ್ಪರ್ಧಿಸಿದ್ದರು. ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕವಟಗಿಮಠರನ್ನು ಮೂವತ್ತೊಂದು ಸಾವಿರಕ್ಕೂ ಅಧಿಕ ಮತಗಳಿಂದ ಸೋಲಿಸಿದ್ದಾರೆ.
ಇನ್ನು ಬಳ್ಳಾರಿಯಲ್ಲಿ ಬಿಜೆಪಿ ಮತ್ತು ಶ್ರೀರಾಮುಲುರವರ ಪಾರಮ್ಯ ಮುರಿಯುವಂತಹ ಫಲಿತಾಂಶ ಬಂದಿದೆ. ಕಾಂಗ್ರೆಸ್ಸಿನ ಎನ್. ವೈ. ಗೋಪಾಲಕೃಷ್ಣ ಬಿಜೆಪಿಯ ಓಬಳೇಶ್ ರವರನ್ನು ಮೂವತ್ತಮೂರು ಸಾವಿರ ಮತಗಳಿಂದ ಸೋಲಿಸಿದ್ದಾರೆ.
ಯಡಿಯೂರಪ್ಪನವರ ಲೋಕಸಭಾ ಪ್ರವೇಶದಿಂದ ತೆರವಾಗಿದ್ದ ಶಿಕಾರಿಪುರ ಕ್ಷೇತ್ರದಲ್ಲಿ ಅವರ ಮಗ ಬಿ.ವೈ.ರಾಘವೇಂದ್ರ ಸ್ಪರ್ಧಿಸಿದ್ದರು. ಶಿಕಾರಿಪುರದಲ್ಲಿ ಬಿಜೆಪಿಯ ಗೆಲುವು ಯಡಿಯೂರಪ್ಪನವರ ವರ್ಚಸ್ಸಿನಿಂದಾಗಿ ಧೃಡವಾಗಿತ್ತಾದರೂ ಕಾಂಗ್ರೆಸ್ಸಿಗೆ ಜೆ.ಡಿ.ಎಸ್ ಒಳಬೆಂಬಲ ನೀಡಿದ್ದು ಗೆಲುವಿನ ಅಂತರವನ್ನು ಕಡಿಮೆಯಾಗಿಸಿದೆ. ಕಾಂಗ್ರೆಸ್ಸಿನ ಶಾಂತವೀರಪ್ಪನವರನ್ನು ಆರುಸಾವಿರ ಮತಗಳಿಂದ ರಾಘವೇಂದ್ರ ಸೋಲಿಸಿದ್ದಾರೆ.
Summary - In Karnataka Byelections Congress retains chikkodi constituency, BJP retains Shikaripura constituency. BJP lost its Bellary constituency to Congress.

No comments:

Post a Comment