Jul 31, 2014

ತಿರುವುಮುರುವಾದ ವಿಬ್ ಗಯಾರ್ ತನಿಖೆ

stop rape


ಡಾ ಅಶೋಕ್ ಕೆ ಆರ್
“ಆತನಿಗಿನ್ನು ಯಾರೂ ಕೆಲಸ ನೀಡಲಾರರು. ಕಳೆದೆರಡು ವಾರದಿಂದ ಅವನನ್ನು ಕಂಡೇ ಇಲ್ಲ. ಬಡವರಾದ ನಾವು ಪೋಲೀಸರು ಹೊರಿಸಿದ ಸುಳ್ಳು ಆರೋಪಗಳ ವಿರುದ್ಧ ಕಾನೂನಿನ ಮೊರೆಹೋಗುವುದಾದರೂ ಹೇಗೆ?” - ಮುರ್ತಾಝ (ಮುಸ್ತಾಫಾನ ತಂದೆ)

ಪೋಲೀಸರ ಕರ್ತವ್ಯನಿರ್ವಹಣೆಯ ಮೇಲೆ ನಾನಾ ರೀತಿಯ ಒತ್ತಡಗಳು ಮುಂಚಿನಿಂದಲೂ ಇದ್ದೇ ಇದೆ. ಹಿರಿಯ ಅಧಿಕಾರಿಗಳ ಒತ್ತಡ, ಅವರ ಹಿರಿಯರ ಒತ್ತಡ, ರಾಜಕಾರಣಿಗಳ ಒತ್ತಡ, ಅಪರಾಧಿ ಸ್ಥಾನದಲ್ಲಿರುವವರ ಪ್ರಭಾವದ ಒತ್ತಡ, ಶೋಷಣೆಗೊಳಗಾದವರ ಪ್ರಭಾವದ ಒತ್ತಡಗಳ ನಡುವೆ ಕಾರ್ಯನಿರ್ಹಿಸಬೇಕಾದ ಪರಿಸ್ಥಿತಿ ಪೋಲೀಸರದು. ಬಹಳಷ್ಟು ಬಾರಿ ಈ ರೀತಿಯ ಒತ್ತಡಗಳು ನಿಷ್ಕ್ರಿಯ ಪೋಲೀಸರನ್ನು ಕಾರ್ಯಮುಖವನ್ನಾಗಿ ಮಾಡಿದರೆ, ಕೆಲವೊಮ್ಮೆ ಪ್ರಭಾವಿ ಆರೋಪಿಗಳನ್ನು ರಕ್ಷಿಸುವಂತೆ ಮಾಡುತ್ತವೆ. ಅತ್ಯಾತುರದ ನವಯುಗದ ಬೆಳವಣಿಗೆಯೆಂದರೆ ಈ ರೀತಿಯ ಬಾಹ್ಯ ಒತ್ತಡಗಳು ಆತುರಾತುರದಲ್ಲಿ ಅಪರಾಧಿಯೋ ನಿರಪರಾಧಿಯೋ ಒಟ್ಟಿನಲ್ಲಿ ಒಬ್ಬನನ್ನು ಬಂಧಿಸುವಂತೆ ಮಾಡಿಬಿಡುತ್ತಿವೆ. ಅಪರಾಧಿಯೇ ಬಂಧಿಯಾದರೆ ಪರವಾಯಿಲ್ಲ ಆದರೆ ಆ ಅಪರಾಧಕ್ಕೆ ಸಂಬಂಧವೇ ಪಡದ ವ್ಯಕ್ತಿಯೊಬ್ಬ ವಿನಾಕಾರಣ ನವಯುಗದ ಆತುರತೆಗೆ ಬಲಿಯಾಗಿಬಿಟ್ಟರೆ ಇದಕ್ಕೆ ಯಾರು ಹೊಣೆ? ಕೇವಲ ಪೋಲೀಸರಷ್ಟೇ ಅಲ್ಲ ಇಡೀ ಸಮಾಜವೇ ಇದಕ್ಕೆ ಹೊಣೆಯನ್ನೊತ್ತುಕ್ಕೊಳ್ಳಬೇಕು.

ಒಂದು ಕೊಲೆಯೋ ಕಳ್ಳತನವೋ ನಿರ್ದಿಷ್ಟ ಪ್ರದೇಶದಲ್ಲಿ ನಡೆದಾಗ ಪೋಲೀಸರು ಆ ಮುಂಚೆ ಅದೇ ಪ್ರದೇಶದಲ್ಲಿ ಅದೇ ತರಹದ ಅಪರಾಧಗಳನ್ನು ಎಸಗಿದವರನ್ನು ಕರೆತಂದು ವಿಚಾರಿಸುವುದು ಸರ್ವೇ ಸಾಮಾನ್ಯ. ವಿಚಾರಣೆಗೆ ಕರೆತಂದವರೆಲ್ಲ ಅಪರಾಧಿಗಳೂ ಆಗಿರುವುದಿಲ್ಲ. ವಿಚಾರಣೆಗೆ ಕರೆತಂದಿದ್ದೇವೆ ಎಂದೇ ಪೋಲೀಸರು ಹೇಳುತ್ತಿದ್ದರು. ಅತಿಯಾದ ಮಾಧ್ಯಮದ ಪ್ರಚಾರದಿಂದ, ತತ್ಪರಿಣಾಮವಾಗಿ ಅತಿಯಾದ ಸಾರ್ವಜನಿಕ ಪ್ರತಿಕ್ರಿಯೆಯಿಂದ, ಆ ಪ್ರತಿಕ್ರಿಯೆಯಿಂದ ರೂಪುಗೊಳ್ಳುವ ರಾಜಕೀಯ ಒತ್ತಡದಿಂದ ಪೋಲೀಸರ ಕಾರ್ಯವೈಖರಿಯಲ್ಲಿ ಬದಲಾವಣೆಯಾಗುತ್ತಿದೆಯಾ ಎಂಬ ಅನುಮಾನ ಮೂಡಿಸಿರುವುದು ಬೆಂಗಳೂರಿನ ವಿಬ್ ಗಯಾರ್ ಶಾಲೆಯ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆ ಸಾಗುತ್ತಿರುವ ರೀತಿ.

ಆರು ವರುಷದ ಬಾಲಕಿಯ ಮೇಲೆ ವಿಬ್ ಗಯಾರ್ ಶಾಲೆಯಲ್ಲಿ ನಡೆದ ಪೈಶಾಚಿಕ ಕೃತ್ಯ ಸಮಾಜವನ್ನು ಬೆಚ್ಚಿ ಬೀಳಿಸಿದೆ. ಮಾಧ್ಯಮಗಳು ಈ ಪ್ರಕರಣಕ್ಕೆ ಉಳಿದ ಅತ್ಯಾಚಾರ ಪ್ರಕರಣಗಳಿಗಿಂತ ಹೆಚ್ಚು ಮಹತ್ವ ನೀಡಿದವು. ಒತ್ತಡ ಹೆಚ್ಚಾದ ಕಾರಣಕ್ಕೆ ಪೋಲೀಸರಿಗೂ ಶಾಲೆಯ ಒಳಗಿನವನೇ ಆದ ಆರೋಪಿಯನ್ನು ಆದಷ್ಟು ಬೇಗ ಹಿಡಿಯಬೇಕಾದ ಅನಿವಾರ್ಯತೆ ಉಂಟಾಗಿದೆ. ಈ ಒತ್ತಡಗಳ ಕಾರಣದಿಂದಲೇ ಏನೋ ಒಬ್ಬನ್ಯಾರನ್ನಾದರೂ ಆರೋಪಿಯ ಸ್ಥಾನದಲ್ಲಿ ನಿಲ್ಲಿಸುವ ತುರ್ತಿಗೆ ಒಳಗಾಗಿಬಿಟ್ಟರಾ ಪೋಲೀಸರು? ಇಂತಹದೊಂದು ಅನುಮಾನ ಕಾಡುವುದು ವಿಬ್ ಗಯಾರ್ ಪ್ರಕರಣ ತೆಗೆದುಕೊಂಡಿರುವ ತಿರುವಿನಿಂದಾಗಿ. ಸ್ಕೇಟಿಂಗ್ ತರಬೇತಿ ಕೊಡುವ ಮುಸ್ತಾಫಾನನ್ನು ಆರೋಪಿಯೆಂದು ಬಂಧಿಸಿದ್ದರು. ಈಗ ಇದು ಮುಸ್ತಾಫಾ ಮಾಡಿರುವ ಕೃತ್ಯವಲ್ಲ, ಜಿಮ್ ತರಬೇತುದಾರರಾದ ವಾಸಿಮ್ ಪಾಶಾ ಮತ್ತು ಲಾಲ್ ಗಿರಿ ಮಾಡಿರುವ ನೀಚ ಕೆಲಸ ಎಂದು ಪೋಲೀಸ್ ಕಮಿಷನರ್ ಎಂ.ಎನ್. ರೆಡ್ಡಿ ತಿಳಿಸಿದ್ದಾರೆ. ವಾಸಿಮ್ ‘ಮುಸ್ತಾಫಾ ಮಾಡಿರಬಹುದೆಂದು’ ಅನುಮಾನ ವ್ಯಕ್ತಪಡಿಸಿದ ಕಾರಣ ಪೋಲೀಸರು ಮೊದಲು ಮುಸ್ತಾಫಾನನ್ನು ಬಂಧಿಸಿದ್ದರಂತೆ. ಅನುಮಾನ ಬಂದ ಮೇಲೆ ಬಂಧಿಸಿದ್ದೂ ತಪ್ಪಲ್ಲ, ವಿಚಾರಣೆಗೊಳಪಡಿಸುವುದೂ ಅಪರಾಧವಲ್ಲ ಆದರೆ ವಿಚಾರಣೆಗೂ ಮುಂಚೆಯೇ ಈತನೇ ಆರೋಪಿ ಎಂದು ಖಡಾಖಂಡಿತ ದನಿಯಲ್ಲಿ ಹೇಳುವ ಅವಶ್ಯಕತೆಯೇನಿತ್ತು? ‘ನೋಡಿ ಎಷ್ಟು ಬೇಗ ನಾವು ಅಪರಾಧಿಯನ್ನು ಬಂಧಿಸಿಬಿಟ್ಟೆವು’ ಎಂದು ತೋರ್ಪಡಿಸಿಕೊಳ್ಳುವ ಅತ್ಯುತ್ಸಾಹವಾ? ಮುಸ್ತಾಫಾನೇ ಅಪರಾಧಿ ಎಂದು ಶೀಘ್ರವಾಗಿ ಪೋಲೀಸರು ನಿರ್ಧರಿಸುವುದಕ್ಕೆ ಪ್ರಮುಖ ಕಾರಣ ಆತನ ಬಳಿ ಇದ್ದ ಮಕ್ಕಳ ನೀಲಿಚಿತ್ರಗಳ ತುಣುಕುಗಳು.

ಈಗ ಪೋಲೀಸರು ಹೇಳುತ್ತಿರುವಂತೆ ವಾಸಿಮ್ ಮತ್ತು ಲಾಲ್ ಗಿರಿ ಮಗುವಿನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ, ಮತ್ತೀ ಪ್ರಕರಣದಲ್ಲಿ ಮುಸ್ತಾಫಾನ ಪಾತ್ರವಿಲ್ಲ. ಮುಸ್ತಾಫಾನ ಗತಿ? ಅದರ ಬಗ್ಗೆ ಈಗ ಮಾತನಾಡುವಷ್ಟು ಚರ್ಚಿಸುವಷ್ಟು ವ್ಯವಧಾನ ಯಾರಿಗೂ ಇಲ್ಲ. ಮುಸ್ತಾಫಾನನ್ನು ಮುಂಚೆ ಬಂಧಿಸಿದಾಗ ಆತನ ಬಳಿಯಿರುವ ನೀಲಿಚಿತ್ರಗಳ ಬಗ್ಗೆ ಚರ್ಚೆಯಾಗಿತ್ತು. ನಂತರ ಮುಂಚೆ ಆತನಿದ್ದ ಶಾಲೆಗಳಲ್ಲಿ ಮಕ್ಕಳೊಡನೆ ಅನುಚಿತವಾಗಿ ವರ್ತಿಸಿದ ಕಾರಣದಿಂದ ತೆಗೆದುಹಾಕಿದ್ದರು ಎಂಬ ವರದಿಗಳೆಲ್ಲಾ ಬಂದಿದ್ದವು. ಆ ವರದಿಗಳೆಲ್ಲ ನಿಜವೇ ಎಂಬ ಅನುಮಾನ ಪೋಲೀಸರ ನಡುವಳಿಕೆಯಿಂದ ಮೂಡಲಾರಂಭಿಸಿದೆ. Justice delayed is Justice denied ಎಂಬ ವಾಕ್ಯ ಹೆಚ್ಚಾಗಿ ಕೇಳುತ್ತಿರುವ ಅವಸರದ ಕಾಲಘಟ್ಟದಲ್ಲಿ ನೂರು ಅಪರಾಧಿಗಳಿಗೆ ಶಿಕ್ಷೆಯಾದರೂ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬ ಹೇಳಿಕೆ ಮಾಸಲಾರಂಭಿಸಿದೆ.

ಚಿತ್ರಮೂಲ - newskarnataka.com

No comments:

Post a Comment