Jul 17, 2014

ಜನಪ್ರಿಯವೂ ಅಲ್ಲ ಜನಪರವೂ ಅಲ್ಲ

ಹಿಂದಿನ ಸರಕಾರಕ್ಕಿಂತ ಹೊಸತನ್ನೇನಾದರೂ ನೀಡಿದ್ದೇವೆಯೇ?
ಡಾ.ಅಶೋಕ್.ಕೆ.ಆರ್.
ಅಭಿವೃದ್ಧಿಯ ಮಾನದಂಡಗಳು ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತಿರುವಂತೆ ಸರಕಾರಗಳು ಘೋಷಣೆಯ ರೂಪದಲ್ಲಿ ಪ್ರಸ್ತುತಪಡಿಸುವ ಆಯವ್ಯಯಗಳೂ ಕೂಡ ಬದಲಾಗುತ್ತಿವೆ. ಆದರೀ ಬದಲಾವಣೆಗಳಲ್ಲಿ ಎಷ್ಟು ನಿಜಕ್ಕೂ ಜನಪರ – ಪರಿಸರಪರ ಎಂಬುದು ಪ್ರಶ್ನಾರ್ಹ. ಲೋಕಸಭಾ ಚುನಾವಣೆಗೂ ಮುನ್ನ ಕೆಲವೇ ತಿಂಗಳುಗಳಿಗಾಗಿ ಮನಮೋಹನ್ ಸಿಂಗ್ ನೇತೃತ್ವದ ಯು.ಪಿ.ಎ ಸರಕಾರ ಆಯವ್ಯಯ ಮಂಡಿಸಿತ್ತು. ತರುವಾಯ ನಡೆದ ಚುನಾವಣೆಯಲ್ಲಿ ಮೂವತ್ತು ವರುಷಗಳ ನಂತರ ಏಕಪಕ್ಷ ಬಹುಮತ ಪಡೆದು ಮೋದಿ ನೇತೃತ್ವದ ಸರಕಾರ ರಚನೆಯಾಯಿತು. ಕಳೆದು ಹಲವು ವರುಷಗಳಿಂದ ಹಳಿತಪ್ಪಿದ್ದ ಆರ್ಥಿಕತೆ, ಜಾಗತಿಕ ಮತ್ತು ರಾಜಕೀಯ ನಿರ್ಧಾರಗಳಿಂದಾಗಿ ಹೆಚ್ಚುತ್ತಲೇ ಸಾಗಿದ ಮತ್ತು ಸಾಗುತ್ತಿರುವ ಅವಶ್ಯ ವಸ್ತುಗಳ ಬೆಲೆ ಏರಿಕೆ, ಮುಕ್ತ ಮಾರುಕಟ್ಟೆ ನೀತಿಗಳನ್ನು ಒಪ್ಪಿಕೊಂಡ ಮೇಲೆ ದೂರದ ದೇಶವೊಂದರಲ್ಲಿ ನಡೆಯುವ ಸಣ್ಣ – ದೊಡ್ಡ ಘಟನೆಗಳೂ ಕೂಡ ದೇಶದ ಅರ್ಥ ವ್ಯವಸ್ಥೆಯನ್ನು ಅಲುಗಾಡಿಸುವ ಪರಿಗಳನ್ನು ನಿಯಂತ್ರಿಸಲು ಪ್ರಯತ್ನಿಸಬೇಕಾದ ಅನಿವಾರ್ಯತೆ ಹೊಸದಾಗಿ ಆಯ್ಕೆಯಾದ ಸರಕಾರಕ್ಕೆ. ಇನ್ನು ಕೆಲವು ತಿಂಗಳುಗಳಿಗಾಗಿ ಆಯವ್ಯಯವನ್ನು ರೂಪಿಸಬೇಕಾದ ಜವಾಬುದಾರಿಯನ್ನು ಮೋದಿ ನೇತೃತ್ವದ ಎನ್.ಡಿ.ಎ ಸರಕಾರ ಯಶಸ್ವಿಯಾಗಿ ನಿಭಾಯಿಸಿತೇ? ಉತ್ತರ ಸುಲಭವಲ್ಲ.
      ನರೇಂದ್ರ ಮೋದಿ ಮತ್ತವರ ಭಾ.ಜ.ಪ ಪಕ್ಷ ಇಡೀ ಚುನಾವಣೆಯಲ್ಲಿ ಮುಖ್ಯ ವಿಷಯವಾಗಿಸಿಕೊಂಡಿದ್ದು ಯು.ಪಿ.ಎ ಸರಕಾರದ ಆಡಳಿತದ ವೈಫಲ್ಯ, ಬೆಲೆ ಏರಿಕೆ ಮತ್ತು ನರೇಂದ್ರ ಮೋದಿಯ ವರ್ಚಸ್ಸನ್ನು. ಕಾಂಗ್ರೆಸ್ ವಿರೋಧಿ ಅಲೆ ಮತ್ತು ಮೋದಿಯ ಮೇಲೆ ಅಪಾರ ನಿರೀಕ್ಷೆಗಳಿದ್ದ ಜನಸಮೂಹದ ಸಹಾಯದಿಂದ ಮೋದಿ ಸ್ವಂತ ಬಲದಿಂದ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದರು. ಚುನಾವಣೆಯ ಗೆಲುವು, ಅದರಲ್ಲೂ ಇತ್ತೀಚಿನ ವರುಷಗಳಲ್ಲಿನ ಅಭೂತಪೂರ್ವ ಗೆಲುವು ಮೋದಿ ಸರಕಾರದ ಮುಂದಿನ ಪ್ರತಿಯೊಂದು ಹೆಜ್ಜೆಯನ್ನು ಮೋದಿ ಪರ ಮತ್ತು ವಿರೋಧವಾಗಿರುವವರೆಲ್ಲರೂ ಕುತೂಹಲದಿಂದ ಗಮನಿಸುವಂತೆ ಮಾಡಿತು. ಆಡಳಿತದ ಮೊದಲ ದಿನದಿಂದಲೇ ಇದು ‘ಮೋದಿ ಸರಕಾರ’ ಬಿಜೆಪಿ ಸರಕಾರವಲ್ಲಿ ಎಂಬ ಛಾಪು ಬೀಳುವಂತೆ ಮಾಡುವಲ್ಲಿ ಮೋದಿ ಸರ್ವ ಪ್ರಯತ್ನವನ್ನೂ ನಡೆಸುತ್ತಿದ್ದಾರೆ. ಆದ್ದರಿಂದ ರೈಲ್ವೆ ಆಯವ್ಯಯವಿರಲಿ ಅಥವಾ ಜೇಟ್ಲಿ ಮಂಡಿಸಿದ ಬಜೆಟ್ಟಿರಲಿ ಮೋದಿಯ ಛಾಪು ಇದ್ದೇ ಇರುತ್ತದೆಂಬ ನಿರೀಕ್ಷೆಯಿತ್ತು. ಚುನಾವಣೆಗೆ ಮುಂಚೆ ನಮ್ಮ ಆಡಳಿತದಲ್ಲಿ ಒಳ್ಳೆಯ ದಿನಗಳು ಬರಲಿವೆ ಎಂದು ಘೋಷಣೆಗಳ ಮೇಲೆ ಘೋಷಣೆ ಮಾಡುತ್ತ ಬಂದ ಸರಕಾರಕ್ಕೆ ಆಡಳಿತದ ಚುಕ್ಕಾಣಿ ಹಿಡಿದ ನಂತರ ಒಳ್ಳೆಯ ದಿನಗಳು ಹತ್ತಿರದಲ್ಲೆಲ್ಲೂ ಇಲ್ಲ ಎಂಬುದರ ಅರಿವಾಗಿರಬೇಕು. ಆ ಕಾರಣದಿಂದ ಸ್ವತಃ ನರೇಂದ್ರ ಮೋದಿ ಆರ್ಥಿಕತೆಯ ಪುನಶ್ಚೇತನಕ್ಕೆ ಒಂದಷ್ಟು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕು, ಕಹಿ ಗುಳಿಗೆಗಳನ್ನು ನುಂಗಲು ಸಿದ್ಧವಾಗಿ ಎಂದು ಹೇಳಿದ್ದು ಈ ಬಾರಿಯ ಆಯವ್ಯಯ ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯುಂಟುಮಾಡಬಹುದೆಂಬ ಭಾವ ಮೂಡಿಸಿತ್ತು. ಎಲ್ಲ ನೂತನ ಸರಕಾರಗಳು ದೂರುವಂತೆ ‘ಹಿಂದಿನ ಸರಕಾರ ಖಜಾನೆಯನ್ನು ಬರಿದು ಮಾಡಿಟ್ಟು ಹೋಗಿದೆ. ನಾವೇನು ಮಾಡೋಣ’ ಎಂಬಂತಹ ಅಸಹಾಯಕ ಮಾತುಗಳು ಸರಕಾರಸ್ಥರ ದಿನನಿತ್ಯದ ನುಡಿಗಟ್ಟುಗಳಾಗಿದ್ದವು. ಇವೆಲ್ಲ ಬೆಳವಣಿಗೆಗಳ ನಡುವೆ ಎನ್.ಡಿ.ಎ ಸರಕಾರದ ಚೊಚ್ಚಲ ಬಜೆಟ್ ಮಂಡನೆಯಾಗಿದೆ. ಸರಕಾರದ ಮುಂದಿನ ಐದು ವರುಷಗಳ ಕಾರ್ಯವಿಧಾನ, ಯೋಜನೆಗಳನ್ನು ಜನರಿಗೆ ಸ್ಥೂಲವಾಗಾದರೂ ಪರಿಚಯಿಸಬಹುದೆಂಬ ನಿರೀಕ್ಷೆಯನ್ನು ಆಯವ್ಯಯ ನಿರಾಶೆಗೊಳಿಸಿದೆ.

ಸರಕಾರಿ ಸಂಸ್ಥೆಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸದ್ದಕ್ಕೆ ಕಾರಣಗಳು ಹಲವು. ವ್ಯಾಪಕ ಭ್ರಷ್ಟಾಚಾರ, ರಾಜಕೀಯ ಪ್ರಭಾವ, ಸ್ಥಳೀಯ ಪ್ರಭಾವಗಳಿಂದಾಗಿ ಕೆಲಸ ಮಾಡದಿದ್ದರೂ ಅನಾಹುತಗಳನ್ನು ಮಾಡಿದರೂ  ಕೆಲಸ ಕಳೆದುಕೊಳ್ಳದ ಪರಿಣಾಮಗಳೆಲ್ಲ ಜೊತೆಗೂಡಿ ಸರಕಾರಿ ಸಂಸ್ಥೆಗಳೆಡೆಗೆ ಜನರ ವಿಶ್ವಾಸವನ್ನೇ ಕಡಿಮೆ ಮಾಡಿಬಿಟ್ಟಿವೆ. ಅಧಿಕಾರಸ್ಥರ ಈ ಅನಾಹುತಕಾರಿ ಪ್ರವೃತ್ತಿಯನ್ನು ತಡೆಯಬೇಕಾದ ಸರಕಾರಗಳು ಸರಕಾರಿ ಸಂಸ್ಥೆಗಳ ವಿಶ್ವಾಸರ್ಹತೆ ಕಡಿಮೆಯಾದಷ್ಟೂ ಸಂತಸ ಪಡುವ ರೀತಿ ವರ್ತಿಸುವುದು ದುರದೃಷ್ಟಕರ. ‘ನೋಡ್ರಿ ಇದನ್ನೆಲ್ಲಾ ನಮ್ಮ ಸರಕಾರ ನಿರ್ವಹಿಸುವುದು ಎಷ್ಟು ಕಷ್ಟ. ಅದಿಕ್ಕೆ ಖಾಸಗಿ ಸಹಭಾಗಿತ್ವ ಪಡೆದುಕೊಳ್ಳೋಣ’ ಎಂದು ಮೊದಲು ಹೇಳುತ್ತಾರೆ. ಸರಕಾರೀ ಸಂಸ್ಥೆಗಳಿಂದ ಬೇಸತ್ತ ಜನ ‘ಹೌದೌದು ಕೇವಲ ಸರಕಾರದ ನಿಯಂತ್ರಣಕ್ಕಿಂತ ಖಾಸಗಿ ಸಹಭಾಗಿತ್ವ ಉತ್ತಮ’ ಎಂದು ತಲೆಯಾಡಿಸುತ್ತಾರೆ. ಖಾಸಗಿ ಸಹಭಾಗಿತ್ವವೆಂಬುದು ಕ್ರಮೇಣವಾಗಿ ಬಹುಪಾಲು ಖಾಸಗಿಯಾಗಿ ಸ್ವಲ್ಪವೇ ಸ್ವಲ್ಪ ಸರಕಾರಿಯಾಗಿರುತ್ತದೆ, ಕೆಲವು ಸಂದರ್ಭದಲ್ಲಿ ಸಂಪೂರ್ಣ ಖಾಸಗಿ ವ್ಯಕ್ತಿಗಳ ಸುಪರ್ದಿಗೆ ಒಳಪಡುತ್ತದೆ. ಅನೇಕ ಸರಕಾರಿ ಕಂಪನಿಗಳು ಬಾಗಿಲು ಹಾಕುವುದಕ್ಕೆ ಅಧಿಕಾರಸ್ಥರ, ಸರಕಾರಗಳ ನಿರ್ಲಕ್ಷ್ಯವೇ ಕಾರಣ ಮತ್ತದಕ್ಕೆ ನೀರೆರೆಯುವುದಕ್ಕೆ ಖಾಸಗಿ ಲಾಬಿಕೋರರು ತುದಿಗಾಲಲ್ಲೇ ಕಾಯುತ್ತಿರುತ್ತಾರೆ. ಸರಕಾರಗಳೇ ನಿರ್ವಹಿಸುತ್ತಿದ್ದ ರಸ್ತೆಗಳು ನಿಧಾನಕ್ಕೆ ಖಾಸಗಿಯ ತೆಕ್ಕೆಗೆ ಹೋಗುತ್ತಿರುವುದಕ್ಕೂ ಇದೇ ಕಾರಣ. ಖಾಸಗಿ ಕಂಪನಿಗಳು ನಿರ್ವಹಿಸುತ್ತಿರೋ ರಸ್ತೆಗಳು ನೋಡ್ರಿ ಎಷ್ಟು ಚಲೋ ಇದೆ ಎಂಬ ಭಾವ ಮೊದಲು ಮೂಡಿಸಿ ನಂತರ ಅದೇ ರಸ್ತೆಗಳಿಗೆ ಟೋಲ್ ಫೀ ನಿಗದಿಪಡಿಸಿ ಅದಕ್ಕೆ ಸರಿಯಾದ ಮಾನದಂಡಗಳನ್ನೂ ನಿಗದಿಪಡಿಸದೆ ಖಾಸಗಿ ಕಂಪನಿಗಳು ಕೋಟಿ ಕೋಟಿ ಬಾಚುವುದಕ್ಕೆ ಸರಕಾರಗಳು ನೆರವಾಗುತ್ತಿವೆ. ಕೊನೇ ಪಕ್ಷ ಈ ಖಾಸಗಿ ಸಹಭಾಗಿತ್ವದ ರಸ್ತೆಗಳಲ್ಲಿ ಟೋಲ್ ಹೆಚ್ಚಾದರೆ ಪ್ರತಿಭಟಿಸಾದರೂ ಕಡಿಮೆಮಾಡಿಸಬಹುದು. ಸಂಪೂರ್ಣ ಖಾಸಗಿಯವರಿಗೇ ನೀಡಲ್ಪಟ್ಟ ರಸ್ತೆಗಳಲ್ಲಿ ಆ ಕಂಪನಿಯವರು ನಿಗದಿಪಡಿಸಿದ್ದೇ ದರ, ಉದಾಹರಣೆಗೆ ಬೆಂಗಳೂರಿನ ನೈಸ್ ರಸ್ತೆ. ರಸ್ತೆಯೊಂದೇ ಅಲ್ಲದೆ ಪ್ರತಿಯೊಂದು ಕ್ಷೇತ್ರದಲ್ಲೂ ಖಾಸಗಿ ಕಂಪನಿಗಳ ಬಂಡವಾಳಕ್ಕೆ ಹಾತೊರೆಯುವ ಪರಿಸ್ಥಿತಿ ವರುಷದಿಂದ ವರುಷಕ್ಕೆ ಉಲ್ಬಣವಾಗುತ್ತಿದೆ. ದೇಶೀಯ ಖಾಸಗಿ ಕಂಪನಿಗಳಿಗೆ ಮಾಡಿಕೊಡುವ ಲಾಭ ಸಾಲುವುದಿಲ್ಲವೆಂಬಂತೆ ವಿದೇಶಿ ಕಂಪನಿಗಳಿಗೂ ಕೂಡ ದೇಶದ ಅನೇಕ ಮಹತ್ವದ ಸಂಸ್ಥೆಗಳಲ್ಲಿ ಹಣ ಹೂಡಲು ಅವಕಾಶ ಮಾಡಿಕೊಡುವುದು ಸರಕಾರಗಳಿಗೆ ಮುಖ್ಯವಾಗಿಬಿಟ್ಟಿದೆ. ಅದು ಕಾಂಗ್ರೆಸ್ಸೇ ಇರಲಿ, ಬಿಜೆಪಿಯೇ ಇರಲಿ ಆಡಳಿತದ ರೀತಿ ನೀತಿಗಳಲ್ಲಿ ಅಂತಹ ವ್ಯತ್ಯಾಸಗಳೇನಿರುವುದಿಲ್ಲ ಎಂಬುದನ್ನು ಕೂಡ ಈ ಬಾರಿಯ ಆಯವ್ಯಯ ನಿರೂಪಿಸುತ್ತದೆ.

ಕಳೆದ ಬಾರಿಯ ರೈಲ್ವೆ ಬಜೆಟನ್ನು ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಮಂಡಿಸಿದ್ದರೆ ಈ ಬಾರಿಯ ಆಯವ್ಯಯವನ್ನು ಕರ್ನಾಟಕದ ಸಂಸದ ಸದಾನಂದ ಗೌಡ ಮಂಡಿಸಿದ್ದಾರೆ. ಕರ್ನಾಟಕದಿಂದ ಆಯ್ಕೆಯಾದ ರೈಲ್ವೆ ಮಂತ್ರಿ ಕರ್ನಾಟಕಕ್ಕೆ ಒಂದಷ್ಟು ಹೆಚ್ಚಿನ ಯೋಜನೆಗಳನ್ನು ಘೋಷಿಸಬಹುದು ಎಂಬ ನಿರೀಕ್ಷೆಯಿತ್ತು. ಅವರು ದೇಶಕ್ಕೆ ರೈಲ್ವೆ ಮಂತ್ರಿ ಕೇವಲ ಕರ್ನಾಟಕಕ್ಕಲ್ಲ ಎಂಬ ವಾದವೂ ನಡೆಯಿತು. ಆಯವ್ಯಯ ಮಂಡಿಸುವುದಕ್ಕೂ ಮುಂಚೆಯೇ ಪ್ರಯಾಣ ದರ ಮತ್ತು ಸರಕು ಸಾಗಾಟ ದರವನ್ನು ಏರಿಸಲಾಗಿತ್ತು. ಯು.ಪಿ.ಎ ತನ್ನ ಆಡಳಿತಾವಧಿಯ ಕೊನೆಯಲ್ಲಿ ಘೋಷಿಸಿದ್ದ ಏರಿಕೆಯಿದು. ಮೇ ಹದಿನಾರರಿಂದಲೇ ಹೆಚ್ಚಬೇಕಿದ್ದ ದರ ಅಂದೇ ಚುನಾವಣಾ ಫಲಿತಾಂಶದ ಘೋಷಣೆಯಿದ್ದ ಕಾರಣ ಮುಂದೂಡಲ್ಪಟ್ಟಿತ್ತು. ಇದು ನಾವು ಏರಿಸಿದ್ದಲ್ಲ ಹಿಂದಿನ ಕಾಂಗ್ರೆಸ್ ಸರಕಾರ ಏರಿಸಿದ್ದು ಎಂಬ ಸಮಜಾಯಿಷಿ ಈಗಿನ ಸರಕಾರದಿಂದ ಬಂತಾದರೂ ಕೊನೇ ಪಕ್ಷ ಬಜೆಟ್ ಮಂಡನೆಯವರೆಗೆ, ಮತ್ತದರ ಚರ್ಚೆಯವರೆಗೆ ದರಏರಿಕೆಯನ್ನು ತಡೆಯುವ ಪ್ರಯತ್ನವನ್ನೂ ಮಾಡದೆ ತುಂಬ ಒಳ್ಳೆ ದಿನಗಳನ್ನೇನೂ ನಾವು ತರುವುದಿಲ್ಲ ಎಂಬ ಸಂದೇಶವನ್ನು ತಿಳಿಯಪಡಿಸಿತು. ಹಿಂದಿನ ಬಜೆಟ್ಟಿನ ಮೊತ್ತವನ್ನು ಮೀರುವುದು ಇತ್ತೀಚಿನ ಎಲ್ಲಾ ಆಯವ್ಯಯದ ಪ್ರಮುಖ ಲಕ್ಷಣವಾಗಿದೆ. ಅದೇ ರೀತಿ ಸದಾನಂದ ಗೌಡರು ಮಂಡಿಸಿದ 65,455 ಕೋಟಿ ಮೊತ್ತದ ಬಜೆಟ್ 2013-14 ರಲ್ಲಿ ಪವನ್ ಕುಮಾರ್ ಬನ್ಸಾಲರು ಮಂಡಿಸಿದ್ದ (63,363 ಕೋಟಿ) ಆಯವ್ಯಯಕ್ಕಿಂತ ಹೆಚ್ಚಿನದು. ಹಿಂದಿನ ಸರಕಾರಗಳಂತೆ ಅವಶ್ಯ ಸಂಪನ್ಮೂಲಗಳಿರದಿದ್ದರೂ ಘೋಷಣೆಗಳ ರೂಪದ ದಶಕಗಳ ಕಾಲ ಕಾರ್ಯರೂಪಕ್ಕೇ ಬರದ ಯೋಜನೆಗಳನ್ನು ಬಜೆಟ್ಟಿನಲ್ಲಿ ಮಂಡಿಸುವುದಿಲ್ಲ ಎಂಬುದನ್ನು ಹೇಳುತ್ತಲೇ ಅನೇಕ ಘೋಷಣೆಗಳನ್ನು ಮಾಡಲಾಗಿದೆ, ಹಿಂದಿನ ಸರಕಾರಗಳಿಗಿಂತ ಕಡಿಮೆ ಘೋಷಣೆಗಳು ಎಂಬುದಷ್ಟೇ ಸಮಾಧಾನದ ಅಂಶ. ನಿಲ್ದಾಣಗಳಲ್ಲಿ ವೈಫೈ ಸೇವೆ, ಈ ಬಾರಿಯ ಪೂರ್ಣ ಬಜೆಟ್ಟಿನಷ್ಟೇ ವೆಚ್ಚ ಬಯಸುವ ಬುಲೆಟ್ ರೈಲಿನ ಘೋಷಣೆ, ಹೈಸ್ಪೀಡ್ ರೈಲುಗಳು, ಐದು ವರುಷಗಳಲ್ಲಿ ರೈಲ್ವೆ ಇಲಾಖೆಯನ್ನು ಕಾಗದಮುಕ್ತ ಕಛೇರಿಯನ್ನಾಗಿ ಮಾಡುವ ಘೋಷಣೆಗಳು ಈ ಬಾರಿಯ ಬಜೆಟ್ಟಿನ ಪ್ರಮುಖಾಂಶಗಳಂತೆ ಕಂಡರೂ ದಿನನಿತ್ಯ ರೈಲಿನಲ್ಲಿ ಪಯಣಿಸುವ ಜನರ ಆದ್ಯತೆಗಳ ಪಟ್ಟಿಯಲ್ಲಿ ಖಂಡಿತ ಈ ಘೋಷಣೆಗಳು ಬರುವುದಿಲ್ಲ. ನನ್ನ ಪ್ರಕಾರ ಈ ರೈಲ್ವೆ ಬಜೆಟ್ಟಿನಲ್ಲಿನ ಅತಿ ಮುಖ್ಯವಾದ ಅಂಶವೆಂದರೆ ರೈಲು ಮತ್ತು ರೈಲು ನಿಲ್ದಾಣಗಳ ಸ್ವಚ್ಛತೆಗಾಗಿ ಮೀಸಲಿಡುವ ಹಣದಲ್ಲಿ ಶೇಕಡಾ 40ರಷ್ಟು ಹೆಚ್ಚಳ ಮಾಡಿರುವುದು. ಇತ್ತೀಚಿನ ವರುಷಗಳಲ್ಲಿ ರೈಲು ಮುಂಚೆಗಿಂತ ಒಂದಷ್ಟು ದುರ್ವಾಸನೆ ರಹಿತ ಉಸಿರಾಟಕ್ಕೆ ಅನುಕೂಲ ಮಾಡಿಕೊಡುತ್ತಿತ್ತಾದರೂ ಪ್ರಸನ್ನ ಪಯಣ ಎನ್ನುವಷ್ಟು ಸ್ವಚ್ಛವಾಗಿರುತ್ತಿರಲಿಲ್ಲ. ಸ್ವಚ್ಛತೆಗೆ ನೀಡಿದ ಆದ್ಯತೆ ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ಬರಬೇಕಿದೆ. ಜೊತೆಜೊತೆಗೆ ಅನಗತ್ಯವಾಗಿ ಮಲಿನಗೊಳಿಸುವ ಜನರ ಮನಸ್ಥಿತಿಯನ್ನು ಕೂಡ ಸ್ವಚ್ಛಗೊಳಿಸುವ ಕಾರ್ಯ ಜೊತೆಜೊತೆಗೇ ಸಾಗಬೇಕಿದೆ. ಈಗಾಗಲೇ ಪೆಟ್ರೋಲು ದರ ಮಾರುಕಟ್ಟೆಯಾಧಾರಿತವಾಗಿದೆ, ಡೀಸೆಲ್ ದರ ಸಂಪೂರ್ಣ ಸರಕಾರದ ನಿಯಂತ್ರಣದಿಂದ ಹೊರಬಂದಿರದಿದ್ದರೂ ತಿಂಗಳಿಗೊಮ್ಮೆ ಐವತ್ತು ಪೈಸೆಯೋ ಒಂದು ರುಪಾಯಿಯೋ ಹೆಚ್ಚಳವಾಗುತ್ತಿದೆ. ಇನ್ನೊಂದು ವರುಷದಲ್ಲಿ ಡೀಸೆಲ್ ಬೆಲೆ ಕೂಡ ಸರಕಾರದ ನಿಯಂತ್ರಣದಿಂದ ಮುಕ್ತವಾಗುವ ಸಾಧ್ಯತೆಗಳು ದಟ್ಟವಾಗಿದೆ. ತೈಲ ಬೆಲೆ ಏರಿಳಿಕೆಯನುಸಾರ ರೈಲ್ವೆ ಪ್ರಯಾಣ ದರವನ್ನೂ ಕೂಡ ಆರು ತಿಂಗಳಿಗೊಮ್ಮೆ ಪರಿಷ್ಕರಿಸುವ ನಿರ್ಧಾರ ದುಬಾರಿ ಬಸ್ ದರಗಳ ಮಧ್ಯೆ ಜನರ ದಿನನಿತ್ಯದ ಓಡಾಟಕ್ಕೆ ಅನುಕೂಲಕರವಾಗಿದ್ದ ರೈಲನ್ನೂ ಕೂಡ ಖರ್ಚಿನ ಬಾಬ್ತಿಗೆ ಸೇರಿಸುವ ನಿರ್ಧಾರವಾಗಿದೆ. ಸಂಪೂರ್ಣ ವಿದೇಶಿ ಹೂಡಿಕೆಯನ್ನು ಈ ಬಾರಿಯ ಬಜೆಟ್ ಅನುಮೋದಿಸಿಲ್ಲವಾದರೂ ಮುಂದಿನ ದಿನಗಳಲ್ಲಿ ರೈಲ್ವೆಯನ್ನೂ ಕೂಡ ಖಾಸಗಿಗೆ ಮತ್ತು ವಿದೇಶಿ ಬಂಡವಾಳಕ್ಕೆ ಮುಕ್ತವನ್ನಾಗಿ ಮಾಡಬಯಸುವ ರೀತಿಯ ಅನೇಕ ಅಂಶಗಳಿವೆ ಈ ಬಾರಿಯ ಆಯವ್ಯಯದಲ್ಲಿ. ಸದ್ಯಕ್ಕೆ ವಿದೇಶಿ ಹೂಡಿಕೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಮಾತ್ರ ಎಂದು ಆಯವ್ಯಯ ಹೇಳುತ್ತದಾದರೂ ಕೇವಲ ಮೂಲಭೂತ ಸೌಕರ್ಯ ಅಭಿವೃದ್ಧಿಗೋಸ್ಕರ ಯಾವ ವಿದೇಶಿ ಕಂಪನಿಯೂ ಅಧಿಕ ಬಂಡವಾಳ ಹೂಡುವುದಿಲ್ಲ ಎಂಬುದು ಸರಕಾರಕ್ಕೆ ತಿಳಿಯದ ವಿಷಯವೇನಲ್ಲ. ಮುಂದಿನ ದಿನಗಳಲ್ಲಿ ಖಾಸಗಿ ತೆಕ್ಕೆಗೆ ರೈಲ್ವೆಯನ್ನು ಅರ್ಪಿಸುವ ನಿಟ್ಟಿನಲ್ಲಿ ಇವೆಲ್ಲ ಪ್ರಾಥಮಿಕ ಹೆಜ್ಜೆಗಳಷ್ಟೇ.

ಕರ್ನಾಟಕದ ಮಟ್ಟಿಗೆ ರೈಲ್ವೆ ಬಜೆಟ್ ಅನೇಕ ಯೋಜನಗಳನ್ನು ಕೊಟ್ಟಿದೆ. ಅನೇಕ ಹೊಸ ರೈಲುಗಳ ಘೋಷಣೆಯಾಗಿದೆ. ಮಂಗಳೂರಿಗೆ ಹೋಗುವ ಬಹುತೇಕ ರೈಲುಗಳು ಕೇರಳದವರೆಗೂ ವಿಸ್ತರಣೆಗೊಂಡು ಕರ್ನಾಟಕದವರಿಗಿಂತ ಹೊರರಾಜ್ಯದವರಿಗೇ ಅನುಕೂಲಕರವಾಗುತ್ತಿತ್ತು. ಈ ಬಾರಿ ಬಜೆಟ್ಟಿನಲ್ಲಿ ಬೆಂಗಳೂರು – ಮಂಗಳೂರು ಎಕ್ಸ್ ಪ್ರೆಸ್ ರೈಲು ಘೋಷಣೆಯಾಗಿರುವುದು ಅನೇಕ ದಿನಗಳ ಬೇಡಿಕೆ ಈಡೇರಿಸಿದಂತಾಗಿದೆ. ಮಳೆಯಿಂದಾಗಿ, ಕಳಪೆ ಕಾಮಗಾರಿಗಳಿಂದಾಗಿ ಪದೇ ಪದೇ ದುರವಸ್ಥೆಗೊಳಗಾಗುವ ಘಟ್ಟದ ರಸ್ತೆಗಳು ಈ ಹೊಸ ರೈಲಿನಿಂದ ಒಂದಷ್ಟು ಉಸಿರಾಡುವಂತಾಗಬಹುದು. ಬೆಂಗಳೂರು ರಾಮನಗರದ ಮಧ್ಯೆ ರೈಲೊಂದನ್ನು ಘೋಷಿಸಿರುವುದು ಮೈಸೂರು, ಮಂಡ್ಯದಿಂದ ಬೆಂಗಳೂರಿಗೆ ಬರುವ ರೈಲುಗಳ ಪ್ರಯಾಣಿಕ ದಟ್ಟಣೆಯನ್ನು ಕಡಿಮೆಗೊಳಿಸುವುದು. ಧಾರವಾಡ – ದಾಂಡೇಲಿ, ಬೀದರ್ – ಯಶವಂತಪುರ, ಬೆಂಗಳೂರು ಸಬ್ ಅರ್ಬನ್ ರೈಲು, ಮಂಗಳೂರು – ಸುರತ್ಕಲ್ ಜೋಡಿ ಮಾರ್ಗ, ಬೈಯಪ್ಪನಹಳ್ಳಿಯಲ್ಲಿ ರೈಲ್ವೆ ಕೋಚಿಂಗ್ ಸೆಂಟರ್ ಕರ್ನಾಟಕಕ್ಕೆ ಸಿಕ್ಕ ಮತ್ತಷ್ಟು ಯೋಜನೆಗಳು.

ಭಾರತದಲ್ಲಿ ಕೃಷಿಯ ಕ್ಷೇತ್ರಕ್ಕಿಲ್ಲದ, ಕೈಗಾರಿಕಾ ಕ್ಷೇತ್ರಕ್ಕಿಲ್ಲದ ಪ್ರತ್ಯೇಕ ಬಜೆಟ್ ಕೇವಲ ರೈಲ್ವೆ ಇಲಾಖೆಗೆ ಯಾಕೆ? ರೈಲ್ವೆ ಭಾರತದ ಜೀವನಾಡಿ ಎಂಬುದೇ ಇದಕ್ಕೆ ಕಾರಣ. ರೈಲ್ವೆ ಇಲಾಖೆ ಸೇವಾ ಕ್ಷೇತ್ರದಂತೆ ಪರಿಗಣಿಸಲ್ಪಡುತ್ತಿತ್ತೆ ಹೊರತು ಸರಕಾರದ ಆದಾಯದ ಮೂಲದಂತೆ ಪರಿಗಣಿತವಾಗುತ್ತಿರಲಿಲ್ಲ. ನಷ್ಟದಲ್ಲಿ ನಡೆದರೂ ಕಟ್ಟಕಡೆಯ ಮನುಷ್ಯ ಕೂಡ ತನ್ನಲ್ಲಿರುವ ಪುಡಿಗಾಸಿನಿಂದಲೇ ಆರಾಮವಾಗಿ ಸಂಚರಿಸಬೇಕು ಎಂಬ ರೈಲ್ವೆ ಇಲಾಖೆಯ ಮೂಲೋದ್ದೇಶ ಕಾಲಕ್ರಮೇಣ ಮರೆಯಾಗಿ ದುಡ್ಡು ಕೊಡಿ ಸೌಲಭ್ಯ ಪಡೆಯಿರಿ ಎಂಬಲ್ಲಿಗೆ ಬಂದು ನಿಂತಿದೆ. ಭೌತಿಕವಾದ, ಕೊಳ್ಳುಬಾಕುತನ, ಸರಕು ಸಂಸ್ಕೃತಿ ಹೆಚ್ಚುತ್ತಿರುವ ದಿನಗಳಲ್ಲಿ ರೈಲ್ವೆ ಕೂಡ ಸೇವಾ ವ್ಯಾಪ್ತಿಯಿಂದ ವ್ಯಾಪಾರದ ವ್ಯಾಪ್ತಿಗೆ ಬಂದಿರುವುದನ್ನು ಈ ಬಾರಿಯ ಬಜೆಟ್ ಮತ್ತಷ್ಟು ವಿಶದೀಕರಿಸುತ್ತದೆ. ಮುಂದಿನ ದಿನಗಳಲ್ಲಿ ಸರಕಾರದ ನೇತೃತ್ವದಲ್ಲಿರುತ್ತದೋ, ಖಾಸಗಿ ಸಹಭಾಗಿತ್ವದಲ್ಲಿರುತ್ತದೋ ಅಥವಾ ಸಂಪೂರ್ಣ ಖಾಸಗಿ ನಿಯಂತ್ರಣದಲ್ಲಿರುತ್ತದೋ ಒಟ್ಟಿನಲ್ಲಿ ರೈಲ್ವೆ ಇಲಾಖೆ ಕೂಡ ವ್ಯಾಪಾರ ವಹಿವಾಟು ನಡೆಸುವ ಇಲಾಖೆಯಾಗಷ್ಟೇ ಮುಂದಿನ ದಿನಗಳಲ್ಲಿ ಕಾರ್ಯನಿರ್ವಹಿಸುವುದು ಸ್ಪಷ್ಟವಾಗುತ್ತಿದೆ.

ಇನ್ನು ಹಣಕಾಸು ಸಚಿವರಾದ ಅರುಣ್ ಜೇಟ್ಲಿಯವರು ಮಂಡಿಸಿದ ಆಯವ್ಯಯವನ್ನು ಒಂದೇ ಮಾತಿನಲ್ಲಿ ವಿವರಿಸಬೇಕೆಂದರೆ ‘ವಿಶೇಷವೇನಿಲ್ಲ’! “ಕಣ್ಣು ಮುಚ್ಚಿಕೊಂಡು ಆಯವ್ಯಯ ಮಂಡನೆಯನ್ನು ಕೇಳಿದರೆ ಅದು ಚಿದಂಬರಂರವರ ಬಜೆಟ್ಟೋ ಅಥವಾ ಅರುಣ್ ಜೇಟ್ಲಿಯವರ ಬಜೆಟ್ಟೋ ಎಂಬುದು ಗೊತ್ತಾಗುವುದಿಲ್ಲ” ಎಂದು ರಾಜಕೀಯ ಮುಖಂಡರೊಬ್ಬರು ಹೇಳಿರುವುದು ಅಕ್ಷರಶಃ ಸತ್ಯ. ಯಾವ ಯು.ಪಿ.ಎ ಸರಕಾರದ ನೀತಿಗಳನ್ನು ಬಿಜೆಪಿ ವಿರೋಧಿಸುತ್ತಾ ಅಧಿಕಾರಕ್ಕೆ ಬಂತೋ ಅದೇ ನೀತಿಗಳಲ್ಲಿ ಕೆಲವನ್ನು ಯಥಾವತ್ತಾಗಿ ಮತ್ತೆ ಕೆಲವನ್ನು ಕೊಂಚ ಮಾರ್ಪಡಿಸಿ ಬಜೆಟ್ ಮಂಡಿಸಿದೆ. ಅನವಶ್ಯಕ ಜನಪ್ರಿಯ ಯೋಜನೆಗಳ ಘೋಷಣೆಗೆ ಕಡಿವಾಣ ಬಿದ್ದಿದೆಯಾದರೂ ಜನಪರವಾಗಿದೆಯಾ ಎಂದು ನೋಡಿದರೂ ನಿರಾಸೆಯನ್ನೇ ಮೂಡಿಸುತ್ತದೆ. ಈ ಬಾರಿಯ ಬಜೆಟ್ ಪೂರ್ತಿ ವರುಷಕ್ಕಲ್ಲ ಎಂಬುದು ಸತ್ಯವಾದರೂ ನೀತಿ ನಿರೂಪಣೆಯ ವಿಷಯದಲ್ಲಿ ಹಿಂದಿನ ಸರಕಾರಕ್ಕೂ ಈಗಿನ ಸರಕಾರಕ್ಕೂ ಹೆಚ್ಚಿನ ವ್ಯತ್ಯಾಸಗಳೇನೂ ಕಾಣುತ್ತಿಲ್ಲ. ಚಿಲ್ಲರೆ ವ್ಯಾಪಾರದಲ್ಲಿ ಯು.ಪಿ.ಎ ಎಫ್.ಡಿ.ಐಗೆ ರತ್ನಗಂಬಳಿಯ ಸ್ವಾಗತ ಕೋರುವ ನಿರ್ಣಯ ತೆಗೆದುಕೊಂಡಾಗ ಬಿಜೆಪಿ, ಇದು ನಮ್ಮ ದೇಶೀಯತೆಗೆ ಬಂದಿರುವ ದೊಡ್ಡ ಅಪಾಯ ಎಂದು ಗದ್ದಲವೆಬ್ಬಿಸಿತ್ತು. ಆದರೀಗ ಅದೇ ಬಿಜೆಪಿ ನೇತೃತ್ವದ ಸರ್ಕಾರ ಶಸ್ತ್ರಾಸ್ತ್ರ ತಯಾರಿಕೆಗೆ ಎಫ್.ಡಿ.ಐಯನ್ನು ಆಹ್ವಾನಿಸಿದೆ. ಶೇಕಡಾ 49ರವರೆಗೆ ವಿದೇಶಿ ಕಂಪನಿಗಳು ಶಸ್ತ್ರಾಸ್ತ್ರ ತಯ್ಯಾರಿಕೆಯಲ್ಲಿ ತೊಡಗಬಹುದು ಎಂಬ ನಿರ್ಧಾರ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿ ಭಾರತ ಸೈನ್ಯದ ಸಂಪೂರ್ಣ ಶಸ್ತ್ರಾಸ್ತ್ರಗಳು ವಿದೇಶಿ ಕಂಪನಿಗಳ ಮರ್ಜಿಗೆ ಬೀಳುವ ದಿನಗಳು ಬರಬಹುದು. ವಿದೇಶಿ ಕಂಪನಿಗಳು ತಂತ್ರಜ್ಞಾನ ಕೊಟ್ಟರೆ ದೇಶೀಯ ತಂತ್ರಜ್ಞಾನ ಅವಿಷ್ಕಾರಕ್ಕೆ ವಿನಿಯೋಗಿಸುವ ಕೋಟ್ಯಾಂತರ ರುಪಾಯಿಗಳನ್ನು ಉಳಿಸಬಹುದು ಮತ್ತು ಆ ಉಳಿದ ಹಣವನ್ನು ದೇಶದ ‘ಅಭಿವೃದ್ಧಿ’ಗೆ ಉಪಯೋಗಿಸಬಹುದು ಎಂಬ ವಾದಗಳಿವೆಯಾದರೂ ವಿದೇಶದಿಂದ ಆಗಮಿಸಿದ ಮಿಗ್ ವಿಮಾನಗಳ ಸರಣಿ ಅಪಘಾತದಂತಹ ಘಟನೆಗಳು ದೇಶದ ರಕ್ಷಣೆಗೆ ಈ ವಿದೇಶಿ ಬಂಡವಾಳಗಳೇ ಮುಳುವಾಗಿಬಿಡುತ್ತವಾ ಎಂಬ ಅನುಮಾನ ಮೂಡಿಸುತ್ತದೆ. ಇನ್ನು ಇಡೀ ಆಯವ್ಯಯ ಅಪ್ಯಾಯಮಾನವೆನಿಸುವುದು ಭಾರತದ ಮಧ್ಯಮ ವರ್ಗಕ್ಕೆ. ಮಧ್ಯಮ ವರ್ಗ ಬಿಜೆಪಿಯ ವೋಟ್ ಬ್ಯಾಂಕ್ ಎಂದೇ ಜನಜನಿತ. ಮಧ್ಯಮ ವರ್ಗದ ವೋಟ್ ಬ್ಯಾಂಕನ್ನು ಮತ್ತಷ್ಟು ಹೆಚ್ಚಿಸುವುದಕ್ಕೆ ಬೇಕಾದ ಕ್ರಮಗಳಲ್ಲಿ ಕೆಲವನ್ನು ಈ ಬಾರಿಯ ಬಜೆಟ್ಟಿನಲ್ಲಿ ಕಾಣಬಹುದು. ಸಂಬಳಾಧಾರಿತ ಜನರಿಗೆ ತೆರಿಗೆ ವಿನಾಯಿತಿಯನ್ನು ನಿರೀಕ್ಷೆಯಷ್ಟಲ್ಲದಿದ್ದರೂ ಒಂದಷ್ಟಾದರೂ ಹೆಚ್ಚಿಸಿರುವುದು, ಉಳಿತಾಯ ಯೋಜನೆಗಳಲ್ಲಿ ಮತ್ತಷ್ಟು ಹಣ ಉಳಿಸುವಂತೆ ಪ್ರೇರೇಪಿಸುವುದು ಮುಖ್ಯವಾದುದು. ಉದ್ಯೋಗ ಹೆಚ್ಚಳದ ಬಗ್ಗೆ ಮಾತನಾಡುತ್ತಲೇ ಬಂದಿದ್ದ ಬಿಜೆಪಿ ಅದಕ್ಕೆ ಸಂಬಂಧಪಟ್ಟಂತೆ ಉತ್ತಮವೆನ್ನಿಸುವ ನಿರ್ಣಯಗಳನ್ನೇನೂ ತೆಗೆದುಕೊಂಡಿಲ್ಲ. ಐದು ವರುಷದ ಆಡಳಿತವಿದೆ, ಒಂದೇ ವರ್ಷದಲ್ಲಿ ಎಲ್ಲವನ್ನೂ ಮಾಡುವುದು ಸಾಧ್ಯವೂ ಅಲ್ಲ, ಸಾಧುವೂ ಅಲ್ಲ. ಅರುಣ್ ಜೇಟ್ಲಿಯವರೂ ಕೂಡ ಇದನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದರೆ ಆಯವ್ಯಯ ಮಂಡಿಸುವ ಸಮಯವೂ ಉಳಿಯುತ್ತಿತ್ತು, ಬಜೆಟ್ಟಿನಲ್ಲಿ ಘೋಷಿಸಿದ ಸಂಗತಿಗಳು ಕಾರ್ಯರೂಪಕ್ಕೂ ಬರುತ್ತಿತ್ತು. ಆದರೆ ಎಲ್ಲ ಕ್ಷೇತ್ರಗಳ, ಎಲ್ಲ ವರ್ಗಗಳ ಜನರ ಕ್ಷೇಮದ ಬಗೆಗೂ ನಮಗೆ ಕಾಳಜಿಯಿದೆ ಎಂದು ನಿರೂಪಿಸಬೇಕಾದ ದಾವಂತದಲ್ಲಿ ಎಲ್ಲ ರೀತಿಯ ‘ಅಭಿವೃದ್ಧಿ’ಯ ಮಾತನಾಡಿ ಎಲ್ಲದಕ್ಕೂ ಇಷ್ಟಿಷ್ಟು ಎಂದು ಚಿಲ್ಲರೆ ಎಂದೇ ಹೇಳಬಹುದಾದ ಹಣವನ್ನು ಮೀಸಲಿರಿಸಿರುವುದು ಬುದ್ಧಿವಂತ ನಡೆಯೇನಲ್ಲ. ವನಬಂಧು ಕಲ್ಯಾಣ ಯೋಜನೆ, ಭೇಟಿ ಬಚಾವೋ ಭೇಟಿ ಪಡಾವೋ ಮತ್ತು ಇನ್ನೂ ಇಪ್ಪತ್ತೆಂಟಕ್ಕೂ ಅಧಿಕ ಯೋಜನೆಗಳನ್ನು ಘೋಷಿಸಿ ಅವೆಲ್ಲವಕ್ಕೂ ತಲಾ ನೂರು ನೂರು ಕೋಟಿ ಮೀಸಲಿರಿಸಿರುವುದು ಒಂದಷ್ಟು ದಿಡೀರ್ ಜನಪ್ರಿಯತೆ ಪಡೆಯುವ ಅತ್ಯಾತುರವೇ ಹೊರತು ದೂರದೃಷ್ಟಿಯದ್ದಲ್ಲ.

ಕೊನೆಗೆ ಜನಸಾಮಾನ್ಯರಿಗೆ ಬಜೆಟ್ಟಿನ ಒಳಹರಿವು, ಹೊರಹರಿವು, ವಿತ್ತೀಯ ಕೊರತೆ, ಜಿ.ಡಿ.ಪಿ ಇತ್ಯಾದಿ ಇತ್ಯಾದಿ ಅರ್ಥಶಾಸ್ತ್ರ ವ್ಯಾಖ್ಯಾನಗಳಿಗಿಂತ ಯಾವುದರ ದರ ಹೆಚ್ಚಿತು, ಯಾವುದರ ದರ ಇಳಿಯಿತು ಎಂಬುದಷ್ಟೇ ಮುಖ್ಯವಾಗುತ್ತದೆ. ಮೊದಲ ಆಯವ್ಯಯವಾಗಿರುವುದಕ್ಕೋ ಏನೊ ತೆರಿಗೆ ದರಗಳಲ್ಲಿ ಹೆಚ್ಚಿನ ವ್ಯತ್ಯಾಸಗಳೇನಾಗಿಲ್ಲ. ಏರುತ್ತಿರುವ ಆಹಾರವಸ್ತುಗಳ ಬೆಲೆಗಳನ್ನು ಇಳಿಸುವ ಯಾವ ಮಹತ್ವದ ಪ್ರಸ್ತಾಪವೂ ಇಲ್ಲ. ಆರ್ಥಿಕ ಜಾಗತೀಕರಣದ ನವಯುಗದಲ್ಲಿ ಅಭಿವೃದ್ಧಿ ಅಪಾರ್ಥಕ್ಕೀಡಾಗಿ ಸಮಾಜದ ಪಥವೇ ದಿಕ್ಕುತಪ್ಪಿರುವಾಗ ಆಹಾರಧಾನ್ಯಗಳ ಬೆಲೆಗಳನ್ನು ರಫ್ತು-ಆಮದನ್ನು ನಿಯಂತ್ರಿಸುವ ಮೂಲಕ, ಕಾಳಸಂತೆಯನ್ನು ತಡೆಯಿರಿ ಎಂದಬ್ಬರಿಸುವ ಮೂಲಕ ನಿಯಂತ್ರಿಸಲಾದೀತೆ? ವರುಷಗಳ ಹಿಂದೆ ಅಂದಿನ ಹಣಕಾಸು ಸಚಿವರಾಗಿದ್ದ ಚಿದಂಬರಂ ಹೇಳಿದ್ದರು ‘ನಗರೀಕರಣವೇ ನಮ್ಮ ಗುರಿ’ ಎಂದು. ಇಂದಿನ ಹಣಕಾಸು ಸಚಿವರೂ ಸಹ ನೂರು ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಆದ್ಯತೆ ಕೊಡುವುದಾಗಿ ಹೇಳುತ್ತಾ ಏಳು ಸಾವಿರ ಕೋಟಿ ರುಪಾಯಿ ಮೀಸಲಿರಿಸಿದ್ದಾರೆ. ನಗರೀಕರಣಕ್ಕೆ, ಬೃಹತ್ ರಸ್ತೆಗಳಿಗೆ ಇರುವ ಕೃಷಿ ಭೂಮಿಯನ್ನು ಆಕ್ರಮಿಸಿಕೊಳ್ಳುತ್ತಾ ಸಾಗಿದರೆ ಅತ್ಯಗತ್ಯ ದಿನನಿತ್ಯ ಬೇಕಾಗುವ ಆಹಾರಧಾನ್ಯ, ತರಕಾರಿಗಳ ಬೆಲೆ ಕಡಿಮೆಯಾಗುವುದಾದರೂ ಹೇಗೆ? ಸರಕಾರವನ್ನು ನಡೆಸುವ ಪಕ್ಷಗಳು ಬದಲಾದರೂ ರೀತಿ ರಿವಾಜುಗಳು ಬದಲಾಗದು ಎಂಬುದಕ್ಕೂ ಅರುಣ್ ಜೇಟ್ಲಿಯವರ ಆಯವ್ಯಯ ಅನೇಕ ಉದಾಹರಣೆಗಳು ಸಿಗುತ್ತವೆ. ಕಾಂಗ್ರೆಸ್ ತನ್ನ ಸರಕಾರದ ಆಡಳಿತಾವಧಿಯಲ್ಲಿ ರೂಪಿಸಿದ ಅನೇಕ ಯೋಜನೆಗಳಿಗೆ ತನ್ನದೇ ಪಕ್ಷದ ನೆಹರೂ, ರಾಜೀವ್, ಇಂದಿರಾ ಹೆಸರುಗಳನ್ನೇ ಬಳಸಿ ಕುಟುಂಬ ನಿಷ್ಠೆ ಪ್ರದರ್ಶಿಸಿದರೆ ಬಿಜೆಪಿ ಮೊದಲ ಆಡಳಿತಾವಧಿಯಲ್ಲಿ ವಾಜಪೇಯಿಯ ಹೆಸರನ್ನು ಬಳಸಿದ್ದರೆ ಈ ಬಾರಿ ಅನೇಕ ಯೋಜನೆಗಳಿಗೆ ಆರೆಸ್ಸೆಸ್ ಮನಸ್ಥಿತಿಯ ನಾಯಕರ ಹೆಸರನ್ನು, ಸರ್ದಾರ್ ವಲ್ಲಭಭಾಯಿ ಪಟೇಲರ ಹೆಸರನ್ನು ಬಳಸಿದೆ. ಅಲ್ಲಿಗೆ ಪ್ರತಿಯೊಂದು ಪಕ್ಷವೂ ತನ್ನ ವೋಟ್ ಬ್ಯಾಂಕನ್ನು ಗಟ್ಟಿಗೊಳಿಸಬಹುದಾದ ಹಾದಿಯನ್ನು ಹುಡುಕಿಕೊಳ್ಳುತ್ತದೆ. ಪ್ರತಿಮೆಗಳ ಅವಶ್ಯಕತೆಯಿದೆಯೇ ಎಂಬ ಚರ್ಚೆಗಳು ನಡೆಯಬೇಕಾದ ದಿನಗಳಲ್ಲಿ ಪ್ರಪಂಚದ ಅತಿ ಎತ್ತರದ ಪ್ರತಿಮೆಯನ್ನು ಗುಜರಾಜಿನಲ್ಲಿ ನಿರ್ಮಿಸಲುದ್ದೇಶಿಸುತ್ತಿದೆ. ರಾಜಕೀಯ ಕಾರಣದ ಪ್ರತಿಮೆಗೆ ಈ ಬಾರಿ ವಸ್ತುವಾಗಿರುವುದು ಸರ್ದಾರ್ ವಲ್ಲಭಬಾಯಿ ಪಟೇಲ್. ರಾಷ್ಟ್ರೀಯ ಐಕ್ಯತೆಯ ಹೆಸರಿನಲ್ಲಿ ನಿರ್ಮಿಸಬೇಕೆಂದಿರುವ ಈ ಪ್ರತಿಮೆಗೆ ತಗುಲುವ ಅಂದಾಜು ವೆಚ್ಚ 2500 ಕೋಟಿ! ಈ ಬಾರಿಯ ಆಯವ್ಯಯದಲ್ಲಿ 200 ಕೋಟಿ ತೆಗೆದಿರಿಸಲಾಗಿದೆ! ಅಲ್ಲಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಾಗಲು ಸರ್ವ ರೀತಿಯಲ್ಲೂ ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗುತ್ತದೆಯಲ್ಲವೇ?
(ಪ್ರಜಾಸಮರಕ್ಕೆ ಬರೆದ ಲೇಖನ) 

image source - toi

8 comments:

  1. It has been hardly a quarter fter the BJP govt has formed the govt, and still BJP lacks majority in Rajya Sabha.. this is not the right time to judge the performance atleast 8-10 months of breathing period is required after which the performance has to be judge.
    This article is publishes one sided view.

    ReplyDelete
    Replies
    1. ofcourse its wrong to judge them completely but still with all those heavenly promises during the elections one expects atleast few major positive steps in the first budget.
      Anyways lets hope for the best in future :-)
      and avoid commenting anonymously !

      Delete
  2. There is nothing wrong to comment anonymously.
    Here are a few points that author has missed out to mention
    1. increase of tax rebate under 80C, to improve the savings and fund the projects.
    2. Increase in tax cap.
    Also i would like to question the author on the FDI policy.
    India is surrounded by China and Pakistan who are aggressive on claiming our land, in that case, what is wrong in purchasing the world class arms and ammunition doesn't it help in the bilateral relations too... today China is providing arms for Pakistan should we blindly sit believing that our DRDO will produce the world class arms.. even if it produces do we have infrastructure to safe guard the complete border line in the given time?
    There is current account deficit, so this budget is aiming to resolve this on priority.
    There is nothing wrong to expect more but in current situation one should focus on reviving the economy.. world economic growth is decreasing world wide, there are reports of layoffs in some sectors, in such a situation this move of the govt should be appreciated.
    Regarding development, development doesn't mean mere constructing roads by grabbing the land. But instead encourage the production levels in farming. As per Modi's vision Green color in our flag has been equated to the revolution in agriculture sector and a revolution will not happen in one day..or by passing just a bill.



    ReplyDelete
    Replies
    1. I have mentioned about tax cap increase and tax rebate.
      and regarding FDI in defence as i have mentioned in the article itself i am not very sure whether it is helpful or harmful. Your points regarding that really makes sense but still i have many doubts regarding that!
      with regards,
      Dr Ashok K R

      Delete
  3. can you mention those doubts we can have a healthy discussion on that..

    ReplyDelete
  4. In a post ideological world it is not right to oppose FDI just because it has 'foreign' in it. The debate wheather we need FDI or FII has met its death and there is more or less universal conclusion that there is no gain in closing the economy. Especially india, with its lambodara-esque energy hunger and its dependence on its import puts it in a strategic back foot, making it more dependant on forex reserves, which by and large is satisfied by FDI and FII. The more prudent option ofearning forex would be increasing exports, which in my opinion is very difficult given the low quality of entrepreneurship existing in our creative minds. So i think the case is settled for atleast some decades to come that we will be needing FDI atleast for the foreign exchange it earns, if not for any other technological reasons.

    But the question remains on the source and stability offoreign capital. Both risks - that of source and stability- remain very high in the FII . We have oten witnessed extreme volatality in this component of foreign capital, which is disasterous for the local economy.

    ReplyDelete
  5. Experts have very rightly been sceptical about the high volume of FII originating frm tax havens like mauitius caymen island etc. Participatory notes is also not completely taint-free.
    So we can only breathe easy if these critical questions are addresses about FII.

    In FDI, which is the more stabler among the twins, the concerns arent any less grave. The regulatory environment needs to be strenghthened. Anti competitive laws needs to be made more state of the art. The FDI clearance procedure should be made transparent so that no doubts remain among people.

    Thankfully many steps have been taken in this direction.

    But the issue of corporate and public corruption has consistently eclipsed these positive steps. Hope the new government which is headed by a honest prime minister(well, to be fair even the previous goverment was also headed by a honest pm) brings us achhe din.

    ReplyDelete
  6. I agree with what Mr kejriwal said about the simillarity between the upa budget and nda budget. But there is one critical difference, that of political stability. Political stability may also lead to complacency and deviation from the goal, but optimistically speaking we also can expect robust decision making process backed by political will.

    Since we are talking about economics, there is one lacunae that should not be missed. Financial inclusion, meaning access to financial services to every one. Modi is known for his innovatiln strategies and he may just be the right person to achieve the targets set by Nachiket mor committee. Financial inclusion will go a long way in increasing the effeciency of government's social sector initiatives.

    One noteworthy aspect of the language used by the new govt, is its stress on improving centre state relations. The pm who himself was a chief minister of a state and knows the importance of giving woightage to states words in forums like National development council. This may act as a catalyst in forcing the state governments to give more voice to the third tier of government which is panchayat raj institutions. Hence resulting in decentralization. In a decentralized structure the famed trickle down theory will find its perfect laboratory.

    ReplyDelete