Mar 8, 2014

ಮಹಿಳಾ ಸಮಾನತೆಯಿಂದ ಸರ್ವಾಂಗೀಣ ಅಭಿವೃದ್ಧಿ



ಡಾ ಅಶೋಕ್ ಕೆ. ಆರ್

ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾ ದಿನ. ಮಹಿಳೆಯರ ಬಗೆಗಿನ ಚರ್ಚೆಗಳು, ಮಹಿಳಾ ವಾದ, ಮಹಿಳಾ ಸಮಾನತೆಯ ಬಗ್ಗೆ ರಾಜಕಾರಣಿಗಳ ಅದೇ ಹಳೆಯ ಪುನರಾವರ್ತಿತ ಒಣ ಭಾಷಣಗಳನ್ನು ಕೇಳುವ ಸಮಯ. ಜೊತೆಯಲ್ಲಿಯೇ ಮಹಿಳಾವಾದವನ್ನು ತಪ್ಪಾಗಿ ಅರ್ಥೈಸಿಕೊಂಡು ಆ ತಪ್ಪು ಅರ್ಥೈಸುವಿಕೆಯನ್ನೇ ಜೋರು ದನಿಯಲ್ಲಿ ಹೇಳುವ ಮಹಿಳಾವಾದಿಗಳ ಮಾತನ್ನು ಕೇಳುವ, ಓದುವ ಸಮಯವಿದು. ಹೇಗೆ ಜಾತ್ಯತೀತ, ಸೆಕ್ಯುಲರ್, ದೇಶಪ್ರೇಮ, ಧಾರ್ಮಿಕ ವ್ಯಕ್ತಿ ಎಂಬ ಪದಗಳು ಅದನ್ನು ಉಪಯೋಗಿಸುವವರ, ಅದನ್ನು ಆಚರಿಸುತ್ತೇವೆಂದು ಹೇಳಿಕೊಳ್ಳುವ ಜನರ ಆಷಾಡಿಭೂತತನದಿಂದ ಅಪಭ್ರಂಶಗೊಂಡಿದೆಯೋ ಫೆಮಿನಿಷ್ಟ್ ಪದ ಕೂಡ ಅದೇ ಹಾದಿಯಲ್ಲಿದೆ. ಮಹಿಳಾವಾದವೆಂದರೆ ಪುರುಷ ವಿರೋಧವಷ್ಟೇ ಎಂಬ ಭಾವನೆಯಲ್ಲಿರುವವರು “ಸಮಾನತೆಗಾಗಿ ಮಹಿಳೆಯರ ಹೋರಾಟದ ಹಾದಿ ಒಬ್ಬ ಮಹಿಳಾವಾದಿ ಅಥವಾ ಒಂದು ಸಂಘಟನೆಯಿಂದ ರೂಪುಗೊಂಡಿದ್ದಲ್ಲ, ಮಾನವ ಹಕ್ಕುಗಳಿಗಾಗಿ ಹೋರಾಡುವ ಪ್ರತಿಯೊಬ್ಬನ ಶ್ರಮವೂ ಇದರ ಹಿಂದಿದೆ” ಎಂದು ಹೇಳಿದ ಗ್ಲೋರಿಯಾ ಸ್ಟೀನೆಮ್ ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

 ಅಂತರಾಷ್ಟ್ರೀಯ ಮಹಿಳಾ ದಿನಕ್ಕೆ ನೂರು ವರುಷಗಳಿಗೂ ಹೆಚ್ಚಿನ ಇತಿಹಾಸವಿದೆ. ಪಶ್ಚಿಮ ರಾಷ್ಟ್ರಗಳಲ್ಲಿ, ರಷ್ಯ ಸುತ್ತಮುತ್ತಲಿನ ದೇಶಗಳಲ್ಲಿ ಉದ್ಯೋಗಸ್ಥ ಮಹಿಳೆಯರು ತಮ್ಮ ವೇತನ ಹೆಚ್ಚಳಕ್ಕಾಗಿ, ಕೆಲಸದ ಅವಧಿಯನ್ನು ಕಡಿತಗೊಳಿಸುವುದಕ್ಕಾಗಿ ಮತ್ತು ಅತಿ ಮುಖ್ಯವಾಗಿ ಚುನಾವಣೆಗಳಲ್ಲಿ ಮತದಾನದ ಹಕ್ಕು ಪಡೆಯುವುದಕ್ಕಾಗಿ ಆರಂಭಿಸಿದ ಹೋರಾಟವಿದು. ಮಾರ್ಚ್ ಎಂಟು ಕೇವಲ ಸಾಂಕೇತಿಕವಷ್ಟೇ. ಮೊದಲ ಹಲವು ವರುಷಗಳ ಹೋರಾಟ ವರುಷದ ಇತರೆ ದಿನಗಳಲ್ಲೂ ನಡೆಯುತ್ತಿತ್ತು. ಮಹಿಳಾ ದಿನವೆಂಬ ಕಲ್ಪನೆ ಇರದಿದ್ದ ದಿನಗಳವು. ತಮ್ಮ ಹಕ್ಕುಗಳಿಗಾಗಿ ಸರಕಾರಗಳ ವಿರುದ್ಧ, ಪುರುಷ ಕೇಂದ್ರಿತ ಸಮಾಜದ ವಿರುದ್ಧ ಸಿಡಿದೆದ್ದ ಮಹಿಳೆಯರವರು. ಅಂತರಾಷ್ಟ್ರೀಯ ಮಹಿಳಾ ದಿನವೆಂಬುದು 1910ರ ಸುಮಾರಿನಲ್ಲಿ ಗುರುತಿಸಲಾಯಿತಾದರೂ ಒಂದೊಂದು ದೇಶದಲ್ಲಿ ತಮಗನುಕೂಲಕರವಾದ ದಿನವನ್ನು ಪರಿಗಣಿಸಲಾಗುತ್ತಿತ್ತು. 1914ರಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಮಾರ್ಚ್ ಎಂಟರಂದು ಆಯೋಜಿಸಲಾಗಿತ್ತು. ಕಾರಣ ಮಾರ್ಚ ಎಂಟು ಭಾನುವಾರವಾಗಿತ್ತು! ಮುಂದೆ ಮಾರ್ಚ್ ಎಂಟನ್ನೇ ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ ಪರಿಗಣಿಸಲಾಯಿತು. ಎಲ್ಲ ದಿನಗಳಂತೆ ಮಹಿಳಾ ದಿನವೆಂಬುದು ಕೂಡ ಈಗ ಕೇವಲ ಸಾಂಕೇತಿಕವಾಗಿಯಷ್ಟೇ ಉಳಿದುಹೋಗುತ್ತಿರುವ, ‘ಆಚರಣೆ’ಯ ನೆಪದಲ್ಲಿ ಮಹಿಳಾ ಲೋಕ ಆಧುನಿಕತೆಯ ಭರಾಟೆಯಲ್ಲಿ, ಬಂಡವಾಳಶಾಹಿ ಜಾಗತೀಕರಣದ ದಿನಗಳಲ್ಲಿ ಅನುಭವಿಸುತ್ತಿರುವ ನೂತನ ಹಿಂಸಾ ಮಾರ್ಗದ ಬಗೆಗಿನ ಚರ್ಚೆಗಳು ಮರೆಯಾಗಿಹೋಗುತ್ತಿವೆ. ಪ್ರತಿ ವರುಷವೂ ಯುನೈಟೆಡ್ ನೇಷನ್ಸ್ ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಒಂದು ಘೋಷವಾಕ್ಯವನ್ನು ನೀಡುತ್ತದೆ. ಈ ಬಾರಿಯದು – “ಮಹಿಳಾ ಸಮಾನತೆಯಿಂದ ಸರ್ವಾಂಗೀಣ ಅಭಿವೃದ್ಧಿ”.

 ಜಗದೀಶ್ ಕೊಪ್ಪ ಕನ್ನಡಕ್ಕೆ ತಂದಿರುವ ವಾರಿಸ್ ಡೆರಿಸ್ ಎಂಬ ರೂಪದರ್ಶಿಯ ಆತ್ಮಕಥೆಯನ್ನು ಓದುತ್ತಿದ್ದೆ. ಸೋಮಾಲಿಯಾದ ಬುಡಕಟ್ಟು ಜನಾಂಗದಲ್ಲಿ ಹುಟ್ಟಿದ ವಾರಿಸ್ ಮದುವೆಯಿಂದ ತಪ್ಪಿಸಿಕೊಳ್ಳುವ ಕಾರಣದಿಂದ ತನ್ನವರನ್ನು ತೊರೆದು ನಗರ ಸೇರಿ ನಂತರ ಲಂಡನ್ ನಗರಿ ಸೇರಿ ರೂಪದರ್ಶಿಯಾಗುವ ಕಥೆಯದು. ಸೋಮಾಲಿಯ ಬುಡಕಟ್ಟು ಜನಾಂಗದಲ್ಲಿ ಆಚರಣೆಯಲ್ಲಿದ್ದ ಒಂದು ಹೀನ ರೀತಿಯ ಆಚರಣೆಯ ವಿವರಣೆಯಿದೆ ಅದರಲ್ಲಿ. ಹೆಣ್ಣು ಮಕ್ಕಳ ಗುಪ್ತಾಂಗ ವಿಚ್ಛೇಧನ ಕ್ರಿಯೆ ನಡೆಸಲಾಗುತ್ತದೆ. ಯೋನಿ ಮತ್ತು ಗರ್ಭಕೋಶದ ಕೆಲವು ಭಾಗಗಳನ್ನು ಬ್ಲೇಡಿನಿಂದಲೋ ಚಾಕುವಿನಿಂದಲೋ ಕ್ರೂರ ಪದ್ಧತಿಯಿಂದ ಕತ್ತರಿಸುವ ಪದ್ಧತಿಗೆ ಅಲ್ಲನ ಸಮಾಜ ಧಾರ್ಮಿಕ ಚೌಕಟ್ಟನ್ನು ನೀಡಿ ಶತಮಾನಗಳಿಂದ ಆ ಪದ್ಧತಿ ಆಚರಣೆಯಲ್ಲಿರುವಂತೆ ನೋಡಿಕೊಳ್ಳುತ್ತದೆ. ಯಾವ ಧರ್ಮಗೃಂಥದಲ್ಲೂ ಇಲ್ಲದ ಆ ಆಚರಣೆ ಪುರುಷ ಸಮಾಜದ ವಿಕೃತ ಮನಸ್ಸು ಮತ್ತು ಮದುವೆಯಾಗುವ ಹುಡುಗಿ ದೈಹಿಕವಾಗಿ ‘ಪವಿತ್ರ’ವಾಗಿರಬೇಕೆಂಬ ಮನಸ್ಥಿತಿ ಕಾರಣವಷ್ಟೇ. ಬುಡಕಟ್ಟು ಜನಾಂಗದ ಹೀನ ಆಚರಣೆಯಿದು ಎಂದು ನಿರ್ಲಕ್ಷಿಸುವ ಹಾಗೂ ಇಲ್ಲ. ಹೆಚ್ಚು ಕಡಿಮೆ ಎಲ್ಲ ಮತಗಳಲ್ಲೂ ಧಾರ್ಮಿಕತೆಯ ಹೆಸರಿನಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ಮಹಿಳೆಯ ಮೇಲೆ ನಡೆಯುವ ದೈಹಿಕ – ಮಾನಸಿಕ ಹಿಂಸೆಗಳು ಒಂದಲ್ಲ ಒಂದು ರೂಪದಲ್ಲಿ ಆಚರಣೆಯಲ್ಲಿದ್ದೇ ಇದೆ.  ಸರ್ವ ವಿಷಯಗಳಲ್ಲೂ ಲಂಪಟನಾಗಿರುವ ಪುರುಷ ಕೂಡ ಮಹಿಳೆ ಆಚರಣೆಯಲ್ಲಿರುವ ಎಲ್ಲ ರೀತಿಯ ಧಾರ್ಮಿಕ ನಂಬಿಕೆ – ಅಪನಂಬಿಕೆ – ಮೂಢನಂಬಿಕೆಗಳೆಲ್ಲವನ್ನೂ ಪಾಲಿಸಬೇಕೆಂದು ಬಯಸುತ್ತಾನೆ!

ಮಹಿಳೆಯನ್ನು ‘ಸರಕಿ’ನ ರೂಪದಲ್ಲಿ ಕಾಣುವುದು ಕೂಡ ಐತಿಹಾಸಿಕವೇ. ಆಧುನೀಕರಣದ ಭರಾಟೆಯಲ್ಲಿ ಬಂಡವಾಳಶಾಹಿ ಜಾಗತೀಕರಣದ ದಿನಗಳಲ್ಲಿ ಪ್ರತಿಯೊಂದು ‘ಸರಕಿ’ನ ರೂಪದಲ್ಲೇ ಕಾಣುವಂತೆ ಬಿಂಬಿಸಲಾಗುತ್ತದೆ. ಮಹಿಳೆ ಕೂಡ ಬಂಡವಾಳಶಾಹಿ ಜಾಗತೀಕರಣಕ್ಕೆ ಒಂದು ‘ಸರಕು’. ತಾನುತ್ಪಾದಿಸುವ ‘ಸರಕು’ಗಳನ್ನು ಮಾರಲು ಮಹಿಳೆಯನ್ನು ‘ಸರಕಾ’ಗಿಸುವ ಜಾಣ್ಮೆ ಈ ಬಂಡವಾಳಶಾಹಿ ಜಾಗತೀಕರಣಕ್ಕಿದೆ. ಡಿಯೋಡ್ರೆಂಟ್ ಬಳಿದುಕೊಂಡ ಗಂಡಸಿನ ಹಿಂದೆ, ಬೈಕೋ ಕಾರೋ ಖರೀದಿಸಿದ ಗಂಡಸಿನ ಹಿಂದೆ ‘ಓಡುವ’ ಕೆಲಸ ಹೆಂಗಸಿನದು! ಈ ರೀತಿಯ ತುಚ್ಛೀಕರಣದ ಅನೇಕ ಜಾಹೀರಾತುಗಳಿದ್ದರೂ ಮಹಿಳೆಯರನ್ನು ಈ ರೀತಿಯಾಗಿ ಬಿಂಬಿಸುವ ‘ಉಪಯೋಗಿಸುವ’ ವಿಧಾನಗಳ ಬಗ್ಗೆ ಮಹಿಳಾವಾದಿಗಳು ವಿರೋಧ ವ್ಯಕ್ತಪಡಿಸಿದ್ದು ಕಡಿಮೆಯೇ ಎನ್ನಬೇಕು. ಇನ್ನು ಬಹುತೇಕ ಚಲನಚಿತ್ರಗಳಲ್ಲಿ ಮಹಿಳೆಯೆಂದರೆ ನಾಯಕನ ಕುಣಿತಕ್ಕೆ ಹೆಜ್ಜೆ ಹಾಕುವ ಮೈಸಿರಿ ಪ್ರದರ್ಶಿಸಿ ಒಂದಷ್ಟು ಜನರನ್ನು ಚಿತ್ರ ನೋಡುವಂತೆ ಮಾಡುವ ‘ಸರಕು’. ವಾಹಿನಿಗಳ ಹೆಚ್ಚಳದಿಂದ ಮೆಗಾ ಧಾರವಾಹಿಗಳ ಸಂಖೈಯೂ ಹೆಚ್ಚುತ್ತಿದೆ. ಮಹಿಳೆಯರೇ ಹೆಚ್ಚು ನೋಡುವ ಈ ಧಾರವಾಹಿಗಳಲ್ಲಿ ಮಹಿಳೆಯನ್ನು ಚಿತ್ರಿಸುವ ರೀತಿಯಂತೂ ಅಸಹ್ಯ ಹುಟ್ಟಿಸುತ್ತದೆ. ಒಂದೋ ಎಲ್ಲರನ್ನೂ ನಂಬಿಬಿಡುವ ಪೆದ್ದುತನವನ್ನು ಮಹಿಳೆಗೆ ಆರೋಪಿಸಲಾಗುತ್ತದೆ, ಇಲ್ಲವಾದರೆ ಮನೆ ಸದಸ್ಯರ ನಡುವೆ ವೈಷಮ್ಯವನ್ನೆಚ್ಚಿಸುವ ಮಾರ್ಗಗಳನ್ನು ಯೋಚಿಸುತ್ತಲೇ ದಿನಕಳೆಯುವ ದುಷ್ಟೆಯಾಗಿರುತ್ತಾಳೆ! ವಿಪರ್ಯಾಸವೆಂದರೆ ಮಹಿಳೆಯರು ಈ ಧಾರವಾಹಿಗಳನ್ನು ತಿರಸ್ಕರಿಸದೆ ಅವುಗಳನ್ನೇ ವೀಕ್ಷಿಸುತ್ತ ಟಿ.ಆರ್.ಪಿ ಹೆಚ್ಚಿಸುತ್ತ ಮತ್ತಷ್ಟು ಅಂತಹುದೇ ಧಾರವಾಹಿಗಳು ಪ್ರಾರಂಭವಾಗುವುದಕ್ಕೆ ಪ್ರೋತ್ಸಾಹ ನೀಡುತ್ತಿರುವುದು.

ಸಾಮಾಜಿಕವಾಗಿ ಮಹಿಳೆ ಹಿಂದೆಂದಿಗಿಂತಲೂ ಹೆಚ್ಚೆಚ್ಚು ಸಂಖೈಯಲ್ಲಿ ಶಾಲಾ ಕಾಲೇಜು ಮೆಟ್ಟಿಲತ್ತುತ್ತಿದ್ದಾಳೆ. ಮಧ್ಯದಲ್ಲೇ ಶಿಕ್ಷಣ ತೊರೆದು ಹೋಗುವವರ ಸಂಖೈಯೂ ಕಡಿಮೆಯಿಲ್ಲವಾದರೂ ಕಾಲಕ್ರಮೇಣ ನಿಧಾನವಾಗಿಯಾದರೂ ಮಹಿಳೆಯರ ಶಿಕ್ಷಣದ ಪ್ರಮಾಣ ಹೆಚ್ಚುತ್ತಿದೆ. ಡಿಗ್ರಿ ಮುಗಿಸಿ ಕೆಲಸಕ್ಕೆ ಹೋಗುವವರ ಹೆಚ್ಚುತ್ತಿದ್ದಾರೆ. ಉನ್ನತ ಸ್ಥಾನಗಳಲ್ಲಿ ಮಹಿಳೆಯರ ಪ್ರಮಾಣ ಇನ್ನೂ ಕಡಿಮೆಯಿದೆಯಾದರೂ ಮುಂದಿನ ದಿನಗಳಲ್ಲಿ ಅದೂ ಸಾಧ್ಯವಾಗುವುದು. ಕೆಲಸ, ಮನೆ ನಿರ್ವಹಣೆಗಳೆಲ್ಲದರಲ್ಲೂ ಮಹಿಳೆ ಮುನ್ನಡೆಯುತ್ತಿದ್ದಾಳಾದರೂ ಭಾರತದ ರಾಜಕೀಯದ ಕ್ಷೇತ್ರದಲ್ಲಿ ಮಹಿಳೆಯ ಛಾಪು ಅಷ್ಟಾಗಿ ಕಂಡುಬರುವುದಿಲ್ಲ. ಒಂದು ಕಾಲದಲ್ಲಿ ‘ಭಾರತಕ್ಕೊಬ್ಬನೇ ಗಂಡಸು – ಇಂದಿರಾ ಗಾಂಧಿ’ (ಮತ್ತೆ ಮಹಿಳೆಯನ್ನು ಗಂಡಸಿಗೆ ಹೋಲಿಸುವ ಚಾಳಿ!) ಎಂದು ಹೊಗಳಿಸಿಕೊಂಡ ಇಂದಿರಾ ಗಾಂಧಿ ಭಾರತದ ಪ್ರಧಾನ ಮಂತ್ರಿಯಾಗಿ ಅನೇಕ ವರುಷಗಳು ಆಡಳಿತ ನಡೆಸಿದರೂ ಭಾರತದ ರಾಜಕಾರಣದಲ್ಲಿ ಮಹಿಳೆಯರ ಪ್ರಭಾವ ಕಡಿಮೆಯೇ. ಮುಖ್ಯಮಂತ್ರಿ, ಪ್ರಧಾನ ಮಂತ್ರಿಯ ಸ್ಥಾನದಲ್ಲಿ ಅನೇಕ ಮಹಿಳೆಯರು ಆಡಳಿತ ನಡೆಸಿದರೂ ಒಟ್ಟಾರೆ ಮಹಿಳಾ ಸಂಸದರ ಮತ್ತು ಶಾಸಕರ ಸಂಖೈ ಕಡಿಮೆಯೇ. ಮಹಿಳಾ ಮೀಸಲಾತಿಯನ್ನು ತರಬೇಕೆಂಬ ಬಹುದಿನದ ಒತ್ತಾಯ ಇನ್ನೂ ಈಡೇರಿಲ್ಲ. ಅನೇಕ ರಾಜಕೀಯ ನೇತಾರರೇ ಮೀಸಲಾತಿಗೊಳಪಟ್ಟು ತಮ್ಮ ನೆಲೆಗಟ್ಟು ಕಳೆದುಹೋಗಬಹುದೆಂಬ ಭೀತಿಯಿಂದ ಮಸೂದೆಯನ್ನು ವಿರೋಧಿಸುತ್ತಿದ್ದಾರೆ. ಮಹಿಳೆಯರ ಆಡಳಿತ ಕೂಡ ಭ್ರಷ್ಟತೆ, ನಿಷ್ಪ್ರಯೋಜಕತೆಯಿಂದ ಹೊರತಲ್ಲವಾದರೂ ದೇಶದ ಜನಸಂಖೈಯ ಅರ್ಧದಷ್ಟಿರುವ ಮಹಿಳೆಯರನ್ನು ಸಂಸತ್ತಿನಲ್ಲಿ, ವಿಧಾನಸಭೆಯಲ್ಲಿ ಪ್ರತಿನಿಧಿಸುವವರ ಸಂಖೈ ಮತ್ತಷ್ಟು ಹೆಚ್ಚಬೇಕು. ಸಂಖೈ ಹೆಚ್ಚಿಸುವುದಷ್ಟೇ ಉದ್ದೇಶವಾಗದೆ ಸ್ವಯಂ ನಿರ್ಧಾರ ಕೈಗೊಳ್ಳುವ ಛಲವಿರುವವರು ಆಯ್ಕೆಯಾಗುವಂತೆ ಮಾಡಬೇಕು. ಇಲ್ಲವಾದಲ್ಲಿ ಬಹಳಷ್ಟು ಗ್ರಾಮ ತಾಲ್ಲೂಕು ಜಿಲ್ಲಾ ಪಂಚಾಯತಿಗಳಲ್ಲಾಗುತ್ತಿರುವಂತೆ ಮಹಿಳಾ ಪ್ರತಿನಿಧಿಯ ಹೆಸರಿನಲ್ಲಿ ಆಕೆಯ ಗಂಡನೋ ಅಥವಾ ಸಂಬಂಧಿಕರೋ ಆಡಳಿತ ನಡೆಸುವ ಸ್ಥಿತಿ ನಿರ್ಮಾಣವಾಗಿಬಿಡುತ್ತದೆ.

ಉದ್ಯೋಗದಲ್ಲಿ ಮೀಸಲಾತಿ ಸಿಗಲಾರಂಭಿಸಿದೆ, ರಾಜಕೀಯದಲ್ಲೂ ಮುಂದೊಂದು ದಿನ ಮೀಸಲಾತಿ ನೀಡಿ ಹೆಚ್ಚೆಚ್ಚು ಮಹಿಳೆಯರು ಸಂಸತ್ತಿಗೆ ವಿಧಾನಸಭೆಗೆ ಆಯ್ಕೆಯಾಗುವುದನ್ನು ಕಾಣಬಹುದು ಆದರೆ ಸಾಮಾಜಿಕವಾಗಿ ಮಹಿಳೆಯ ಸ್ಥಿತಿಗತಿಯಲ್ಲಿ ಬದಲಾವಣೆಗಳಾಗಿವೆಯೇ? ಪುರುಷ ಸಮಾಜದ ಮನಸ್ಥಿತಿಯಿಂದ ಶೋಷಣೆಗೊಳಗಾಗುವುದು ತಪ್ಪಿದೆಯೇ ಎಂದು ಗಮನಿಸಿದರೆ ನಿರಾಸೆಯೇ ಅಧಿಕ. ಮಹಿಳೆ ಓದಿಗೆ ತೆರೆದುಕೊಂಡು ಉದ್ಯೋಗಸ್ಥೆಯಾದರೂ ವರದಕ್ಷಿಣೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅನಕ್ಷರಸ್ಥರಿಗಿಂತಲೂ ಅಕ್ಷರಸ್ಥ ಅಶಿಕ್ಷಿತರಲ್ಲೇ ವರದಕ್ಷಿಣೆಯ ಪಿಡುಗು ಅಧಿಕ. ಇನ್ನು ಹೆಣ್ಣು ಭ್ರೂಣ ಹತ್ಯೆಯೆಂಬುದು ದಿನದಿನಕ್ಕೂ ಏರುತ್ತಲೇ ಸಾಗಿದೆ. ಸ್ಕ್ಯಾನಿಂಗಿನಲ್ಲಿ ಮಗುವನ್ನು ಗುರುತಿಸುವುದಕ್ಕೆ ನಿಷೇಧವಿದ್ದರೂ, ಕಠಿಣ ಕಾನೂನಿದ್ದರೂ ಹೆಣ್ಣು ಮಕ್ಕಳೆಡೆಗೆ ಜನರ ಭಾವನೆ ಬದಲಾಗದೆ ಹೆಣ್ಣು ಭ್ರೂಣ ಹತ್ಯೆ ತಡೆಯುವುದು ಅಸಾಧ್ಯ. ಭ್ರೂಣ ಹತ್ಯೆಯ ವಿಷಯದಲ್ಲಿ ಪುರುಷ ಸಮಾಜದ ಜೊತೆಜೊತೆಗೆ ಗಂಡುಮಕ್ಕಳೇ ಬೇಕೆಂದು ಆಸೆ ಪಡುವ ಮಹಿಳೆಯರ ಅಪರಾಧವನ್ನೂ ಕಡೆಗಣಿಸಲಾಗದು. ಮುಂದುವೆರದಿವೆಯೆಂಬ ಹಣೆಪಟ್ಟಿ ಹಚ್ಚಿಕೊಂಡಿರುವ ಜಿಲ್ಲೆಗಳಲ್ಲೇ ಭ್ರೂಣ ಹತ್ಯೆ ಹೆಚ್ಚಿರುವುದನ್ನು ಗಮನಿಸಿದರೆ ಮತ್ತೆ ನಮ್ಮ ಶಿಕ್ಷಣ ಪದ್ಧತಿಯ ಮೇಲೆ ಅನುಮಾನಗಳೇಳುತ್ತವೆ.

ನವದೆಹಲಿಯಲ್ಲಿ ಚಲಿಸುವ ಬಸ್ಸಿನಲ್ಲಿ ‘ನಿರ್ಭಯಾ’ಳ ಮೇಲೆ ನಡೆದ ಪೈಶಾಚಿಕ ಅತ್ಯಾಚಾರ ದೇಶದೆಲ್ಲೆಡೆ ಪ್ರತಿಭಟನೆಗಳಿಗೆ ಕಾರಣವಾಯಿತು. ಬಾಲಪರಾಧಿಗಳ ವಯಸ್ಸು ಇಳಿಸುವಿಕೆ, ಅತ್ಯಾಚಾರ ತಡೆಗಟ್ಟುವುದಕ್ಕಾಗಿ ಇನ್ನಷ್ಟು ಕಠಿಣ ಕಾನೂನು ತರುವುದರ ಬಗ್ಗೆಯೆಲ್ಲ ಚರ್ಚೆಯಾಗಿದ್ದು ನಿರ್ಭಯಾ ಪ್ರಕರಣದಿಂದುಟಾದ ಪ್ರತಿಭಟನೆಗಳು ಮತ್ತು ಆ ಚಳುವಳಿಗೆ ಬಹಳಷ್ಟು ಪ್ರಚಾರ ಕೊಟ್ಟ ಮಾಧ್ಯಮಗಳಿಂದಾಗಿ. ಎಲ್ಲರ ಗಮನ ಸೆಳೆದ ಕಾರಣಕ್ಕಾಗಿಯೋ ಏನೋ ನಿರ್ಭಯಾ ಪ್ರಕರಣದ ಆರೋಪಗಳಿಗೆ ನಿರೀಕ್ಷೆಗೂ ಮೀರಿದ ವೇಗದಲ್ಲಿ ಶಿಕ್ಷೆ ಘೋಷಿಸಲಾಯಿತು. ಇಂತಹ ಪ್ರಕರಣಗಳಲ್ಲಿ ತ್ವರಿತ ನ್ಯಾಯಾಲಯಗಳು ಸಾಧ್ಯವಾದಷ್ಟು ಬೇಗ ನ್ಯಾಯ ದೊರಕಿಸುವ ಪ್ರಯತ್ನ ಮಾಡುವುದು ಸ್ವಾಗತಾರ್ಹ. ಆದರೆ ಕೆಲವೇ ಕೆಲವು ಹೈ ಪ್ರೊಫೈಲ್ ಪ್ರಕರಣಗಳಲ್ಲಿ ಮಾತ್ರ ಈ ರೀತಿಯ ತ್ವರಿತ ನ್ಯಾಯ ಸಿಗುತ್ತದೆಯೇ ಹೊರತು ಬೇರೆ ಪ್ರಕರಣಗಳಲ್ಲಿ ನಿಧಾನಗತಿಯೇ ಪ್ರಧಾನವಾಗುತ್ತಿದೆ. ನಗರಗಳಲ್ಲಿ ಅದರಲ್ಲೂ ರಾಜಧಾನಿಗಳಲ್ಲಿ ನಡೆಯುವ ಅಪರಾಧಗಳಿಗೆ ಸಿಗುವಷ್ಟು ಮಹತ್ವ ಪ್ರಚಾರ ನಗರಗಳಿಂದಾಚೆಗಿನ ಹಳ್ಳಿಗಳಲ್ಲಿ ನಡೆದ ಪ್ರಕರಣಗಳಿಗೆ, ಹಿಂದುಳಿದ ವರ್ಗದ ಮಹಿಳೆಯರ ಮೇಲೆ ನಡೆವ ಅತ್ಯಾಚಾರಗಳಿಗೆ ಸಿಗುವುದಿಲ್ಲ. ಅತ್ಯಾಚಾರಕ್ಕೊಳಗಾದ ಮಹಿಳೆ ಧೈರ್ಯಮಾಡಿ ದೂರು ನೀಡುವ ಮನಸ್ಸು ಮಾಡಿದರೂ ಆಕೆಯ ಮೇಲೆ ನಮ್ಮ ವಿಚಾರಣಾ ಪದ್ಧತಿ ಮತ್ತಷ್ಟು ಮಗದಷ್ಟು ಮಾನಸಿಕ ಅತ್ಯಾಚಾರ ಮಾಡಿಬಿಡುತ್ತದೆ. ಈ ನಿಟ್ಟಿನಲ್ಲಿ ಈ ಬಾರಿಯ ಕರ್ನಾಟಕ ಬಜೆಟ್ಟಿನಲ್ಲಿ ಪ್ರಸ್ತಾಪಿಸಲಾಗಿರುವ ಒಂದು ಅಂಶ ಜಾರಿಯಾದಲ್ಲಿ ಉತ್ತಮ. ಶೋಷಣೆಗೊಳಗಾದ ಮಹಿಳೆಯರು ಆಸ್ಪತ್ರೆಗೆ ಬಂದರೆ ಸಾಕು, ಅಲ್ಲೇ ಅವರಿಗೆ ವೈದ್ಯ ಸಹಕಾರ, ಪೋಲೀಸ್ ಸಹಕಾರ ಮತ್ತು ತಜ್ಞರಿಂದ ಅಗತ್ಯ ಸಲಹೆ ನೀಡುವ ಉದ್ದೇಶದ ಪ್ರಸ್ತಾವನೆ ಮೊದಲು ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರಾರಂಭಿಸಲಾಗುತ್ತದೆ. ಈ ಪ್ರಸ್ತಾವನೆ ಜಾರಿಗೆ ಬಂದರೆ ವಿಚಾರಣಾ ಪ್ರಕ್ರಿಯೆಯ ಅನೇಕ ಸಂಕಟಗಳಿಂದ ಸಂತ್ರಸ್ತ ಮಹಿಳೆ ಪಾರಾಗಬಹುದು.

ಸ್ವಾತಂತ್ರ ನಂತರದ ಭಾರತದ ಸಾಧಕ ಮಹಿಳೆಯರ ಬಗ್ಗೆ ಯೋಚಿಸಿದಾಗ ಅನೇಕನೇಕರ ಹೆಸರುಗಳು ನೆನಪಾಗುತ್ತವೆ. ಇಂದಿರಾಗಾಂಧಿ, ಮದರ್ ತೆರೇಸಾರಿಂದ ಹಿಡಿದು ಸುಧಾ ಮೂರ್ತಿ, ಮೇರಿ ಕೋಮ್, ಭಾರತದಿಂದ ಅಮೆರಿಕೆಗೆ ಹೋಗಿ ಸಾಧನೆಗೈದ ಕಲ್ಪನಾ ಚಾವ್ಲ, ಸುನೀತಾ ವಿಲಿಯಮ್ಸ್ ವರೆಗೆ ಅನೇಕ ಮಹಿಳೆಯರ ನೆನಪಾಗುತ್ತದೆ. ತಮ್ಮ ಸ್ವಂತ ಪರಿಶ್ರಮದ ಜೊತೆಜೊತೆಗೆ ಸಮಾಜದ ಸರಕಾರಗಳ ಬೆಂಬಲವೂ ದಕ್ಕಿದ ಕಾರಣದಿಂದ ಯಶಸ್ಸಿನ ಉತ್ತುಂಗಕ್ಕೇರಿದವರಿವರು. ಈ ಯಶದ ಪ್ರಭಾವಳಿಯಿಂದ ದೂರಾಗಿ ಗಮನಿಸಿದರೆ ಸ್ಪೂರ್ತಿದಾಯಕವಾದ ಅನೇಕ ಮಹಿಳೆಯರಿದ್ದಾರೆ, ಆದರವರು ಸರಕಾರಗಳ ಕೆಂಗಣ್ಣಿಗೆ ಗುರಿಯಾಗಿರುವ ಕಾರಣದಿಂದ ‘ಯಶಸ್ವಿ ಮಹಿಳೆ’ಯರಾಗುವುದಕ್ಕೆ ಸಾಧ್ಯವಾಗಿಲ್ಲ. ಛತ್ತೀಸಗಡದ ಆದಿವಾಸಿ ಹಳ್ಳಿಯೊಂದರಲ್ಲಿ ಶಿಕ್ಷಕಿಯಾಗಿದ್ದ ಆದಿವಾಸಿ ಮಹಿಳೆಯವಳು. ಶಿಕ್ಷಿತ ಮಹಿಳೆ ತನ್ನ ಜ್ಞಾನವನ್ನು ಪಾಠ ಮಾಡುವುದಕ್ಕಷ್ಟೇ ಸೀಮಿತಗೊಳಿಸಿಕೊಳ್ಳದೆ ಆದಿವಾಸಿ ಹಕ್ಕುಗಳಿಗಾಗಿಯೂ ಹೋರಾಡುತ್ತಿದ್ದಳು. ಮಾವೋವಾದಿ ನಕ್ಸಲರು ಪ್ರಬಲವಾಗಿರುವ ಪ್ರದೇಶದಲ್ಲಿ ಶಿಕ್ಷಕಿಯಾಗಿರುವ ಈಕೆಯ ತಂದೆ ಕಾಂಗ್ರೆಸ್ ಪಕ್ಷದ ಸದಸ್ಯ. ಪೋಲೀಸ್ ಮಾಹಿತಿದಾರ ಎಂಬ ಆರೋಪದ ಮೇಲೆ ನಕ್ಸಲರಿಂದ ಹಲ್ಲೆಗೊಳಗಾಗುತ್ತಾನೆ ಆತ. ಹೀಗೆ ನಕ್ಸಲರ ವಿರೋಧಿ ಗುಂಪಿನಲ್ಲಿರುವ ಈಕೆಯನ್ನು ಪೋಲೀಸರು ಬಂಧಿಸುತ್ತಾರೆ, ಅಪರಾಧ? ನಕ್ಸಲರಿಗೆ ಬೆಂಬಲ ನೀಡುತ್ತ ನಕ್ಸಲರಿಗೆ ಹಣ ತಲುಪಿಸುವ ಕೆಲಸ ಮಾಡುತ್ತಿದ್ದಾಳೆಂಬ ಆರೋಪ! ಆ ದೌರ್ಭಾಗ್ಯೆಯ ಹೆಸರು ಸೋನಿ ಸೋರಿ. ನಕ್ಸಲರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಜನಪರವಾಗಿರುವ ಯಾರನ್ನೇ ಆದರೂ ಸರಕಾರ ನಕ್ಸಲರ ಹೆಸರಿನಲ್ಲಿ ಬಂಧಿಸುವುದು ಹೊಸ ವಿಚಾರವೇನಲ್ಲ. ಆದರೆ ಬಂಧನದ ನಂತರ ಸೋನಿ ಸೋರಿಗೆ ಕೊಟ್ಟ ನರಕಯಾತನೆ ನಾಗರೀಕ ಜಗತ್ತಿನ ಜನರಿಗೆ ನಂಬಲಸಾಧ್ಯವಾದುದು. ಬೆತ್ತಲುಗೊಳಿಸಿ ಅತ್ಯಾಚಾರಕ್ಕೊಳಪಟ್ಟಳು. ಯುದ್ಧದಲ್ಲಿ ಮಹಿಳೆಯ ಮೇಲೆ ನಡೆಯುವ ಅತ್ಯಾಚಾರ ಅನಾಚಾರಗಳು ಮಾಮೂಲಿ ಎನ್ನುತ್ತೀರೇನೋ. ಅತ್ಯಾಚಾರಕ್ಕೆ ತಮ್ಮ ಕೃತ್ಯವನ್ನು ಸೀಮಿತಗೊಳಿಸದ ಪೋಲೀಸರು ಆಕೆಯ ಜನನಾಂಗದಲ್ಲಿ ಗುದದ್ವಾರದಲ್ಲಿ ಕಲ್ಲು ತೂರಿಸಿದ್ದರು. ಈ ಅತ್ಯಾಚಾರ ಪ್ರಕರಣ ಸುಪ್ರೀಂಕೋರ್ಟಿನ ಅಂಗಳವನ್ನೂ ತಲುಪಿ ವೈದ್ಯಕೀಯ ಪರೀಕ್ಷೆ ನಡೆದು ಸೋನಿ ಸೋರಿ ಮಾಡಿದ ಆರೋಪಗಳೆಲ್ಲವೂ ಸತ್ಯವಾದುದೆಂದು ಧೃಡಪಟ್ಟಿತು. ಹಿಂಸಾಚಾರ ನಡೆದಾಗ ಸೋನಿ ಸೋರಿಯ ಪ್ರಕಾರ ಜಿಲ್ಲಾ ಎಸ್.ಪಿ ಅಂಕಿತ್ ಗರ್ಗ್ ಕೂಡ ಹಾಜರಿದ್ದ. ವಿಪರ್ಯಾಸವೆಂದರೆ ಈ ಎಲ್ಲ ಆರೋಪಗಳನ್ನು ವಿಧಿಸಿದ ನಂತರವೂ ಅಂಕಿತ್ ಗರ್ಗನಿಗೆ ರಾಷ್ಟ್ರಪತಿ ಪದಕ ದೊರೆಯುತ್ತದೆ! ನಗರಗಳಲ್ಲಿ ಮತ್ತು ಹಳ್ಳಿಗಳಲ್ಲಿ ನಡೆಯುವ ಪ್ರಕರಣಗಳಲ್ಲಿ ಎಷ್ಟೊಂದು ಭೇದಭಾವವಿದೆಯಲ್ಲವೇ? ಒಂದು ಸಂತಸದ ಸಂಗತಿಯೆಂದರೆ ಇತ್ತೀಚೆಗೆ ಸೋನಿ ಸೋರಿಯ ಮೇಲಿನ ಆರೋಪಗಳೆಲ್ಲಾ ಸುಳ್ಳೆಂದು ಸಾಬೀತಾಗಿ ನ್ಯಾಯಾಲಯದಿಂದ ಬಿಡುಗಡೆಗೊಂಡಿದ್ದಾಳೆ. ಆಕೆಯ ಮೇಲೆ ನಡೆದ ದೌರ್ಜನ್ಯದ ಕಹಿ ನೆನಪುಗಳಿಂದ ಆಕೆ ಬಿಡುಗಡೆ ಹೊಂದಲು ಸಾಧ್ಯವೇ?

ಯುದ್ಧವೆಂಬುದು ಸರಕಾರಗಳ ತತ್ವ ಸಿದ್ಧಾಂತಗಳ ತಳಹದಿಯಲ್ಲಿ ನಡೆದು ಜನರ ಪ್ರಾಣಹರಣವಾಗುವ ಸಂಗತಿಯಾದರೂ ಮಹಿಳೆ ಯುದ್ಧದ ದಿನಗಳಲ್ಲಿ ಅತ್ಯಾಚಾರಕ್ಕೊಳಪಡುವ ಸರಕಾಗಿಬಿಡುತ್ತಾಳೆ. ಯುದ್ಧೋನ್ಮಾದ ಸೈನಿಕರಿಗೆ ಬಲಿಪಶುವಾಗಿಬಿಡುತ್ತಾಳೆ. ಇದು ಎರಡು ದೇಶಗಳ ಯುದ್ಧವಾದರೂ ಸರಿಯೇ ಅಥವಾ ದೇಶದೊಳಗಿನ ಅಂತರ್ಯುದ್ಧವಾದರೂ ಸರಿಯೇ. Special Armed Forces Actನ ರಕ್ಷಣೆಯಲ್ಲಿ ದೇಶದ ಈಶಾನ್ಯ ರಾಜ್ಯಗಳಲ್ಲಿ ನಡೆದುಹೋಗಿರುವ ಅನೇಕ ಸಂಗತಿಗಳು ಯುದ್ಧಕ್ಕಿಂತ ಭೀಕರವಾದುದು. ಹತ್ತಲವು ಕಾರಣಗಳಿಂದ ಪ್ರತ್ಯೇಕತಾ ಹೋರಾಟ ನಡೆಯುತ್ತಿರುವ ಇಲ್ಲಿನ ರಾಜ್ಯಗಳಲ್ಲಿ ಪ್ರತ್ಯೇಕತೆಯನ್ನು ಹತ್ತಿಕ್ಕಲು ಸೈನ್ಯಕ್ಕೆ ಅನೇಕ ಪ್ರಜಾಪ್ರಭುತ್ವ ವಿರೋಧಿ ಅನುಕೂಲಗಳನ್ನು ನೀಡಲಾಗಿದೆ. ಇಲ್ಲಿರುವ ಸೈನ್ಯ ಅನುಮಾನ ಬಂದ ಯಾರನ್ನಾದರೂ ಬಂಧಿಸಬಹುದು, ವಿಚಾರಣೆಗೊಳಪಡಿಸಬಹುದು, ತಪ್ಪಿಸಿಕೊಳ್ಳುತ್ತಿದ್ದರೆಂಬ ಆರೋಪ ಹೊರಿಸಿ ಹತ್ಯೆಗೈಯ್ಯಬಹುದು. ಅವರನ್ನು ಸ್ಥಳೀಯ ರಾಜ್ಯ ಸರಕಾರವೂ ಪ್ರಶ್ನಿಸುವಂತಿಲ್ಲ. ರಾಜ್ಯದ ಯಾವೊಂದು ಕಾನೂನು ಅವರಗೆ ಅನ್ವಯವಾಗುವುದಿಲ್ಲ. ಬ್ರಿಟೀಷರು ತಮ್ಮ ಆಡಳಿತದ ಬಿಗಿ ಹೆಚ್ಚಿಸಲು, ವಸಾಹತು ಪ್ರದೇಶಗಳನ್ನು ವಿಸ್ತರಿಸಲು ಈ ರೀತಿಯ ಅಂಧ ಕಾನೂನನ್ನು ಜಾರಿಗೆ ತಂದಿತ್ತು. ನಮ್ಮದೇ ಜನರ ಸರಕಾರಗಳು ಕೂಡ ಅಂತಹುದೇ ಕಾನೂನನ್ನು ಜಾರಿಗೆ ತಂದಿದ್ದರು. ಎಂದಿನಂತೆ ಇಂತಹ ಕಾನೂನುಗಳಿಂದ ಪುರುಷ ಮತ್ತು ಮಹಿಳೆ ದೈಹಿಕ ಹಲ್ಲೆಗೊಳಗಾಗುತ್ತಿದ್ದರು, ಮಹಿಳೆ ದೈಹಿಕ ಹಲ್ಲೆಗಳ ಜೊತೆಗೆ ಅತ್ಯಾಚಾರಕ್ಕೊಳಪಟ್ಟು ಜೀವವಿರುವವರೆಗೂ ಮರೆಯಲಾಗದ ಮಾನಸಿಕ ಕ್ಷೋಬೆಗೊಳಗಾಗುತ್ತಿದ್ದಳು. 2004ರ ಜುಲೈ ತಿಂಗಳಿನಲ್ಲಿ ಅಸ್ಸಾಂ ರೈಫಲ್ಸ್ ಥಾಂಗ್ಜಮ್ ಮನೋರಮ ಎಂಬಾಕೆಯನ್ನು ಪ್ರತ್ಯೇಕತಾವಾದಿಗಳಿಗೆ ನೆರವಾಗುತ್ತಿದ್ದ ಆರೋಪದ ಅಡಿಯಲ್ಲಿ ಬಂಧಿಸಲಾಗುತ್ತದೆ. ಅತ್ಯಾಚಾರಗೈದು ಗುಂಡಿಟ್ಟು ಸಾಯಿಸಿ ಬೀದಿಯಲ್ಲಿ ಬಿಸುಟಿ ನಡೆದುಬಿಡುತ್ತಾರೆ ರೈಫಲ್ಸಿನ ಸೈನಿಕರು. ಮೂವತ್ತರ ಹರೆಯದವಳ ಬರ್ಬರ ಹತ್ಯೆಯಿಂದ ಮನಕಲಕಿ ಐವತ್ತರ ಆಸುಪಾಸಿನ ಅನೇಕ ಹೆಂಗಸರು ಸಂಪೂರ್ಣ ಬೆತ್ತಲಾಗಿ ಬೀದಿಗಿಳಿದು ಸೈನ್ಯದ ಕಛೇರಿಯ ಎದುರಿಗೆ ಹೋಗಿ “Indian Army Rape Us” ಎಂದು ಉದ್ಘೋಷಿಸುತ್ತಾ ಪ್ರತಿಭಟನೆ ಮಾಡುತ್ತಾರೆ. ಕುರುಡು ಸರಕಾರ ಮತ್ತು ಕುರುಡು ಭಾರತಕ್ಕೆ ಇಡೀ ದೇಶಕ್ಕೆ ಅವಮಾನಕರವಾದ ಈ ಘಟನೆ ತಾಕುವುದೇ ಇಲ್ಲ. ಈ ಪ್ರತಿಭಟನೆಯಿಂದಾದರೂ ಸೈನಿಕರಿಗೆ ನೀಡಿದ್ದ ವಿಶೇಷ ಸವಲತ್ತುಗಳನ್ನು ಹಿಂಪಡೆಯಲಾಯಿತೇ? ಉಹ್ಞೂ. ಮಹಿಳೆಯ ಬೆತ್ತಲು ದೇಹದ ಪ್ರತಿಭಟನೆಗೆ ಮಹಿಳೆಗೆ ವಿಶೇಷ ಗೌರವ ನೀಡುತ್ತೇವೆನ್ನುವ ಭಾರತ ಸಂಸ್ಕೃತಿಯದ್ದು ಮೌನ ಉದಾಸೀನ ಪ್ರತಿಕ್ರಿಯೆ. ಇದೇ ಈಶಾನ್ಯ ರಾಜ್ಯದಲ್ಲಿ ಮತ್ತೊಬ್ಬ ಮಹಿಳೆಯಿದ್ದಾಳೆ. ನವಭಾರತದ ಉಕ್ಕಿನ ಮಹಿಳೆಯವಳು. ಸೈನಿಕರಿಗೆ ನೀಡುವ ವಿಶೇಷ ಸ್ಥಾನಮಾನವನ್ನು ತೆರವುಗೊಳಿಸಿ ನಮ್ಮ ಬದುಕನ್ನು ಸಹ್ಯಗೊಳಿಸಬೇಕೆಂದು ಸತತ ಹದಿನಾಲ್ಕು ವರುಷಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾಳೆ ಐರಮ್ ಶರ್ಮಿಳಾ. ಸರಕಾರಗಳು ನೀಡಿದ ಪ್ರತಿಕ್ರಿಯೆ? ಆತ್ಮಹತ್ಯೆಗೆ ಯತ್ನಿಸಿದ ಆರೋಪದಡಿಯಲ್ಲಿ ಆಕೆಯನ್ನು ಸತತವಾಗಿ ಬಂಧಿಸುತ್ತಲೇ ಇವೆ, ಮೂಗಿನ ಮುಖಾಂತರ ನಳಿಕೆಯನ್ನು ತೂರಿ ಬಲವಂತವಾಗಿ ಆಹಾರವನ್ನು ನೀಡುತ್ತಾ ಆಕೆಯನ್ನು ಜೀವಂತವಾಗಿಟ್ಟಿವೆ. ಸೈನಿಕರಿಗೆ ನೀಡಿರುವ ವಿಶೇಷ ಸ್ಥಾನಮಾನವೂ ಜೀವಂತವಾಗಿಯೇ ಇವೆ.

ದೇಶದ ವಿವಿದೆಡೆ ಮಹಿಳೆಯರ ಮೇಲೆ ಇಷ್ಟೆಲ್ಲಾ ಹಲ್ಲೆ ಅತ್ಯಾಚಾರ ಅನಾಚಾರಗಳು, ಕೆಲವೊಂದು ಕಡೆ ಸರಕಾರದ ಸುಪರ್ದಿಯಲ್ಲೇ ನಡೆಯುತ್ತಿರುವ ಸಮಯದಲ್ಲಿ ಮಹಿಳಾ ದಿನವೆಂಬುದು ಸಾಂಕೇತಿಕ ಆಚರಣೆಯಾಗಿಯಷ್ಟೇ ಉಳಿಯುತ್ತದೆಯಷ್ಟೇ.
ಮಹಿಳಾ ದಿನಾಚರಣೆಗೆ ಪ್ರಜಾಸಮರಕ್ಕೆ ಬರೆದ ಲೇಖನ

No comments:

Post a Comment