Dec 17, 2013

ಭರವಸೆ ಮೂಡಿಸಿದ ಆಮ್ ಆದ್ಮಿಯ ಗೆಲುವು

ವಸಂತ್ ರಾಜು ಎನ್.
ಇತ್ತೀಚಿನ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಅನೇಕ ಅಚ್ಚರಿಗಳಿಗೆ ಕಾರಣವಾಗುವುದರ ಮೂಲಕ ಈ ದೇಶದ ರಾಜಕಾರಣದ ದಿಕ್ಕನ್ನು ಬದಲಿಸುವ ಭರವಸೆಯನ್ನು ಮೂಡಿಸಿದೆ.


ಭರವಸೆಯ ಮಹಾಪೂರಗಳನ್ನು ಹರಿಸಿ ಅಧಿಕಾರಕ್ಕೆ ಬರುತ್ತಿದ್ದ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ತಮಗೆ ಮತಹಾಕಿದ ಮತದಾರರನ್ನು ಮರೆತು ಭ್ರಷ್ಟಾಚಾರ, ಕೋಮುವಾದ, ಜಾತೀಯತೆ, ಮುಂತಾದುವುಗಳನ್ನು ಮುನ್ನಲೆಗೆ ತಂದು ಈ ದೇಶದ ಸಾಮಾನ್ಯ ಜನರ ಬದುಕಿಗೆ ಮತ್ತು ತಮಗೆ (ರಾಜಕೀಯ ಪಕ್ಷಗಳಿಗೆ) ಯಾವುದೇ ಸಂಬಂಧವಿಲ್ಲದಂತೆ ವರ್ತಿಸಿದ ಪ್ರಸಂಗಗಳೇ ಅಧಿಕ.

ತಾವು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಣೆ ಮಾಡಿ ಅದರ ಸರಿಯಾದ ಕಾರ್ಯಯೋಜನೆಯಲ್ಲಿ ವಿಫಲವಾಗುತ್ತಿದ್ದ ಈ ಪಕ್ಷಗಳು ಆ ಮೂಲಕ ಅಖಂಡ ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿದ್ದವು. ನಮ್ಮ ನಡುವೆ ಯಾವುದೇ ಸೂಕ್ತ ಆಯ್ಕೆಗಳಿಲ್ಲದೇ ಈ ಎರಡು ಪಕ್ಷಗಳಲ್ಲಿ ಒಂದನ್ನು ಆಯ್ಕೆಮಾಡುವ ಅನಿವಾರ್ಯ ಪರಿಸ್ಥಿತಿ. ಇದಕ್ಕೆ ಇಂದಿನ ಮಾಧ್ಯಮಗಳು ಕೂಡ ತಮ್ಮ ಅಳಲು ಸೇವೆ ಸಲ್ಲಿಸುವುದರ ಮೂಲಕ ಎಡ ಪಕ್ಷಗಳು ಈ ದೇಶದಲ್ಲಿ ಅಸ್ಥಿತ್ವದಲ್ಲಿ ಇಲ್ಲವೇ ಇಲ್ಲ ಎಂಬಂತಹ ಪರಿಸ್ಥಿತಿಯನ್ನು ಸೃಷ್ಟಿಸಿದ್ದವು. ಎಡ ಪಕ್ಷಗಳು ಕೆಲ ರಾಜ್ಯಗಳಲ್ಲಿ ಉತ್ತಮ ಭ್ರಷ್ಟರಹಿತ ಆಡಳಿತ ನೆಡಸುತ್ತಿದ್ದರು (ಉದಾ: ತ್ರಿಪುರಾದಲ್ಲಿ ಮಾಣಿಕ್ ಸರ್ಕಾರ್‍ರವರ ಸರ್ಕಾರ) ಮಾಧ್ಯಮಗಳು ಸೂಕ್ತ ಪ್ರಚಾರ ನೀಡದೇ ಎಡಪಕ್ಷಗಳನ್ನು ನಿರ್ಲಕ್ಷಿಸಿದ್ದ ಸಂದರ್ಭವೇ ಅಧಿಕ. ಅದೇ ಬಿಜೆಪಿಯ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‍ನ ರಾಹುಲ್ ಗಾಂಧಿಗೆ ಮಾಧ್ಯಮಗಳಲ್ಲಿ ಸಿಗುವ ಪ್ರಚಾರದ ಪರಿ ಬೇರೆ.

ಕೇವಲ ರಸ್ತೆಗಳ ಅಭಿವೃದ್ದಿ, ಬೃಹತ್ ಕಟ್ಟಡಗಳ ನಿರ್ಮಾಣ ಮತ್ತು ಬಂಡವಾಳಶಾಹಿಗಳಿಗೆ ಮಣೆಹಾಕುವುದೇ ಅಭಿವೃದ್ದಿಯಲ್ಲ. ಜನರ ಜೀವನ ಮಟ್ಟದಲ್ಲಿ ಸುಧಾರಣೆಯಾಗದ ಅಭಿವೃದ್ದಿ, ಅಭಿವೃದ್ಧಿಯಲ್ಲ. ಕಲ್ಯಾಣ ರಾಜ್ಯದ ಕಲ್ಪನೆಯನ್ನು ಸಂಪೂರ್ಣವಾಗಿ ಮರೆತಿರುವ ರಾಜಕೀಯ ಪಕ್ಷಗಳು ಇಂದು ಬಂಡವಾಳಶಾಹಿಗಳ ಕಪ್ಪಿಮುಷ್ಟಿಗೆ ಸಿಲುಕಿ ಕೇವಲ ಮಧ್ಯವರ್ತಿಗಳಾಗಿ ಪರಿವರ್ತಿತವಾಗಿದ್ದಾರೆ. ರಾಜಕಾರಣಿಗಳ ಈ ದಲ್ಲಾಳಿ ರೂಪವೇ 2ಜಿಯಂತಹ ಭ್ರಷ್ಟಾಚಾರಕ್ಕೆ ಮತ್ತು ಛತ್ತೀಸ್‍ಘಡ್‍ನಂತಹ ಸಂಪದ್ಭರಿತ ರಾಜ್ಯದಲ್ಲಿ ಅದಿವಾಸಿಗಳು ತಮ್ಮ ಅಸ್ಥಿತ್ವವನ್ನು ರಕ್ಷಿಸಿಕೊಳ್ಳಲು ನಕ್ಸಲ್ ಹೋರಾಟದತ್ತ ಆಕರ್ಷಿತರಾಗುತ್ತಿರುವುದು. ಇದು ಕೇವಲ ಕೆಲ ಉದಾಹರಣೆಗಳಷ್ಟೇ.

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಪರ್ಯಾಯವೆಂಬಂತೆ ಮುಂಚೂಣಿಗೆ ಬಂದ ಅನೇಕ ಪ್ರಾದೇಶಿಕ ಪಕ್ಷಗಳು ಪ್ರಾದೇಶಿಕ ಪಕ್ಷಗಳು (ಉತ್ತರ ಪ್ರದೇಶದ ಸಮಾಜವಾದಿ ಪಕ್ಷ, ಬಿಎಸ್‍ಪಿ, ಕರ್ನಾಟಕದ ಜನತಾದಳ, ಬಿಹಾರದ ರಾಷ್ಟ್ರೀಯ ಜನತಾ ದಳ, ತಮಿಳು ನಾಡಿನ ಡಿಎಂಕೆ ಮುಂತಾದವುಗಳು) ಈ ಎರಡು ರಾಷ್ಟ್ರೀಯ ಪಕ್ಷಗಳ ಜೊತೆಗೂಡಿ ತಾವು ಭ್ರಷ್ಟಾಚಾರ, ಮತೀಯವಾದ ಮತ್ತು ಜಾತೀಯತೆಯ ಕರಿನೆರಳಿನಲ್ಲಿ ಸಿಕ್ಕಿ ಯಾವದೇ ಪರ್ಯಾಯಗಳನ್ನು ಸೃಷ್ಟಿಸದೇ ಇಂದು ರಾಷ್ಟ್ರೀಯ ಪಕ್ಷಗಳನ್ನು ಮೀರಿಸುವ ಹಾಗೇ ತಮ್ಮ ಕುಟುಂಬ ರಾಜಕಾರಣಕ್ಕೆ ಸಿಮೀತವಾಗಿವೆ.

ಇಂತಹ ಸಮಯದಲ್ಲಿ ಜನ ಲೋಕಪಾಲ್ ಮಸೂದೆಗೆ ಕೆಲ ಸಾಮಾಜಿಕ ಚಳುವಳಿಗಾರರಿಂದ ಆರಂಭಗೊಂಡ ಭ್ರಷ್ಟಾಚಾರ ವಿರೋಧಿ ಭಾರತ ಒಕ್ಕೂಟದ ಸದಸ್ಯರು ಆರವಿಂದ ಕೇಜ್ರಿವಾಲ್‍ರವರ ನೇತೃತ್ವದಲ್ಲಿ ಆರಂಭಿಸಿದ ಆಮ್ ಆದ್ಮಿ ಪಕ್ಷ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸುವುದರ ಮೂಲಕ 15 ವರ್ಷಗಳ ಕಾಂಗ್ರೆಸ್ ಆಡಳಿತಕ್ಕೆ ಬ್ರೇಕ್ ಹಾಕಿದೆ. ಇದಲ್ಲದೇ ಭಾರತದ ರಾಜಕೀಯ ಇತಿಹಾಸದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಿದೆ.

ಈ ಫಲಿತಾಂಶ ಹಣಬಲದ, ಜಾತಿಯತೆ, ಕೋಮುವಾದದ ಮೇಲೆ ರಾಜಕಾರಣವನ್ನು ಮಾಡುತ್ತಿದ್ದ, ಬಿಜೆಪಿ, ಕಾಂಗ್ರೆಸ್ ಮತ್ತು ಕೆಲ ಪ್ರಾದೇಶಿಕ ಪಕ್ಷಗಳಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ. ಜನರ ಸಮಸ್ಯೆಗಳನ್ನು ಮರೆತು ಅಧಿಕಾರದ ಅಮಲಿನಲ್ಲಿ ತೆಲುತ್ತಿದ್ದ ರಾಷ್ಟ್ರೀಯ ಪಕ್ಷಗಳು ಆಮ್ ಆದ್ಮಿಯ ಗೆಲುವಿನಿಂದಾಗಿ ಜನರತ್ತ ನೋಡುವಂತಾಗಿದೆ. ಯಾವುದೇ ಪ್ರಭಾವ, ಹಣಬಲವಿಲ್ಲದೇ ಚುನಾವಣೆಗಳಲ್ಲಿ ಗೆಲವು ಸಾಧ್ಯಎಂಬುದನ್ನು ಕೇಜ್ರಿವಾಲ್‍ರವರ ಪಕ್ಷ ನಿರೂಪಿಸಿದೆ. ಭ್ರಷ್ಟರಹಿತ ಆಡಳಿತ  ಹೊಸ ಮಾಧ್ಯಮಗಳ ಸೂಕ್ತ ರೀತಿಯ ಬಳಕೆ, ಜನಸಮಾನ್ಯರ ಜೊತೆಗಿನ ನಿಕಟ ಸಂಪರ್ಕ, ಅವರ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಬಗೆಹರಿಸುವ ಭರವಸೆ ಜನರಲ್ಲಿ ಹೊಸ ಭರವಸೆಯನ್ನು ಉಂಟುಮಾಡಿದೆ. ಆಮ್ ಆದ್ಮಿಯ ಗೆಲುವು ಇತರ ರಾಜ್ಯಗಳಲ್ಲಿ ಪುನರ್‍ವರ್ತಿತವಾಗುವುದರ ಮೂಲಕ ಅಂತರ್ಯದಲ್ಲಿ ಕಲುಷಿತಗೊಂಡಿರುವ ರಾಜಕೀಯ ಪಕ್ಷಗಳಿಗೆ ಒಂದಷ್ಟು ಪಾಠ ಕಲಿಸಬೇಕಾಗಿದೆ. ಅದನ್ನು ಒಂದಷ್ಟು ಸಾಧ್ಯಮಾಡಲು ದಾರಿತೋರಿರುವ ಆಮ್ ಆದ್ಮಿಗೆ ಜಿಂದಾಬಾದ್!

No comments:

Post a Comment