Sep 14, 2013

ಗಲ್ಲು

 ಗಲ್ಲು ಶಿಕ್ಷೆ ತಪ್ಪು ಎಂದು ಮಾತನಾಡಿದಾಕ್ಷಣ ಆ ರೀತಿ ಮಾತನಾಡಿದವರು ಅಪರಾಧಿಯ ಪರವಾಗಿ ಮಾತನಾಡುತ್ತಿದ್ದಾರೆ ಎಂದು ತಪ್ಪು ತಿಳಿದುಕೊಳ್ಳುವ ಜನರೇ ಹೆಚ್ಚು. ಗಲ್ಲು ಶಿಕ್ಷೆ ಅಪರಾಧದ ಪ್ರಮಾಣವನ್ನು ಕಡಿಮೆಮಾಡುವುದರಲ್ಲಿ ವಹಿಸುವ ಪಾತ್ರ ಕಡಿಮೆಯೆಂದೇ ಹೇಳಬಹುದು. ಅನೇಕ ರಾಷ್ಟ್ರಗಳಲ್ಲಿ ಗಲ್ಲು ಶಿಕ್ಷೆ ಸಂಪೂರ್ಣ ರದ್ದಾಗಿದೆ, ಆ ಕಾರಣಕ್ಕೆ ಅಲ್ಲಿನ ಅಪರಾಧ ಪ್ರಕರಣಗಳಲ್ಲಿ ಹೆಚ್ಚಳವಾಗಿಬಿಟ್ಟಿದೆಯಾ? ಇರಲಾರದು. ದೆಹಲಿಯ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಿದೆ. ಗಲ್ಲು ಶಿಕ್ಷೆ ತಪ್ಪು ಎಂದೀಗ ಹೇಳಿದರೆ ""  ನಿಮ್ಮ ಸಂಬಂಧಿಗಳೇ ರೇಪ್ಗೆ ಒಳಗಾದರೆ ಈ ರೀತಿ ಮಾತನಾಡುತ್ತೀರ " ಎಂದು ಪ್ರಶ್ನಿಸುವವರೇ ಅಧಿಕ. ಅಂಥ ಅಸಂಬದ್ಧ ವಾದ ಬದಿಗೆ ಸರಿಸೋಣ. ಇಂಥ ಹೀನ ಕೃತ್ಯ ಮಾಡಿದವರಿಗೆ ಒಂದೇ ಕ್ಷಣದ ನೋವು ನೀಡಿ ಮರಣ ವಿಧಿಸಿಬಿಟ್ಟರೆ ಸಾಕಾ? 
ವಿ. ಆರ್ . ಕಾರ್ಪೆಂಟರ್ ಈ ಸಂದರ್ಭದಲ್ಲಿ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದ ಕೆಲವು ಸಾಲುಗಳು.

 
ಗಲ್ಲು ಶಿಕ್ಷೆಯಾಗಿರುವ ಬಗ್ಗೆ ಭಾರತೀಯರಾದ ನಮಗೆ ನಿಜವಾಗಿಯೂ ನಾಚಿಕೆಯಾಗಬೇಕು!
ನಾನು ಅತ್ಯಾಚಾರಿಗಳ ಪರವಾಗಿ ಮಾತನಾಡುತ್ತಿಲ್ಲ. ಅವರು ಮಾಡಿರುವುದು ಗಲ್ಲುಶಿಕ್ಷೆಗಿಂತಲೂ ಘೋರ ಶಿಕ್ಷೆಯನ್ನು ಅನುಭವಿಸಬೇಕಾದ ಅಪರಾಧವನ್ನು.
ಆದರೆ, ಅತ್ಯಂತ ಸುಸಂಸ್ಕೃತರು, ಶಾಂತಿಪ್ರಿಯರು ಎಂದು ಬಿಂಬಿಸಿಕೊಂಡಿರುವ, ಬಿಂಬಿಸಿಕೊಳ್ಳುತ್ತಲೇ ಇರುವ, ಅನೇಕ ವೇದಗಳು ಉಪನಿಷತ್ತುಗಳು, ಮಹಾತ್ಮರು, ಪುಣ್ಯಾತ್ಮರು(?) ಹುಟ್ಟಿರುವ ಈ ದೇಶ 'ಗಲ್ಲುಶಿಕ್ಷೆ'ಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿರುವುದಕ್ಕೆ ನಾಚಿಕೆಯಾಗಬೇಕು.
ಹಾಗೆ ನೋಡಿದರೆ ದೋಷ ಇರುವುದು ಇಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ... ಸರಿಯಾದ ನಾಗರೀಕನನ್ನು ಸೃಷ್ಟಿಸದ ಈ ನಿರ್ವೀರ್ಯ ಸಮಾಜದಲ್ಲಿ...
ಇಲ್ಲಿನ ಧರ್ಮಗ್ರಂಥಗಳೇನು ನಿದ್ದೆ ಮಾಡುತ್ತಿವೆಯೇ? 'ಮಾತೃದೇವೋಭವ' ಎಂಬ ಪರಿಕಲ್ಪನೆ ಹುಟ್ಟಿದ ದೇಶದಲ್ಲಿ ಅತ್ಯಾಚಾರಿಗಳೂ ಸೃಷ್ಟಿಯಾಗುತ್ತಾರೆಂದರೆ? ಭಾರತವನ್ನು ಸುಸಂಸ್ಕೃತ ದೇಶವೆಂದು ಏಕೆ ಕರೆಯಬೇಕು? ನಿಜವಾಗಿಯೂ ಗಿಲ್ಟ್ ಕಾಡಬೇಕಾಗಿರುವುದು ಅತ್ಯಾಚಾರಿಗಳಿಗಲ್ಲ... ನಮ್ಮಪಾಡಿಗೆ ನಾವಿದ್ದುಬಿಡುವ ನಮಗೆ, ಚೇಲಾಗಳನ್ನು ಸೃಷ್ಟಿಸುತ್ತಿರುವ ರಾಜಕಾರಣಿಗಳಿಗೆ, ಸಮಾಜಕ್ಕೆ ಏನೂ ಕಲಿಸದ ಕೇವಲ ಮನರಂಜನೆಯನ್ನಷ್ಟೇ ನೀಡುವ ಮಾಧ್ಯಮಗಳಿಗೆ, ಪುರೋಹಿತರ ಕಾರ್ಖಾನೆಗಳನ್ನು ಕಟ್ಟುವ ಧರ್ಮಗುರುಗಳಿಗೆ, ಮೌಢ್ಯಗಳನ್ನೇ ತುಂಬುವ ಧರ್ಮಗ್ರಂಥಗಳಿಗೆ, ಶ್ರೇಷ್ಟತೆಯ ವ್ಯಸನದ ರೋಗದಿಂದ ಬಳಲುತ್ತಿರುವ ಜಾತೀವಾದಿಗಳಿಗೆ... ಬೆಂಕಿಯನ್ನೇ ಉಸಿರಾಡುವ ಕೋಮುವಾದಿಗಳಿಗೆ...

ಘನಶ್ಯಾಂ ಅಗರವಾಲ್ ಎನ್ನುವ ಪಾಕಿಸ್ತಾನಿ ಕವಿಯೊಬ್ಬ ತನ್ನ ಕವಿತೆಯಲ್ಲಿ ಹೇಳುತ್ತಾನೆ...

ಈತ ರಾಜಕಾರಣಿ
ಈತ ಬಾಂಬ್ ಸೃಷ್ಟಿಸಿದ
ಈತನಿಗೆ ಹತ್ತು ಬಾರುಕೋಲಿನಿಂದ ಬಾರಿಸಿರಿ...

ಈತ ಧರ್ಮಗುರು
ಈತ ಬಾಂಬಿಗೆ ಧರ್ಮದ ಬಣ್ಣ ನೀಡಿದ
ಈತನಿಗೆ ಇಪ್ಪತ್ತು ಬಾರುಕೋಲಿನಿಂದ ಬಾರಿಸಿರಿ...

ಈತ ಕವಿ, ಲೇಖಕ
ಈತನಿದ್ದೂ ಬಾಂಬ್ ಸೃಷ್ಟಿಯಾಯಿತು
ಈತನಿಗೆ ನೂರು ಬಾರುಕೋಲಿನಿಂದ ಬಾರಿಸಿರಿ...


ಚಿತ್ರಮೂಲ - ಕನ್ನಡಪ್ರಭ

No comments:

Post a Comment