Aug 14, 2013

ಪ್ರಜಾಪ್ರಭುತ್ವಕ್ಕೇ ಮಾರಕವಾಗುವ ವ್ಯಕ್ತಿ ಪೂಜೆ

ಪ್ರಜಾಸಮರ ಮತ್ತು ನಿಲುಮೆಯಲ್ಲಿ ಪ್ರಕಟವಾಗಿದ್ದ ಲೇಖನ



ಒಂದೂರಲ್ಲಿ ಒಬ್ಬ ರಾಜ ಇದ್ದ. ಆತನಿಗೊಬ್ಬಳು ಸುರಸುಂದರಿ ಮಗಳು. ರಾಜನ ವೈರಿಗಳು ರಾಜನ ಮೇಲಿನ ದ್ವೇಷಕ್ಕೆ ಯುವರಾಣಿಯನ್ನು ಅಪಹರಿಸಿಬಿಟ್ಟರು. ಯುವರಾಣಿ ಅಘಾತಕ್ಕೊಳಗಾಗಿ ಮೂರ್ಛೆ ತಪ್ಪಿದಳು. ಆಘಾತದಿಂದ ಹೊರಬಂದ ಮೇಲೆ ನೋಡುತ್ತಾಳೆ ಯಾವುದೋ ಗುಹೆಯೊಳಗೆ ಕೈ ಕಟ್ಟಿಹಾಕಿಹಾಕಿದ್ದಾರೆ. ಹೊರಗಡೆ ಪಹರೆ. ಚಾಕಚಕ್ಯತೆಯಿಂದ ಕೈಗೆ ಕಟ್ಟಿದ್ದ ಹಗ್ಗವನ್ನು ಬಿಡಿಸಿ ವೈರಿಗಳೊಂದಿಗೆ ಶೌರ್ಯದಿಂದ ಹೊಡೆದಾಡಿ........’ ರೀ ರೀ ರೀ ಕಥೆ ಹೋಗೋದು ಆ ರೀತಿ ಅಲ್ಲ ...... ‘ಪಕ್ಕದ ದೇಶದ ಯುವರಾಜ ಏಕಾಂಗಿಯಾಗಿ ವೈರಿಗಳ ಮೇಲೆ ಕಾದಾಡಿ ಯುವರಾಣಿಯನ್ನು ರಕ್ಷಿಸುತ್ತಾನೆ. ಯುವರಾಜನ ಸಾಹಸಕ್ಕೆ ಮನಸೋತ ಯುವರಾಣಿಗೆ ಪ್ರೇಮಾಂಕುರವಾಗುತ್ತದೆ. ಹಿರಿಯರ ಆಶೀರ್ವಾದದೊಂದಿಗೆ ಮದುವೆಯಾಗಿ ನೂರ್ಕಾಲ ಚೆನ್ನಾಗಿ ಬಾಳಿ ಬದುಕುತ್ತಾರೆ’ ಇದು ಕಥೆ ಸಾಗುವ ರೀತಿ! ಚಿಕ್ಕಂದಿನಿಂದಲೂ ಈ ರೀತಿಯ ಕಥೆಗಳನ್ನೇ ಕೇಳಿ ಬೆಳೆದ ನಮಗೆ ಯುವರಾಣಿ ಅಬಲೆಯಲ್ಲ ಬಲಿಷ್ಠೆ, ತನ್ನನ್ನು ತಾನು ಕಾಪಾಡಿಕೊಳ್ಳಲು ಎಂದರೆ ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದಲ್ಲವೇ? ಯುವರಾಣಿಯ ಸಹಾಯಕ್ಕೆ ಯುವರಾಜನೊಬ್ಬ ಬೇಕೇ ಬೇಕು ಎಂಬ ಸಿದ್ಧಾಂತ ನಮ್ಮದು!

ಮುಂದಿನ ವರುಷದ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ಸಿದ್ಧತೆ ಜೋರಾಗಿಯೇ ನಡೆದಿದೆ. ಬಿಜೆಪಿಯಿಂದ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿಯೆಂಬುದು ಹೆಚ್ಚೂ ಕಡಿಮೆ ಖಚಿತವಾಗಿದೆ. ಇನ್ನು ಕಾಂಗ್ರೆಸ್ಸಿನಿಂದ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾ? ಖಚಿತವಾಗಿ ಹೇಳುವುದು ಕಷ್ಟ. ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅಭಿಮಾನಿಗಳ “ಯುದ್ಧ” ಜೋರಾಗಿಯೇ ನಡೆದಿದೆ. ಬಿಜೆಪಿ ಸಾಮಾಜಿಕ ತಾಣದ ಪ್ರಚಾರಕ್ಕೆ ವರುಷಗಳಿಂದ ಕೊಟ್ಟ ಪ್ರಾಮುಖ್ಯತೆಯಿಂದ ಅಂತರ್ಜಾಲದಲ್ಲಿ ನರೇಂದ್ರ ಮೋದಿಯ ಬೆಂಬಲಿಗರೇ ಹೆಚ್ಚಿರುವುದು ನಿಜ. ನರೇಂದ್ರ ಮೋದಿಯ ವಿರುದ್ಧವಾಗಿಯೋ ಅಥವಾ ರಾಹುಲ್ ಗಾಂಧಿಯ ಪರವಾಗಿಯೋ ನೀವೇನಾದರೂ ಅಂತರ್ಜಾಲದಲ್ಲಿ ಬರೆದಿರೋ ನಿಮ್ಮ ಜನ್ಮ ಜಾಲಾಡಿ, ಹೀಯಾಳಿಸಿ, ಖಂಡಿಸಿ, ದೇಶದ್ರೋಹಿಯೆಂದು ಜರೆಯುವ ಅಸಂಖ್ಯ ಕಮೆಂಟುಗಳು ಬರುವುದು ಖಂಡಿತ!!

ನಮ್ಮ ಪ್ರಜಾಪ್ರಭುತ್ವ ತೆಗೆದುಕೊಳ್ಳುತ್ತಿರುವ ಅಪಾಯಕಾರಿ ತಿರುವಿಗೂ ಈ ಕಾಲಘಟ್ಟ ಸಾಕ್ಷಿಯಾಗುತ್ತಿರುವುದು ಪ್ರಜಾಪ್ರಭುತ್ವಕ್ಕೇ ಮಾರಕವಾಗುವ ಎಲ್ಲ ಲಕ್ಷಣಗಳೂ ಇದೆ. ಪತ್ರಿಕೆ, ಮಾಧ್ಯಮ, ಅಂತರ್ಜಾಲದ ಸಂಪರ್ಕಕ್ಕೆ ಬರುವವರು ಶಿಕ್ಷಿತರೇ ಹೌದಾದರೂ ನಮ್ಮ ಶಿಕ್ಷಣ ನಮಗೆ ಅಕ್ಷರಗಳನ್ನಷ್ಟೇ ಕಲಿಸಿ ವಿದ್ಯೆ ಕಲಿಸುವುದನ್ನು ಮರೆತುಬಿಟ್ಟಿತಾ ಎಂಬ ಅನುಮಾನ ಬಾರದೇ ಇರದು. 2002ರಲ್ಲಿ ನಡೆದ ಗೋದ್ರಾ ಹತ್ಯಾಕಾಂಡ ಮತ್ತು ಅದರ ನಂತರ ಸರಕಾರದ ಅಂಕುಶದಲ್ಲೇ ನಡೆದುಹೋದ ಮಾರಣಹೋಮ ದೇಶದ ಇತಿಹಾಸದಲ್ಲಿ ಒಂದು ಘೋರ ದುರಂತದ ಘಟನೆ. ಹತ್ಯಾಕಾಂಡದ ಸಂದರ್ಭದಲ್ಲಿ ಗುಜರಾತಿನಲ್ಲಿದ್ದದ್ದು ನರೇಂದ್ರ ಮೋದಿಯ ಆಡಳಿತ. ಸಹಜವಾಗಿ ನರೇಂದ್ರ ಮೋದಿಯ ಬಗ್ಗೆ ಟೀಕೆ – ಆರೋಪಗಳು ಬಂದೇ ಬರುತ್ತವಲ್ಲವೇ? ‘ನರೇಂದ್ರ ಮೋದಿ ತಪ್ಪು ಮಾಡಿದರು’ ಎಂದ ಕೂಡಲೇ ಹರಿಹಾಯುವ ನಮೋ ಭಕ್ತರು ‘ಸಿಖ್ ನರಮೇಧ’ ‘ಮುಂಬೈ ಗಲಭೆ’ಗಳನ್ನು ಉದಹರಿಸಿ “ಮುಚ್ಕೊಂಡ್ ಇರ್ರೀ” ಎನ್ನುತ್ತಾರೆ. ಸಿಖ್ ನರಮೇಧ, ಮುಂಬೈ ಗಲಭೆಗಳಷ್ಟೇ ಗೋದ್ರಾ ಮತ್ತು ಗೋದ್ರೋತ್ತರ ಹಿಂಸಾಚಾರಗಳೂ ತಪ್ಪಲ್ಲವೇ? ಎಂಬ ಪ್ರಶ್ನೆಯನ್ನೇ ಕೇಳಲು ಬಿಡದೆ “ಗುಜರಾತಿನ ಅಭಿವೃದ್ಧಿ ನೋಡ್ರಿ. ಅಷ್ಟು ವರ್ಷದಿಂದ ಗೆಲ್ಲುತ್ತಲೇ ಬಂದಿಲ್ಲವಾ ನಮ್ಮ ನಮೋ. 2002 ಮರೆತು ಮುಂದೆ ನಡೀರಿ. ನಮೋ ಅಷ್ಟೇ ನಮ್ಮ ದೇಶವನ್ನು ಉಳಿಸಲು ಸಾಧ್ಯ. ನೀವು ‘ಪ್ರಗತಿಪರರೆಂಬ’ ಸೋಗಿನಲ್ಲಿರೋ ದೇಶದ್ರೋಹಿಗಳು, ಸ್ಯೂಡೋ ಸೆಕ್ಯುಲರ್ ಗಳು, ರಾಹುಲ್ ನ ಚಮಚಾಗಳು” ಎಂದು ಒಂದೇ ಸಮನೆ ಚೀರಲಾರಂಭಿಸುತ್ತಾರೆ!! ನರೇಂದ್ರ ಮೋದಿಯ ಆಡಳಿತಾವಧಿಯಲ್ಲಿ ನಡೆದ ಮಾರಣಹೋಮ ಮಾನವೀಯ ದೃಷ್ಟಿಕೋನವಿರುವವರೆಲ್ಲರಿಗೂ ತಪ್ಪಾಗಿಯೇ ಕಾಣುತ್ತದಲ್ಲವೇ? ಇದರಲ್ಲಿ ಸೆಕ್ಯುಲರಿಸಂ, ರಾಹುಲ್ ಗಾಂಧಿಗಳೆಲ್ಲ ಯಾಕೆ ಬಂದರು? ಜಾತಿವಾದಿಯಾಗಿರುವ, ರಾಹುಲ್ ಗಾಂಧಿಯನ್ನು ಒಪ್ಪದ ವ್ಯಕ್ತಿಯೊಬ್ಬ ಮಾನವೀಯತೆಯ ದೃಷ್ಟಿಯಿಂದ ಗುಜರಾತಿನಲ್ಲಿ ನಡೆದಿದ್ದು ತಪ್ಪು ಎಂದರೆ ಅದನ್ನು ಒಪ್ಪಿಕೊಳ್ಳಲಾಗದಷ್ಟು ಅಸಹನೆ ತೋರ್ಪಡಿಸುವುದಾದರೂ ಏಕೆ? ಮೊದಲಿನಿಂದಲೂ ನಾವು ಕಾಂಗ್ರೆಸ್ಸಿನವರಂತಲ್ಲ ನಾವು ಕಾಂಗ್ರೆಸ್ಸಿನವರಂತಲ್ಲ ಎಂದೇ ಹೇಳುತ್ತಿದ್ದ ಬಿಜೆಪಿ ಮತ್ತದರ ಬೆಂಬಲಿಗರು ಕಾಂಗ್ರೆಸ್ ನೇತ್ರತ್ವದಲ್ಲಿ ನಡೆದಹೋದ ಪೈಶಾಚಿಕ ಸಿಖ್ ನರಮೇಧವನ್ನು ಗೋದ್ರೋತ್ತರ ಹತ್ಯಾಕಾಂಡಕ್ಕೆ ಸಮರ್ಥನೆಯೆಂಬಂತೆ ಬಳಸಿಕೊಳ್ಳುವುದಕ್ಕೆ ಏನೆನ್ನಬೇಕು? ಇವರಿಗೆ ಗೋದ್ರಾ ರೈಲಿನಲ್ಲಿ ಹತ್ಯೆಯಾದ ಹಿಂದೂಗಳು ನರಮೇಧ ನಡೆಸಲು ನೆಪವಾದರೆ ಅವರಿಗೆ ಹತ್ಯೆಯಾದ ಇಂದಿರಾ ಗಾಂಧಿಯ ನೆಪ. ನೆಪದ ಮರೆಯಲ್ಲಿ ನಡೆದುಹೋಗುವ ಹತ್ಯಾಕಾಂಡಗಳು ಸಮರ್ಥನೀಯವೇ?

ದಂಡಕಾರಣ್ಯ, ಬಸ್ತಾರ್ ಮುಂತಾದ ರೆಡ್ ಕಾರಿಡಾರ್ ಎಂದು ಗುರುತಿಸಿಕೊಂಡಿರುವ ನಕ್ಸಲ್ ಪ್ರಾಬಲ್ಯದ ಪ್ರದೇಶಗಳಲ್ಲಿ ನೀವು ಸರಕಾರವನ್ನು ವಿರೋಧಿಸಿ ಮಾತನಾಡಿದರೆ ನೀವು ನಕ್ಸಲ್! ನಕ್ಸಲರನ್ನು ವಿರೋಧಿಸಿ ಮಾತನಾಡಿದರೆ ನೀವು ಸರಕಾರಿ ಏಜೆಂಟ್! ಸರಕಾರ ಮತ್ತು ನಕ್ಸಲರಿಬ್ಬರ ತಪ್ಪುಗಳನ್ನೂ ವಿರೋಧಿಸಿ ತಟಸ್ಥ ನೀತಿ ಅನುಸರಿಸುವ ಅವಕಾಶವೇ ನಿಮಗಿಲ್ಲ! ಎರಡು ಕಡೆಯಲ್ಲೊಂದು ಕಡೆಗೆ ನಿಮಗೆ ಇಷ್ಟವಿಲ್ಲದಿದ್ದರೂ ಸೇರಿಸಿಬಿಡುತ್ತಾರೆ! ಇದೇ ಮಾದರಿ ಈಗ ರಾಷ್ಟ್ರರಾಜಕಾರಣದಲ್ಲೂ ಕಾಣಲಾರಂಭಿಸಿದೆ. ನರೇಂದ್ರ ಮೋದಿಯನ್ನು ನೀವು ಯಾವುದೇ ಕಾರಣಕ್ಕಾದರೂ ವಿರೋಧಿಸಿ ನಿಮಗೆ ಇಷ್ಟವಿಲ್ಲದಿದ್ದರೂ ನೀವು ಕಾಂಗ್ರೆಸ್ಸಿನ ಏಜೆಂಟ್ ಆಗಿಬಿಡುತ್ತೀರಿ, ರಾಹುಲ್ ಗಾಂಧಿಯ ಚಮಚಾ ಆಗಿಬಿಡುತ್ತೀರಿ! ಈ ದೇಶದಲ್ಲಿ ನರೇಂದ್ರ ಮೋದಿ, ರಾಹುಲ್ ಗಾಂಧಿ, ಬಿಜೆಪಿ, ಕಾಂಗ್ರೆಸ್ಸನ್ನು ಹೊರತುಪಡಿಸಿಯೂ ರಾಜಕೀಯವಿದೆ, ರಾಜಕಾರಣಿಗಳಿದ್ದಾರೆ ಎಂಬುದನ್ನು ಮರೆಯಬಾರದಲ್ಲವೇ? ಹೋಗಲಿ ನರೇಂದ್ರ ಮೋದಿ ಪ್ರಧಾನಿಯಾಗಿಯೇ ತೀರುತ್ತಾರೆ ಎಂದು ನಂಬಿರುವ ಅವರ ಕಟ್ಟಾ ಅಭಿಮಾನಿಗಳಿಗಾದರೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸಂಪೂರ್ಣ ಬಹುಮತ ಪಡೆಯುತ್ತದೆಂಬ ವಿಶ್ವಾಸವಿದೆಯಾ? ರಾಷ್ಟ್ರೀಯ ಪಕ್ಷವೆಂಬ ಹಣೆಪಟ್ಟಿ ಧರಿಸಿರುವ ಬಿಜೆಪಿ ಕಾಂಗ್ರೆಸ್ಸುಗಳೆರಡೂ ಅಧಿಕಾರದ ಗದ್ದುಗೆಯನ್ನೇರಲು ಪ್ರಾದೇಶಿಕ ಪಕ್ಷಗಳ ಬೆಂಬಲ ಪಡೆಯಲೇಬೇಕು. ಮತ್ಯಾಕೆ ಈ ನಮೋ ಮೇನಿಯಾ?

ನಮೋ ಭಕ್ತರು ಪದೇ ಪದೇ ಹೇಳುವುದು “2002ರನ್ನು ಮರೆತು ಮುಂದೆ ನಡೆಯಿರಿ. ಅಭಿವೃದ್ಧಿ ಅಭಿವೃದ್ಧಿ ಮುಖ್ಯ ಈಗ. ಭಾರತ ಸೂಪರ್ ಪವರ್ ಆಗಬೇಕೆಂದರೆ ನಮೋ ಪ್ರಧಾನಿಯಾಗಲೇಬೇಕು”. 2002ರಲ್ಲಿ ನಮ್ಮ ಬಂಧು ಬಳಗದವರಾರೂ ಹತ್ಯೆಯಾಗದ ಕಾರಣ ಅದನ್ನು ಕ್ಷಣಕಾಲ ಮರೆತೇ ಬಿಡೋಣ. ಗುಜರಾತಿನ ಅಭಿವೃದ್ಧಿ ಮಾದರಿ ಎಂಬ ಪದವನ್ನು ಈಗೊಂದಷ್ಟು ವರುಷಗಳಿಂದ ಕೇಳುತ್ತಲೇ ಇದ್ದೇವೆ. ಕರ್ನಾಟಕದಲ್ಲಿ ಯಡಿಯೂರಪ್ಪ ಅಧಿಕಾರವಿಡಿದಾಗ ಉಚ್ಛರಿಸಿದ್ದೂ ಅದೇ ಗುಜರಾಜ್ ಅಭಿವೃದ್ಧಿ ಮಾದರಿ! ಗುಜರಾತಿನಲ್ಲಿ ವಿದ್ಯುತ್ ರಸ್ತೆಗಳು ಚೆನ್ನಾಗಿ ಅಭಿವೃದ್ಧಿಯಾಗಿದೆ ಎಂದು ಹೇಳುತ್ತಾರೆ, ಇನ್ನು ಗುಜರಾತ್ ಸರಕಾರ ಉದ್ಯಮಿಗಳಿಗೆ ಸಹಾಯಹಸ್ತ ಚಾಚುವುದರಲ್ಲೂ ಮುಂದು. ಸಾವಿರಾರು ಎಕರೆ ಪ್ರದೇಶವನ್ನು ಉದ್ಯಮಿಗಳಿಗೆ ಕ್ಷಣಮಾತ್ರದಲ್ಲಿ ನೀಡುತ್ತದಂತೆ ಅಲ್ಲಿನ ಸರಕಾರ. ಇನ್ನು ನಮೋ ಭಕ್ತರು ಹೇಳುವ ಹಾಗೆ ಗುಜರಾತಿನಲ್ಲಿರುವ ಉತ್ತಮ ರಸ್ತೆಗಳು, ಸಾರಿಗೆ ವ್ಯವಸ್ಥೆ ಇನ್ನೆಲ್ಲಿಯೂ ಇಲ್ಲವಂತೆ! ಆ ರೀತಿಯ ಅಭಿವೃದ್ಧಿ ದೇಶದೆಲ್ಲೆಡೆ ಕಾಣಬೇಕೆಂದರೆ ನಮೋ ಪ್ರಧಾನಿಯಾಗಲೇಬೇಕಂತೆ! ಉತ್ತಮ ರಸ್ತೆ, ಸಾರಿಗೆ, ಉದ್ಯಮ, ವಿದ್ಯುತ್ ಇದಿಷ್ಟೇ ಅಭಿವೃದ್ಧಿಯೇ? ಇವುಗಳನ್ನು ಹೊರತುಪಡಿಸಿ ಆರೋಗ್ಯ, ಶಿಕ್ಷಣ, ವೈದ್ಯಕೀಯ ಸೇವೆ...ಇನ್ನು ಹತ್ತು ಹಲವಾರು ಕ್ಷೇತ್ರಗಳಿದ್ದಾವಲ್ಲವೇ? ಶಿಕ್ಷಣ ಆರೋಗ್ಯದಂತಹ ಸಮಾಜದ ಆರೋಗ್ಯವನ್ನು ನಿರ್ಧರಿಸುವ ವಿಷಯಗಳಲ್ಲಿ ಗುಜರಾತ್ ಉಳಿದ ರಾಜ್ಯಗಳಿಗಿಂತಲೂ ಹಿಂದಿರುವುದು ಸುಳ್ಳಲ್ಲವಲ್ಲ. 45 % ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಗುಜರಾತಿನಲ್ಲಿ, ಇದು ಅಭಿವೃದ್ಧಿಯ ಸಂಕೇತವಾ? ಶಿಕ್ಷಣದ ಪ್ರಮಾಣ ಕೂಡ ಅತಿ ಹೆಚ್ಚೆನಿಸುವಷ್ಟು ಇಲ್ಲ. ಇವೆಲ್ಲವೂ ಕೂಡ ಅಭಿವೃದ್ಧಿಯ ಮಾನದಂಡವಾಗಬೇಕಲ್ಲವೇ? ಎಲ್ಲವನ್ನೂ ಮಾನದಂಡವಾಗಿ ತೆಗೆದುಕೊಂಡರೆ ಖಂಡಿತವಾಗಿಯೂ ಗುಜರಾತ್ ದೇಶದ ಮೊದಲ ಮೂರು ರಾಜ್ಯಗಳಲ್ಲಿ ಸ್ಥಾನ ಪಡೆಯಲಾರದು. ಇನ್ನು ನರೇಂದ್ರ ಮೋದಿಯವರಿಗೆ ಗುಜರಾತಿನಲ್ಲಿರುವ ಅಪೌಷ್ಟಿಕ ಮಕ್ಕಳ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ನೀಡಿದ ಉತ್ತರ – ಗುಜರಾತಿಗಳು ಡಯೆಟ್ ಕಾನ್ಶಿಯಸ್ ಆಗಿದ್ದಾರೆ!! ನಮೋ ನಮಃ!

ಉದ್ಯಮಿಗಳಿಗೆ ಅಪಾರ ಪ್ರಮಾಣದ ಆರ್ಥಿಕ ಬೆಂಬಲ ಕೊಡುವ ನರೇಂದ್ರ ಮೋದಿಗೆ ಕಾರ್ಪೋರೇಟ್ ವಲಯದ ಬೆಂಬಲ ಸಹಜವಾಗಿಯೇ ಸಿಗುತ್ತಿದೆ. ನರೇಂದ್ರ ಮೋದಿ ಪ್ರಧಾನಿಯಾಗಿಬಿಟ್ಟರೆ ಜಮೀನು ಪಡೆಯಲು, ಅದಿರು ತೆಗೆಯಲು ಸಲೀಸಾಗಿಬಿಡುತ್ತದೆಂಬ ಭಾವನೆ ಅವರೆಲ್ಲರಲ್ಲಿ. ಉದ್ಯಮಿಗಳಿಗೆ ನರೇಂದ್ರ ಮೋದಿ ಪ್ರಿಯವಾಗುತ್ತಿರುವ ಸಂದರ್ಭದಲ್ಲೇ ಮಾಧ್ಯಮಗಳಲ್ಲೂ ಮೋದಿಯ ಬಗೆಗಿನ ಧೋರಣೆ ಬದಲಾಗುತ್ತಿರುವುದು ಏನನ್ನು ಸೂಚಿಸುತ್ತದೆ? ಮೋದಿಯಂತಹ ಧಾರ್ಮಿಕ ಮೂಲಭೂತವಾದಿ ಪ್ರಧಾನಿಯಾಗಲೇಬಾರದೆಂದು ಬರೆಯುತ್ತಿದ್ದ - ಹೇಳುತ್ತಿದ್ದ ಮಾಧ್ಯಮಗಳಲ್ಲಿ ಕ್ರಮೇಣವಾಗಿ ಮೋದಿ ಪ್ರಧಾನಿಯಾದರೆ ತಪ್ಪೇನಿಲ್ಲ ಎಂದು ಧ್ವನಿಸುತ್ತಿರುವುದರ ಹಿಂದೆ ಕಾರ್ಪೋರೇಟ್ ವಲಯದ ಕೈವಾಡವಿರುವುದನ್ನು ಅಲ್ಲಗೆಳೆಯಲಾಗದು. ಇನ್ನು ನವಮಧ್ಯಮ ವರ್ಗದ ಯುವಜನತೆ ಮೋದಿಯನ್ನು ಅಪಾರವಾಗಿ ಬೆಂಬಲಿಸುತ್ತಿರುವುದು (ಈ ಬೆಂಬಲ ಸದ್ಯದ ಮಟ್ಟಿಗೆ ಅಂತರ್ಜಾಲದಲ್ಲಿ, ಬರವಣಿಗೆಗಳಲ್ಲಿ ಕಾಣುತ್ತಿದೆ) ಅಭಿವೃದ್ಧಿಯ ಕಾರಣಕ್ಕಾಗಿ ಮಾತ್ರವಾ? ಅಥವಾ ಕಾಲಕ್ರಮೇಣ ಹೆಚ್ಚುತ್ತಿರುವ ಧಾರ್ಮಿಕ ಮೂಲಭೂತತನ ಕಾರಣವಾ?

ಹತ್ತು ವರುಷದ ಅಧಿಕಾರ, ಮಾಡಿಕೊಂಡ ಹತ್ತಾರು ಹಗರಣಗಳು, ಜಾಗತೀಕರಣದ ಪ್ರಭಾವದಿಂದ ಹೆಚ್ಚುತ್ತಲೇ ಹೋಗುತ್ತಿರುವ ಹಣದುಬ್ಬರ ಇವೆಲ್ಲವೂ ಸೇರಿ ಕಾಂಗ್ರೆಸ್ಸನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೈರಾಣು ಮಾಡುವುದು ಸಹಜ. ಜೊತೆಗೆ ಹತ್ತು ವರುಷದ ಅಧಿಕಾರ ಸೃಷ್ಟಿಸುವ ಆಡಳಿತವಿರೋಧಿ ಅಲೆ ಕೂಡ ಕಾಂಗ್ರೆಸ್ಸನ್ನು ಸೋಲಿಸುವ ಸಾಧ್ಯತೆ ಹೆಚ್ಚು. India shining ಎಂಬ ಅಬ್ಬರದ ಅಲೆ ಕೂಡ ಹಿಂದೊಮ್ಮೆ ಬಿಜೆಪಿ ಸರಕಾರವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ವಿಫಲವಾಯಿತು. ಕಾಂಗ್ರೆಸ್ ಈ ಬಾರಿ ಸೋಲಬೇಕು ಸರಿ, ಆದರೆ ನರೇಂದ್ರ ಮೋದಿಯೇ ಪ್ರಧಾನಿಯಾಗಬೇಕಾ? ಆಗುತ್ತಾರಾ? ಬಿಜೆಪಿಯೊಳಗಿನ ವಿರೋಧಿಗಳನ್ನೇ ಸಮಾಧನಪಡಿಸಲೆತ್ನಿಸದೆ ಅವರನ್ನು ಮೂಲೆಗೆ ತಳ್ಳಿ ಸರ್ವಾಧಿಕಾರತ್ವದ ಸೂಚನೆಗಳನ್ನು ಕೊಡುತ್ತಿರುವ ನರೇಂದ್ರ ಮೋದಿ ಅಧಿಕಾರ ಹಿಡಿಯಲು ಅವಶ್ಯಕವಾಗಿ ಬೇಕಾಗಿರುವ ಪ್ರಾದೇಶಿಕ ಪಕ್ಷಗಳ ಜೊತೆ ಯಾವ ರೀತಿ ವರ್ತಿಸುತ್ತಾರೆ? ನರೇಂದ್ರ ಮೋದಿ ಪ್ರಧಾನಿಯಾಗುವುದು ನಿಮಗೆ ಬೇಕಿಲ್ಲದಿದ್ದರೆ ದೇಶ ಬಿಟ್ಟು ತೊಲಗಿ ಎಂದು ಅಪ್ಪಟ ಪಾಕಿ ಮತಾಂಧನ ರೀತಿ ಕೂಗುವವರನ್ನು ಹೇಗೆ ಸಂಭಾಳಿಸುತ್ತಾರೆ?

ಲೇಖನದಾರಂಭದಲ್ಲಿ ಹೇಳಿದ ಕಥೆ ನಮ್ಮ ದೇಶದ ಸದ್ಯದ ಪರಿಸ್ಥಿತಿ ಪ್ರತಿಬಿಂಬ. ನಮಗೆ ನಮ್ಮ ಶಕ್ತಿಯ ಅರಿವಿಲ್ಲ, ನಮ್ಮಲ್ಲೂ ಹುಳುಕಗಳಿದ್ದಾವೆ ಅವುಗಳನ್ನು ಸರಿಪಡಿಸಿಕೊಂಡರಷ್ಟೇ ದೇಶ ಮುಂದುವರೆಯಲು ಸಾಧ್ಯ ಎಂಬುದನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ. ವೈಯಕ್ತಿಕವಾಗಿ ನಾವೆಷ್ಟೇ ಭ್ರಷ್ಟರಾಗಿದ್ದರೂ ದೇಶದ ಇನ್ನಿತರರು ಶುದ್ಧವಾಗಿರಬೇಕು ಎಂಬ ಮನಸ್ಥಿತಿ ನಮ್ಮದು. ಎಲ್ಲಿಂದಲೋ ಒಬ್ಬ ‘ಯುವರಾಜ’ ಬಂದು ನಮ್ಮೆಲ್ಲರನ್ನು ಕಾಪಾಡಿ ಉದ್ಧರಿಸಿಬಿಡುತ್ತಾನೆ ಎಂಬ ಕುರುಡು ನಂಬುಗೆ ನಮ್ಮದು. ಇಂದು ನರೇಂದ್ರ ಮೋದಿ ಆ ‘ಯುವರಾಜ’ನಾಗಿ ಗೋಚರಿಸುತ್ತಿದ್ದಾರೆ! ಇಡೀ ದೇಶವನ್ನು ಅನಾಮತ್ತಾಗಿ ಸಂಕಷ್ಟಗಳಿಂದ ಮೇಲೆತ್ತಿ ಬಿಡುವ ದೇವರು ಈ ನಮೋ ಎಂದು ನಂಬಿಕೊಂಡಿದ್ದಾರೆ. ದಶಕಗಳ ಹಿಂದೆ ಅನಕ್ಷರಸ್ಥ ಜನತೆ ‘ನಿಮ್ಮ ಮತ ಯಾರಿಗೆ?’ ಎಂದರೆ ಕೈ ತೋರಿಸುತ್ತಿದ್ದರಂತೆ. ಚುನಾವಣೆಗೆ ನಿಂತಿರುವವರು ಯಾರೆಂದು ಕೇಳಿದರೆ ತಲೆಯಾಡಿಸುತ್ತಿದ್ದರಂತೆ! ಕೈ ಗುರುತಿಗಷ್ಟೇ ಕುರುಡಾಗಿ ಮತ ಹಾಕುತ್ತಿದ್ದ ಅವರಿಗೂ ನರೇಂದ್ರ ಮೋದಿಯೊಬ್ಬರೇ ನಮ್ಮ ರಕ್ಷಕನೆಂದುಕೊಳ್ಳುತ್ತಿರುವ ಈಗಿನ ಅಕ್ಷರಸ್ಥರಿಗೂ ವ್ಯತ್ಯಾಸಗಳಿದೆಯೇ? ವ್ಯಕ್ತಿ ಪೂಜೆಯ ಪರಾಕಾಷ್ಠೆ ತಲುಪಿದ್ದ ಇಂದಿರಾ ಗಾಂಧಿ ಎಮರ್ಜೆನ್ಸಿಯನ್ನು ಉಡುಗೊರೆಯಾಗಿ ನೀಡಿದರು. ಇನ್ನು ನರೇಂದ್ರ ಮೋದಿಯ ಉಡುಗೊರೆಯನ್ನು ನಿರೀಕ್ಷಿಸಬೇಕೇ?

ಡಾ ಅಶೋಕ್ ಕೆ ಆರ್
image source - indianexpress

1 comment:

  1. ನರೇಂದ್ರ ಮೋದಿ ತಪ್ಪು ಮಾಡಿದರು’ ಎಂದ ಕೂಡಲೇ ಹರಿಹಾಯುವ ನಮೋ ಭಕ್ತರು ‘ಸಿಖ್ ನರಮೇಧ’ ‘ಮುಂಬೈ ಗಲಭೆ’ಗಳನ್ನು ಉದಹರಿಸಿ “ಮುಚ್ಕೊಂಡ್ ಇರ್ರೀ” ಎನ್ನುತ್ತಾರೆ.

    ಈ ರೀತಿಯ ಪ್ರಶ್ನೆಗಳನ್ನು ಕಾಂಗ್ರೆಸಿಗರಿಗೆ ಅಥವಾ ಭಾಜಪ ಹೊರತಾಗಿ ಉಳಿದ ಸೆಕ್ಯುಲರ್ ಮುಖವಾಡ ದಲ್ಲಿ ರಾಜಕೀಯ ಮಾಡುವ ಪಕ್ಷ ಕ್ಕೆ ಕೇಳಬೇಕು ಅಭಿವ್ರದ್ಧಿಯ ಮಾತೆತ್ತಿದಾಗೆಲ್ಲ ಗೋಧ್ರಾ ವಿಷಯ ಕೆದಕುವ ಸಂಪ್ರದಾಯ ಇವರದ್ದು .. ನ್ಯಾಯ ಅನ್ಯಾಯವಾದ ಎಲ್ಲ ಘಟನೆಗಳಿಗೂ ಬೇಕು . ಮಾನ್ಯ ಲೇಖಕರೆ ಕೆಲವು ವಿಷಯಗಳನ್ನ ಅಂಕಿ ಅಂಶ ಗಳೊಂದಿಗೆ ವಿವರಿಸಿದರೆ ಸೂಕ್ತ. ಉದಾಹರೆಣೆಗೆ ಗೋದ್ರೋತ್ತರ ಕಾಂಡದಲ್ಲಿ ಶಿಕ್ಷೆಗೊಳಗಾದವರೆಷ್ಟು ೮೪ ರ ದಂಗೆಯಲ್ಲಿ ಸತ್ತವರೆಷ್ಟು ಯಾರು? ಇತ್ಯಾದಿ ಜಾತ್ಯಾತೀತ ಅನ್ನುವುದು ಒಬ್ಬರ ಪರ ವಿರೋಧವಲ್ಲ ಎಲ್ಲರನ್ನೂ ಸಮಾನವಾಗಿ ಕಾಣುವುದು ಅನ್ನೋದು ನನ್ನಂತ ಜನಸಾಮಾನ್ಯರ ನಂಬಿಕೆ ನಿಮ್ಮ ಲೇಖನದಲ್ಲಿ ನೀವೇ ಮುಖ್ಯ ವಿಷಯಗಳಿಂದ ದೂರ ಹೋಗಿ ನಮೋ ವಿರೋಧಿ ಬರಹಗಾರರಾಗಿ ಹೊರ ಹೊಮ್ಮಿದ್ದೀರಿ ಅಷ್ಟೇ

    ReplyDelete