Jul 16, 2013

ಮನುಜ ಲಾಲಸೆಯ ಮೇಘಸ್ಪೋಟ!





ಉತ್ತರಾಖಂಡ ತತ್ತರಿಸಿದೆ. ಮೇಘಸ್ಪೋಟ ಸೃಷ್ಟಿಸಿದ ಮಹಾಪ್ರಳಯಕ್ಕೆ, ಪ್ರಳಯ ಸೃಷ್ಟಿಸಿದ ಬೀಭತ್ಸಕಾರಿ ವಾತಾವರಣಕ್ಕೆ. ಕಳೆದುಹೋಗಿರುವ ಜೀವಗಳೆಷ್ಟೋ, ಕಣ್ಮರೆಯಾದವರೆಷ್ಟೋ, ನೆರವಿಗೆ ಕಾಯುತ್ತ ದುರ್ಗಮ ಸ್ಥಳಗಳಲ್ಲಿ ಜೀವವನ್ನು ಕೈಯಲ್ಲಿಡಿದುಕೊಂಡು ದೈವ ಚಿಂತನೆಯಲ್ಲಿ ಮುಳುಗಿರುವವರೆಷ್ಟೋ?! ಸಿಡಿದೆದ್ದ ನದಿಗಳ ಆರ್ಭಟಕ್ಕೆ ಸತ್ತವರ ನಿಖರ ಸಂಖೈ ಇನ್ನೂ ತಿಳಿಯಲಾಗಿಲ್ಲ. ಕೇಂದ್ರ ಸರ್ಕಾರ ಸಾವಿರದಷ್ಟು ಜನರು ಸಾವನ್ನಪ್ಪಿದ್ದಾರೆ ಎಂದರೆ ಉತ್ತರಾಖಂಡದ ರಾಜ್ಯಪಾಲರ ಪ್ರಕಾರ ಸತ್ತವರ ಸಂಖೈ ಹತ್ತು ಸಾವಿರಕ್ಕೂ ಹೆಚ್ಚು. ಸರಿಯಾದ ಅಂಕಿಅಂಶ ಕೊನೆಗೂ ಗೊತ್ತೇ ಆಗುವುದಿಲ್ಲವೋ ಏನೋ? 

ಈ ದುರಂತಕ್ಕೆ ಹೊಣೆಗಾರರಾರು? Ofcourse ವಿಜ್ಞಾನವೆಷ್ಟೇ ಮುಂದುವರೆದಿದೆ ಎಂದು ಭಾವಿಸಿದರೂ ಪ್ರಕೃತಿಯೇ ಮುನಿದಾಗ ಯಕಶ್ಚಿತ್ ಮನುಷ್ಯ ಏನೂ ಮಾಡಲಾರ. ಜೂನ್ ಹದಿನೇಳನೇ ತಾರೀಖು ಒಂದೇ ದಿನದಲ್ಲಿ 350 ಮಿಲಿಮೀಟರ್ ನಷ್ಟು ಅಗಾಧ ಪ್ರಮಾಣದ ಮಳೆಯಾಗಿ ಹೋದಾಗ ಪ್ರಳಯ ತಪ್ಪಿಸಲು ಸಾಧ್ಯವೇ ಇಲ್ಲ. ಮೇಘಸ್ಪೋಟದಿಂದಾದ ಮಳೆಯ ಜೊತೆಗೆ ಹಿಮದ ಹಾಸುಗಳೂ ಕರಗಿ ನದಿಗಳಿಗೆ ಮತ್ತಷ್ಟು ನೀರು ಸುರುವಿ ಪ್ರಳಯದ ಭೀಕರತೆಯನ್ನು ಕ್ರೂರತೆಯನ್ನು ಹೆಚ್ಚಿಸಿವೆ. ಪ್ರಕೃತಿಯನ್ನಷ್ಟೇ ಹೊಣೆಗಾರನನ್ನಾಗಿ ಮಾಡಿಬಿಟ್ಟರೆ ಪ್ರಳಯದ ಕ್ರೂರತೆ ಹೆಚ್ಚಿಸುವಲ್ಲಿ ಮನುಷ್ಯನ ಪಾತ್ರವನ್ನು ಸಂಪೂರ್ಣ ಮರೆತೇ ಹೋದಂತೆ. ಒಂದೇ ದಿನದಲ್ಲಿ ಈ ಮಟ್ಟಿಗಿನ ಮಳೆಯಾಗುವುದು ಉತ್ತರಾಖಂಡಕ್ಕೆ ಹೊಸದಲ್ಲ. 1995ರಲ್ಲಿ 450 ಮಿಮಿ ಮತ್ತು ಅದಕ್ಕೂ ಹಿಂದೆ 1965ರಲ್ಲಿ 900 ಮಿಮಿ ಮಳೆಯಾದ ದಾಖಲೆಯಿದೆ! ಹಿಮಾಲಯದ ತಪ್ಪಲಿನ ರಾಜ್ಯವಾದ್ದರಿಂದ ಮೇಘಸ್ಪೋಟ, ಪ್ರಳಯ, ನದಿಗಳ ನೀರಿನ ಮಟ್ಟದ ದಿಡೀರ್ ಏರಿಕೆ – ಇವಾವೂ ಈ ರಾಜ್ಯಕ್ಕೆ ಅಪರಿಚಿತ ಸಂಗತಿಗಳೇನಲ್ಲ. ಆಗಿದ್ದಾಗ ಈ ಬಾರಿ ಇಷ್ಟೊಂದು ಭಾರಿ ಪ್ರಮಾಣದ ಸಾವುನೋವುಂಟಾಗಲು ಕಾರಣ?

ಕಾರಣ ನಮ್ಮ ದುರಾಸೆ, ನಮ್ಮ ಆಧುನಿಕತೆ, ನಮ್ಮ ಧಾರ್ಮಿಕತೆ ಎಂದರೆ ತಪ್ಪಾಗಲಾರದೇನೋ. ಬೆಟ್ಟದ ಮೇಲೆ ತಪ್ಪಲಿನಲ್ಲಿ ಆಹ್ಲಾದಕರ ವಾತಾವರಣವಿರುವ ಕಾರಣವೋ ಏನೋ ಇಂಥ ಸ್ಥಳಗಳಲ್ಲಿ ಧಾರ್ಮಿಕ ಕೇಂದ್ರಗಳು ಹೆಚ್ಚು. ಧಾರ್ಮಿಕ ಯಾತ್ರೆಗಳು ಅಧಿಕಗೊಳ್ಳುತ್ತ ಸೂಕ್ಷ್ಮ ಪರಿಸರದ ಈ ಪ್ರದೇಶಗಳಿಗೆ ಪ್ರವಾಸಿಗರ ಸಂಖ್ಯೆ ವರ್ಷಂಪ್ರತಿ ಹೆಚ್ಚುತ್ತಲೇ ಸಾಗುತ್ತಿರುವುದನ್ನು ಗಮನಿಸಬಹುದು. ಕೇವಲ ಹತ್ತು ವರುಷದ ಅವಧಿಯಲ್ಲಿ ಉತ್ತರಾಖಂಡಕ್ಕೆ ಭೇಟಿ ಕೊಡುವವರ ಸಂಖ್ಯೆ ಮುನ್ನೂರು ಪಟ್ಟು ಹೆಚ್ಚಿ ಮೂವತ್ತು ಮಿಲಿಯನ್ನಿಗೆ ತಲುಪಿದೆ. ಇದೇ ಭರದಲ್ಲಿ ಪ್ರವಾಸಿಗರ ಸಂಖೈ ಹೆಚ್ಚಿದರೆ ಇನ್ನು ನಾಲ್ಕು ವರ್ಷದಲ್ಲಿ ಈ ಸಂಖೈ ದ್ವಿಗುಣಗೊಂಡು ಅರವತ್ತು ಮಿಲಿಯನ್ನಿಗೆ ತಲುಪುವ ನಿರೀಕ್ಷೆಯಿದೆ. ಈ ಪ್ರವಾಸಿಗರ ಸಂಖೈಗೂ ಪ್ರಳಯ ಸೃಷ್ಟಿಸಿದ ಭೀಕರತೆಗೂ ಎತ್ತಣಿಂದೆತ್ತ ಸಂಬಂಧ?

ಪ್ರವಾಸಿಗರ ಸಂಖೈ ಹೆಚ್ಚುತ್ತಿದ್ದಂತೆ ಅವರ ಅವಶ್ಯಕತೆಗಳನ್ನು ಪೂರೈಸುವುದಕ್ಕಾಗಿ ಅಂಗಡಿ ಮುಂಗಟ್ಟುಗಳು ಪ್ರಾರಂಭವಾಗಲೇಬೇಕು. ಅವರು ಉಳಿದುಕೊಳ್ಳಲು ಹೋಟೆಲ್ಲುಗಳು. ವಾಹನಗಳ ಸಂಖೈ ಹೆಚ್ಚಿದಂತೆ ಅವುಗಳ ಓಡಾಟ ಸುಗಮವಾಗಲು ಹೊಚ್ಚ ಹೊಸ ರಸ್ತೆಗಳು. ಅಂಗಡಿ, ಹೋಟೆಲ್ಲುಗಳಿಗೆ ಕರೆಂಟು ಪೂರೈಸಲು ಹೊಸ ಹೊಸ ವಿದ್ಯುತ್ ಘಟಕಗಳು. ನೀರಿನ ಅಭಾವವಿರದ ರಾಜ್ಯದಲ್ಲಿ ವಿದ್ಯುತ್ ಉತ್ಪಾದಿಸಲು ನದಿಗೆ ಅಡ್ಡಲಾಗಿ ಅಣೆಕಟ್ಟುಗಳ ಕಟ್ಟುವಿಕೆ. ಇವೆಲ್ಲವೂ ಸೇರಿ ಸೂಕ್ಷ್ಮ ಪರಿಸರದ ಮೇಲೆ ಅಪಾರ ಪ್ರಮಾಣದ ಒತ್ತಡ ಹಾಕುತ್ತಿರುವುದಂತೂ ಸತ್ಯ. ಮೂರ್ನಾಲ್ಕು ಕಿಲೋಮೀಟರುಗಳ ಅಂತರಕ್ಕೆ ಒಂದೊಂದು ಅಣೆಕಟ್ಟು ಕಟ್ಟುತ್ತಿರುವ ಉದಾಹರಣೆಗಳೂ ಉಂಟಂತೆ! ನದಿಗಳ ಸಹಜ ಹರಿವಿಗೆ ತಡೆಯೊಡ್ಡಿ ಅವುಗಳು ಸಿಡಿದೇಳುವಂತೆ ಮಾಡುವಲ್ಲಿ ಈ ಅಣೆಕಟ್ಟೆಗಳ ಪಾತ್ರ ಕೂಡ ಪ್ರಮುಖವಾದದ್ದೆಂಬುದನ್ನು ನಿರಾಕರಿಸಲಾಗದು. ಬೆಟ್ಟ ಗುಡ್ಡಗಳ ರಾಜ್ಯದಲ್ಲಿ ಹೊಸ ಕಟ್ಟಡಗಳು, ರಸ್ತೆಗಳು ನಿರ್ಮಿತವಾದದ್ದು ಶಿಥಿಲವಾದ ಪ್ರದೇಶಗಳಲ್ಲಿ. ಅವೆಲ್ಲವೂ ಮಹಾಪ್ರಳಯಕ್ಕೆ ಕೊಚ್ಚಿ ಹೋಗಿವೆ. ಧಾರ್ಮಿಕ ಪ್ರವಾಸ ಹೆಚ್ಚಿರುವ ಸಂದರ್ಭದಲ್ಲೇ ಪ್ರವಾಹವಾಗಿರುವುದು ಭೀಕರತೆಯನ್ನು ಮತ್ತಷ್ಟು ಭಯಾನಕವಾಗಿಸಿದೆ.

ಪ್ರಕೃತಿಯ ಮುನಿಸನ್ನು ಮಾರ್ಪಡಿಸಲು ನಮಗೆ ಸಾಧ್ಯವಾಗದು ಆದರೆ ನಂತರದ ಪರಿಣಾಮಗಳನ್ನು ತಗ್ಗಿಸುವುದು ನಮ್ಮ ಕೈಯಲ್ಲೇ ಇದೆ ಅಲ್ಲವೇ? ಆದರದು ಸಾಧ್ಯವಾಗಬಲ್ಲದೆ? ಧಾರ್ಮಿಕ ಕೇಂದ್ರಗಳಿರುವುದರಿಂದ ಯಾವೊಂದು ರಾಜಕೀಯ ಪಕ್ಷವೂ ಪ್ರವಾಸಿಗರ ಸಂಖೈಯನ್ನು ಮಿತಿಗೊಳಿಸುವ ಸಾಹಸ ಮಾಡಲಾರದು. ‘ಧಾರ್ಮಿಕ ಭಾವನೆಗಳಿಗೆ ಧಕ್ಕೆ’ ತಂದ ಆರೋಪ ಹೊತ್ತುಕೊಂಡರೆ ಮುಂದಿನ ಚುನಾವಣೆಗಳಲ್ಲಿ ಮತಗಳನ್ನು ಕಳೆದುಕೊಳ್ಳುವ ಭೀತಿ ಎಲ್ಲ ಪಕ್ಷಗಳಿಗೂ ಇದೆ. ಇವತ್ತಿನ ಜನರ ಮನಸ್ಥಿತಿಯನ್ನು ನೋಡಿದರೆ ಪಕ್ಷಗಳ ಭೀತಿ ನಿಜವಾಗುವ ಸಾಧ್ಯತೆಯೇ ಅಧಿಕ. ಪ್ರಳಯ ಕೊಂಚ ತಗ್ಗುತ್ತಿದ್ದಂತೆಯೇ ಮತ್ತೆ ಕೇದಾರನಾಥಕ್ಕೆ ತೆರಳಲು ಜನರು ಉತ್ಸಾಹ ತೋರುತ್ತಿದ್ದಾರಂತೆ! ಪ್ರಕೃತಿಗೆ ಪೂರಕವಾಗಿ ಧೃಡ ನಿರ್ಧಾರ ತೆಗೆದುಕೊಳ್ಳಲು ವಿಫಲರಾದ ನಾಯಕರು ಪ್ರಳಯದ ನಂತರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅತಿಹೆಚ್ಚು ಪ್ರಯತ್ನ ಪಡುತ್ತಿರುವುದು ದೇಶದ ದುರಂತ. ಆಡಳಿತ ವಿರೋಧ ಪಕ್ಷದವರೆಲ್ಲ ಸೇರಿ ಕೆಲಸ ಮಾಡಬೇಕಾದ ಸಮಯದಲ್ಲಿ ದೋಷಾರೂಪಣೆ ನಾಟಕೀಯ ವರ್ತನೆಗಳ ಮುಖಾಂತರ ಜನರಲ್ಲಿ ಸಿನಿಕತೆ ಸೃಷ್ಟಿಸುತ್ತಿದ್ದಾರಷ್ಟೇ. ಪ್ರಧಾನಿ ಪಟ್ಟದ ಆಕಾಂಕ್ಷಿಗಳ ಕೃತಿಮತೆ ಜನರ ಗಮನಕ್ಕೆ ಬಾರದೇ ಹೋಗುತ್ತಿಲ್ಲ. ಮುಂದಿನ ದಿನಗಳಲ್ಲಿ ಇಂಥ ದುರಂತದ ಪರಿಣಾಮಗಳನ್ನು ತಗ್ಗಿಸುವ ವಿಚಾರವಾಗಿ ಆಲೋಚಿಸದ ನೇತಾರರು ದೇವಸ್ಥಾನದ ಮರುನಿರ್ಮಾಣದ ಬಗ್ಗೆಯೇ ಹೆಚ್ಚೆಚ್ಚು ಕಾಳಜಿವಹಿಸುತ್ತಿರುವುದು ಮತಗಟ್ಟೆಯ ಮೇಲಿನ ನಿಯಂತ್ರಣ ಪಡೆಯಲೋಸಗವೇ ಅಲ್ಲವೇ?

‘ಅಷ್ಟು ಮಳೆಯಾದರೂ ನೋಡಿ ನಮ್ಮ ದೇವಸ್ಥಾನಕ್ಕೆ ಏನೂ ಆಗಲಿಲ್ಲ; ಶಿವ ದೊಡ್ಡೋನು’ ‘ಶಿವನ ದೇವಾಲಯ ಇದ್ರೂ ಪ್ರಳಯ ತಡೀಲಿಲ್ಲ ನೋಡಿ ಹಿಂದೂ ದೇವರು’ – ಈ ರೀತಿಯಾಗಿ ಯೋಚಿಸುತ್ತ ಸಾಮಾಜಿಕ ತಾಣಗಳಲ್ಲಿ ಅಸಂಬದ್ಧವಾಗಿ ಬರೆಯುತ್ತಿರುವ ‘ವಿದ್ಯಾವಂತ’ ಜನಸಮೂಹ ಏನೆನ್ನಬೇಕು? ಇವೆಲ್ಲವುಗಳ ಮಧ್ಯೆ ನಿಜಕ್ಕೂ ಮೆಚ್ಚುವಂಥ ಕೆಲಸ ಮಾಡುತ್ತಿರುವುದು ನಮ್ಮ ಸೈನ್ಯ. ಕೆಲಸ ಮಾಡದವರೆಲ್ಲ ಒಬ್ಬರ ಮೇಲೊಬ್ಬರು ದೋಷಾರೋಪಣೆ ಮಾಡುತ್ತ ಕಾಲ ಕಳೆಯುತ್ತಿದ್ದರೆ ಮೌನವಾಗಿ ಅತಿ ಕಷ್ಟದ ಪರಿಸರದಲ್ಲಿ ಜೀವಗಳನ್ನು ರಕ್ಷಿಸುತ್ತಿರುವುದು ನಮ್ಮ ಸೈನ್ಯ. ಈ ರಕ್ಷಣೆಯಲ್ಲಿ ಪ್ರತಿಕೂಲ ಹವಾಮಾನದ ಕಾರಣ ಹೆಲಿಕಾಪ್ಟರ್ ಪತನಗೊಂಡು ಸೈನಿಕರೇ ಸಾವನ್ನಪ್ಪಿರುವ ದುರ್ಘಟನೆಯೂ ನಡೆದುಹೋಗಿದೆ. ವೈರಿಗಳ ಮೇಲಣ ಗೆಲುವಿಗಿಂತ ದುಸ್ಥಿತಿಯಲ್ಲಿರುವವರ ರಕ್ಷಣೆ ಸೈನ್ಯದ ನಿಜವಾದ ಶಕ್ತಿಯನ್ನು ಪರಿಚಯಿಸಿದೆ. ಇಂಥ ಭೀಕರ ಸನ್ನಿವೇಶಗಳಲ್ಲಿ ತ್ವರಿತವಾಗಿ ಕಾರ್ಯನಿರ್ವಹಿಸುವ ವಿಶೇಷ ಪಡೆಗಳು ಇನ್ನು ಮೇಲಾದರೂ ಶುರುವಾಗಲೆಂದು ಆಶಿಸೋಣ.

ಡಾ. ಅಶೋಕ್. ಕೆ. ಆರ್.

No comments:

Post a Comment