Sep 30, 2012

ಧರ್ಮಗುರುಗಳ ಸಹಜ ಮನಸ್ಸಿನ ಅನಾವರಣ


Habemus papam [photo source - iloveitalianmovies]

ಡಾ ಅಶೋಕ್ ಕೆ ಆರ್
ಸ್ವಾಮೀಜಿಗಳ, ಮೌಲ್ವಿಗಳ, ಒಟ್ಟಾರೆ ಎಲ್ಲ ಧರ್ಮದ ಗುರುಗಳ ಸ್ಥಾನದಲ್ಲಿರುವವರ ಮನಸ್ಥಿತಿ ಎಂತಹುದು ಎಂಬುದು ನಿಜಕ್ಕೂ ಕುತೂಹಲದ ವಿಷಯ. ವರುಷದ ಮುನ್ನೂರೈವತ್ತು ದಿನವೂ ಅವರು ಧರ್ಮಚಿಂತನೆಯಲ್ಲೇ ತೊಡಗುತ್ತಾರಾ? ಹಳೆಯ ತಪ್ಪುಗಳು, ಹಿಂದಿನ ದಿನಗಳು, ಆ ದಿನಗಳ ಜನರ ಒಡನಾಟ ಅವರಿಗೆ ಕಾಡುವುದೇ ಇಲ್ಲವಾ? ನೆನಪಿನಾಳದಿಂದ ಒತ್ತರಿಸಿ ಬರುವ ಭಾವನೆಗಳಿಂದ ಸಂಪೂರ್ಣ ಮುಕ್ತರಾಗಲು ಸಾಧ್ಯವೇ? ದೂರದಲ್ಲಿ ನಿಂತು ಧರ್ಮಗುರುಗಳನ್ನು ದೇವರ ಅವತಾರದಂತೆ ದೇವದೂತನಂತೆ ನೋಡುವವರಿಗೆ ಆ ಧರ್ಮಗುರುಗಳೂ ಕೂಡ ನಮ್ಮಂತೆಯೇ ಒಬ್ಬ ಮನುಷ್ಯ ಆತನಿಗೂ ಒಂದು ಮನಸ್ಸಿದೆ ಎಂಬುದೇ ಮರೆತುಹೋಗಿರುತ್ತದೆ. ಪೋಪ್ ಸ್ಥಾನಕ್ಕೆ ಆರಿಸಲ್ಪಟ್ಟ ಒಬ್ಬ ವ್ಯಕ್ತಿಯ ಮನಸ್ಥಿತಿಯ ಅನಾವರಣವಾಗಿರುವುದು ನನ್ನಿ ಮೊರೆಟ್ಟಿ [Nanni Moratti] ನಿರ್ದೇಶನದ ಇಟಾಲಿಯನ್ ಚಿತ್ರ “ಹೆಬೆಮಸ್ ಪಾಪಮ್”ನಲ್ಲಿ [Habemus Papam ಅರ್ಥಾತ್ we have a pope].

ಚಿತ್ರದ ಪ್ರಾರಂಭವಾಗುವುದು ಹಾಲಿ ಪೋಪ್ ರ ಸಾವಿನೊಂದಿಗೆ, ನೂತನ ಪೋಪ್ ರನ್ನು ಆರಿಸುವ ಚುನಾವಣೆಯೊಂದಿಗೆ. ಕಾರ್ಡಿನಲ್ ಗ್ರೆಗೋರಿ, ಬಿಕಿಲಾ ಮತ್ತು ಅಗಿಲಾರ್ ಪೋಪ್ ಆಗುವ ರೇಸಿನಲ್ಲಿ ಮುಂದಿರುತ್ತಾರಾದರೂ ಎರಡು ಸುತ್ತಿನ ಮತದಾನದ ನಂತರವೂ ಆಯ್ಕೆಯಾಗುವುದಿಲ್ಲ. ‘ದೇವರೇ ನನ್ನನ್ನು ಮಾತ್ರ ಆಯ್ಕೆ ಮಾಡಬೇಡ’ ‘ನಾನಿನ್ನು ಇದಕ್ಕೆ ತಯ್ಯಾರಿಲ್ಲ’ ಎಂದು ದೇವರನ್ನು ಮನಸಿನಲ್ಲೇ ಬೇಡಿಕೊಳ್ಳುತ್ತಾರೆ ಸ್ಪರ್ಧಿಗಳು! ಕೊನೆಗೆ ಅನಿರೀಕ್ಷಿತವಾಗಿ ಆಯ್ಕೆಯಾಗುವುದು ಕಾರ್ಡಿನಲ್ ಮೆಲ್ವಿಲ್ಲೆ. ಕಾದಿರುವ ಲಕ್ಷಾಂತರ ಜನಕ್ಕೆ ನೂತನ ಪೋಪ್ ರನ್ನು ಪರಿಚಯಿಸುವ ಕ್ಷಣ ಮೊದಲು ಮೆಲ್ವಿಲ್ಲೆ ಭಯಾತಂಕಗಳಿಂದ “ನನಗೆ ಪೋಪ್ ಆಗುವ ಶಕ್ತಿಯಿಲ್ಲ” ಎಂದು ಇತರೆ ಕಾರ್ಡಿನಲ್ಗಳ ಎದುರು ಕೂಗಿ ಹೇಳಿ ರೂಮಿನೆಡೆಗೆ ತೆರಳುತ್ತಾರೆ. ನಿರೀಕ್ಷೆಯಲ್ಲಿದ್ದ ಜನರಿಗೆ, ಪತ್ರಕರ್ತರಿಗೆ ವ್ಯಾಟಿಕನ್ ಚರ್ಚಿನ ಆಡಳಿತಾಧಿಕಾರಿಗಳು ಪೋಪ್ ಪ್ರಾರ್ಥನೆಯಲ್ಲಿ ತೊಡಗಿದ್ದಾರೆ, ಇನ್ನು ಕೆಲವೇ ಘಂಟೆಗಳಲ್ಲಿ ಜನರ ಮುಂದೆ ಬರುತ್ತಾರೆ ಎಂದು ಹೇಳಿಕೆ ನೀಡುತ್ತಾರೆ. ನೂತನ ಪೋಪ್ ರನ್ನು ಮಾನಸಿಕವಾಗಿ ತಯ್ಯಾರುಗೊಳಿಸುವುದಕ್ಕೆ ಮನಶಾಸ್ತ್ರಜ್ಞನನ್ನು ಕರೆಸುತ್ತಾರೆ. ನಿರ್ದೇಶಕ ನನ್ನಿ ಮೊರೆಟ್ಟಿಯೇ ಈ ಪಾತ್ರ ನಿರ್ವಹಿಸಿದ್ದಾರೆ. ನೆರೆದ ಸಮಸ್ತರ ಎದುರು ಕೌನ್ಸೆಲಿಂಗ್ ಮಾಡಲಾಗದ ಅಸಹಾಯಕತೆ ಮನಶಾಸ್ತ್ರಜ್ಞನಿಗೆ. ಯಾರಿಗೂ ತಿಳಿಯದಂತೆ ನಿಗೂಢವಾಗಿ ಸಾದಾ ಉಡುಪಿನಲ್ಲಿ ಪೋಪ್ ರನ್ನು ನಗರದ ಮತ್ತೊಬ್ಬ ಮನಶಾಸ್ತ್ರಜ್ಞೆಯ ಬಳಿ ಆಡಳಿತಾಧಿಕಾರಿಗಳು ಕರೆದೊಯ್ಯುತ್ತಾರೆ. ಚರ್ಚಿನ ಕಣ್ಗಾವಲನ್ನು ತಪ್ಪಿಸಿಕೊಂಡು ಕಾಣೆಯಾಗುತ್ತಾರೆ ಮೆಲ್ವಿಲ್ಲೆ! ಸಾಮಾನ್ಯ ಜನರ ಜೀವನವನ್ನು ಹತ್ತಿರದಿಂದ ನೋಡುತ್ತಿದ್ದಂತೆ ತಮ್ಮ ಹಳೆಯ ದಿನಗಳ ಕೆಲವಾದರೂ ನೆನಪು ಮರುಕಳಿಸುತ್ತದೆ. ನಟನಾಗಬೇಕೆಂದಿದ್ದ ತಮ್ಮ ಹಳೆಯ ಆಸೆಯನ್ನು ಈಡೇರಿಸಿಕೊಳ್ಳುವ ಪ್ರಯತ್ನದಲ್ಲಿ ಯಶ ಕಾಣದೇ ಹೋದರೂ ನಾಟಕವನ್ನು ನೋಡುತ್ತ, ನೂತನ ಪೋಪ್ ಸ್ಥಾನದ ಬಗ್ಗೆ ಜನರಲ್ಲಿ ಮೂಡುತ್ತಿರುವ ಆತಂಕ, ಅನುಮಾನ, ಗಾಳಿ ಸುದ್ದಿಯನ್ನು ಕೇಳುತ್ತ ದಿನಕಳೆಯುತ್ತಾರೆ.

ಚರ್ಚಿನೊಳಗೆ ಪೋಪ್ ಕಾಣೆಯಾದ ಸುದ್ದಿಯನ್ನು ಆಡಳಿತಾಧಿಕಾರಿ ಬಹಿರಂಗಗೊಳಿಸುವುದಿಲ್ಲ. ಪೋಪ್ ವಾಸಿಸುವ ರೂಮಿನಲ್ಲಿ ಕಾವಲಿನವನೊಬ್ಬನನ್ನು ಇರಿಸಿ ರೂಮಿನ ಕಿಟಕಿಯಿಂದ ಕಾಣುವ ಆತನ ನೆರಳನ್ನೇ ಪೋಪ್ ನದು ಎಂದು ಬಿಂಬಿಸುತ್ತ ಸಾಗುತ್ತದೆ ಕತೆ. ಇವೆಲ್ಲವುಗಳ ಮಧ್ಯೆ ನೂತನ ಪೋಪ್ ಬಗ್ಗೆ ಸಾರ್ವಜನಿಕ ಘೋಷಣೆಯಾಗುವವರೆಗೂ ದಿಗ್ಭಂಧನಕ್ಕೊಳಪಟ್ಟ ಮನಶಾಸ್ತ್ರಜ್ಞ ಇತರೆ ಕಾರ್ಡಿನಲ್ಗಳ ಮನದ ಭಾವನೆಗಳನ್ನು ಹೊರತೆಗೆಯುವಲ್ಲಿ ಕೊಂಚಮಟ್ಟಿಗೆ ಯಶಸಾಧಿಸುತ್ತಾನೆ. ಬಹುತೇಕ ಕಾರ್ಡಿನಲ್ಗಳು ನಿದ್ರಾ ಮಾತ್ರೆ ಸೇವಿಸುತ್ತಿರುತ್ತಾರೆ, ರಾತ್ರಿಯ ಸಮಯದಲ್ಲಿ ವಿಚಿತ್ರ ಶಬ್ದ ಹೊರಡಿಸುತ್ತಿರುತ್ತಾರೆ. ಅವರಿಗೆ ಮಾತಿನ ಔಷಧಿ ನೀಡುತ್ತಾ ಅವರ ಉಲ್ಲಾಸಕ್ಕಾಗಿ ಉತ್ಸಾಹಕ್ಕಾಗಿ ಗುಂಪುಗಳನ್ನು ರಚಿಸಿ ವಾಲಿಬಾಲ್ ಪಂದ್ಯಾವಳಿ ಏರ್ಪಡಿಸುತ್ತಾನೆ! ತನ್ನ ಖ್ಯಾತಿಯಿಂದಾಗಿಯೇ ತೊರೆದು ಹೋದ ಮನಶಾಸ್ತ್ರಜ್ಞೆ ಪತ್ನಿಯ ಬಗ್ಗೆ ಚಿಂತಿಸುತ್ತಾನೆ! ಕೊನೆಗೆ ಮೆಲ್ವಿನ್ ಪೋಪ್ ಸ್ಥಾನವನ್ನು ಒಪ್ಪುತ್ತಾರಾ? ಅಥವಾ ಪೋಪ್ ಸ್ಥಾನವನ್ನು ತನ್ನ ನಟನೆಗಾಗಿ ವೇದಿಕೆ ಮಾಡಿಕೊಳ್ಳದೆ ತನ್ನ ಮನಸ್ಸಿಗೆ ಸರಿಯೆನ್ನಿಸಿದನ್ನು ಮಾಡುತ್ತಾರಾ? ಚಿತ್ರ ನೋಡಿ.

ದೇವಮಾನವರೋ, ದೈವಾಂಶ ಸಂಭೂತರೋ ಯಾರೇ ಆದರೂ ಅವರಿಗೂ ಒಂದು ಮನಸ್ಸು, ಭಾವನೆಗಳು ಇದ್ದೇ ಇರುತ್ತವೆ. ಪರಿಸ್ಥಿತಿಯ ಒತ್ತಡಕ್ಕೋ, ಧರ್ಮಕಾರಣಕ್ಕೋ, ಜನರ ನಿರೀಕ್ಷೆಗೋ ಈಡಾಗಿ ತಮ್ಮತನವನ್ನೇ ಕಳೆದುಕೊಳ್ಳುತ್ತಾರೆ. ಅಂಥ ಒಬ್ಬ ವ್ಯಕ್ತಿಯ ಚಿತ್ರಣ “ಹೆಬೆಮಸ್ ಪಾಪಮ್”


No comments:

Post a Comment