Sep 14, 2012

ಮುಲ್ಲಾ ಇಸ್ಲಾಂ ಮತ್ತು ಮಹಾತ್ಮರ ಘನತೆ


ಚಿತ್ರಮೂಲ - kvgmi
 ಡಾ ಅಶೋಕ್ ಕೆ ಆರ್
ವರುಷದ ಹಿಂದೆ ಸಂದರ್ಶನವೊಂದರಲ್ಲಿ ಶಾರೂಕ್ ಖಾನ್ ‘ಮುಲ್ಲಾಗಳ ಇಸ್ಲಾಂ ಮತ್ತು ಅಲ್ಲಾಹುವಿನ ಇಸ್ಲಾಂ’ ಎಂಬ ಮಾತು ಹೇಳಿದ್ದರು. ಮುಲ್ಲಾಗಳ ಇಸ್ಲಾಂನಿಂದ ಇಸ್ಲಾಂ ಧರ್ಮಕ್ಕೆ ಮತ್ತು ಮುಖ್ಯವಾಗಿ ಮನುಷ್ಯತ್ವಕ್ಕೆ ಆಗುತ್ತಿರುವ ಹಾನಿಯನ್ನು ವಿವರಿಸಿದ್ದರು ಶಾರೂಕ್. ಚಲನಚಿತ್ರವೊಂದರ ಸಂಬಂಧವಾಗಿ ಲಿಬಿಯಾ ಮತ್ತಿತರ ಮುಸ್ಲಿಂ ಬಾಹುಳ್ಯದ ದೇಶಗಳಲ್ಲಿ ನಡೆಯುತ್ತಿರುವ ವಿನಾಕಾರಣದ ಹಿಂಸಾಚಾರದ ವರದಿಗಳನ್ನು ಓದಿದಾಗ ಶಾರುಕ್ ಮಾತುಗಳು ನೆನಪಾದವು. ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡುವ ಕೆಲವು ಚಲನಚಿತ್ರಗಳನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಆಯಾ ದೇಶ – ಧರ್ಮ –ಪ್ರದೇಶಕ್ಕೆ ಸೀಮಿತವಾದಂತಹ ಚಿತ್ರಗಳಷ್ಟೇ.
ಇದೇ ಕಾರಣದಿಂದ ಭಾರತದ ಚಿತ್ರಗಳಲ್ಲಿ ಪಾಕಿಸ್ತಾನ ಶತ್ರುವಾಗಿ ಚಿತ್ರಿಸಲ್ಪಡುತ್ತದೆ, ಅಮೆರಿಕಾದ ಚಿತ್ರಗಳಲ್ಲಿ ರಷಿಯನ್ನರು ಅಮಾನವೀಯರಂತೆ ತೋರಿಸಲ್ಪಡುತ್ತಾರೆ. ನಾವು ಭಾರತದವರಾಗಿದ್ದರೆ ಚಿತ್ರ ಹಿಡಿಸುತ್ತದೆ, ಮನುಷ್ಯ ನಿರ್ಮಿತ ಗಡಿಯಾಚೆಗೆ ಹುಟ್ಟಿದ್ದರೆ ಚಿತ್ರ ಕೋಪ ಮೂಡಿಸುತ್ತದೆ. ಮತಿಗೆಟ್ಟ ಧರ್ಮಾಂಧರು ಅನ್ಯಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಎಲ್ಲ ಧರ್ಮದಲ್ಲೂ ಸಾಮಾನ್ಯ, ಮುಸ್ಲಿಮರೂ ಇದಕ್ಕೆ ಹೊರತಲ್ಲ. ಅಂಥವನೇ ಒಬ್ಬ ಯಹೂದಿ ತನ್ನ ನಿರ್ದೇಶನದ ಚಿತ್ರದಲ್ಲಿ ಮುಸ್ಲಿಮರ ಬಗ್ಗೆ, ಪ್ರವಾದಿಯ ಬಗ್ಗೆ, ಇಸ್ಲಾಮಿನ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಬಳಸಿದ್ದಾನೆ ಎಂಬುದೇ ನೆಪವಾಗಿ ಮುಲ್ಲಾಗಳ ಇಸ್ಲಾಂ ವಿಜ್ರಂಭಿಸುತ್ತಿದೆ. ಇಲ್ಲಿ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಇಂಥ ಅನೇಕ ಪ್ರತಿಭಟನೆಗಳಲ್ಲಿ ನಡೆಯುವಂತೆ ಇಲ್ಲೂ ಬಹುತೇಕ ಪ್ರತಿಭಟನಾಕಾರರಿಗೆ ಆ ಚಿತ್ರದಲ್ಲಿರುವ ಆಕ್ಷೇಪಾರ್ಹ ಹೇಳಿಕೆಗಳೇನೆಂಬುದೇ ಗೊತ್ತಿಲ್ಲದಿರುವುದು! ಯಾಕೆಂದರೆ ಇನ್ನೂ ಆ ಚಿತ್ರ ಬಿಡುಗಡೆಯೇ ಆಗಿಲ್ಲ. ಚಿತ್ರದ ಕೆಲವು ತುಣುಕುಗಳು ಅಂತರ್ಜಾಲದಲ್ಲಿ ಬಿಡುಗಡೆಗೊಂಡು ಈ ಮಟ್ಟದ ಪ್ರತಿಭಟನೆಗೆ ಕಾರಣವಾಗಿದೆ. ಈ ಪ್ರತಿಭಟನೆಗಳಿಂದ ಅವರು ಸಾಧಿಸಿದ್ದಾರೂ ಏನು? ಆ ಯಹೂದಿಗೂ , ಆ ಚಿತ್ರಕ್ಕೂ ಸಂಬಂಧವೇ ಇರದ ಅಮೆರಿಕಾ ರಾಯಭಾರಿಯ ಹತ್ಯೆ, ಮತ್ತು ಮತಿಗೆಟ್ಟ ಮುಲ್ಲಾಗಳ ಮಾತುಗಳಿಂದ ಯೋಚನಾಶಕ್ತಿ ಕಳೆದುಕೊಂಡು ಬೀದಿಗಿಳಿದ ಜನರ ಸಾವು. ಆ ಜನರ ಸಾವನ್ನೇ ಬಂಡವಾಳ ಮಾಡಿಕೊಂಡು ಮತ್ತಷ್ಟು ಜನರ ಯೋಚನಾಶಕ್ತಿ ಕಸಿಯುವಲ್ಲಿ ಧರ್ಮಾಂಧರಿಗೆ ಅನುಕೂಲವಾಗುತ್ತದೆಯಷ್ಟೇ

          ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಧರ್ಮ, ದೇಶ, ಭಾಷೆಗಳನ್ನು ಅಪಮಾನಿಸುವುದು ತಪ್ಪು ಎಂಬುದಕ್ಕೆ ಇರಬೇಕಾದ ಗಡಿಯೇನು? ಬಹಳಷ್ಟು ಬಾರಿ ವಿಮರ್ಶಾತ್ಮಕ ಟೀಕೆಯನ್ನೂ ಅಪಮಾನವೆಂದು ಪರಿಗಣಿಸಿ ರೊಚ್ಚಿಗೇಳುವುದು, ಹಲ್ಲೆ ನಡೆಸುವುದು, ನಿಷೇಧಕ್ಕೆ ಆಗ್ರಹಿಸುವ ಪ್ರವೃತ್ತಿ ಹೆಚ್ಚುತ್ತಲೇ ಸಾಗಿರುವುದು ವಿಷಾದನೀಯ. ವಿಮರ್ಶಾತ್ಮಕ ಒಳನೋಟಗಳೆಡೆಗೆ ತಿರಸ್ಕಾರ ಹೊಂದಿದರೆ ಮುಮ್ಮುಖ ಚಲನಶೀಲತೆ ಅಸಾಧ್ಯ; ಧರ್ಮ – ದೇಶದೊಳಗಿನ ಕೆಡಕು – ಲೋಪದ ಸರಿಪಡಿಸುವಿಕೆಯೂ ಸಾಧ್ಯವಿಲ್ಲ. ಟೀಕಿಸಿದವನು ಕುತ್ಸುತ – ಸಂಕುಚಿತ ಮನೋಭಾವದವನೇ ಆಗಿದ್ದರೂ ಅವನ ಬಗೆಗೆ ಆಕ್ರೋಶವನ್ನು ಈ ಮಟ್ಟಿಗೆ ವ್ಯಕ್ತಪಡಿಸುವುದು ಸರಿಯೇ? ಈ ಪ್ರತಿಭಟನೆ – ಹಿಂಸೆಗಳಿಂದ ಯಾರಿಗೆಷ್ಟು ಉಪಯೋಗವಾಯಿತೋ ಗೊತ್ತಿಲ್ಲ, ಆ ಅಜ್ಞಾತ ನಿರ್ದೇಶಕನಿಗೆ ಮತ್ತು ಅವನ ಚಿತ್ರಕ್ಕೆ ಬಿಟ್ಟಿ ಪ್ರಚಾರ ದೊರೆಯಿತಷ್ಟೇ! ‘ಇಸ್ಲಾಮನ್ನು ಹೇಗೆ ಅಪಮಾನಿಸಿರಬಹುದು?’ ಎಂಬ ಕುತೂಹಲದಿಂದ ಮುಸ್ಲಿಮರು ಮತ್ತು ಇತರ ಧರ್ಮದವರೂ ಆ ಚಿತ್ರವನ್ನು [ಅದು ಕಳಪೆ ಸಿನಿಮಾವಾಗಿದ್ದರೂ] ನೋಡಿ ಚಿತ್ರ ನಿರ್ಮಾಪಕನ ಥೈಲಿ ತುಂಬಿಸಲು ಇವರ ಹಿಂಸಾತ್ಮಕ ಪ್ರತಿಭಟನೆ ಸಹಾಯ ಮಾಡುತ್ತದೆ! ಈಗಾಗಲೇ ಹುತಾತ್ಮರಾಗಿ ಹೋಗಿರುವ ಮಹಾತ್ಮರ ‘ಘನತೆ’ ಬದುಕಿರುವವರ ಟೀಕೆ ಟಿಪ್ಪಣಿ ಹೊಗಳಿಕೆ ತೆಗಳುವಿಕೆಯಿಂದ ಕಡಿಮೆಯೂ ಆಗಲಾರದು ಹೆಚ್ಚೂ ಆಗಲಾರದು. 

          ಇನ್ನು ಲಿಬಿಯಾ ದೇಶದ ಸ್ಥಿತಿ ನೋಡಿದರೆ ಬೇಸರವಾಗುತ್ತದೆ. ತನ್ನೆಲ್ಲಾ ತಿಕ್ಕಲುತನಗಳ ನಡುವೆಯೂ ಗಡಾಫಿ ತೀರ ಲಿಬಿಯಾ ಧರ್ಮಾಂಧ ದೇಶವಾಗಲು ಬಿಟ್ಟಿರಲಿಲ್ಲ. ಸರ್ವಾಧಿಕಾರತ್ವದ ವಿರುದ್ಧ ಕ್ರೋಡಿಕರಣಗೊಳ್ಳುತ್ತಿದ್ದ ರೋಷವನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದು ಮತಾಂಧ ಮೂಲಭೂತವಾದಿಗಳು. ರಷಿಯಾದ ವಿರುದ್ಧ ಕೆಂಡಕಾರುತ್ತಿದ್ದ ಅಮೆರಿಕಾ ಅಪಘಾನಿಸ್ತಾನದ ತಾಲಿಬಾನಿ ಮುಜಾಹಿದೀನ್ ಗೆ ರಾಕೆಟ್ ಲಾಂಚರ್ ನೀಡಿ ರಷಿಯಾದ ಪತನಕ್ಕೆ ಕಾರಣವಾಯಿತು. ನಂತರ ಅದೇ ತಾಲಿಬಾನಿಗಳು ಅವೇ ರಾಕೆಟ್ ಲಾಂಚರ್ ಉಪಯೋಗಿಸುತ್ತ ಅಮೆರಿಕಕ್ಕೆ ತಲೆನೋವಾಯಿತು. ಇಷ್ಟಾದರೂ ಬುದ್ಧಿ ಕಲಿಯದ ಅಮೆರಿಕಾ ‘ಪ್ರಜಾಪ್ರಭುತ್ವ’ ಸ್ಥಾಪಿಸುವ ನೆಪದಲ್ಲಿ ಲಿಬಿಯಾದ ಬಂಡುಕೋರರನ್ನು ಬೆಂಬಲಿಸಿತು. ಆ ಬಂಡುಕೋರರಲ್ಲಿ ಮೂಲಭೂತವಾದಿಗಳೂ ಇದ್ದಾರೆ ಎಂಬುದು ಅದಕ್ಕೆ ತಿಳಿಯಲಿಲ್ಲವೇ? ಅಮೆರಿಕಾದ ನಿಜವಾದ ಉದ್ದೇಶ ಲಿಬಿಯಾದ ತೈಲೋತ್ಪನ್ನವಷ್ಟೇ! ಈಗ ಅಮೆರಿಕಾ ರಾಯಭಾರಿಯ ಹತ್ಯೆಯಾಗಿದೆ. ಮೂಲಭೂತವಾದಿಗಳ ಪ್ರಾಬಲ್ಯ ಹೆಚ್ಚುತ್ತಿದ್ದಂತೆ ಮತ್ತೊಂದು ಇರಾಕೆ ಮಾದರಿ ಯುದ್ಧಕ್ಕೆ ಅಮೆರಿಕಾ ಸಜ್ಜಾಗುತ್ತದೆ. ಮತ್ತಷ್ಟು ಜನರ ಮಾರಣಹೋಮ, ಮತ್ತಷ್ಟು ಅಮೆರಿಕನ್ ಸೈನಿಕರ ಹತ್ಯೆ, ಅಮೆರಿಕಾ ಕೈಗೊಂಬೆ ಸರಕಾರದ ಸ್ಥಾಪನೆ, ದೇಶದೆಲ್ಲೆಡೆ ಅಶಾಂತಿ, ಆದರೆ ತೈಲೋತ್ಪಾದನೆಗೆ ಮಾತ್ರ ಭಂಗವಿಲ್ಲ! ಪ್ರಸ್ತುತ ಇರಾಕಿನಂತೆ. 

          ಇವಕ್ಕೆಲ್ಲಾ ಕೊನೆಯೇ ಇಲ್ಲವೇ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ‘ಖಂಡಿತವಾಗಿಯೂ ಇಲ್ಲ’! ದೇಶ – ದೇಶಗಳ ನಡುವೆ, ಧರ್ಮ – ಧರ್ಮಗಳ ನಡುವೆ ನಡೆಯುವ ಯುದ್ಧಕ್ಕೆ ರಾಷ್ಟ್ರೀಯತೆ, ಮತಾಂಧತೆಗಳು ಕಾರಣವಾದರೂ ಸಹಿತ ಶಸ್ತ್ರಾಸ್ತ್ರ ವಹಿವಾಟು ಕೂಡ ಈ ‘ಯುದ್ಧವೆಂಬ ದಂಧೆಗೆ’ ಪೋಷಕನಾಗಿರುವುದು ಸುಳ್ಳಲ್ಲ. ಜಗತ್ತಿನ ಅತಿದೊಡ್ಡ ಉದ್ಯಮಗಳಲ್ಲಿ ಅಕ್ರಮ ಶಸ್ತ್ರಾಸ್ತ್ರ ವಹಿವಾಟು ಪ್ರಮುಖವಾದುದು. ಯುದ್ಧಗಳೇ ನಿಂತು ಹೋಗಿ ಪ್ರಪಂಚವೆಲ್ಲ ಶಾಂತವಾಗಿಬಿಟ್ಟರೆ ಶಸ್ತ್ರಾಸ್ತ್ರ ವಹಿವಾಟು ನಡೆಸುವ ದೇಶಗಳ ಆರ್ಥಿಕತೆಯೇ ಕುಸಿದುಹೋಗುತ್ತದೆಯಾ?! ಲೇಖನ ಎತ್ತೆತ್ತಲೋ ಸಾಗುತ್ತಿರುವುದಕ್ಕೆ ಇಂಥ ಅಯೋಮಯ ಸಂಗತಿಗಳೇ ಕಾರಣ, ಕ್ಷಮೆಯಿರಲಿ.

No comments:

Post a Comment