Aug 8, 2012

ಕನಸುಗಳ ಬೆಂಬತ್ತಿದ ಬರ್ಟ್ ಮನ್ರೋ – The worlds fastest Indian


burt munro

 ಡಾ ಅಶೋಕ್. ಕೆ. ಆರ್.
ಜೀವಿತದಲ್ಲಿ ನಮ್ಮ ಮನದಾಳದ ಕನಸನ್ನು ನನಸಾಗಿಸಲು ಪ್ರಮುಖವಾಗಿ ಬೇಕಿರುವುದೇನು? ಸತತ ಪರಿಶ್ರಮ, ಸೋಲೊಪ್ಪಿಕೊಳ್ಳದ ಛಲ, ಕೊಂಚ ಮಟ್ಟಿಗಿನ ಅದೃಷ್ಟ, ತಾಳ್ಮೆ. ಇವೆಲ್ಲವೂ ಇದ್ದ ಬರ್ಟ್ ಮನ್ರೋ ತನ್ನ ಹಾದಿಯಲ್ಲಿ ಬಂದ ಕಾಠಿಣ್ಯವನ್ನೆಲ್ಲ ದಾಟಿ ಕನಸನ್ನು ನನಸಾಗಿಸುತ್ತಾನೆ. 1899ರಲ್ಲಿ ನ್ಯೂಝಿಲೆಂಡಿನ ಇನ್ವರ್ ಕಾರ್ಗಿಲ್ಲಿನಲ್ಲಿ ಜನಿಸಿದ ಮನ್ರೋಗೆ ಚಿಕ್ಕಂದಿನಿಂದ ಬೈಕುಗಳ ಹುಚ್ಚು. ಮೊದಲು ಖರೀದಿಸಿದ್ದು ಇಂಡಿಯನ್ ಸ್ಕೌಟ್ ಬೈಕನ್ನು ತನ್ನ ಇಪ್ಪತ್ತೊಂದನೇ ವಯಸ್ಸಿನಲ್ಲಿ. ಆಗ ಅದರ ವೇಗ ಕೇವಲ 55 ಮೈಲಿ/ ಘಂಟೆಗೆ. ತನ್ನದೇ ಗ್ಯಾರೇಜನ್ನು ಸ್ಥಾಪಿಸಿ, ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳಿಂದಲೇ ಬೈಕನ್ನು ಉತ್ತಮಗೊಳಿಸುತ್ತ ಕೊನೆಗೆ 1967ರಲ್ಲಿ ಹೊಸ ದಾಖಲೆ ಸೃಷ್ಟಿಸುತ್ತಾನೆ, ತನ್ನ 68ನೇ ವಯಸ್ಸಿನಲ್ಲಿ! ಬರ್ಟ್ ಮನ್ರೋನ ಜೀವನಗಾಥೆಯನ್ನು ಆಧಾರವಾಗಿಸಿಕೊಂಡು ರೋಜರ್ ಡೋನಾಲ್ಡ್ ಸನ್ The Worlds fastest Indian ಸಿನಿಮಾ ತೆಗೆದಿದ್ದಾರೆ.

          ಹುಚ್ಚುತನಗಳಿಲ್ಲದೆ ಸಾಧನೆ ಮಾಡಲಾಗುವುದಿಲ್ಲವೇನೋ?! ಚಿತ್ರದಲ್ಲಿ ಬರ್ಟ್ ಮನ್ರೋ ತನ್ನ ಸುತ್ತಲು ಬದುಕಿರುವ ‘ನಾರ್ಮಲ್’ ಜನರಿಗಿಂತ ಸಂಪೂರ್ಣ ವಿಭಿನ್ನ ಬದುಕು ಕಟ್ಟಿಕೊಂಡಿರುತ್ತಾನೆ. ದೊಡ್ಡ ದೊಡ್ಡ ಮನೆಗಳಿರುವ ಪ್ರದೇಶದಲ್ಲಿ ಇವನ ಗೂಡಿನಂಥ ಮನೆ ಕಮ್ ಗ್ಯಾರೇಜ್! ಮನೆಯ ಸುತ್ತ ಆಳೆತ್ತರಕ್ಕೆ ಬೆಳೆದ ಹುಲ್ಲು, ಹುಲ್ಲಿನ ನಡುವೆ ಒಂದು ನಿಂಬೆ ಗಿಡ. ನಿಂಬೆ ಗಿಡಕ್ಕೆ ದಿನ ಬೆಳಿಗ್ಗೆ ಮೂತ್ರಪಾನ ಮಾಡುವ ಬರ್ಟ್ ಮನ್ರೋ! [ನೈಜ ಬರ್ಟ್ ಮನ್ರೋಗೆ ಈ ಹವ್ಯಾಸವಿರಲಿಲ್ಲವಂತೆ, ನಿರ್ದೇಶಕನ ಕಲ್ಪನೆಯಿದು]. ಅಕ್ಕಪಕ್ಕದವರ ನಿರ್ಲಕ್ಷ್ಯ, ಅಪಮಾನಗಳ ನಡುವೆ ಮನ್ರೋಗೆ ಜೊತೆಯಾಗಿರುವುದು ಪಕ್ಕದ ಮನೆಯ ಒಬ್ಬ ಚಿಕ್ಕ ಹುಡುಗ ಮತ್ತೊಬ್ಬಳು ಪ್ರೇಯಸಿ. ಬೈಕಿನ ಪಿಸ್ತನ್ ಗಳ ತಯಾರಿಕೆಯಲ್ಲಿ, ವೇಗವನ್ನು ಹೆಚ್ಚಿಸುವ ಉತ್ಸಾಹದಲ್ಲೇ ಮುಳುಗಿ ಹೋಗುವ ಮನ್ರೋಗೆ ಸುತ್ತಲಿನವರ ಮನೋಭಾವದ ಬಗ್ಗೆ ಚಿಂತಿಸುವ ವ್ಯವಧಾನವಿರುವುದಿಲ್ಲ. ನ್ಯೂಝಿಲೆಂಡಿನಲ್ಲಿ ವೇಗವಾಗಿ ಚಲಿಸಿದ್ದನಾದರೂ ಮನ್ರೋಗೆ ದೂರದ ಅಮೆರಿಕಾದಲ್ಲಿನ ಬೌರ್ನವಿಲ್ಲೆಯ ಗಟ್ಟಿ ಮರಳಿನ ಮೇಲೆ ಹೊಸದೊಂದು ವಿಶ್ವದಾಖಲೆ ಮೂಡಿಸುವ ಹಂಬಲ. ಅದಕ್ಕಾಗಿ ಹಣ ಹೊಂದಿಸುತ್ತಲೇ ಇರುತ್ತಾನೆ. ಪ್ರೇಯಸಿ ಮನೆಯನ್ನು ಮತ್ತು ಮನೆಯ ಜಾಗವನ್ನು ಅಡವಿಟ್ಟು ಹೋಗಬಹುದಲ್ಲ ಎಂದು ಸೂಚಿಸಿದಾಗ ಮೊದಲು ಒಪ್ಪದ ಮನ್ರೋ ಹೃದಯಾಘಾತವಾದಾಗ ಹೊರಟುಬಿಡಲು ನಿರ್ಧರಿಸುತ್ತಾನೆ. ಇವನ ಸಾಮಾರ್ಥ್ಯದ ಮೇಲೆ ನಂಬುಗೆಯಿದ್ದಿದ್ದು ಚಿಕ್ಕ ಹುಡುಗನಿಗೆ, ಪ್ರೇಯಸಿಗೆ ಮತ್ತು ಹೊರಡುವ ಸಮಯದಲ್ಲಿ ಬಿಯರ್ರಿಗೆಂದು ಒಂದಷ್ಟು ಡಾಲರ್ ಕೊಟ್ಟ ಸ್ಥಳೀಯ ಪುಂಡ ಹುಡುಗರಿಗೆ ಮಾತ್ರ. ಗೆಳೆಯರೆನ್ನಿಸಿಕೊಂಡವರು ಇವನಿಗೆ ವಿದಾಯ ಹೇಳಲೂ ಬರುವುದಿಲ್ಲ!

          ಹಡಗಿನಲ್ಲಿ ತನ್ನ ಬೈಕಿನೊಂದಿಗೆ ಅಮೆರಿಕಾ ತಲುಪುವ ಬರ್ಟ್ ಮನ್ರೋ ತನ್ನ ಒಳ್ಳೆಯತನದಿಂದಲೇ ಹತ್ತಲವು ಗೆಳೆಯರನ್ನು ಸಂಪಾದಿಸುತ್ತಾನೆ. ಹೋಟೆಲಿನ ಲಿಂಗಬದಲಾವಣೆಗೊಂಡ ಮಹಿಳೆ, ಹಳೆಯ ಕಾರನ್ನು ಕಡಿಮೆ ಬೆಲೆಗೆ ಕೊಟ್ಟು ತನ್ನ ಗ್ಯಾರೇಜನ್ನು ಮನ್ರೋನ ಉಪಯೋಗಕ್ಕೆ ಕೊಟ್ಟ ಮಾಲೀಕ, ಪ್ರಾಸ್ಟೇಟ್ ಖಾಯಿಲೆಗೆ ಔಷಧಿ ಕೊಟ್ಟ ಅಮೆರಿಕಾದ ಮೂಲನಿವಾಸಿ, ಪ್ರೇಯಸಿ, ವಿಯೆಟ್ನಾಮ್ ಯೋಧ ಎಲ್ಲರೂ ಒಂದಲ್ಲ ಒಂದು ರೀತಿ ಮನ್ರೋಗೆ ನೆರವಾಗುತ್ತಾರೆ, ಮನ್ರೋನಿಂದ ನೆರವು ಪಡೆಯುತ್ತಾರೆ, ಮನ್ರೋನಿಂದ ಹೊಸತೇನನ್ನೋ ಕಲಿಯುತ್ತಾರೆ. ಕೊನೆಗೆ ತನ್ನ ಜೀವನದ ಗುರಿಯಾಗಿದ್ದ ಮರಳಿನ ಅಂಕಣಕ್ಕೆ ತಲುಪಿದವನ ಕಣ್ಣಲ್ಲಿ ನೀರು.

  ಮತ್ತಷ್ಟು ಕಷ್ಟಗಳ ಪ್ರಾರಂಭವಾಗುತ್ತದೆ! ಉತ್ಸಾಹದಿಂದ ದೂರದಿಂದ ಪಯಣಿಸಿದವನಿಗೆ ರೇಸಿಗೆ ನೋಂದಣಿ ಮಾಡಿಸಬೇಕೆಂದು ತಿಳಿದಿರುವುದಿಲ್ಲ. ಕೊನೆಗೆ ಮತ್ತೊಬ್ಬ ಸ್ಪರ್ಧಿ ಜಿಮ್ ಮಾರ್ಫೆಟನ ಒತ್ತಾಯದ ಮೇರೆಗೆ ಸಂಘಟಕರು ವಾಹನ ಪರೀಕ್ಷಿಸಲು ಸಮ್ಮತಿಸುತ್ತಾರೆ. ಹಳೆಯ ವಾಹನ, ಹಳತಾದ ಬಿಡಿಭಾಗಗಳು, ಸ್ವತಃ ಮನ್ರೋ ರೂಪಿಸಿದ ನುಣುಪಾದ ಚಕ್ರ – ಇವುಗಳನ್ನು ನೋಡಿ ಗಾಬರಿಯಾದ ಸಂಘಟಕರು ಬರ್ಟ್ ಮನ್ರೋನ ಇಂಡಿಯನ್ ಬೈಕನ್ನು ಸ್ಪರ್ಧೆಗೆ ಬಿಡಲು ನಿರಾಕರಿಸುತ್ತಾರೆ. ಗುರಿಯೆಡೆಗೆ ಮನ್ರೋಗಿದ್ದ ಬದ್ಧತೆ, ಇಡೀ ಜೀವನ ಇದೊಂದು ರೇಸಿಗೆ ಕಾದಿದ್ದ ಪರಿ, ಹೃದಯಾಘಾತವಾಗಿದ್ದರೂ ಸೋಲೊಪ್ಪದ ಛಲ – ಇವುಗಳನ್ನು ನೋಡಿ ಜಿಮ್ ಮಾರ್ಫೆಟ್ ಬಹು ಒತ್ತಾಯದಿಂದ ಸಂಘಟಕರನ್ನು ಒಪ್ಪಿಸುತ್ತಾನೆ. ಅರವತ್ತು ಮೈಲಿಗಿಂತ ಹೆಚ್ಚು ಓಡುವುದಿಲ್ಲ ಎಂದೆನ್ನಿಸಿದ್ದ ಎಲ್ಲರನ್ನೂ ದಂಗುಗೊಳಿಸಿ ಬರ್ಟ್ ಮನ್ರೋ 200ಮೈಲಿ ದಾಟಿ ಹೊಸತೊಂದು ದಾಖಲೆ ಸೃಷ್ಟಿಸುತ್ತಾನೆ.
          ಜೀವನ ಪ್ರೀತಿಗೆ, ಸ್ಪೂರ್ತಿಗೆ, ಅದಮ್ಯ ವಿಶ್ವಾಸಕ್ಕೆ, ಸೋಲೊಪ್ಪದ ಧೀರತೆಗೆ ಉದಾಹರಣೆ ಈ ಬರ್ಟ್ ಮನ್ರೋ. ಚಿತ್ರಪ್ರೇಮಿಯಾಗಿದ್ದರೆ ಮರೆಯದೆ ನೋಡಬೇಕಾದ ಚಿತ್ರ – THE WORLDS FASTEST INDIAN

-      

2 comments:

 1. ಮೂತ್ರಪಾನ ಮಾಡುವ ಬರ್ಟ್ ಮನ್ರೋ!!!!!
  Dude its Mootra Visarjane :)

  Me too loved d movie very much & Hopkins acting also awesome...

  ReplyDelete
 2. sorry for the mistake man!
  ಮೂತ್ರದಾನ ಎಂದು ಬರೆಯಲು ಹೋಗಿ ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿಹೋಗಿದೆ!!

  ReplyDelete