Aug 2, 2012

ಚರ್ಚೆಯಾಗಬೇಕಿರುವುದು ‘ಸಂಸ್ಕೃತಿಯ’ ಬಗ್ಗೆಯಲ್ಲ ಕುಡಿತದ ಬಗ್ಗೆ....
-      ಡಾ ಅಶೋಕ್. ಕೆ. ಆರ್

ಮಂಗಳೂರಿನ ಪಡೀಲಿನ ಘಟನೆಯ ನಂತರ ಸಂಸ್ಕೃತಿ, ಸ್ವಾತಂತ್ರ್ಯ, ಸ್ವೇಚ್ಛಾಚಾರದ ಬಗ್ಗೆ ಅಗತ್ಯಕ್ಕಿಂತ ಹೆಚ್ಚಾಗಿಯೇ ಚರ್ಚೆಗಳಾಗುತ್ತಿವೆ. ಇವೆಲ್ಲವುಗಳ ಮಧ್ಯೆ ಜುಲೈ 31ರಂದು ವಿಧಾನಪರಿಷತ್ತಿನಲ್ಲಿ ಸಚಿವರೊಬ್ಬರು ಅಮೋಘ ಹೇಳಿಕೆಯನ್ನಿತ್ತಿದ್ದಾರೆ! “ಅಸೆಂಬ್ಲಿಯಲ್ಲಿರೋ ಸಚಿವರುಗಳೇ ಮದ್ಯಪಾನ ಮಾಡೋದಿಲ್ಲ. ಇನ್ನು ನಮ್ಮ ಇಲಾಖೆಗೆ ಆದಾಯ ಎಲ್ಲಿಂದ ಬರಬೇಕು. ಹೀಗಾಗಿ ಎಲ್ಲರೂ ಮದ್ಯಪಾನ ಮಾಡತೊಡಗಿದರೆ ರಾಜ್ಯ ಬೊಕ್ಕಸದ ಆದಾಯವೂ ಹೆಚ್ಚುತ್ತದೆ” ಎಂದು ಹೇಳಿದ್ದಾರೆ ಅಬಕಾರಿ ಸಚಿವರಾದ ರೇಣುಕಾಚಾರ್ಯ. ಅಲ್ಲಿಗೆ ಸರಕಾರವೇ ಮದ್ಯಪಾನವನ್ನು ಪ್ರೋತ್ಸಾಹಿಸಿದಂತಾಯಿತಲ್ಲವೇ? ಮದ್ಯದಿಂದ ಕಳೆದ ಐದು ವರುಷಗಳಲ್ಲಿ ಬಂದಿರುವ ಆದಾಯದ ವಿವರಗಳನ್ನು ಸದನಕ್ಕೆ ತಿಳಿಸಿದ್ದಾರೆ. 2007 -08ರ ಸಾಲಿನಲ್ಲಿ 4811.93 ಕೋಟಿಯಷ್ಟಿದ್ದ ಆದಾಯ ದುಪ್ಪಟ್ಟುಗೊಂಡು 2011 -12ರಲ್ಲಿ 9827.89 ಕೋಟಿಯಾಗಿದೆ!

          ಕುಡಿಯುವ ಸಂಸ್ಕೃತಿ –

          ಕಲ್ಬುರ್ಗಿಯಲ್ಲಿ ಮೂರು ವರುಷಗಳ ಕಾಲ ಇದ್ದ ಸಮಯದಲ್ಲಿ ಅಲ್ಲಿನ ಜನರ ಕುಡಿಯುವ ವೇಗ ಸಮಯ ನೋಡಿ ಚಕಿತಗೊಂಡಿದ್ದೆ. ಬೆಳಿಗ್ಗೆ ಆರರಿಂದ ರಾತ್ರಿ ಹನ್ನೊಂದರವರೆಗೆ ತೆರೆದಿರುತ್ತಿದ್ದ ಬಾರುಗಳಲ್ಲಿ ಯಾವ ಸಮಯದಲ್ಲಿ ನೋಡಿದರೂ ಜನಜಂಗುಳಿ! ಕೆಲಸಕ್ಕೆ ಹೊರಡುವ ಮೊದಲು ಕುಡಿದು ಕೆಲಸ ಮುಗಿದ ನಂತರವೂ ಕುಡಿದು ಮನೆ ತಲುಪುತ್ತಿದ್ದ ಜನ ಮನೆಗೆ ಎಷ್ಟು ಹಣವನ್ನು ಉಳಿಸಿ ಹೋಗುತ್ತಿದರೆಂಬುದೇ ಸೋಜಿಗ. ಮಡಿಕೇರಿಯಂತಹ ಊರುಗಳಲ್ಲಿ ಕುಡಿತ ಅಪರೂಪವೂ ಅಲ್ಲ, ಅಪರಾಧವೂ ಅಲ್ಲ. ಅಲ್ಲಿನ ಶೀತ ಹವಾಗುಣದ ಕಾರಣದಿಂದಾಗಿಯೋ ಏನೋ ಹೆಣ್ಣುಮಕ್ಕಳೂ ಸೇರಿದಂತೆ ಬಹುತೇಕ ಎಲ್ಲರಿಗೂ ಕುಡಿಯುವ ಅಭ್ಯಾಸವಿರುತ್ತದೆ. ಅಲ್ಲಿನ ಮದುವೆ ಸಮಾರಂಭಗಳಲ್ಲಿಯೂ ಕುಡಿತದ ಅಮಲು ಜೋರಾಗಿಯೇ ಇರುತ್ತದೆ. ದೊಡ್ಡ ನಗರಗಳಿಂದ ಹಳ್ಳಿಗಳ ಕಡೆ ಸಂಚರಿಸುವ ರಾತ್ರಿ ಬಸ್ಸುಗಳಲ್ಲಿ ಪಯಣಿಸಿದರೆ ಕುಡುಕರ ಬಾಯಿಯ ಘಮಲೇ ನಶೆ ಏರಿಸುವುದು ಗ್ಯಾರಂಟಿ!

          ‘ಕುಡುಕನಲ್ಲದ ಗಂಡನ ಕೊಡು’ ಎಂಬ ಬೇಡಿಕೆ ನಿಧಾನಕ್ಕೆ ‘ಅಪರೂಪಕ್ಕೆ ಕುಡಿದರೆ ಓಕೆ’ ಎಂಬಲ್ಲಿಗೆ ತಲುಪಿದೆ. ಕೆಲವು ವರುಷಗಳ ಮುಂಚೆ ಬಹಳಷ್ಟು ಊರುಗಳ ಬಸ್ ನಿಲ್ದಾಣಗಳಲ್ಲಿ ಗಾಂಧೀಜಿಯ ಮದ್ಯಪಾನ ವಿರೋಧಿ ಹೇಳಿಕೆಗಳು, ‘ಗಂಡ ಬಾರಿಗೆ ಸಂಸಾರ ಬೀದಿಗೆ’ ಎಂಬಂತಹ ಬರಹಗಳು ಕಾಣಸಿಗುತ್ತಿದ್ದವು. ಇತ್ತೀಚೆಗೆ ಅಂಥ ಫಲಕಗಳನ್ನು ನೋಡಿದ್ದೀರಾ? ಈಗ ಕಾಣಸಿಗುವುದು ‘ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ’ ಎಂಬ ಬೇಡಿಕೆಗಳಷ್ಟೇ. ಯುವಜನತೆ ಕುಡಿತದ ಹಿಂದೆ ಬೀಳುವುದ್ಯಾಕೆ? ಶೋಕಿಗೆ, ದೊಡ್ಡವರಾದೆವೆಂದು ತೋರಿಸಿಕೊಳ್ಳುವ ಹಟಕ್ಕೆ(?), ಖುಷಿಗೆ, ದುಃಖಕ್ಕೆ, ‘social drinker’ ಎಂಬ ಪದವಿಗೆ, ಆಧುನಿಕತೆಯ ವೇಗದ ಜಗತ್ತು ಸೃಷ್ಟಿಸಿರುವ ಮಾನಸಿಕ ಗೊಂದಲ – ತುಮುಲಕ್ಕೆ! ಈ ಯುವಜನತೆಯಲ್ಲಿ ಯುವಕರೂ ಇದ್ದಾರೆ, ಯುವತಿಯರೂ ಇದ್ದಾರೆ. ರುಚಿ ಹೇಗಿರುತ್ತದೆಂಬ ಕುತೂಹಲಕ್ಕೆ ಒಮ್ಮೆ ಕುಡಿದು ‘ಛೀ ಛೀ’ ಎಂದು ತಿರಸ್ಕರಿಸಿದವರೂ ಇದ್ದಾರೆ. ಇನ್ನು ಬರೆಯುವವರಿಗೆ, ಕಲಾವಿದರಿಗೆ ಕುಡಿತವೆಂಬುದು ‘ಮೂಡು’ ಬರಿಸುವ ಸಾಧನ, ಚಿಂತನೆ ರೂಪುಗೊಳ್ಳಲು ಸಹಕಾರಿ ಎಂಬ ಭಾವನೆ. ನಮಗೆ ಒಪ್ಪಿತವೋ ಇಲ್ಲವೋ ನಿಧಾನವಾಗಿ ಕುಡಿತವೆಂಬುದು ಸಂಸ್ಕೃತಿಯ ಭಾಗವಾಗಿ ಹೋಗುತ್ತಿದೆಯೆಂಬುದು ವಾಸ್ತವದ ಸಂಗತಿ.

          ಅಪರೂಪಕ್ಕೆ – ಶೋಕಿಗೆ ಕುಡಿಯುವುವರಿಂದ ‘ಸಂಸ್ಕೃತಿ’ ಹಾಳಾಗಿ ಬಿಡುತ್ತದೆಂದು ಬೊಬ್ಬಿರಿಯುವುದು ಖಂಡಿತ ಅವಶ್ಯಕವಲ್ಲ. ನಿಜವಾದ ಕಾಳಜಿ ಇರಬೇಕಾಗಿರುವುದು ಕುಡಿತದಿಂದ ಸಂಸಾರವನ್ನು ಬೀದಿಗೆ ತರುತ್ತಿರುವವರ ಬಗ್ಗೆ. ಕುಡಿದು ವಾಹನ ಚಲಾಯಿಸಿ ತನ್ನ ಮತ್ತು ಪರರ ಜೀವಕ್ಕೆ ಎರವಾಗುತ್ತಿರುವವರ ಬಗ್ಗೆ. ಇದಕ್ಕಿರುವ ಏಕೈಕ ಪರಿಹಾರ ಪಾನ ನಿಷೇಧ ಎಂದೆನ್ನಿಸಬಹುದು. ಆದರೆ ಪಾನ ನಿಷೇಧವಾಗಿರುವ ಗುಜರಾತಿನಲ್ಲೂ ಮದ್ಯ ದೊರೆಯುತ್ತದೆ, ಸ್ವಲ್ಪ ಹೆಚ್ಚು ಹಣ ನೀಡಬೇಕಷ್ಟೇ ಎಂದಿದ್ದು ಗುಜರಾತಿನ ನನ್ನೊಬ್ಬ ಗೆಳೆಯ! ಅಲ್ಲಿಗೆ ನಿಷೇಧವಾಗಲೇ, ‘ಸಂಸ್ಕೃತಿ’ ರಕ್ಷಕರೆನ್ನಿಸಿಕೊಂಡವರು ಮಾಡುವ ಹಲ್ಲೆಗಳಿಂದಾಗಲೀ ಕುಡಿತ ನಿಲ್ಲಿಸುವುದು ಅಸಾಧ್ಯ. ಮೇಲಾಗಿ ಮದ್ಯಪಾನ ನಿಷೇಧಿಸಿ ಆದಾಯ ಮೂಲವನ್ನು ಕಳೆದುಕೊಳ್ಳಲು ಸರಕಾರವೂ ಇಚ್ಛಿಸುವುದಿಲ್ಲ. ಮುಂದೊಮ್ಮೆ ‘ಕುಡಿಯಿರಿ. ಸರಕಾರಕ್ಕೆ ಆದಾಯ ಕೊಡಿ. ಆದರೆ ಸಂಸಾರ ಬೀದಿಗೆ ತರುವಷ್ಟು ಕುಡಿಯಬೇಡಿ’ ಎಂದು ಸರಕಾರವೇ ನಾಮಫಲಕಗಳನ್ನು ಹಾಕಿಸಿದರೆ ಅಚ್ಚರಿಪಡಬೇಕಾಗಿಲ್ಲ!

No comments:

Post a Comment