Jul 16, 2012

ಭ್ರಮೆ ಕಳಚುತ್ತಾ ಭ್ರಮೆಯ ಬೆನ್ನುಹತ್ತಿಸುವ “ಯಾಮಿನಿ”


ಡಾ. ಅಶೋಕ್. ಕೆ. ಆರ್
ಸಣ್ಣಕಥೆಗಳನ್ನು ಕುತೂಹಲ ಕೆರಳಿಸುವಂತೆ, ಮನಮುಟ್ಟುವಂತೆ ಬರೆಯುವ ಜೋಗಿ [ಗಿರೀಶ್]ಯವರ ಕಾದಂಬರಿ ಕೂಡ ಸಣ್ಣಕಥೆಗಳ ಗುಚ್ಛದಂತೆಯೇ ಕಾಣುವುದು ಜೋಗಿಯ ಬಲ; ಜೊತೆಗೆ ದೌರ್ಬಲ್ಯವೂ ಕೂಡ! ಜೋಗಿಯ ‘ಯಾಮಿನಿ’ ಕಾದಂಬರಿಯನ್ನು [ಅಂಕಿತ ಪುಸ್ತಕದಿಂದ 2008ರಲ್ಲಿ ಮೊದಲ ಮುದ್ರಣ] ಮೊದಲ ಪುಟದಿಂದಲೇ ಓದಲಾರಂಭಿಸಬೇಕೆಂದೇನೂ ಇಲ್ಲ! ಯಾವ ಪುಟದಿಂದ ಓದಿದರೂ ಆಸಕ್ತಿ ಕೆರಳಿಸುತ್ತದೆ. ‘ಯಾಮಿನಿ’ ಕಾದಂಬರಿ ಜ್ಞಾನಪೀಠ ವಿಜೇತ ಲೇಖಕ ‘ಚಿರಾಯುವಿನ’ ಬದುಕಿನ ಸ್ಥೂಲ ಚಿತ್ರಣ. ಜ್ಞಾನಪೀಠಿ ಲೇಖಕನಿಂದ ಕನ್ನಡ ಕಾದಂಬರಿಯನ್ನು ಬರೆಸಿ ಅದನ್ನು ಇಂಗ್ಲೀಷಿಗೆ ತರ್ಜುಮೆ ಮಾಡಿ ಲಕ್ಷಾಂತರ ಪ್ರತಿ ಮಾರಾಟ ಮಾಡಿ ಲಾಭ ಮಾಡಿಕೊಳ್ಳುವ ಉದ್ದಿಶ್ಯದಿಂದ ಒಪ್ಪಂದದ ಮುವತ್ತಾರು ಲಕ್ಷದಲ್ಲಿ ಆರು ಲಕ್ಷವನ್ನು ಚಿರಾಯುವಿಗೆ ಮುಂಗಡವಾಗಿ ನೀಡಿ ಬರೆಯುವ ‘ಕೆಲಸಕ್ಕೆ’ ಹಚ್ಚುತ್ತದೆ ಪ್ರಕಾಶಕ ಸಂಸ್ಥೆ. ಕಾದಂಬರಿ ಹೀಗೆ – ಹೀಗೆ ಇದ್ದರೆ ಚೆಂದ ಎಂದು ‘ಬುದ್ಧಿ ಮಾತು’ ಹೇಳಿದ ಪ್ರಕಾಶಕ ಸಂಸ್ಥೆ ಚಿರಾಯುವಿನ ಬರವಣಿಗೆ ನಿಲ್ಲಿಸಬೇಕೆಂಬ ನಿರ್ಧಾರಕ್ಕೆ ಮುನ್ನುಡಿ ಬರೆದುಬಿಡುತ್ತದೆ!

          ಏಕಾಂತದಲ್ಲಿ ಕಾದಂಬರಿ ಬರೆಯಲೋಸುಗ ಒಬ್ಬ ಸಹಾಯಕನೊಟ್ಟಿಗೆ ನಾಡು ತೊರೆದು ಕಾಡಿಗೆ ಸೇರುವ ಚಿರಾಯುವಿಗೆ ಒಂಟಿತನದಲ್ಲಿ ಏಕಾಂತತೆ ಸಿಗುವುದೇ ಇಲ್ಲ! ತನ್ನದೇ ಹಳೆಯ ಕಾದಂಬರಿಯ ಪಾತ್ರಗಳು, ಆ ಪಾತ್ರಧಾರಿ ರೂಪುಗೊಳ್ಳಲು ಕಾರಣಕರ್ತರಾದ ನಿಜಜೀವನದ ವ್ಯಕ್ತಿಗಳು, ಹಳೆಯ ಹೊಸ ಗೆಳತಿ – ಗೆಳೆಯರ ನೆನಹುಗಳು ಕೂಡ ನಾಡಿನಿಂದ ಕಾಡಿನೊಳಗೆ ಬಂದು ತನ್ನನ್ನು ಕಾಡಿಬಿಡಬಲ್ಲವೆಂದು ಚಿರಾಯು ನಿರೀಕ್ಷಿಸಿರಲಿಲ್ಲ. ಸುತ್ತಲಿನ ಸಮಾಜ ತನ್ನ ಸುತ್ತ ಹರಡಿದ ಭ್ರಮೆಯ ಪ್ರಭೆಯನ್ನು ಕಳಚುತ್ತಾ ಸಾಗುವ ಚಿರಾಯುವಿಗೆ ಪ್ರಭೆ ಕಳಚುವ ಭರದಲ್ಲಿ ಬರವಣಿಗೆಯೇ ಮರೆತುಹೋಗುತ್ತಾ ಖುಷಿ ಪುಳಕ ಬೇಸರವನ್ನು ಒಟ್ಟಿಗೇ ಅನುಭವಿಸುತ್ತಾನೆ. ಬಿಡುಗೊಡೆಗೊಳ್ಳುತ್ತ ಬಂಧನಕ್ಕೊಳಗಾಗುತ್ತ ಸ್ವತಂತ್ರನಾಗುತ್ತ ಸಾಗುತ್ತಾನೆ. ಕಾದಂಬರಿಯಲ್ಲಿ ಲೇಖಕ ಚಿರಾಯುವಿನ ಆತ್ಮಸಂಗಾತಿಯಾಗಿ ಬರುವ ಯಾಮಿನಿಯ ವ್ಯಕ್ತಿತ್ವ ಚಿರಾಯುವಿನ ಅಂತರಾಳದ ಪ್ರತಿಬಿಂಬದಂತೆ ಪಡಿಮೂಡಿದೆ.

ಕಾದಂಬರಿಯ ಒಂದು ಚಿಕ್ಕ ಪಾಠ –

          “ಕತೆಗಾರ ಮುಗ್ಧನಾಗಿರಬೇಕು. ಅಜ್ಞಾನಿಯಾಗಿರಬೇಕು. ತರ್ಕಬದ್ಧವಾಗಿ ಯೋಚಿಸಬಲ್ಲ ಸಾಮರ್ಥ್ಯ ಅವನಿಗೆ ಇರಕೂಡದು. ಹುಂಬನೂ ತನಗೆ ಅನ್ನಿಸಿದ್ದನ್ನು ಬರೆಯಬಲ್ಲವನೂ ಆಗಿರಬೇಕು.

          ಹೀಗೆ ತನ್ನ ಯೋಚನೆಗಳನ್ನು ತಿದ್ದುತ್ತಾ ಹೋದ ಚಿರಾಯು. ಕೊನೆಗೆ ಆ ಅಸ್ಪಷ್ಟ ಯೋಚನೆಗೊಂದು ನೆಲೆ ಸಿಕ್ಕಿತು. ಲೇಖಕ less informed ಆಗಿರಬೇಕು. ಮಾಹಿತಿಗಳು ಹೆಚ್ಚಾಗುತ್ತಾ ಹೋದ ಹಾಗೆ ಕ್ರಿಯೇಟಿವಿಟಿ ಕಡಿಮೆಯಾಗುತ್ತಾ ಹೋಗುತ್ತದೆ. ತಾನುಂಟೋ ಮೂರು ಲೋಕವುಂಟೋ ಎಂಬಂತೆ ಬರೆಯಬೇಕು. ತನಗಿಂತ ಚೆನ್ನಾಗಿ, ತನಗಿಂತ ಪ್ರಭಾವಶಾಲಿಯಾಗಿ, ತನಗಿಂತ ಪ್ರಚಾರ ಪಡೆಯಬಲ್ಲಂತೆ ಬರೆಯುವ ಮಾರ್ಕ್ವೆಸ್, ಅರುಂಧತಿ ರಾಯ್, ಗಿರೀಶ್ ಕಾರ್ನಾಡ್, ಉಪಮನ್ಯು ಚಟರ್ಜಿ ಮುಂತಾದವರ ನಡುವೆಯೇ ತಾನು ಬರೆಯಬೇಕು. ಅಷ್ಟು ಸಾಲದೆಂಬಂತೆ ಷೇಕ್ಸ್ ಪಿಯರ್, ಕಾಳಿದಾಸ, ಕಮೂ, ಸಾರ್ತ್, ಎಲಿಯಟ್, ಮಾರ್ಕ್ ಟ್ವೈನ್ ಮುಂತಾದ ಅಸಂಖ್ಯ ಲೇಖಕರಿದ್ದಾರೆ. ಹೀಗೆ ಕನ್ನಡದ ಒಂದು ಹಳ್ಳಿಯಲ್ಲಿ ಕುಳಿತು ಬರೆಯುತ್ತಿರುವ ಹೊತ್ತಿಗೆ ತಾನೊಂದು ಕ್ಷುದ್ರ ಜೀವಿ ಅನ್ನಿಸಿಬಿಟ್ಟರೆ ಏನನ್ನೂ ಸೃಷ್ಟಿಸಲಾರೆ ತಾನು. ತಾನು ಕೂಡ ಅವರೆಲ್ಲರಿಗೆ ಸರಿಸಮನಾದ ಲೇಖಕ. ಅವರೆಲ್ಲರನ್ನೂ ಮೀರಿಸುವಂತೆ ಬರೆದುಬಿಡಬಲ್ಲೆ. ನನಗೆ ಅನ್ನಿಸುತ್ತಿರುವುದು ನನಗಷ್ಟೇ ಅನ್ನಿಸೋದಿಕ್ಕೆ ಸಾಧ್ಯ. ಆ ವಿಶಿಷ್ಟ ಗ್ರಹಿಕೆ ಇನ್ನಾರಲ್ಲೂ ಇರುವುದಕ್ಕೆ ಸಾಧ್ಯವಿಲ್ಲ. ಕನ್ನಡದ ಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ ನಾನು ಯೋಚಿಸುತ್ತಿದ್ದೇನೆ ಎಂಬ ಅಹಂಕಾರದಲ್ಲೇ ನಾನು ಬರೆಯಬೇಕು.”

          ಬರಹಗಾರನೆಂಬ ಹಣೆಪಟ್ಟಿ ಕಟ್ಟಿಕೊಳ್ಳಲು ಹವಣಿಸುತ್ತಿರುವ ನನ್ನಂಥ ಹೊಸಬರಿಗೆ ಕುತೂಹಲ ಆಸಕ್ತಿ ಮೂಡಿಸುವ ಕಾದಂಬರಿ ಎಷ್ಟೋ ಸನ್ನಿವೇಶಗಳನ್ನು ನಮ್ಮ ಜೀವನದ ಘಟನೆಗಳಿಗೆ ಹೋಲಿಸಿ ನೋಡುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತದೆ. ಬರೆಯುವ ಸುಖ-ದುಃಖದ ಹಂಗಿಗೆ ಬೀಳದೆ ಓದುವುದರಲ್ಲೇ ತೃಪ್ತವಾಗಿ ತನ್ಮಯವಾಗಬಯಸುವವರಿಗೂ “ಯಾಮಿನಿ”ಯ ಓದು ಖುಷಿ ಕೊಡಬಲ್ಲದು ಎಂಬುದೇ ಜೋಗಿಯ ಲೇಖನಿಯ ಸಫಲತೆ!


No comments:

Post a Comment