Mar 5, 2012

ಕರ್ತವ್ಯ ಮರೆತವರ ಕರುನಾಡಿನಲ್ಲಿ

ಪೋಲೀಸರಿಂದ ದಾಂಧಲೆ. ಮೂಲ - ಫೇಸ್ ಬುಕ್

ಪತ್ರಕರ್ತರ ಪ್ರತಿಭಟನೆ. ಮೂಲ - ಡೆಕ್ಕನ್ ಹೆರಾಲ್ಡ್
ವಕೀಲರ ದೌರ್ಜನ್ಯ. ಮೂಲ - ಫೇಸ್ ಬುಕ್
ಮೊದಲು ವಕೀಲರಿಗೆ ಧನ್ಯವಾದಗಳನ್ನರ್ಪಿಸಿಬೇಕು! ವಿವಿಧ ರಾಜಕೀಯ ಪಕ್ಷಗಳ ವಸಾಹತಾಗಿರುವ ಮಾಧ್ಯಮಗಳನ್ನು, ಪತ್ರಕರ್ತರನ್ನು ಒಂದುಗೂಡಿಸಿದ ಕೀರ್ತಿ ವಕೀಲರಿಗೆ ಸಲ್ಲಬೇಕು. ವಕೀಲರು ಮತ್ತು ಮಾಧ್ಯಮ – ಪೋಲೀಸರ ನಡುವೆ ನಡೆದ ‘ಬ್ಲ್ಯಾಕ್ ಫ್ರೈಡೆ’ ಕದನದಲ್ಲಿ ಸೋಲನುಭವಿಸಿದ್ದು ಅವರಲ್ಲಿನ ಕರ್ತವ್ಯನಿಷ್ಠೆ ಎಂಬುದು ಕರ್ನಾಟಕದ ಇವತ್ತಿನ ಸಾಮಾಜಿಕ ಪರಿಸರದ ಪ್ರತಿಬಿಂಬ. ಪ್ರಾರಂಭೋತ್ಸವ ವಕೀಲರಿಂದಾಗಿದ್ದಾದರೂ ಉಳಿದೀರ್ವರು ತಮ್ಮ ಕೊಡುಗೆ ನೀಡುವುದರಲ್ಲಿ ಹಿಂದೆ ಬೀಳಲಿಲ್ಲ.
ನಮ್ಮ ಸನ್ಮಾನ್ಯ ರಾಜಕಾರಣಿಗಳು ತಮ್ಮ ಕೈಲಾದ ಮಟ್ಟಿಗೆ ಈ ಪ್ರಹಸನಕ್ಕೆ ಸಾಥ್ ನೀಡಿದರು.
ನ್ಯಾಯಸಮ್ಮತವಾಗಿಯೇ ಪ್ರವೇಶಿಸಲೆತ್ನಿಸಿದ ಮಾಧ್ಯಮದವರನ್ನು ತಡೆದು ಹಲ್ಲೆ ನಡೆಸಿದ ವಕೀಲರನ್ನು ಯಾರೂ ಸಮರ್ಥಿಸಿ ಮಾತನಾಡಲು ಸಾಧ್ಯವಿಲ್ಲ. ಆದರೆ ಆದ ತಪ್ಪನ್ನು ತಪ್ಪಿನಿಂದಲೇ ‘ಸರಿ’ಮಾಡಲೆತ್ನಿಸಿದ ಮಾಧ್ಯಮ – ಪೋಲೀಸ್ ಸಮೂಹ ವಕೀಲರ ವಿರುದ್ಧ ಮಾತನಾಡಲು ಎಷ್ಟರಮಟ್ಟಿಗೆ ನೈತಿಕ ಅರ್ಹತೆ ಉಳಿಸಿಕೊಂಡಿದ್ದಾರೆ? ಎಲ್ಲ ದೃಶ್ಯ ಮಾಧ್ಯಮಗಳು ಮತ್ತು ಬಹುತೇಕ ಪತ್ರಿಕೆಗಳಲ್ಲಿ [‘ದಿ ಹಿಂದೂ’ ಇದಕ್ಕೆ ಹೊರತು. ಎಲ್ಲ ಆಯಾಮಗಳನ್ನು ಪ್ರಕಟಿಸಿ ವಿಶ್ಲೇಷಣೆಗೆ ಒಳಪಡಿಸಿದ್ದು ಅದೊಂದೇ ಪತ್ರಿಕೆ. ಕೊಂಚ ಮಟ್ಟಿಗೆ ‘ಡೆಕ್ಕನ್ ಹೆರಾಲ್ಡ್’] ವಕೀಲರನ್ನು ರೌಡಿಗಳೆಂದು ಬಿಂಬಿಸಿ ಅನುಕಂಪ ಗಿಟ್ಟಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಯುಟ್ಯೂಬ್ ಮತ್ತು ಇತರೆ ಸಾಮಾಜಿಕ ತಾಣಗಳಲ್ಲಿ ವಕೀಲ ಸಮುದಾಯಕ್ಕಾದ ಅನ್ಯಾಯ, ಮಾಧ್ಯಮದ ಏಕಪಕ್ಷೀಯ ವರದಿಗಳ ವಿರುದ್ಧ ಅಸಮಾಧಾನದ ಲೇಖನಗಳು ಪುಂಖಾನುಪುಂಖವಾಗಿ ಬರಲಾರಂಭಿಸಿದೆ.
ಮೊದಲು ಕರ್ತವ್ಯ ಮರೆತಿದ್ದು ವಕೀಲರೇ. ಇತ್ತೀಚೆಗಷ್ಟೇ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಘಂಟೆಗಟ್ಟಲೇ ವಾಹನಗಳನ್ನು ತಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ವಕೀಲರು ನ್ಯಾಯಲಯದ ಆವರಣದಲ್ಲಿದ್ದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದರು. ಅಲ್ಲೇ ಇದ್ದ ಪೋಲೀಸರಿಗೆ ಈರ್ವರ ಮೇಲೂ ಅಕ್ಕರೆಯಿಲ್ಲ. ಮನೋರಂಜನೆ ಪಡೆದುಕೊಳ್ಳುತ್ತಾ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ತಮ್ಮ ಕರ್ತವ್ಯ ಮರೆತರು. ಪತ್ರಕರ್ತರನ್ನು ಬಿಡಿಸಲು ಬಂದ ವಿದ್ಯಾರ್ಥಿಗಳ ಮೇಲೆಯೂ ಹಲ್ಲೆ ನಡೆಸಿದರು. ವಕೀಲರು ಅಲ್ಲಿಗೆ ಸುಮ್ಮನಾದರಾ? ಉಹ್ಞೂ! ಗಲಭೆ ಹೆಚ್ಚುತ್ತಿದ್ದಂತೆ ಎಚ್ಚೆತ್ತ ಪೋಲೀಸರ ಮೇಲೆಯೂ ಹಲ್ಲೆ ನಡೆಸಿದರು. ಅಲ್ಲಿಗೆ ಪೋಲೀಸರ ಸಹನೆಯ ಕಟ್ಟೆಯೊಡೆಯಿತು. ವಕೀಲರ ಮೇಲೆ ಮುರುಕೊಂಡು ಬಿದ್ದರು. ನಂತರ ನಡೆದಿದ್ದು ಮಾಧ್ಯಮದ ಅಧಃಪತನ.
ಜನರ ವೈಯಕ್ತಿಕ ಸಂಬಂಧಗಳ ಏರುಪೇರಿನಿಂದುಂಟಾಗುವ ಕಿತ್ತಾಟಗಳನ್ನು ಚಿತ್ರಿಸಿಕೊಂಡು ರಂಗುರಂಗಿನ ಹಿಮ್ಮೇಳದೊಂದಿಗೆ ಪದೇ ಪದೇ ಪ್ರಸಾರಮಾಡುವ ಮಾಧ್ಯಮದವರಿಗೆ [ನೈಜ ಪತ್ರಿಕೋದ್ಯಮ ನಮ್ಮ ಧ್ಯೇಯ ಎಂದು ಹೇಳುತ್ತಾ ಜನ್ಮ ತಾಳಿದ ‘ಪಬ್ಲಿಕ್ ಟಿ.ವಿ’ಯೂ ಇದಕ್ಕೆ ಹೊರತಲ್ಲ] ತಮ್ಮದೇ ವೃತ್ತಿಭಾಂದವರು ಪೋಲೀಸರೊಂದಿಗೆ ಕೈಜೋಡಿಸಿ ನಡೆಸಿದ ಹಲ್ಲೆ ಪ್ರಮುಖವೆನಿಸಲಿಲ್ಲ. ವಕೀಲರ ವಾಹನಗಳನ್ನು ಜಜ್ಜಿ ಸುಡುತ್ತಾ, ಆವರಣದೊರಗೆ ಬಂದ ವಕೀಲರನ್ನು ಮನಸೋಯಿಚ್ಛೆ ಹೊಡೆಯುತ್ತಾ ಸಾಗಿದ ಪೋಲೀಸರ ಗೂಂಡಾಗಿರಿಯ ಬಗ್ಗೆ ದೃಶ್ಯ ಮತ್ತು ಪತ್ರಿಕಾ ಮಾಧ್ಯಮಗಳು ಸಂಪೂರ್ಣ ಕುರುಡಾದವು. ಗಂಡ ಹೆಂಡತಿ ಬೀದಿಯಲ್ಲಿ ನಿಂತು ಬಡಿದಾಡುವುದನ್ನೂ ‘ಲೈವ್’’ ತೋರಿಸುವ ಮಾಧ್ಯಮಗಳು ವಕೀಲರ ಮೇಲೆ ಹಲ್ಲೆ ನಡೆಯುತ್ತಿದ್ದ ಸಮಯದಲ್ಲಿ ಕೂಡ ಬೆಳಿಗ್ಗೆ ವಕೀಲರು ನಡೆಸಿದ ಹಲ್ಲೆಯನ್ನೇ ಪ್ರಸಾರ ಮಾಡುತ್ತಿದ್ದವು! ಆದರೆ ತಂತ್ರಜ್ಞಾನ ಅವರೊಬ್ಬರದೇ ಸ್ವತ್ತಲ್ಲವಲ್ಲ! ಮೊಬೈಲುಗಳಲ್ಲಿ ಚಿತ್ರೀಕರಿಸಿದ ಪೋಲೀಸರು ನಡೆಸಿದ ದೌರ್ಜನ್ಯದ ದೃಶ್ಯಾವಳಿಗಳು ಅಂತರ್ಜಾಲದಲ್ಲಿ ಲಭ್ಯವಿದೆ. ಮಾಧ್ಯಮದ ಮುಖವಾಡವನ್ನು ಕಳಚಲಾರಂಭಿಸಿದೆ.
ಇವೆಲ್ಲಕ್ಕಿಂತ ಅನಾಹುತಕಾರಿ ಸಂಗತಿಗಳೆಂದರೆ ಗಾಳಿಸುದ್ದಿಗಳನ್ನು ದೃಡಪಡಿಸಿಕೊಳ್ಳದೆ ‘ಬ್ರೇಕಿಂಗ್ ನ್ಯೂಸ್’ ಹೆಸರಿನಲ್ಲಿ ‘ಪೋಲೀಸ್ ಕಾನ್ಸ್ ಟೇಬಲ್ ಸಾವು’ ಎಂದು ಪ್ರಸರಿಸಿದ್ದು. ಗಲಭೆಯ ಸಮಯದಲ್ಲಿ ಸಮಚಿತ್ತವಾಗಿ ವರ್ತಿಸಬೇಕಾದ ಮಾಧ್ಯಮವೇ ಈ ರೀತಿಯಾಗಿ ಅಪಕ್ವಗೊಂಡರೆ ಪರಿಸ್ಥಿತಿ ವಿಕೋಪಕ್ಕೆ ತಿರುಗದಿದ್ದೀತೆ? ವಕೀಲರಿಂದ ವಿನಾಕಾರಣ ಹಲ್ಲೆಗೊಳಗಾದ ಪತ್ರಕರ್ತರ ಬಗ್ಗೆ ಎಲ್ಲರೂ ಅನುಕಂಪದಿಂದಲೇ ಮಾತನಾಡಬೇಕಿತ್ತು. ಆದರೆ ಅವರ ವಿರುದ್ಧವೂ ಲೇಖನಗಳು ಬರಲಾರಂಭಿಸಿದೆ. ‘ಯಾಕೆ?’ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬಲ್ಲರೇ? ಔನತ್ಯದ ಭ್ರಮೆಯಲ್ಲಿ ಬದುಕುತ್ತಿರುವ ಬಹುತೇಕ ಪತ್ರಕರ್ತರನ್ನು ನೋಡಿದರೆ ಅನುಮಾನ....
ಡಾ. ಅಶೋಕ್. ಕೆ. ಆರ್.

No comments:

Post a Comment